ಸವಾಯಿ ಗಂಧರ್ವ ಸಂಗೀತ ಮಹೋತ್ಸವ

ಸವಾಯಿ ಗಂಧರ್ವ ಸಂಗೀತ ಮಹೋತ್ಸವ

ಈ ವರ್ಷದ ಸವಾಯಿ ಗಂಧರ್ವ ಸಂಗೀತ ಮಹೋತ್ಸವ ಡಿಸೆಂಬರ್ ೬ ರಿಂದ ೯ ನೆಯ ತಾರಿಖಿನವರೆಗೆ ಪುಣೆಯಲ್ಲಿ ನಡೆಯಲಿದೆ. ಇದು ಈ ಸಂಗೀತ ಮಹೋತ್ಸವದ ೫೫ನೇಯ ವರ್ಷ. ಪಂಡಿತ ಭೀಮಸೇನ ಜೋಶಿಯವರು ತಮ್ಮ ಗುರುಗಳಾದ ಸವಾಯಿ ಗಂಧರ್ವರ ಸ್ಮರಣೆಯಲ್ಲಿ ಈ ಸಂಗೀತ ಮಹೋತ್ಸವವನ್ನು ಪ್ರಾರಂಭಿಸಿದ್ದರು.

ಈ ಸಲ ಸುಧಾ ರಘುನಾಥನ್ (ಗಾಯನ), ವಿನೋದ ದಿಗ್ರಾಜಕರ್ (ಗಾಯನ), ಎಲ್ ಸುಬ್ರಮಣ್ಯಮ್ (ವಯಲಿನ್), ಸಂದೀಪ ಆಪ್ಟೆ (ಸಿತಾರ್), ಮತ್ತು ವಡೋದರಾದ ಗಾಯಕವಾಡ ಸಹೋದರರು(ಶೆಹನಾಯಿ) ಇವರುಗಳು ಮೊಟ್ಟಮೊದಲ ಬಾರಿ ಸವಾಯಿ ಗಂಧರ್ವ ವೇದಿಕೆಯಲ್ಲಿ ತಮ್ಮ ಸಂಗೀತವನ್ನು ಪ್ರಸ್ತುತಪಡಿಸಲಿದ್ದಾರೆ. ಇವರುಗಳಲ್ಲದೇ ಹಲವು ಘಟಾನುಘಟಿ ಕಲಾವಿದರೂ ತಮ್ಮ ಸಂಗೀತವನ್ನು ಪ್ರಸ್ತುತಪಡಿಸಲಿದ್ದಾರೆ. ಅವರುಗಳೆಂದರೆ: ಪಂಡಿತ ಜಸರಾಜ್, ಮಾಲಿನಿ ರಾಜೂರ್ಕರ್, ಗುಂಡೇಚಾ ಬಂಧು(ಧ್ರುಪದ), ಆರತಿ ಅಂಕಲೀಕರ ಟಿಕೇಕರ, ಕೈವಲ್ಯಕುಮಾರ ಗುರವ, ಅಲರ್ಮೇಲ್ ವಲ್ಲಿ(ನೃತ್ಯ), ಎಂ ವೆಂಕಟೇಶ ಕುಮಾರ, ಉಲ್ಹಾಸ ಕಶಾಳ್ಕರ್, ಪಂಡಿತ ಹರಿಪ್ರಸಾದ ಚೌರಾಸಿಯಾ(ಕೊಳಲು), ಉಸ್ತಾದ ಶುಜಾತ್ ಹುಸೇನ್ ಖಾನ್ (ಸಿತಾರ), ರಾಹುಲ್ ಶರ್ಮಾ(ಸಂತೂರ), ಅಜಯ ಪೊಹಣಕರ್‍, ಶಿವಾನಂದ ಪಾಟೀಲ, ಶ್ರೀಕಾಂತ ದೇಶಪಾಂಡೆ ಮತ್ತು ವಿಜಯ ಸರ್ದೇಶಮುಖ್. ಮಹೋತ್ಸವದ ಕೊನೆಯ ಕಾರ್ಯಕ್ರಮ ಖ್ಯಾತ ಕಿರಾಣಾ ಘರಾಣಾದ ಗಾಯಕಿ ಪ್ರಭಾ ಅತ್ರೆಯವರಿಂದ ನಡೆಯಲಿದೆ.

ಪುಣೆಯ ರಮಣಬಾಗದಲ್ಲಿರುವ ನ್ಯೂ ಇಂಗ್ಲೀಷ ಶಾಲೆಯ ಅಂಗಣದಲ್ಲಿ ಹಾಕುವ ದೊಡ್ಡ ಪೆಂಡಾಲಿನಲ್ಲಿ ಎಲ್ಲ ಕಾರ್ಯಕ್ರಮಗಳು ನಡೆಯಲಿವೆ. ೧೦,೦೦೦ಕ್ಕೂ ಅಧಿಕ ಸಂಗೀತ ಪ್ರೇಮಿಗಳು ಉತ್ಸವಕ್ಕೆ ಬರುವರೆಂದು ಅಂದಾಜಿಸಲಾಗಿದೆ. ಸಂಗೀತ ಪ್ರೇಮಿಗಳಿಗೆ ಒಳ್ಳೆಯ ದೃಶ್ಯದ ಸಲುವಾಗಿ ೪ ದೊಡ್ಡ ವೀಕ್ಷಣಾ ಪರದೆಗಳು ಮತ್ತು ೧೪ ಟಿವ್ಹಿಗಳನ್ನು ಅಳವಡಿಸಲಾಗುವದೆಂದು ಉತ್ಸವದ ಆಯೋಜಕರಾದ ಆರ್ಯ ಸಂಗೀತ ಪ್ರಸಾರಕ ಮಂಡಳಿಯವರು ತಿಳಿಸಿದ್ದಾರೆ. ನಾಲ್ಕು ದಿನಗಳ ಎಲ್ಲ ಕಚೇರಿಗಳನ್ನು ಕೇಳಲು ಕುರ್ಚಿಗೆ ರೂ ೧೬೦೦ ಮತ್ತು ಭಾರತೀಯ ಬೈಠಕಗೆ ರೂ ೩೫೦ ದರಗಳನ್ನು ನಿಗದಿಪಡಿಸಲಾಗಿದೆ.

Rating
No votes yet