ತಳ ಮುಟ್ಟಿರುವ ರಾಜ್ಯ ರಾಜಕಾರಣ

ತಳ ಮುಟ್ಟಿರುವ ರಾಜ್ಯ ರಾಜಕಾರಣ

ತಳ ಮುಟ್ಟಿರುವ ರಾಜ್ಯ ರಾಜಕಾರಣ ಜೆಡಿಎಸ್ ಎಂಬ ಪಕ್ಷ ಸರ್ವನಾಶವಾಗಲಿ ಎಂದು ಪ್ರಾರ್ಥಿಸಿ ಎಂದು ತಮ್ಮ ಬೆಂಬಲಿಗರಿಗೆ ಕರೆ ನೀಡಿದ್ದ ಹಾಗೂ ಸೂರ್ಯ ಚಂದ್ರರಿರುವವರೆಗೂ ದೇವೇಗೌಡರ ಕುಟುಂಬದ ಮನೆ ಹೊಸ್ತಿಲು ತುಳಿಯುವುದಿಲ್ಲ ಎಂದು ವೀರ ಪ್ರತಿಜ್ಞೆ ಮಾಡಿದ್ದ ಬಿ.ಎಸ್.ಯಡಿಯೂರಪ್ಪ ಎಂಬ ಕುಂಕುಮಧಾರಿ ಧರ್ಮದುರಂಧರರು, ಈ ಮಾತುಗಳನ್ನಾಡಿದ ಹದಿನೈದೇ ದಿನಗಳ ಅಂತರದಲ್ಲಿ ಮರಣಾನಂದದಲ್ಲಿ ಅದೇ ಪಕ್ಷದ ನಾಯಕವರೇಣ್ಯರ ಕೈಕುಲುಕುತ್ತಾ ಮುಖ್ಯಮಂತ್ರಿಯಾಗಿ ಪ್ರಮಾಣ ಸ್ವೀಕರಿಸಿದ್ದಾರೆ! ಬಿಜೆಪಿ ಎಂಬುದು ಒಂದು ಬೆಂಕಿ ಹಚ್ಚುವ ಪಕ್ಷವೆಂದೂ, ಅದು ಕರ್ನಾಟಕವನ್ನು ಗುಜರಾತ್ ಮಾಡುವ ಪ್ರಯೋಗಕ್ಕೆ ಎಲ್ಲ ಸಿದ್ಧತೆ ಮಾಡಿಕೊಂಡಿದೆಯೆಂದೂ ಮತ್ತು ಅದರ ನಾಯಕ ಯಡಿಯೂರಪ್ಪ ರಾಜ್ಯ ಕಂಡ ಅತ್ಯಂತ ಕೆಟ್ಟ ಹಣಕಾಸು ಮಂತ್ರಿಯೆಂದೂ; ಹಾಗಾಗಿ ಅದರೊಂದಿಗೆ ಮೈತ್ರಿ ಮುರಿದುಕೊಳ್ಳುವ ಮೂಲಕ ತಾನು ಪಾಪ ಪರಿಹಾರ ಮಾಡಿಕೊಳ್ಳುತ್ತಿರುವುದಾಗಿ ಹೇಳಿಕೊಂಡಿದ್ದ ಜೆಡಿಎಸ್, ಈಗ ಅದೇ ಬಿಜೆಪಿ ನೇತೃತ್ವದ ಸರ್ಕಾರಕ್ಕೆ ಬೇಷರತ್ ಬೆಂಬಲ ವ್ಯಕ್ತಪಡಿಸಿದೆ! ನಂತರದಲ್ಲಿ ದೇವೇಗೌಡರು ಎಂದಿನಂತೆ, ಹತ್ತೋ ಹನ್ನೆರಡೋ ಅಂಶಗಳ ಕ್ಯಾತೆ ತೆಗೆದಿರುವುದು ಬೇರೆ ವಿಷಯ. ಹಿಂದಿನ ಮೈತ್ರಿ ಮುರಿದು ಬಿದ್ದ ಒಂದೆರಡು ದಿನಗಳಲ್ಲೇ ಕುಮಾರಸ್ವಾಮಿ ಸಣ್ಣಗೆ ಕಣ್ಣು ಹೊಡೆದ ತಕ್ಷಣವೇ, ಅಧಿಕಾರ ಕಳೆದುಕೊಂಡಿದ್ದರ ದುಃಖವನ್ನು ತನ್ನ ಜನಕ್ಕೆ ಎದೆ ಬಡಿದುಕೊಂಡು ಹೇಳಿಕೊಳ್ಳುವ ಧರ್ಮಯಾತ್ರೆ ಎಂಬ ಕರ್ಮಯಾತ್ರೆಯಲ್ಲಿದ್ದ ಯಡಿಯೂರಪ್ಪ; ತುಮಕೂರಿನಲ್ಲಿ ದೇವೇಗೌಡರ ಕುಟುಂಬಕ್ಕೆ ಹಿಡಿಶಾಪ ಹಾಕುತ್ತಿದ್ದುದನ್ನು ಅರ್ಧಕ್ಕೇ ನಿಲ್ಲಿಸಿ ಓಡಿ ಬಂದಾಗಲೇ, ದೇವೇಗೌಡರ ಪಕ್ಷದ ನಾಯಕರನೇಕರಿಗೆ ಹಾಗೂ ಅದಕ್ಕಿಂತ ಮುಖ್ಯವಾಗಿ ಜನತೆಗೆ ಯಡಿಯೂರಪ್ಪನವರ ಅಧಿಕಾರದ ಹಪಾಹಪಿ ಎಷ್ಟ್ಟು ತೀವ್ರವಾಗಿದೆ ಎಂಬುದರ ಮನವರಿಕೆಯಾಗಿತ್ತು. ಹಾಗಾಗಿಯೇ, ಈಗ ಕುಮಾರಸ್ವಾಮಿಯವರಿಗೆ ತಮ್ಮ ವಚನ ಭ್ರಷ್ಟತೆಯನ್ನು ತಮ್ಮೆಲ್ಲ ಮಾತಿನ ಕಸರತ್ತುಗಳ ಹೊರತಾಗಿಯೂ ಜನ ಮನ್ನಿಸಿಲ್ಲ ಹಾಗೂ ಅಧಿಕಾರವಿಲ್ಲದೆ ತಮ್ಮ ಪಕ್ಷದ ಶಾಸಕರು ಅವರೆಲ್ಲ ವೈಯುಕಿಕ ನಿಷ್ಠೆ ಪ್ರದರ್ಶನದ ಹೊರತಾಗಿಯೂ ತಮ್ಮ ಬಳಿ ಉಳಿಯಲಾರರು ಎಂಬುದು ಅರಿವಾಗಿ, ತಾವು ಈವರೆಗೆ ಸಾರ್ವಜನಿಕರೆದುರಿಗೆ ಮಾಡಿದ ವಾಂತಿಯನ್ನು ತಾವೇ ಬಾಚಿ ತಿಂದುಕೊಂಡಂತೆ ಯಡಿಯೂರಪ್ಪನವರಿಗೆ ಮರುಮೈತ್ರಿಯ ಸಂದೇಶ ಕಳಿಸಿದೊಡನೆ; ಯಡಿಯೂರಪ್ಪನವರೂ ಅಷ್ಟೇ ನಿರ್ಲಜ್ಜೆಯಿಂದ ಹಾಗೂ ನಿಸ್ಸಂಕೋಚವಾಗಿ ತಮ್ಮ ವಾಂತಿಯನ್ನೆಲ್ಲಾ ತಾವೇ ತಿರುಗಿ ಬಾಚಿ ತಿಂದುಕೊಂಡು, ಅದೇ ಬಾಯಲ್ಲಿ ದೇವರ ಹೆಸರಿನಲ್ಲಿ ಮತ್ತು ರಾಜ್ಯದ ರೈತರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಇವರು ನಂಬಿಕೊಂಡಿರುವ ದೇವರ ಬಗ್ಗೆ ಜನತೆಯ ಅನುಕಂಪವಿದೆ. ಇನ್ನು ಜೆಡಿಎಸ್‌ನವರೋ, ಬಾಯೊರಿಸಿಕೊಳ್ಳಲು ಸ್ವಲ್ಪ ಸಮಯ ತೆಗೆದುಕೊಂಡು ಪ್ರಮಾಣ ವಚನಕ್ಕೆ ಹಾಜರಾಗಿದ್ದಾರೆ! ಯಡಿಯೂರಪ್ಪ, ಪ್ರಮಾಣ ವಚನಕ್ಕೆ ಮುಂಚೆ, ಕೈಗೆ ಬಂದ ತುತ್ತು ಬಾಯಿಗೆಲ್ಲಿ ಬರುವುದಿಲ್ಲವೋ ಎಂಬ ಆತಂಕದಿಂದ ರಾಜ್ಯ - ರಾಷ್ಟ್ರದ ಕಂಡ ಕಂಡ ದೇವರುಗಳಿಗೆಲ್ಲ ಪೂಜೆ - ಹರಕೆ ಸಲ್ಲಿಸುತ್ತಾ, ಕಂಡ ಕಂಡ ಮಠಾಧೀಶರುಗಳ ಕಾಲಿಗೆ ಬೀಳುತ್ತಾ; ಪುರೋಹಿತರು ಹೇಳಿದ ಯಜ್ಞ - ಯಾಗಾದಿಗಳೆನ್ನೆಲ್ಲ ಮಾಡುತ್ತಾ, ಜನತೆ ತಾವು ಯಾವ ಕಾಲದಲ್ಲಿ ಬದುಕಿದ್ದೇವೆ ಎಂದು ಆಶ್ಚರ್ಯಪಡುವ ರೀತಿಯಲ್ಲಿ ಮತ್ತು ಮಟ್ಟದಲ್ಲಿ ತಮ್ಮ ಪರಮ ಮೌಢ್ಯವನ್ನೂ, ಆತ್ಮ ವಿಶ್ವಾಸದ ಅತೀವ ಕೊರತೆಯನ್ನೂ ಪ್ರದರ್ಶಿಸಿದ್ದಾರೆ. ಈ ಮಧ್ಯೆ ತಮ್ಮ ಹೆಸರನ್ನೂ ಬದಲಾಯಿಸಿಕೊಂಡಿದ್ದಾರೆ! ಇಷ್ಟು ಸಾಲದೆಂಬಂತೆ ಪ್ರಮಾಣ ವಚನದ ಹಿಂದಿನ ದಿನ ರಾಜ ಮಹಾರಾಜರ ಪಟ್ಟಾಭಿಷೇಕದ ಶೈಲಿಯಲ್ಲಿ ಸೂರ್ಯನಾರಾಯಣ ಯಾಗವನ್ನು ಏರ್ಪಡಿಸಿಕೊಂಡಿದ್ದಾರೆ. ಪ್ರಮಾಣ ವಚನ ಸ್ವೀಕಾರದ ನಂತರ ಮುಖ್ಯ ಮಂತ್ರಿ ಅಧಿಕೃತ ಕಛೇರಿಯಲ್ಲಿ ಮತ್ತೊಂದು ಯಾಗ ಬೇರೆ ಮಾಡಿಸಿಕೊಂಡಿದ್ದಾರೆ! ರಾಮರಾಜ್ಯ ಸ್ಥಾಪನೆಯೆಂದರೆ ರಾಮನ ಕಾಲಕ್ಕೆ ಹಿಂದಿರುಗುವುದು ಎಂದು ಇವರು ತಿಳಿದಿರುವಂತಿದೆ! ಇಂತಹ ಬುದ್ಧಿಗೆಟ್ಟವರ ಕೈಗೆ ಸಿಕ್ಕಿರುವ ಆಡಳಿತ, ಕರ್ನಾಟಕವನ್ನು ಎಲ್ಲಿಗೆ ಕೊಂಡೊಯ್ಯುವುದೋ ಕಾದುನೋಡಬೇಕು - ಆಡಳಿತ ಮಾಡಲು ದೇವೇಗೌಡ ಮತ್ತು ಅವರ ಮಕ್ಕಳು ಬಿಟ್ಟರೆ! ಏಕೆಂದರೆ, ಯಡಿಯೂರಪ್ಪ ಮಾತಾಡುವಾಗಲೆಲ್ಲ ಐದೂವರೆ ಕೋಟಿ ಕನ್ನಡಿಗರನ್ನು ಉಲ್ಲೇಖಿಸುವರಾದರೂ, ಇವರಿಗೆ ನಿಜವಾಗಿ ನಂಬಿಕೆ ಇರುವುದು ಈ ಐದೂವರೆ ಕೋಟಿ ಜನತೆಯ ಮೇಲಲ್ಲ; ತಮ್ಮ ಮೂಢ ಮನಸ್ಸು ಭಯ - ಆತಂಕಗಳಲ್ಲಿ ಹಾಗೂ ಅಧಿಕಾರದ ಹಪಾಹಪಿಯಲ್ಲಿ ವಿಭ್ರಾಂತವಾಗಿ ಸೃಷ್ಟಿಸಿಕೊಂಡಿರುವ ಐದೂವರೆ ಕೋಟಿ ದೇವತೆಗಳಲ್ಲಿ ಎಂಬುದನ್ನು ಈ ಮೂಲಕ ಸಾಬೀತು ಪಡಿಸಿದ್ದಾರೆ. ಹಾಗಾಗಿಯೇ, ಜೆಡಿಎಸ್‌ನವರು ಇವರ ಏಕ ಪಕ್ಷೀಯ ಅಧಿಕಾರ ಚಲಾವಣೆ ಬಗ್ಗೆ ಒಂದು ಗುಟುರು ಹಾಕಿದೊಡನೆ, ಅವರು ಮಂತ್ರಿ ಮಂಡಲ ಸೇರುವವರೆಗೂ ತಾವು ಮಠ - ಮಂದಿರಗಳಿಗೆ ಭೇಟಿ ಕೊಡುತ್ತಾ ಕಾಲ ಹಾಕುವೆನೆಂಬ ಭಂಡ ಹೇಳಿಕೆಯನ್ನು ಸಾರ್ವಜನಿಕವಾಗಿ ನೀಡುವ ಸ್ಥಿತಿಯನ್ನು ಈಗಾಗಲೇ ತಲುಪಿದ್ದಾರೆ! ಜನತೆ ಇದಾವುದಕ್ಕೂ ಪ್ರತಿಕ್ರಿಯಿಸಲಾರದಷ್ಟು, ತಮ್ಮ 'ಆಟ'ಗಳನ್ನು ನೋಡಿ ಕಂಗೆಟ್ಟು ಹೋಗಿದ್ದಾರೆ ಎಂಬುದೂ ಇವರಿಗೆ ಗೊತ್ತಾಗಿ ಹೋದಂತಿದೆ. ಹೀಗಾಗಿಯೇ, ಕರ್ನಾಟಕದ ರಾಜಕಾರಣ ಇಷ್ಟು ತಳಮಟ್ಟವನ್ನು ಹಿಂದೆಂದೂ ಮುಟ್ಟಿರಲಿಲ್ಲವೆಂದು ರಾಷ್ಟ್ರೀಯ ಮಾಧ್ಯಮಗಳೂ ಬರೆಯುವಂತಾಗಿದೆ. ಇಲ್ಲಿ ಯಾರೇ ಆಡುವ ಮಾತಿಗೆ ಯಾವ ಅರ್ಥವೂ ಇಲ್ಲದ, ಬೆಲೆಯೂ ಇಲ್ಲದ, ನಿಯಂತ್ರಣವೂ ಇಲ್ಲದ; ಅಪ್ಪಟ ಅಪ್ರಾಮಾಣಿಕತೆಯೇ ಪ್ರಜಾಪ್ರಭುತ್ವದ ಹೆಗ್ಗುರುತಾಗಿರುವ ದುರಂತ ಸ್ಥಿತಿಯಿದು. ಇದಕ್ಕೆಲ್ಲ ಈ ಎರಡು ಪಕ್ಷಗಳನ್ನಷ್ಟೇ ದೂಷಿಸುವಂತಿಲ್ಲ. ಈ ಸಂದರ್ಭದಲ್ಲಿನ ಕಾಂಗ್ರೆಸ್ ವರ್ತನೆ ಪ್ರಜಾಪ್ರಭುತ್ವಕ್ಕೆ ಘನತೆ ತರುವಂತೇನೂ ಇರಲಿಲ್ಲ. ಅಮಾನತ್ತಿನಲ್ಲಿಡಲ್ಪಟ್ಟಿದ್ದ ವಿಧಾನ ಸಭೆಯಲ್ಲಿ ತನ್ನ ಪರವಾಗಿ ಬಹುಮತ ಸೃಷ್ಟಿಸಿಕೊಳ್ಳಲು ಅದು ಆಡಿದ ತೆರೆಮರೆಯ ಆಟವೇ ಈ ಎಲ್ಲ ಹೊಲಸು ರಾಜಕಾರಣಕ್ಕೆ ಕಾರಣವಾದದ್ದು. ಈ ದಿನಗಳಲ್ಲಿ ಮಹಾರಾಷ್ಟ್ರದ ರಾಜ್ಯಪಾಲರು ಬೆಂಗಳೂರಿಗೆ ಬಂದು ಮೊಕ್ಕಾಂ ಮಾಡಿದ್ದು ವಿಶ್ರಾಂತಿಗೆಂದು ಯಾರಾದರೂ ಹೇಳಿದರೆ, ಅದನ್ನು ನಂಬುವವರು ಮಹಾ ಮೂರ್ಖರೇ ಆಗಿರಬೇಕು. ಆ ಮೂರ್ಖರಲ್ಲಿ ದೇವೇಗೌಡರಂತೂ ಸೇರಿರಲಾರರು. ಈ ಸರಳ ತಿಳುವಳಿಕೆಯೂ ಇಲ್ಲದಂತೆ, ಪ್ರಕಾಶರ ಮುಖ್ಯಮಂತ್ರಿತ್ವದ ಕನಸನ್ನು ಭಂಗಗೊಳಿಸಿ ತನ್ನ ಸರ್ಕಾರ ರಚಿಸಲು ಹುನ್ನಾರ ನಡೆಸಿದ್ದ ಕಾಂಗ್ರೆಸ್, ದೇವೇಗೌಡರು ಹಾಗೂ ಅವರ ಮಕ್ಕಳು ಅಷ್ಟು ವೇಗದೊಂದಿಗೆ ನಿರ್ಲಜ್ಜ ರಾಜಕಾರಣಕ್ಕೆ ಮುಂದಾಗುವರೆಂದು ಊಹಿಸಲಾಗದೇ ಹೋದದ್ದು ಸಹಜವೇ ಆಗಿದೆ. ಸಿದ್ಧರಾಮಯ್ಯ ಕಾಂಗ್ರೆಸ್ ಒಳಹೊಕ್ಕ ಮೇಲೂ, ದೇವೇಗೌಡ ಕೇಂದ್ರಿತ ರಾಜಕಾರಣವನ್ನೇ ಮಾಡುತ್ತಿರುವುದು, ಇದಕ್ಕಾಗಿ ಡಿ.ಕೆ.ಶಿವಕುಮಾರರಂತಹವರ ಜೊತೆಗೆ ಸೇರಬೇಕಾಗಿ ಬಂದಿರುವುದು ಅವರ ರಾಜಕೀಯ ಜೀವನವನ್ನು ಕುರಿತ ಎಲ್ಲ ವಿಶ್ವಾಸವೂ ಕದಡಿ ಹೋಗುವಂತೆ ಮಾಡಿದೆ. ಇದೇ ಇಂದು ರಾಜ್ಯ ರಾಜಕಾರಣ ಈ ಜಿಗುಪ್ಸೆಕರ ಮುಟ್ಟಲು ಕಾರಣವಾಗಿದೆ ಎಂದರೆ ತಪ್ಪಾಗಲಾರದು. ಏಕೆಂದರೆ, ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿ ಹೋದ ಮೇಲೆ ಕರ್ನಾಟಕ ಅದೇ ಹಳೆಯ ಎಣ್ಣೆ ಮುಖಗಳನ್ನು ನೋಡಲು ನಿರಾಕರಿಸುತ್ತಿದೆ. ಈ ಹಿನ್ನೆಲೆಯಲ್ಲಿ, ಯುವ ಕಾಂಗ್ರೆಸ್ ಅಧ್ಯಕ್ಷರಾಗಿ ಕೃಷ್ಣಭೈರೇಗೌಡರ ನೇಮಕವೊಂದೇ ಸದ್ಯಕ್ಕೆ ಕರ್ನಾಟಕದಲ್ಲಿ ಕಾಂಗ್ರೆಸ್ಸಿಗೆ ಆಶಾದಾಯಕ ಸಂಗತಿಯಾಗಿರುವಂತೆ ಕಾಣುತ್ತಿದೆ. ಇತ್ತ ಎಂ.ಪಿ.ಪ್ರಕಾಶರನ್ನೇ ನೋಡಿ. ತಮ್ಮೆಲ್ಲರ ಒತ್ತಡ ಹಾಗೂ ಅಪಪ್ರಚಾರಗಳಿಂದ ಬಿಜೆಪಿ ಬಗ್ಗಿ, ಮುಖ್ಯಮಂತ್ರಿತ್ವವನ್ನು ಜೆಡಿಎಸ್ ಪಕ್ಷವೇ ಮುಂದುವರೆಸಿಕೊಂಡು ಹೋಗಲು ಒಪ್ಪಬಹುದೇನೋ ಎನ್ನುವ ಆಸೆ ಇರುವವರೆಗೂ ದೇವೇಗೌಡರ ಹಾಗೂ ಅವರ ಮಕ್ಕಳ ಗಾಯನಕ್ಕೆ ಪಕ್ಕ ವಾದ್ಯ ಒದಗಿಸುವುದರಲ್ಲೇ ತೃಪ್ತರಾಗಿದ್ದ ಇವರು, ಆ ಆಸೆ ಇಂಗಿದೊಡನೆ ಮುಖ್ಯಮಂತ್ರಿತ್ವದ ಕನಸನ್ನೂ, ಧೈರ್ಯವನ್ನೂ ತಮ್ಮ ರಾಜಕೀಯ ಜೀವನದಲ್ಲಿ ಮೊದಲ ಬಾರಿಗೆ ಆವಾಹಿಸಿಕೊಂಡು ಕಾಂಗ್ರೆಸ್ಸಿನೊಡನೆ ಸಂಧಾನ ಆರಂಭಿಸಿದರು. ಈ ಪ್ರಯತ್ನದ ಅರ್ಧದಲ್ಲಿದ್ದಾಗ, ದೇವೇಗೌಡ ಹಾಗೂ ಅವರ ಮಕ್ಕಳಿಗೆ ಭಯವಾಗಿ ತಲೆ ಮೇಲೆ ಸರಿಯಾಗಿ ಮೊಟಕಿದೊಡನೆ,ನೋವಿನಲ್ಲಿ; ಮರುಮೈತ್ರಿ ಕಾನೂನು ಬಾಹಿರ, ಅನೈತಿಕ ಎಂದು ಚೀರಿಕೊಂಡರು. ರಾಜ್ಯಪಾಲರಿಗೆ ಈ ಸಂಬಂಧ ಆಕ್ಷೇಪಣಾ ಪತ್ರವನ್ನೂ ನೀಡಿದರು. ಮಾಧ್ಯಮ ಮಿತ್ರರು ಕಟ್ಟತೊಡಗಿದ್ದ 'ಕಥೆ'ಗೆ ತಕ್ಕಂತೆ ಮಾತನಾಡುತ್ತಾ, ಅವರಿಂದ ಸಜ್ಜನ, ಮರ್ಯಾದಸ್ಥ, ವಿಚಾರಶೀಲ ಎಂದೂ ಕರೆಸಿಕೊಂಡರು. ಈಗ ನೋಡಿದರೆ ಇವರು ಸರ್ಕಾರ ರಚನೆಯಲ್ಲಿ ಜಾತ್ಯತೀತ ಜನತಾ ದಳದ ಶಾಸಕಾಂಗ ಪಕ್ಷದ ಹಿರಿಯ ಮಾರ್ಗದರ್ಶಕರಾಗಿ ಕಂಗೊಳಿಸುತ್ತಿದ್ದಾರೆ! ಶ್ರೀಮಾನ್ ಪ್ರಕಾಶ್ ಉಪಮುಖ್ಯಮಂತ್ರಿಯಾಗಿಯೋ, ಗೃಹ ಅಥವಾ ಹಣಕಾಸು ಮಂತ್ರಿಯಾಗಿಯೋ ಅಧಿಕಾರವನ್ನೂ ಸ್ವೀಕರಿಸಿದರೂ ಆಶ್ಚರ್ಯವೇನಿಲ್ಲ. ದೇವೇಗೌಡ, ಕುಮಾರ ಸ್ವಾಮಿ ಮತ್ತು ಸ್ವತಃ ಯಡಿಯೂರಪ್ಪ ಕೇಜಿಗಟ್ಟಲೆ ಬೆಣ್ಣೆ ಹಚ್ಚಿ ಮಾಡಲಾಗದ್ದನ್ನು ಕೊಳದ ಮಠದ ಸ್ವಾಮಿ ಏನನ್ನು ಬಳಸಿ ಈ ಪರಿವರ್ತನೆಯನ್ನು ಸಾಧ್ಯ ಮಾಡಿದ್ದಾರೋ ತಿಳಿಯದು!

Rating
No votes yet