ಭಾಷೆಯ ಅವಶ್ಯಕತೆ

ಭಾಷೆಯ ಅವಶ್ಯಕತೆ

ಬರಹ

ಇದು ಕೇವಲ ನನ್ನ ಚಿಂತನೆ

ಮಗು ತನ್ನ ಕಣ್ಣು ಬಿಟ್ಟು ಮೊದಲು ಕಾಣುವುದೇ ತನ್ನ ತಾಯಿಯ ಮುಖವನ್ನು. ಅವಳ ಬಾಯಿಂದ ಬರುವ ಮಾತುಗಳೇ ಮಾತೃ ಭಾಷೆ. ಮಗು ತನ್ನ ತಾಯಿಯ ತುಟಿಗಳ ಚಲನೆ ನೋಡಿಯೇ ಮಾತುಗಳನ್ನು ಕಲಿಯುವುದು. ಹಾಗಾಗಿ ಮಕ್ಕಳಿಗೆ ಭಾಷೆ ಕಲಿಸುವುದು ತಾಯಿಯೇ.

ಇಂದಿನ ಮಕ್ಕಳಿಗೆ ಶಾಲೆಗಳಲ್ಲಿ ಆಂಗ್ಲ ಭಾಷೆಯ ಮೂಲಕ ವಿದ್ಯೆ ನೀಡುವುದು ಮತ್ತು ವಿದ್ಯೆ ಕೊಡಿಸುವುದು ಸರ್ವೇ ಸಾಮಾನ್ಯವಾಗಿದೆ. ಹೀಗಾಗಿ ನಮ್ಮ ಮಾತೃ ಭಾಷೆಯಾದ ಕನ್ನಡವನ್ನು ಮರೆಯುವಂತಾಗಿದೆ. ಇದು ತೀರಾ ಶೋಚನೀಯ. ಇದಕ್ಕೆ ಮುಖ್ಯ ಕಾರಣವೆಂದರೆ ಹೆಚ್ಚಿನ ಓದಿಗೆ ಕನ್ನಡ ಭಾಷೆಯ ಮಾಧ್ಯಮದಲ್ಲಿ ಅನುಕೂಲವಿಲ್ಲವೆಂಬ ಅನುಮಾನ. ಇದರಲ್ಲಿ ಸತ್ಯವಿಲ್ಲ. ಇಷ್ಟೇ ಓದಿದರೂ ಯಾವುದೇ ಭಾಷೆಯಲ್ಲಿ ಓದಿದರೂ ಅದು ಮೊದಲು ಮನಸ್ಸಿನಲ್ಲಿ ಗ್ರಹಣವಾಗೋದು ಮಾತೃಭಾಷೆಯಲ್ಲೇ ನಂತರ ಅದು ವ್ಯಕ್ತಪಡಿಸಬೇಕಾದ ಭಾಷೆಗೆ ತರ್ಜುಮೆಗೊಳ್ಳುತ್ತದೆ. ಯಾವುದೇ ಪದಗಳಿಗಾಗಲೀ ಕನ್ನಡದಲ್ಲಿ ಸೂಕ್ತವಾದ ಪರ್ಯಾಯ ಸಿಗುತ್ತದೆ. ಈಗ ನೋಡಿ ಕನ್ನಡದಲ್ಲೇ ಐ ಏ ಎಸ್ ಮಾಡಿದ ಅಧಿಕಾರಿ ಇದ್ದಾರೆ. ಇವರನ್ನೇ ಮಾದರಿಯಾಗಿ ಇಟ್ಟುಕೊಂಡು ನಾವು ನಮ್ಮ ಮಕ್ಕಳಿಗೂ ಕನ್ನಡ ಕಲಿಕೆಗೆ ತೊಡಗಿಸಬೇಕು. ಕನ್ನಡವನ್ನು ನಮ್ಮ ಮಕ್ಕಳ್ಳಲ್ಲದೇ ಮತ್ತಿನ್ಯಾರು ಕಲಿಯಬೇಕು ಮತ್ತು ಕಲಿಯುತ್ತಾರೆ.

ಇದೇ ಸಮಯದಲ್ಲಿ ನಮ್ಮ ಕೇಂದ್ರ ಸರ್ಕಾರವು ಹಿಂದಿಯನ್ನು ಹೇರಲು ಪ್ರಯತ್ನಿಸುತ್ತಿದೆ. ಇದರ ಬಗ್ಗೆ ನನ್ನದೊಂದೆರಡು ಮಾತುಗಳು ಹೀಗಿವೆ.

೧೯೬೩ರಲ್ಲಿ ಭಾರತದ ಸಂವಿಧಾನ ರೀತ್ಯಾ ಹಿಂದಿ ಭಾಷೆಯನ್ನು ರಾಜ ಭಾಷೆ ಎಂದು ಘೋಷಿಸಿದರು. ಅದು ೧೯೬೫ರ ಜನವರಿ ೨೬ನೇ ತಾರೀಖಿನಿಂದ ಜಾರಿಗೆ ಬಂದಿತು. ಎಲ್ಲರಿಗೂ ನೆನಪಿರಬಹುದು. ಆಗ ಡೌನ್ ವಿತ್ ಹಿಂದಿ ಅನ್ನುವ ಆಂದೋಳನ ಬಹಳ ಬಿರುಸಾಗಿ ದಕ್ಷಿಣ ಭಾರತದಲ್ಲಿ ನಡೆಯಿತು. ಅದರ ಪ್ರಭಾವವೇ ತಮಿಳರು ಪ್ರಬಲವಾಗಲು ಕಾರಣ. ಕನ್ನಡಿಗರು ಸ್ವಲ್ಪ ನಿಧಾನಸ್ಥರು ಮತ್ತು ಸಂದರ್ಭಕ್ಕೆ ತಕ್ಕಂತೆ ಅನುಸರಿಸಿಕೊಂಡು ಹೋಗುವವರಾಗಿ ಇವರ ಮೇಲೆ ಹಿಂದಿಯನ್ನು ಹೇರಲು ಬಲು ಸುಲಭ ಎಂಬುದು ಭಾರತ ಸರ್ಕಾರದ ನಿಲುವಾಯಿತು. ಅದರ ಫಲ ನಾವು ಈಗ ಅನುಭವಿಸುತ್ತಿದ್ದೇವೆ. ಅದರಲ್ಲೂ ಕೇಂದ್ರ ಸರ್ಕಾರ ಸ್ವಾಮ್ಯದ ಕಛೇರಿ, ಬ್ಯಾಂಕುಗಳು, ಫ್ಯಾಕ್ಟರಿಗಳು, ರೈಲ್ವೇ, ಮತ್ತಿತರೇ ಕೇಂದ್ರ ಸರ್ಕಾರದ ಹಿಡಿತದಲ್ಲಿ ಬರುವ ಸಂಸ್ಥಾನಗಳಲ್ಲಿ ಹಿಂದಿಯ ಹೇರಿಕೆ ದಿನೇ ದಿನೇ ಜಾಸ್ತಿಯಾಗುತ್ತಿದೆ. ನಮ್ಮ ಹಿರಿಯರು ಆಗ ತಮಿಳರಂತೆ ಏನಾದರೂ ಕಾರ್ಯಕ್ರಮ ಕೈಗೊಂಡಿದ್ದರೆ, ಕನ್ನಡ ಭಾಷೆ ಅವನತಿ ಅಂಚಿಗೆ ಹೋಗುತ್ತಿರಲಿಲ್ಲ.

ಅಫಿಷಿಯಲ್ ಲಾಂಗುಯೇಜ್ ಯಾಕ್ಟ್, ೧೯೬೩ ಎಂಬುದನ್ನು ಜಾರಿಗೆ ತರಲಾಗಿದೆ.

ಇದರ ಬಗ್ಗೆ ಕೆಲವು [w:http:rajbhasha.nic.in/eventseng.htm|ಅಂಕಿ ಅಂಶ]ಗಳನ್ನು ಮೊದಲು ನೋಡೋಣ. ನೋಡಿ ಕನ್ನಡ ಭಾಷೆಯ ಬಗ್ಗೆ ಮಂಡಿಸಿದ ಒಂದು [w:http://www.languageinindia.com/march2002/sharadachapter1.html|ಪ್ರಬಂಧ].

ಇದಕ್ಕೆಂದೇ ಕೇಂದ್ರ ಸರ್ಕಾರ ಒಂದು [w:http://rajbhasha.nic.in|ಇಲಾಖೆ]ಯನ್ನು ತೆರೆದಿದೆ. ಎಷ್ಟು ಹಣ ವ್ಯಯ ಆಗ್ತಿರಬಹುದು. ಇದರ ಅಗತ್ಯವಿತ್ತೇ? ಕನ್ನಡವೂ ಹಿಂದಿಗೆ ಸಮ ಎನ್ನುವುದಕ್ಕೆ [w:http://en.wikipedia.org/wiki/list_of_national_languages_of_india|ಇಲ್ಲಿ] ನೋಡಿ. ಹಾಗಿದ್ದರೆ ಕನ್ನಡಕ್ಕೂ ಅಷ್ಟೇ ಹಣವನ್ನು ಕೇಂದ್ರ ಸರ್ಕಾರ ವಿನಿಯೋಗಿಸಲಿ.

ನಾನು ಹೇಳೋದಿಷ್ಟೇ. ಹೇಗೆ ಉತ್ತರ ಭಾರತೀಯರು ಹಿಂದಿಯನ್ನಲ್ಲದೇ ಬೇರೆ ಭಾಷೆಯನ್ನು ಅರ್ಥ ಮಾಡಿಕೊಳ್ಳಲು ಆಗುವುದಿಲ್ಲ ಎಂದು ಹಿಂದಿಯನ್ನು ಸಂಪರ್ಕ ಭಾಷೆಯನ್ನಾಗಿ ಮಾಡುತ್ತಿದ್ದಾರೋ ಹಾಗೆಯೇ ಕ್ಷೇತ್ರೀಯ ಭಾಷೆಗಳಿಗೂ ಪ್ರಾಮುಖ್ಯತೆಯನ್ನು ಕೊಟ್ಟು ಅವುಗಳನ್ನು ಉಳಿಸಲಿ, ಬೆಳೆಸಲಿ. ಹಿಂದಿಯೇತರ ಎಲ್ಲ ಭಾಷೆಗಳಲ್ಲೂ ಸಾಹಿತ್ಯ ಅಪರಿಮಿತವಾಗಿ ಬೆಳೆದಿದೆ. ನಮ್ಮ ಕನ್ನಡದ ಉಗಮದ ಬಗ್ಗೆ ನೋಡಿ [w:http://www.engr.mun.ca/~adluri/telugu/language/script/script1a.html|ಇಲ್ಲಿ]. ಇಷ್ಟು ಹಳೆಯದಾದ ಭಾಷೆ, ಇನ್ನೂ ಹತ್ತು ಹಲವಾರು ಭಾಷೆಗಳಿಗೆ ಜನ್ಮ ಕೊಟ್ಟಂಥ ಭಾಷೆ, ಸಾಹಿತ್ಯದಲ್ಲಿ ಅಪರಿಮಿತವಾಗಿ ಬೆಳೆದಿರುವಂತಹ ಭಾಷೆಯನ್ನು ಹಿಂದಿಗಿಂತ ಮೇಲೆ ತರೋದು ಬೇಡ, ಹಿಂದಿಯ ಸಮಾನಾಂತರಕ್ಕೆ ಇಟ್ಟರೂ ಸಾಕು. ಇದರ ಬಗ್ಗೆ [w:http://www.unesco.org/most/Inindia.htm|ಇಲ್ಲೂ] ಹೀಗೆ ಹೇಳಿದೆ ನೋಡಿ.

ನಮಗೆ ದೆಹಲಿಯೇ ರಾಷ್ಟ್ರದ ರಾಜಧಾನಿಯಾಗಿರಲಿ, ಬೆಂಗಳೂರು ಆಗೋದು ಬೇಡ. ಆದರೆ ಬೆಂಗಳೂರು ದೆಹಲಿ ಆಗೋದು ಬೇಡ. ಎಲ್ಲ ರಾಜ್ಯಗಳಂತೆ ಕರ್ನಾಟಕವೂ ಸೇರಿ ಭಾರತವಾಗಲಿ. ಇಡೀ ಭಾರತವೇ ಒಂದು ರಾಜ್ಯವಾಗಲು ಸಾಧ್ಯವಿಲ್ಲ. ರಾಷ್ಟ್ರಕ್ಕೆ ಏನೇ ಧಕ್ಕೆ ಬಂದರೂ ಸರಿಯೇ ಕನ್ನಡಿಗರೇ ಮೊದಲಿಗರಾಗಿ ರಾಷ್ಟ್ರ ಗೌರವ ಕಾಪಾಡುವೆವು. ನನ್ನ ಕಳಕಳಿಯ ಮನವಿಯಿಷ್ಟೇ, ಹಿಂದಿಯ ಹೇರಿಕೆ ನಮ್ಮ ಮೇಲೆ ಬೇಡ. ಇಂಗ್ಲೀಷ್ ಕೂಡಾ ನಮಗೆ ಬೇಡ. ಹಿಂದಿಯ ಬೆಳವಣಿಗೆಗೆ ಕೊಡುವ ಸೌಲಭ್ಯ ಸವಲತ್ತು ಕನ್ನಡಕ್ಕೂ ಕೊಡಿ. ಕನ್ನಡವೂ ಬೆಳೆಯಲಿ.

ಇದರ ಪ್ರಕಾರ ಮೊದಲು ೧೫ ವರ್ಷಗಳು ಇಂಗ್ಲೀಷ್ ಅನ್ನು ಹಿಂದಿಯ ಜೊತೆ ಜೊತೆಯಾಗಿ ಉಪಯೋಗಿಸಬಹುದು ಎಂದಿದ್ದರು. ಇದನ್ನು ಮಾಡಿದವರು ಯಾರು? ಇದರಲ್ಲಿ ಹಿಂದಿ ಭಾಷಿಗರೇ ಹೆಚ್ಚಾಗಿದ್ದರು. ದಕ್ಷಿಣ ಭಾರತದಲ್ಲಿ ತಮಿಳುನಾಡಿನಲ್ಲಿ ಹಿಂದಿ ಹೇರಿಕೆಯ ವಿರುದ್ಧವಾಗಿ ೧೯೬೮ರಲ್ಲಿ ಹೋರಾಟ ನಡೆದದ್ದರಿಂದ ಅಲ್ಲಿ ಹಿಂದಿಯ ಹೇರಿಕೆ ಮುಂದುವರೆಯಲಿಲ್ಲ. ಇದೇ ಕಾರಣದಿಂದ ರಾಜ್ಯದ ಹೆಸರನ್ನು ಮದರಾಸಿನಿಂದ ತಮಿಳುನಾಡು ಎಂದು ಬದಲಾಯಿಸಿದರು. ಪಂಜಾಬ ಪ್ರಾಂತ್ಯ ನಿರ್ಮಾಣವಾಗಲು [w:http://www.punjabilok.com/misc/terrorism/1.htm|ಈ ವಿಷಯವೂ] ಒಂದು ಕಾರಣ. ಪಶ್ಚಿಮ ಬಂಗಾಳದಲ್ಲೂ ಹಿಂದಿ ಹೇರಿಕೆಗೆ ವಿರೋಧವಿದೆ. ನಮ್ಮ ಕನ್ನಡಿಗರಲ್ಲಿ ಹೆಚ್ಚಿನ ಸಹಿಷ್ಣುತೆ ಭಾವ ಇರುವುದರಿಂದ ನಮ್ಮ ಮೇಲೆ ಎಲ್ಲರೂ ಸವಾರಿ ಮಾಡುವ ಹಾಗೆ ಆಗಿದೆ.

ಕನ್ನಡದ ಬಗ್ಗೆ ಜಾಗೃತಿ ಮೂಡುತ್ತಿರುವ ಈ ಸುಸಮಯದಲ್ಲಿ ನಮ್ಮಿಂದ ಚುನಾಯಿತರಾದ ರಾಜಕಾರಣಿಗಳಲ್ಲಿ ಮನವಿ ಮಾಡಿಕೊಳ್ಳೋಣ. ಕನ್ನಡವನ್ನು ಉಳಿಸಿ, ಬೆಳೆಸಿ. ಕನ್ನಡಕ್ಕೆ ಮೊದಲ ಆದ್ಯತೆ ಸಿಗಲಿ.

ವಿದ್ಯಾಭ್ಯಾಸ ಕನ್ನಡದಲ್ಲೇ ಇಲ್ಲದಿರುವುದೊಂದು ಖೇದದ ವಿಷಯ. ಹೇಗೆ ಚೀನಾ, ಕೊರಿಯಾ, ಜಪಾನ್, ಜರ್ಮನಿ ಮತ್ತಿತರೇ ಮುಂದುವರೆದ ದೇಶಗಳಲ್ಲಿ ವಿದ್ಯಾಭ್ಯಾಸವು ಅವರದ್ದೇ ಭಾಷೆಯಲ್ಲಿ ಲಭ್ಯವಿದೆಯೋ ಹಾಗೇ ಕನ್ನಡದಲ್ಲೇ ಎಲ್ಲ ವಿಷಯಗಳ ವಿದ್ಯೆಯೂ ಕನ್ನಡದಲ್ಲೇ ಲಭ್ಯವಾಗುವಂತೆ ಮಾಡಬೇಕು. ನಮ್ಮಲ್ಲಿರುವ ಬುದ್ಧಿ ಜೀವಿಗಳು ಅವರವರ ಕ್ಷೇತ್ರಗಳಲ್ಲಿ ಇಂಗ್ಲೀಷ್ ಅಥವಾ ಬೇರೆ ಯಾವುದೇ ಭಾಷೆಯಲ್ಲಿರುವ ಪದಗಳನ್ನು ಕನ್ನಡೀಕರಿಸಿ ಪಾರಿಭಾಷಿಕ ನಿರ್ಮಿಸಲು ಮುಂದಾಗಲಿ. ಇದರಿಂದಾಗಿ ಮುಂದಿನ ಪೀಳಿಗೆಯ ವಿದ್ಯಾಭ್ಯಾಸದಲ್ಲಿ ಎಲ್ಲ ವಿಷಯಗಳೂ ಕನ್ನಡದಲ್ಲೇ ಲಭ್ಯವಾಗಲಿ. ಆಗ ಎಲ್ಲ ಮಕ್ಕಳೂ ಕನ್ನಡವನ್ನು ಕಡ್ಡಾಯವಾಗಿ ಕಲಿಯಬಹುದು. ಈ ನಿಟ್ಟಿನಲ್ಲಿ ರಾಷ್ಟ್ರಕ್ಕೆ ಕನ್ನಡಿಗರು ಮಾದರಿಯಾಗಲು ಪ್ರಯತ್ನಿಸೋಣ, ಎಂಬುದು ನನ್ನ ಚಿಂತನೆ.

ಇನ್ನೂ ನೋಡಿ ಕನ್ನಡದ ಸೊಗಡಿಗೆ ಮಾರು ಹೋಗಿ ಬಹಳ ಹಿಂದೆ ಕ್ರೈಸ್ತ ಧರ್ಮ ಪ್ರಚಾರಕ್ಕಾಗಿ ಬಂದ ರೆವರೆಂಡ್ ಫಾದರ್ ಕಿಟ್ಟೆಲ್ ಅವರು ಕನ್ನಡ ಕಲಿತು ಕನ್ನಡದಲ್ಲೇ ಪಾರಿಭಾಷಿಕ ರಚಿಸಿದರು. ಇವರು ಮೂಲತ: ಜರ್ಮನಿಯವರು. ಇನ್ನು ಕನ್ನಡದಲ್ಲೇ ಜಾಸ್ತಿ ಜ್ಞಾನಪೀಠ ಪ್ರಶಸ್ತಿ ಪಡೆದವರು ಇರುವುದು. ಹಾಗೆ ನೋಡಿದರೆ ಅವರಲ್ಲಿ ಬಹಳಷ್ಟು ಕವಿಗಳ ಮನೆ ಮಾತು ಕನ್ನಡವಲ್ಲವೇ ಅಲ್ಲ. ಇನ್ನೂ ಕನ್ನಡದ ಮೊದಲ ಪ್ರೊಫೆಸರ್ ಆಗಿದ್ದ ತಳುಕಿನ ವೆಂಕಣ್ಣಯ್ಯನವರ ಮನೆ ಮಾತು ತೆಲುಗು. ಅವರು ಅವರ ಶಿಷ್ಯಂದಿರುಗಳಿಗೆ ಮನೆಯಲ್ಲಿ ಊಟ ಹಾಕಿ ಪಾಠ ಹೇಳಿಕೊಟ್ಟಂಥವರು. ಇಂತಹ ಮಹನೀಯರ ಸಾಲಿಗೇ ಸೇರುವ ಡಿ.ವಿ.ಗುಂಡಪ್ಪ, ದ.ರಾ.ಬೇಂದ್ರೆ, ಕನ್ನಡ ಕುಲ ಪುರೋಹಿತ ಎಂದೇ ಪ್ರಸಿದ್ಧರಾಗಿದ್ದ ಆಲೂರು ವೆಂಕಟರಾಯರು, ಇತ್ಯಾದಿ ಮಹಾಪುರುಷರ ಬಗ್ಗೆಯೂ ನಾವು ತಿಳಿದು ನಮ್ಮ ಮಕ್ಕಳಿಗೆ ಮತ್ತು ಇಂದಿನ ತರುಣ ಜನಾಂಗಕ್ಕೆ ತಿಳಿಸಿಕೊಡಬೇಕಾಗಿದೆ. ಇಂತಹ ಹತ್ತು ಹಲವಾರು ವಿಷಯಗಳಿಂದ ಅವರುಗಳು ಕನ್ನಡ ಭಾಷೆಯ ಹಿರಿಮೆ ತಿಳಿಯಬೇಕಾಗಿದೆ. ಇವರೆಲ್ಲ ಪ್ರಾತ:ಸ್ಮರಣೀಯರು. ಇಂದಿನ ಮಹಾಪುರುಷರುಗಳ ಸಾಲಿನಲ್ಲಿರುವ ನಡೆದಾಡುವ ದೇವರೆಂದೇ ಪ್ರಸಿದ್ಧವಾದ ಶಿವಕುಮಾರ ಸ್ವಾಮಿಜಿಗಳನ್ನೂ ಹೆಸರಿಸಬಹುದು. ಇವರುಗಳಿಂದಲೇ ಕನ್ನಡದ ಭಾಷೆಯ ಶ್ರೀಗಂಧ ವಿಶ್ವದಲ್ಲೆಲ್ಲಾ ಪಸರಿಸಿರುವುದು.

ಈಗೀಗ ಪರಭಾಷೀಯರ ದಾಳಿ ನಮ್ಮ ಕನ್ನಡನಾಡಿನಲ್ಲಿ ಬಹಳವಾಗಿದೆ. ಈಗಿನ ಕನ್ನಡ ನಾಡು ಇನ್ನೊಂದು ಹಾಳು ಹಂಪೆಯಾಗಲು ಅವಕಾಶ ಕೊಡೋದು ಬೇಡ. ಈ ದಿಸೆಯಲ್ಲಿ ಮೊದಲು ನಾವು ನಮ್ಮ ಬಗ್ಗೆ ತಿಳಿದುಕೊಳ್ಳೋಣ. ತಿಳಿದು ಕಲಿಯೋಣ. ಕಲಿತು ಕಲಿಸೋಣ. ಕಲಿಸಿ ಬೆಳೆಯೋಣ. ಬೆಳೆದು ನಾಡನ್ನೂ ಬೆಳೆಸಿ, ಸದೃಢಗೊಳಿಸೋಣ. ಇದು ನಮ್ಮ ಮೊದಲನೆಯ ಆದ್ಯತೆಯಾಗಲಿ.

ಹಾಗೆಂದು ಯಾವ ಭಾಷೆಗಳೂ ನಮಗೆ ವೈರಿಗಳಲ್ಲ. ಎಲ್ಲ ಭಾಷೆಗಳೂ ತಾಯಿಯಂದಿರ ಹಾಗೆ. ಯಾವ ತಾಯಿಯೂ ಕೆಟ್ಟವಳಲ್ಲ. ಅವಳು ಮಾಡುವುದೆಲ್ಲ ತನ್ನ ಮಕ್ಕಳ ಹಿತಕ್ಕಾಗಿಯೇ. ಇತರ ಭಾಷೆಗಳನ್ನೂ ನಾವು ಕಲಿಯಬೇಕು. ಆದರೆ ನಮ್ಮ ಭಾಷೆಯನ್ನು ಮರೆಯುವಂತಾಗಬಾರದು. ಈಗೀಗ ಇಡೀ ಜಗತ್ತೇ ಚಿಕ್ಕದಾಗುತ್ತಿದೆ. ಯಾರು ಎಲ್ಲಿ ಬೇಕಾದರೂ ಜೀವನ ಮಾಡಬೇಕಾದ ಪ್ರಮೇಯ ಬರಬಹುದು. ಎಲ್ಲಿ ಉಳಿಯಬೇಕೋ ಅಲ್ಲಿಯ ಭಾಷೆ, ಜನಜೀವನಕ್ಕೆ ಹೊಂದಿಕೊಳ್ಳಬೇಕು. ಹೀಗೇ ಕನ್ನಡನಾಡಿಗೆ ಬರುವ ಪರಭಾಷಿಯರೂ ಕನ್ನಡವನ್ನು ಕಲಿಯಬೇಕು. ಇದಕ್ಕಾಗಿ ನಾವೆಲ್ಲರೂ ಕನ್ನಡ ಕಲಿಸೋಣ, ಎಲ್ಲರ ಪ್ರೀತಿ ಗಳಿಸೋಣ. ಕನ್ನಡದ ಸೊಗಡನ್ನು ಜಗತ್ತಿಗೇ ಸಾರೋಣ.