ಶ್ರೀ ಶ್ರೀನಿವಾಸ ಕಲ್ಯಾಣೋತ್ಸವದ ವೇದಿಕಾ ಪ್ರದರ್ಶನ
ಪ್ರಿಯ ಸಂಪದ ಬಾಂಧವರೆ,
ಇತ್ತೀಚೆಗೆ, ಅಂದರೆ ೧೮-೧೧-೨೦೦೭ರಂದು ಹಾಸನದ ಶ್ರೀ ಶೈಲ ವಲ್ಲಭ ಭಜನ ಮಂಡಳಿಯವರು ಒಂದು ಮನೋಹರವಾದ ಶ್ರೀ ಶ್ರೀನಿವಾಸ ಕಲ್ಯಾಣೋತ್ಸವವನ್ನು ಅಲ್ಲಿನ ಆರ್ಯ ವೈಸ್ಯ ಮಂಡಲಿಯ ಸಹಯೋಗದೊಂದಿಗೆ ನಿಯೋಜಿಸಿದ್ದರು. ಇದು ತಿರುಪತಿ ತಿರುಮಲ ದೇವಸ್ಥಾನದ ಹರಿದಾಸ ಸಾಹಿತ್ಯ ಯೋಜನೆಯ ಕಾರ್ಯಕ್ರಮವೂ ಆಗಿತ್ತು. ಈ ಯೋಜನೆಯ ಅಡಿಯಲ್ಲಿ ಸ್ಥಳೀಯ ಸಂಸ್ಥೆಗಳು ಸಭಾ ಭವನ, ಪ್ರಚಾರ ಇತ್ಯಾದಿಗಳ ಜವಾಬ್ಧಾರಿ ವಹಿಸಿಕೊಂಡರೆ, ತಿ.ತಿ.ದೇವಸ್ಥಾನವು ಉಚಿತವಾಗಿ ಯೋಜನಾ ತಂಡವನ್ನು ಕಳುಹಿಸಿ, ಶ್ರೀ ಶ್ರೀನಿವಾಸ ಕಲ್ಯಾಣೋತ್ಸವದ ವೇದಿಕಾ ಪ್ರಾತ್ಯಕ್ಷಿಯನ್ನು ಪ್ರಸ್ತುತ ಪಡಿಸುತ್ತದೆ. ತಿರುಪತಿಯಿಂದ ಹೋಗಿ ಬರುವ ವೆಚ್ಚ ಇತ್ಯಾದಿಗಳನ್ನು ತಿ.ತಿ.ದೇ. ವಹಿಸಿಕೊಳ್ಳುವುದಲ್ಲದೆ, ಈ ಕಾರ್ಯಕ್ರಮದಲ್ಲಿ ಯಾವುದೇ ರೀತಿಯ ವಂತಿಗೆ, ಕಾಣಿಕೆ ಇತ್ಯಾದಿಗಳನ್ನು ತೆಗೆದುಕೊಳ್ಳುವುದಿಲ್ಲ. ಈ ಯೋಜನೆಯು ಕೇವಲ ಹಿಂದೂ ಧರ್ಮದ ಪರಿಚಯ ಹಾಗು ನಮ್ಮ ಕಲೆ ಹಾಗು ಸಂಸ್ಕೃತಿಯನ್ನು ಇಂದಿನ/ಮುಂದಿನ ಪೀಳಿಗೆಗೆ ತಿಳಿಸಿಕೊಡುವುದೇ ಆಗಿದೆ. ಈ ಪ್ರಸ್ತುತ ಸಂದರ್ಭದಲ್ಲಿ ಭಜನ ಮಂಡಳಿಯು ಹಾಸನದ ಕಲಾ ಭವನದಲ್ಲಿ ಎಲ್ಲಾ ಏರ್ಪಾಡನ್ನೂ ನಡೆಸಿದ್ದು, ಎಂದರೆ ಭವನದ ಬಾಡಿಗೆ, ವಿಡಿಯೋ ಕವರೇಜ್, ಸ್ಥಳೀಯ ಹಾಗು ಸಮಾಜದ ಪ್ರಮುಖ ವ್ಯಕ್ತಿಗಳಿಗೆ ಅಭಿನಂದನೆ ಇತ್ಯಾದಿಗಳು ಹಾಗು ಕಾರ್ಯಕ್ರಮಕ್ಕೆ ಬಂದವರಿಗೆಲ್ಲರಿಗೂ ಪ್ರಸಾದ ಹಂಚಿಕೆ (ಊಟ ಮಾಡಿದಷ್ಟೇ ಸಮೃದ್ಧವಾಗಿತ್ತು) ಇತ್ಯಾದಿಗಳನ್ನು ಸುಮಾರು ರೂ. ೫ ಲಕ್ಷ ವೆಚ್ಚದಲ್ಲಿ ಆಯೋಜಿಸಿತ್ತು. ಈ ಪ್ರಾತ್ಯಕ್ಷಿಕೆ ಹಾಗು ಪ್ರಸಾದ ಹಂಚಿಕೆ ಇತ್ಯಾದಿಗಳೆಲ್ಲವೂ ಜಾತಿ, ಮತಗಳ ಭೇದ ಭಾವವಿಲ್ಲದೆ ಪ್ರತಿಯೊಬ್ಬರಿಗೂ ಮುಕ್ತವಾಗಿದ್ದು, ಯಾರು ಬೇಕಾದರೂ ಮುಂಚಿತವಾಗಿ ಪಾಸ್ ಪಡೆದು ಭಾಗವಹಿಸಲು ಅವಕಾಶವಿತ್ತು. ಸನ್ಮಾನ್ಯ ಆನಂದತೀರ್ಥಾಚಾರ್ಯರವರು ತಿ.ತಿ.ದೇವಸ್ಥಾನದ ಪ್ರತಿನಿಧಿಯಾಗಿ ಭಾಗವಹಿಸಿ, ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಡೆಸಿಕೊಟ್ಟರು. ವೀಕ್ಷಕರಿಗೆ ತಾವೇ ತಿ.ತಿ.ದೇವಸ್ಥಾನದಲ್ಲಿ ಸ್ವಾಮಿಯ ಕಲ್ಯಾಣೋತ್ಸವವನ್ನು ಖುದ್ದಾಗಿ ವೀಕ್ಷಿಸಿದ ಅನುಭವವಾಯಿತು.
ಈಕೂಡ ತತ್ಸಂಬಂಧವಾಗಿ ತೆಗೆದ ಛಾಯಾಚಿತ್ರವೊಂದನ್ನು ಸಂಪದದ ಓದುಗರಿಗಾಗಿ ನೀಡುತ್ತಿದ್ದೇನೆ. ೧೬ ಸ್ಲೈಡುಗಳಿವೆ. ಆದರೆ, ಸ್ಥಳದ ಅಭಾವದಿಂದಾಗಿ ಕೇವಲ ಒಂದೇ ಚಿತ್ರವನ್ನು ಈ ಮೂಲಕ ಕಳುಹಿಸಲು ಸಾಧ್ಯವಾಗುತ್ತಿದೆ. ವೀಕ್ಷಿಸಿ ಆನಂದಿಸಿ, ಸ್ವಾಮಿಯ ಕೃಪೆಗೆ ಪಾತ್ರರಾಗಬೇಕಾಗಿ ಪ್ರಾರ್ಥನೆ.
ಇಂತಹ ಕಾರ್ಯಕ್ರಮವನ್ನು ಇಚ್ಚಿಸುವ ಯಾರುಬೇಕಾದರೂ ಆಯೋಜಿಸಬಹುದು. ತಿ.ತಿ.ದೇವಸ್ಥಾನಕ್ಕೆ ೨-೩ ತಿಂಗಳು ಮುಂಚಿತವಾಗಿ ತಿಳಿಸಿದರೆ ಅನುಕೂಲವಾಗುತ್ತದೆಂದು ತಿಳಿಸಿರುತ್ತಾರೆ.
ಎ.ವಿ. ನಾಗರಾಜು
೯೮೪೫೪೯೬೪೫೯