ಫಾದರ್ ಸೆರ್ಗಿಯಸ್ ಅಧ್ಯಾಯ ಒಂದು

ಫಾದರ್ ಸೆರ್ಗಿಯಸ್ ಅಧ್ಯಾಯ ಒಂದು

[ಕಳೆದ ಮೂರು ದಶಕಗಳಲ್ಲಿ ನನ್ನನ್ನು ಆವರಿಸಿಕೊಂಡು ಬಹುವಾಗಿ ಕಾಡಿದ ಮೂರು ಕಥೆಗಳಲ್ಲಿ ಇದೂ ಒಂದು. ಇದರಲ್ಲಿ ಎಂಟು ಅಧ್ಯಾಯಗಳಿವೆ. ಸಾವಧಾನವಾಗಿ ಓದಿ. ಅಲ್ಲಲ್ಲಿ ಕೆಲವು ಬೆರಳಚ್ಚಿನ ತಪ್ಪುಗಳಿರಬಹುದು, ದಯವಿಟ್ಟು ತಿದ್ದಿಕೊಳ್ಳಿ. ಅಲ್ಲಲ್ಲಿ ಎದುರಾಗುವ ವಿಶೇಷ ಪದಗಳಿಗೆ ವಿವರಣೆಯನ್ನು * ಗುರುತಿನೊಂದಿಗೆ ಅಧ್ಯಾಯದ ಕೊನೆಯಲ್ಲಿ ಕೊಟ್ಟಿದ್ದೇನೆ.]
ಫಾದರ್ ಸೆರ್ಗಿಯಸ್
ಒಂದು
ಪ್ರಿನ್ಸ್ ಸ್ಟೆಪಾನ್ ಕಸಾಟ್ಸ್‌ಕಿ ಮಾಡಿದ್ದನ್ನು ಕಂಡು ಪೀಟರ್ಸ್‌ಬರ್ಗಿನ ಜನಕ್ಕೆಲ್ಲ ಆಶ್ಚರ್ಯವಾಗಿತ್ತು. ಅವನು ಸಾವಿರದ ಎಂಟುನೂರ ನಲವತ್ತರ ಸುಮಾರಿನಲ್ಲಿ ಕ್ಯುರಾಸ್ಸಿಯರ್ ಲೈಫ್‌ಗಾರ್ಡ್ಸ್‌ನಲ್ಲಿ ಅಫೀಸರನಾಗಿದ್ದ, ಸದ್ಯದಲ್ಲಿಯೇ ಚಕ್ರವರ್ತಿ ಮೊದಲನೆಯ ನಿಕೊಲಸ್‌ನ ಏಡ್‌ ಡಿ ಕ್ಯಾಂಪ್ ಆಗಿ ಭವ್ಯವಾದ ಭವಿಷ್ಯರೂಪಿಸಿಕೊಳ್ಳುತ್ತಾನೆಂದು ಎಲ್ಲರೂ ನಿರೀಕ್ಷಿಸಿದ್ದರು. ಆದರೆ ಸ್ಟೆಪಾನ್ ಕೆಲಸಕ್ಕೆ ರಾಜೀನಾಮೆಯನ್ನು ಕೊಟ್ಟ; ಮಹಾರಾಣಿಯ ಆಪ್ತಸಖಿಯಾಗಿದ್ದ ಸುಂದರ ಯುವತಿಯೊಡನೆ ಇನ್ನೊಂದು ತಿಂಗಳಲ್ಲಿ ನಡೆಯಬೇಕೆಂದು ನಿಶ್ಚಯವಾಗಿದ್ದ ಮದುವೆಯನ್ನು ಮುರಿದುಕೊಂಡ; ತನಗಿದ್ದ ಚಿಕ್ಕ ಎಸ್ಟೇಟನ್ನು ಅಕ್ಕನಿಗೆ ಬರೆದುಕೊಟ್ಟು, ಮಠಕ್ಕೆ ಸೇರಿ ಸನ್ಯಾಸಿಯಾಗಿಬಿಟ್ಟಿದ್ದ. ಅವನ ವರ್ತನೆಗೆ ಇದ್ದ ಅಂತರಂಗದ ಕಾರಣಗಳು ಗೊತ್ತಿಲ್ಲದಿದ್ದವರಿಗೆ ಇದೆಲ್ಲ ಅಸಾಮಾನ್ಯ, ಅವ್ಯಾವಹಾರಿಕ ವರ್ತನೆಯಂತೆ ಕಂಡಿತ್ತು. ನಡೆದದ್ದೆಲ್ಲ ಅತ್ಯಂತ ಸಹಜವಾಗಿ ನಡೆಯಿತೆಂದೂ, ಹಾಗಲ್ಲದೆ ಬೇರೆ ರೀತಿಯಲ್ಲಿ ತಾನು ನಡೆದುಕೊಳ್ಳುವುದು ಸಾಧ್ಯವೇ ಇರಲಿಲ್ಲವೆಂದೂ ಸ್ಟೆಪಾನ್ ಕಸಾಟ್ಸ್‌ಕಿಗೆ ಅನಿಸಿತ್ತು.

ಸ್ಟೆಪಾನ್‌ನ ತಂದೆ ಒಬ್ಬ ಕರ್ನಲ್, ಗಾರ್ಡ್ಸ್‌ಗಳಲ್ಲಿದ್ದು ರಿಟೈರಾಗಿದ್ದ. ಸ್ಟೆಪಾನ್‌ಗೆ ಹನ್ನೆರಡು ವರ್ಷವಾಗಿದ್ದಾಗ ತೀರಿಹೋಗಿದ್ದ. ಸ್ಟೆಪಾನ್‌ನ ತಾಯಿಗೆ ಮಗನನ್ನು ಮನೆಯಿಂದ ದೂರ ಕಳಿಸಲು ಇಷ್ಟವಿರಲಿಲ್ಲ. ಆದರೆ ತನ್ನ ಸಾವಿನ ನಂತರ ಮಗನನ್ನು ಮನೆಯಲ್ಲಿಟ್ಟುಕೊಳ್ಳಬಾರದೆಂದೂ ಮಿಲಿಟರಿ ಕಾಲೇಜಿಗೆ ಸೇರಿಸಬೇಕೆಂದೂ ಗಂಡ ವಿಲ್ ಬರೆದಿಟ್ಟಿದ್ದ. ಮಗನನ್ನು ಮಿಲಿಟರಿ ಕಾಲೇಜಿಗೆ ಸೇರಿಸಿದಳು. ಅವನು ರಜೆಯಲ್ಲಿ ಮನೆಗೇ ಬಂದು ಇರುವಂತಾಗಲಿ, ತಾನೂ ಮಗನ ಹತ್ತಿರವೇ ಇದ್ದಂತಾಗಲಿ ಅನ್ನುವ ಆಸೆಯಿಂದ ಮಗಳು ವಾರ್ವರಾ ಜೊತೆಯಲ್ಲಿ ಸೇಂಟ್‌ ಪೀಟರ್ಸ್‌ಬರ್ಗಿಗೇ ಬಂದು ಇದ್ದುಬಿಟ್ಟಿದ್ದಳು.
ಸ್ಟೆಪಾನ್ ಜಾಣ, ಅಗಾಧವಾದ ಆತ್ಮವಿಶ್ವಾಸವಿತ್ತು. ಜನರ ನಡುವೆ ಎದ್ದುಕಾಣುತ್ತಿದ್ದ. ಓದಿನಲ್ಲಿ, ಅದರಲ್ಲೂ ಅವನಿಗೆ ಪ್ರಿಯವಾದ ಗಣಿತದಲ್ಲಿ, ಕವಾಯತು, ಕುದುರೆಸವಾರಿಗಳಲ್ಲಿ ಎಲ್ಲರಿಗಿಂತ ಮುಂದಿದ್ದ. ಎತ್ತರವಾಗಿದ್ದ, ನೋಡುವುದಕ್ಕೆ ಚೆನ್ನಾಗಿದ್ದ, ಚುರುಕಾಗಿದ್ದ. ಮುಂಗೋಪದ ಗುಣ ಒಂದಿಲ್ಲದಿದ್ದರೆ ಮಾದರಿ ಕೆಡೆಟ್ ಆಗಿರುತ್ತಿದ್ದ. ಕುಡಿತವಾಗಲೀ, ಹೆಣ್ಣಿನ ಚಟವಾಗಲೀ ಇರಲಿಲ್ಲ. ಆಶ್ಚರ್ಯವಾಗುವಷ್ಟು ಸತ್ಯವಂತನಾಗಿದ್ದ. ಕೋಪ ಬಂದಾಗ ಮಾತ್ರ ಮೈಮೇಲಿನ ಎಚ್ಚರವನ್ನು ಕಳೆದುಕೊಂಡು ಕಾಡು ಮೃಗದಂತಾಗಿಬಿಡುತ್ತಿದ್ದ. ಅವನು ಸಂಗ್ರಹಿಸಿದ್ದ ಅಪರೂಪದ ಶಿಲೆಗಳ ಬಗ್ಗೆ ತಮಾಷೆ ಮಾಡಿದ ಕೆಡೆಟ್‌ ಒಬ್ಬನನ್ನು ಒಮ್ಮೆ ಕಿಟಕಿಯಿಂದಾಚೆಗೆ ಎಸೆದುಬಿಡುವುದರಲ್ಲಿದ್ದ. ಇನ್ನೊಮ್ಮೆ ದೊಡ್ಡ ಅನಾಹುತವೇ ಆಗುವುದರಲ್ಲಿತ್ತು. ಸ್ಟೀವರ್ಡ್‌ನಾಗಿದ್ದ ಅಫೀಸರು ಸುಳ್ಳು ಹೇಳಿದನೆಂದು, ಕಟ್ಲೆಟ್ಟುಗಳು ತುಂಬಿದ್ದ ತಟ್ಟೆಯನ್ನೇ ಅವನ ಮುಖದ ಮೇಲೆ ಎಸೆದು, ಮೇಲೆಬಿದ್ದು, ಕೆಲವರು ಹೇಳುವಂತೆ, ಹೊಡೆದೂಬಿಟ್ಟಿದ್ದ. ಕಾಲೇಜಿನ ಡೈರೆಕ್ಟರು ಸ್ಟೀವರ್ಡ್‌ನನ್ನು ಕೆಲಸದಿಂದ ತೆಗೆದು ವಿಷಯವನ್ನು ಮುಚ್ಚಿಹಾಕಿಬಿಟ್ಟ. ಇಲ್ಲದಿದ್ದರೆ ಸ್ಟೆಪಾನ್ ಹಿಂಬಡ್ತಿ ಪಡೆದು ಸಾಮಾನ್ಯ ಪೇದೆಯಾಗಬೇಕಾಗಿತ್ತು.
ಹದಿನೆಂಟು ತುಂಬುವವೇಳಗೆ ಕಾಲೇಜು ಮುಗಿಸಿದ. ಗಾರ್ಡ್ಸ್‌ಗಳ ಅರಿಸ್ಟೊಕ್ರಾಟಿಕ್ ರೆಜಿಮೆಂಟಿನಲ್ಲಿ ಕಮೀಶನ್ಡ್ ಅಧಿಕಾರಿಯಾದ. ಕಾಲೇಜಿನಲ್ಲಿದ್ದಾಗಲೇ ಅವನು ಚಕ್ರವರ್ತಿ ನಿಕೊಲಾಸ್ ಪಾವ್ಲೊವಿಚ್‌ನ ಕಣ್ಣಿಗೆ ಬಿದ್ದಿದ್ದ. ರೆಜಿಮೆಂಟಿಗೆ ಅಧಿಕಾರಿಯಾಗಿ ಸೇರಿದಮೇಲೂ ಚಕ್ರವರ್ತಿಯು ಸ್ಟೆಪಾನ್‌ನನ್ನು ವಿಶೇಷವಾಗಿ ಗಮನಿಸುತ್ತಿದ್ದ. ಆ ಕಾರಣದಿಂದಲೇ ಸ್ಟೆಪಾನ್ ಶೀಘ್ರದಲ್ಲೇ ಚಕ್ರವರ್ತಿಯ ಏಡ್-ಡಿ-ಕ್ಯಾಂಪ್ ಆಗುತ್ತಾನೆಂದು ಎಲ್ಲರೂ ನಿರೀಕ್ಷಿಸಿದ್ದರು. ಸ್ವತಃ ಸ್ಟೆಪಾನ್‌ಗೂ ಅಂಥ ಆಸೆ ಇತ್ತು. ಕೇವಲ ಉದ್ಯೋಗದಲ್ಲಿ ಮೇಲೆ ಬರಬೇಕೆನ್ನುವ ಆಕಾಂಕ್ಷೆಮಾತ್ರವಲ್ಲ, ಚಕ್ರವರ್ತಿ ನಿಕೊಲಾಸನ ಮೇಲೆ ತೀವ್ರವಾದ ಭಕ್ತಿ, ಅಭಿಮಾನಗಳೂ ಇದ್ದವು. ಚಕ್ರವರ್ತಿಯು ಆಗಾಗ ಮಿಲಿಟರಿ ಕಾಲೇಜಿಗೆ ಬರುತ್ತಿದ್ದ. ಮಿಲಿಟರಿ ಯೂನಿಫಾರಂ ತೊಟ್ಟು, ಚುರುಕು ನಡಿಗೆಯಲ್ಲಿ ಬರುವ, ಎತ್ತರ ನಿಲುವಿನ, ಉಬ್ಬಿದೆದೆಯ, ಚಿಕ್ಕ ಸೈಡ್‌ಬರ್ನುಗಳ, ಬಾಗಿದ ಮೂಗಿನ, ದಟ್ಟ ಮೀಸೆಯ ಚಕ್ರವರ್ತಿಯನ್ನು ಕಂಡಾಗಲೆಲ್ಲ, ಅವನು ತುಂಬು ದನಿಯಲ್ಲಿ ಸೈನಿಕ ವಿದ್ಯಾರ್ಥಿಗಳನ್ನು ಮಾತನಾಡಿಸುವುದನ್ನು ಕೇಳಿದಾಗಲೆಲ್ಲ ಸ್ಟೆಪಾನ್ ಪರವಶನಾಗಿಬಿಡುತ್ತಿದ್ದ. ಅಂಥದೇ ಪರವಶತೆಯನ್ನು ಆತ ಮತ್ತೆ ಅನುಭವಿಸಿದ್ದು ಮುಂದೆ ತನ್ನ ಪ್ರೇಯಸಿಯನ್ನು ಕಂಡಾಗ. ನಿಜ ಹೇಳಬೇಕೆಂದರೆ ಚಕ್ರವರ್ತಿಯ ಬಗ್ಗೆ ಅವನಿಗಿದ್ದ ಭಾವದ ತೀವ್ರತೆ ಇನ್ನೂ ಹೆಚ್ಚಿನದು. ಎಲ್ಲವನ್ನೂ ತ್ಯಾಗಮಾಡಿ, ಪ್ರಾಣವನ್ನು ಬೇಕಾದರೂ ಕೊಟ್ಟು ಚಕ್ರವರ್ತಿಯ ಮೇಲೆ ಇರುವ ಭಕ್ತಿಯನ್ನು ತೋರಿಸಬೇಕು ಅನ್ನುವಂಥ ಭಾವ ಅವನಲ್ಲಿ ಮೂಡುತ್ತಿತ್ತು. ಚಕ್ರವರ್ತಿ ನಿಕೋಲಸನಿಗೂ ಅವನ ಪರವಶತೆಯ ಅರಿವು ಇತ್ತು. ಉದ್ದೇಶಪೂರ್ವಕವಾಗಿಯೇ ಅಂಥ ಭಾವ ಮತ್ತಷ್ಟು ಉದ್ದೀಪನಗೊಳ್ಳುವ ಹಾಗೆ ನಡೆದುಕೊಳ್ಳುತ್ತಿದ್ದ. ಕೆಡೆಟ್ಟುಗಳೆಲ್ಲ ತನ್ನ ಸುತ್ತ ಗುಂಪುಕೂಡಲು ಅವಕಾಶಮಾಡಿಕೊಟ್ಟು ಒಮ್ಮೊಮ್ಮೆ ಮಕ್ಕಳಷ್ಟು ಸರಳವಾಗಿ ಅವರೊಡನೆ ಬೆರೆಯುತ್ತಾ, ಒಮ್ಮೊಮ್ಮೆ ಗೆಳೆಯನಹಾಗೆ ವರ್ತಿಸುತ್ತಾ, ಆಗಾಗ ರಾಜಗಾಂಭೀರ್ಯವನ್ನೂ ತೋರುತ್ತಿದ್ದ. ಸ್ಟೀವರ್ಡನ ಮೇಲೆ ತಟ್ಟೆ ಎಸೆದ ಘಟನೆ ನಡೆದ ನಂತರ ಚಕ್ರವರ್ತಿ ನಿಕೊಲಾಸ್ ಏನೂ ಹೇಳಿರಲಿಲ್ಲ. ಆದರೆ ಸ್ಟೆಪಾನ್ ಅವನ ಬಳಿಗೆ ಬಂದಾಗ ನಾಟಕೀಯವಾಗಿ ಕೈಬೀಸುತ್ತಾ ಅವನು ಹೋಗಬಹುದು ಎಂದು ಸೂಚಿಸಿದ. ಹೊರಟಾಗ, ಹುಬ್ಬು ಗಂಟಿಕ್ಕಿಕೊಂಡು, ಹುಷಾರು ಎಂಬಂತೆ ತೋರುಬೆರಳು ಆಡಿಸುತ್ತಾ ‘ನಡೆಯುವುದೆಲ್ಲ ನನಗೆ ಗೊತ್ತಾಗುತ್ತದೆ, ಕೆಲವು ಸಂಗತಿಗಳು ನನ್ನವರೆಗೆ ಬರದಿದಿದ್ದರೆ ಒಳ್ಳಯದು, ನನಗೆ ತಿಳಿದ ಸಂಗತಿಗಳೆಲ್ಲ ಇಲ್ಲಿ ಇರುತ್ತವೆ’ ಎಂದೆನ್ನುತ್ತಾ ಎದೆಯಮೇಲೆ ಕೈ ಇಟ್ಟುಕೊಂಡಿದ್ದ.
ಕೆಡೆಟ್ಟುಗಳು ಕಾಲೇಜು ಬಿಡುವ ದಿನ ಬಂದಿತು. ಚಕ್ರವರ್ತಿಯ ಎದುರಿಗೆ ಹಾಜರಾದರು. ಆಗ ಅವನು ಸ್ಟೆಪಾನನ ಅಪರಾಧ ಕುರಿತು ಮತ್ತೇನೂ ಹೇಳದೆ ಎಲ್ಲರನ್ನೂ ಉದ್ದೇಶಿಸಿ "ನೀವೆಲ್ಲರೂ ನಿಷ್ಠೆಯಿಂದ ಚಕ್ರವರ್ತಿಯ, ಮಾತೃಭೂಮಿಯ ಸೇವೆ ಮಾಡಬೇಕು, ನಾನು ಯಾವಾಗಲೂ ನಿಮ್ಮ ಆತ್ಮೀಯ ಗೆಳೆಯನಾಗಿರುತ್ತೇನೆ, ನಿಮಗೆ ಏನಾದರೂ ಅಗತ್ಯವಿದ್ದರೆ ನೇರವಾಗಿ ನನ್ನನ್ನು ಬಂದು ಕಾಣಬಹುದು" ಎಂದು, ಎಲ್ಲ ಸೈನಿಕ ವಿದ್ಯಾರ್ಥಿಗಳಿಗೂ ಹೇಳುವಂತೆಯೇ, ಹೇಳಿದ. ಆ ಮಾತುಗಳನ್ನು ಕೇಳಿ ಕೆಡೆಟ್ಟುಗಳ ಮನಸ್ಸು ಕರಗಿತು. ತಾನು ಮಾಡಿದ ಕೆಲಸವನ್ನು ನೆನೆಸಿಕೊಂಡು ಸ್ಟೆಪಾನನ ಕಣ್ಣು ತುಂಬಿಬಂದವು. "ಚಕ್ರವರ್ತಿಗಾಗಿ ಬದುಕನ್ನೇ ಮೀಸಲಾಗಿಡುತ್ತೇನೆ" ಎಂದು ಮನಸ್ಸಿನಲ್ಲೇ ಆಣೆ ಇಟ್ಟುಕೊಂಡ.
ಸ್ಟೆಪಾನ್ ಕಮಿಶನ್ಡ್ ಅಧಿಕಾರಿಯಾದ. ಅವನ ತಾಯಿ ಮತ್ತು ಅಕ್ಕ ಮೊದಲು ಮಾಸ್ಕೋಗೆ ಹೋದರು. ಅಲ್ಲಿಂದ ತಮ್ಮ ಊರಿನ ಎಸ್ಟೇಟಿಗೆ ತೆರಳಿದರು. ಸ್ಟೆಪಾನ್ ತನ್ನ ಆಸ್ತಿಯಲ್ಲಿ ಅರ್ಧ ಪಾಲನ್ನು ಅಕ್ಕನ ಹೆಸರಿಗೆ ಬರೆದುಕೊಟ್ಟ. ಉಳಿದ ಅರ್ಧದ ಆದಾಯ ಅವನ ಖರ್ಚುವೆಚ್ಚಗಳಿಗೆ ಸರಿಹೋಗುತ್ತಿತ್ತು. ಅವನಿದ್ದದ್ದದ್ದು ಶ್ರೀಮಂತ ಅಧಿಕಾರಿಗಳೇ ಇದ್ದ ಪ್ರತಿಷ್ಠಿತ ರೆಜಿಮೆಂಟು.
ಮೇಲು ನೋಟಕ್ಕೆ ಸ್ಟೆಪಾನ್ ಪ್ರತಿಭಾವಂತನಾದ, ಕೆರಿಯರ್ ರೂಪಿಸಿಕೊಳ್ಳುತ್ತಿರುವ ಸಾಮಾನ್ಯ ಅಧಿಕಾರಿಯಂತೆ ಕಾಣುತ್ತಿದ್ದ. ಆದರೆ ಅವನ ಮನಸ್ಸಿನೊಳಗೆ ಜಟಿಲವಾದ ಹೋರಾಟಗಳು ಸತತವಾಗಿ ನಡೆಯುತ್ತಿದ್ದವು. ತೀರ ಚಿಕ್ಕಂದಿನಿಂದಲೂ ಈ ಹೋರಾಟಗಳು ಅವನೊಳಗೆ ನಡದೇ ಇದ್ದವು. ಅವನ ಮನಸ್ಸು ಬಗೆಬಗೆಯಾಗಿ ಏಗುತ್ತಿದ್ದರೂ ಗುರಿ ಮಾತ್ರ ಒಂದೇ ಆಗಿತ್ತು. ನಾನು ಏನೇ ಮಾಡಿದರೂ ಅದರಲ್ಲಿ ಗೆಲ್ಲಬೇಕು, ಪರಿಪೂರ್ಣತೆ ಸಾಧಿಸಬೇಕು, ನೋಡುವವರಿಗೆ ಆಶ್ಚರ್ಯವಾಗಿ ಹೊಗಳುವಂತಿರಬೇಕು ಅನ್ನುವುದು ಅವನ ಗುರಿಯಾಗಿತ್ತು. ಓದಿನ ವಿಷಯಕ್ಕೆ ಬಂದರೆ ಸದಾ ಪುಸ್ತಕಗಳಲ್ಲಿಯೇ ಮುಳುಗಿ ತರಗತಿಗೆ ಮೊದಲನೆಯವನಾಗಿ, ಮಾದರಿ ವಿದ್ಯಾರ್ಥಿ ಎಂದರೆ ಇವನೇ ಎಂದು ಎಲ್ಲರೂ ಹೊಗಳುವವರೆಗೆ ಅವನಿಗೆ ಸಮಾಧಾನವಿರುತ್ತಿರಲಿಲ್ಲ. ಒಂದು ವಿಷಯ ಕರಗತವಾದಮೇಲೆ ಇನ್ನೊಂದರತ್ತ ತಿರುಗುತ್ತಿದ್ದ. ಕಾಲೇಜಿನಲ್ಲಿ ಫ್ರೆಂಚ್ ಭಾಷೆಯಲ್ಲಿ ಮಾತನಾಡುವಾಗ ಮುಜುಗರ ಅನುಭವಿಸಿ, ಹಠ ತೊಟ್ಟು ಫ್ರೆಂಚನ್ನೂ ರಶಿಯನ್‌ನ ಹಾಗೆಯೇ ಸರಾಗವಾಗಿ ಮಾತಾಡುವುದಕ್ಕೆ ಕಲಿತಿದ್ದ. ಆಮೇಲೆ ಚೆಸ್ ಬಗ್ಗೆ ಆಕರ್ಷಣೆ ಹುಟ್ಟಿ ಅದರಲ್ಲಿ ಪರಿಣತನಾಗಿದ್ದ.
ಚಕ್ರವರ್ತಿಯ ಮತ್ತು ಮಾತೃಭೂಮಿಯ ಸೇವೆಯೇ ಪ್ರಧಾನ ಗುರಿ ಎಂದುಕೊಂಡಿದ್ದರೂ ಸ್ಟೆಪಾನ್‌ನ ಕಣ್ಣೆದುರಿನಲ್ಲಿ ಯಾವಾಗಲೂ ಒಂದಲ್ಲ ಒಂದು ನಿರ್ದಿಷ್ಟ ಗುರಿ ಇದ್ದೇ ಇರುತ್ತಿತ್ತು. ಆ ಗುರಿ ಎಷ್ಟೇ ಕ್ಷುಲ್ಲಕವಾದ್ದದಾದರೂ ಬದುಕಿನ ಪರಮೋದ್ದೇಶ ಅದೇ ಎಂಬಂತೆ ಆ ಗುರಿಯ ಸಾಧನೆಯಲ್ಲಿ ಸಂಪೂರ್ಣವಾಗಿ ತೊಡಗಿಕೊಳ್ಳುತ್ತಿದ್ದ. ಒಂದು ಗುರಿಯನ್ನು ತಲುಪಿದ ಕೂಡಲೇ ಮತ್ತೊಂದು ಗುರಿ ಅವನ ಹುಟ್ಟಿಕೊಳ್ಳುತ್ತಿತ್ತು. ವಿಶೇಷವಾದ ಮನ್ನಣೆಯನ್ನು ಪಡೆಯಬೇಕು, ಹಾಗೆ ಮನ್ನಣೆಯನ್ನು ಪಡೆಯಲು ಏನಾದರೂ ಸಾಧಿಸಬೇಕು ಅನ್ನುವುದೇ ಅವನ ಬಾಳಿನ ತಿರುಳಾಗಿಬಿಟ್ಟಿತ್ತು. ಕಮೀಶನ್ಡ್ ಅಧಿಕಾರಿಯಾದಮೇಲೆ ತನ್ನ ಸರ್ವಿಸ್ಸಿಗೆ ಸಂಬಂಧಿಸಿದಂತೆ ಪರಿಪೂರ್ಣ ಜ್ಞಾನವನ್ನು ಹೊಂದಲು ತೀರ್ಮಾನಿಸಿ ಬಲು ಬೇಗನೆ ಮಾದರಿ ಅಧಿಕಾರಿಯೆಂದು ಹೆಸರು ಪಡೆದ. ಆದರೂ ಹತೋಟಿಯಿಲ್ಲದ ಅವನ ಕೋಪ ಹಾಗೇ ಉಳಿದಿತ್ತು. ಸ್ವಭಾವತಃ ದುಷ್ಟವಾದ, ಮತ್ತೆ ಅವನ ಬಡ್ತಿಗೂ ಅಡ್ಡಿಯಾಗುವಂಥ ಒಂದೆರಡು ಕೆಲಸಗಳನ್ನು ಮಾಡಿದ್ದ. ಆಮೇಲೆ ತನಗಿರುವ ಶೈಕ್ಷಣಿಕ ಹಿನ್ನಲೆ ಸಾಲದು ಅನ್ನಿಸಿ ಪಟ್ಟು ಹಿಡಿದು ಓದಿ ಓದಿ ಜ್ಞಾನವೃದ್ಧಿಯ ಗುರಿ ಸಾಧಿಸಿದ್ದ. ಹೈ ಸೊಸೈಟಿಯಲ್ಲಿ ಎದ್ದು ಕಾಣಬೇಕೆಂಬ ಹಂಬಲ ಹುಟ್ಟಿ ಬಾಲ್‌ರೂಮ್ ಡಾನ್ಸಿನಲ್ಲಿ ಪರಿಣತನಾಗಿದ್ದ. ಬಲು ಬೇಗನೆ ಹೈ ಸೊಸೈಟಿಯ ಬಾಲ್‌ರೂಮುಗಳಿಗೆ, ಆಹ್ವಾನಿತರಿಗೆ ಮಾತ್ರ ಅನ್ನುವಂಥ ಕೆಲವು ಪರಿಮಿತ ಪಾರ್ಟಿಗಳಿಗೂ ಕರೆ ಬರತೊಡಗಿತು. ಆದರೆ ಮನಸ್ಸಿಗೆ ಸಮಾಧಾನವಿರಲಿಲ್ಲ. ಯಾವಾಗಲೂ ಮೊದಲಿಗನಾಗಿರಬೇಕೆಂಬುದು ಅವನ ಆಸೆ. ಸೊಸೈಟಿಯಲ್ಲಿ ಅವನಿಗೆ ಪ್ರಥಮ ಮನ್ನಣೆ ಇನ್ನೂ ಸಿಕ್ಕಿರಲಿಲ್ಲ.
ಆಗಿನ ಕಾಲದ ಉನ್ನತ ಸಮಾಜದಲ್ಲಿ, ಎಲ್ಲ ಕಾಲದ ಉನ್ನತ ಸಮಾಜಗಳಲ್ಲಿರುವಂತೆಯೇ, ನಾಲ್ಕು ಬಗೆಯ ಜನವರ್ಗವಿತ್ತೆಂದು ನನ್ನ ಭಾವನೆ--ಆಸ್ಥಾನಕ್ಕೆ ಪ್ರವೇಶವಿದ್ದ ಶ್ರೀಮಂತರ ವರ್ಗ, ಶ್ರೀಮಂತರಲ್ಲದಿದ್ದರೂ ಆಸ್ಥಾನಿಕರ ಕುಟುಂಬಗಳ ವಾತಾವರಣದಲ್ಲಿ ಬೆಳೆದು ಶಿಕ್ಷಿತರಾದವರ ವರ್ಗ, ಆಸ್ಥಾನಕ್ಕೆ ಸಂಬಂಧಪಟ್ಟ ಕುಟುಂಬಗಳಿಗೆ ಒಪ್ಪುವಂತೆ ಇರಲು ಬಯಸುವ ಶ್ರೀಮಂತರ ವರ್ಗ, ಶ್ರೀಮಂತರೂ ಅಲ್ಲದ, ಆಸ್ಥಾನಿಕರೂ ಅಲ್ಲದ ಆದರೆ ಅವರಿಬ್ಬರಿಗೂ ಪ್ರಿಯವಾಗಲು ಬಯಸುವವರ ವರ್ಗ. ಸ್ಟೆಪಾನ್ ಮೊದಲ ವರ್ಗಕ್ಕೆ ಸೇರಿದವನಲ್ಲ, ಆದರೆ ಕೊನೆಯ ಎರಡು ವರ್ಗಗಳ ಜನರ ಆಹ್ವಾನ, ಆದರಗಳಿಗೆ ಪಾತ್ರನಾಗಿದ್ದ. ಹೈಸೊಸೈಟಿಗೆ ಕಾಲಿಡುವಾಗಲೇ ತಾನು ಯಾರಾದರೊಬ್ಬ ಉನ್ನತ ವರ್ಗದ ಮಹಿಳೆಯೊಡನೆ ಸಂಬಂಧ ಬೆಳೆಸಿಕೊಳ್ಳಬೇಕು ಎಂಬ ಗುರಿಯನ್ನು ಇಟ್ಟುಕೊಂಡಿದ್ದ. ಆ ಗುರಿ ಅವನಿಗೇ ಆಶ್ಚರ್ಯವಾಗುವಷ್ಟು ಬೇಗ ನೆರವೇರಿತು. ಆದರೂ ಅವನಿದ್ದದ್ದು ಉನ್ನತ ವರ್ಗದ ಕೆಳ ಹಂತದಲ್ಲಿ, ಅತಿ ಉನ್ನತ ವರ್ಗದ ಜನರ ನಡುವೆ ಆತ ಆಗಾಗ ಬೆರೆಯುತ್ತಿದ್ದ. ಅವನನ್ನು ಅವರೆಲ್ಲ ಸೌಜನ್ಯದಿಂದಲೇ ಕಾಣುತ್ತಿದ್ದರು. ಅವರ ವರ್ತನೆ ಸೂಕ್ಷ್ಮ ನೋದಿದರೆ ನಾನು ಅವರಲ್ಲಿ ಒಬ್ಬನಲ್ಲ, ಹೊರಗಿನವನು ಅನ್ನಿಸುತ್ತಿತ್ತು ಸ್ಟೆಪಾನ್‌ಗೆ. ಆ ಅತಿ ವಿರಳ ಸ್ತರಕ್ಕೆ ಸೇರಿದನಾಗಲು ಬಯಸಿದ. ಆ ಗುರಿಯನ್ನು ಈಡೇರಿಸಿಕೊಳ್ಳುವುದಕ್ಕೆ ಚಕ್ರವರ್ತಿಯ ಏಡ್-ಡಿ-ಕ್ಯಾಂಪ್ ಆಗಬೇಕಿತ್ತು--ಹೇಗಿದ್ದರೂ ಇಷ್ಟರಲ್ಲೆ ಆಗುವವನಿದ್ದ, ಅಥವಾ ಆ ವಿರಳ ಗುಂಪಿನ ಯಾರನ್ನಾದರೂ ಮದುವೆಯಾಗಬೇಕಿತ್ತು. ಹಾಗೆ ಮದುವೆಯಾಗುವುದೇ ಸರಿ ಎಂದು ನಿರ್ಧರ ಮಾಡಿದ. ಅದಕ್ಕಾಗಿ ಆಸ್ಥಾನಕ್ಕೆ ಸೇರಿದ ಚೆಲುವೆಯಾದ ಒಬ್ಬ ಹುಡುಗಿಯನ್ನು ಆಯ್ದುಕೊಂಡ. ಅವಳ ಹೆಸರು, ಕೌಂಟೆಸ್ ಮೇರಿ ಕೊರತ್ಕೊವಾ. ಸ್ಟೆಪಾನ್ಸ್‌ಕಿ ಸೇರಲು ಬಯಸಿದ್ದ ಅತ್ಯುನ್ನತವರ್ಗಕ್ಕೆ ಸೇರಿದವಳು. ಉನ್ನತ ವರ್ಗದ ಅನೇಕರು ಅವಳ ಕೈ ಹಿಡಿಯಲು ಹಾತೊರೆಯುತ್ತಿದ್ದರು. ಕೇವಲ ಕೆರಿಯರ್‌ ಬೆಳೆಸಿಕೊಳ್ಳುವುದು ಮಾತ್ರ ಸ್ಟೆಪಾನ್‌ನ ಉದ್ದೇಶವಾಗಿರಲಿಲ್ಲ. ಆಕೆಯ ಚೆಲುವು, ಆಕರ್ಷಣೆಗಳು, ಅಗಾಧವಾಗಿದ್ದವು. ಅವಳ ಬಗ್ಗೆ ಪ್ರೀತಿ ಹುಟ್ಟಿತ್ತು. ಮೊದಮೊದಲು ಆಕೆ ಅವನ ಬಗ್ಗೆ ಅಂಥ ಆಸಕ್ತಿಯನ್ನೇನೂ ತೋರಿಸಲಿಲ್ಲ. ಆದರೆ ಇದ್ದಕ್ಕಿದ್ದ ಹಾಗೆ ಬದಲಾಗಿಬಿಟ್ಟಳು. ಅವಳ ಮನಸ್ಸು ಮೃದುವಾಯಿತು. ಆಕೆಯ ತಾಯಿ ಕೂಡ ಸ್ಟೆಪಾನ್ ಮನೆಗೆ ಬರಬೇಕೆಂದು ಒತ್ತಾಯಮಾಡಿ ಕರೆಯತೊಡಗಿದಳು.
ಸ್ಟೆಪಾನ್ ಮದುವೆಯ ಪ್ರಸ್ತಾಪವನ್ನು ಮುಂದಿಟ್ಟ, ಒಪ್ಪಿಗೆಯೂ ಸಿಕ್ಕಿಬಿಟ್ಟಿತು. ಇಷ್ಟು ಸರಾಗವಾಗಿ ಮದುವೆಯ ನಿಶ್ಚಯವಾಗಿದ್ದು ಕಂಡು ಅವನಿಗೇ ಆಶ್ಚರ್ಯವಾಗಿತ್ತು. ತಾಯಿ, ಮಗಳ ವರ್ತನೆಯಲ್ಲಿ ಏನೋ ಅಸಹಜವಾದ್ದು ಇದೆ, ವಿಚಿತ್ರವಾದ್ದು ಇದೆ ಅನ್ನಿಸಿತು. ಆದರೆ ಸ್ಟೆಪಾನ್‌ ಪ್ರೀತಿಯಲ್ಲಿ ಮುಳುಗಿಬಿಟ್ಟಿದ್ದ, ಕುರುಡನಾಗಿದ್ದ. ಇಡೀ ಊರಿಗೆ ಗೊತ್ತಿದ್ದ ಸಂಗತಿ ಅವನ ಮನಸ್ಸಿಗೆ ಬರಲೇ ಇಲ್ಲ. ಅವನು ಮದುವೆಯಾಗಲಿದ್ದ ಹೆಣ್ಣು ಕಳೆದ ವರ್ಷವಷ್ಟೆ ಚಕ್ರವರ್ತಿ ನಿಕಾಲಸ್‌ನ ಪ್ರೇಯಸಿಯಾಗಿದ್ದಳು.
(ಮುಂದುವರೆಯುವುದು)

Rating
No votes yet