ಫಾದರ್ ಸೆರ್ಗಿಯಸ್ ಅಧ್ಯಾಯ ಎರಡು

ಫಾದರ್ ಸೆರ್ಗಿಯಸ್ ಅಧ್ಯಾಯ ಎರಡು

ಎರಡು
ಮದುವೆಗೆ ಹದಿನೈದು ದಿನ ಮುಂಚೆ ಸ್ಟೆಪಾನ್, ತ್ಸಾರ್ಸಕೊ ಸೆಲೊ ಎಂಬ ಊರಲ್ಲಿದ್ದ, ಹೆಣ್ಣಿನ ಮನೆಗೆ ಹೋಗಿದ್ದ. ಮೇ ತಿಂಗಳು. ಬಿಸಿಲು, ಶಖೆ. ಇಬ್ಬರೂ ತೋಟದಲ್ಲೆಲ್ಲಾ ಅಡ್ಡಾಡಿಕೊಂಡು ಬಂದು ದಟ್ಟ ಮರಗಳ ನೆರಳಿನಲ್ಲಿದ್ದ ಬೆಂಚಿನ ಮೇಲೆ ಕೂತಿದ್ದರು. ಕೌಂಟೆಸ್ ಮೇರಿ ಅವತ್ತು ಅಚ್ಚ ಬಿಳಿಯ ಇಂಡಿಯಾ ಮಸ್ಲಿನ್ ಬಟ್ಟೆ ತೊಟ್ಟಿದ್ದಳು. ಈಗ ತಲೆ ಬಗ್ಗಿಸಿಕೊಂಡು, ಆಗ ಒಂದಿಷ್ಟೇ ತಲೆ ಎತ್ತಿ, ಎಲ್ಲಿ ಯಾವ ಮಾತಿನಿಂದ ತನ್ನ ಯಾವ ಭಂಗಿಯಿಂದ ಅವಳ ಮೃದುಮನಸ್ಸಿಗೆ ನೋವಾಗುವುದೋ ದೇವತೆಯಂಥ ಅವಳ ಪರಿಶುದ್ಧತೆ ಮುಕ್ಕಾಗುವುದೋ ಎಂದು ತೀರ ಮೃದುವಾಗಿ, ತೀರ ಪ್ರೀತಿಯಿಂದ ಮಾತಾಡುತ್ತಿದ್ದ ಆಳೆತ್ತರದ ಸುಂದರ ಯುವಕನತ್ತ ಕುಡಿನೋಟ ಬೀರುತ್ತಾ ಮುಗ್ಧತೆ, ಪ್ರೀತಿಗಳ ಪ್ರತಿ ರೂಪದಂತೆ ಕಾಣುತ್ತಿದ್ದಳು.
ಸ್ಟೆಪಾನ್ ಸಾವಿರದ ಎಂಟುನೂರ ನಲವತ್ತರ ದಶಕದ ಯುವಕ. ಈಗ ಅಂಥವರು ಕಾಣುವುದೇ ಇಲ್ಲ. ಆ ಕಾಲದ ಯುವಕರು ಕಾಮದ ವಿಷಯದಲ್ಲಿ ತಮ್ಮ ಅಶುದ್ಧತೆಯನ್ನು ಒಪ್ಪಿಕೊಂಡರೂ ಅದರಲ್ಲೇನೂ ತಪ್ಪಿಲ್ಲವೆಂದೂ ಆದರೆ ತಾವು ಮದುವೆಯಾಗುವ ಹುಡುಗಿ ಮಾತ್ರ ದೈವಿಕವೆಂಬಷ್ಟು ಶುದ್ಧವಾಗಿ, ಆದರ್ಶ ಕನ್ಯೆಯಾಗಿ ಇರಬೇಕೆಂದೂ ಬಯಸುತ್ತಿದ್ದರು. ತಮ್ಮ ಸಾಮಾಜಿಕ ವರ್ಗಕ್ಕೆ ಸೇರಿದ ಅವಿವಾಹಿತ ಹುಡುಗಿಯರನ್ನು ಅಚ್ಚಕನ್ನೆಯರೆಂದೇ ಭಾವಿಸುತ್ತಿದ್ದರು. ಅದು ಸುಳ್ಳು ದೃಷ್ಟಿಕೋನವಾಗಿದ್ದರೂ, ಗಂಡಸರ ಸ್ವಚ್ಛಂದತೆ ಹಾನಿಕರವಾಗಿದ್ದರೂ ಹೆಂಗಸರ ಬಗ್ಗೆ ಇದ್ದ ಆ ಹಳೆಯ ದೃಷ್ಟಿ ಈಗಿನ ಯುವಕರು ಪ್ರತಿ ಹೆಣ್ಣೂ ಸಂಭೋಗವನ್ನು ಬಯಸುವ ಪ್ರಾಣಿ ಎಂದು ತಿಳಿದಿರುವುದಕ್ಕಿಂತ ಮೌಲಿಕವಾದದ್ದು ಎಂದೇ ತೋರುತ್ತದೆ. ಗಂಡಸರು ತಮ್ಮನ್ನು ಅರಾಧಿಸುತ್ತಾರೆಂದು ಗೊತ್ತಿದ್ದ ಹೆಂಗಸರು ಬಲುಮಟ್ಟಿಗೆ ದೇವತೆಯರಂತೆಯೇ ಇರುವುದಕ್ಕೆ ಪ್ರಯತ್ನಿಸುತ್ತಿದ್ದರು.

ಸ್ಟೆಪಾನ್ ಕೂಡ ತಾನು ಮದುವೆಯಾಗಲಿರುವ ಹೆಣ್ಣನ್ನೂ ಅಚ್ಚಕನ್ಯೆಯೆಂದೇ ಭಾವಿಸಿದ್ದ. ಅಂದು ಅವನ ಮನಸ್ಸಿನಲ್ಲಿ ವಿಶೇಷವಾಗಿ ಪ್ರೀತಿ ತುಂಬಿ ಬಂದಿತ್ತು. ಆದರೆ ಆ ಪ್ರೀತಿಯಲ್ಲಿ ದೇಹ ಸುಖದ ಬಯಕೆ ಇರಲಿಲ್ಲ. ತನ್ನ ಕೈಗೆ ಸಿಗಲಾರದ ದೇವಿಯೊಬ್ಬಳ ಬಗ್ಗೆ ಇರುವಂಥ ಆರಾಧನೆಯ ಭಾವವಿತ್ತು.
ಅವಳೆದುರು ನೆಟ್ಟಗೆ ಎದ್ದು ನಿಂತು, ನೆಲಕ್ಕೆ ತನ್ನ ಕತ್ತಿಯನ್ನು ಊರಿ, ಅದರ ಮೇಲೆ ಎರಡೂ ಕೈ ಇಟ್ಟುಕೊಂಡು ಹೇಳಿದ:
‘ಬದುಕಿನಲ್ಲಿ ಎಂಥ ಸುಖ ಇದೆಯೆಂದು ಇವತ್ತು ನನಗೆ ತಿಳಿಯಿತು! ಅದಕ್ಕೆ ನೀನು...ನೀವು ಕಾರಣ.’
ಅವನ ಮುಖದ ಮೇಲೆ ಹಿಂಜರಿಕೆಯ ಮುಗುಳುನಗುವಿತ್ತು. ಆಕೆಯನ್ನು ನೀನು ಎಂದು ಕರೆಯುವಷ್ಟು ಸಲುಗೆ ಇನ್ನೂ ಬೆಳೆದಿರಲಿಲ್ಲ. ನೈತಿಕವಾಗಿ ತನಗಿಂತ ಪರಿಶುದ್ಧಳಾದ ದೇವತೆಯಂಥ ಹೆಣ್ಣನ್ನು ನೀನು ತಾನು ಎಂದು ಮಾತನಾಡಿಸುವದಕ್ಕೆ ಹಿಂಜರಿಯುತ್ತಿದ್ದ.
‘ನಾನು ಎಂಥವನೆಂದು ನಿನ್ನಿ..ನಿಮ್ಮಿಂದ ನನಗೆ ಗೊತ್ತಾಯಿತು. ಅದಕ್ಕೆ ಥ್ಯಾಂಕ್ಸ್ ಹೇಳಬೇಕು. ನಾನು ಅಂದುಕೊಂಡದ್ದಕ್ಕಿಂತ ಒಳ್ಳೆಯವನಾಗಿದ್ದೇನೆ ಎಂದು ಈಗ ಗೊತ್ತಾಗಿದೆ.’
‘ನೀವು ತುಂಬ ಒಳ್ಳೆಯವರೆಂದು ನನಗೆ ಮೊದಲೇ ಗೊತ್ತಿತ್ತು. ಅದಕ್ಕೇ ನಿಮ್ಮನ್ನು ಲವ್ ಮಾಡಿದೆ.’
ಹತ್ತಿರದಲ್ಲೇ ಎಲ್ಲೋ ಕೋಗಿಲೆ ಕೂಗಿತು. ಒಂದಿಷ್ಟೆ ಗಾಳಿ ಬೀಸಿ ಎಲೆಗಳು ಮರ್ಮರ ಸದ್ದುಮಾಡಿದವು.
ಅವನು ಅವಳ ಮುಂಗೈ ಹಿಡಿದು ಮುತ್ತಿಟ್ಟ. ಅವನ ಕಣ್ಣು ತುಂಬಿ ಬಂದವು. ನಾನು ಲವ್ ಮಾಡುತ್ತಿದ್ದೇನೆ ಎಂದು ಹೇಳಿದ್ದಕ್ಕೆ ಥ್ಯಾಂಕ್ಸ್ ಹೇಳುತ್ತಿದ್ದಾನೆ ಎಂದು ಅವಳಿಗೆ ತಿಳಿಯಿತು. ಅವನು ಅಲ್ಲೇ ಒಂದು ಹತ್ತು ಹೆಜ್ಜೆ ಅಡ್ಡಾಡಿದ. ಮತ್ತೆ ಅವಳ ಬಳಿಗೆ ಬಂದು ಕುಳಿತುಕೊಂಡ.
‘ನಿನ...ನಿಮಗೆ ಹೇಳಬೇಕು. ಮೊದಲು ನಾನು ಸ್ವಾರ್ಥಿಯಾಗಿದ್ದೆ. ಅದಕ್ಕೇ ನಿಮ್ಮನ್ನು ಮದುವೆಯಾಗಿ ಸಮಾಜದಲ್ಲಿ ಗಣ್ಯನಾಗಲು ಬಯಸಿದ್ದೆ. ಆದರೆ ನಿಮ್ಮ ಪರಿಚಯ ಬೆಳೆದಂತೆ ಅವೆಲ್ಲ ತೀರ ಸಾಮಾನ್ಯ ಆಸೆಗಳು ಅನ್ನಿಸಿಬಿಟ್ಟವು. ನಿಮ್ಮನ್ನು ಬಿಟ್ಟರೆ ಬೇರೆ ಏನೂ ಮುಖ್ಯವಲ್ಲ ಅನ್ನಿಸಿತು. ನನ್ನ ಮೇಲೆ ಕೋಪವಿಲ್ಲ ತಾನೇ?’
ಅವಳು ಮಾತಾಡಲಿಲ್ಲ. ಅವನ ಕೈಯ ಮೇಲೆ ಕೈ ಇಟ್ಟಳು. ಅವಳಿಗೆ ಕೋಪವಿಲ್ಲ ಎಂದು ಅರ್ಥಮಾಡಿಕೊಂಡ.
‘ನೀವು ಹೇಳಿದಿರಿ...’ ಕೊಂಚ ತಡವರಿಸಿದ. ಕೇಳಬೇಕೋ ಬೇಡವೋ ಅಂದುಕೊಳ್ಳುತ್ತಲೇ, ‘ನೀವು ಹೇಳಿದಿರಿ, ನನ್ನ ಲವ್ ಮಾಡುತ್ತೇನೆ ಅಂತ. ಆದರೂ, ಕ್ಷಮಿಸಿ,...ಇದು ಅಪನಂಬಿಕೆಯಲ್ಲ...ನೀವು ಯಾಕೋ ಡಿಸ್ಟರ್ಬ್‌ ಆಗಿದ್ದೀರಿ, ಕಳವಳ ಇದೆ ಅನ್ನಿಸುತ್ತದೆ. ಯಾಕೆ?’ ಎಂದು ಕೇಳಿದ.
‘ಹೇಳಿದರೆ ಈಗಲೇ ಹೇಳಬೇಕು’ ಅಂದುಕೊಂಡಳು. ‘ಹೇಗಿದ್ದರೂ ಗೊತ್ತಾಗುತ್ತದೆ. ಆದರೆ ಈಗ ಅವನು ನನ್ನ ಕೈ ಬಿಡುವುದಿಲ್ಲ. ದೇವರೇ! ನನ್ನನ್ನು ಬೇಡ ಅಂದುಬಿಟ್ಟರೆ ಏನು ಗತಿ!’ ಎಂದು ಯೋಚಿಸುತ್ತಾ ಆಜಾನುಬಾಹು ಸದೃಢ ಮನೋಹರ ಯುವಕನತ್ತ ಪ್ರೀತಿ ತುಂಬಿದ ನೋಟ ಬೀರಿದಳು. 'ನಿಕೊಲಾಸನು ಚಕ್ರವರ್ತಿಯಾಗಿರದಿದ್ದರೆ ಅವನನ್ನು ಕಣ್ಣೆತ್ತಿಯೂ ನೋಡುತ್ತಿರಲಿಲ್ಲ. ಆದರೆ ಈ ಯುವಕನ ಪ್ರೀತಿಯನ್ನು ಬಿಟ್ಟು ಹೇಗಿರುವುದು' ಎಂದುಕೊಂಡಳು.
"ಕೇಳಿ. ಯಾಕೆ ಡಿಸ್ಟರ್ಬ್ ಆಗಿದ್ದೇನೆ ಎಂದಿರಲ್ಲಾ? ನಿಜ ಹೇಳಿಬಿಡುತ್ತೇನೆ. ಈಗಾಗಲೇ ಒಬ್ಬರೊಡನೆ ಪ್ರೀತಿಮಾಡಿದ್ದೇನೆ."
ಅವನ ಕೈಯ ಮೇಲೆ ಮತ್ತೆ ಕೈ ಇಟ್ಟಳು. ಆ ಸ್ಪರ್ಶದಲ್ಲಿ ಯಾಚನೆ ಇತ್ತು. ಅವನು ಸುಮ್ಮನಿದ್ದ.
‘ಯಾರು ಎಂದು ಹೇಳಬೇಕೆ? ಚಕ್ರವರ್ತಿ.’
‘ಚಕ್ರವರ್ತಿಯನ್ನು ನಾವೆಲ್ಲರೂ ಪ್ರೀತಿಸುತ್ತೇವೆ. ನೀವು ಚಿಕ್ಕ ಹುಡುಗಿಯಾಗಿ ಸ್ಕೂಲಿನಲ್ಲಿದ್ದಾಗ..’
‘ಸ್ಕೂಲಿನಲ್ಲಿ ಅಲ್ಲ. ಆಮೇಲೆ. ಅವರ ಮೇಲೆ ವ್ಯಾಮೋಹ ಹುಟ್ಟಿಬಿಟ್ಟಿತ್ತು. ಆದರೆ ಈಗಿಲ್ಲ.’
‘ಅಂದರೆ?’
‘ಬರೀ ಪ್ರೀತಿಯಲ್ಲ’, ಆಕೆ ಮುಖ ಮುಚ್ಚಿಕೊಂಡಳು.
‘ಚಕ್ರಚರ್ತಿಗೆ ಒಪ್ಪಿಸಿಕೊಂಡುಬಿಟ್ಟಿರಾ?’
ಸುಮ್ಮನಿದ್ದಳು.
‘ಚಕ್ರವರ್ತಿಯ ಸೂಳೆ?’
ಸುಮ್ಮನಿದ್ದಳು.
ತಟ್ಟನೆ ಎದ್ದು ನಿಂತ. ತುಟಿಗಳು ಅದುರುತ್ತಿದ್ದವು. ಮುಖ ಹೆಣದ ಮುಖದ ಹಾಗೆ ಆಗಿತ್ತು. ಇದ್ದಕ್ಕಿದ್ದ ಹಾಗೆ ನೆವ್ಸ್ಕಿಯಲ್ಲಿ ಸಿಕ್ಕಿದ್ದಾಗ ಚಕ್ರವರ್ತಿಯು ಮದುವೆಯ ನಿಶ್ಚಿತಾರ್ಥ ಆದದ್ದಕ್ಕೆ ಅಭಿನಂದನೆ ಹೇಳಿ ಕಂಗ್ರಾಟ್ಸ್ ಅಂದದ್ದು ನೆನಪಿಗೆ ಬಂದಿತು.
‘ದೇವರೇ, ದೇವರೇ, ಎಂಥ ಕೆಲಸಮಾಡಿಬಿಟ್ಟೆ! ಸ್ಟಿವಾ!’
‘ಮುಟ್ಟಬೇಡ ನನ್ನನ್ನ! ಮುಟ್ಟಬೇಡ ಅಂದೆ! ದೇವರೇ!’ ಅನ್ನುತ್ತಾ ದಾಪುಗಾಲು ಹಾಕಿಕೊಂಡು ಮನೆಗೆ ಹೊರಟುಹೋದ. ಹಾಲ್‌ನಲ್ಲಿ ಮೇರಿಯ ತಾಯಿ ಕಂಡಳು.
‘ಏನಾಯಿತು ರಾಜಕುಮಾರ? ನಾನು..’ ಅವನ ಮುಖ ನೋಡಿದವಳೇ ಸುಮ್ಮನಾದಳು. ಕೋಪದಿಂದ ಅವನ ಮುಖ ಕೆಂಪಾಗಿತ್ತು.
‘ನಿಮಗೆ ಗೊತ್ತಿತ್ತು. ಆದರೂ ಅವರ ವ್ಯವಹಾರ ಬಚ್ಚಿಡುವುದಕ್ಕೆ ನನ್ನನ್ನು ಗುರಾಣಿಯ ಹಾಗೆ ಬಳಸಿಕೊಂಡಿರಿ. ನೀವು ಗಂಡಸಾಗಿದ್ದಿದ್ದರೆ...’ ಅನ್ನುತ್ತಾ ಮುಷ್ಠಿ ಬಿಗಿದು ಕೈ ಎತ್ತಿದ. ತಟ್ಟನೆ ಅವಳಿಗೆ ಬೆನ್ನು ತಿರುಗಿಸಿ ಮನೆಯಿಂದಾಚೆಗೆ ಓಡಿಹೋದ. ಮೇರಿಯ ಪ್ರಿಯಕರ ಯಾರೇ ಆಗಿದ್ದಿದ್ದರೂ ಕೊಂದುಬಿಡುತ್ತಿದ್ದ. ಆದರೆ ಅವನು ಅಷ್ಟೊಂದು ಭಕ್ತಿ ಇಟ್ಟುಕೊಂಡಿದ್ದ ಚಕ್ರವರ್ತಿ.
ಮಾರನೆಯ ದಿನ ರಜೆಗೆ ಅರ್ಜಿ ಹಾಕಿ ಜೊತೆಗೆ ರಾಜೀನಾಮೆಯ ಪತ್ರವನ್ನೂ ಕಳಿಸಿಬಿಟ್ಟ. ಯಾರ ಮುಖವನ್ನೂ ನೋಡಲು ಇಷ್ಟವಿಲ್ಲದೆ ಕಾಯಿಲೆಯಾಗಿದೆ ಎಂದು ಹೇಳಿ ತನ್ನ ಎಸ್ಟೇಟಿಗೆ ಹೋಗಿಬಿಟ್ಟ. ಬೇಸಗೆ ಪೂರ್ತಿ ಅಲ್ಲೇ ಇದ್ದು ಎಲ್ಲ ವ್ಯವಹಾರ ಸರಿಪಡಿಸಿ, ರಜೆ ಮುಗಿದ ಮೇಲೆ ಪೀಟರ್ಸ್‌ಬರ್ಗಿಗೆ ಹೋಗುವ ಬದಲಾಗಿ ಸನ್ಯಾಸಿಯಾಗಬೇಕೆಂದು ನಿರ್ಧರಿಸಿ ಮಠವೊಂದಕ್ಕೆ ಸೇರಿಕೊಂಡುಬಿಟ್ಟ. ಅವನ ತಾಯಿ ಮಠದ ವಿಳಾಸಕ್ಕೇ ಒಂದು ಕಾಗದ ಬರೆದು ಇಂಥ ದುಡುಕಿನ ತೀರ್ಮಾನ ಬೇಡ ಎಂದು ಕೋರಿಕೊಂಡಳು. 'ದೇವರ ಸೇವೆಗಾಗಿ ಕರೆ ಬಂದಿದೆ, ದೇವರ ಸೇವೆಗಿಂತ ಮಿಗಿಲಾದದ್ದು ಯಾವುದೂ ಇಲ್ಲ' ಎಂದು ಉತ್ತರ ಬರೆದ. ಅವನಷ್ಟೇ ನಾನತ್ವ ಮತ್ತು ಮಹತ್ವಾಕಾಂಕ್ಷೆ ಇದ್ದ ವಾರ್ವರಾಗೆ ಮಾತ್ರ ತಮ್ಮನ ಮನಸ್ಥಿತಿ ಅರ್ಥವಾಗಿತ್ತು.
ಅವಳ ಪ್ರಕಾರ ತಾವೇ ದೊಡ್ಡವರು ಎಂದುಕೊಂಡಿದ್ದ ಎಲ್ಲರಿಗಿಂತ ತಾನು ಮೇಲು ಎಂದು ತೋರಿಸುವ ಸಲುವಾಗಿಯೇ ಅವನು ಸನ್ಯಾಸಿಯಾಗಿದ್ದ. ಅವಳು ಅರ್ಥಮಾಡಿಕೊಂಡದ್ದು ಸರಿಯಾಗಿಯೇ ಇತ್ತು. ಮಿಕ್ಕವರೆಲ್ಲ ಮುಖ್ಯವೆಂದುಕೊಂಡಿದ್ದ, ತಾನೂ ಸೈನಿಕನಾಗಿದ್ದಾಗ ಬಲು ಮುಖ್ಯವೆಂದು ಭಾವಿಸಿದ್ದ, ಸಂಗತಿಗಳೆಲ್ಲ ತಿರಸ್ಕಾರ ಯೋಗ್ಯ ಎಂದು ತೋರಿಸುವ ಸಲುವಾಗಿಯೇ ಅವನು ಸನ್ಯಾಸಿಯಾಗಿದ್ದ. ಆದರೆ ವಾರ್ವರಾ ಅಂದುಕೊಂಡಂತೆ ಇದೊಂದೇ ಸಂಗತಿ ಅವನ ತೀರ್ಮಾನಕ್ಕೆ ಕಾರಣವಾಗಿರಲಿಲ್ಲ. ವಾರ್ವರಾಗೆ ತಿಳಿದಿರದಿದ್ದ ತೀವ್ರವಾದ ಧಾರ್ಮಿಕ ಭಾವನೆಯೂ ಸ್ಟೆಪಾನ್‌ನಲ್ಲಿತ್ತು. ಅದು ತಾನು ಎಲ್ಲರಿಗಿಂತ ಮಿಗಿಲಾಗಬೇಕೆಂಬ ಆಸೆಯೊಡನೆ ಬೆರೆತಿತ್ತು. ದೇವತೆಯಂತೆ ಪರಿಶುದ್ಧಳು ಎಂದು ಮೇರಿಯ ಬಗ್ಗೆ ಅಂದುಕೊಂಡಿದ್ದದ್ದು ಕೇವಲ ಭ್ರಮೆ ಎಂದು ತಿಳಿದಾಗ ಮನಸ್ಸಿಗೆ ಘಾಸಿಯಾಗಿ ಹತಾಶೆಯಲ್ಲಿ ಮುಳುಗಿಹೋದ. ಆ ಹತಾಶೆಯೇ ಅವನನ್ನು ದೇವರತ್ತ ಕರೆದೊಯ್ದಿತು. ಬಾಲ್ಯದಲ್ಲಿ ಅವನ ಮನಸ್ಸಿನಲ್ಲಿ ಬೇರುಬಿಟ್ಟಿದ್ದ ದೇವರ ಬಗೆಗಿನ ವಿಶ್ವಾಸ ಹಾಳಾಗದೆ ಹಾಗೇ ಉಳಿದಿತ್ತು.
(ಮುಂದುವರೆಯುವುದು)

Rating
No votes yet