ಫಾದರ್ ಸೆರ್ಗಿಯಸ್ ಅಧ್ಯಾಯ ಐದು

ಫಾದರ್ ಸೆರ್ಗಿಯಸ್ ಅಧ್ಯಾಯ ಐದು

ಐದು
ಫಾದರ್ ಸೆರ್ಗಿಯಸ್‌ನ ಏಕಾಂತವಾಸದ ಆರನೆಯ ವರ್ಷ ನಡೆಯುತ್ತಿತ್ತು. ಅವನಿಗೆ ನಲವತ್ತೊಂಬತ್ತು ತುಂಬಿತ್ತು. ಏಕಾಂತವಾಸವು ಕಷ್ಟ ಅನ್ನಿಸತೊಡಗಿತ್ತು. ಉಪವಾಸ, ಪ್ರಾರ್ಥನೆಗಳ ಕಾರಣದಿಂದ ಅಲ್ಲ. ಅವು ಅವನಿಗೆ ಕಷ್ಟ ಅನಿಸುತ್ತಲೇ ಇರಲಿಲ್ಲ. ಅವನು ನಿರೀಕ್ಷಿಸಿಯೇ ಇರದಿದ್ದ ಸಂಘರ್ಷವೊಂದು ಮನಸ್ಸಿನಲ್ಲಿ ಆರಂಭವಾಗಿತ್ತು. ಅದನ್ನು ಎದುರಿಸುವುದು ಕಷ್ಟ ಅನ್ನಿಸುತ್ತಿತ್ತು. ಈ ಸಂಘರ್ಷಕ್ಕೆ ಎರಡು ಮೂಲಗಳಿದ್ದವು. ಒಂದು ಸಂಶಯ, ಇನ್ನೊಂದು ಕಾಮ. ಈ ಇಬ್ಬರೂ ಶತ್ರುಗಳು ಒಟ್ಟೊಟ್ಟಿಗೆ ಎದುರಾಗುತ್ತಿದ್ದರು. ಶತ್ರುಗಳು ಇಬ್ಬರು ಎಂದು ಅವನಿಗನ್ನಿಸಿದರೂ ನಿಜವಾಗಿ ಅವೆರಡೂ ಒಬ್ಬನೇ ಶತ್ರುವಿನ ಬೇರೆ ಬೇರೆ ಮುಖಗಳು. ಸಂಶಯವನ್ನು ಗೆದ್ದಕೂಡಲೇ ಕಾಮ ತಲೆದೋರುತ್ತಿತ್ತು. ಆದರೆ ಅವನು ಮಾತ್ರ ಅವರಿಬ್ಬರೂ ಬೇರೆ ಬೇರೆ ರಾಕ್ಷಸರೆಂದು ತಿಳಿದು ಬೇರೆ ಬೇರೆಯ ಹೋರಾಟ ನಡೆಸುತ್ತಿದ್ದ.

'ದೇವರೇ, ದೇವರೇ! ಯಾಕೆ ಹೀಗೆ? ಭಕ್ತಿ ಇಲ್ಲ, ವಿಶ್ವಾಸವಿಲ್ಲ. ಬರೀ ಕಾಮನೆ. ನಿಜ ಆಂತೊನಿಯಂಥ ಸಂತರೂ ಈ ಕಾಮದ ಉಪಟಳ ಸಹಿಸಿದ್ದರು. ಆದರೆ ಅವರ ಮನಸ್ಸಿನಲ್ಲಿ ದೃಢವಾದ ವಿಶ್ವಾಸವಿತ್ತು. ಆದರೆ ನಾನೋ? ಕೆಲವು ಹೊತ್ತಲ್ಲ, ಎಷ್ಟೋ ಗಂಟೆ, ಎಷ್ಟೋ ದಿನ ಮನಸ್ಸಿನ ತುಂಬ ಸಂಶಯ. ಈ ಲೋಕ, ಈ ಲೋಕದ ಆನಂದ ಇವೆಲ್ಲ ಪಾಪವೆಂದಾದರೆ, ಇವನ್ನೆಲ್ಲ ತ್ಯಾಗಮಾಡುವುದೇ ಸರಿಯಾದುದಾದರೆ, ಏಕೆ ಇವೆ ಅವೆಲ್ಲ? ಈ ಪ್ರಲೋಭನೆಯನ್ನೇಕೆ ಸೃಷ್ಟಿ ಮಾಡಿದೆ ದೇವರೇ? ಪ್ರಲೋಭನೆ. ಏನು ಪ್ರಲೋಭನೆ ಎಂದರೆ? ಈ ಲೋಕದ ಎಲ್ಲ ಸುಖ ಸಂತೋಷ ಬಿಟ್ಟು ಪರಲೋಕಕ್ಕೆ ಸಿದ್ಧನಾಗುತ್ತಿರುವುದೇಕೆ? ಇದೂ ಪ್ರಲೋಭನೆಯಲ್ಲವೇ? ಆ ಲೋಕ ಇರದಿದ್ದರೆ?' ಇಂಥ ಯೋಚನೆ ಬಂದಕೂಡಲೆ ನಡುಗಿದ. ತನ್ನ ಬಗ್ಗೆಯೇ ಅಸಹ್ಯವಾಯಿತು. 'ಅಯ್ಯೋ, ಸಂತನಾಗಲು ಬಯಸುವ ಕ್ರಿಮಿಯೇ!' ಎಂದು ಹಳಿದುಕೊಂಡ. ಪ್ರಾರ್ಥನೆಗೆ ಶುರುಮಾಡಿದ. ಪ್ರಾರ್ಥನೆಗೆ ತೊಡಗಿದ ಕೂಡಲೇ ಚರ್ಚಿನ ಪ್ರಮುಖ ಹುದ್ದೆಯನ್ನು ಅಲಂಕರಿಸಿ ಬಿರೆಟಾ* ಮತ್ತು ನಿಲುವಂಗಿ ಧರಿಸಿಕೊಂಡು ಗಂಭೀರವದನನಾಗಿ ನಡೆದುಬರುತ್ತಿದ್ದೇನೆ ಅನ್ನುವ ಚಿತ್ರ ಮನಸ್ಸಿನಲ್ಲಿ ನಿಜವೆಂಬಷ್ಟು ಸ್ಪಷ್ಟವಾಗಿ ಮೂಡಿತು. ತಲೆ ಕೊಡವಿದ. 'ತಪ್ಪು, ಹೀಗೆ ಯೋಚನೆಮಾಡಬಾರದು. ಅದು ಮೋಸ. ಬೇರೆಯವರನ್ನು ಮೋಸಮಾಡಿದರೂ ಮಾಡಬಹುದೇನೋ, ನನಗೆ ನಾನೇ ಮೋಸ ಮಾಡಿಕೊಳ್ಳಬಾರದು, ದೇವರಿಗೆ ಮೋಸಮಾಡಬಾರದು. ನನ್ನದು ಘನವಾದ ವ್ಯಕ್ತಿತ್ವವಲ್ಲ, ಹಾಸ್ಯಾಸ್ಪದವಾದ ಕ್ಷುದ್ರ ಮನುಷ್ಯ ನಾನು!' ಎಂದುಕೊಂಡ. ನಿಲುವಂಗಿಯನ್ನು ಹಿಂದೆ ಸರಿಸಿ, ಒಳ ಉಡುಪುಗಳಲ್ಲಿ ಕಂಡ ತನ್ನದೇ ಬಡಕಲು ಕಾಲುಗಳನ್ನು ನೋಡಿಕೊಂಡು ಮುಗುಳ್ನಕ್ಕ. ಮತ್ತೆ ನಿಲುವಂಗಿ ಸರಿಪಡಿಸಿಕೊಂಡು ಪ್ರಾರ್ಥನೆಗೆ ಶುರುಮಾಡಿದ. ಪ್ರಾರ್ಥನೆಯಲ್ಲಿ 'ಈ ಹಾಸುಗೆಯೆ ನನ್ನ ಸಮಾಧಿಯೆ' ಎಂಬ ಸಾಲೊಂದು ಬಂದಿತು. ಅದನ್ನು ಹೇಳುತ್ತಿದ್ದಂತೆ ಯಾವುದೋ ಪಿಶಾಚಿ 'ಒಂಟಿ ಹಾಸುಗೆ ಸಮಾಧಿಯಲ್ಲದೆ ಮತ್ತೇನು? ಸುಳ್ಳು, ಬರೀ ಸುಳ್ಳು' ಎಂದು ಅವನ ಕಿವಿಯಲ್ಲಿ ಪಿಸುಗುಟ್ಟಿದಂತಾಯಿತು. ಅವನ ಮನಸ್ಸು ಬಲು ಹಿಂದೆ ಸಂಬಂಧವಿಟ್ಟುಕೊಂಡಿದ್ದ ವಿಧವೆಯೊಬ್ಬಳ ಭುಜಗಳ ಚಿತ್ರವನ್ನು ಕಲ್ಪಿಸಿಕೊಂಡಿತು. ಆ ಯೋಚನೆಯನ್ನು ಬಲವಂತವಾಗಿ ಕೊಡವಿಕೊಂಡು ಪ್ರಾರ್ಥನೆ ಮುಂದುವರೆಸಿದ. ಪ್ರಾರ್ಥನೆಯ 'ನಿಯಮ'* ಗಳನ್ನು ಮುಗಿಸಿ ಸುವಾರ್ತೆಗಳ ಭಾಗದ ಯಾವುದೋ ಒಂದು ಪುಟವನ್ನು ತೆರೆದ. ಅದು ಅವನು ಅನೇಕ ಬಾರಿ ಓದಿ ಬಾಯಿಪಾಠವಾಗಿದ್ದ ಭಾಗ. 'ದೇವರೇ, ನಿನ್ನನ್ನು ನಂಬುತ್ತೇನೆ! ನನ್ನ ಅಪನಂಬಿಕೆಯನ್ನು ಹೋಗಲಾಡಿಸು!' ಎಂದು ಓದುತ್ತಾ ಮನಸ್ಸಿನಲ್ಲಿ ತಲೆ ಎತ್ತಿದ್ದ ಸಂಶಯಗಳನ್ನೆಲ್ಲ ದೂರಮಾಡಿಕೊಂಡ. ಉರುಟು ಗೋಲಿಯನ್ನು ಇಳಿಜಾರಿನ ಅಂಚಿನಲ್ಲಿ ಕಷ್ಟಪಟ್ಟು ಸಮತೋಲನದಲ್ಲಿ ನಿಲ್ಲಿಸಿ ತಟ್ಟನೆ ದೂರ ಸರಿಯುವಂತೆ ತನ್ನ ವಿಶ್ವಾಸವನ್ನು ಅಸ್ಥಿರವಾದ ತಳಹದಿಯಮೇಲೆ ಕಷ್ಟಪಟ್ಟು ನಿಲ್ಲಿಸಿ, ಮನಸ್ಸಿಗೆ ಅಭ್ಯಾಸವಾಗಿದ್ದ ಕಣ್ಣಪಟ್ಟಿ ತೊಡಿಸಿ, ಚಿಕ್ಕಂದಿನಿಂದಲೂ ಹೇಳುತ್ತ ಬಂದಿದ್ದ 'ನಾನು ನಿನ್ನವನು ಪ್ರಭೂ, ನಿನ್ನವನು' ಎಂಬ ಪ್ರಾರ್ಥನೆ ಹೇಳಿಕೊಂಡ. ಎಷ್ಟೋ ಸಮಾಧಾನವಾದಂತಾಯಿತು. ಮನಸ್ಸಿನ ತುಂಬ ಆನಂದದ ಪುಳಕ. ಎದೆಯ ಮೇಲೆ ಶಿಲುಬೆಯ ಆಕಾರದಲ್ಲಿ ಕೈ ಆಡಿಸಿಕೊಂಡು ಕಿರು ಬೆಂಚಿನ ಮೇಲಿದ್ದ ಹಾಸಿದ್ದ ತೆಳ್ಳನೆಯ ಚಾಪೆಯ ಮೇಲೆ, ಬೇಸಗೆಯಲ್ಲಿ ತೊಡುವ ನೂಲಿನ ನಿಲುವಂಗಿಯನ್ನೆ ತಲೆದಿಂಬು ಮಾಡಿಕೊಂಡು ಮಲಗಿದ. ತಟ್ಟನೆ ಜೋಂಪು ಹತ್ತಿತು. ಆ ಅರೆನಿದ್ರೆಯಲ್ಲಿ ಯಾವುದೋ ಹಿಮಗಾಡಿಯ ಗಂಟೆಗಳ ಕಿಣಿಕಿಣಿ ಸದ್ದು ಕೇಳಿಸಿದಂತಾಯಿತು. ನಿಜವಾಗಿ ಕೇಳುತ್ತಿದೆಯೋ ಕನಸು ಬಿದ್ದಿದೆಯೋ ಗೊತ್ತಾಗಲಿಲ್ಲ ಅವನಿಗೆ. ಬಾಗಿಲು ಬಡಿಯುವ ಸದ್ದು ಕೇಳಿ ಎದ್ದು ಕುಳಿತ. ತನ್ನ ಕಿವಿಗಳನ್ನು ತಾನೇ ನಂಬಲಾಗಲಿಲ್ಲ. ಬಾಗಿಲು ಬಡಿಯುವ ಸದ್ದು ಮತ್ತೆ ಕೇಳಿಸಿತು. ಇಲ್ಲೇ ಎಲ್ಲೋ ಸಮೀಪದಲ್ಲಿ, ಅಲ್ಲ, ನನ್ನ ಕೋಣೆಯ ಬಾಗಿಲನ್ನೆ ಬಡಿಯುತ್ತಿದ್ದಾರೆ, ಯಾರೋ ಹೆಂಗಸಿನ ಧ್ವನಿ ಇದ್ದಂತಿದೆ ಅನ್ನಿಸಿತು.

'ದೇವರೇ! ನಿಜವಿರಬಹುದೇ ಇದು? ಸಂತರ ಜೀವನ ಚರಿತ್ರೆಗಳಲ್ಲಿ ಓದಿದ್ದ ಹಾಗೆ ಸೈತಾನ ಹೆಣ್ಣು ವೇಷ ಧರಿಸಿ ಬಂದಿರಬಹುದೇ? ಹೌದು ಇದು ಹೆಣ್ಣು ದನಿ. ಮೃದುವಾದ, ಕಂಪಿಸುವ, ಸವಿಯಾದ ದನಿ!' ಥೂ ಎಂದು ಉಗುಳಿ 'ತೊಲಗು, ತೊಲಗು' ಎಂದ.
'ಯಾರೂ ಇಲ್ಲ. ಇದೆಲ್ಲ ಬರೀ ನನ್ನ ಕಲ್ಪನೆ' ಎಂದು ಮನಸ್ಸಿಗೆ ಸಮಾಧಾನ ಹೇಳಿಕೊಂಡು ಪ್ರಾರ್ಥನೆಯ ಪೀಠದ ಬಳಿಗೆ ಹೋಗಿ, ಎಂದಿನ ಅಭ್ಯಾಸದಂತೆ ನೆಲಕ್ಕೆ ಮೊಳಕಾಲೂರಿ ಕುಳಿತ. ಹಾಗೆ ಮಂಡಿಯೂರಿ ಕುಳಿತುಕೊಳ್ಳುವ ಕ್ರಿಯೆಯೇ ಅವನ ಮನಸ್ಸಿಗೆ ಸಮಾಧಾನವನ್ನೂ ತೃಪ್ತಿಯನ್ನೂ ತರುತ್ತಿತ್ತು. ನೆಲಕ್ಕೆ ಹಣೆಯನ್ನು ಒತ್ತಿ ನಮಸ್ಕರಿಸಿದಾಗ ಉದ್ದವಾದ ತಲೆಗೂದಲು ಮುಂದೆ ಬಿದ್ದು ಮುಖವನ್ನು ಮರೆಮಾಡಿದವು. ಕೂದಲುದುರಿ ವಿಶಾಲವಾಗಿದ್ದ ಹಣೆಗೆ ಒದ್ದೆನೆಲದ ತೇವ ತಾಕಿತು. ಪ್ರಲೋಭನೆಗಳನ್ನು ನಿವಾರಿಸುತ್ತದೆ ಎಂದು ವೃದ್ಧ ಫಾದರ್ ಪೈಮೋನ ಹೇಳಿದ್ದ ಪ್ರಾರ್ಥನೆಯನ್ನು ಓದಿದ. ಎದ್ದು ನಿಂತ. ಕೃಶವಾಗಿದ್ದ ಅವನ ಶರೀರವನ್ನು ದೃಢವಾದ ಕಾಲುಗಳು ಸಲೀಸಾಗಿ ಹೊತ್ತಿದ್ದವು. ಪ್ರಾರ್ಥನೆ ಮುಂದುವರೆಸಬೇಕೆಂದುಕೊಂಡರೂ ಅವನ ಕಿವಿಗಳು ಸ್ವಂತ ಇಚ್ಛೆಯಿಂದೆಂಬಂತೆ ಆ ಮಧುರವಾದ ದನಿಯನ್ನು ಕೇಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದವು. ಆ ದನಿ ಮತ್ತೆ ಕೇಳಿಸಲಿ ಎಂದು ಆಸೆಯಾಗುತ್ತಿತ್ತು. ಹೊರಗೆ ಎಲ್ಲ ನಿಶ್ಚಲವಾಗಿತ್ತು. ಗುಹೆಯ ಚಾವಣಿಯಮೇಲೆ ಬಿದ್ದು ಕರಗಿದ ಹಿಮ ಗೋಡೆಯ ಬಿರುಕಿನಿಂದ ಕೆಳಗೆ ಇಟ್ಟ ಬೋಗುಣಿಗೆ ಹನಿ ಹನಿಯಾಗಿ ಲಯಬದ್ಧವಾಗಿ ತಟಕಿಕ್ಕುವ ಸದ್ದು ಬಿಟ್ಟರೆ ಬೇರೆ ಏನೂ ಕೇಳಿಸಲಿಲ್ಲ. ಹೊರಗೆ ಇಡೀ ಲೋಕದ ಮೇಲೆ ಕಾವಳ ಕವಿದಂತಿತ್ತು. ನಿಶ್ಚಲ, ನಿಶ್ಚಲ. ಇದ್ದಕ್ಕಿದ್ದಂತೆ ಕಿಟಕಿಯ ಬಳಿ ಸರಸರ ಸದ್ದು ಕೇಳಿಸಿತು. ಮತ್ತೆ ಅದೇ ಮೃದುವಾದ, ಸವಿಯಾದ, ಭಯ ತುಂಬಿದ ದನಿ ಸ್ಪಷ್ಟವಾಗಿ ಕೇಳಿಸಿತು. ಸುಂದರಳಾದ ಹೆಣ್ಣಿಗೆ ಮಾತ್ರ ಅಂಥ ಧ್ವನಿ ಇರಲು ಸಾಧ್ಯ. ಹೆಂಗಸು ಹೇಳಿದಳು:
'ದಯವಿಟ್ಟು ಬಾಗಿಲು ತೆಗೆಯಿರಿ. ಕ್ರಿಸ್ತ ನಿಮಗೆ ಒಳಿತು ಮಾಡುತ್ತಾನೆ.'
ಮೈಯ ರಕ್ತವೆಲ್ಲ ಎದೆಗೆ ನುಗ್ಗಿ ಚಲಿಸಲಾರದೆ ನಿಂತಂತೆ ಅನಿಸಿತು ಫಾದರ್ ಸೆರ್ಗಿಯಸ್ಸನಿಗೆ. ಉಸಿರಾಡುವುದೇ ಕಷ್ಟವಾಯಿತು.
'ದೇವರು ಕಣ್ತೆರೆಯಲಿ, ದೇವರ ಶತ್ರುಗಳು ನಾಶವಾಗಲಿ...'
'ನಾನೇನು ದೆವ್ವ ಅಲ್ಲ!' ಆ ಮಾತುಗಳನ್ನು ನುಡಿದ ತುಟಿಗಳು ಮುಗುಳುನಗುತ್ತಿರಬೇಕು ಅನಿಸಿತು ಅವನಿಗೆ. 'ನಾನೇನು ದೆವ್ವ ಅಲ್ಲ. ದಾರಿ ತಪ್ಪಿ ಬಂದ ಪಾಪಿಷ್ಠೆ ಹೆಂಗಸು. ದಾರಿತಪ್ಪಿದ ಅಂದರೆ ಬೇರೇನೋ ಭಾವಿಸಬೇಡಿ, ನಿಜವಾಗಿ ದಾರಿ ತಪ್ಪಿ ಇಲ್ಲಿಗೆ ಬಂದಿರುವೆ ಅಷ್ಟೆ. ಚಳಿಗೆ ಮೈ ಕೊರೆಯುತ್ತಿದೆ. ದಯವಿಟ್ಟು ಆಶ್ರಯ ಕೊಡಿ.'
ಕಿಟಕಿಯ ಗಾಜಿಗೆ ಮುಖ ಒತ್ತಿ ನೋಡಿದರೆ ಕ್ರಿಸ್ತನ ಮುಂದೆ ಉರಿಯುತ್ತಿದ್ದ ಪುಟ್ಟ ದೀಪದ ಪ್ರತಿಫಲನವಷ್ಟೇ ಕಾಣಿಸಿತು. ಅಂಗೈಯನ್ನು ಬೊಗಸೆಮಾಡಿ, ಕಣ್ಣಿನ ಎರಡೂ ಅಂಚಿನಿಂದ ಬೆಳಕು ಮರೆಮಾಡಿಕೊಂಡು ನೋಡಿದ. ಮಬ್ಬು ಮಂಜು, ಕತ್ತಲು, ಮರ. ಮತ್ತೆ ಅವನ ಮುಖದ ಎದುರಿಗೇ ಅವಳು. ತಲೆಗೆ ಕ್ಯಾಪು ತೊಟ್ಟು, ಸಡಿಲವಾದ ಉದ್ದನೆಯ ಬಿಳಿಯ ಫರ್ ಕೋಟು ಬಿಗಿಯಾಗಿ ಎಳೆದು ಹಿಡಿದುಕೊಂಡಿರುವ, ಕರುಣೆ ಹುಟ್ಟಿಸುವ ಭಯಗೊಂಡ ಚಲುವಾದ ಮುಖದವಳು. ಅವನಿಂದ ಒಂದೋ ಎರಡೋ ಇಂಚು ದೂರದಲ್ಲಿ. ಅವರ ಕಣ್ಣು ಕಲೆತ ಕ್ಷಣದಲ್ಲಿಯೇ ಪರಸ್ಪರ ಗುರುತು ಸಿಕ್ಕಿಬಿಟ್ಟಿತು. ಅವರು ಮೊದಲೇ ಭೇಟಿಯಾಗಿದ್ದರೆಂದರ್ಥವಲ್ಲ. ಇಲ್ಲ. ಅವರು ಒಬ್ಬರನ್ನೊಬ್ಬರು ನೋಡಿರಲಿಲ್ಲ. ಆದರೂ 'ನಾವಿಬ್ಬರೂ ಪರಸ್ಪರ ಚೆನ್ನಾಗಿ ಬಲ್ಲೆವು' ಎಂದು ಅವರಿಗೆ, ಅದರಲ್ಲೂ ಅವನಿಗೆ, ತಟ್ಟನೆ ಅನ್ನಿಸಿಬಿಟ್ಟಿತು. ಹಾಗೆ ನೋಡಿದಮೇಲೆ ಅವಳು ದೆವ್ವ ಇರಬಹುದು ಎಂಬ ಆಲೋಚನೆಗೆ ತಾವಿರಲಿಲ್ಲ. ಸರಳ ಸ್ವಭಾವದ, ಕರುಣೆ ಹುಟ್ಟಿಸುವಂತಿರುವ, ಚೆಲುವೆಯಾದ ಭಯಭೀತ ಹೆಂಗಸು ಅಷ್ಟೆ ಅವಳು.
'ಯಾರು ನೀನು? ಯಾಕೆ ಬಂದಿದ್ದೀಯ?' ಅವನು ಕೇಳಿದ.
'ಬಾಗಿಲು ತೆಗೀರಿ ಮೊದಲು' ತುಂಟತನದ ಅಧಿಕಾರವಾಣಿಯಲ್ಲಿ ಹೇಳಿದಳು. 'ಚಳಿಗೆ ಮೈ ಮರಗಟ್ಟುತ್ತಾ ಇದೆ. ದಾರಿ ತಪ್ಪಿ ಬಂದೆ ಅಂತ ಹೇಳಿದೆನಲ್ಲ.'
'ನಾನು ಸನ್ಯಾಸಿ. ಏಕಾಂತವಾಸದಲ್ಲಿರುವವನು.'
'ಆದರೇನಂತೆ? ಬಾಗಿಲು ತೆಗೆಯಿರಿ. ನೀವು ಪ್ರಾರ್ಥನೆ ಮಾಡುತ್ತಿರುವಾಗ ನಾನು ಇಲ್ಲಿ ಚಳಿಗೆ ಸಿಕ್ಕಿ ಸಾಯಬೇಕು ಅನ್ನುತ್ತೀರಾ?'
'ಆದರೆ...'
'ನಾನೇನು ನಿಮ್ಮನ್ನು ತಿಂದುಬಿಡುವುದಿಲ್ಲ. ನಿಮಗೆ ಪುಣ್ಯ ಬರುತ್ತದೆ. ನನ್ನ ಮೈ ಸೆಟೆದುಹೋಗುತ್ತಿದೆ.'
ಅವಳಿಗೆ ಈಗ ಭಯವಾಗುತ್ತಿತ್ತು. ಕಣ್ಣಲ್ಲಿ ನೀರು ತುಂಬಿಬಂದಿರುವ ಸೂಚನೆ ಅವಳ ದನಿಯಲ್ಲಿತ್ತು.
ಕಿಟಕಿಯಿಂದ ಎರಡು ಹೆಜ್ಜೆ ಹಿಂದೆ ಸರಿದ. ಮುಳ್ಳಿನ ಕಿರೀಟ ತೊಟ್ಟ ಏಸುವಿನ ವಿಗ್ರಹದತ್ತ ನೋಡಿದ. 'ದೇವರೇ, ಕಾಪಾಡು! ದೇವರೇ, ಕಾಪಾಡು!' ಎಂದು ಗೊಣಗಿಕೊಂಡ. ಎದೆಯ ಮೇಲೆ ಶಿಲುಬೆಯ ಆಕಾರ ಬರೆದುಕೊಂಡು ತಲೆ ಬಗ್ಗಿಸಿ ಪ್ರಾರ್ಥನೆಮಾಡಿದ. ಹೊರಬಾಗಿಲಿನತ್ತ ನಡೆದ. ಬಾಗಿಲ ಅಗುಳಿ ಎಲ್ಲಿದೆ ಎಂದು ಕತ್ತಲಲ್ಲಿ ತಡಕಾಡಿದ. ಸಿಕ್ಕಿತು. ಹೊರಗೆ ಹೆಜ್ಜೆಯ ಸದ್ದು ಕೇಳಿಸಿತು. ಕಿಟಕಿಯನ್ನು ಬಿಟ್ಟು ಬಾಗಿಲ ಹತ್ತಿರ ಬರುತ್ತಿದ್ದಳು. ಇದ್ದಕ್ಕಿದ್ದಂತೆ ಹಾ ಅಂದಳು. ಚಾವಣಿಯಿಂದ ತೊಟ್ಟಿಕ್ಕಿ ಹೊಸ್ತಿಲ ಬಳಿ ನಿಂತಿದ್ದ ನೀರಿನಲ್ಲಿ ಕಾಲಿಟ್ಟಿರಬೇಕು ಅಂದುಕೊಂಡ. ಅವನ ಕೈ ನಡುಗುತ್ತಿತ್ತು. ಬಿಗಿಯಾಗಿ ಹಾಕಿದ್ದ ಬಾಗಿಲಿನ ಅಗುಳಿಯನ್ನು ತೆಗೆಯುವುದು ಕಷ್ಟವಾಯಿತು.
'ಏನು ಮಾಡುತ್ತಿದ್ದೀರಿ? ಬಾಗಿಲು ತೆಗೆಯಿರಿ. ನೆನೆದು ತೊಪ್ಪೆಯಾಗಿದ್ದೇನೆ. ಮೈ ಮರಗಟ್ಟುತ್ತಾ ಇದೆ. ನೀವು ನಿಮ್ಮ ಆತ್ಮವನ್ನು ಕಾಪಾಡಿಕೊಳ್ಳುತ್ತಾ ನಾನು ಇಲ್ಲೇ ಸಾಯಬೇಕು ಅಂತ ಇದ್ದೀರಾ...'
ಬಾಗಿಲನ್ನು ತನ್ನತ್ತ ಎಳೆದುಕೊಂಡು ಅಗುಳಿ ತೆಗೆದ. ಆಮೇಲೆ ಏನು ಮಾಡುತ್ತಿದ್ದೇನೆಂದು ಗೊತ್ತಿಲ್ಲದೆ ಜೋರಾಗಿ ಬಾಗಿಲು ದೂಡಿದ. ಆ ರಭಸಕ್ಕೆ ಬಾಗಿಲು ಅವಳಿಗೆ ಬಡಿಯಿತು.
'ಸಾರಿ, ಸಾರಿ. ಕ್ಷಮಿಸಿ!' ಎಂದು ಉದ್ಗರಿಸಿದ. ಮಹಿಳೆಯರೊಡನೆ ಮಾತನಾಡುವ ಹಳೆಯ ಸೌಜನ್ಯದ ರೀತಿ ಮತ್ತೆ ಬಂದುಬಿಟ್ಟಿತ್ತು. ಸಾರಿ, ಕ್ಷಮಿಸಿ ಎಂದು ಹೇಳಿದ ದನಿಯನ್ನು ಕೇಳಿ ಸಣ್ಣದಾಗಿ ನಕ್ಕಳು. 'ಇವನು ಗೆಲ್ಲಲಾರದವನೇನೂ ಅಲ್ಲ' ಅಂದುಕೊಂಡಳು. 'ನನ್ನನ್ನು ಕ್ಷಮಿಸಬೇಕಾದವರು ನೀವು. ಇಂಥ ಹೊತ್ತಿನಲ್ಲಿ ನಾನು ಹೊರಡಲೇ ಬಾರದಾಗಿತ್ತು. ಸಂದರ್ಭ ಹಾಗೆ ಬಂತು ಮಾಡುವುದೇನು...' ಅಂದಳು.
'ಬನ್ನಿ' ಅನ್ನುತ್ತಾ ಕೊಂಚ ಪಕ್ಕಕ್ಕೆ ಸರಿದು ಅವಳು ಒಳಕ್ಕೆ ಬರಲು ಅನುವುಮಾಡಿಕೊಟ್ಟ.
ಅವಳು ಅವನನ್ನು ದಾಟಿ ಹೋಗುತ್ತಿದ್ದಂತೆ, ಬಹಳ ಕಾಲದ ಹಿಂದೆಯೇ ಮರೆತು ಹೋಗಿದ್ದ, ಮಧುರವಾದ ಸುಗಂಧದ ಕಂಪು ಅವನ ಮೇಲೆ ದಾಳಿಮಾಡಿತು. ತಲೆಬಾಗಿಲು ದಾಟಿ ಅವನ ಕೋಣೆಯತ್ತ ಹೆಜ್ಜೆ ಹಾಕಿದಳು. ಬಾಗಿಲು ಮುಚ್ಚಿ, ಅಗಳಿಯನ್ನು ಹಾಕದೆ ಹಾಗೇ ಬಿಟ್ಟು, ಅವಳ ಹಿಂದೆ ನಡೆದ.
'ದೇವ ಪುತ್ರ, ಕರುಣಾಮಯಿ ಏಸು, ಪಾಪಿಯ ಮೇಲೆ ಕರುಣೆ ತೋರಿಸು. ದೇವರೇ, ನಾನು ಪಾಪಿ, ನನ್ನನ್ನು ಕಾಪಾಡು' ಎಂದು ಪ್ರಾರ್ಥಿಸಿಕೊಂಡ. ಬರಿಯ ಮನಸ್ಸಿನಲ್ಲಲ್ಲ, ಅವನಿಗೇ ಗೊತ್ತಿಲ್ಲದೆ ತುಟಿಗಳೂ ಆ ಮಾತುಗಳನ್ನು ಅನ್ನುತ್ತಿದ್ದವು.
'ಕುಳಿತುಕೊಳ್ಳಿ, ಸುದಾರಿಸಿಕೊಳ್ಳಿ' ಎಂದ.
ಕೋಣೆಯ ನಡುವೆ ನಿಂತಿದ್ದಳು. ಅವಳ ಉಡುಪಿನಿಂದ ನೀರು ನೆಲದಮೇಲೆ ತೊಟ್ಟಿಡುತ್ತಿತ್ತು. ಅವನನ್ನೇ ನೋಡುತ್ತಿದ್ದಳು. ಅವಳ ಕಣ್ಣು ನಗುತ್ತಿದ್ದವು.
'ನಿಮ್ಮ ಏಕಾಂತಕ್ಕೆ ಭಂಗ ತಂದದ್ದಕ್ಕೆ ಕ್ಷಮಿಸಿ. ಎಂಥಾ ಗತಿ ಬಂತು ನೋಡಿ ನನಗೆ. ಸ್ಲೆಡ್ಜ್‌ ಡ್ರೈವಿಗೆ ಅಂತ ಹೋಗಿದ್ದೆವು. ನಾನು ವರೊಬ್ವೆಕಾದಿಂದ ಊರಿನವರೆಗೆ ಒಬ್ಬಳೇ ನಡೆದು ಬರುತ್ತೇನೆ ಅಂತ ಬೆಟ್ಟು ಕಟ್ಟಿದೆ. ಬರುತ್ತಾ ಬರುತ್ತಾ ದಾರಿ ತಪ್ಪಿ ಹೋಯಿತು. ನಿಮ್ಮ ಮಠ ಕಾಣದೆ ಇದ್ದಿದ್ದರೆ...' ಸುಳ್ಳು ಹೇಳುತ್ತಿದ್ದಳು. ಅವನ ಮುಖದಲ್ಲಿದ್ದ ಗೊಂದಲ ಆತಂಕಗಳನ್ನು ಕಂಡು ಸುಳ್ಳು ಮುಂದುವರೆಸುವುದು ಕಷ್ಟವಾಯಿತು. ಅವನು ಹೀಗಿರುತ್ತಾನೆ ಅಂದುಕೊಂಡೇ ಇರಲಿಲ್ಲ ಅವಳು. ಅಂದುಕೊಂಡಿದ್ದಷ್ಟು ಸುಂದರನಲ್ಲದಿದ್ದರೂ ನೆರೆಯುತ್ತಿದ್ದ ಕೊಂಚ ಗುಂಗುರು ಗುಂಗುರಾದ ತಲೆಗೂದಲು, ಗಡ್ಡ, ನೀಟಾದ ಚೂಪು ಮೂಗು, ಅವಳತ್ತ ದಿಟ್ಟಿಸಿ ನೋಡುವಾಗ ಕೆಂಡದ ಹಾಗೆ ಉರಿಯುತ್ತಿದ್ದ ಕಪ್ಪು ಕಣ್ಣುಗಳು ಇವೆಲ್ಲ ಅವಳ ಮನಸ್ಸನ್ನು ಸೆಳೆದವು.
ಸುಳ್ಳು ಹೇಳುತ್ತಿದ್ದಾಳೆ ಎಂದು ಅವನಿಗೆ ತಿಳಿಯಿತು.

'ಸರಿ...ಸರಿ' ಅನ್ನುತ್ತಾ ಅವಳನ್ನು ಒಮ್ಮೆ ನೋಡಿ ದೃಷ್ಟಿ ತಗ್ಗಿಸಿದ. 'ನಾನು ಒಳಗೆ ಹೋಗುತ್ತೇನೆ, ನೀವು ಇಲ್ಲಿ ಮಲಗಿಕೊಳ್ಳಿ' ಅಂದ.
ಉರಿಯುತ್ತಿದ್ದ ದೀಪದಿಂದ ಮೇಣದ ಬತ್ತಿಯನ್ನು ಹಚ್ಚಿಕೊಂಡು, ಅವಳಿಗೆ ತಲೆ ಬಾಗಿಸಿ ನಮಸ್ಕಾರಮಾಡಿ, ತನ್ನ ಕೋಣೆಗೆ ಹೋಗಿಬಿಟ್ಟ. ಭಾರವಾದ ಏನನ್ನೋ ಎಳೆಯುತ್ತಿರುವ ಸದ್ದು ಕೇಳಿಸಿತು. 'ನಾನು ಬಾಗಿಲು ತೆಗೆದು ಒಳಕ್ಕೆ ಹೋಗದಿರಲಿ ಅಂತ ಏನೋ ಅಡ್ಡ ಇಡುತ್ತಿರಬಹುದು' ಎಂದುಕೊಂಡಳು, ನಗುತ್ತಾ. ಬಿಳಿಯ ಚರ್ಮದ ನಿಲುವಂಗಿಯಂಥ ಕೋಟು ತೆಗೆದೆಸೆದಳು. ಅದರ ಕ್ಯಾಪು ಅವಳ ತಲೆಗೂದಲಿಗೆ, ಮತ್ತೆ ಕ್ಯಾಪಿನ ಕೆಳಗೆ ಹಾಕಿಕೊಂಡಿದ್ದ ಕಸೂತಿಯ ಕರ್ಚೀಫಿಗೆ ಸಿಕ್ಕಿಹಾಕಿಕೊಂಡಿತ್ತು. ಕಿಟಕಿಯ ಬಳಿ ನಿಂತಿದ್ದಾಗ ಅವಳೇನೂ ಅಷ್ಟು ನೆನೆದಿರಲಿಲ್ಲ. ಒಳಕ್ಕೆ ಕರೆಯಲಿ ಎಂದೇ ನೆನೆದು ತೊಪ್ಪೆಯಾಗಿದ್ದೇನೆ ಎಂದು ನೆಪ ಹೇಳಿದ್ದಳು. ಬಾಗಿಲ ಬಳಿ ನಿಂತಿದ್ದ ನೀರಿನ ಪುಟ್ಟ ಹೊಂಡಕ್ಕೆ ಕಾಲಿಟ್ಟಾಗ ಅವಳ ಎಡಗಾಲಿನ ಪಾದ ಪೂರ್ತಿ ನೀರಿನಲ್ಲಿ ಮುಳುಗಿ ಬೂಟಿನೊಳಗೆಲ್ಲ ನೀರು ಸೇರಿತ್ತು. ಅವನ ಮಂಚದ ಮೇಲೆ ಕೂತು-ಚಿಕ್ಕ ಕೆಂಪು ಜಮಖಾನೆ ಹಾಸಿದ್ದ ಬೆಂಚು ಅಷ್ಟೇ ಅದು- ಬೂಟು ತೆಗೆಯತೊಡಗಿದಳು. ಗವಿಯಂಥ ಏಳಡಿ, ಒಂಬತ್ತಡಿ ಅಳತೆಯ ಆ ಚಿಕ್ಕ ಕೋಣೆ ಅವಳಿಗೆ ತುಂಬ ಸುಂದರವಾಗಿದೆ ಅನ್ನಿಸಿತು. ಕನ್ನಡಿಯಷ್ಟೆ ಸ್ವಚ್ಛವಾಗಿತ್ತು. ಅವಳು ಕೂತಿದ್ದ ಬೆಂಚು, ಅದರ ಮೇಲೆ ಗೋಡೆಗೆ ಹೊಡೆದಿದ್ದ ಬುಕ್ಕು ಶೆಲ್ಫು, ಮೂಲೆಯಲ್ಲಿದ್ದ ಲೆಕ್ಟರ್ನ್ ಬಿಟ್ಟರೆ ಇನ್ನೇನೂ ಇರಲಿಲ್ಲ ಅಲ್ಲಿ. ಬಾಗಿಲಿಗೆ ಒಂದು ಮೊಳೆ ಹೊಡೆದು ಕುರಿಯ ಚರ್ಮದ ಕೋಟು ಮತ್ತೆ ಒಂದು ಕ್ಯಾಸಕ್ ನೇತುಹಾಕಿತ್ತು. ಲೆಕ್ಟರ್ನ್‌ನ ಮೇಲುಗಡೆ ಪುಟ್ಟ ದೀಪ ಮತ್ತೆ ಮುಳ್ಳಿನ ಕಿರೀಟ ತೊಟ್ಟ ಏಸುವಿನ ವಿಗ್ರಹ ಇದ್ದವು. ರೂಮಿನಲ್ಲಿ ಬೆವರಿನ, ದೀಪದ ಎಣ್ಣೆಯ, ಮಣ್ಣಿನ ವಾಸನೆಗಳು ವಿಚಿತ್ರವಾಗಿ ಬೆರೆತಿದ್ದವು. ರೂಮಿನಲ್ಲಿದ್ದ ಎಲ್ಲವೂ, ವಾಸನೆ ಕೂಡ, ಅವಳಿಗೆ ಇಷ್ಟವಾದವು.
ಕಾಲು, ಅದರಲ್ಲೂ ಎಡಗಾಲು, ಒದ್ದೆಯಾಗಿ ಕಸಿವಿಸಿಯಾಗುತ್ತಿತ್ತು. ಬೂಟುಗಳನ್ನು ಬಿಚ್ಚಲು ತೊಡಗಿದಳು. ಬಿಚ್ಚುತ್ತಾ ತನಗೆ ತಾನೆ ಮುಗುಳ್ನಗುತ್ತಿದ್ದಳು. ಕಟ್ಟಿದ್ದ ಬೆಟ್ ಗೆದ್ದದ್ದಕ್ಕಿಂತ ಚೆಲುವನಾದ, ವಿಚಿತ್ರಸ್ವಭಾವದ, ಆಕರ್ಷಕನಾದ, ಹತ್ತು ಜನರಲ್ಲಿ ಎದ್ದುಕಾಣುವಂಥ ಅಪರಿಚಿತ ಗಂಡಸಿನ ಮನಸ್ಸಿನಲ್ಲಿ ತಳಮಳ ಹುಟ್ಟಿಸಿಬಿಟ್ಟೆ ಎಂದು ಖುಷಿಪಡುತ್ತಿದ್ದಳು. 'ಅವನು ರಿಯಾಕ್ಟ್‌ ಮಾಡಲಿಲ್ಲ. ಆದರೇನು, ಮನಸ್ಸು ಕದಡಿ ಹೋಗಿರುವುದು ಗ್ಯಾರಂಟಿ' ಅಂದುಕೊಂಡಳು.
'ಫಾದರ್ ಸೆರ್ಗಿಯಸ್! ಫಾದರ್ ಸೆರ್ಗಿಯಸ್! ನಿಮ್ಮನ್ನ ಹೇಗೆ ಕರೆಯಬೇಕು?'
'ಏನು ಬೇಕು ನಿಮಗೆ?' ಮತ್ತೊಂದು ಬದಿಯ ಕೋಣೆಯಿಂದ ಕುಗ್ಗಿದ ದನಿಯ ಮಾತು ಕೇಳಿಸಿತು.
'ನಿಮ್ಮ ಏಕಾಂತಕ್ಕೆ ತೊಂದರೆ ಮಾಡುತ್ತಿದ್ದೇನೆ. ಕ್ಷಮಿಸಿ. ಬೇರೆ ದಾರಿ ಇಲ್ಲ. ಜ್ವರ ಬಂದಹಾಗಿದೆ. ಮೈಯೆಲ್ಲ ನೆನೆದು ಹೋಗಿದೆ. ಕಾಲು ಹಿಮಗಟ್ಟಿವೆ.'
'ಕ್ಷಮಿಸಿ, ನಾನು ಏನೂ ಮಾಡಲಾರೆ' ಮೆಲುದನಿಯ ಉತ್ತರ ಕೇಳಿಸಿತು.
'ನಿಮಗೆ ತೊಂದರೆ ಕೊಡಬೇಕು ಅಂತಿರಲಿಲ್ಲ. ಏನು ಮಾಡುವುದಕ್ಕೂ ತೋಚಲಿಲ್ಲ ಅಷ್ಟೆ. ಬೆಳಗಾಗುವವರೆಗೂ ಇದ್ದು ಹೋಗಿಬಿಡುತ್ತೇನೆ.'
ಉತ್ತರ ಬರಲಿಲ್ಲ. ಮಣಮಣ ಸದ್ದು ಮಂತ್ರದ ಹಾಗೆ ಕೇಳಿಸಿತು. ಪ್ರಾರ್ಥನೆ ಮಾಡುತ್ತಿರಬಹುದು ಅಂದುಕೊಂಡಳು.
'ನೀವು ಇಲ್ಲಿಗೆ ಬರುವುದಿಲ್ಲ ತಾನೇ? ಯಾಕೆಂದರೆ ಮೈ ಒಣಗಿಸಿಕೊಳ್ಳಬೇಕು, ಬಟ್ಟೆ ಬದಲಾಯಿಸಬೇಕು.' ಮುಗುಳ್ನಗುತ್ತಾ ಕೇಳಿದಳು.
ಅವನು ಉತ್ತರಿಸಲಿಲ್ಲ. ಪ್ರಾರ್ಥನೆಯ ಮಾತುಗಳು ಲಯಬದ್ದವಾಗಿ ಕೇಳಿಸಿದವು.
ನೀರು ತುಂಬಿದ್ದ ಉದ್ದನೆಬೂಟು ಎಳೆಯುತ್ತಾ 'ನಿಜವಾದ ಗಂಡಸು ಇವನು' ಅಂದುಕೊಂಡಳು. ಒದ್ದೆ ಬೂಟು ಕಾಲುಚೀಲಕ್ಕೆ ಅಂಟಿಕೊಂಡು ಎಳೆದರೂ ಸುಲಭವಾಗಿ ಬರಲಿಲ್ಲ. ಬೂಟು ಕಳಚುವ ಪ್ರಯತ್ನದಿಂದ ಈ ಅಸಂಗತ ಅಸಂಬದ್ಧ ಪ್ರಯತ್ನದಿಂದ ಅವಳಿಗೆ ನಗು ಬಂದಿತು. ಕೇಳಿಸಿಯೂ ಕೇಳಿಸದಂಥ ನಗು. ಆದರೆ, ಅವನಿಗೆ ಈ ನಗು ಕೇಳಿಸಿರುತ್ತದೆ, ನಾನು ಬಯಸಿದಂತೆಯೇ ವಿಚಲಿತನಾಗಿರುತ್ತಾನೆ ಅನ್ನಿಸಿ ಸ್ವಲ್ಪ ಜೋರಾಗಿ ನಕ್ಕಳು. ಆ ನಗು, ಸಹಜ ಖುಷಿಯ ಮೆಲುನಗು ಅವಳು ಬಯಸಿದಂಥದೇ ಪರಿಣಾಮ ಮಾಡಿತ್ತು ಅವನ ಮೇಲೆ.
'ಪ್ರೀತಿ ಮಾಡಿದರೆ ಇಂಥವನನ್ನು ಪ್ರೀತಿಮಾಡಬೇಕು. ಆ ಕಣ್ಣು, ಅಷ್ಟು ಸರಳವಾದ ಉದಾತ್ತ ಅನ್ನಿಸುವಂಥ ಮುಖ, ಅಲ್ಲದೆ ಏನೇ ಪ್ರಾರ್ಥನೆ ಹೇಳಿಕೊಂಡರೂ ಬಚ್ಚಿಡಲಾಗದ ಅವನ ಬಯಕೆ! ಇಂಥ ವಿಚಾರದಲ್ಲಿ ಹೆಂಗಸರನ್ನು ಮೋಸ ಮಾಡುವುದಕ್ಕೆ ಆಗುವುದಿಲ್ಲ. ಕಿಟಕಿಯ ಗಾಜಿಗೆ ಮುಖ ಒತ್ತಿ ನನ್ನ ನೋಡಿದನಲ್ಲ ಆಗಲೇ ನನ್ನ ಮೇಲೆ ಆಸೆ ಇದೆ ಎಂದು ಅವನಿಗೂ ಗೊತ್ತಾಗಿಬಿಟ್ಟಿತ್ತು. ನನ್ನ ಮೇಲೆ ಹುಟ್ಟಿದ ಆಸೆ ಅವನ ಕಣ್ಣಿನ ಆಳದಲ್ಲಿ ಕಾಣಿಸಿ ಮುದ್ರೆ ಒತ್ತಿಬಿಟ್ಟಿತ್ತು' ಅಂದುಕೊಂಡಳು.
'ಹೌದು, ನನ್ನ ಮೇಲೆ ಆಸೆ ಇದೆ ಅವನಿಗೆ' ಅಂದುಕೊಳ್ಳುತ್ತಾ ಕೊನೆಗೂ ಬೂಟು ಕಳಚಿದಳು. ಇನ್ನು ಎಲಾಸ್ಟಿಕ್ ಹಾಕಿದ ಉದ್ದನೆಯ ಸ್ಟಾಕಿಂಗ್ ತೆಗೆಯಲು ಸ್ಕರ್ಟನ್ನು ಮೇಲೆತ್ತಬೇಕಾಗಿತ್ತು. ನಾಚಿಕೆ ಅನ್ನಿಸಿತು.
'ಈ ಕಡೆ ಬರಬೇಡಿ!' ಅಂದಳು.
ಗೋಡೆಯ ಆ ಬದಿಯಿಂದ ಉತ್ತರ ಬರಲಿಲ್ಲ. ಪ್ರಾರ್ಥನೆಯ ಲಯ ಮಾತ್ರ ಕೇಳಿಸುತ್ತಿತ್ತು. ಮತ್ತೆ ಏನೋ ಓಡಾಡಿದ ಹಾಗೆ ಸದ್ದು.
'ಮೊಳಕಾಲೂರಿ ಪ್ರಾರ್ಥನೆ ಮಾಡುತ್ತಿರಬೇಕು, ಅನುಮಾನವೇ ಇಲ್ಲ' ಅಂದುಕೊಂಡಳು. 'ಯಾವ ಪ್ರಾರ್ಥನೆ ಎಷ್ಟು ಬೇಕಾದರೂ ಮಾಡಲಿ, ನನ್ನ ಬಗ್ಗೆಯೇ ಯೋಚನೆ ಮಾಡುತ್ತಿರುತ್ತಾನೆ, ನನಗೆ ಗೊತ್ತು. ಈ ಕಾಲು, ಈ ಪಾದಗಳ ಬಗ್ಗೆ ನನಗೆ ಇರುವಂಥದೇ ಫೀಲಿಂಗು ಅವನಲ್ಲೂ ಇದೆ' ಅಂದುಕೊಳ್ಳುತ್ತಾ ಒದ್ದೆ ಸ್ಟಾಕಿಂಗುಗಳನ್ನು ತೆಗದು, ಬರಿಗಾಲನ್ನು ಒಣ ಹುಲ್ಲಿನ ಚಾಪೆಯಮೇಲೆ ಒತ್ತಿ ಉಜ್ಜಿ, ಕೊಂಚ ಶಾಖ ಹುಟ್ಟಲೆಂದು ಕಾಲುಮಡಚಿಕೊಂಡು, ಎರಡೂ ಕೈಯಲ್ಲಿ ಮೊಳಕಾಲುಗಳನ್ನು ಗಟ್ಟಿಯಾಗಿ ಅಪ್ಪಿಕೊಂಡು ಕೂತಳು. 'ನಾವು ಕಾಡಿನ ಮಧ್ಯೆ ಇದ್ದೇವೆ. ಎಷ್ಟೊಂದು ಮೌನ. ಇಲ್ಲಿ ಏನು ಮಾಡಿದರೂ ಯಾರಿಗೂ ಗೊತ್ತಾಗುವುದಿಲ್ಲ...' ಅಂದುಕೊಂಡಳು.
ಎದ್ದಳು. ಒದ್ದೆ ಸ್ಟಾಕಿಂಗುಗಳನ್ನು ಅಗ್ಗಿಷ್ಟಿಕೆಯ ಹತ್ತಿರ ತೆಗೆದುಕೊಂಡು ಹೋಗಿ ಒಣಗಿಹಾಕಿದಳು. ಬರಿಗಾಲುಗಳನ್ನು ಮೆಲ್ಲನೆ ಎತ್ತಿಡುತ್ತಾ ಮರಳಿ ಬಂದು ಬೆಂಚಿನ ಮೇಲೆ, ಕಾಲು ಮೇಲಿಟ್ಟುಕೊಂಡು, ಕುಳಿತಳು. ಅತ್ತಕಡೆಯ ರೂಮಿನಲ್ಲಿ ಸಂಪೂರ್ಣ ಮೌನವಿತ್ತು. ತನ್ನ ಪುಟ್ಟ ಕೈಗಡಿಯಾರ ನೋಡಿಕೊಂಡಳು. ಎರಡು ಗಂಟೆಯಾಗಿತ್ತು. 'ನಮ್ಮವರೆಲ್ಲ ಪಾರ್ಟಿ ಮುಗಿಸಿ ಬರುವ ಹೊತ್ತಿಗೆ ಮೂರು ಗಂಟೆಯಾಗಬಹುದು' ಎಂದುಕೊಂಡಳು. ಇನ್ನು ಇರುವುದು ಒಂದೇ ಗಂಟೆ ಸಮಯ. 'ನಾನು ಒಬ್ಬಳೇ ಹೀಗೇ ಕೂತಿರಲೇ? ನಾನ್‌ಸೆನ್ಸ್. ಖಂಡಿತ ಒಬ್ಬಳೇ ಹೀಗೆ ಕೂತಿರುವುದಿಲ್ಲ. ಅವನನ್ನೂ ಕರೆಯುತ್ತೇನೆ' ಅಂದುಕೊಂಡಳು.
'ಫಾದರ್ ಸೆರ್ಗಿಯಸ್, ಫಾದರ್ ಸೆರ್ಗಿಯಸ್! ಸೆರ್ಗೆ ದಿಮಿತ್ರಿಚ್! ಪ್ರಿನ್ಸ್ ಕಸಾಟ್ಸ್‌ಕಿ!' ಎಂದು ಕೂಗಿದಳು.
ಗೋಡೆಯ ಆ ಬದಿಯಲ್ಲಿ ಮೌನ ಮಾತ್ರವೇ ಇತ್ತು.
'ಇಷ್ಟೊಂದು ಕ್ರೂರಿಗಳಾಗಬೇಡಿ. ಅನಿವಾರ್ಯ ಆಗದಿದ್ದರೆ ನಾನು ಇಲ್ಲಿಗೆ ಬರುತ್ತಲೇ ಇರಲಿಲ್ಲ. ನನಗೆ ಹುಷಾರಿಲ್ಲ. ಏನೇನೋ ಆಗುತ್ತಿದೆ!' ನರಳುವ ದನಿಯಲ್ಲಿ ಹೇಳಿದಳು. 'ಅಮ್ಮಾ, ಅಯ್ಯೋ!' ಎಂದು ನರಳಿದಳು. ಬೆಂಚಿನ ಮೇಲೆ ಒರಗಿ ಮಲಗಿದಳು. ವಿಚಿತ್ರವಾದರೂ 'ನಿಜವಾಗಿ ಹುಷಾರು ತಪ್ಪಿದೆ, ವೀಕ್ ಆಗುತ್ತಿದ್ದೇನೆ' ಅನ್ನಿಸತೊಡಗಿತು ಅವಳಿಗೆ. ಎಚ್ಚರ ತಪ್ಪುತ್ತಿತ್ತು, ಮೈಯೆಲ್ಲ ನೋಯುತ್ತಿತ್ತು, ಜ್ವರ ಬಂದು ಮೈ ನಡುಗುತ್ತಿತ್ತು.
'ಏನಾಗುತ್ತಿದೆಯೋ ಗೊತ್ತಾಗುತ್ತಿಲ್ಲ. ಅಯ್ಯೋ, ಅಮ್ಮಾ! ದಯವಿಟ್ಟು ಬಂದು ಹೆಲ್ಪುಮಾಡಿ!' ಅನ್ನುತ್ತಾ ಡ್ರೆಸ್ಸು ಸಡಿಲಮಾಡಿಕೊಂಡಳು. ಎದೆ ಕಾಣುತ್ತಿತ್ತು. ಮುಂಗೈಯವರೆಗೆ ಬತ್ತಲಾಗಿದ್ದ ಕೈಗಳನ್ನು ಮೇಲೆತ್ತಿ ಅಯ್ಯೋ ಎಂದು ನರಳಿದಳು.
ಅವನು ಗೋಡೆಯ ಆ ಬದಿಯಲ್ಲಿ ನಿಂತಿದ್ದ. ಪ್ರಾರ್ಥನೆಮಾಡುತ್ತಿದ್ದ. ಸಂಜೆಯ ಪ್ರಾರ್ಥನೆಗಳನ್ನೆಲ್ಲ ಹೇಳಿಕೊಂಡ. ನಿಶ್ಚಲವಾಗಿದ್ದ. ಮೂಗಿನ ತುದಿಯ ಮೇಲೆಯೇ ದೃಷ್ಟಿ ನಟ್ಟು ಮನಸ್ಸಿನಲ್ಲೇ 'ಪ್ರಭೂ ಏಸು! ದೇವ ಪುತ್ರ! ನನ್ನ ಮೇಲೆ ಕರುಣೆ ತೋರು!' ಎಂದು ಹೇಳಿಕೊಂಡ.
ಎಲ್ಲ ಮಾತು, ಎಲ್ಲ ಸದ್ದು ಕೇಳಿಸಿಕೊಂಡಿದ್ದ. ಉಡುಪು ಕಳಚಿದಾಗ ಆದ ರೇಶಿಮೆ ಬಟ್ಟೆಯ ಸದ್ದು, ಬರಿಗಾಲಿನಲ್ಲಿ ಅಗ್ಗಿಷ್ಟಿಕೆಯ ಬಳಿಗೆ ಹೋದಾಗ ಆದ ಹೆಜ್ಜೆಯ ಸದ್ದು, ಶಾಖ ಹುಟ್ಟಲೆಂದು ಅಂಗೈಯಲ್ಲಿ ಕಾಲುಗಳನ್ನು ತಿಕ್ಕಿಕೊಂಡಾಗ ಆದ ಸದ್ದು, ಎಲ್ಲ ಕೇಳಿಸಿಕೊಂಡಿದ್ದ.
ಶಕ್ತಿ ಕುಂದುತ್ತಿದೆ, ಯಾವ ಕ್ಷಣದಲ್ಲಾದರೂ ಸೋತುಬಿಡಬಹುದು ಅನ್ನಿಸಿತು. ಅದಕ್ಕೇ ನಿರಂತರವಾಗಿ ಪ್ರಾರ್ಥನೆ ಹೇಳಿಕೊಳ್ಳುತ್ತಿದ್ದ. 'ಕಥೆಗಳಲ್ಲಿ ಬರುತ್ತಾನಲ್ಲ ನಾಯಕ, ತಪ್ಪಿಯೂ ಹಿಂದಕ್ಕೆ ತಿರುಗಿ ನೋಡದೆ ಮುಂದೆ ಮುಂದೆಯೇ ಸಾಗಬೇಕಾಗಿರುವವನು, ಅವನ ಮನಸ್ಥಿತಿಯ ಹಾಗೇಯೇ ನನ್ನದೂ ಇದೆ, ತಲೆಯ ಮೇಲೆ, ಹಿಂದೆ, ಮುಂದೆ, ಸುತ್ತಲೂ ಅಪಾಯ ಕಾದಿದೆ, ವಿನಾಶ ಕಾದಿದೆ, ಒಂದೇ ಒಂದು ಕ್ಷಣ ಕಣ್ಣಿಟ್ಟು ನೋಡಿದರೂ ನಾಶವಾಗಿಬಿಡುತ್ತೇನೆ' ಅನ್ನಿಸಿತು. ಆದರೆ ಇದ್ದಕ್ಕಿದ್ದಂತೆ ನೋಡುವ ಆಸೆಗೆ ವಶನಾಗಿಬಿಟ್ಟ. ಅದೇ ಕ್ಷಣ ಆಕೆ,
'ನೀವು ಮನುಷ್ಯರೇ ಅಲ್ಲ, ಸಾಯುತ್ತಾ ಬಿದ್ದಿದ್ದೇನೆ' ಅಂದಳು.
'ಅವಳ ಹತ್ತಿರ ಹೋಗುತ್ತೇನೆ. ಸಂಭೋಗಕ್ಕೆ ಆಹ್ವಾನಮಾಡಿದ ಹೆಂಗಸಿನ ಮೈ ಮೇಲೆ ಒಂದು ಕೈ ಇಟ್ಟು ಇನ್ನೊಂದನ್ನು ಉರಿಯುವ ಅಗ್ಗಿಷ್ಟಿಕೆಯಲ್ಲಿಟ್ಟುಕೊಂಡಿದ್ದ ಸಂತನ ಹಾಗೆ ಹೋಗುತ್ತೇನೆ. ಇಲ್ಲಿ ಅಗ್ಗಿಷ್ಟಿಕೆ ಇಲ್ಲವಲ್ಲಾ..' ದೀಪ! ಉರಿಯನ್ನು ಸಹಿಸಲು ಹಲ್ಲು ಕಚ್ಚಿಕೊಂಡು ದೀಪದ ಜ್ವಾಲೆಗೆ ಒಂದು ಬೆರಳು ಚಾಚಿದ. ಬಹಳ ಹೊತ್ತೇ ಆಯಿತೋ ಏನೋ, ಅವನಿಗೇನೂ ಅನ್ನಿಸಲೇ ಇಲ್ಲ. ತಟ್ಟನೆ, ಉರಿ ನೋವು ಸಹಿಸಲು ಆಗುವುದಿಲ್ಲವೆಂದೋ, ಇಷ್ಟು ಸಾಕು ಎಂದೋ, ಮುಖ ಕಿವುಚಿಕೊಂಡು, ಕೈ ಹಿಂದಕ್ಕೆಳೆದುಕೊಂಡು ಗಾಳಿಯಲ್ಲಿ ಜೋರಾಗಿ ಕೊಡವಿದ. 'ಬೆಂಕಿಯ ಉರಿ ಸಹಿಸಲಾರೆ!' ಅಂದುಕೊಂಡ.
'ದಮ್ಮಯ್ಯಾ ಅನ್ನುತ್ತೇನೆ, ಬೇಗ ಬನ್ನಿ! ಸಾಯುತ್ತಾ ಇದ್ದೇನೆ! ಅಯ್ಯೋ, ಅಮ್ಮಾ!'
'ಹಾಗಾದರೆ ನಾಶವಾಗುವುದೇ ವಿಧಿಯೇ? ಇಲ್ಲ. ಹಾಗೆ ನಾಶವಾಗಬಾರದು' ಅಂದುಕೊಂಡ.
'ಇಗೋ ಬಂದೆ' ಅನ್ನುತ್ತಾ ಬಾಗಿಲು ತೆರೆದ. ಅವಳತ್ತ ಒಮ್ಮೆಯೂ ನೋಡದೆ ರೂಮನ್ನು ದಾಟಿಕೊಂಡು ಹೊರಬಾಗಿಲ ಹತ್ತಿರ ಹೋದ. ಅವನು ಸೌದೆ ಕಡಿಯುತ್ತಿದ್ದದ್ದೇ ಅಲ್ಲಿ. ಮೂಲೆಯಲ್ಲಿ ಗೋಡೆಗೆ ಒರಗಿಸಿದ್ದ ಸಣ್ಣ ಕೊಡಲಿ ಹುಡುಕಿ ಎತ್ತಿಕೊಂಡ. ಒಣ ಮರದ ಪುಟ್ಟದೊಂದು ತುಂಡು ಆರಿಸಿಕೊಂಡ.
'ಇಗೋ ಬಂದೆ!' ಅನ್ನುತ್ತಾ ಬಲಗೈಯಲ್ಲಿ ಕೊಡಲಿ ಹಿಡಿದು, ಎಡಗೈಯ ತೋರುಬೆರಳನ್ನು ಮರದ ತುಂಡಿನಮೇಲಿಟ್ಟು, ಬೆರಳಿನ ಎರಡನೆಯ ಕೀಲಿನ ಕೆಳಕ್ಕೆ ಸರಿಯಾಗಿ ಗುರಿಯಿಟ್ಟು ಕೊಡಲಿ ಬೀಸಿದ. ಬೆರಳಿನಷ್ಟೆ ದಪ್ಪದ ಕಟ್ಟಿಗೆ ತುಂಡಾಗುವುದಕ್ಕಿಂತ ಸುಲಭವಾಗಿ ಕತ್ತರಿಸಿಹೋಯಿತು. ತುಂಡಾದ ಬೆರಳು ಗಾಳಿಯಲ್ಲಿ ಹಾರಿ, ಮರದ ತುಂಡಿನ ಅಂಚಿನ ಮೇಲೆ ಬಿದ್ದು, ನೆಲಕ್ಕೆ ಉರುಳಿತು. ನೋವು ಅನ್ನಿಸುವ ಮೊದಲೇ ಬೆರಳ ತುಂಡು ನೆಲಕ್ಕೆ ಬಿದ್ದ ಕಿರು ಸದ್ದು ಕೇಳಿಸಿತು. ನೋವಾಗುತ್ತಿಲ್ಲವಲ್ಲ ಎಂದು ಆಶ್ಚರ್ಯಪಡುವುದಕ್ಕೂ ಮೊದಲೇ ಅತಿಯಾದ ನೋವು, ಉಳಿದ ಬೆರಳುಗಳ ಮೇಲೆ ಬಿದ್ದು ಹರಿಯುತ್ತಿರುವ ರಕ್ತದ ಬಿಸಿ ಅನುಭಕ್ಕೆ ಬಂದಿತು. ತಟ್ಟನೆ ಬೆರಳಿಗೆ ತನ್ನ ಕ್ಯಾಸಕ್ಕಿನ ಅಂಚು ಸುತ್ತಿಕೊಂಡು, ತೊಡೆಗೆ ಒತ್ತಿ ಹಿಡಿದುಕೊಂಡು, ರೂಮಿಗೆ ಹಿಂದಿರುಗಿ ಬಂದು, ಹೆಂಗಸಿನ ಮುಂದೆ ನಿಂತು, ಕಣ್ಣು ತಗ್ಗಿಸಿ, ಮೆಲು ದನಿಯಲ್ಲಿ

'ನಿಮಗೇನು ಬೇಕು?' ಎಂದ.
ಬಿಳಿಚಿಕೊಂಡ ಅವನ ಮುಖ, ಅದುರುತ್ತಿರುವ ಅವನ ಎಡಗೆನ್ನೆ ಕಂಡು ಅವಳಿಗೆ ನಾಚಿಕೆ ಅನ್ನಿಸಿತು. ತಟ್ಟನೆ ಎದ್ದು ಕೋಟನ್ನು ಹೊದ್ದುಕೊಂಡು ಅದರ ಅಂಚುಗಳನ್ನು ಬಿಗಿಯಾಗಿ ಹಿಡಿದುಕೊಂಡಳು. 'ನೋವಾಗುತ್ತಿತ್ತು... ಚಳಿ ಚಳಿ ಅನ್ನಿಸಿತು...ನಂಗೆ...ಫಾದರ್ ಸೆರ್ಗಿಯಸ್...ನಾನು...' ಅವನು ಕಣ್ಣೆತ್ತಿ ನೋಡಿದ. ಆನಂದದ ತಣ್ಣನೆಯ ಬೆಳಕು ಅವನ ಕಣ್ಣಲ್ಲಿತ್ತು. ಅವಳನ್ನೇ ನೋಡುತ್ತಾ, 'ಸೋದರೀ, ನಿನ್ನ ಆತ್ಮವನ್ನು ಅದೇಕೆ ಹಾಳುಮಾಡಿಕೊಳ್ಳುವೆ? ಲೋಕದಲ್ಲಿ ಪ್ರಲೋಭನೆಗಳು ಇರಲೇಬೇಕು. ಆದರೆ ಯಾರ ಮೂಲಕ ಪ್ರಲೋಭನೆಗಳು ತಲೆ ಎತ್ತುತ್ತವೆಯೋ ಅವರ ಗತಿ ಮಾತ್ರ ಯಾರಿಗೂ ಬೇಡ. ದೇವರು ನಮ್ಮನ್ನು ಕ್ಷಮಿಸಲಿ ಎಂದು ಪ್ರಾರ್ಥನೆ ಮಾಡು.'
ಮಾತು ಕೇಳಿಸಿಕೊಳ್ಳುತ್ತಾ ಅವನನ್ನೇ ನೋಡಿದಳು. ಇದ್ದಕ್ಕಿದ್ದ ಹಾಗೆ ತೊಟ್ಟಿಕ್ಕುವ ಸದ್ದು ಕೇಳಿಸಿತು. ನೋಡಿದಳು. ಅವನ ಕೈಯಿಂದ ರಕ್ತ ಹರಿದು, ಕ್ಯಾಸಕ್ ನೆನೆದು, ನೆಲಕ್ಕೆ ಹನಿ ಹನಿ ತೊಟ್ಟಿಕ್ಕುತ್ತಿತ್ತು.
ಕೆಲವು ಕ್ಷಣಗಳ ಮೊದಲು ಕೇಳಿಸಿದ್ದ ಸದ್ದನ್ನು ನೆನೆದಳು. ದೀಪ ಹಿಡಿದು ತಲೆಬಾಗಿಲ ಹತ್ತಿರ ಓಡಿದಳು. ಅಲ್ಲಿ ನೆಲದ ಮೇಲೆ ತುಂಡಾಗಿ ಬಿದ್ದಿದ್ದ ಬೆರಳನ್ನು ಕಂಡಳು. ಅವನ ಮುಖಕ್ಕಿಂತ ಹೆಚ್ಚಾಗಿ ಮುಖ ಬಿಳಿಚಿಕೊಂಡು ನಿಧಾನವಾಗಿ ವಾಪಸ್ಸು ಬಂದಳು. ಅವನಿಗೆ ಏನೋ ಹೇಳಬೇಕು ಅನ್ನುವಷ್ಟರಲ್ಲಿ ಅವನು ನಿಶ್ಶಬ್ದವಾಗಿ ತನ್ನ ಕೋಣೆಗೆ ಹೋಗಿ ಬಾಗಿಲು ಹಾಕಿಕೊಂಡುಬಿಟ್ಟ.
'ನನ್ನನ್ನು ಕ್ಷಮಿಸಿ! ಈ ಪಾಪ ಪರಿಹಾರ ಆಗುವುದಕ್ಕೆ ಏನು ಮಾಡಲಿ?'
'ಹೋಗು.'
'ನಿಮ್ಮ ಗಾಯಕ್ಕೆ ಬಟ್ಟೆ ಕಟ್ಟುತ್ತೇನೆ.'
'ಹೋಗು.'
ಆತುರಾತುರವಾಗಿ, ನಿಶ್ಶಬ್ದವಾಗಿ ಬಟ್ಟೆ ತೊಟ್ಟು ಕಾಯುತ್ತ ಕುಳಿತಳು. ಸ್ಲೆಡ್ಜ್ ಗಾಡಿಯ ಗಂಟೆಗಳ ಸದ್ದು ಕೇಳಿಸಿತು.
'ಫಾದರ್ ಸೆರ್ಗಿಯಸ್, ನನ್ನನ್ನು ಕ್ಷಮಿಸಿ!'
'ಹೊರಟು ಹೋಗು. ದೇವರು ಕ್ಷಮಿಸುತ್ತಾನೆ.'
'ಫಾದರ್ ಸೆರ್ಗಿಯಸ್! ಇನ್ನುಮೇಲೆ ನಾನು ಬದುಕುವ ರೀತಿ ಬದಲಾಯಿಸಿಕೊಳ್ಳುತ್ತೇನೆ. ನನ್ನ ಕೈಬಿಡಬೇಡಿ!'
'ಹೊರಟು ಹೋಗು!'
'ಕ್ಷಮಿಸಿ--ಆಶೀರ್ವಾದ ಮಾಡಿ!'
'ದೇವಾ, ದೇವ ಪುತ್ರಾ, ಪವಿತ್ರಾತ್ಮಾ...' ಅವನ ಧ್ವನಿ ಕೇಳಿಸುತ್ತಿತ್ತು. 'ಹೊರಟುಹೋಗು.'
ಬಿಕ್ಕಳಿಸಿ ಅಳುತ್ತಾ ಆಕೆ ಹೊರಗೆ ನಡೆದಳು. ಸ್ವಾಗತಿಸಲು ಲಾಯರು ಎರಡು ಹೆಜ್ಜೆ ಮುಂದೆ ಬಂದ.
'ನಾನು ಬೆಟ್ ಸೋತಿದ್ದೇನೆ. ಏನೂ ಮಾಡುವುದಕ್ಕೆ ಆಗುವುದಿಲ್ಲ. ಎಲ್ಲಿ ಕೂರುತ್ತೀರಿ ಹೇಳಿ' ಅಂದ.
''ಎಲ್ಲಿದ್ದರೂ ಒಂದೇ' ಅಂದಳು. ಸ್ಲೆಡ್ಜ್ ಏರಿದಳು. ಮನೆ ತಲುಪುವವರೆಗೆ ಒಂದೂ ಮಾತಾಡಲಿಲ್ಲ.
ಒಂದು ವರ್ಷದ ನಂತರ ಅವಳು ಕಾನ್ವೆಂಟಿಗೆ ಸೇರಿ ಸಂನ್ಯಾಸಿನಿಯಾದಳು. ಸಂನ್ಯಾಸಿ ಗುರು ಆರ್ಸ್ನೆಯ ಮಾರ್ಗದರ್ಶನದಲ್ಲಿ ಸರಳವಾದ ಕಠಿಣವಾದ ಬದುಕು ಸಾಗಿಸಿದಳು. ಫಾದರ್ ಆರ್ಸ್ನೆ ಅವಳಿಗೆ ಆಗಾಗ ಪತ್ರ ಬರೆಯುತ್ತಿದ್ದ.


(ಮುಂದುವರೆಯುವುದು)


ಬಿರೆಟಾ*- ನಾಲ್ಕು ಶಿಖರದಂಥ ಮೂಲೆಗಳುಳ್ಳ ಟೊಪ್ಪಿಗೆ, ಪಾದರಿಗಳು ಕರಿಯ ಬಣ್ಣದ, ಮುಖ್ಯಪಾದರಿಗಳು ಪರ್ಪಲ್ ಮಿಶ್ರಿತ ಕರಿಯ ಬಣ್ಣದ, ಆರ್ಚ್‌ಬಿಷಪ್ ಪರ್ಪಲ್ ಬಣ್ಣದ ಟೊಪ್ಪಿಗೆ ಧರಿಸುತ್ತಾರೆ.
ನಿಯಮಗಳು*-ರೂಲ್ಸ್,ಬೈಬಲ್ಲಿನ ಭಾಗ

Rating
No votes yet