೮೪ರ ಹರಯದ ಉತ್ಸಾಹಿ ರಂಗ ನಟ - ಚನ್ನಬಸಯ್ಯ ಗುಬ್ಬಿ

೮೪ರ ಹರಯದ ಉತ್ಸಾಹಿ ರಂಗ ನಟ - ಚನ್ನಬಸಯ್ಯ ಗುಬ್ಬಿ

ಬರಹ

ಅಮರೇಶ್ವರ ವಿಜಯ ನಾಟಕ ಮಂಡಳಿಯು ಒಂದು ಸಂಸ್ಥಾಪಿತವಾದ ನೋಂದಾಯಿತ ವೃತ್ತಿ ನಾಟಕ ಕಂಪನಿ. ಈ ಕಂಪನಿಯನ್ನು ತಮ್ಮ ಎಂಭತ್ತರ ದಶಕದಲ್ಲಿರುವ ನಾಟಕ ರಂಗದ ಉನ್ನತ ಕಲಾಕಾರ ಶ್ರೀ ಚನ್ನಬಸಯ್ಯ ಗುಬ್ಬಿಯವರು ಹುಟ್ಟುಹಾಕಿ, ಸ್ಥಾಪನೆ ಮಾಡಿದರು. ಅವರ ಹೆಸರೇ ಹೇಳುವಂತೆ ಶ್ರೀಯುತರು ತುಮಕೂರು ಜಿಲ್ಲೆಯ ಗುಬ್ಬಿ ಗ್ರಾಮ (ಈಗ ಪಟ್ಟಣ)ದವರು. ೧೯೪೫ರಲ್ಲಿ ಅವರು ಚಿತ್ತರಗಿಯ ಸುಪ್ರಸಿದ್ದ ನಾಟಕಕಾರ ಗಂಗಾಧರ ಶಾಸ್ತ್ರಿಗಳ ಕುಮಾರ ವಿಜಯ ನಾಟಕ ಸಂಘ ಚಿತ್ತರಗಿಯನ್ನು ಸೇರಿ ತಮ್ಮ ಕಾಯಕವನ್ನು ಪ್ರಾರಂಭಿಸಿದರು. ಆನಂತರ ೧೯೬೦ರ ದಶಕದಲ್ಲಿ ಅವರು ಜಮಖಂಡಿಯ ಗಜಾನನ ಸಂಗೀತ ನಾಟಕ ಮಂಡಳಿಯಲ್ಲಿಯೂ ದುಡಿದರು.

೧೯೮೧ರಲ್ಲಿ ಶ್ರೀಯುತರು ರಾಯಚೂರು ಜಿಲ್ಲೆಯ ಗುರುಗುಂಟೆ ಎಂಬಲ್ಲಿ ತಮ್ಮದೇ ಆದ ಅಮರೇಶ್ವರ ನಾಟ್ಯ ಸಂಘವನ್ನು ಸ್ಥಾಪಿಸಿದರು. ಅವರು ಈ ಕಾರ್ಯದಲ್ಲಿ ಮಹತ್ತರವಾದ ಸಾಧನೆಯನ್ನು ಕಂಡು,ರಾಯಚೂರು, ಬಿಜಾಪುರ ಮತ್ತು ಗುಲ್ಬರ್ಗ ಜಿಲ್ಲೆಗಳಲ್ಲಿ ಸಂಚರಿಸಿ ವ್ಯಾಪಕ ನಾಟಕ ಪ್ರದರ್ಶನಗಳನ್ನು ನೀಡಿದರು. ೧೯೮೫ರಲ್ಲಿ ಪ್ರಕೃತಿ ವಿಕೋಪಕ್ಕೆ ಒಳಗಾಗಿ, ಎಂದರೆ ಬಿರುಗಾಳಿಗೆ ಸಿಕ್ಕಿ ಅವರ ನಾಟಕ ಮಂಡಳಿಯ ಸುಮಾರು ಒಂದು ಲಕ್ಷ ಮೌಲ್ಯದ ಸಮಸ್ಥ ಪರಿಕರಗಳೂ ನಾಶವಾಗಿಹೋದವು.

ಪ್ರಕೃತಿ ವಿಕೋಪದಲ್ಲಿ ಗುಬ್ಬಿಯವರು ತಮ್ಮ ಪರಿಕರಗಳನ್ನು ಕಳೆದುಕೊಂಡರೇ ವಿನಃ ತಮ್ಮ ಉತ್ಸಾಹ ಮತ್ತು ಆತ್ಮ ಸ್ಥೈರ್ಯವನ್ನಲ್ಲ. ಆರು ತಿಂಗಳಿನ ನಂತರ ಅವರೌ ಮತ್ತೆ ಅಮರೇಶ್ವರ ವಿಜಯ ನಾಟಕ ಮಂಡಳಿ ಎಂಬ ನಾಟಕವನ್ನು ಮತ್ತೂ ಹೆಚ್ಚಿನ ಧೈರ್ಯ ಮತ್ತು ಸ್ಥೈರ್ಯಗಳಿಂದ ಕಟ್ಟಿದರು ಈ ನಾಟಕ ಮಂಡಳಿಯಲ್ಲಿ ಪಾತ್ರವಹಿಸಲು ಅವರು ಹವ್ಯಾಸಿ ಹಾಗು ವ್ರುತ್ತಿ ನಟರನ್ನು ಒಂದುಗೂಡಿಸಿ ಬಳಸಿಕೊಂಡರು. ಬೆಂಗಳೂರು, ಮಂಡ್ಯ, ಹಾಸನ ಮತ್ತು ತುಮಕೂರು ಜಿಲ್ಲೆಗಳಲ್ಲಿ ಅವ್ಯಾಹತವಾಗಿ ನಾಟಕ ಪ್ರದರ್ಶನಗಳನ್ನು ನೀಡಿ ಸೈ ಎನಿಸಿಕೊಂಡರು. ಅವರ ಅತ್ಯಂತ ಜನಪ್ರಿಯ ನಾಟಕಗಳೆಂದರೆ ಶ್ರೀ ಗಂಗಾಧರ ಶಾಸ್ತ್ರಿ ವಿರಚಿತ ಸೌಭಾಗ್ಯಲಕ್ಷ್ಮಿ ಮತ್ತು ಶ್ರೀ ಕೆ.ಎನ್. ಸಲುಂಕಿಯವರ ದೇವರಿಗೆ ನೆನಪಿಲ್ಲ. ಇವೆರಡು ಅವರ ಅತಿ ಪ್ರಭಾವಯುಕ್ತ ನಾಟಕಗಳೆಂದು ಹೆಸರು ಗಳಿಸಿದವು. ಅವರಿಗೆ ಹೆಸರು ತಂದ ಇನ್ನಿತರ ನಾಟಕಗಳೆಂದರೆ ಹೆಚ್.ಎನ್. ಹೂಗಾರರ ಪುತ್ತಳಿಗೊಂಬೆ, ಮಾತೃವಾತ್ಸಲ್ಯ, ವರದಕ್ಷಿಣೆ ಮತ್ತು ಚಾರಿತ್ರಿಕ ನಾಟಕ ಬೆಂಗಾಳೂರ ಭಾಗ್ಯಲಕ್ಷ್ಮಿ ಹಾಗು ಜಾನಪದ ನಾಟಕ ಶಿಲಾಲಿಪಿ.

೮೪ರ ಹರಯದ ಅವರ ರಂಗ ಸೇವೆಗೆ ಈಗ ೬೦ರ ಹರಯ. ಇವರು ಸ್ಥಾಪಿಸಿದ ಶ್ರೀ ಅಮರೇಶ್ವರ ವಿಜಯ ನಾಟಕ ಮಂಡಳಿಗೆ ೨೬ರ ಹರಯ. ಸಂಘವು ಇತ್ತೀಚೆಗಷ್ಟೇ ತನ್ನ ಜನ್ಮದಿನದ ರಜತ ಮಹೋತ್ಸವವನ್ನು ವಿಜೃಂಭಣೆಯಿಂದ ಆಚರಿಸಿಕೊಂಡಿತು. ಮಳೆ ಬಂದಾಗ ತಲೆ ಎತ್ತಿ, ಬಿಸಿಲು ಕಂಡೊಡನೆಯೇ ಮಾಯವಾಗುವ ಅಣಬೆಗಳಂತೆ ಹುಟ್ಟಿ ಮಾಯವಾಗುವುದೇ ರಂಗ ಸಂಸ್ಥೆಗಳ ಹಣೆ ಬರಹವಾಗಿರುವಾಗ, ಇಂತಹ ದಶಕಗಳ ಇತಿಹಾಸ ಹೊಂದಿರುವ ಈ ಸಂಸ್ಥೆ ಗುಬ್ಬಿಯವರ ದೃಢಕಾಯದಂತೆಯೇ ಸದೃಢ.

ಕಾರಣ, ತಮ್ಮ ಕೈಂಕರ್ಯವನ್ನು ಅವರು ಹಣಕ್ಕಾಗಿ ಮಾಡದೆ, ಕಲೆಗಾಗಿ ಮಾಡುತ್ತಾ ಬರುತ್ತಿರುವುದು. ಈ ನಿಟ್ತಿನಲ್ಲಿ ಹಲವಾರು ಚರಿತ್ರೆಯ ಪುಟಗಳಿಮ್ದ ಆರಿಸಿಕೊಂಡ, ಚರಿತ್ರೆಯಿಂದ ಮರೆಯಾಗಿ ಹೊಗಿರುವಂತಹ ಹಾಗು ಚರಿತ್ರಕಾರರ ಗಮನಕ್ಕೆ ಬಾರದಿರುವಂತಹ ಹಲವಾರು ವಿಷಯಗಳನ್ನು ಕಾಲದಾಳದಿಂದ ಹೆಕ್ಕಿ ತೆಗೆದು, ಅದಕ್ಕೆ ಕಥೆ ಹೆಣೆದು, ಇಲ್ಲವೇ ತಜ್ಞರಿಂದ ಬರೆಯಿಸಿ, ನಾಟಕದ ರೂಪ ಕೊಟ್ಟು ರಂಗದ ಮೇಲೆ ತಂದಾಡಿಸಿ, ಕಾಲಚಕ್ರದಲ್ಲಿ ಮರೆಯಾಗಿ ಹೋಗುತ್ತಿದ್ದ ಮಕುಟಮಣಿಗಳಿಗೆ ಹೊಸ ಹೊಳಪು ನೀಡುತ್ತಿರುವ ವ್ಯಕ್ತಿ ಇವರು. ಈ ಯತ್ನದಲ್ಲಿ ಇವರಿಗೆ ವಯಸ್ಸು, ಲಿಂಗ, ಭಾಷೆ, ಕ್ಷೇತ್ರ ಯಾವ ಪ್ರಾಕಾರಗಳೂ ಅಡ್ಡ ಬರುವಂತಿಲ್ಲ. ಎಲ್ಲವನ್ನೂ ಭೇದಿಸಿ, ಮುನ್ನುಗ್ಗಿ ಕೆಲಸ ಸಾಧಿಸುವ ಹುಮ್ಮಸ್ಸು ಅವರಲ್ಲಿ ಇಂದಿಗೂ ಇದೆ. ಅದಕ್ಕಾಗಿಯೇ ಅವರಿಗೆ ರಾಜ್ಯ ಸರಕಾರದ ಕರ್ನಾಟಕ ನಾಟಕ ಅಕಾಡೆಮಿಯ ಪ್ರಶಸ್ತಿಯೂ ದೊರೆತಿದೆ. ೨೦೦೭ರಲ್ಲಿ ಕೆಂಪೇಗೌಡ ಪ್ರಶಸ್ತಿಗೆ ಭಾಜನರೂ ಆಗಿದ್ದಾರೆ. ಇಂತಹ ವ್ಯಕ್ತಿ ಒಂದು ಪಕ್ಷ ಹಿಂದಿ ಸಾಂಸ್ಕೃತಿಕ ವಲಯದಲ್ಲಿದ್ದರೆ, ಇವರ ಹೆಸರು ರಾಷ್ಟ್ರವ್ಯಾಪಿಯಾಗಿ ಜನಜನಿತವಾಗುತ್ತಿದ್ದುದರಲ್ಲಿ ಸಂದೇಹವೇ ಇಲ್ಲ.

ಇವರ ಹೊಸಮನಿ ಸಿದ್ದಪ್ಪ ನಾಟಕವು ನಮ್ಮ ದೇಶದ ಸ್ವಾತಂತ್ರ್ಯ ಹೋರಾಟದ ಹಿನ್ನೆಲೆಯನ್ನು ಹೊಂದಿದ್ದು, ಹಾವೇರಿಯ ಹೊಸಮನಿ ಸಿದ್ದಪ್ಪನವರು ಅದರಲ್ಲಿ ತಮ್ಮದೇ ಆದ ಯೋಗದಾನವನ್ನು ನೀಡಿದ್ದಾರೆ. ಹೋರಾಟದ ದುರೀಣರುಗಳಾದ ನೆಹರು, ಗಾಂಧೀಜಿ, ನೇತಾಜಿಯವರಂತಹವರ ಒಡನಾಡಿಯಾಗಿದ್ದವರು. ಪ್ರಖ್ಯಾತ ಲೇಖಕ ಪಾಟೀಲ ಪುಟ್ಟಪ್ಪನವರ ಲೇಖನವನ್ನು ಆಧರಿಸಿ, ಜೊತೆಗೆ ಹಾವೇರಿ ಜಿಲ್ಲೆಯಾದ್ಯಂತ ಸಂಚರಿಸಿ, ವಿಷಯ ಸಂಗ್ರಹಣೆ ಮಾಡಿ, ಹೊಸಮನಿ ಸಿದ್ದಪ್ಪನವರ ಸಮಕಾಲೀನರಾಗಿದ್ದ ಚಿತ್ರದುರ್ಗದ ಮುರುಗರಾಜೇಂದ್ರ ಮಠದ ಪ್ರಸ್ತುತ ಲಿಂಗೈಕ್ಯ ಜಯದೇವ ಸ್ವಾಮೀಜಿಯವರಿಂದ ಸ್ವಾಮೀಜಿಯವರು ಗಾಂಧೀಜಿಯವರೊಂದಿಗೆ ಸಿದ್ದಪ್ಪನವರ ಬಗ್ಗೆ ವಿಚಾರ ವಿನಿಯಮ ಮಾಡಿರುವುದನ್ನೂ ಗಮನಿಸಿ, ಅದನ್ನೂ ತಮ್ಮ ಕ್ರುತಿಯಲ್ಲಿ ತಂದು, ತಮ್ಮ ಸಂಶೋಧನೆಯಿಂದ ಪಡೆದ ಮಾಹಿತಿಗಳನ್ನೂ ಸೇರಿಸಿ, ಇಂತಹ ವ್ಯಕ್ತಿಯನ್ನು ಸಾಮಾನ್ಯ ಜನತೆಗೆ ತಿಳಿಯುವಂತೆ ನಾಟಕರೂಪದಲ್ಲಿ ಜನರ ಮುಂದಿಟ್ಟಿರುವುದು ಹೆಮ್ಮೆಯ ವಿಷಯ.

ಸುಭಾಶ್ ಚಂದ್ರಬೋಸರು ಹಾವೇರಿಗೆ ಬೇಟಿಕೊಟ್ಟದ್ದನ್ನು ನಾಟಕವಾಗಿ ಪರಿವರ್ತಿಸಲು, ತಮ್ಮ ಇಳಿ ವಯಸ್ಸಿನಲ್ಲಿ ಕೊಲ್ಕತ್ತಾಗೇ ಹೋಗಿ, ದೇಶ ಭಾಷೆ ಅರಿಯದ ಜಾಗದಲ್ಲಿ ಬೋಸರ ಅಣ್ನನ ಮಗ ಶಿಶಿರ್ ಬೋಸರನ್ನು ಬೇಟಿ ಮಾಡಿ ವಿಷಯ ಸಂಗ್ರಹಣೆ ಮಾಡಿ, ಸೊಗಸಾದ ನಾಟಕವನ್ನು ಹೊರತಂದಿರುವುದು ಇವರ ರಂಗಜೀವನದಲ್ಲೊಂದು ಮೈಲಿಗಲ್ಲೇ ಸರಿ.

ಇಂತಹ ಪ್ರತಿಭಾವಂತ ಕಲಾವಿದರಿಗೆ ದೇವರು ಚಿರಕಾಲ ಆಯುರಾರೋಗ್ಯಗಳನ್ನು ಕೊಟ್ತು ಅವರಿಂದ ಇನ್ನೂ ಹೆಚ್ಚಿನ ಉತ್ಕೃಷ್ಟ ಕೃತಿಗಳನ್ನು ಹೊರತರಲೆಂದು ಭಗವಂತನಲ್ಲಿ ಪ್ರಾರ್ಥನೆ.

ಚನ್ನಬಸಯ್ಯ ಗುಬ್ಬಿಯವರ ವಿಳಾಸ: ನಂ. ೨೩, ವೇದಗಂಗಾ, ಪಾಂಡುರಂಗನಗರ, ತುಮಕೂರು ೫೭೨ ೧೦೧.

ಶ್ರೀಯುತರ ಹೊಸಮನಿ ಸಿದ್ದಪ್ಪ ನಾಟಕ ಕೃತಿಯು ಮಾರಾಟಕ್ಕೆ ದೊರಕುತ್ತಿದ್ದು, ಅವರಿಗೆ ರೂ.೪೯/- + ಪೋಸ್ಟೇಜ್ ಕಳುಹಿಸಿ ಪಡೆದುಕೊಳ್ಳಬಹುದು.

ಎ.ವಿ. ನಾಗರಾಜು
೯೮೪೫೪೯೬೪೫೯