ನೋಡಿ ಬನ್ನಿರಿ ಕುಂತಿ ಗುಡ್ಡವ, ಅಲ್ಲಿಯ ಬೆಡಗಿನ ಚಿತ್ತಾರವ

ನೋಡಿ ಬನ್ನಿರಿ ಕುಂತಿ ಗುಡ್ಡವ, ಅಲ್ಲಿಯ ಬೆಡಗಿನ ಚಿತ್ತಾರವ

ಬರಹ

ಕುಂತಿ ಗುಡ್ಡ ಎಂಬುದು ಕರ್ನಾಟಕ ರಾಜ್ಯದ ಹಾಸನ ಜಿಲ್ಲೆಯಲ್ಲಿದ್ದು, ಹಾಸನದಿಂದ ಕೇವಲ ೧೦ ಕಿ.ಮಿ. ದೂರದಲ್ಲಿ ಅರಕಲಗೂಡು ರಸ್ತೆಯಲ್ಲಿದೆ. ಇಲ್ಲಿ ಅತಿ ಸುಂದರವಾದ ಪ್ರಕೃತಿ ಸೌಂದರ್ಯ ಹಾಗು ಇತಿಹಾಸ/ಪೌರಾಣಿಕ ಹಿನ್ನೆಲೆಯನ್ನು ಹೊಂದಿದ ದೇವಾಲಯವೂ ಇದೆ.

ಇಲ್ಲಿನ ಐತಿಹ್ಯವೆಂದರೆ, ಪಾಂಡವರು ತಮ್ಮ ೧೪ವರ್ಷಗಳ ವನವಾಸವನ್ನು ಕಳೆಯಲು ಭಾರತವನ್ನೆಲ್ಲಾ ಸುತ್ತುತ್ತಿದ್ದಾಗ, ಇಲ್ಲಿಗೂ ಬಂದಿದ್ದರಂತೆ. ಸಂಸಾರದ ದಿನ ನಿತ್ಯದ ಕೆಲಸ ಕಾರ್ಯಗಳಲ್ಲಿ ತೊಡಗಿದ್ದ ಕುಂತಿಯು ಕಾರ ಅರೆಯುವ ಸಲುವಾಗಿ ತಕ್ಕ ಕಲ್ಲಿನ ಗುಂಡೊಂದನ್ನು ತರಲು ತನ್ನ ಮಗ ಭೀಮನಿಗೆ ಹೇಳಿದಳಂತೆ. ಅವಳ ಇಚ್ಚಾನುಸಾರ ಭೀಮಸೇನನು ಒಂದು ಅರೆಯುವ ಕಲ್ಲನ್ನು ತಂದು ಕೊಟ್ಟನಂತೆ. ಅದು ಇಲ್ಲಿಯ ಕುಂತಿ ಗುಡ್ಡದ ಮೇಲೆ ನೋಡುಗರಿಗೆಲ್ಲಾ ತನ್ನ ಧೀಮಂತಿಕೆ ಹಾಗು ಸೌಂದರ್ಯವನ್ನು ಸಾರುತ್ತಾ, ಕೈಬೀಸಿ ಕರೆಯುತ್ತಾ ನಿಂತಿದೆ. ಕೆಳಗೆ ಗುಡ್ಡದ ಬಯಲಿನಲ್ಲಿ ಒಂದು ರಂಗನಾಥ ಸ್ವಾಮಿ ಮಂದಿರವೂ ಇದೆ. ಗುಡ್ಡದ ಮೇಲೆ ಕುಂತೀದೇವಿಯ ವಿಗ್ರಹವೂ ಇದೆ.

ಕರ್ನಾಟಕ ಸರಕಾರವಾಗಲೀ, ಪ್ರಾಚ್ಯ ಸಂಶೋಧನಾ ಇಲಾಖೆಯಾಗಲೀ ಇತ್ತ ಮುಖವನ್ನೂ ಹಾಕಿಲ್ಲ. ಬೆಳೆಯುತ್ತಿರುವ ಹಾಸನ ನಗರವು ತನ್ನ ಕಬಂಧ ಬಾಹುಗಳನ್ನು ಚಾಚಿ, ಈ ಮನೋಹರ ಪ್ರದೇಶವನ್ನು ನಾಶ ಪಡಿಸುವ ಮೊದಲೊಮ್ಮೆ ಹೋಗಿ ನೋಡಿ ಬನ್ನಿ.

ಎ.ವಿ. ನಾಗರಾಜು,
ಅಗಿಲೆನಾಗ್[ಎಟ್]ರಿಡಿಪ್ ಮೈಲ್.ಕಾಂ