ಫಾದರ್ ಸೆರ್ಗಿಯಸ್ ಅಧ್ಯಾಯ ಏಳು (ಭಾಗ ೩)

ಫಾದರ್ ಸೆರ್ಗಿಯಸ್ ಅಧ್ಯಾಯ ಏಳು (ಭಾಗ ೩)

'ನಾನು ಮನೇಗೆ ಹೋಗಬೇಕು, ಅಪ್ಪನ ಹತ್ತಿರ ಹೋಗಬೇಕು' ಅಂದಳು.
'ಹೆದರಬೇಡ. ನಿನಗೇನು ತೊಂದರೆ?' ಫಾದರ್ ಸೆರ್ಗಿಯಸ್ ಕೇಳಿದ.
'ಎಲ್ಲವೂ ತೊಂದರೆಯೇ, ಮೈಯೆಲ್ಲ ನೋವು' ಅಂದಳು. ಮುಗಳು ನಗು ತಟ್ಟನೆ ಅವಳ ಮುಖವನ್ನು ಬೆಳಗಿತು.
'ವಾಸಿಯಾಗುತ್ತದೆ, ಪ್ರಾರ್ಥನೆಮಾಡು' ಅಂದ.
'ಪ್ರಾರ್ಥನೆ ಮಾಡಿದರೆ ಏನು ಉಪಯೋಗ? ಬೇಕಾದಷ್ಟು ಪ್ರಾರ್ಥನೆ ಮಾಡಿದ್ದೇನೆ. ಏನೂ ಅಗಿಲ್ಲ' ಮುಗುಳು ನಗುತ್ತಾ ಮಾತನಾಡಿದಳು. 'ನನ್ನ ಪರವಾಗಿ ನೀವು ಪ್ರಾರ್ಥನೆಮಾಡಿ. ನನ್ನ ಮೇಲೆ ಕೈ ಇಡಿ. ಕನಸಿನಲ್ಲಿ ನಿಮ್ಮನ್ನು ಕಂಡಿದ್ದೆ' ಅಂದಳು.
'ನಾನು ಹೇಗೆ ಕಂಡಿದ್ದೆ?'
'ನನ್ನ ಎದೆಯಮೇಲೆ ಕೈ ಇಟ್ಟಿದ್ದಿರಿ, ಇಲ್ಲಿ, ಹೀಗೆ' ಅನ್ನುತ್ತಾ ಅವನ ಕೈ ಹಿಡಿದೆಳೆದು ಎದೆಯಮೇಲಿಟ್ಟುಕೊಂಡಳು.

ಅವಳಿಗೆ ತನ್ನ ಬಲಗೈ ಕೊಟ್ಟಿದ್ದ.
'ನಿನ್ನ ಹೆಸರೇನು?' ಎಂದ. ತಲೆಯಿಂದ ಕಾಲಿನವರೆಗೂ ನಡುಗುತ್ತಿದ್ದ. ಸೋತುಹೋಗಿದ್ದ. ಸೋತೆ ಎಂದು ಗೊತ್ತಾಗಿತ್ತು ಅವನಿಗೆ. ಆಸೆ ಎಲ್ಲೆ ಮೀರಿತ್ತು.
'ಮರಿಯಾ. ಯಾಕೆ?'
ಅವನ ಕೈಗೆ ಮುತ್ತಿಟ್ಟಳು. ತೋಳಿನಿಂದ ಅವನ ಸೊಂಟ ಬಳಸಿ ಹತ್ತಿರಕ್ಕೆಳೆದುಕೊಂಡಳು.
'ಏನು ಮಾಡುತ್ತಿದ್ದೀ ಮರಿಯಾ? ನೀನು ಹುಡುಗಿಯಲ್ಲ, ಸೈತಾನ!'
'ಇರಬಹುದು. ಆದರೇನಂತೆ?'
ಬೆಂಚಿನಮೇಲೆ ಹಾಸಿದ್ದ ಚಾಪೆಯಮೇಲೆ ಕುಳಿತು ಅವನನ್ನು ಪಕ್ಕಕ್ಕೆಳೆದು ಅಪ್ಪಿಕೊಂಡಳು.

ಬೆಳಗಿನ ಜಾವ ಅವನು ಹೊರಕ್ಕೆ ಬಂದ.
ನಿಜವಾಗಿ ಅದೆಲ್ಲ ನಡೆಯಿತೆ? ಇನ್ನೇನು ಅವಳಪ್ಪ ಬರುತ್ತಾನೆ. ಎಲ್ಲ ಹೇಳಿಬಿಡುತ್ತಾಳೆ. ಹೆಂಗಸಲ್ಲ. ಸೈತಾನ. ಏನು ಮಾಡಲಿ? ನಾನೇನು ಮಾಡಲಿ? ಅಗೋ, ಅವನು ಬೆರಳು ಕತ್ತರಿಸಿಕೊಂಡ ಕೊಡಲಿ ಅಲ್ಲೇ ಇತ್ತು. ಅದನ್ನು ಎತ್ತಿಕೊಂಡು ಕೋಣೆಯತ್ತ ಹೆಜ್ಜೆ ಹಾಕಿದ.
ಸೇವಕ ಬಂದ. 'ಸೌದೆ ಬೇಕಾಗಿತ್ತೆ? ಕೊಡಿ, ಸೀಳಿಕೊಡುತ್ತೇನೆ' ಎನ್ನುತ್ತಾ ಅವನ ಕೈಯಿಂದ ಕೊಡಲಿ ತೆಗೆದುಕೊಂಡ.
ಸುಮ್ಮನೆ ಅವನ ಕೈಗೆ ಕೊಡಲಿ ಕೊಟ್ಟು ಕೋಣೆಯೊಳಕ್ಕೆ ಹೋದ. ಅವಳು ಮಲಗಿದ್ದಳು. ಮನಸ್ಸಿನ ತುಂಬ ಭೀತಿ ತುಂಬಿಕೊಂಡು ಅವಳನ್ನು ನೋಡಿದ. ಅಡ್ಡಗೋಡೆ ದಾಟಿ ಪಕ್ಕದ ಭಾಗಕ್ಕೆ ಹೋದ. ಅಲ್ಲಿ ಎತ್ತಿಟ್ಟಿದ್ದ ರೈತನ ಡ್ರೆಸ್ಸು ಹಾಕಿಕೊಂಡ. ಕತ್ತರಿ ತೆಗೆದುಕೊಂಡು ಉದ್ದ ತಲೆಗೂದಲು ಕತ್ತರಿಸಿಕೊಂಡ. ಹೊರಗೆ ಬಂದು ಕಾಲು ದಾರಿ ಹಿಡಿದು ನದಿಯತ್ತ ನಡೆದ. ಅವನು ಆ ದಾರಿಯಲ್ಲಿ ಹೋಗಿ ನಾಲ್ಕು ವರ್ಷಗಳಾಗಿದ್ದವು.
ನದಿಯ ಪಕ್ಕದಲ್ಲೇ ಒಂದು ದಾರಿ ಇತ್ತು. ಅದನ್ನು ಹಿಡಿದು ಮಧ್ಯಾಹ್ನದವರೆಗೆ ನಡೆದ. ರೈ ಬೆಳೆದುನಿಂತಿದ್ದ ಹೊಲವೊಂದು ಕಾಣಿಸಿತು. ಹೋಗಿ ಹೊಲದಲ್ಲಿ ಮಲಗಿಕೊಂಡ. ಹೊತ್ತಿಳಿದಮೇಲೆ ಮತ್ತೆ ಹೊರಟ. ಸಂಜೆಯವೇಳೆಗೆ ಯಾವುದೋ ಹಳ್ಳಿ ಸಿಕ್ಕಿತು. ಅಲ್ಲಿಗೆ ಹೋಗದೆ ನದಿಯ ಪಕ್ಕದಲ್ಲಿದ್ದ ಬೆಟ್ಟ ಏರಿದ. ಮತ್ತೆ ಅಲ್ಲಿ ಮಲಗಿ ಸುದಾರಿಸಿಕೊಂಡ.
ಬೆಳಗಿನ ಜಾವ. ಸೂರ್ಯ ಹುಟ್ಟುವುದಕ್ಕೆ ಇನ್ನೂ ಅರ್ಧಗಂಟೆ ಸಮಯವಿತ್ತು. ನೆಲವೆಲ್ಲ ವದ್ದೆಯಾಗಿತ್ತು. ಪಶ್ಚಿಮದಿಂದ ತಣ್ಣನೆ ಗಾಳಿ ಬೀಸುತ್ತಿತ್ತು. ಕಥೆ ಮುಗಿಸಿಬಿಡಬೇಕು. ದೇವರು ಇಲ್ಲ. ಕಥೆ ಮುಗಿಸಿಕೊಳ್ಳುವುದು ಹೇಗೆ? ನದಿಗೆ ಧುಮುಕಲೇ? ಮುಳುಗುವುದಿಲ್ಲ, ಈಜು ಬರುತ್ತದೆ. ನೇಣು ಹಾಕಿಕೊಂಡರೆ? ಬೆಲ್ಟನ್ನು ಮರದ ಕೊಂಬೆಗೆ ಕಟ್ಟಿದರೆ ಸಾಕು. ಹಾಗೆ ಸಾಯುವುದು ಸಾಧ್ಯ, ತೀರ ಸುಲಭ. ಸಾವು ಇಷ್ಟು ಸಮೀಪವೇ ಅನ್ನಿಸಿ ದಿಗಿಲಾಯಿತು. ಹತಾಶನಾದಾಗಲೆಲ್ಲ ಮಾಡುತ್ತಿದ್ದಂತೆ ಪ್ರಾರ್ಥಿಸಬೇಕೆನಿಸಿತು. ಯಾರನ್ನು ಪ್ರಾರ್ಥಿಸಬೇಕು? ದೇವರಿಲ್ಲ. ಮೊಳಕೈ ಊರಿ, ಅಂಗೈಮೇಲೆ ತಲೆ ಇಟ್ಟು ಮೈ ಚಾಚಿ ಒರಗಿದ್ದ. ನಿದ್ದೆ. ಅಂಗೈ ತಲೆಯ ಭಾರ ತಡೆಯಲಾರದು ಅನಿಸಿತು. ಮೊಳಕೈ ಮಡಿಸಿಕೊಂಡು, ಅದರ ಮೇಲೆ ತಲೆ ಇಟ್ಟುಕೊಂಡು ಮಲಗಿದ. ನಿದ್ದೆ ಮಾಡಿದ್ದು ಸ್ವಲ್ಪವೇ. ತಟ್ಟನೆ ಎಚ್ಚರವಾಯಿತು. ಮನಸ್ಸಿನ ತುಂಬ ಏನೇನೋ ನೆನಪುಗಳು. ಅಥವಾ ಕನಸೋ?
ಅವನಿನ್ನೂ ಮಗು. ಅಮ್ಮನ ಹಳ್ಳಿಯ ಮನೆಯಲ್ಲಿದ್ದ. ಮನೆಯ ಮುಂದೆ ಸಾರೋಟು ಬಂದು ನಿಂತಿತು. ಚಿಕ್ಕಪ್ಪ ನಿಕೊಲಾಸ್ ಸೆರ್ಗೀವಿಚ್ ಇಳಿದ. ಉದ್ದವಾದ, ಅಗಲವಾದ, ಕಪ್ಪು ಗಡ್ಡ. ಅವನ ಜೊತೆ ಪಾಶೆನ್ಕಾ ಇದ್ದಳು. ಬಡಕಲು ದೇಹದ, ಅಯ್ಯೋ ಅನ್ನಿಸುವಂಥ ಅಳುಬುರುಕ ಮುಖದಲ್ಲಿ ಭಯತುಂಬಿದ ದೊಡ್ಡ ಕಣ್ಣುಗಳಿರುವ ಹುಡುಗಿ. ಅವಳನ್ನು ಹುಡುಗರ ಕೋಣೆಗೆ ಕರೆದುಕೊಂಡು ಬಂದರು. ಅವಳನ್ನು ಆಟಕ್ಕೆ ಸೇರಿಸಿಕೊಳ್ಳಬೇಕಂತೆ. ಬೊರು. ಮಹಾ ಪೆದ್ದಿ. ಎಲ್ಲ ಸೇರಿಕೊಂಡು ತಮಾಷೆಮಾಡಿದರು. ಈಜುವುದಕ್ಕೆ ಬರುತ್ತದಾ, ತೋರಿಸು ನೋಡೋಣ-ನೆಲದಮೇಲೆ ಬಿದ್ದುಕೊಂಡು ಈಜಿ ತೋರಿಸಿದಳು. ಅವಳ ಪೆದ್ದುತನಕ್ಕೆ ಜೋರಾಗಿ ನಕ್ಕುಬಿಟ್ಟರು. ಅವಳಿಗೂ ಗೊತ್ತಾಯಿತು. ನಾಚಿಕೆ. ಮುಖವೆಲ್ಲ ಕೆಂಪು ಕೆಂಪು. ಅಳುಮೋರೆ. ತುಟಿಗಳನ್ನು ವಕ್ರಮಾಡಿಕೊಂಡು, ಹೇಳಿದಂತೆ ಕೇಳುತ್ತೇನೆ ಅನ್ನುವ ಭಾವದಲ್ಲಿ, ಕರುಣೆ ಹುಟ್ಟಿಸುವ ಹಾಗೆ ಸಣ್ಣಗೆ ಮುಗುಳ್ನಕ್ಕಳು. ಅದನ್ನು ನೋಡಿ ಅವನಿಗೆ ನಾಚಿಕೆಯಾಯಿತು.
ಅವಳನ್ನು ಮತ್ತೆ ನೋಡಿದ್ದು ಯಾವಾಗ ಎಂದು ಸೆರ್ಗಿಯಸ್ ನೆನಪುಮಾಡಿಕೊಂಡ. ಎಷ್ಟೋ ವರ್ಷವಾದಮೇಲೆ. ಅವನು ಸಂನ್ಯಾಸಿಯಾಗುವುದಕ್ಕೆ ಸ್ವಲ್ಪ ಮೊದಲು ಮತ್ತೆ ಅವಳನ್ನು ನೋಡಿದ್ದು. ಯಾವುದೋ ಹಳ್ಳಿಯ ಜಮೀನುದಾರನನ್ನು ಮದುವೆಯಾಗಿದ್ದಳು. ಅವಳ ಆಸ್ತಿಯನ್ನೆಲ್ಲ ಕಳೆದುಬಿಟ್ಟಿದ್ದ. ಅವಳನ್ನು ಹೊಡೆಯುತ್ತಿದ್ದ. ಇಬ್ಬರು ಮಕ್ಕಳಿದ್ದರು. ಒಬ್ಬ ಮಗ, ಒಬ್ಬ ಮಗಳು. ಮಗ ಚಿಕ್ಕವಯಸ್ಸಿನಲ್ಲೆ ತೀರಿಕೊಂಡಿದ್ದ.
ತುಂಬ ದುಃಖದಲ್ಲಿರುವವಳ ಹಾಗಿದ್ದ ಅವಳ ಮುಖ ಸೆರ್ಗಿಯಸ್‌ನ ನೆನಪಿಗೆ ಬಂದಿತು. ಮಠಕ್ಕೂ ಒಮ್ಮೆ ಬಂದಿದ್ದಳು. ಆಗ ವಿಧವೆಯಾಗಿದದ್ದಳು. ಆಗಲೂ ಹಾಗೆಯೇ ಇದ್ದಳು, ಪೆದ್ದಿಯಲ್ಲದಿದ್ದರೂ ಮಂಕಳಹಾಗೆ, ಯಾವ ಲೆಕ್ಕಕ್ಕೂ ಇಲ್ಲದವಳಹಾಗೆ, ಕರುಣೆ ಹುಟ್ಟಿಸುವವಳ ಹಾಗೆ. ಮಗಳನ್ನೂ ಅವಳನ್ನು ಮದುವೆಯಾಗಲಿರುವ ಹುಡುಗನನ್ನೂ ಕರೆದುಕೊಂಡು ಬಂದಿದ್ದಳು. ಆಗಲೇ ಅವರ ಮನೆಯಲ್ಲಿ ಬಡತನವಿತ್ತು. ಆಮೇಲೆ ಅವಳು ಯಾವುದೋ ಹಳ್ಳಿಯಲ್ಲಿ ತೀರ ಕಂಗಾಲು ಸ್ಥಿತಿಯಲ್ಲಿದ್ದಾಳೆ ಎಂದು ಕೇಳಿದ್ದ.
ಅವಳ ಬಗ್ಗೆ ಯಾಕೆ ಯೋಚನೆ ಬರುತ್ತಿದೆ ಎಂದು ಆಶ್ಚರ್ಯಪಟ್ಟ. ಆದರೂ ಅವಳ ನೆನಪು ಮರೆಯಾಗಲಿಲ್ಲ. ಅವಳು ಈಗ ಎಲ್ಲಿದ್ದಾಳೆ? ಏನು ಮಾಡುತ್ತಿದ್ದಾಳೆ? ನೆಲದಮೇಲೆ ಈಜಿ ತೋರಿಸಿದಾಗ ಇದ್ದ ಹಾಗೆಯೇ ಅಳುಬುರುಕಿಯಾಗಿ, ಪೆದ್ದಿಯಾಗಿ ಇದ್ದಾಳಾ? ಅವಳ ಬಗ್ಗೆ ಯಾಕೆ ಹೀಗೆ ಯೋಚನೆ? ಸಾಯುವುದಕ್ಕೆ ಹೊರಟಿರುವಾಗ ಅವಳ ನೆನಪು ಯಾಕೆ ಅಂದುಕೊಂಡ.
ಮತ್ತೆ ಭಯ ಮುತ್ತಿಕೊಂಡಿತು. ಭಯದಿಂದ ತಪ್ಪಿಸಿಕೊಳ್ಳುವುದಕ್ಕೆ ಮತ್ತೆ ಪಾಶೆನ್ಕಾ ಬಗ್ಗೆ ಯೋಚನೆಮಾಡುವುದಕ್ಕೆ ತೊಡಗಿದ.
ಬಹಳ ಹೊತ್ತು ಮಲಗಿದ್ದ. ಒಮ್ಮೆ ಸಾವಿನ ಬಗ್ಗೆ ಯೋಚನೆ, ಮತ್ತೊಮ್ಮೆ ಪಾಶೆನ್ಕಾ ಬಗ್ಗೆ ಚಿಂತೆ, ಮತ್ತೆ ಸಾವಿನ ಬಗ್ಗೆ...ಅವಳೇ ಮುಕ್ತಿಯ ದಾರಿ. ಕೊನೆಗೊಮ್ಮೆ ನಿದ್ರೆ ಹತ್ತಿತು. ಕನಸಿನಲ್ಲಿ ದೇವತೆಯೊಬ್ಬಳು ಕಂಡಳು. 'ಪಾಶೆನ್ಕಾ ಹತ್ತಿರಕ್ಕೆ ಹೋಗು. ನೀನು ಯಾವ ಪಾಪ ಮಾಡಿರುವೆ, ನೀನೇನು ಮಾಡಬೇಕು, ನಿನ್ನ ಬಿಡುಗಡೆಯ ದಾರಿ ಯಾವುದು ಇದನ್ನೆಲ್ಲ ಅವಳಿಂದ ಕಲಿತುಕೋ' ಅಂದಳು ದೇವತೆ.
ಎದ್ದು ಕುಳಿತ. ಇದು ದೇವರೇ ನೀಡಿದ ದರ್ಶನ ಅನ್ನಿಸಿತು. ಸಂತೋಷವಾಯಿತು. ದೇವತೆ ಕನಸಿನಲ್ಲಿ ಹೇಳಿದ ಹಾಗೆ ಮಾಡಬೇಕು ಎಂದು ತೀರ್ಮಾನ ಮಾಡಿಕೊಂಡ. ಅವಳಿದ್ದ ಊರು ನೆನಪಿಗೆ ಬಂದಿತು. ಸುಮಾರು ಇನ್ನೂರು ಮೈಲು ದೂರವಿತ್ತು. ಅಲ್ಲಿಗೆ ಹೆಜ್ಜೆ ಹಾಕಿದ.
(ಮುಂದುವರೆಯುವುದು)

Rating
No votes yet