ಫಾದರ್ ಸೆರ್ಗಿಯಸ್ ಅಧ್ಯಾಯ ಎಂಟು (ಕೊನೆಯ ಭಾಗ)

ಫಾದರ್ ಸೆರ್ಗಿಯಸ್ ಅಧ್ಯಾಯ ಎಂಟು (ಕೊನೆಯ ಭಾಗ)

ಈ ಬಾರಿ ಅವಳು ವಾಪಸ್ಸು ಬರುವುದು ಕೊಂಚ ತಡವಾಯಿತು. ಅವಳು ಬಂದಾಗ ಸ್ಟೆಪಾನ್ ಅದೇ ರೀತಿಯಲ್ಲಿ ಕೂತಿದ್ದ, ಕೈಗಳನ್ನು ಮೊಳಕಾಲುಗಳ ಮೇಲೆ ಊರಿಕೊಂಡು. ಅವನ ಚೀಲ ಆಗಲೇ ಬೆನ್ನಿಗೇರಿತ್ತು. ಕೈಯಲ್ಲಿ ದೀಪವೊಂದನ್ನು ಹಿಡಿದುಕೊಂಡು ಪಾಶೆನ್ಕಾ ಬಂದಾಗ ತನ್ನ ದಣಿದ ಸುಂದರವಾದ ಕಣ್ಣುಗಳನ್ನೆತ್ತಿ ಅವಳನ್ನೇ ದಿಟ್ಟಿಸಿ ದೀರ್ಘವಾಗಿ ನಿಟ್ಟುಸಿರುಬಿಟ್ಟ.
'ನೀನು ಯಾರೆಂದು ಅವರು ಯಾರಿಗೂ ಹೇಳಲಿಲ್ಲ,' ಅಂಜುತ್ತಾ ಮೆಲ್ಲಗೆ ಮಾತಾಡಿದಳು. 'ತೀರ್ಥಯಾತ್ರೆಗೆ ಹೊರಟವನು, ದೊಡ್ಡ ಮನೆತನದವನು, ಬಹಳ ಹಿಂದೆ ನನನಗೆ ಪರಿಚಯವಿದ್ದವನು ಅಂದೆ, ಅಷ್ಟೆ. ಟೀ ಕುಡಿಯುವೆಯಂತೆ ಬಾ.'
'ಬೇಡ...'
'ಹಾಗಾದರೆ ಇಲ್ಲಿಗೇ ತರುತ್ತೇನೆ, ಇರು.'
'ಇಲ್ಲ. ಬೇಡ. ದೇವರು ನಿನಗೆ ಒಳ್ಳೆಯದು ಮಾಡಲಿ ಪಾಶೆನ್ಕಾ! ನಾನು ಹೋಗಬೇಕು. ನಿನಗೆ ನನ್ನ ಮೇಲೆ ಕರುಣೆ ಇದ್ದರೆ ನಾನು ಇಲ್ಲಿಗೆ ಬಂದಿದ್ದು, ನೀನು ನನ್ನ ನೋಡಿದ್ದು, ಯಾರಿಗೂ ಹೇಳಬೇಡ. ಥ್ಯಾಂಕ್ಸ್. ನಿನ್ನ ಕಾಲಿಗೆ ಬೀಳಬೇಕು ಅನ್ನಿಸುತ್ತಿದೆ. ನಿನ್ನ ಮನಸ್ಸಿಗೆ ಹಿಂಸೆಯಾಗುತ್ತದೆ ಎಂದು ಸುಮ್ಮನಿದ್ದೇನೆ. ಥ್ಯಾಂಕ್ಸ್. ನನ್ನನ್ನು ಕ್ಷಮಿಸಿಬಿಡು. ಏಸು ನಿನಗೆ ಒಳ್ಳೆಯದು ಮಾಡಲಿ.'
'ನನಗೆ ಆಶೀರ್ವಾದ ಮಾಡು.'
'ದೇವರು ನಿನ್ನನ್ನು ಹರಸಲಿ! ಏಸುವಿನ ಹೆಸರಲ್ಲಿ ನನ್ನನ್ನು ಕ್ಷಮಿಸಿಬಿಡು!'
ಎದ್ದು ನಿಂತ. ಹೊರಟೇ ಬಿಡುತ್ತಿದ್ದ. ಆದರೆ ಅವಳು ಅವನನ್ನು ತಡೆದು, ಒಳಗೆ ಹೋಗಿ ಬ್ರೆಡ್ಡು, ಬೆಣ್ಣೆ, ರಸ್ಕುಗಳನ್ನು ತಂದಳು. ಅವನ್ನೆಲ್ಲ ತೆಗೆದುಕೊಂಡು ಹೊರಟುಹೋದ.
ಕತ್ತಲಾಗಿತ್ತು. ಎರಡನೆಯ ಮನೆ ದಾಟುವಷ್ಟರಲ್ಲಿ ಕಣ್ಣಿಗೆ ಕಾಣದಂತಾದ. ಆ ಊರಿನ ಪಾದರಿಯ ಮನೆಯ ನಾಯಿ ಬೊಗಳುತ್ತಿದ್ದಿದ್ದರಿಂದಷ್ಟೆ ಅವನು ಅಲ್ಲಿದ್ದಾನೆ ಎಂದು ಅವಳಿಗೆ ತಿಳಿಯಿತು.

'ಹಾಗಾದರೆ, ನನ್ನ ಕನಸಿನ ಅರ್ಥ ಅದೇ! ನಾನು ಏನಾಗಬೇಕಾಗಿತ್ತೋ, ಏನಾಗಲಿಲ್ಲವೋ ಅದಾಗಿದ್ದಾಳೆ ಪಾಶೆನ್ಕಾ. ದೇವರಿಗಾಗಿ ಬದುಕುತ್ತಿದ್ದೇನೆ ಅಂದುಕೊಂಡು ಮನುಷ್ಯರಿಗಾಗಿ ಬದುಕಿದೆ ನಾನು. ಮನುಷ್ಯರಿಗಾಗಿ ಬದುಕುತ್ತಿದ್ದೇನೆ ಅಂದುಕೊಂಡ ಅವಳು ದೇವರಿಗಾಗಿ ಬದುಕಿದ್ದಾಳೆ. ಯಾವ ಪ್ರತಿಫಲದ ಅಪೇಕ್ಷೆಯೂ ಇಲ್ಲದೆ ಒಂದು ಬೊಗಸೆ ನೀರು ಕೊಡುವುದಿದೆಯಲ್ಲ ಅದು ಮನುಷ್ಯರ ಮೆಚ್ಚುಗೆಗಾಗಿ ನಾನು ಇದುವರೆಗೆ ಜನರಿಗೆ ಉಪಕಾರಮಾಡುತ್ತಿದ್ದೇನೆ ಅಂದುಕೊಂದು ಮಾಡಿದ ಎಲ್ಲ ಕೆಲಸಗಳಿಗಿಂತ ಮಿಗಿಲಾದದ್ದು. ಹಾಗಾದರೆ, ನನ್ನಲ್ಲಿ ದೇವರ ಸೇವೆ ಮಾಡಬೇಕೆಂಬ ಪ್ರಾಮಾಣಿಕವಾದ ಆಸೆ ಇರಲೇ ಇಲ್ಲವೇ?' ಈ ಪ್ರಶ್ನೆ ಅವನ ಮನಸ್ಸಿಗೆ ಬಂದಿತು. ಮನಸ್ಸೇ ಉತ್ತರಿಸಿತು. 'ಅಂಥ ಪ್ರಾಮಾಣಿಕವಾದ ಆಸೆ ಇತ್ತು, ಆದರೆ, ಬೇರೆಯವರ ಮೆಚ್ಚುಗೆಯ ಆಸೆ ಹುಟ್ಟಿ ಕಲುಷಿತವಾಯಿತು. ಬೇರೆಯವರು ಮೆಚ್ಚಿಕೊಳ್ಳಲಿ ಎಂದೇ ಬದುಕುವವರಪಾಲಿಗೆ ದೇವರು ಇರುವುದಿಲ್ಲ. ನಾನು ಜನ ಮೆಚ್ಚಲೆಂದು ಬದುಕಿದೆ. ಇನ್ನು ದೇವರನ್ನು ಕಾಣಬೇಕು!'
ಹಳ್ಳಿಯಿಂದ ಹಳ್ಳಿಗೆ ಸಾಗಿದ. ದಾರಿಯಲ್ಲಿ ಎಷ್ಟೋ ಯಾತ್ರಿಕರು, ಗಂಡಸರು, ಹೆಂಗಸರು ಅವನ ಜೊತೆಯಾದರು, ಮತ್ತೆ ತಮ್ಮ ದಾರಿ ಹಿಡಿದು ಬೇರೆಯಾದರು. ಹಸಿವಾದಾಗ ಭಿಕ್ಷೆ ಬೇಡಿದ. ರಾತ್ರಿಯಾದಾಗ ಮಲಗಲು ಜಾಗ ಬೇಡಿದ. ಕೋಪಿಷ್ಠ ಗೃಹಿಣಿಯಾದರೆ ಬೈಯುತ್ತಿದ್ದಳು, ಅಥವಾ ಹೆಂಡ ಕುಡಿದಿದ್ದ ರೈತನಾದರೆ ಬಾಯಿಗೆ ಬಂದಹಾಗೆ ಅನ್ನುತ್ತಿದ್ದ. ಆದರೂ ಅವನಿಗೆ ಅನ್ನ, ನೀರು, ಒಂದೊಂದು ಸಾರಿ ದಾರಿಗೆಂದು ಬುತ್ತಿ ಕೂಡ ಸಿಗುತ್ತಿತ್ತು. ದೊಡ್ಡ ಮನೆತನದವನ ಹಾಗೆ ಕಾಣುತ್ತಿದ್ದ ಅವನನ್ನು ಕಂಡು ಅನೇಕರು ಮರುಗುತ್ತಿದ್ದರು, ಇನ್ನು ಕೆಲವರು ಇಂಥವನು ಕೂಡ ಭಿಕ್ಷೆ ಬೇಡುವ ಹಾಗೆ ಆಯಿತಲ್ಲ ಎಂದು ಸಂತೋಷಪಡುತ್ತಿದ್ದರು. ಆದರೆ ಸೆರ್ಗಿಯಸ್‌ನ ಸಂಪರ್ಕಕ್ಕೆ ಬಂದವರೆಲ್ಲ ಅವನ ಸೌಮ್ಯತೆಗೆ ಮಾರುಹೋಗುತ್ತಿದ್ದರು.
ಯಾರದಾದರೂ ಮನೆಯಲ್ಲಿ ಬೈಬಲ್ ಇದ್ದರೆ ಅದರ ಪುಟಗಳನ್ನು ತೆರೆದು ಗಟ್ಟಿಯಾಗಿ ಓದುತ್ತಿದ್ದ. ಕೇಳಿದವರ ಮನಸ್ಸು ಕರಗುತ್ತಿತ್ತು, ಆ ಮಾತುಗಳು ತಮಗೆ ಪರಿಚಿತ, ಆದರೂ ಹೊಸತು ಅನಿಸುತ್ತಿತ್ತು.
ಏನಾದರೂ ಸಲಹೆ ಕೊಟ್ಟೊ, ಅಥವ ಅವನಿಗೆ ಗೊತ್ತಿದ್ದ ಓದು ಬರಹಗಳಿಂದಲೋ, ಇಲ್ಲವೇ ಯಾವುದೋ ಜಗಳ ಪರಿಹರಿಸಿಯೋ ಜನರಿಗೆ ಸಹಾಯಮಾಡಲು ಸಾಧ್ಯವಾದಾಗ ಅವರು ಕೃತಜ್ಞತೆಯ ಮಾತುಗಳನ್ನು ಹೇಳಲೆಂದು ಕಾಯದೆ ಅಲ್ಲಿಂದ ಹೊರಟುಬಿಡುತ್ತಿದ್ದ. ನಿಧಾನವಾಗಿ ದೇವರ ದರ್ಶನವಾಗುತ್ತಿತ್ತು.
ಒಮ್ಮೆ ಇಬ್ಬರು ಮುದುಕಿಯರು ಮತ್ತು ಸೈನ್ಯದಿಂದ ಹೊರಬಿದ್ದಿದ್ದ ಮುದುಕ ಅವನ ಜೊತೆಯಲ್ಲಿ ನಡೆಯುತ್ತಿದ್ದರು. ದಾರಿಯಲ್ಲಿ ಗುಂಪೊಂದು ಎದುರಾಯಿತು. ಇಬ್ಬರು ಕುದುರೆಯೇರಿ ಬರುತ್ತಿದ್ದರು, ಸುಂದರವಾದ ಕುದುರೆಯನ್ನು ಕಟ್ಟಿದ್ದ ಸಾರೋಟಿನಲ್ಲಿ ಒಬ್ಬ ಮಹಿಳೆ ಮತ್ತು ದೊಡ್ಡಮನುಷ್ಯನೊಬ್ಬ ಕೂತಿದ್ದರು. ಸಾರೋಟಿನಲ್ಲಿದ್ದವಳ ಗಂಡ ಮತ್ತು ಮಗಳು ಕುದುರೆಯಮೇಲಿದ್ದರು. ಸಾರೋಟಿನಲ್ಲಿದ್ದಾತ ಫ್ರಾನ್ಸಿನಿಂದ ಬಂದಿದ್ದ ಅವರ ಅತಿಥಿ.
ಮೈ ಬಗ್ಗಿಸಿ ದುಡಿಯದೆ ಸುಮ್ಮನೆ ಒಂದು ಕ್ಷೇತ್ರದಿಂದ ಇನ್ನೊಂದಕ್ಕೆ ತೀರ್ಥಯಾತ್ರೆಮಾಡುವ ರಶಿಯನ್ ಮೂಢನಂಬಿಕೆಯ ನಿದರ್ಶನವನ್ನು ಫ್ರೆಂಚ್ ಅತಿಥಿಗೆ ತೋರಿಸುವ ಆಸೆ ಹುಟ್ಟಿತು ಅವರಿಗೆ. ದಾರಿಹೋಕರನ್ನು ತಡೆದು ನಿಲ್ಲಿಸಿದರು. ಅವರು ಯಾರಿಗೂ ಫ್ರೆಂಚ್ ಭಾಷೆ ಬರುವುದಿಲ್ಲವೆಂದುಕೊಂಡು ಫ್ರೆಂಚಿನಲ್ಲಿ ಪರಸ್ಪರಮಾತಾಡಿಕೊಂಡರು.
'ಯಾತ್ರಿಕರು! ಅವರ ತೀರ್ಥಯಾತ್ರೆಯಿಂದ ದೇವರಿಗೆ ಸಂತೋಷವಾಗುತ್ತದೋ ಕೇಳಿ' ಫ್ರೆಂಚ್ ಅತಿಥಿ ನುಡಿದ.
ಆತಿಥೇಯರು ಆ ಪ್ರಶ್ನೆಯನ್ನು ಕೇಳಿದರು. ಮುದುಕಿ ಉತ್ತರ ಹೇಳಿದಳು:
'ದೇವರ ಇಚ್ಛೆ. ಕಾಲು ನಡೆದಿವೆ, ತೀರ್ಥಯಾತ್ರೆ ಮಾಡಿಸಿವೆ. ನಮ್ಮ ಮನಸ್ಸು ಹೃದಯಗಳು ಮಾತ್ರ ಇದ್ದಲ್ಲೇ ಇವೆ.'
ಸೈನಿಕನ್ನು ಕೇಳಿದರು. ಈ ಲೋಕದಲ್ಲಿ ನಾನು ಒಬ್ಬನೇ, ನನಗೆ ಇಂಥದೇ ಅನ್ನುವ ಜಾಗವಿಲ್ಲ ಎಂದ.
ಕಸಾಟ್ಸ್‌ಕಿಯನ್ನು ಕೇಳಿದರು.
'ನಾನು ದೇವರ ಸೇವಕ.'
'ನಾನೊಬ್ಬ ದೇವರ ಸೇವಕ ಅನ್ನುತ್ತಿದ್ದಾನೆ' ಎಂದು ಫ್ರೆಂಚ್‌ಭಾಷೆಯಲ್ಲಿ ಅತಿಥಿಗೆ ವಿವರಿಸಿದರು.
'ಯಾರೋ ಪಾದ್ರಿಯ ಮಗ ಇರಬೇಕು. ಒಳ್ಳೆಯ ಮನೆತನದವನ ಹಾಗೆ ಕಾಣುತ್ತಾನೆ. ನಿಮ್ಮ ಹತ್ತಿರ ಚಿಲ್ಲರೆ ಇದೆಯೇ?' ಫ್ರೆಂಚ್ ಅತಿಥಿ ಕೇಳಿದ. ಅವನ ಚೀಲದಲ್ಲಿ ಕೆಲವು ಬೆಳ್ಳಿಯ ನಾಣ್ಯಗಳಿದ್ದವು. ಒಬ್ಬೊಬ್ಬ ಯಾತ್ರಿಕನಿಗೂ ಇಪ್ಪತ್ತು ಕೊಪೆಕ್ ನಾಣ್ಯಗಳನ್ನು ಭಿಕ್ಷೆ ಹಾಕಿದ ಫ್ರೆಂಚ್ ಅತಿಥಿ.
'ದೇವರ ಮುಂದೆ ಮೋಂಬತ್ತಿ ಹಚ್ಚಲೆಂದು ಕೊಡುತ್ತಿಲ್ಲ, ದಾರಿಯಲ್ಲಿ ಟೀ ಕುಡಿಯಬೇಕಂತೆ ಎಂದು ಹೇಳಿ' ಅಂದ. 'ಅಜ್ಜಾ ಇದು ನಿನಗೆ' ಅನ್ನುತ್ತಾ ಕಸಾಟ್ಸ್‌ಕಿಗೂ ಒಂದು ನಾಣ್ಯ ಎಸೆದು, ಗ್ಲೌಸು ಹಾಕಿದ ತನ್ನ ಕೈಯಿಂದ ಅವನ ಭುಜ ತಟ್ಟಿದ.
ಕಸಾಟ್ಸ್‌ಕಿ ನಾಣ್ಯ ತೆಗೆದುಕೊಂಡು, ತಲೆಯಮೇಲಿನ ಕ್ಯಾಪು ತೆಗೆದು, ಬೊಕ್ಕತಲೆಯನ್ನು ಬಾಗಿಸಿ 'ಏಸು ನಿಮಗೆ ಒಳ್ಳೆಯದು ಮಾಡಲಿ!' ಎಂದ.
ಈ ಭೇಟಿಯಿಂದ ಕಸಾಟ್ಸ್‌ಕಿಗೆ ಆನಂದವಾಯಿತು. ಜನರ ಅಭಿಪ್ರಾಯಕ್ಕೆ ಬೆಲೆಕೊಡದೆ ಸುಮ್ಮನೆ, ಸರಳವಾಗಿ, ವಿನಯಪೂರ್ವಕವಾಗಿ ಇಪ್ಪತ್ತು ಕೋಪೆಕ್ ಇಸಿದುಕೊಳ್ಳಲು ಸಾಧ್ಯವಾಗಿತ್ತು. ಅದನ್ನು ಅವನು ಆಮೇಲೆ ಕುರುಡ ಭಿಕ್ಷುಕನೊಬ್ಬನಿಗೆ ಕೊಟ್ಟುಬಿಟ್ಟ. ಜನರ ಮಾತಿಗೆ ಬೆಲೆಕೊಡುವುದು ಕಡಮೆಯಾದಷ್ಟೂ ದೇವರು ತನ್ನೊಳಗೆ ನಿಚ್ಚಳವಾಗುತ್ತಿರುವುದು ಅವನ ಅನುಭವಕ್ಕೆ ಬರುತ್ತಿತ್ತು.
ಕಸಾಟ್ಸ್‌ಕಿ ಹೀಗೆಯೇ ಎಂಟು ತಿಂಗಳು ಅಲೆದಾಡಿದ. ಒಂಬತ್ತನೆಯ ತಿಂಗಳು ಗಡಿ ಪ್ರದೇಶದ ಊರೊಂದರಲ್ಲಿ ಇತರ ಯಾತ್ರಿಕರೊಡನೆ ತಂಗಿದ್ದಾಗ ಬಂಧನಕ್ಕೆ ಒಳಗಾದ. ಪ್ರವಾಸಿಗರ ಪಾಸ್‌ಪೋರ್ಟುಗಳನ್ನು ತನಿಖೆಮಾಡುತ್ತಿದ್ದರು. ಕಸಾಟ್ಸ್‌ಕಿಯ ಬಳಿ ಪಾಸ್‌ಪೋರ್ಟು ಇರಲಿಲ್ಲ. ಪೋಲೀಸು ಠಾಣೆಗೆ ಕರೆದುಕೊಂಡುಹೋದರು. ಪ್ರಶ್ನೆಗಳನ್ನು ಕೇಳಿದರು. ನನ್ನ ಹತ್ತಿರ ಪಾಸ್‌ಪೋರ್ಟು ಇಲ್ಲ, ನಾನು ದೇವರ ಸೇವಕ ಅಂದ ಕಸಾಟ್ಸ್‌ಕಿ. ಅವನೊಬ್ಬ ಅಬ್ಬೇಪಾರಿ ಅಲೆಮಾರಿ ಎಂದು ತೀರ್ಮಾನಮಾಡಿ ಸೈಬೀರಿಯಾಕ್ಕೆ ಗಡೀಪಾರು ಮಾಡಿದರು.
ಸೈಬೀರಿಯಾದಲ್ಲಿ ಶ್ರೀಮಂತ ರೈತನೊಬ್ಬನ ಮನೆಯಲ್ಲಿ ಕೂಲಿಯಾಳಾಗಿ ಸೇರಿಕೊಂಡ ಸ್ಟೆಪಾನ್ಸ್‌ಕಿ. ಅಲ್ಲಿ ಹಿತ್ತಿಲ ತೋಟ ನೋಡಿಕೊಂಡು, ಮಕ್ಕಳಿಗೆ ಪಾಠ ಹೇಳಿಕೊಂಡು, ಕಾಯಿಲೆಯವರ ಸೇವೆ ಮಾಡಿಕೊಂಡು ಇದ್ದಾನೆ ಈಗ.

(ಮುಗಿಯಿತು)

Rating
No votes yet