ಮೈಕ್ರೋ ಕ್ರೆಡಿಟ್ ನಿಂದ ಮೈಕ್ರೋ ಬ್ಯಾಂಕಿಂಗ್ ಕಡೆಗೆ

ಮೈಕ್ರೋ ಕ್ರೆಡಿಟ್ ನಿಂದ ಮೈಕ್ರೋ ಬ್ಯಾಂಕಿಂಗ್ ಕಡೆಗೆ

ಬರಹ

ಇತ್ತೀಚೆನ ದಿನಗಳಲ್ಲಿ ಎಲ್ಲಾ ಕಡೆಗಳಲ್ಲೂ ಸ್ವ ಸಹಾಯ ಗುಂಪುಗಳನ್ನು ಸಂಘಟಿಸಿ ಗ್ರಾಮೀಣ ಜನರನ್ನು ಅದರಲ್ಲೂ ಮಹಿಳೆಯರನ್ನು ಮೈಕ್ರೋ ಕ್ರೆಡಿಟ್ ಚಟುವಟಿಕೆಗಳಲ್ಲಿ ತೊಡಗಿಸುವ ಕೆಲಸವನ್ನು ವಿವಿಧ ಸ್ವಯಂ ಸೇವಾ ಸಂಸ್ಥೆಗಳು ನಡೆಸುತ್ತಿವೆ. ಈ ರೀತಿ ಸಂಘಟಿಸಲಾದ ಸ್ವ ಸಹಾಯ ಗುಂಪುಗಳ ಚಟುವಟಿಕೆಗಳನ್ನು ಇನ್ನೂ ಹೆಚ್ಚು ಬಲಗೊಳಿಸಲು ಹಾಗೂ ಸ್ವ ಸಹಾಯ ಗುಂಪುಗಳಲ್ಲಿ ತೊಡಗಿರುವ ಜನರಿಗೆ ಉಳಿತಾಯ ಹಾಗೂ ಸಾಲದ ವಿವಿಧ ಸೇವೆಗಳನ್ನು ನೀಡುವುದು ಇಂದಿನ ಅಗತ್ಯವಾಗಿದೆ. ಸ್ವ ಸಹಾಯ ಗಂಪುಗಳು ತಮ್ಮ ವಿಶಿಷ್ಟವಾದ ಅಸ್ತಿತ್ವವನ್ನು ಉಳಿಸಿಕೊಂಡು ಸದಸ್ಯರಿಗೆ ಹೆಚ್ಚಿನ ಉಳಿತಾಯದ ಮತ್ತು ವಿವಿಧ ಬಗೆಯ ಸಾಲದ ಸೇವೆಯ ಅಗತ್ಯವನ್ನು ಪೂರೈಸಲು ಅವುಗಳಿಗೆ ಸಾಂಸ್ಥಿಕ ರೂಪ ಕೊಡುವ ಅಗತ್ಯವಿದೆ.

ಇದಕ್ಕೆ ರಾಜ್ಯದಲ್ಲಿ ಇತ್ತೀಚೆಗೆ ಜಾರಿಗೆ ಬಂದ ಕರ್ನಾಟಕ ಸೌಹಾರ್ದ ಸಹಕಾರಿ ಕಾಯ್ದೆ, 1997 ಅತ್ಯಂತ ಸೂಕ್ತವಾಗಿದೆ. ಇದನ್ನು ಮನಗಂಡ ವಿವಿಧ ಸ್ವಯಂ ಸೇವಾ ಸಂಸ್ಥೆಗಳು ಕರ್ನಾಟಕ ಸೌಹಾರ್ದ ಸಹಕಾರಿ ಕಾಯ್ದೆಯನ್ನು ಬಳಸಿಕೊಂಡು ಸ್ವ ಸಹಾಯ ಗುಂಪುಗಳ ಚಟುವಟಿಕೆಗಳನ್ನು ಬಲಪಡಿಸಲು ಯೋಜನೆ ನಡೆಸಿವೆ. ಇದರಿಂದ ಇದುವರೆಗೆ ಸ್ವ ಸಹಾಯ ಗುಂಪುಗಳ ಮೂಲಕ ಮೈಕ್ರೋ ಕ್ರೆಡಿಟ್ ಚಟುವಟಿಕೆಯಲ್ಲಿ ತೊಡಗಿರುವ ಜನರು ಮೈಕ್ರೋ ಬ್ಯಾಂಕಿಂಗ್ ಕಡೆಗೆ ಹೊರಟಿದ್ದಾರೆ. ಇದು ಇಂದಿನ ಅಗತ್ಯ ಕೂಡ ಹೌದು. ಕರ್ನಾಟಕ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಡಿಯ ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮವು ವಿಶ್ವ ಬ್ಯಾಂಕ್ ಸಹಾಯದೊಂದಿಗೆ ಸ್ವಶಕ್ತಿ ಯೋಜನೆಯಡಿ ಸಂಘಟಿಸಿದ ಸ್ವಸಹಾಯ ಗುಂಪುಗಳಿಗೆ ಸೌಹಾರ್ದ ಕಾಯ್ದೆಯಡಿ 42 ಸ್ವ ಸಹಾಯ ಸಹಕಾರಿಗಳನ್ನು ನೋಂದಣಿ ಮಾಡುವುದರ ಮೂಲಕ ಸಾಂಸ್ಥಿಕ ರೂಪ ಕೊಡಲಾಗಿದೆ. ತಿಪಟೂರು ಹಾಗೂ ಶಿರಸಿಯ ಬೈಫ್ ಮೂಲಕ, ಕರ್ನಾಟಕ ವಾಟರ್ ಶೆಡ್ ಡೆವಲಪ್ಮೆಂಟ್ ಪ್ರೋಗ್ರಾಮ್ ಅಡಿಯಲ್ಲಿನ ಸ್ವಸಹಾಯ ಗುಂಪುಗಳಿಗೆ ಸಾಂಸ್ಥಿಕ ರೂಪ ಕೊಡುವ ಕಾರ್ಯ ಇದೀಗ ನಡೆದಿದೆ. ಬೆಂಗಳೂರಿನ ಮಾಯಾ ಎಂಬ ಸ್ವಯಂ ಸೇವಾ ಸಂಸ್ಥೆ ಸಂಘಟಿಸಿದ ಸ್ವ ಸಹಾಯ ಗುಂಪುಗಳು ಕಳೆದ ಎರಡು ವರ್ಷಗಳಿಂದ ಸ್ವ ಸಹಾಯ ಸಹಕಾರಿಗಳಾಗಿ ಚಟುವಟಿಕೆ ನಡೆಸುತ್ತಿವೆ. ಅಲ್ಲದೇ ಸಿಂಧನೂರಿನಲ್ಲಿ ಸಹಚರ ಎಂಬ ಸ್ವಯಂ ಸೇವಾ ಸಂಸ್ಥೆಯು ಬಡ ಗ್ರಾಮೀಣ ಮಹಿಳೆಯರ ಮಧ್ಯೆ ಸ್ವ ಸಹಾಯ ಸಹಕಾರಿಗಳನ್ನು ಆರಂಭಿಸಲು ಅವರನ್ನು ಪ್ರೋತ್ಸಾಹ ನೀಡುವುದಲ್ಲದೇ ನೋಂದಣಿಗೆ ಹಾಗೂ ಅವರು ಚಟುವಟಿಕೆ ಆರಂಭಿಸಲೂ ಸಹ ಅವರಿಗೆ ಸೂಕ್ತ ಸಲಹೆ ಹಾಗೂ ಮಾರ್ಗದರ್ಶನ ನೀಡುತ್ತಿದೆ.

ಈ ರೀತಿಯ ಚಟುವಟಿಕೆಗಳಲ್ಲಿ ಆಸಕ್ತಿ ಇರುವವರು ನನ್ನನ್ನೂ ಸಂಪರ್ಕಿಸಬಹುದು ಅಥವಾ ಈ ಕೆಳ ಕಾಣಿಸಿದ ವಿಳಾಸವನ್ನು ಸಂಪರ್ಕಿಸಬಹುದು: ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿಯಮಿತ, ನಂ.132, ಕೆ.ಎಚ್ ರಸ್ತೆ, ಬೆಂಗಳೂರು - 560 027 ದೂರವಾಣಿ: 080-22127003/4 ವೆಬ್ ಸೈಟ್: www.souharda.coop ಈ ಮೇಲ್: md@souharda.coop