ನಾಯಕರ ಸೃಜನತೆ

ನಾಯಕರ ಸೃಜನತೆ

ಹಿಂದುಳಿದ ದೇಶಗಳ ಅವಸ್ಥೆಗೆ ಜಾಗತಿಕ ಬಲಿಷ್ಟ ದೇಶಗಳನ್ನು ದೂರುವುದು ಆಂಶಿಕ ಸತ್ಯ ಅಷ್ಟೆ ಎಂದು ಇತ್ತೀಚಿನ [http://www.sampada.net/blog/anivaasi/27/09/2007/5805#comment-12364|ನನ್ನ ಬರಹಕ್ಕೆ ಶ್ರೀಕಾಂತರು ಪ್ರತಿಕ್ರಯಿಸಿದ್ದರು.] ಅದು ನಿಜವೂ ಹೌದು. ಆದರೆ, ಅದು  ಎಷ್ಟಂಶ ಅನ್ನೋದು ಅವರವರ ನಿಲುವಿಗೆ ತಳುಕು ಹಾಕಿಕೊಂಡಿರತ್ತದೆ ಅಲ್ಲವೆ ಎಂದು ಕೇಳಿದ್ದೆ. ಅವರ ಪ್ರತಿಕ್ರಿಯೆ ಬಗ್ಗೆ, ಮತ್ತು ನನ್ನ ಉತ್ತರದ ಬಗ್ಗೆ ಯೋಚಿಸಿದಾಗ ನಾನು ಹಾಗೆ ಯಾಕೆ ಹೇಳಿದೆ ಎಂದು ವಿವರಿಸಬೇಕು, ನನಗೆ ಯಾವ ನಾಯಕರು ನೆನಪಾದರು ಎಂದು ಹೇಳಬೇಕು ಅನಿಸಿತು.

ಮೊದಲನೇದಾಗಿ, ಹಿಂದುಳಿದ ದೇಶದ ನಾಯಕರುಗಳ ಸೃಜನಶೀಲತೆಯ ಕೊರತೆ ಬಗ್ಗೆಗಿನ ಮಾತು ಎಷ್ಟು ಸರಿ ಅಂತ ಯೋಚಿಸ್ತೀನಿ. ಹಾಗಾದರೆ ಬಲಿಷ್ಟ ನಾಡುಗಳ ನಾಯಕರಿಗೆ ಹೋಲಿಸಿ ಈ ಮಾತು ಬಂದಿರಬಹುದ ಎಂದು ಯೋಚಿಸಿದೆ. ಬಲಿಷ್ಟ ನಾಡುಗಳ ನಾಯಕರ ಸೃಜನಶೀಲತೆಯನ್ನು ಹುಡುಕ ಹೊರಟಾಗ ಸುಳ್ಳು, ಮೋಸ, ತಟವಟ ಕಾಣತ್ತೆ. ಅದನ್ನ ಸೃಜನಶೀಲತೆ ಅನ್ನೋದು ಹ್ಯಾಗೆ? ಇರಾಕಿನ ಸದ್ದಾಮ್ ಹುಸೇನ್ ಹತ್ತಿರ ಮಾರಕ ಅಸ್ತ್ರಗಳಿದೆ ಅಂತ ಯುಎನ್‌ನಲ್ಲಿ ಅಮೇರಿಕಾದ ಪ್ರತಿನಿಧಿಗಳು ಪ್ರಮಾಣ ಮಾಡಿ ಸುಳ್ಳು ಹೇಳಿದ್ದು ನಿಮಗೆ ನೆನಪಿರಬಹುದು. ಅಮೇರಿಕದ ಯಾವುದೋ ಕಾಲೇಜು ಹುಡುಗನ ಉತ್ತರ ಪತ್ರಿಕೆಯನ್ನೇ ಪ್ರಮಾಣ ಎಂದು ಬ್ರಿಟನ್ನಿನ ಪ್ರಧಾನಿ ಪಾರ್ಲಿಮೆಂಟಲ್ಲಿ ಮೇಜು ಗುದ್ದಿ ಯುದ್ಧ ಬೇಕೆಂದು ಸಾರಿದ್ದು ನಿಮಗೆ ನೆನಪಿರಬಹುದು. ಅವರ ಹಲವು ನಡವಳಿಕೆ ಈ ಬಗೆಯ ಸುಳ್ಳುಗಳ ಮೇಲೆ ನಿಂತಿರುವುದು ಸೃಜನಶೀಲತೆಯ ಕೊರತೆಯಿಂದ ಅಲ್ಲವೆ? ಸೃಜನಶೀಲತೆಯ ಕೊರತೆ ಕೆಲವೇ ದೇಶಗಳ ಸಮಾಚಾರವೆ? ಸೃಜನಶೀಲತೆ ಬರೇ ಬಲಿಷ್ಟ ದೇಶಗಳ ನಾಯಕರ ಸ್ವತ್ತೆ ಎಂದು ಯೋಚಿಸಿದೆ.

ಎರಡನೇದಾಗಿ, ಬಳಲುತ್ತಿರುವ ದೇಶಗಳ ನಾಯಕರಲ್ಲೂ ಸೃಜನಶೀಲ ವ್ಯಕ್ತಿತ್ವಗಳು ನನಗೆ ಕಾಣುತ್ತಾರೆ. ನನ್ನ ಅಲ್ಪ ಓದಿನಲ್ಲೇ ಕಂಡ ಕೆಲವು ಉದಾಹರಣೆಗಳನ್ನು ಕೊಡುವುದಾದರೆ : ಕೋಸವೋದ ಇಬ್ರಿಹಿಂ ರಗೋವ, ಬರ್ಮಾದ ಆಂಗ್ ಸಾನ್ ಸೂ ಚಿ, ಈಸ್ಟ್ ಟೀಮೋರಿನ ಕ್ಸನಾನಾ ಗುಸ್ಮಾವ್, ವೆನುಜವೇಲಾದ ಹ್ಯೂಗೋ ಚಾವೆಝ್, ಖರ್ದಿಷ್ ಜನರ ನಾಯಕ ಅಬ್ದಲ್ಲ ಒಚಲಾನ್, ಪ್ಯಾಲಸ್ತೀನಿನ ಮರ್ವಾನ್ ಬರ್ಘೂತಿ ಹೀಗೆ... ಇಂಥವರಲ್ಲಿ ಎಲ್ಲರ ನಿಲುವುಗಳೂ ನಮಗೆ ಒಪ್ಪಿತವಿಲ್ಲದೇ ಇರಬಹುದು. ಆದರೆ ಅವರ ನಾಯಕತ್ವವನ್ನು ಗಮನವಿಟ್ಟು ನೋಡುವ ಅಗತ್ಯವಂತೂ ಖಂಡಿತ ಇದೆ. ಏಕೆಂದರೆ ಆ ಕೆಲಸವನ್ನು ಜಾಗತಿಕ ಶಕ್ತಿಗಳ ಅಂಕೆಯಲ್ಲಿರುವ ಸುದ್ದಿ ಮಾಧ್ಯಮಗಳು ಮಾಡುವ ಸಂಭವ ತೀರ ವಿರಳ. ಮಾಡಿದಾಗಲೂ ಅವರ ಬಗ್ಗೆ ಒಳ್ಳೆಯ ಮಾತುಗಳನ್ನು ಹೇಳುವ ಸಂಭವ ಮತ್ತೂ ವಿರಳ.

ಕೋಸವೋ ತಿಕ್ಕಾಟದಲ್ಲಿ ಹತ್ತಾರು ವರ್ಷ ಮುಂದಾಳಾಗಿದ್ದ ಗಾಂಧಿವಾದಿ ರಗೋವನನ್ನು ಡೇಟನ್ ಅಗ್ರಿಮೆಂಟಿನ ಹೊತ್ತಿಗೆ ಮೂಲೆ ಗುಂಪು ಮಾಡಿಬಿಟ್ಟಿದ್ದರು. ಬದಲಾಗಿ ಹಿಂಸೆಯನ್ನು ನಂಬಿದ ಕೋಸವೋದ ಕೆಎಲ್‌ಏನಂಥ ಗುಂಪಿಗೆ ಅಸ್ತ್ರಗಳ ಮೂಲಕ ಬೆಂಬಲ ಕೊಡಬೇಕೆಂದು ಬ್ರಿಟನ್ ಪ್ರಧಾನಿ ಮಾರ್ಗರೆಟ್ ಥ್ಯಾಚರ್‍ ಹೇಳಿದ್ದು ಕೇಳಿದ್ದೇನೆ. ಆಲ್ಬೇನಿಯಾದವರ ಮೇಲಿನ ರಗೋವನ ಪ್ರಭಾವ ಒಡೆಯುವಂತೆ ಮಾಡಿದ್ದು ಇದೇ ಬಲಿಷ್ಟ ರಾಷ್ಟ್ರಗಳಲ್ಲದೆ ಮತ್ತಾರು? ಅದೂ ಕೊಸವೋದ ಅಲ್ಬೇನಿಯನ್ ಜನಾಂಗದಲ್ಲಿ ಬೇಧ ಬಿತ್ತುವ ಮೂಲಕ.

ಬರ್ಮಾದಲ್ಲಿ ಅಮೇರಿಕಾದ ತೈಲ ಕಂಪನಿಗಳು ಚೆನ್ನಾಗಿ ಲಾಭ ಮಾಡುತ್ತಿವೆ. ತೈಲ ಉತ್ಖನನಕ್ಕೆ ಸ್ಥಳೀಯ ಜನರ ವಿರೋಧವಿದೆ. ಅದನ್ನು ಈ ಕಂಪನಿಗಳು ಬರ್ಮಾದ ಮಿಲಟರಿಗೆ ಆಮಿಷ ತೋರಿಸಿ ಸದೆಬಡಿಯುತ್ತಿವೆ. ಬರ್ಮಾದ ಪೈಪ್‌ಲೈನಗಳ ಉದ್ದಕ್ಕೂ ಇದೇ ಕಂಪನಿಗಳ ಅಪ್ಪಣೆಯ ಮೇರೆಗೆ ಮಿಲಟಿರಿ ಲ್ಯಾಂಡ್‌ಮೈನ್‌ಗಳನ್ನು ಹೂತಿಟ್ಟು ಮಕ್ಕಳು, ಹೆಂಗಸರು ಎನ್ನದೆ ಹಳ್ಳಿಗರು ಕೈಕಾಲು ಕಳೆದುಕೊಳ್ಳುವಂತೆ ಆಗಿದೆ. ಇಂಥ ಕ್ರೂರ ಸತ್ತೆಯ ಎದುರು, ಬಂಧನದಲ್ಲಿದ್ದುಕೊಂಡೇ ದೇಶವನ್ನು ಜನತಂತ್ರಕ್ಕಾಗಿ ಹುರಿದುಂಬಿಸುವ ಕೆಲಸ ಮಾಡುತ್ತಿರುವ ಆಂಗ್‌ ಸಾನ್ ಸೂಚಿಯ ಸೃಜನಶೀಲತೆಯನ್ನು ಪ್ರಶ್ನೆಮಾಡುವುದಕ್ಕಾಗುತ್ತದೆಯೆ?

ಈಸ್ಟ್‌ ತೀಮೋರಿನ ಕ್ಸನಾನಾ ಗುಸ್ಮಾವ್‌ನ ನಾಯಕತ್ವದ ಫ್ರೆಟಲಿನ್ ಗುಂಪನ್ನು ಇಂಡೊನೇಷಿಯ ಸದೆಬಡಿಯುತ್ತಿದ್ದಾಗ ಅಮೇರಿಕಾ, ಆಸ್ಟ್ರೇಲಿಯಾ ಅವರಿಗೆ ಯುದ್ಧ ತರಬೇತಿ, ಅಸ್ತ್ರಗಳನ್ನು ಚಕಾರವೆತ್ತದೆ ಮಾರುತ್ತಿದ್ದವು. ಇಷ್ಟಾಗಿಯೂ, ಜಗತ್ತಿನ ಸಕಲ ರಾಷ್ಟ್ರಗಳ ಎದುರು ತಮ್ಮ ಪಾಡನ್ನು ಬಣ್ಣಿಸಿ ಯುಎನ್ ತಮ್ಮ ಪರವಾಗಿ ನಿಲುವು ತೆಕ್ಕೊಳ್ಳುವಂಥ ಕೆಲಸವನ್ನು ಮಾಡಿದ ಕ್ಸನಾನಾ ಮತ್ತು ಆತನ ಸಂಗಡಿಗರ ಸೃಜನಶೀಲತೆ ಕಡಿಮೆಯೆ?

ಅಂತೆಯೆ, ಅರಾಫತ್‌ನ ದುರಾಡಳಿತವನ್ನು ಎತ್ತಿ ಆಡಿದ ಮರ್ವಾನ್ ಬರ್ಘೂತಿಯನ್ನು ಆದಷ್ಟು ಅದುಮಿಡುವ ಪ್ರಯತ್ನಗಳು ನಡೆದೇ ಇವೆ. ೨೦೦೧ರಲ್ಲಿ ಅವನು ಬಿಡುಗಡೆಯಾದಾಗ ಅವನನ್ನು ಕೊಂದು ಮುಗಿಸಿಬಿಡಲು ಇಸ್ರೇಲ್ ಪ್ರಯತ್ನಿಸಿ ಸೋತಿತು. ಶಾಂತಿ ಮತ್ತು ದಿಟ್ಟತೆಯ ಬಗ್ಗೆ ಮಾತಾಡುವ, ಪ್ಯಾಲಸ್ಟೀನ್ ಜನರಲ್ಲಿ ತುಂಬಾ ಜನಪ್ರಿಯನಾಗಿರುವ ಬರ್ಘೂತಿ ಇಸ್ರೇಲ್ ಸೆರೆಯಲ್ಲಿದ್ದಾನೆ. ಅರಾಫತ್ ಹೋದ ನಂತರ ಸೆರೆಯಲ್ಲಿಂದಲೇ ಚುನಾವಣೆಗೆ ನಿಲ್ಲುತ್ತೇನೆಂದ. ಅವನು ಗೆಲ್ಲಬಹುದೆಂಬ ನಿರೀಕ್ಷೆಯಿಂದ ಎದ್ದ ಕೋಲಾಹಲ ನಿಮಗೆ ನೆನಪಿರಬಹುದು. ನಂತರದ ಚುನಾವಣೆಯಲ್ಲಿ ಹಮಾಸ್ ಗೆದ್ದಿದ್ದು, ಪಾಶ್ಚಿಮಾತ್ಯರಿಗೆ ಡೆಮಾಕ್ರಸಿಯೇ ಕಹಿಗುಳಿಗೆಯಾಗಿದ್ದು ವಿಪರ್ಯಾಸವಲ್ಲ ಅನಿಸುತ್ತದೆ.

ಹೀಗೆ ಬೇರೆ ಬೇರೆ ಬಗೆಯಲ್ಲಿ ಕೆಲಸ ಮಾಡುತ್ತಿರುವ ಇನ್ನುಳಿದ ನಾಯಕರ ಬಗ್ಗೆಯೂ ಯೋಚಿಸಿ ನೋಡಿ. ಹ್ಯೂಗೋ ಚಾವೆಝ್ ಅಮೇರಿಕೆಯನ್ನು ಎದುರು ಹಾಕಿಕೊಂಡು ಪದೇ ಪದೇ ಪಡುತ್ತಿರುವ ಪಾಡು ಎಲ್ಲರಿಗೂ ಗೊತ್ತಿರುವುದೇ. ಹಲವಾರು ದೇಶಗಳಲ್ಲಿ ಹರಿದು ಹಂಚಿಹೋಗಿರುವ ಖರ್ದಿಶ್ ಜನರನ್ನು ಭಾವನಾತ್ಮಕವಾಗಿ ಒಗ್ಗೂಡಿಸುತ್ತಿದ್ದ ನಾಯಕ ಅಬ್ದುಲ್ಲ ಒಚಲಾನ್‌ನನ್ನು ಈಜಿಪ್ಟಿಂದ ಹಿಡಿದು ತಂದು, ಟರ್ಕಿ ವಿವಾದಾತ್ಮಕ ವಿಚಾರಣೆ ಮಾಡಿ ನೇಣು ಹಾಕಲು ನಿರ್ಧರಿಸಿತು. ನಂತರ ಯೂರೋಪಿಯನ್ ಯೂನಿಯನ್ ಸೇರಲು ತೊಂದರೆ ಆಗಬಹುದೆಂದು ನೇಣನ್ನು ಆಜೀವ ಶಿಕ್ಷೆ ಎಂದು ಬದಲಿಸಿ ಅವನೀಗ ಒಂಟಿ ಜೈಲಿನಲ್ಲಿ ಕೊಳೆಯುತ್ತಿರುವುದು ನಿಮಗೆ ಗೊತ್ತಿರಬಹುದು.

ಇಷ್ಟು ಹೇಳಿದ್ದು - ಎಂಥ ಸೃಜನಶೀಲ ನಾಯಕನೂ ಜೈಲಿನಿಂದ, ನೇಣಿನಿಂದ, ಬಂದೂಕಿನಿಂದ ಮುರಿದು ಬೀಳುವ ದಾರುಣ ಪರಿಸ್ಥಿತಿ ಹೆಚ್ಚುತ್ತಿರುವುದರ ಬಗ್ಗೆ ಸ್ವಲ್ಪ ಯೋಚಿಸಿ ಎಂದು. ಹಿಂದುಳಿದ ದೇಶಗಳಲ್ಲಿ, ಅದರ ನಾಯಕರಲ್ಲಿ ಕುಂದು ಕೊರತೆಗಳೇ ಇಲ್ಲ ಎಂದು ನಾನು ಹೇಳುತ್ತಿಲ್ಲ. ಅಥವಾ ತಮ್ಮ ಕುಂದು-ಕೊರತೆಗಳಿಗೆ ಜವಾಬ್ದಾರಿ ತೆಗೆದುಕೊಳ್ಳಕೂಡದು ಎಂದೂ ಹೇಳುತ್ತಿಲ್ಲ. ಮೇಲೆ ಹೇಳಿದ ನಾಯಕರಲ್ಲೂ ಕುಂದು ಕೊರತೆಗಳಿವೆ, ಹಲವಾರು ಆರೋಪಗಳೂ ಇವೆ. ನಾಯಕರು ಜನರನ್ನು ದಿಕ್ಕುತಪ್ಪಿಸುವ ಮಾತಾಡಿದರೂ, ತಮ್ಮ ತಪ್ಪಿಗೆ ಬೇರೆಲ್ಲೋ ಬೊಟ್ಟು ಮಾಡಿ ತೋರಿಸದರೂ ಕೂಡಲೆ ಜನರಿಗೆ ಅದರ ಅರಿವಾಗುತ್ತದೆ. ಸುದ್ದಿ ಮಾಧ್ಯಮಗಳು ಮಾತ್ರ ವರದಿ ಮಾಡುವಾಗ ಪ್ರಶ್ನಿಸುವುದು ಕಡಿಮೆ.

ಈವತ್ತಿನ ಜಾಗತಿಕ ಸಂದರ್ಭದಲ್ಲಿ ಪ್ರಬಲ ರಾಷ್ಟ್ರಗಳು ಅನೈತಿಕವಾಗಿ ನಡೆದುಕೊಳ್ಳುತ್ತಿರುವುದನ್ನು ಗುರುತಿಸಬೇಕು. ಅದರಿಂದ ಉಂಟಾಗುತ್ತಿರುವ ಅತ್ಯಾಚಾರಗಳನ್ನು ಗಮನಿಸಬೇಕು. ಏಲ್ಲೋ ಯಾರಿಗೋ ಮೋಸವಾದರೆ ನಮಗೇನು ಎಂದು ಅಂಡಿಗೆ ಕೈಕೊಟ್ಟು ಕೂತು ಪ್ರಶ್ನಿಸದೆ ಹೋದರೆ, ಪ್ರತಿರೋಧ ವ್ಯಕ್ತಪಡಿಸದೇ ಹೋದರೆ - ಆಗುತ್ತಿರುವ ಅನ್ಯಾಯಕ್ಕೆ ನಾವೂ ಹೊಣೆಗಾರರಾಗುತ್ತೇವೆ.

Rating
No votes yet

Comments