ಗೋರಖ್ ಪುರ

ಗೋರಖ್ ಪುರ

ಬರಹ

ಗೋರಖ್ ಪುರಕ್ಕೆ ಹೋಗಬೇಕು, ಸಿದ್ಧರಾಗಿ ಎಂದು ಮೇಲಧಿಕಾರಿಗಳಿಂದ ಕರೆ ಬಂದಾಗ ಮನಸ್ಸು ಗೋರಖ ಎಂಬ ಹೆಸರಿನ ಬಗ್ಗೆ ಚಿಂತಿಸತೊಡಗಿತು. ಉತ್ತರ ಭಾರತೀಯರು ಲಕ್ಷ ಎನ್ನುವ ಕಡೆ ಲಖ ಎಂದು ಉಚ್ಛರಿಸುತ್ತಾರಷ್ಟೆ, ಹಾಗಿದ್ದಲ್ಲಿ ಗೋರಖ, ಗೋರಕ್ಷ ಇರಬಾರದೇಕೆ ಎಂದೆನ್ನಿಸಿತು.ಗೋರಕ್ಷ ಎಂದಾಕ್ಷಣವೇ ನಮ್ಮ ವಚನ ಚಳವಳಿಯ ಅಲ್ಲಮ ನೆನಪಿಗೆ ಬಂದ. ಜೈನ ಧರ್ಮದ ಬಾಹುಳ್ಯ ಹೆಚ್ಚಿ, ಶೈವ ಸಿದ್ಧಾಂತಗಳು ಮೂಲೆಗುಂಪಾಗಿ ಅಸಹನೀಯವೆನಿಸತೊಡಗಿದ್ದ ಕಾಲದಲ್ಲಿ ತನ್ನ ಸನ್ನಡತೆಯ ನಿಮಿತ್ತ ಜನಪ್ರಿಯನಾಗಿದ್ದ ಒಬ್ಬ ಸರ್ಕಾರಿ ಅಧಿಕಾರಿ ಬಸವಣ್ಣನಿಂದಾಗಿ ಶೈವ ಧರ್ಮದ ಅನುಯಾಯಿಗಳು ಬೀದಿ ಬೀದಿಯಲ್ಲೂ ಧೈರ್ಯದಿಂದ ಮಾತಾಡತೊಡಗಿದ್ದ ಕಾಲವದು. ಅದೇ ಗುಂಪಿನ ಅದೇ ಗುಂಗಿನ ಅಲ್ಲಮನೆಂಬ ಅಲೆಮಾರಿ ಊರೂರು ಸುತ್ತಿ ಶೈವ ಸಿದ್ಧಾಂತಗಳ ಪುನರ್ ನವೀಕರಣದಲ್ಲಿ ತೊಡಗಿದ್ದ. ಅದೇ ಸಂದರ್ಭದಲ್ಲಿ ಸಿದ್ಧರಾಮನೆಂಬ ಒಬ್ಬ ಜನೋಪಕಾರಿ ಇಂಜಿನಿಯರನು ಜನಹಿತಕ್ಕಾಗಿ ಜನರಿಂದಲೇ ಶ್ರಮದಾನ ಪಡೆದು ಕೆರೆ ಕಾಲುವೆಗಳನ್ನು ಕಟ್ಟಿಸಿ ಜನಸೇವೆ ಮಾಡುತ್ತಿದ್ದ. ಹೀಗೆ ಒಂದು ರೀತಿಯಲ್ಲಿ ಸಾಮಾಜಿಕ ಸುಧಾರಣೆಯಲ್ಲಿ ತೊಡಗಿದ್ದ ಅವನನ್ನು ಕುಹಕಿಗಳು ಒಡ್ಡರಾಮನೆಂದೂ ಕರೆಯುತ್ತಿದ್ದರು. ವೀರಶೈವ ಮತ ಪ್ರಚಾರದಲ್ಲಿ ತೊಡಗಿದ್ದ ಅಲ್ಲಮ ಸಿದ್ಧರಾಮನಲ್ಲಿಗೆ ಬಂದು ಜನಸೇವೆಯೊಂದಿಗೆ ಲಿಂಗ ಸೇವೆಯನ್ನೂ ಮಾಡಲೆಳಸಿದ. ವಾದ ವಿವಾದ ತರ್ಕ ವಿತರ್ಕಗಳು ನಡೆದು ಸಿದ್ಧರಾಮ ಷಟ್ ಸ್ಥಲ ಸಿದ್ಧಾಂತಕ್ಕೆ ಒಲಿದನೋ ಇಲ್ಲವೋ ತಿಳಿಯದು.ಹೀಗೆ ಅಲ್ಲಮ ಭೆಟ್ಟಿಯಾದ ಮತ್ತೊಬ್ಬ ಗಣ್ಯ ಗೋರಕ್ಷ. ಈತ ನಾಥಪಂಥದ ಯೋಗಿ, ಆಗ್ಗೆ ಸುಮಾರು ಇನ್ನೂರು ಮುನ್ನೂರು ವರ್ಷಗಳಿಂದ ಪ್ರಚಲಿತವಾಗಿದ್ದ ಈ ಪಂಥದ ಅನುಯಾಯಿಗಳು ಹಿಮಾಲಯದ ಬುಡದಲ್ಲೂ ಕೃಷ್ಣೆ ಕಾವೇರಿಯರ ಕಣಿವೆಯಲ್ಲೂ ಪಸರಿಸಿದ್ದರು. ಅಲ್ಲೆಲ್ಲಾ ಅವರು ಮಠಗಳನ್ನು ಸ್ಥಾಪಿಸಿ ಕಠಿಣಯೋಗ ಮತ್ತು ಸನ್ಯಾಸತ್ವವನ್ನು ಸಾಧಿಸಿ ಜೀವಿಸುತ್ತಿದ್ದರು. ಅವರು ಗುರುವಿಗೆ ತುಂಬಾ ಗೌರವ ಮಹತ್ವಗಳನ್ನು ನೀಡುತ್ತಿದ್ದರು. ಶಿವನೇ ಪರಮಗುರು ಹಾಗೂ ಪರಮಯೋಗಿ, ಸಾಧನೆಯಿಂದ ತಾವೂ ಶಿವನ ಸ್ಥಾನಕ್ಕೇರಬಹುದು. ಉಳಿದೆಲ್ಲ ಮಂದಿ ತಮ್ಮ ನೆಲೆಗೆ ನಿಲುಕದ ಹುಲುಮಾನವರೆಂದು ಬಗೆದಿದ್ದವರು. ಅಲ್ಲಮನ ಪ್ರತಿಪಾದನೆಯೂ ಹೆಚ್ಚು ಕಡಿಮೆ ಇದೇ ಆಗಿತ್ತು. ಆದರೆ ಹುಲು ಮಾನವರನ್ನೂ ಶಿವನತ್ತ ಸೆಳೆಯುವ ದೊಡ್ಡ ಆದರ್ಶ ಅವನಿಗಿತ್ತು. ಹೀಗೆ ಗೋರಕ್ಷನ ವಜ್ರಕಾಯದ ಪರೀಕ್ಷೆ ಅಲ್ಲಮನ ನಿರೀಶ್ವರ ಕಾಯದ ಪರೀಕ್ಷೆಗಳು ನಡೆದು ಇಬ್ಬರೂ ಸಮಬಲರಾಗಿ ನಿಲ್ಲುತ್ತಾರೆ. ಗೋರಕ್ಷ ಕೊನೆಗೆ ತನ್ನ ದಾರಿ ತನಗೆಂದು ಹೊರಟುಬಿಡುತ್ತಾನೆ.

ಈ ಗೋರಕ್ಷ ಹಾಗೂ ಗೋರಖಪುರ ಎರಡೂ ಒಂದಕ್ಕೊಂದು ತೆಕ್ಕೆ ಹಾಕಿಕೊಂಡ ಪದಗಳೇ? ಎಂಬ ಜಿಜ್ಞಾಸೆ ಮೂಡಿತು. ಅಂತರ್ಜಾಲದಲ್ಲಿ ಹುಡುಕಿದಾಗ ಗೋರಖಪುರವು ಪೂರ್ವ ಅಕ್ಷಾಂಶ ೮೩.೪ ಡಿಗ್ರಿ ಹಾಗೂ ಉತ್ತರ ರೇಖಾಂಶ ೨೬.೮ ಡಿಗ್ರಿಯಲ್ಲಿ ನೆಲೆಗೊಂಡಿರುವ ಉತ್ತರ ಪ್ರದೇಶದ ಒಂದು ಜಿಲ್ಲಾ ಕೇಂದ್ರ. ರಪ್ತಿ ಹಾಗೂ ರೇವತಿ ನದಿಗಳ ನಡುವೆ ಇದ್ದು ಫಲವತ್ತಾದ ಗೋಧಿ ಹೊಲಗಳಿಂದಲೂ ದಟ್ಟವಾದ ಸಾಲವೃಕ್ಷ ಕಾಡಿನಿಂದಲೂ ಆವೃತವಾಗಿದೆಯೆಂದೂ ಉಷ್ಣತೆ ೨ ಡಿಗ್ರಿ ಸೆಲ್ಸಿಯಸ್ ನಿಂದ ಹಿಡಿದು ೪೯ ಡಿಗ್ರಿ ಸೆಲ್ಸಿಯಸ್ ವರೆಗೆ ಇರುವುದೆಂದೂ ತಿಳಿದು ಬಂತು. ಗೋರಕ್ಷನ ಬಗ್ಗೆ ಏನೂ ಮಾಹಿತಿ ಇರಲಿಲ್ಲ.ಗೋರಖಪುರಕ್ಕೆ ಆ ಹೆಸರು ಬಂದಿರುವುದು ಗೋರಖನಾಥನೆಂಬ ಶೈವ ಮುನಿಯ ದೆಸೆಯಿಂದ. ನಾಥ ಪಂಥದ ಈ ಶಿವಾನುಯಾಯಿಗಳಲ್ಲಿ ಗುರುಭಕ್ತಿಗೆ ಹೆಚ್ಚಿನ ಪ್ರಾಮುಖ್ಯತೆ ಇದೆ. ಈ ಗೋರಖನಾಥ ಬೇರಾರೂ ಆಗಿರದೆ ಸ್ವತಃ ಶಿವನೇ ಎಂದೂ ಸಹ ವಾದವಿದೆ. ಇಲ್ಲಿನ ಗೋರಖನಾಥ ಗುಡಿಯಲ್ಲಿ ಸಾಮಾನ್ಯವಾಗಿ ಶಿವನ ಗುಡಿಯಲ್ಲಿರಬಹುದಾದ ಲಿಂಗ ಇಲ್ಲವೇ ಇಲ್ಲ. ಇಲ್ಲಿರುವುದು ಗೋರಖನಾಥನ ಮೂರ್ತಿ. ಒಳಗಿನ ಮಂಟಪದಲ್ಲಿ ನಾಥಪಂಥದ ಯೋಗಿಗಳ ಹಾಗೂ ನವನಾಥರ ಪ್ರತಿಮೆಗಳನ್ನು ಕೂಡಿಸಲಾಗಿದೆ. ಇಂದು ಗೋರಖನಾಥನ ಭಕ್ತಕೋಟಿ ಅಪಾರವಾಗಿದ್ದು ಅದರಲ್ಲಿ ಸಮಾಜದ ಪ್ರತಿಷ್ಠಿತ ವ್ಯಕ್ತಿಗಳೂ ಇದ್ದಾರೆ. ಇಂದಿನ ಈ ಗೋರಖಪುರ ಪಟ್ಟಣದ ಅರ್ಧಭಾಗವೆಲ್ಲ ಈ ಗುಡಿಯ ಆಸ್ತಿಯೇ ಆಗಿದ್ದು ಆ ಸ್ಥಿರ ಆಸ್ತಿಯನ್ನು ಗೋರಖಪುರ ವಿಶ್ವವಿದ್ಯಾಲಯಕ್ಕೆಂದು ಧಾರೆಯೆರೆದು ಕೊಟ್ಟಿದ್ದಾರೆ.ಈ ಗುಡಿಯನ್ನು ಹೊರತುಪಡಿಸಿದರೆ ಗೋರಖಪುರದಲ್ಲಿ ನೋಡತಕ್ಕ ಪ್ರೇಕ್ಷಣೀಯ ಸ್ಥಳಗಳು ಏನೂ ಇಲ್ಲವೆನ್ನುವಷ್ಟು ವಿರಳ. ಇಲ್ಲೊಂದು ರೈಲ್ವೆ ಜಂಕ್ಷನ್ ಹಾಗೂ ಪುಟ್ಟ ವಿಮಾನ ನಿಲ್ದಾಣ ಇರುವುದರಿಂದ ದೊಡ್ಡ ವ್ಯಾಪಾರೀ ಕೇಂದ್ರವಾಗಿದೆ. ನಗರದೊಳಗಿನ ಗೋಲ್ ಘರ್, ರೇತಿಚೌಕ್, ಘಂಟಾಘರ್, ಸಿನೆಮಾರೋಡ್, ಬ್ಯಾಂಕ್ ರೋಡ್, ಸ್ಟೇಷನ್ ಚೌರಾಹ ಇವೆಲ್ಲವೂ ವ್ಯಾಪಾರೀ ಕೇಂದ್ರಗಳಾಗಿದ್ದು ಸದಾ ಗಿಜಿಗುಟ್ಟುವ ಜನಜಂಗುಳಿಯಿಂದ ತುಂಬಿರುತ್ತದೆ. ಪಟ್ಟಣದ ಹೊರವಲಯದಲ್ಲಿರುವ ಬಶಾರತ್ ಪುರವು ಹಿಂದೂ ಕ್ರೈಸ್ತರ ಭಾವೈಕ್ಯತೆಯ ಊರು ಎನಿಸಿದೆ. ಇಂಗ್ಲೀಷರ ಆಳ್ವಿಕೆಯ ಕಾಲದಲ್ಲಿ ಇದು ಸ್ವಾತಂತ್ರ್ಯ ಚಳವಳಿಯ ಕೇಂದ್ರಬಿಂದುವಾಗಿತ್ತು. ಈ ಊರಿನ ಸ್ವಾತಂತ್ರ್ಯವೀರರ ಸ್ಮರಣೆಗಾಗಿ ಗೋರಖಪುರ ನಗರಸಭೆಯ ಆವರಣದಲ್ಲಿ ಸ್ಮಾರಕವೊಂದನ್ನು ನಿಲ್ಲಿಸಲಾಗಿದೆ. ಈ ಸ್ಮಾರಕದಲ್ಲಿರುವ ಮೊತ್ತ ಮೊದಲ ಹೆಸರು ಮೈಕೆಲ್.ಈ ಸ್ವಾತಂತ್ರ್ಯ ಸಂಗ್ರಾಮದ ವಿಚಾರ ಬಂದಾಗ ಇನ್ನೊಂದು ವಿಷಯವುಂಟು. ಗೋರಖಪುರದ ಪೂರ್ವದಿಕ್ಕಿನಲ್ಲಿ ೧೮ ಕಿಲೋಮೀಟರು ದೂರಲ್ಲಿರುವ ಚೋರಿಚೌರಾಹಕ್ಕೆ ಸ್ವಾತಂತ್ರ್ಯ ಚಳವಳಿಯ ಸಂದರ್ಭದಲ್ಲಿ ಒಂದು ಪ್ರಮುಖ ಸ್ಥಾನವಿದೆ. ಇಲ್ಲಿನ ಇಂಗ್ಲೀಷರ ಪೊಲೀಸ್ ಠಾಣೆಗೆ ಜನ ಕೊಳ್ಳಿ ಇಟ್ಟದ್ದು ಇಂದಿಗೂ ಸ್ಮಾರಕವಾಗಿ ಉಳಿದಿದೆ. ೧೯೨೦ರಲ್ಲಿ ಗೋರಖಪುರದಲ್ಲಿ ನಡೆದ ಸಮಾವೇಶದಲ್ಲಿ ಮಹಾತ್ಮಗಾಂಧಿಯವರು ಸ್ವದೇಶೀ ಆಂದೋಲನಕ್ಕೆ ಕರೆ ನೀಡಿದರು. ವಿದೇಶೀ ಬಟ್ಟೆಗಳಿಗೆ ಗೋರಖಪುರವು ದೊಡ್ಡ ಮಾರುಕಟ್ಟೆಯಾಗಿದ್ದಿತು. ಗಾಂಧಿಯವರು ಚರಖ ಮತ್ತು ಗುಡಿಕೈಗಾರಿಕೆಗಳ ಮೂಲಕ ಸ್ವಾವಲಂಬನೆ ಎಂಬ ಮಹಾಮಂತ್ರವನ್ನು ಇಲ್ಲಿ ಉಸುರಿದಾಗ ದೇಶಾದ್ಯಾಂತ ಮಹಾ ಸಂಚಲನೆ ಉಂಟಾಯಿತು. ವಿದೇಶೀಯರ ಆರ್ಥಿಕ ವ್ಯವಸ್ಥೆ ಅಲ್ಲೋಲಕಲ್ಲೋಲವಾಯಿತು. ಭಾರತೀಯರು ಸ್ವಯಂಪ್ರೇರಿತರಾಗಿ ವಿದೇಶೀವಸ್ತುಗಳನ್ನು ಬಹಿಷ್ಕರಿಸಿದರು.ಗೋರಖಪುರದಲ್ಲೂ ದೇಶಪ್ರೇಮಿ ಕಾರ್ಯಕರ್ತರು ನೂರಾರು ಸಂಖ್ಯೆಯಲ್ಲಿ ಮನೆಮನೆಗೆ ತೆರಳಿ ಗಾಂಧಿಯವರ ಸಂದೇಶವನ್ನು ಸಾರಿದರು. ಆಗ ಚೋರಿಚೌರಾದಲ್ಲಿ ಪ್ರತಿ ಶನಿವಾರ ವಾರದ ಸಂತೆ ನೆರೆಯುತ್ತಿತ್ತು. ಅಲ್ಲೂ ಸಹ ಕಾರ್ಯಕರ್ತರು ಬಂದು ವಿದೇಶೀ ಬಟ್ಟೆಗಳನ್ನು ಖರೀದಿಸದಂತೆ ಜನತೆಗೆ ತಿಳಿಹೇಳಿದರು. ಎರಡು ಶನಿವಾರಗಳೂ ಹೀಗೆ ನಡೆದಾಗ ಕುಪಿತರಾದ ಧನಿಕರು ನಂತರದ ಶನಿವಾರ ಹೀಗಾಗಲು ಬಿಡಬಾರದೆಂದು ನಿಶ್ಚಯಿಸಿದರು. ಮುಂದಿನ ಶನಿವಾರ ಇದರ ಸುಳಿವರಿತ ಕಾರ್ಯಕರ್ತರು ಎರಡು ಮುರು ತಂಡಗಳಾಗಿ ಹೊರಟರು. ಮೊದಲ ತಂಡ ಬರುತ್ತಿದ್ದಂತೆ ಧನಿಕರೊಂದಿಗೆ ಶಾಮೀಲಾದ ಪೊಲೀಸರು ಲಾಠಿಚಾರ್ಜ್ ಮಾಡಿ ಅವರನ್ನು ಸದೆ ಬಡಿದರು. ಎರಡನೇ ತಂಡ ಹೆಚ್ಚಿನ ಸಂಖ್ಯೆಯಲ್ಲಿ ಬಂದಾಗ ಲಾಠಿ ಚಾರ್ಜ್ನೊಂದಿಗೆ ಗುಂಡಿನ ಮಳೆಯನ್ನೂ ಕರೆದರು. ಇದರಿಂದಾಗಿ ಅಸಂಖ್ಯರು ಜೀವತೆತ್ತರು. ಈ ಘಟನೆಯಿಂದ ರೊಚ್ಚಿಗೆದ್ದ ಚಳವಳಿಗಾರರು ಪೋಲೀಸರನ್ನು ಅಟ್ಟಿಸಿಕೊಂಡು ಹೋದರು. ತಮ್ಮ ಗುಂಡಿನ ದಾಸ್ತಾನು ಮುಗಿದಿದ್ದರಿಂದ ಅಲ್ಪಸಂಖ್ಯೆಯಲ್ಲಿದ್ದ ಪೋಲೀಸರು ಓಡಿ ಹೋಗಿ ಸ್ಟೇಷನ್ನಿನಲ್ಲಿ ಅಗುಳಿ ಹಾಕಿಕೊಂಡರು. ಲಾಠಿಚಾರ್ಜ್ನಲ್ಲಿ ಗಾಯಗೊಂಡವರ ಹಾಗೂ ಗತಿಸಿದವರ ಸಂಬಂಧಿಕರ ರೋದನವೂ ಆ ಘಟನಾಸ್ಥಳದ ಗಂಭೀರತೆಯನ್ನು ಇನ್ನಷ್ಟು ಪ್ರಕ್ಷುಬ್ಧಗೊಳಿಸಿತ್ತು. ಯಾರೋ ಒಂದಷ್ಟು ಸೀಮೆಎಣ್ಣೆ ಸುರಿದರು. ಆಗ ಹೊತ್ತಿಸಿದ ಕಿಡಿ ಇಡೀ ಪೋಲೀಸ್ ಠಾಣೆಯನ್ನು ಭಸ್ಮಗೊಳಿಸಿತು. ೨೩ ಮಂದಿ ಪೋಲೀಸರು ಸುಟ್ಟು ಕರಕಲಾದರು. ವಿಪರ್ಯಾಸವೆಂದರೆ ಆ ಸುಟ್ಟುಹೋದ ಠಾಣಾಧಿಕಾರಿ, ದಫೇದಾರ್, ಪೇದೆ, ಚೌಕಿದಾರ ಮುಂತಾದ ಎಲ್ಲ ೨೩ ಮಂದಿಯೂ ಭಾರತೀಯರೇ ಆಗಿದ್ದರು. ಆ ಪೋಲೀಸ್ ಠಾಣೆಯನ್ನು ಇಂದೂ ನೋಡಬಹುದಾಗಿದೆಯಲ್ಲದೆ ಅದರ ಹಿಂದುಗಡೆ ಸತ್ತ ಪೋಲೀಸರಿಗಾಗಿ ಸ್ಮಾರಕ ನಿಲ್ಲಿಸಲಾಗಿದೆ.ಈ ಘಟನೆಯಲ್ಲಿ ೨೩೨ ಮಂದಿಯನ್ನು ಬಂಧಿಸಿ ವಿಚಾರಣೆಗೊಳಪಡಿಸಿ ಕೆಲವರಿಗೆ ಮರಣದಂಡನೆ ಹಾಗೂ ಹಲವರಿಗೆ ಆಜೀವ ಕಾರಾಗೃಹ ಶಿಕ್ಷೆ ವಿಧಿಸಲಾಯಿತು. ಆದರೆ ಮೋತಿಲಾಲ ನೆಹರೂ ಹಾಗೂ ಮದನಮೋಹನ ಮಾಳವೀಯರು ಆರೋಪಿಗಳ ಪರ ವಕಾಲತ್ತು ವಹಿಸಿ ಹೈಕೋರ್ಟಿಗೆ ಅಪೀಲು ಮಾಡಿದರು. ವಿಚಾರಣಾವಧಿಯಲ್ಲಿ ಇಬ್ಬರು ತೀರಿಕೊಂಡರು, ಒಬ್ಬನನ್ನು ವಿಚಾರಣೆಯಿಂದ ಹೊರತುಪಡಿಸಲಾಯಿತು, ಸ್ವಲ್ಪವೇ ಜನಬಿಡುಗಡೆಗೊಂಡರು. ಇವರೆಲ್ಲರ ತ್ಯಾಗಕ್ಕೆ ಮೂಕ ಸಾಕ್ಷಿಯಾಗಿ ಚೌರೀ ಚೌರಾಹದ ರೈಲುನಿಲ್ದಾಣದ ಬಳಿ ಹಾಲುಗಲ್ಲಿನ ಸ್ಮಾರಕವೊಂದು ಆಕಾಸದೆತ್ತರಕ್ಕೆ ತಲೆಯೆತ್ತಿ ನಿಂತಿದೆ.ಈ ಚೋರಿಚೌರಾಹಕ್ಕೆ ಹೋಗುವ ದಾರಿಯಲ್ಲಿ ಗೋರಖಪುರ ನಗರಕ್ಕೆ ಹೊಂದಿಕೊಂಡಂತೆಯೇ ಭಾರೀ ದೊಡ್ಡ ಸರೋವರವಿದೆ. ಎತ್ತ ನೋಡಿದರೂ ಎಲ್ಲೆಯೇ ಕಾಣದ ಈ ಸರೋವರದ ಹೆಸರು ರಾಮಗರ್ ತಾಲ್. ರಪ್ತಿ ನದಿಯು ಹರಿದು ಬಂದು ಈ ರಾಮಗರ್ ತಾಲ್ ಅನ್ನು ಸೇರುತ್ತದೆ. ಸುಮಾರು ೧೫೦೦ ಎಕರೆ ವಿಸ್ತೀರ್ಣದ ಈ ಕೆರೆಯೇ ಸುತ್ತಮುತ್ತಲಿನ ಹಲವಾರು ಊರುಗಳ ಅಂತರ್ಜಲದ ಸೆಲೆಯಾಗಿದೆ. ಹೀಗಾಗಿ ಗೋರಖಪುರ ನಗರಸಭೆಗೆ ನೀರು ಪೂರೈಕೆ ಒಂದು ಸಮಸ್ಯೆಯೇ ಅಲ್ಲ. ಆದರೆ ಮಳೆಗಾಲ ಬಂತೆಂದರೆ ಗೋರಖಪುರ ಊರು ಊರೇ ಅಲ್ಲ. ಎಲ್ಲಿ ನೋಡಿದರೂ ನೀರೇ ನೀರು. ಅಲ್ಲೊಂದು ಇಲ್ಲೊಂದು ನಡುಗಡ್ಡೆಗಳು. ಆಗ ರೈಲು ಬಸ್ಸು ಎಲ್ಲವೂ ಸ್ಥಗಿತ.ಗೌತಮ ಬುದ್ಧನು ಜನಿಸಿದನೆನ್ನಲಾಗುವ ಲುಂಬಿನಿ ಹತ್ತಿರದ ನೇಪಾಳದ ಗಡಿಯಲ್ಲಿದೆ. ಸಿದ್ಧಾರ್ಥನು ಬುದ್ದನಾಗುವ ಸಮಯದ ಸಂಕ್ರಮಣಕ್ಕೆ ವೇದಿಕೆಯಾದ ಗಯಾ, ಪ್ರಥಮ ಶಿಷ್ಯರಿಗೆ ಧರ್ಮಚಕ್ರ ಪ್ರವರ್ತನ ಸೂತ್ರ ಹಾಗೂ ತ್ರಿಪಿಟಕವನ್ನು ಬೋಧಿಸಿ ದೀಕ್ಷೆ ನೀಡಿದ ಸ್ಥಳ ಸಾರನಾಥ, ತನ್ನ ಜೀವನದ ೨೪ ಅಮೂಲ್ಯ ಚೈತ್ರ ಪೂರ್ಣಿಮೆಗಳನ್ನು ಕಂಡ ಮಥುರಾ, ಬುದ್ಧನ ಜೀವನದಲ್ಲಿ ಹಾದುಹೋಗುವ ಕಪಿಲವಸ್ತು, ಕೌಶಾಂಬಿ, ಕೊಪಿಯಾ, ಪಾವಾ, ಶ್ರಾವಸ್ತಿ, ವೈಶಾಲಿ ಇವೆಲ್ಲ ಗೋರಖಪುರದ ಪರಿಧಿಯಲ್ಲೇ ಇವೆ. ಬುದ್ಧನ ದೇಹಾಂತವಾದ ಸ್ಥಳ ಕುಶಿನಗರ ಇಲ್ಲಿಂದ ೫೦ ಕಿಲೋಮೀಟರು ದೂರದಲ್ಲಿದೆ.ಧಾರ್ಮಿಕ ಗ್ರಂಥಗಳ ಪ್ರಕಟನಾ ಕೇಂದ್ರವಾಗಿಯೂ ಗೋರಖಪುರ ವಿಜೃಂಭಿಸಿದೆ. ಇಲ್ಲಿರುವ ಗೀತಾ ಪ್ರೆಸ್ ಬಹಳಷ್ಟು ವರ್ಷಗಳಿಂದ ಗೀತೆಯ ವ್ಯಾಖ್ಯಾನ ಸಹಿತದ ಗ್ರಂಥಗಳನ್ನು ವಿವಿಧ ಗಾತ್ರಗಳಲ್ಲಿ ವಿವಿಧ ಭಾಷೆಗಳಲ್ಲಿ ಮುದ್ರಿಸಿ ಪ್ರಚುರಗೊಳಿಸುತ್ತಿದೆ.ಹಿಂದಿ ಭಾಷೆಯ ಪ್ರಸಿದ್ಧ ಕವಿ ಮುನ್ಶಿ ಪ್ರೇಮಚಂದರ ಕರ್ಮಭೂಮಿಯಾದ ಗೋರಖಪುರದಲ್ಲಿ ಹಿಂದಿ ಭಾಷೆ ನಡೆಯುತ್ತೆ. ಆದರೆ ಊರಾಚೆಯ ಹಳ್ಳಿಗಳಲ್ಲಿ ಚಲಾವಣೆಯಲ್ಲಿರುವುದು ಭೋಜ್ ಪುರಿ ಎಂಬ ಲಿಪಿಯಿಲ್ಲದ ಭಾಷೆ. ಇಲ್ಲೆಲ್ಲ ಭೋಜ್ ಪುರಿ ಭಾಷೆಯ ಸಿನಿಮಾಗಳು, ಧ್ವನಿಮುದ್ರಿಕೆಗಳೂ ಬಹು ಸಂಖ್ಯೆಯಲ್ಲಿ ಓಡುತ್ತವೆ.ಗೋರಖಪುರಕ್ಕೆ ದೆಹಲಿ, ಲಕ್ನೊ, ವಾರಣಾಸಿ ಹಾಗೂ ಪಾಟ್ನಾಗಳಿಂದ ಉತ್ತಮ ರೈಲು ಸಂಪರ್ಕವಿದೆ. ಇಲ್ಲಿನ ವಾಯುನೆಲೆಯ ವಿಮಾನ ನಿಲ್ದಾಣವು ಸಾರ್ವಜನಿಕರಿಗೂ ತೆರೆದಿದ್ದು ದೆಹಲಿ ಕಲ್ಕತ್ತಾಗಳಿಂದ 'ಸಹಾರಾ' ರವರ ವಿಮಾನ ಸೇವೆ ಇದೆ. ಇತ್ತೀಚಿನ ದಿನಗಳಲ್ಲಿ ಕುಖ್ಯಾತಿ ಹೊಂದಿರುವ ಅಯೋಧ್ಯೆ ಇಲ್ಲಿಂದ ೯೦ ಕಿಲೋಮೀಟರು ದೂರದಲ್ಲಿದೆ. ಗೋರಖಪುರದ ದಕ್ಷಿಣಕ್ಕೆ ಸುಮಾರು ೨೨೫ ಕಿಲೋಮೀಟರುಗಳ ಅಂತರದಲ್ಲಿ ಪ್ರಖ್ಯಾತ ವಾರಣಾಸಿ ಇರುವುದರಿಂದ ಕಾಶೀಯಾತ್ರೆಯನ್ನೂ ಮಾಡಬಹುದು.ಗೋರಖಪುರಕ್ಕೆ ನೂರು ಕಿಲೋಮೀಟರು ಉತ್ತರಕ್ಕಿರುವ ಸೋನಾಲಿಯು ಭಾರತ ನೇಪಾಳಗಳ ಗಡಿದ್ವಾರವಾಗಿದ್ದು ಮುಕ್ತವಾಗಿ ಹೋಗಿಬರಬಹುದಾಗಿದೆ. ನೇಪಾಳವನ್ನು ಪ್ರವೇಶಿಸಲು ಗೋರಖ್ ಪುರವೇ ರಾಜಮಾರ್ಗ. ಹೀಗಾಗಿ ಈ ಊರು ಕಾಳಸಂತೆ ಹಾಗೂ ಕಳ್ಳಸಾಗಾಣಿಕೆಗಳ ನೆಲೆವೀಡೂ ಆಗಿದೆ. ನೇಪಾಳವು ಗೋರಖನಾಥನೊಂದಿಗೆ ಅವಿನಾಭಾವ ಸಂಬಂಧ ಹೊಂದಿದೆ. ಬರಪೀಡಿತ ನಾಡಿಗೆ ಸುಭಿಕ್ಷವನ್ನು ಕರುಣಿಸಿದನೆಂಬ ಕಾರಣಕ್ಕೆ ನೇಪಾಳಿಗರು ಗೋರಖನಾಥನಿಗೆ ನಡೆದುಕೊಳ್ಳುತ್ತಾರೆ. ನೇಪಾಳದ ನಾಣ್ಯ ಹಾಗೂ ನೋಟುಗಳ ಮೇಲೆ ಶ್ರೀ ಗೋರಖನಾಥ ಎಂಬ ಘೋಷಣೆಯಿದೆ. ನೇಪಾಳೀ ದೇವತೆಗಳಾದ ಪಶುಪತಿನಾಥ, ಸ್ವಯಂಭುನಾಥ, ಮತ್ಸ್ಯೇಂದ್ರನಾಥ ಇವೆಲ್ಲ ನಾಥಪಂಥದ ಹೆಸರುಗಳೇ ಆಗಿದ್ದು ನೇಪಾಳಿಗರು ಸ್ವತಃ ತಮ್ಮನ್ನು ಗೋರಖ (ಗೂರ್ಖಾ) ಎಂದು ಕರೆದುಕೊಳ್ಳುತ್ತಾರೆ. ಗೋರಖಪುರದಲ್ಲಿನ GRD ಅಂದರೆ ಗೋರ್ಖಾ ರಿಕ್ರೂಟಿಂಗ್ ಡಿಪೋ ಎಂಬ ಅರೆಸೇನಾ ಸಂಸ್ಥೆಯು ನೇಪಾಳಿಗರ ಸೇನಾ ಭರ್ತಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ. ಭಾರತೀಯ ಸೇನೆಯಲ್ಲಿ ಗೋರ್ಖಾ ರೆಜಿಮೆಂಟ್ ಎಂಬ ಪ್ರತ್ರ್ಯೇಕ ಪದಾತಿ ದಳವೇ ಕಾರ್ಯ ನಿರ್ವಹಿಸುತ್ತಿದೆ. ಇನ್ನೊಂದು ವಿಶೇಷವೆಂದರೆ ನೇಪಾಳ ರಾಜಧಾನಿಯ ಪಶುಪತಿನಾಥನ ಗುಡಿಯ ಮುಖ್ಯಪೂಜಾರಿ ಸ್ಥಾನಕ್ಕೆ ಕನ್ನಡಿಗರನ್ನೇ ನೇಮಿಸಲಾಗುತ್ತದೆ. ಮತ್ತೂ ವಿಶೇಷವೆಂದರೆ ನಮ್ಮ ಮಂಗಳೂರು ನಗರದೊಳಗಣ ಕದ್ರಿ ಮಂಜುನಾಥನ ಗುಡಿಯೂ ಗೋರಖನಾಥನ ಆವಾಸಸ್ಥಾನವಾಗಿತ್ತೆಂದೂ ಹೇಳಲಾಗುತ್ತದೆ. ನಾಥಪಂಥದ ಪಳೆಯುಳಿಕೆಯೆಂದು ಹೇಳಲಾಗುವ ಈ ಕದ್ರಿ ಗುಡಿಯ ಆವರಣದಲ್ಲಿ ಗೋರಖನಾಥನ ಪ್ರತಿಮೆಯೂ ಇದೆ. ನೇಪಾಳವು ಪ್ರವಾಸಿಗರಿಗೆ ಮುಕ್ತ ಅವಕಾಶಗಳನ್ನು ಒದಗಿಸಿದ್ದು ಗೋರಖಪುರದಲ್ಲಿ ಮಾರ್ಗದರ್ಶಿ ಕೇಂದ್ರವನ್ನು ತೆರೆದಿದೆ. ಹಾಗೂ ಗೋರಖಪುರದಿಂದಲೇ ನೇಪಾಳ ಪ್ರವಾಸ ಏರ್ಪಡಿಸುವ ಪ್ರವಾಸೀ ಏಜಂಟರೂ ಸಾಕಷ್ಟಿದ್ದಾರೆ. ಸಾರ್ಕ್ ದೇಶವಾದ ನೇಪಾಳ ಪ್ರವೇಶಿಸಲು ಪಾಸ್ ಪೋರ್ಟ್ ಅಥವಾ ವೀಸಾದ ಅಗತ್ಯವಿಲ್ಲ. ಸೋನಾಲಿ ಗಡಿಯಿಂದ ನೇಪಾಳದೊಳಕ್ಕೆ ಹೋದರೆ ಸಿಗುವ ಭೈರ್ ಹ್ವಾ ಎಂಬ ಸ್ಥಳದಿಂದ ಕಾಠ್ ಮಂಡುವಿಗೆ ವಿಮಾನ ಸೌಲಭ್ಯವಿದ್ದು ಒಂದೂವರೆ ಸಾವಿರ ರೂಪಾಯಿಗಳಿಗೆ ಹಿಮಾಲಯದ ಮೇಲೆಲ್ಲ ವಿಮಾನದಲ್ಲಿ ಹಾರುತ್ತಾ ಸಾಗಬಹುದು. ರಸ್ತೆಯ ಮೇಲಾದರೆ ಭೈರ್ ಹ್ವಾ, ನಾರಾಯಣಿ ಘಾಟ್, ಮನಕಾಮನಾದೇವಿಯ ಗುಡಿ, ಕಾಠ್ಮಂಡು ನಗರ, ಪಶುಪತಿನಾಥ, ಪೋಖರಾ ಗಳನ್ನು ಸುತ್ತಿ ಬರುವ ಆಹ್ಲಾದಕರ ಪ್ರವಾಸ ಖಂಡಿತಾ ಮಿಸ್ ಮಾಡ್ಕೋಬೇಡಿ.