ಬೆರಗಿನ ಬೆಲಂ ಗುಹೆಗಳು
ನಾನು ರಾಮಸುಬ್ಬ. ಹೇಳಿಕೇಳಿ ರಾಯಲಸೀಮೆಯ ಬೆಂಗಾಡಿನ ಒಂದು ಕುಗ್ರಾಮ ನಮ್ಮೂರು. ಈ ಬಡಹಳ್ಳಿಯ ಸರ್ಕಾರೀ ಶಾಲೆಯಲ್ಲಿನ ಏಕೈಕ ಶಿಕ್ಷಕನಾಗಿ ನಾನು ದುಡಿಯುತ್ತಿದ್ದೇನೆ. ಶಿಕ್ಷಣ ನೀಡುವುದು ನನ್ನ ವೃತ್ತಿ ಮಾತ್ರವಲ್ಲ ಅದು ನನ್ನ ಜೀವನದ ಧರ್ಮ. ಜೀವನದಲ್ಲಿ ಓದು ತುಂಬಾ ಮುಖ್ಯ.
ಓದದ ಬಾಯದು ತಾನ್ ಮೇದಿನಿಯೊಳ್ ಬಿಲದ ಬಾಯ್
ಎಂದು ಹಿರಿಯರಾಡಿದ ಮಾತಿದೆಯಲ್ಲವೇ? ನನ್ನ ಈ ಹಳ್ಳಿಯ ಮಕ್ಕಳು ವಿದ್ಯಾವಂತರಾಗಿ ಹಳ್ಳಿಯ ಹೆಸರನ್ನು ಜಗದ್ವಿಖ್ಯಾತಗೊಳಿಸಬೇಕು ಎಂಬುದು ನನ್ನ ಬಯಕೆ.
ಜೀವನೋಪಾಯಕ್ಕಾಗಿ ನನಗೆ ಪೂರ್ವಜರಿಂದ ಬಂದ ಜಮೀನು ಇದೆ. ಆದರೆ ಬರೀ ಕಲ್ಲು ತುಂಬಿದ ಈ ಬರಡು ಭೂಮಿಯಲ್ಲಿ ಮಳೆಯ ನೀರನ್ನೇ ನೆಚ್ಚಿಕೊಂಡು ಬೆಳೆ ತೆಗೆಯುವುದೇನೂ ಸುಲಭದ ಮಾತಲ್ಲ. ನಮ್ಮಲ್ಲಿನ ಕಲ್ಲುಗಳೋ ಒಂಥರಾ ವಿಚಿತ್ರ. ಅವು ಪದರ ಪದರಗಳಾಗಿ ನೆಲದಾಳದಿಂದ ಗುಡ್ಡಬೆಟ್ಟಗಳಾಗಿ ಮೇಲೆದ್ದಿರುವ ಸ್ಲೇಟುಕಲ್ಲುಗಳು. ಅವುಗಳ ಬಣ್ಣಗಳೂ ವಿಭಿನ್ನ. ಕಪ್ಪು, ಹಸಿರು, ಬಿಳಿ, ಹಳದಿ ಇತ್ಯಾದಿ. ಈಗೀಗ ಇವಕ್ಕೆ ಒಳ್ಳೆಯ ಮಾರುಕಟ್ಟೆಯೂ ಇದೆ.
ಅಂದ ಹಾಗೇ ಬೆಲಂ ಎಂಬುದು ನಮ್ಮೂರಿನ ಹೆಸರು. ಪುಸ್ತಕ ಭಾಷೆಯ ಇಕಾರವೆಲ್ಲ ನಮ್ಮಲ್ಲಿನ ಆಡುಮಾತುಗಳಲ್ಲಿ ಎಕಾರವಾಗಿ ಬದಲಾಗುತ್ತವೆ. ಹಾಗೆಯೇ ಬಿಲ ಎಂಬುದು ಬೆಲವಾಗಿ ಕೇಳಿಸಿದರೆ ಅದರಲ್ಲಿ ನಮ್ಮ ತಪ್ಪೇನೂ ಇಲ್ಲ. ಎಂಥೆಂಥದೋ ಒಳ್ಳೊಳ್ಳೆಯ ಹೆಸರುಗಳು ಇರುವಾಗ ನಮ್ಮೂರಿಗೇಕೆ ಇಂಥ ಚೆಂದವಿಲ್ಲದ ಹೆಸರು ಎಂದು ನಾನು ಎಷ್ಟೋ ವೇಳೆ ಯೋಚಿಸಿದ್ದಿದೆ. ನಮ್ಮೂರಿನಲ್ಲಿ ಓದದ ಬಾಯಿಗಳು ಬಹುಸಂಖ್ಯೆಯಲ್ಲಿವೆ ಎಂಬ ಒಂದೇ ಕಾರಣಕ್ಕೆ ಇಡೀ ಊರನ್ನು ಈ ಹೆಸರಿಂದ ಕರೆಯಬಹುದೇ? ಶುದ್ಧ ಅವಮಾನ. ಹಾಗೆ ನೋಡಿದರೆ ಅವಿದ್ಯಾವಂತರು ಬಹುಸಂಖ್ಯೆಯಲ್ಲಿರುವ ಎಷ್ಟು ಊರುಗಳಿಲ್ಲ! ನಮ್ಮೂರಿಗೆ ಬಿಲ ಎಂದು ಹೆಸರು ಬರಲು ಬೇರೆ ಏನೋ ಕಾರಣ ಇರಲೇಬೇಕು.
ಬಿಸಿಲುಗಾಲದ ಹಗಲಿನಲ್ಲಿ ನಮ್ಮೂರಿನಲ್ಲಿ ಹೊರಗೆ ಅಡಿಯಿಡುವುದೇ ದುಸ್ತರ. ಆಗ ಬಿಸಿಲು ಬೆಂಕಿಯಂತೆ ಬೇಯುತ್ತಿರುತ್ತದೆ. ಹಗಲಿಡೀ ಬಿಸಿಲಿಗೆ ಬೆಂದ ಬಂಡೆಗಳು ರಾತ್ರಿಯಲ್ಲಿ ನಿಟ್ಟುಸಿರು ಬಿಡುವುದರಿಂದ ನಮಗೆ ಸೆಕೆಯೋ ಸೆಕೆ. ಆದರೆ ಮಳೆಗಾಲದಲ್ಲಿ ಪರವಾಗಿಲ್ಲ. ಹಗಲು ಬಿಸಿಲು ರಾಚಿದರೂ ರಾತ್ರಿ ವೇಳೆಗೆ ಎಲ್ಲಿಂದಲೋ ತಂಗಾಳಿ ಬೀಸುವುದರಿಂದ ವಾತಾವರಣ ತಂಪಾಗುತ್ತದೆ.
ಆಗೊಮ್ಮೆ ಈಗೊಮ್ಮೆ ಮಳೆ ಬಂದರೂ ನಮ್ಮ ಭೂಮಿಯಲ್ಲಿ ನೀರು ನಿಲ್ಲದೇ ಎಲ್ಲವೂ ಇಂಗಿಹೋಗುತ್ತದೆ. ದೂರದಿಂದ ಹರಿದು ಬರುವ ಚಿತ್ರಾವತಿ ನದಿಯು ಮಳೆಗಾಲದಲ್ಲಿ ಮೈದುಂಬಿಕೊಳ್ಳುತ್ತದೆ. ಆದರೆ ಅದೇನು ಕಾರಣವೋ ನಮ್ಮ ಊರಿನ ಸನಿಹ ಬರುತ್ತಲೇ ಮಾಯವಾಗುತ್ತದೆ. ಎಂದಾದರೊಂದು ದಿನ ಇದಕ್ಕೆ ಕಾರಣವನ್ನು ಕಂಡು ಹಿಡಿಯಲೇಬೇಕು ಎಂದುಕೊಂಡಿದ್ದೇನೆ.
ಹೀಗೇ ವಾಯುಸಂಚಾರ ಮಾಡುತ್ತಾ ಒಂದು ದಿನ ಊರಿಗೆ ನೈಋತ್ಯ ದಿಕ್ಕಿನತ್ತ ಅಂದರೆ ಊರಿನವರು ಹೋಗಲಂಜುತ್ತಿದ್ದ ಆ ಜಾಗದತ್ತ ನಡೆದೆ. ಯಾರಾದರೂ ಕಂಡಿದ್ದರೆ ನನ್ನನ್ನು ತಡೆದಿರುತ್ತಿದ್ದರೇನೋ. ಸದ್ಯ ಯಾರೂ ಇರಲಿಲ್ಲ. ಎಲ್ಲೋ ಜೋರಾಗಿ ಮಳೆಯಾಗಿತ್ತೆನಿಸುತ್ತದೆ. ಚಿತ್ರಾವತಿ ನದಿ ತುಂಬು ರಭಸದಿಂದ ಹರಿಯುತ್ತಿತ್ತು. ನೀರು ಕೆಂಪಗೆ ಕೆಸರಿನ ಓಕುಳಿಯಾಗಿತ್ತು. ಹೀಗೇ ಸ್ವಲ್ವ ದೂರ ಹರಿದ ಅನಂತರ ಪುಟ್ಟ ಕಣಿವೆಯಂಥ ಜಾಗದಲ್ಲಿ ಇದ್ದಕ್ಕಿದ್ದಂತೆಯೇ ಮಾಯವಾಗುತ್ತಿತ್ತು. ಕೊರಕಲಿಗೆ ನೀರಿಳಿವ ಭೋರ್ಗರೆತದ ಸದ್ದಿನೊಂದಿಗೆ ಅದನ್ನು ಸಮೀಪಿಸಲು ಆಗದಂಥ ಭಯಂಕರ ರುದ್ರ ರಮಣೀಯತೆ ಅಲ್ಲಿತ್ತು.
ಬಹಳ ದಿನಗಳ ಕಾಲ ಆ ಕುತೂಹಲ ನನ್ನ ಸುಪ್ತ ಮನದಲ್ಲಿ ಹುದುಗೇಳುತ್ತಿತ್ತು. ಮಳೆಗಾಲ ಕಳೆಯುತ್ತಿದ್ದಂತೆ ಆ ಕಣಿವೆಗೆ ಮತ್ತೆ ನಡೆದೆ. ಸ್ವಲ್ಪ ಹತ್ತಿರ ಹೋಗುತ್ತಿದ್ದಂತೆ ಕಪ್ಪಾದ ಬಂಡೆಗಳೂ ವರ್ತುಲಾಕಾರದ ಬಾಯಿಯೂ ಗೋಚರಿಸಿದವು. ಆಗಷ್ಟೇ ಬೆಳೆದಿದ್ದ ಪೊದೆಗಳನ್ನು ಸರಿಸಿ ಆ ಬಾಯಿಯ ಒಳಗಡಿಯಿಟ್ಟೆ. ಕೆಸರು ಪಾಚಿಗಳು ಸಂಮಿಶ್ರವಾದ ಆ ನೆಲ ಜಾರುತ್ತಿತ್ತು. ಒಳಗಿಂದ ಹಸಿ ಮಣ್ಣಿನ ಸೊಗಡು ಅಡರುತ್ತಿತ್ತು. ಒಳಗೆ ಕತ್ತಲೆಯಿದ್ದುದರಿಂದ ಏನೂ ಕಾಣುತ್ತಿರಲಿಲ್ಲ. ಆಗಾಗ್ಗೆ ಅಲ್ಲಿಗೆ ಹೋದೆನಾದರೂ ಒಳಗೆ ಹೊಗುವ ನನ್ನ ಪ್ರಯತ್ನ ಯಶ ಕಾಣಲಿಲ್ಲ.
ನನ್ನ ಅನಂತರ ನಮ್ಮೂರಿನ ಶಾಲೆಗೆ ಶಿಕ್ಷಕನಾಗಿ ಬಂದವರು ಚಲಪತಿ ಎಂಬ ಪುರೋಗಾಮಿ ಯುವಕ. ಹೀಗೇ ಮಾತನಾಡುತ್ತಾ ನಮ್ಮೂರಿನ ರಹಸ್ಯ, ಅದೇ, ನದಿ ಮಾಯವಾಗುವ ತಾಣ, ಬಂಡೆಯೊಳಗಿನ ಬಾಯಿಯ ಬಗ್ಗೆ ಆತನಿಗೆ ಅರುಹಿದೆ. ಹುಚ್ಚೆದ್ದು ಕುಣಿದ ಅವರು ನಡೆಯಿರಿ ಈಗಲೇ ಅದನ್ನು ನೋಡೋಣ ಎಂದರು. ಇಬ್ಬರೂ ಕಲೆತು ಕೆಲ ವಿದ್ಯಾರ್ಥಿಗಳೊಂದಿಗೆ ಅಲ್ಲಿಗೆ ಹೋದೆವು. ಸುತ್ತಲಿನ ಪೊದೆಗಳನ್ನು ಸವರಿದೆವು. ಮುಳ್ಳುಕಂಟಿಗಳನ್ನು ಕಿತ್ತೆಸೆದೆವು. ಆ ಯುವ ಶಿಕ್ಷಕನೂ ಮಕ್ಕಳೂ ಆ ಬಾವಿಯೊಳಗೆ ಇಳಿದು ಅಷ್ಟಿಷ್ಟು ದೂರ ಸಾಗಿ ಮೈಕೈಯೆಲ್ಲ ಕೆಸರು ಮೆತ್ತಿಕೊಂಡು ಬಂದರು. ಒಳಗೆ ಅಗಲವಾದ ಗವಿಯಿದೆಯೆಂದೂ ಇಳಿಜಾರಾಗಿದ್ದ ಅಲ್ಲಿನ ನೆಲದಲ್ಲಿ ಒಂದೆರಡು ಅಡಿಗಳಷ್ಟಿದ್ದ ಕೆಸರಿನಡಿಯಲ್ಲಿ ಉರುಟುಕಲ್ಲುಗಳಿವೆ ಎಂದು ಹೇಳಿದರು. ಗವಿಯ ಮೇಲುಚಾವಣಿಯಲ್ಲಿ ನದೀ ನೀರು ಹರಿದು ಬಂಡೆಗಳನ್ನೆಲ್ಲ ಚಿತ್ರವಿಚಿತ್ರವಾಗಿ ಕೊರೆದುಹಾಕಿವೆ ಎಂದರು. ಕೆಲ ಗಟ್ಟಿಗರು ಇನ್ನೂ ಒಳಸಾಗಿ ಅಲ್ಲಿ ನಿಂತಿದ್ದ ನೀರಿನಲ್ಲಿ ಈಜಾಡಿ ಬಂದರು.
ಆದರೆ ಈ ವಿಷಯ ಊರಿನವರಿಗೆ ಗೊತ್ತಾಗಿ ರಂಪಾಟವಾಗಬಾರದು ಎಂದು ನಾನು ಎಚ್ಚರ ವಹಿಸಿದ್ದೆ. ಆದರೂ ಈ ಗುಹೆಯ ವಿಷಯವಾಗಿ ಏನನ್ನಾದರೂ ಮಾಡಬೇಕು ಎಂದು ನನ್ನ ಮನ ಬಯಸಿತ್ತು. ಸರ್ಕಾರಕ್ಕೆ ಬರೆಯೋಣ ಎಂಬ ಚಲಪತಿಯ ಮಾತು ನನಗೇನೋ ಅಷ್ಟು ಸೂಕ್ತವೆನಿಸಲಿಲ್ಲ. ಬಹುದೂರದ ನೀರು ನೆರಳಿಲ್ಲದ ಈ ಸುಡುಗಾಡಿಗೆ ಬರಲು ಯಾವ ಸರ್ಕಾರಿ ಅಧಿಕಾರಿಯೂ ಆಸಕ್ತಿ ವಹಿಸುವುದಿಲ್ಲ.
ಹೀಗೇ ಇರುವಲ್ಲಿ ಡೇನಿಯೆಲ್ ಜೆಬಾಯರ್ ಎಂಬ ಜರ್ಮನ್ ಪ್ರವಾಸಿಗನ ಪರಿಚಯ ನನಗಾಯಿತು. ಕರ್ನೂಲಿನಿಂದ ಅನಂತಪುರಕ್ಕೆ ಸಾಮಾಜಿಕ ಸೇವೆಗೆ ಆತ ಹೋಗುವಾಗ ಓರುವಕಲ್ಲು ಎಂಬ ಸ್ಥಳದಲ್ಲಿದ್ದ ಪ್ರಕೃತಿನಿರ್ಮಿತ ಶಿಲಾವೈಚಿತ್ರ್ಯವನ್ನು ಕಂಡು ಆತ ಸೋಜಿಗಗೊಂಡಿದ್ದ. ಅದರ ಬಗ್ಗೆ ಮತ್ತೂ ಕುತೂಹಲ ತಾಳಿ ಬೇತಂಚರ್ಲ, ಬನಗನಪಲ್ಲಿ, ಅವುಕು ಮುಂತಾದ ಊರುಗಳನ್ನು ಸಂದರ್ಶಿಸಿ ತಾಡಪತ್ರಿಗೆ ಹೋಗುವವನಿದ್ದ. ಬಿರುಬಿಸಿಲಿನಲ್ಲಿ ಆತನ ಓಡಾಟ, ಸಣ್ಣಪುಟ್ಟ ಕಲ್ಲುಗಳನ್ನೂ ಕುತೂಹಲದಿಂದ ತಿರುತಿರುಗಿಸಿ ನೋಡುವ ಚರ್ಯೆಗಳು ನನಗೆ ಆತನಬಗ್ಗೆ ಭರವಸೆ ಮೂಡಿಸಿದವು. ಆತನಲ್ಲಿಗೆ ಧಾವಿಸಿ ಹೋಗಿ ಕೈಸನ್ನೆ ಬಾಯ್ಸನ್ನೆಯಿಂದ ಆತನನ್ನು ವಿಶ್ವಾಸಕ್ಕೆ ತೆಗೆದುಕೊಂಡು ನಮ್ಮೂರಿನ ರಹಸ್ಯಗರ್ಭದೆಡೆಗೆ ಕೊಂಡೊಯ್ದೆ.
ವಿವಿಧ ಕೋನಗಳಿಂದ ಆ ಗುಹೆಯನ್ನು ರುಕಿಸಿದ ಜೆಬಾಯರ್ ಹಲವಾರು ಚಿತ್ರಗಳನ್ನು ತೆಗೆದ. ಅಳತೆಪಟ್ಟಿ ಹಿಡಿದು ಅದರ ಉದ್ದಗಲಗಳನ್ನು ದಾಖಲಿಸಿಕೊಂಡ. ಗುಹೆಯೊಳಗೆ ಇಣುಕಿ ಟಾರ್ಚ್ ಬಿಟ್ಟು ನೋಡಿದ. ಅನಂತರ ನನ್ನತ್ತ ತಿರುಗಿ ಅವನ ಭಾಷೆಯಲ್ಲಿ ಏನೇನೋ ಹೇಳಿದ. ನನಗೇನೂ ಅರ್ಥವಾಗಲಿಲ್ಲ. ಅಲ್ಲಿಂದ ಹೊರಟವನು ಕೆಲದಿನಗಳಲ್ಲೇ ತನ್ನ ಸಂಗಡಿಗರೊಂದಿಗೆ ಬಂದ. ಅವರೆಲ್ಲ ಹಲವಾರು ಸಾಮಾನು ಸಲಕರಣೆಗಳನ್ನೂ ತಂದಿದ್ದರು. ನೋಡ ನೋಡುತ್ತಿದ್ದಂತೆ ಅವರು ಗುಹೆಯೊಳಗೆ ಇಳಿದು ಪ್ರಖರವಾದ ಬೆಳಕನ್ನು ಬೀರಿ ಒಳಗಿನ ಪರಿಸರವನ್ನು ಅಳೆದರು. ಅಗಲವಾದ ಬಿಳಿಯ ಹಾಳೆಯ ಮೇಲೆ ತಾವು ನೋಡಿದ್ದೆಲ್ಲವನ್ನೂ ನಕ್ಷೆಯ ರೂಪದಲ್ಲಿ ಬಿಡಿಸಿದರು. ನೀರ ಸೆಲೆಗಳನ್ನೂ ನೀರ ಹರಿವನ್ನೂ ಚಿತ್ರಿಸಿದರು. ಆಮೇಲೆ ಒಳಗೆಲ್ಲ ಓಡಾಡಲು ಅನುವಾಗುವಂತೆ ಒಳನೆಲದ ಮೇಲೆ ಆವರಿಸಿದ್ದ ಜೇಡಿ ಮಣ್ಣನ್ನೆಲ್ಲ ಬಗೆದು ತಂದು ಹೊರಚೆಲ್ಲಿದರು. ಅವರ ಸಂಘಟಿತ ಕಾರ್ಯತತ್ಪರತೆ ಹಾಗೂ ನಗುಮೊಗದ ನೋಟಗಳು ನಮ್ಮೂರಿನ ಹೈಕಳ ಉತ್ಸಾಹವನ್ನು ಬಡಿದೆಬ್ಬಿಸಿದವು. ಮದ್ದುಲೇಟಿ ಬೋಯು, ಪದ್ಮನಾಭಯ್ಯ, ಚಿನ್ನಯ್ಯ, ಸುಂಕಣ್ಣ ಮುಂತಾದ ಯುವಕರೆಲ್ಲ ಈ ಉತ್ಖನನದಲ್ಲಿ ಕೈಜೋಡಿಸಿದರು. ನೋಡನೋಡುತ್ತಿದ್ದಂತೆ ಗುಹೆಯೊಳಗೆ ಸುಂದರವಾದ ದಾರಿ ಮೂಡಿತು. ಚಿತ್ರಾವತಿ ನದಿಯು ತನ್ನ ಪಾತ್ರಕ್ಕಾಗಿ ಕಲ್ಲನ್ನು ಕೊರೆದು ತಾನೇ ರೂಪಿಸಿಕೊಂಡ ದಾರಿಯದು. ಇದೀಗ ನದಿಯ ಗೈರುಹಾಜರಿಯಲ್ಲಿ ಆ ದಾರಿ ನಮ್ಮದಾಗಿತ್ತು.
ದಾರಿ ಒಂದೊಂದೆಡೆಯಲ್ಲಿ ಸಮತಟ್ಟಿನ ಹಜಾರದಂತೆ ತೆರೆದುಕೊಂಡಿದ್ದರೆ ಕೆಲವೆಡೆ ಕೊರಕಲಿನಂತೆ ಸಾಗುತ್ತಿತ್ತು. ಕೆಲವೆಡೆ ತಲೆಬಾಗಿ ನುಸುಳಿ ಸಾಗಬೇಕಿತ್ತು. ಕೆಲವೆಡೆ ಚಾವಣಿಯಿಂದ ಬಿಸಿಲಕೋಲು ಇಣುಕುತ್ತಿತ್ತು. ಇನ್ನು ಕೆಲವೆಡೆ ಅದೇ ಚಾವಣಿಯಿಂದ ಇಳಿಬಿದ್ದ ಕಲ್ಲಿನ ಬಿಳಲುಗಳು ಅಪಾರ ಸಂಖ್ಯೆಯಲ್ಲಿದ್ದವು. ಪ್ರತಿಯೊಂದೂ ವಿಭಿನ್ನ ಬಗೆಯ ವಿಭಿನ್ನ ಗಾತ್ರದ ಆಕೃತಿಗಳಾಗಿದ್ದವು. ಕೆಲವಂತೂ ತಮ್ಮೊಳಗಿನ ಸಿಲಿಕಾನ್ ಕಣಗಳಿಂದ ಟಾರ್ಚ್ ಬೆಳಕಿಗೆ ಮಿರಮಿರನೇ ಮಿನುಗುತ್ತಿದ್ದವು. ಅಲ್ಲಲ್ಲಿ ಸುಣ್ಣಶಿಲೆಯೊಡನೆ ಬೆರೆತ ಇಂಗಾಲಾಮ್ಲ ಸಂಯುಕ್ತ ನೀರು ತೊಟ್ಟಿಕ್ಕುತ್ತಿತ್ತು. ಒಟ್ಟಿನಲ್ಲಿ ಒಳಗಿನ ವಾತಾವರಣ ಹವಾನಿಯಂತ್ರಿತ ಲೋಕವಾಗಿತ್ತು.
ಹೀಗೆ ೧೯೮೩ರಲ್ಲಿ ಜೆಬಾಯರ್ ಮತ್ತು ತಂಡದವರು ನಮ್ಮೂರ ಬಿಲದೊಳಗಿನ ರಹಸ್ಯ ಲೋಕವನ್ನೆಲ್ಲ ಅನಾವರಣಗೊಳಿಸಿ ಅದರ ಸಂಪೂರ್ಣ ನಕ್ಷೆಯನ್ನು ತಯಾರಿಸಿ ಗುಹೆಯ ಒಳಗಿನ ದಾರಿಗಳು ೩೨೨೫ ಮೀಟರುಗಳ ಉದ್ದಕ್ಕೆ ಚಾಚಿವೆಯೆಂದೂ ಚಾವಣಿಯ ಎತ್ತರ ೧೦ರಿಂದ ೨೯ ಮೀಟರುಗಳಷ್ಟು ಇದೆಯೆಂದೂ ಹೇಳಿದರು. ಒಂದೂವರೆ ಚದರ ಕಿಲೋಮೀಟರು ವಿಸ್ತಾರ ಮಾತ್ರ ಸಾರ್ವಜನಿಕ ಪ್ರವೇಶಕ್ಕೆ ಮುಕ್ತವಿಡಬಹುದೆಂದು ನಮ್ಮ ಆಂಧ್ರಪ್ರದೇಶ ಸರ್ಕಾರಕ್ಕೆ ವರದಿ ಒಪ್ಪಿಸಿದರು. ೧೮೮೪ರಷ್ಟು ಹಿಂದೆಯೇ ಐರೋಪ್ಯ ಪ್ರವಾಸಿ ರಾಬರ್ಟ್ ಬ್ರೂಸ್ಫೂಟ್ ಎಂಬುವನು ಈ ಗುಹೆಯ ಕುರಿತು ದಾಖಲಿಸಿದ್ದನ್ನು ಉಲ್ಲೇಖಿಸಿದರು. ಕೂಡಲೇ ಸ್ಪಂದಿಸಿದ ಸರ್ಕಾರವು ಈ ಸ್ಥಳಕ್ಕೊಂದು ಉತ್ತಮ ರಸ್ತೆ ಸೌಲಭ್ಯ ಕಲ್ಪಿಸಿತು. ಖನಿಜ ಇಲಾಖೆಯವರು ಬಂದು ಲೋಹದ ಅದಿರಿಗಾಗಿ ತಡಕಾಡಿದರು. ಕಲ್ಲಿನ ತೊಂಗಲುಗಳ ರೇಡಿಯೋ ಕಾರ್ಬನ್ ಡೇಟಿಂಗ್ ಮೂಲಕ ಈ ಗುಹೆಯ ವಯಸ್ಸು ಮಿಲಿಯಾಂತರ ವರ್ಷಗಳೆಂದರು. ಒಳಗೆ ದೊರೆತ ಕೆಲ ಮಣ್ಣಿನ ಪಾತ್ರೆಗಳು, ಮಡಕೆಯ ಚೂರುಗಳು ಕ್ರಿಸ್ತಪೂರ್ವ ೪೫೦೦ರ ಕಾಲದವು ಎಂದರು. ಸಾಗರವಿಜ್ಞಾನಿಗಳು ಬಂದು ನೋಡಿ ಈ ಗುಹೆಯೊಳಗೆ ಮಿಲಿಯಾಂತರ ವರ್ಷಗಳಿಂದ ಜೀವಿಸಿರುವ ಮೀನುಗಳು ಲೋಕದ ಬೆಳಕನ್ನು ಕಂಡೇ ಇಲ್ಲವಾದ್ದರಿಂದ ತಮ್ಮ ಕಣ್ಣುಗಳನ್ನು ಕಳೆದುಕೊಂಡಿವೆ, ಈಗ ಹುಟ್ಟುತ್ತಿರುವ ಹೊಸ ಮೀನುಗಳೂ ಕಣ್ಣಿಲ್ಲದೇ ಹುಟ್ಟುತ್ತಿವೆ ಎಂದರು.
ಆಮೇಲೆ ೧೯೯೨ರಲ್ಲಿ ಆಂಧ್ರ ಪ್ರವಾಸೋದ್ಯಮ ಇಲಾಖೆಯು ಗುಹೆಯೊಳಗೆ ಮಂದ ಬೆಳಕಿನ ಹೊನಲು ಹರಿಸಿ ಇದನ್ನು ಪ್ರವಾಸಿ ತಾಣವಾಗಿ ಮಾರ್ಪಡಿಸಿತಲ್ಲದೆ ದೇಶವಿದೇಶಗಳ ಮಾಧ್ಯಮಗಳಲ್ಲಿ ವಿಸ್ತೃತ ಪ್ರಚಾರ ನೀಡಿತು. ಇಂದು ಬಹಳ ಮಂದಿ ಪ್ರವಾಸಿಗರು ಬೆಲಂ ಗುಹೆಗೆ ಭೇಟಿ ನೀಡುತ್ತಿದ್ದಾರೆ.
ಗುಹೆಯೊಳಗಿನ ಮುಖ್ಯ ಹಜಾರಕ್ಕೆ ಜೆಬಾಯರ್ ಹಜಾರವೆಂದು ಹೆಸರಿಡಲಾಗಿದೆ. ಒಳಗಿನ ಹಜಾರಗಳಲ್ಲಿ ಒಂದಕ್ಕೆ ನನ್ನ ಹೆಸರೂ, ಮತ್ತೊಂದಕ್ಕೆ ಚಲಪತಿಯವರ ಹೆಸರೂ ಇಡಲಾಗಿದೆ. ನಮ್ಮೂರಿನ ಯುವಕರೇ ಈ ಗುಹೆಯ ಗೈಡುಗಳಾಗಿದ್ದಾರೆ. ಹಾಗೆಂದು ನಮ್ಮೂರು ಉದ್ಧಾರ ಕಂಡಿತು ಎಂದೇನೂ ಭಾವಿಸಬೇಡಿ. ನಮ್ಮೂರು ಮೊದಲು ಹೇಗಿತ್ತೋ ಈಗಲೂ ಹಾಗೆಯೇ ಇದೆ. ಆದರೆ ನಮ್ಮೂರಿನ ಹೆಸರು ಪ್ರವಾಸಿ ಭೂಪಟದಲ್ಲಿ ಚಿರಸ್ಥಾಯಿಯಾಗಿದೆ.