ಕರ್ನಾಟಕ ಕ್ರಿಕೆಟ್ - ೯

ಕರ್ನಾಟಕ ಕ್ರಿಕೆಟ್ - ೯

ಮುಲೆವಾ ಧಾರ್ಮಿಚಂದ್: ರಾಜಸ್ಥಾನದಿಂದ ವಲಸೆ ಬಂದು ಬೆಂಗಳೂರಿನಲ್ಲಿ ಬದುಕು ಕಂಡುಕೊಂಡ ಎರಡನೇ ತಲೆಮಾರಿನ ಹುಡುಗ ಧಾರ್ಮಿಚಂದ್. ೧೫ನೇ ವಯಸ್ಸಿನಲ್ಲೇ ಅಂಡರ್-೧೯ ಭಾರತ ತಂಡವನ್ನು ಪ್ರತಿನಿಧಿಸಿ ಎದುರಾಳಿ ತಂಡಗಳನ್ನು ತನ್ನ ಮಾಂತ್ರಿಕ ಆಫ್ ಸ್ಪಿನ್ ದಾಳಿಯಲ್ಲಿ ನುಚ್ಚುನೂರು ಮಾಡಿದವರು ಧಾರ್ಮಿಚಂದ್. ಕರ್ನಾಟಕದ ಪರವಾಗಿ ಎಲ್ಲಾ ವಯೋಮಿತಿಯ ತಂಡಗಳಲ್ಲಿ ಆಡಿದ ಧಾರ್ಮಿಚಂದ್ ಭರ್ಜರಿ ಯಶಸ್ಸು ಕಂಡರು. ಯಾವುದೇ ತರಹದ ಪಿಚ್ ಇರಲಿ, ಅವುಗಳ ಮೇಲೆ ಧಾರ್ಮಿಚಂದ್ ಪಡೆಯುತ್ತಿದ್ದ ಸ್ಪಿನ್ ಕಂಡು ಈರಪ್ಪಳ್ಳಿ ಪ್ರಸನ್ನ ನಿಬ್ಬೆರಗಾಗಿದ್ದರು. ಈ ಹುಡುಗನಿಗೆ ಸರಿಯಾದ ಮಾರ್ಗದರ್ಶನ ಸಿಕ್ಕರೆ ಉಜ್ವಲ ಭವಿಷ್ಯವಿದೆ ಎಂದು ಈರಪ್ಪಳ್ಳಿ ಪ್ರಸನ್ನ ೧೯೯೯ನೇ ಇಸವಿಯಲ್ಲಿ ನುಡಿದಿದ್ದರು. ಅಲ್ಲೇ ಆದದ್ದು ಎಡವಟ್ಟು. ಸರಿಯಾದ ಮಾರ್ಗದರ್ಶನವೆಂಬುವುದು ಧಾರ್ಮಿಚಂದ್-ಗೆ ಮರೀಚಿಕೆಯಾಗಿಯೇ ಉಳಿಯಿತು.

೨೦೦೦-೦೧ ಋತುವಿನಲ್ಲಿ ೧೬ನೇ ವಯಸ್ಸಿನಲ್ಲೇ ಕರ್ನಾಟಕದ ಪರವಾಗಿ ತನ್ನ ಚೊಚ್ಚಲ ಪಂದ್ಯವನ್ನಾಡಿದ ಧಾರ್ಮಿ, ಯಶಸ್ಸು ಕಾಣಲಿಲ್ಲ. ೨೦೦೦-೦೧ ಮತು ೨೦೦೧-೦೨ ಋತುಗಳಲ್ಲಿ ಕೇವಲ ೫ ಪಂದ್ಯಗಳಲ್ಲಿ ಧಾರ್ಮಿಯನ್ನು ಆಡಿಸಲಾಯಿತು. ಈ ೫ ಪಂದ್ಯಗಳಲ್ಲಿ ಒಟ್ಟಾರೆ ೭೦ರಷ್ಟು ಓವರ್-ಗಳನ್ನು ಮಾತ್ರ ಎಸೆದು ಕೇವಲ ೨ ವಿಕೆಟ್ ಗಳಿಸಿದ ಸಾಧನೆ ಯುವ ಆಟಗಾರ ಧಾರ್ಮಿಚಂದ್ ಅವರದ್ದು. ಈ ವೈಫಲ್ಯದಿಂದ ಎದೆಗುಂದಿದ ಧಾರ್ಮಿಗೆ ಸರಿಯಾದ ಮಾರ್ಗದರ್ಶನ ಎಲ್ಲೂ ದೊರೆಯಲಿಲ್ಲ.

ನಂತರ ತಂಡದಿಂದ ಹೊರಬಿದ್ದ ಧಾರ್ಮಿ ಮತ್ತೆ ಆಯ್ಕೆಯಾಗಲಿಲ್ಲ. ಕರ್ನಾಟಕ ಕಿರಿಯರ ತಂಡಗಳಲ್ಲಿ ಆಡಿ ವಿಕೆಟ್-ಗಳನ್ನು ಸೂರೆಗೊಳ್ಳುವುದನ್ನು ಮುಂದುವರೆಸಿದರು. ಅಯ್ಕೆಗಾರರು ಎರಡನೇ ಅವಕಾಶವನ್ನು ಮಾತ್ರ ನೀಡಲಿಲ್ಲ. ನಿಧಾನವಾಗಿ ಕಿರಿಯರ ತಂಡದಿಂದಲೂ ಧಾರ್ಮಿಚಂದ್ ಅವರನ್ನು ದೂರವಿಡಲಾಯಿತು. ಇಲ್ಲೇನಾಯಿತು ಎಂದು ನನಗೆ ತಿಳಿಯದು. ಆದರೆ ಕ್ರಿಕೆಟ್ ವಲಯದಲ್ಲಿರವ ಗೆಳೆಯರ ಪ್ರಕಾರ, ಧಾರ್ಮಿಚಂದ್-ಗಿಂತ ಕಡಿಮೆ ಅರ್ಹತೆಯಿರುವ ಕೆಲವು ಆಟಗಾರರಿಗೆ ಶಿಫಾರಸಿನ ಮೂಲಕ ಕರ್ನಾಟಕ ಕಿರಿಯರ ತಂಡಕ್ಕೆ ಆಯ್ಕೆ ಮಾಡಲಾಯಿತು. ಧಾರ್ಮಿಯನ್ನು ಹೊರಗಿಡಲಾಯಿತು. ರಣಜಿ ತಂಡಕ್ಕೆ ಆಡುವ ಅವಕಾಶ ಸಿಕ್ಕಿದಾಗ ವೈಫಲ್ಯ ಕಂಡು ಮತ್ತೆ ಆಯ್ಕೆಯಾಗುವ ತವಕದಲ್ಲಿದ್ದ ಧಾರ್ಮಿಗೆ ಕಿರಿಯರ ತಂಡದಿಂದ ಕೈಬಿಟ್ಟದ್ದು ಎಷ್ಟು ದೊಡ್ಡ 'ಶಾಕ್' ಕೊಟ್ಟಿತೆಂದರೆ, ಅವರು ಕ್ರಿಕೆಟ್ ಆಡುವುದನ್ನೇ ಬಿಟ್ಟುಬಿಟ್ಟರು!

ಯೆರೆ ಗೌಡ ಕೂಡಾ ಇಂತಹದೇ ಸನ್ನಿವೇಶ ಎದುರಾದಾಗ, ಎದೆಗುಂದದೆ ಕರ್ನಾಟಕಕ್ಕೆ ನಮಸ್ಕಾರ ಹೇಳಿ ರೈಲ್ವೇಸ್ ಪರವಾಗಿ ಆಡುವ ನಿರ್ಧಾರ ಮಾಡಿ ಯಶಸ್ಸನ್ನು ಕಂಡರು. ಆದರೆ ಧಾರ್ಮಿ ನೊಂದು ಕ್ರಿಕೆಟ್ ಬಿಟ್ಟೇಬಿಟ್ಟರು. ಆಯ್ಕೆ ಪ್ರಕ್ರಿಯೆಯಲ್ಲಿ ಮನೆ ಮಾಡಿರುವ ರಾಜಕೀಯ, ಶಿಫಾರಸು ಹೀಗೆ ಇನ್ನೆಷ್ಟು ಪ್ರತಿಭೆಗಳನ್ನು ನಾಶ ಮಾಡಿದೆಯೋ ಲೆಕ್ಕವಿಲ್ಲ. ಮನನೊಂದ ಧಾರ್ಮಿ, ನಂತರ ಸಿಂಗಾಪುರ್ ಕ್ರಿಕೆಟ್ ಸಂಸ್ಥೆ ತನ್ನ ದೇಶದಲ್ಲಿ ಕ್ರಿಕೆಟ್ ಆಟವನ್ನು ಅಭಿವೃದ್ಧಿಪಡಿಸಲು ಕೋಚ್/ಪ್ಲೇಯರ್ ಗಳನ್ನು ಹುಡುಕುತ್ತಿರುವಾಗ, ಸಂದರ್ಶನಕ್ಕೆ ಹಾಜರಾಗಿ ಆಯ್ಕೆಯಾದರು. ಹೀಗೆ ಆಯ್ಕೆಯಾದ ಧಾರ್ಮಿಚಂದ್ ಅವರನ್ನು ಸಿಂಗಾಪುರ ಕ್ರಿಕೆಟ್ ಸಾಂಸ್ಥೆ ಕೋಚಿಂಗ್-ನಲ್ಲಿ ಹೆಚ್ಚಿನ ತರಬೇತಿಗಾಗಿ ಆಸ್ಟ್ರೇಲಿಯಾಗೆ ಕಳಿಸಿತು. ತನ್ನ ೨೦ನೇ ವಯಸ್ಸಿನಲ್ಲೇ ಧಾರ್ಮಿಚಂದ್, ಸಿಂಗಾಪುರ ಕ್ರಿಕೆಟ್ ತಂಡದ ಕೋಚ್! ಹಣ ಮತ್ತು ಹೆಸರು ಎರಡೂ ಸಿಕ್ಕವು ಧಾರ್ಮಿಚಂದ್-ಗೆ, ಆದರೆ ಕರ್ನಾಟಕಕ್ಕೆ ಕೇವಲ ನಷ್ಟ ಮಾತ್ರ.

Rating
No votes yet