ವೈಶಾಲಿ
ಬುದ್ಧನ ಊರಂತೆ! ಮೊದಲ ಬಾರಿಗೆ ಗಣರಾಜ್ಯವೆಂಬ ಸಮುದಾಯದ ಬದುಕು ಅರಳಿದ್ದಲ್ಲಂತೆ! ಹೆಣ್ಣುಗಂಡೆಂಬ ಬೇಧವಿಲ್ಲದೆ ದಿನವಿಡೀ ಒಟ್ಟಾಗಿ ದುಡಿದು, ಮೆಲ್ಲ ಕವಿಯುವ ಸಂಜೆಇರುಳಲ್ಲಿ ಸಾಮುದಾಯಿಕ ನರ್ತನವಿತ್ತಂತೆ. ಸುತ್ತ ನೋಡಿದಲ್ಲಿ ಹಸಿರು, ಸಮೃದ್ಧಿ, ಗಂಟೆಗೊರಳ ಕಾಮಧೇನುಗಳ ನಲ್ದಾಣ, ಶತ್ರುರಾಜ್ಯಗಳಿಗೆ ಅಬೇಧ್ಯ ಕೋಟೆಯಾಗಿ, ಹಲಕೆಲವು ವಿದ್ಯಾಕೇಂದ್ರಗಳಿಗೆ ಹೆಸರಾಗಿ.. ಮೆರೆದ ಜಾಗವಂತೆ.. ಓದಿದ ಹಲವು ಪುಸ್ತಕಗಳಲ್ಲಿ ನಾ ಕಂಡ ಚಿತ್ರಣವದು. ಕಾಯುತ್ತಿದ್ದೆ ಒಮ್ಮೆ ಅಲ್ಲಿ ಹೋಗಬೇಕೆಂದು. ಆ ಎಲ್ಲ ಕನಸಿನಂತಹ ದಿನಗಳ ನೆರಳು ಬಿದ್ದಿರುವ ಜಾಗದ ಗಾಳಿಯನ್ನೊಮ್ಮೆ ಉಸಿರೊಳಗೆ ಸೇರಿಸಬೇಕೆಂದು..
ಇಲ್ಲ ಅಯ್ಯೋ ಇದಲ್ಲ ಇದಲ್ಲ ಅದು... :(
ನಿನ್ನೆ ಕೆಲಸ ಮುಗಿಸಿ ಹಗುರಾದವಳು ಕೆಲಕ್ಷಣಗಳ ಮಟ್ಟಿಗೆಂದು ಟೀವಿ ಹಾಕಿ ಹೈರಾಣಾಗಿ ಹೋದೆ. ಆ ನನ್ನ ವೈಶಾಲಿಯಲ್ಲಿ ಇಬ್ಬರು ಪುಟ್ಟ ಮಕ್ಕಳನ್ನು ಟ್ರಾಕ್ಟರಿಲ್ಲ, ಎತ್ತಿಲ್ಲ ಅಂತ ಹೇಳಿ ನೇಗಿಲಿಗೆ ಕಟ್ಟಿ ಗದ್ದೆ ಉಳಲು ಹಚ್ಚಿದ್ದರು. ಹಿಂದೆ ಅವರನ್ನು ಮ್ಯಾನೇಜ್ ಮಾಡುತ್ತ ನಿಂತಿದ್ದ ಅಜ್ಜನಂತ ರೈತ.. ಅವನ ಮನೆಯಲ್ಲೂ ಮಕ್ಕಳಿರಬಹುದು! ಅವನಿಗದು ಬೇಕಿಲ್ಲ. ಮಾಲೀಕ ಕೊಟ್ಟ ಜೀತದ ಮಕ್ಕಳನ್ನು ಮನುಷ್ಯರಂತೆ ನೋಡಬೇಕೆಂದಿಲ್ಲ.. ಮಾಲಿಕ ಖುಶಿಯಾಗಬೇಕು. ನೆಲ ಉತ್ತಬೇಕು. ಫಸಲು ಬೆಳೆಯಬೇಕು..ಮನೆಯಲ್ಲಿ ತುತ್ತಿನ ಚೀಲ ತುಂಬಬೇಕು. ಆ ಪುಟ್ಟ ಜೀವಗಳು..ಅಪ್ಪ ಅಮ್ಮರೆಂದೋ ಮಾಡಿದ ಸಾಲಕ್ಕೆ ಅಕ್ಷರಶಃ ನೊಗ ಹೊರುತ್ತಿದ್ದಾರೆ. ಅವರಪ್ಪ ಅಮ್ಮ ಆರಿಸಿ ಕಳಿಸಿದ ನೇತಾ, ಯೂನಿಯನ್ ಮಿನಿಸ್ಟರ್ (ರೂರಲ್ ಡೆವಲಪ್ ಮೆಂಟ್ ಬೇರೆ) ಆಗಿ ಮನೆಯಲ್ಲಿ ಕ್ರಿಸ್ಮಸ್ ರಜೆಗೆ ಯಾವ ರೆಸಾರ್ಟಿಗೆ ಮಕ್ಕಳನ್ನು ಕರೆದುಕೊಂಡು ಹೋಗಲೆಂದು ಯೋಚನೆ ಮಾಡುತ್ತಿರುತ್ತಾನೆ. ಅವನ ತಮ್ಮನೇ ಆದ ಜಮೀನ್ದಾರ ನಡೆಸುವ ಈ ಅಮಾನುಷ ಕೃತ್ಯ ಅವನಿಗೆ ಗೊತ್ತೇ ಇಲ್ಲ. ಮೀಡಿಯಾ ಪ್ರಶ್ನೆ ಮಾಡಿದರೆ - ಇಲ್ಲಪ್ಪ ನನ್ ತಮ್ಮ ಊರಲ್ಲಿ ಏನು ಕೆಲಸ ಮಾಡುತ್ತಿರುತ್ತಾನೋ ಇಲ್ಲಿ ದಿಲ್ಲಿಯಲ್ಲಿ ಕೂತ ನನಗೇನು ಗೊತ್ತು.. ನನಗೇನು ಸಂಬಂಧ? ಇದೆಲ್ಲ ಪ್ರತಿಪಕ್ಷದವರ ಕುತಂತ್ರ ಅಂತ ಸಬೂಬು ಹೇಳುತ್ತಾನೆ..
ಮಕ್ಕಳು ಎಳೆಯಲಾರದ ನೇಗಿಲನ್ನು, ಎಳೆದುಕೊಂಡು ಮುನ್ನಡೆಯುತ್ತಿದ್ದಾರೆ, ಹಿಂದೆ ಹಸಿವಿನ ಚೀಲ ತುಂಬಬೇಕಾಗಿರುವ ಇನ್ಯಾವನೋ ರೈತ ಕೈಯಲ್ಲಿ ಬಾರುಕೋಲು ಹಿಡಿದು ತುತ್ತಿನ ಚೀಲ ತುಂಬಹೊರಟಿದ್ದಾನೆ, ಇವರನ್ನೆಲ್ಲ ಬಳಸಿಕೊಂಡ ಜಮೀನುದಾರ ಇಲ್ಲಿ ಟ್ರಾಕ್ಟರ್ ಬರೋಲ್ಲ, ಎತ್ತು ಇಲ್ಲ, ಇರುವ ಆಳುಮಕ್ಕಳನ್ನ ಬಳಸದೆ ಇನ್ನೇನ್ ಮಾಡಲಿ, ಅವರಿಗೆ ಸಂಬಳ ಕೊಡ್ತೇನಲ್ಲ ಅಂತ ನಿರ್ಲಜ್ಜನಾಗಿ ಹೇಳುತ್ತಾ ಮೀಸೆ ಸವರುತ್ತಿದ್ದಾನೆ..
ಹುಲಿಯಂತ ಹುಲಿಯೂ ಹಸಿವಾದಾಗ ಆಕ್ರಮಣ ಮಾಡುತ್ತದೆಯಲ್ಲವೆ! ಇವನು ಯಾವ ಜಾತಿ?!(species)
ಎಲ್ಲೂ ನಡೆಯಬಾರದ ಕ್ರೌರ್ಯದ ಪರಮಾವಧಿ - ವೈಶಾಲಿಯಲ್ಲಿ, ಬುದ್ಧನ ಊರಲ್ಲಿ, ಗಣತಂತ್ರದ ಮೊದಲ ಉಲಿ ಹಬ್ಬಿದಲ್ಲಿ.. ನಾವೆತ್ತ ಹೋಗುತ್ತಿದ್ದೇವೆ?!
ನನಗೇನು ಮಾಡಬೇಕೋ ಗೊತ್ತಾಗುತ್ತಿಲ್ಲ :(
Comments
ಉ: ವೈಶಾಲಿ