ಅಕ್ರಮ ಸಕ್ರಮ ಪಾರ್ಟಿಗೆ ನಿಮ್ಮ ಸಹಕಾರ ಕೊಡುವಿರಾ?

ಅಕ್ರಮ ಸಕ್ರಮ ಪಾರ್ಟಿಗೆ ನಿಮ್ಮ ಸಹಕಾರ ಕೊಡುವಿರಾ?

ಪಾರ್ಟಿಯ ಹೆಸರು--- ಅಕ್ರಮ(S)ಪಾರ್ಟಿ, ಅಂದರೆ ಅಕ್ರಮ(ಸಕ್ರಮ) ಪಾರ್ಟಿ ಸದ್ಯಕ್ಕೆ ಅಕ್ರಮ.ರಿಜಿಸ್ಟರ್ ಆಗಬೇಕಷ್ಟೆ.


ನಾಯಕ --- ನಾನೆ ಅಂದರೆ ಗಣೇಶ ಗೌಡ,ಗಣೇಶಪ್ಪ,ಗಣೇಶ ಸಿಂಗ್.. ಅಕ್ರಮ ಹೆಸರುಗಳು. ರಾಜಕೀಯ ಹಿನ್ನಲೆ--- ನನ್ನ ಜೀವನದ ಅರ್ಧ ಭಾಗವನ್ನು ರಾಜಕೀಯ(ಪತ್ರಿಕೆಗಳಲ್ಲಿ ರಾಜಕೀಯದ ಬಗ್ಗೆ ಓದುವುದ)ಕ್ಕೆ ಮುಡಿಪಾಗಿಟ್ಟಿದ್ದೆ. ನನ್ನ ತಾತನವರು ರಾಷ್ಟ್ರಪಿತ ಗಾಂಧೀಜಿಯವರೊಂದಿಗೆ.. .. .. .. .. .. . .. .. .. ನೆಹರು ಇರುವ ಫೊಟೋಗೆ ಕಟ್ಟು ಹಾಕಿಸಿ ಟ್ರಂಕಿನಲ್ಲಿ ಇಟ್ಟುಕೊಂಡಿದ್ದರು.


ಸಂಬಂಧಿಗಳು --- ನನ್ನ ಅಕ್ರಮಗಳಿಂದ ರೋಸಿಹೋಗಿ ಹೆಂಡತಿ,ಮಕ್ಕಳು,ಸಂಬಂಧಿಗಳು ನನ್ನಿಂದ ದೂರಾಗಿದ್ದಾರೆ.ನನಗೆ ಸ್ವಜನಪಕ್ಷಪಾತದ ದೋಷ ಬಾರದು.


ಪಕ್ಷದ ಧ್ಯೇಯ --- ಎಲ್ಲಾ ಅಕ್ರಮಗಳನ್ನೂ ಸಕ್ರಮ ಮಾಡುವುದು.ನಿಮಗೆ ಗೊತ್ತೇ ಇದೆ- ತೊಂದರೆಗಳಿಗೆ ಅಕ್ರಮವೇ ಕಾರಣ.ಉದಾಹರಣೆಗೆ:-


ಕಂಟ್ರಾಕ್ಟರ್‌ಗಳಿಗೆ -ರಸ್ತೆ ಹಾಳಾಗಲು ಅಕ್ರಮವೇ ಕಾರಣ.ಸಕ್ರಮ ಮಾಡಲು, ಇಸವಿ ೨೦೦೦ಕ್ಕಿಂತ ಮೊದಲಿನ ರಸ್ತೆಗೆ* ರೂ೧,೦೦,೦೦೦ಕಟ್ಟಿ, ೨೦೦೦ ದಿಂದ ೨೦೦೫ ರ ಒಳಗಿನ ರಸ್ತೆಗೆ ರೂ ೫೦,೦೦೦ ಕಟ್ಟಿ,ನಂತರದ ರಸ್ತೆಗೆ ೨೦,೦೦೦ರೂ ಕಟ್ಟಿದರೆ ಸಕ್ರಮಗೊಳಿಸಲಾಗುವುದು. (*ಚ.ಅಡಿಗಳಲ್ಲಿ)


ರಾಜಕಾರಣಿಗಳಿಗೆ -ತಮ್ಮ ಬೇನಾಮಿ ಅಕ್ರಮ ಆಸ್ತಿ,ಹಣ, ಗಣಿ,ಗಿಣಿಗಳನ್ನೆಲ್ಲಾ ಸಕ್ರಮ ಮಾಡಲಾಗುವುದು. ಇಸವಿ ೨೦೦೦ಕ್ಕಿಂತ.. .. .. .. .. ..


ಅಧಿಕಾರಿಗಳಿಗೆ - ಲೋಕಾಯುಕ್ತರಿಂದ ಹಿಡಿಯಲ್ಪಟ್ಟ ಮತ್ತು ಹಿಡಿಯಲ್ಪಡದಿರುವ (ಎರಡೇ ವರ್ಗವಿರುವುದು)ಅಧಿಕಾರಿಗಳೆಲ್ಲಾ ತಮ್ಮ ಕೋಟಿಗಟ್ಟಲೆ ಆಸ್ತಿ,ಒಡವೆಗಳನ್ನೆಲ್ಲಾ ಸಕ್ರಮಗೊಳಿಸಬಹುದು. ಇಸವಿ ೨೦೦೦ಕ್ಕಿಂತ.. .. .. .. .. ..


NRIಗಳಿಗೆ -ಇಲ್ಲಿ ಕಲಿತು ವಿದೇಶದಲ್ಲಿ ಕೆಲಸ ಮಾಡುವುದು ಅಕ್ರಮ. ವಿದೇಶದ ಹಣವನ್ನು ಅಲ್ಲಿ ಉಪಯೋಗಿಸದೇ ಇಲ್ಲಿಗೆ ಕಳುಹಿಸುವುದು ಇನ್ನೂ ಅಕ್ರಮ. ಇಸವಿ ೨೦೦೦ಕ್ಕಿಂತ.. .. .. .. .. .. ಮನೆ ಕಟ್ಟಿದವರು/ಕಟ್ಟುವವರು - ಎಲ್ಲಿಯೇ ಮನೆ ಕಟ್ಟಿಸಿರಲಿ,ಬೇಕಿದ್ದರೆ ರಾತ್ರೋರಾತ್ರಿ ಸೌಧದ ಮೇಲೆ ಮನೆ ಕಟ್ಟಿ,ಅಭ್ಯಂತರವಿಲ್ಲ-ಸುತ್ತಲೂ, ಕೆಳಗೆ,ಮೇಲೆ ೩ಅಡಿ,೬ಅಡಿ ಸ್ಥಳ ಬಿಟ್ಟಿರಬೇಕು.ಇಲ್ಲವಾದರೆ.. ಇಸವಿ ೨೦೦೦ಕ್ಕಿಂತ.. .. .. .. .. ..


ಹೀಗೆ ಪರೀಕ್ಷೆಯಲ್ಲಿ,ಕೆಲಸ ಪಡೆಯುವಲ್ಲಿ,ಕೆಲಸ ಮಾಡುವಲ್ಲಿ,ಕಾಡು ಕಡಿಯುವಲ್ಲಿ,ಬೆಟ್ಟ ಉರುಳಿಸುವಲ್ಲಿ... ಎಲ್ಲೇ ಅಕ್ರಮ ನಡೆಯಲಿ ಸಕ್ರಮ ಮಾಡಲಾಗುವುದು. ಎಲ್ಲರ, ಎಲ್ಲಾ ಪಕ್ಷದ ಸಹಕಾರದಿಂದ ಮುಂದಿನ ಚುನಾವಣೆಯಲ್ಲಿ ಗೆಲ್ಲುವುದರಲ್ಲಿ ನನಗೆ ಸಂಶಯವೇ ಇಲ್ಲ. “ಅಕ್ರಮ ಸಕ್ರಮ”ಅಪ್ಲಿಕೇಷನ್‌ಗಾಗಿ ಒಂದು website ಪ್ರಾರಂಭಿಸಲು ‘ನಾಡಿಗ’ರು ಸಹಕರಿಸಬೇಕು.ಬರುವ ಅಪ್ಲಿಕೇಷನ್ ಹಣವನ್ನು ಇಟ್ಟುಕೊಳ್ಳಲು ‘ಸಂಪದ' ಬಳಗದಲ್ಲಿ ಒಬ್ಬರು ತಮ್ಮ e-mail ವಿಳಾಸ ಕಳುಹಿಸುವಿರಾ..?

Rating
No votes yet

Comments