"ಏಯ್ ಬೋ.. ಮಗನೆ, ಭಾರತಕ್ಕೆ ಹಿಂದಿರುಗಿ ಹೋಗೊ..."

"ಏಯ್ ಬೋ.. ಮಗನೆ, ಭಾರತಕ್ಕೆ ಹಿಂದಿರುಗಿ ಹೋಗೊ..."

ಆ ರಾಜ್ಯದ ನಗರವೊಂದರಲ್ಲಿ ಆತನದೊಂದು ಸಣ್ಣ ಫ್ಯಾಕ್ಟರಿ ಇರುತ್ತದೆ. ಖರ್ಚು ಹೆಚ್ಚಾಗಿ ಲಾಭಾಂಶ ಕಡಿಮೆ ಆಗುತ್ತಿದ್ದ ಸಮಯ ಅದು. ಬಹಳ ದಿನಗಳಿಂದ ಸ್ಥಳೀಯರೇ ಕೆಲಸ ಮಾಡುತ್ತಿದ್ದರಿಂದ ಅವರಿಗೆ ಸಂಬಳಗಳೂ, ಖರ್ಚುಗಳೂ ಜಾಸ್ತಿ. ಆ ಸಮಯದಲ್ಲಿ ಮಾಲೀಕನಿಗೆ ದೂರದ ಊರಿನಲ್ಲಿ ಕಮ್ಮಿ ಬೆಲೆಗೆ ಕೂಲಿಯವರು ಸಿಗುತ್ತಾರೆ ಎಂದು ಯಾರೋ ಹೇಳುತ್ತಾರೆ. ಸರಿ. ಇವನು ಒಬ್ಬ ಮೇಸ್ತ್ರ್ರಿಗೆ ದುಡ್ಡು ಕೊಟ್ಟು ಆ ಊರಿನಿಂದ ಒಂದೈವತ್ತು ಜನರನ್ನು ಕರೆಸಿಕೊಳ್ಳುತ್ತಾನೆ. ಕೂಲಿಯವರು ಬಂದ ತಕ್ಷಣ ಅವರನ್ನು ಫ್ಯಾಕ್ಟರಿಯ ಶೆಡ್ ಒಂದರಲ್ಲಿ ಕೂಡಿ ಹಾಕುತ್ತಾನೆ. ಮೊದಲ ದಿನದಿಂದಲೇ ಕೆಲಸ ಶುರು. ಪ್ರತಿದಿನ 12-16 ಗಂಟೆ ಕೆಲಸ. ಕೆಲಸ ಮುಗಿಸಿ ಅವರು ಹೊಸ ಊರು ನೋಡಲೆಂದು ಹೊರಗೆ ಹೋಗುವಂತಿಲ್ಲ. ಕಾಂಪೌಂಡ್ ಗೇಟ್‌ಗೆ ಬೀಗ ಹಾಕಲಾಗಿರುತ್ತದೆ. ಈ ಪರದೇಶಿಗಳು ಕೆಲಸ ಮಾಡಲು ಆರಂಭಿಸಿದ ತಕ್ಷಣ ಮಾಲೀಕ ಸ್ಥಳೀಯರನ್ನೆಲ್ಲ ತೆಗೆದುಹಾಕಿ ಬಿಡುತ್ತಾನೆ. ಸ್ಥಳೀಯರಿಗೆ ಕೊಡುತ್ತಿದ್ದ ಕೂಲಿಯಲ್ಲಿಯ ಕಾಲು ಭಾಗಕ್ಕಿಂತ ಕಮ್ಮಿ ಸಂಬಳ ಇವರಿಗೆ. ಯಜಮಾನ ತಾನೆ ಖುದ್ದಾಗಿ ನಿಂತು ಒಂದುಮೊಟ್ಟೆಯ ಆಮ್ಲೆಟ್ ಅನ್ನು ಇಬ್ಬರು ಕೂಲಿಗಳಿಗೆ ಬ್ರೇಕ್‌ಫಾಸ್ಟ್ ಎಂದು ಹಂಚುತ್ತಾನೆ. ಒಂದು ಸೇಬನ್ನು ನಾಲ್ಕು ಭಾಗ ಮಾಡಿ ನಾಲ್ವರಿಗೆ ಕೊಡುತ್ತಾನೆ. ಸುಂದರ ಭವಿಷ್ಯದ ಕನಸು ಹೊತ್ತು ಬಂದ ಈ ಗಂಡಸರ ಅಪ್ಪಅಮ್ಮಂದಿರು, ಹೆಂಡತಿಮಕ್ಕಳು ಊರಿನಲ್ಲಿ. ಇಲ್ಲಿ ಅಪರಿಚಿತ ಸ್ಥಳದಲ್ಲಿ ಇವರು ಜೀತದಾಳುಗಳು. ಗುಲಾಮರು. ಕೆಲಸ ನಿಧಾನ ಆಯಿತೆಂದರೆ ಯಜಮಾನ ಬಂದು ಬಂದು ಕೆಟ್ಟ ಮಾತಿನಲ್ಲಿ ಬೈಯ್ಯುತ್ತಿದ್ದ: "ಬೋಳಿ ಮಗನೆ, ನೀನು ಭಾರತಕ್ಕೆ ಹಿಂದಿರುಗಿ ಹೋಗೊ...!!"

ಈ ಗುಲಾಮಗಿರಿಯ ಕತೆ ನಡೆದದ್ದು ಅಮೇರಿಕ ಸಂಯುಕ್ತ ಸಂಸ್ಥಾನದಲ್ಲಿ. ನೂರಾರು ವರ್ಷಗಳ ಇಲ್ಲವೆ ಹತ್ತಾರು ವರ್ಷಗಳ ಹಿಂದೆಯಲ್ಲ; ಕೇವಲ 6 ವರ್ಷಗಳ ಹಿಂದೆ. ಹೌದು. ಆ ಕೂಲಿ ಆಳುಗಳು ಭಾರತದಿಂದ ಬಂದ 52 ಜನ ಫಿಟ್ಟರ್‌ಗಳು, ವೆಲ್ಡರ್‌ಗಳು. ಅವರಲ್ಲೊಬ್ಬ ಎಲೆಕ್ಟ್ರಿಕಲ್ ಇಂಜಿನಿಯರ್ ಸಹಾ ಇದ್ದ...

---x---

ಮೆಕ್ಸಿಕೋಗೆ ಹೊಂದಿಕೊಂಡಿರುವ ಕ್ಯಾಲಿಫೋರ್ನಿಯದಂತಹ ರಾಜ್ಯಗಳಲ್ಲಿ ಎಲ್ಲಾದರೂ ಕೃಷಿ ಕೆಲಸದಲ್ಲಿ ತೊಡಗಿರುವ ಒಂದು ಗುಂಪು ನಿಮಗೆ ಕಾಣಿಸಿದರೆ ಅದು ಖಂಡಿತವಾಗಿ ಮೆಕ್ಸಿಕೊ, ಇಲ್ಲವೆ ಮಧ್ಯಅಮೇರಿಕದ ರಾಷ್ಟ್ರಗಳಿಂದ ಇಲ್ಲಿಗೆ ಜೀವನ ಹುಡುಕಿಕೊಂಡು ಬಂದಿರುವ ಲ್ಯಾಟಿನೋಗಳದೇ ಆಗಿರುತ್ತದೆ. ಕಳೆದ ಮೂರು-ನಾಲ್ಕು ಶತಮಾನಗಳಿಂದ ಆಫ್ರಿಕನ್ ಮೂಲದ ಕಪ್ಪು ಜನರು ಎಂತೆಂತಹ ಕೆಲಸ ಮಾಡುತ್ತಿದ್ದರೊ ಅದನ್ನು ಇವತ್ತು ಈ ಲ್ಯಾಟಿನೋಗಳು ಮಾಡುತ್ತಿದ್ದಾರೆ. ಇವರಲ್ಲಿ ಎಷ್ಟೋ ಜನ ಅಮೇರಿಕದಲ್ಲಿ ಕೂಲಿ ಮಾಡಲು ಎಂತೆಂತಹುದೊ ಪಡಿಪಾಟಲುಗಳನ್ನು ಪಟ್ಟುಕೊಂಡು, ಕಳ್ಳತನದಲ್ಲಿ ಈ ದೇಶದೊಳಕ್ಕೆ ನುಸುಳಿ ಬಂದಿರುತ್ತಾರೆ. ಇವರಿಲ್ಲದಿದ್ದರೆ ಅಮೇರಿಕದ ಕೃಷಿಯೇ ನಿಂತುಹೋಗುತ್ತದೆ ಎನ್ನುವ ಸ್ಥಿತಿಗೆ ಈ ದೇಶ ಇಂದು ಬಂದು ಬಿಟ್ಟಿದೆ.

ತಮ್ಮ ಸ್ವಂತ ಊರಿನಲ್ಲಿನ ಜೀವನಕ್ಕಿಂತ ಹೆಚ್ಚು ಸಹನೀಯವಾದ ಜೀವನ ಹುಡುಕಿಕೊಂಡು ಮನುಷ್ಯ ಅಲೆಮಾರಿ ಆಗುತ್ತಲೇ ಇದ್ದಾನೆ. ಯಾವಯಾವ ದೇಶದಲ್ಲಿ ಬಡತನ ಹೆಚ್ಚಿದೆಯೊ, ನಿರುದ್ಯೋಗ ಹೆಚ್ಚಿದೆಯೊ ಅಲ್ಲಿಂದೆಲ್ಲ ಜನ ಗುಳೆ ಹೋಗುತ್ತಲೇ ಇರುತ್ತಾರೆ. ನೋಬೆಲ್ ಪುರಸ್ಕೃತ ಅಮೇರಿಕನ್ ಸಾಹಿತಿ ಜಾನ್ ಸ್ಟೈನ್‌ಬೇಕ್ ತನ್ನ "ದ ಗ್ರೇಪ್ಸ್ ಆಫ್ ವ್ರ್ಯಾಥ್" ಕಾದಂಬರಿಯಲ್ಲಿ ಕಳೆದ ಶತಮಾನದ ಉತ್ತರಾರ್ಧದಲ್ಲಿ ಹೇಗೆ ಅಮೇರಿಕದ ರೈತರು ಮಣ್ಣಿನ ವಾಸನೆ ಕಳೆದುಕೊಂಡರು, ಕೃಷಿ ಎನ್ನುವುದು ಹೇಗೆ ಉದ್ಯಮವಾಗಿಬಿಟ್ಟಿತು, ಹೇಗೆ ಆ ರೈತರು ಆಮದು ಮಾಡಿಕೊಂಡ ಪರದೇಶಿ ಕೂಲಿಗಳಿಂದ ಕೆಲಸ ಮಾಡಿಸುತ್ತ ನೆಲವನ್ನು, ಅದರ ವಾಸನೆಯನ್ನು, ಸ್ಪರ್ಶವನ್ನು ಮರೆತರು, ಮತ್ತು ಹೇಗೆ ಆ ಕೃಷಿಕಾರ್ಮಿಕರನ್ನು ದಂಡಿಸುತ್ತಿದ್ದರು ಎಂದು ಹೇಳುತ್ತ ಹೀಗೆ ಬರೆಯುತ್ತಾನೆ: "ಚೀನಾದಿಂದ, ಜಪಾನಿನಿಂದ, ಮೆಕ್ಸಿಕೋದಿಂದ, ಫಿಲಿಫ್ಫೀನ್ಸ್‌ನಿಂದ ಗುಲಾಮರನ್ನು ಆಮದು ಮಾಡಿಕೊಂಡರು. ಈಗ ಅವರನ್ನು ಗುಲಾಮರು ಎಂದೇನೂ ಕರೆಯುತ್ತಿರಲಿಲ್ಲ. ಅವರ ಬಗ್ಗೆ ಒಬ್ಬ ಬ್ಯುಸಿನೆಸ್‌ಮ್ಯಾನ್ ಹೀಗಂದ, ಅವರು ಕೇವಲ ಬೇಳೆ ಮತ್ತು ಅಕ್ಕಿಯಿಂದಲೆ ಜೀವನ ಮಾಡುತ್ತಾರೆ. ಅವರಿಗೆ ಒಳ್ಳೆಯ ಸಂಬಳ ತೆಗೆದುಕೊಂಡು ಏನು ಮಾಡಬೇಕು ಅಂತಲೆ ಗೊತ್ತಿಲ್ಲ. ಯಾಕೆ, ಅಂತೀರ? ನೋಡಿ. ಅವರು ಎಂತಹುದನ್ನು (ಅಗ್ಗವಾದದ್ದನ್ನು) ತಿನ್ನುತ್ತಾರೆ ನೋಡಿ. ಮತ್ತೆ, ಅವರೇನಾದರೂ ಸ್ವಲ್ಪ ತರಲೆ ಮಾಡಲು ಆರಂಭಿಸಿದರೆ ಸುಲಭವಾಗಿ ದೇಶದಿಂದ ಗಡಿಪಾರು ಮಾಡಬಹುದು...." ಇದನ್ನು ಸ್ಟೈನ್‌ಬೆಕ್ ಬರೆದದ್ದು 1939 ರಲ್ಲಿ.

ಟಲ್ಸ ಎನ್ನುವುದು ಓಕ್ಲಹೋಮ ಎನ್ನುವ ರಾಜ್ಯದಲ್ಲಿರುವ, ಸುಮಾರು ನಾಲ್ಕು ಲಕ್ಷ ಜನಸಂಖ್ಯೆಯ ಒಂದು ದೊಡ್ಡ ನಗರ. ಜಾನ್ ಪಿಕ್ಲ್ ಕಂಪನಿ ಎನ್ನುವುದು ತೈಲ ಉದ್ದಿಮೆಗಳಿಗೆ ಯಂತ್ರೋಪಕರಣಗಳನ್ನು ತಯಾರಿಸಿ ಕೊಡುವ ಅಲ್ಲಿಯ ಒಂದು ಕಂಪನಿ. ಜಾನ್ ಪಿಕ್ಲ್ ಎನ್ನುವವನು ಅದರ ಮಾಲೀಕ. ಸುಮಾರು 60 ಎಕರೆಗಳ ವಿಶಾಲ ಪ್ರದೇಶದಲ್ಲಿ ಹರಡಿದ್ದ ಫ್ಯಾಕ್ಟರಿ ಅದು. ಇಲ್ಲಿಯ ಲೆಕ್ಕಾಚಾರದಲ್ಲಿ ಆತ ಒಬ್ಬ ಸಣ್ಣ ಉದ್ದಿಮೆದಾರ. ಆರು ವರ್ಷಗಳ ಹಿಂದೆ, ಅಂದರೆ 2001 ರಲ್ಲಿ ಜಾನ್ ಪಿಕ್ಲ್ ಭಾರತಕ್ಕೆ ಹೋಗಿ ಅಲ್ಲಿಂದ ೫೨ ಜನ ಭಾರತೀಯರನ್ನು ಕರೆದುಕೊಂಡು ಬರುತ್ತಾನೆ. ವೆಲ್ಡರ್‌ಗಳು, ಎಲೆಕ್ಟ್ರಿಶಿಯನ್‌ಗಳು, ಲೇತ್ ಕೆಲಸ ಮಾಡುವ ಫಿಟ್ಟರ್‌ಗಳು ಅವರು. ಅವರಿಗೆ ಅಡಿಗೆ ಮಾಡಿಹಾಕಲು ಇಬ್ಬರು ಅಡಿಗೆಭಟ್ಟರೂ ಆ ಗುಂಪಿನಲ್ಲಿ ಇರುತ್ತಾರೆ. ಅವರಿಗೆಲ್ಲ ಎಚ್-1 ವೀಸಾದ ಸುಳ್ಳು ಆಶ್ವಾಸನೆ ನೀಡಿ, ಅದಕ್ಕಿಂತ ಕಡಿಮೆ ಹಕ್ಕುಗಳಿರುವ ಬಿ-1 ವೀಸಾದಲ್ಲಿ ಕರೆದುಕೊಂಡು ಬರುತ್ತಾನೆ, ಜಾನ್ ಪಿಕ್ಲ್. ಅದಕ್ಕೆ ಆ ಭಾರತೀಯರಿಂದಲೆ ಸುಮಾರು ಒಂದು ಲಕ್ಷ ರೂಪಾಯಿಗೂ ಹೆಚ್ಚಿನ ಶುಲ್ಕ ವಸೂಲಿ ಮಾಡಲಾಗಿರುತ್ತದೆ. ಅವರು ಟಲ್ಸದ ಕಾರ್ಖಾನೆಯಲ್ಲಿ ಬಂದಿಳಿದ ತಕ್ಷಣ ಜಾನ್ ಪಿಕ್ಲ್‌ನ ಹೆಂಡತಿ ಖುದ್ದಾಗಿ ಅವರಿಂದ ಪಾಸ್‌ಪೋರ್ಟ್‌ಗಳನ್ನು ಕಿತ್ತಿಟ್ಟುಕೊಳ್ಳುತ್ತಾಳೆ. 52 ಜನರನ್ನೂ ಹತ್ತಿಪ್ಪತ್ತು ಜನರ ವಾಸಕ್ಕಷ್ಟೇ ಯೋಗ್ಯವಾದ ಕಟ್ಟಡದಲ್ಲಿ ವಾಸ ಮಾಡಲು ಹೇಳುತ್ತಾರೆ. ವಾಸಕ್ಕಾಗಿ ಅಲ್ಪಸ್ವಲ್ಪ ಬದಲಾಯಿಸಿದ್ದ ಹಳೇ ಶೆಡ್ಡು ಅದು.

ಲೇಖನದ ವಿಡಿಯೊ ಪ್ರಸ್ತುತಿ

ಬಂದವರು ಬೇಗಬೇಗ ಕೆಲಸ ಕಲಿತ ಮೇಲೆ ಅಲ್ಲಿಯ ಹಳಬರನ್ನೆಲ್ಲ ಪಿಕ್ಲ್ ಕೆಲಸದಿಂದ ತೆಗೆದುಬಿಡುತ್ತಾನೆ. ಸ್ಥಳೀಯರಿಗೆ ಕೊಡುತ್ತಿದ್ದ ಸಂಬಳ 2-3 ಸಾವಿರ ಡಾಲರ್ ಆಗಿದ್ದರೆ ಇವರಿಗೆ ಕೇವಲ 500 ಡಾಲರ್ ಸಂಬಳ. ವಾರಕ್ಕೆ ಆರು ದಿನಗಳ ಕೆಲಸ. ದಿನಕ್ಕೆ 12-16ಗಂಟೆಗಳ ಕತ್ತೆ ದುಡಿತ. ಸ್ವಲ್ಪ ನಿಧಾನ ಮಾಡಿದರೆ ನೀವು ಭಾರತೀಯರು ಸೋಮಾರಿಗಳು, ಎಂಬ ಬೈಗಳು. ದಿನೇದಿನೆ ಪರಿಸ್ಥಿತಿ ಬಿಗಡಾಯಿಸುತ್ತ ಹೋಗುತ್ತದೆ. ಅಪ್ಪಣೆ ಇಲ್ಲದೆ ಫ್ಯಾಕ್ಟರಿಯಿಂದ ಹೊರಗೆ ಹೋದರೆ ಕೆಲಸ ಕಳೆದುಕೊಳ್ಳಬೇಕಾಗುತ್ತದೆ ಮತ್ತು ಭಾರತಕ್ಕೆ ಗಡಿಪಾರು ಮಾಡಲಾಗುತ್ತದೆ ಎಂಬ ಎಚ್ಚರಿಕೆ ಕೊಟ್ಟಿರಲಾಗುತ್ತದೆ. ಕೊನೆಗೆ ಮಾಲೀಕನೆ ಅವರಿಗೆ ಒದಗಿಸಲಾಗುವ ಊಟದ ಉಸ್ತುವಾರಿಯನ್ನು ನೋಡಿಕೊಳ್ಳಲು ಆರಂಭಿಸುತ್ತಾನೆ. "ನೀವು ಗತಿಯಿಲ್ಲದೆ ಇದ್ದವರು, ನೀವು ಭಾರತದಲ್ಲಿ ತಿನ್ನುವುದನ್ನು ನಾನು ನೋಡಿಲ್ಲವ, ನಿಮಗೆಲ್ಲ ಯಾಕಷ್ಟು ಊಟ?" ಎಂದು ಜಬರಿಸುತ್ತಾನೆ. ಮೂರು ದಿನಕ್ಕೊಮ್ಮೆ ಒಂದು ಲೋಟ ಹಾಲು. ಕಮ್ಮಿ ಬೆಲೆಯ ಅಕ್ಕಿ. ಮೆಕ್ಸಿಕನ್ನರು ತಿನ್ನುವ ಕಂದುಬಣ್ಣದ ಹಲಸಂದೆಯೆ ಮುಖ್ಯ ಆಹಾರ. ಭಾರತೀಯ ಸಾಂಬಾರುಮಸಾಲೆ ಸಾಮಗ್ರಿಗಳು ತುಟ್ಟಿ ಎಂದು ಅವಕ್ಕೂ ಕೊಕ್ಕೆ. ಕಬ್ಬಿಣದ ಕೆಲಸ ಮಾಡುವಾಗ ಏನಾದರೂ ಅಪಘಾತವಾಗಿ, ಯಾರಿಗಾದರೂ ಗಾಯವಾದರೆ ಏನೋ ಒಂದು ನೋವುನಿವಾರಕ ಮಾತ್ರೆ ತಂದುಕೊಡುತ್ತಿದ್ದರು. ಆಸ್ಪತೆಗೆ ಕರೆದುಕೊಂಡು ಹೋಗುವ ಮಾತೇ ಇಲ್ಲ. ಯಾರಾದರೂ ಕಾಯಿಲೆ ಬಿದ್ದರೆ, ಪಿಕ್ಲ್ "ನೀನು ವೈದ್ಯರ ಬಳಿಗೆ ಹೋಗಬೇಕ? ನಾನೆ ನಿನ್ನ ವೈದ್ಯ," ಎನ್ನುತ್ತಿದ್ದ.

ಆ ಭಾರತೀಯರಿಗೆ ಬದುಕು ಅಸಹನೀಯವಾಗಲಾರಂಭಿಸಿತು. ಇಸ್ಲಾಂ ಕೋಮುವಾದಿಗಳು ವರ್ಲ್ಡ್ ಟ್ರೇಡ್ ಸೆಂಟರ್ ಮೇಲೆ ದಾಳಿ ಮಾಡಿ ಆಗ ಮೂರ್ನಾಲ್ಕು ತಿಂಗಳಾಗಿತ್ತಷ್ಟೆ. ಆದರೂ ಕೆಲವರು ದನಿಯೆತ್ತಲು ಆರಂಭಿಸಿದರು. ಆಗ ಪಿಕ್ಲ್ ಅವರಿಗೆ ಗಡಿಪಾರು ಮಾಡುವುದಾಗಿ ಹೆದರಿಸುತ್ತಿದ್ದ. ಒಮ್ಮೆ ರಜಾದಿನ ಕೆಲವರು ಹತ್ತಿರದಲ್ಲಿ ಇದ್ದ ಚರ್ಚಿಗೆ ಹೋಗಲು ಅಪ್ಪಣೆ ಕೇಳಿದರೆ "ಬೋಳಿ ಮಗನೆ, ನೀನು ಭಾರತಕ್ಕೆ ಹಿಂದಿರುಗಿ ಹೋಗು," ಎಂದು ಇನ್ನೂ ಏನೇನೊ ಕೆಟ್ಟ ಮಾತುಗಳನ್ನು ಬೈದ.

ಕೊನೆಗೆ ಸಹಾಯ ಚರ್ಚಿನ ಮೂಲಕವೇ ಬರುತ್ತದೆ. ಇವರ ಪರಿಸ್ಥಿತಿ ನೋಡಿದ ಮಾರ್ಕ್ ಎನ್ನುವ ಚರ್ಚಿನಲ್ಲಿ ಪರಿಚಯವಾದ ಸಜ್ಜನನೊಬ್ಬ ನಿಮಗೇನಾದರೂ ಸಹಾಯ ಬೇಕಾದರೆ ಹೇಳಿ ಎಂದಿರುತ್ತಾನೆ. ಕಾರ್ಖಾನೆಯ ಒಳಗೆ ಒಮ್ಮೆ ಪರಿಸ್ಥಿತಿ ಬಿಗಡಾಯಿಸಿ ಏಳು ಜನರನ್ನು ಮಾರನೆಯ ದಿನ ಗಡಿಪಾರು ಮಾಡಲು ತೀರ್ಮಾನ ತೆಗೆದುಕೊಳ್ಳಲಾಗುತ್ತದೆ. ಆ ಏಳೂ ಜನರು ಅಂದು ರಾತ್ರಿ ಕಾಂಪೌಂಡ್‌ನ ಕೆಳಗೆ ನುಸುಳಿ ಓಡಿ ಬಂದು ಬಿಡುತ್ತಾರೆ. ಮಾರ್ಕ್ ಅವರಿಗೆಲ್ಲ ಆಶ್ರಯ ಕೊಡುತ್ತಾನೆ. ಇದು ಕತೆಯ ಅರ್ಧ ಮಾತ್ರ. ಅವರು ಓಡಿ ಬಂದನಂತರ ಒಳಗೆ ರೈಫಲ್ ಹಿಡಿದ ಗಾರ್ಡ್ ಉಳಿದವರನ್ನು ಕಾವಲು ಕಾಯಲು ಪ್ರಾರಂಭಿಸುತ್ತಾನೆ. ಅಲ್ಲಿರುವ ಮಿಕ್ಕ 45 ಜನರೂ ಸಂಪೂರ್ಣವಾಗಿ ಈ ಆಧುನಿಕ ಗುಲಾಮಿತನದಿಂದ ಸಂಪೂರ್ಣವಾಗಿ ಬಿಡಿಸಿಕೊಳ್ಳಬೇಕಾದರೆ ತಿಂಗಳುಗಳು ಹಿಡಿಸುತ್ತವೆ. ಮಾರ್ಕ್, ಒಬ್ಬ ವಕೀಲ, ಮತ್ತು ಸ್ಥಳೀಯ ಚರ್ಚಿನ ಸಹಾಯದಿಂದ ಕೊನೆಗೂ ಎಲ್ಲರ ಬಿಡುಗಡೆ ಆಗುತ್ತದೆ. ಒಟ್ಟು ಐದು ತಿಂಗಳುಗಳ ಕಾಲ ಈ ನತದೃಷ್ಟ ಭಾರತೀಯರು ಅಮೇರಿಕದ ನೆಲದಲ್ಲಿ ಅಕ್ಷರಶಃ ಜೀತದಾಳುಗಳಾಗಿ ನರಕಸದೃಶ ಜೀವನ ನಡೆಸಿರುತ್ತಾರೆ. ಅದೂ, ಕೇವಲ ಆರು ವರ್ಷಗಳ ಇತ್ತೀಚೆಗೆ.

ಇದೇ ವಿಷಯದ ಮೇಲೆ ಈಗಲೂ ಕೋರ್ಟುಕಚೇರಿಗಳು ನಡೆಯುತ್ತಿವೆ. ಆದರೆ, ಇಲ್ಲಿ ನಮಗೆ ಮುಖ್ಯವಾಗಬೇಕಿರುವುದು ಇಂತಹುದಕ್ಕೆ ಇಲ್ಲಿಯ ಪ್ರಜ್ಞಾವಂತ ಸಮೂಹ ಹೇಗೆ ಪ್ರತಿಕ್ರಿಯಿಸುತ್ತದೆ ಎನ್ನುವುದು. ಜಾನ್ ಬೊವ್ ಎಂಬ ಯುವ ಪತ್ರಕರ್ತನೊಬ್ಬ ಇಂತಹುದೇ ಇನ್ನೆರಡು ಆಧುನಿಕ ಕಾಲದ ಗುಲಾಮರ ಘಟನೆಗಳನ್ನಿಟ್ಟುಕೊಂಡು ಇತ್ತೀಚೆಗೆ ತಾನೆ ಓoboಜies: “Nobodies: Modern American Slave Labor and the Dark Side of the Global Economy” ಎಂಬ ಪುಸ್ತಕ ಬರೆದಿದ್ದಾನೆ. ಇಂತಹುವುಗಳನ್ನು ತಡೆಯುವುದು ಹೇಗೆ ಎಂದು ಮಾತನಾಡುತ್ತಿದ್ದಾನೆ. ಪಾಲಿಸಿ ಮೇಕಿಂಗ್‌ನಲ್ಲಿ ಪಾಲ್ಗೊಳ್ಳುತ್ತಿದ್ದಾನೆ. ಅವನಂತಹ ಪ್ರಜ್ಞಾವಂತ ಜನ ಈ ದೇಶದಲ್ಲಿ ಅಂತಹವು ಆಗದ ರೀತಿ ಏನು ಮಾಡಬೇಕೊ ಅಂತಹುದನ್ನು ಮಾಡಲು ಯತ್ನಿಸುತ್ತಿದ್ದಾರೆ.

ಆದರೆ, ನಮ್ಮಲ್ಲಿ?

ಕ್ರಿಯಾಶೀಲರಲ್ಲದ ಚಿಂತಕರು:
ಭಾರತದ ಮಟ್ಟದಲ್ಲಿ ಹೇಳಬೇಕೆಂದರೆ ಇಂದು ಅನೇಕ ಪ್ರಾಮಾಣಿಕ ಮನಸ್ಸುಗಳು ಪಾಲಿಸಿ ಮೇಕಿಂಗ್‌ನಲ್ಲಿ ತೊಡಗಿಸಿಕೊಳ್ಳುತ್ತಿವೆ. ಅರುಣಾ ರಾಯ್, ಅರವಿಂದ್ ಖೇಜ್ರಿವಾಲ, ಜಯಪ್ರಕಾಶ್ ನಾರಾಯಣ್ ಮುಂತಾದವರು ಕೇಂದ್ರ ಸರ್ಕಾರಕ್ಕೆ ಕೆಲವು ಕಾಯಿದೆಕಾನೂನು ಬದಲಾಯಿಸಲು, ಸುಧಾರಿಸಲು ಸಲಹೆಸೂಚನೆ ಕೊಡುತ್ತಿದ್ದಾರೆ. ಹೋರಾಡುತ್ತಿದ್ದಾರೆ. ಕರ್ನಾಟಕದಲ್ಲಿ? ನಮ್ಮಲ್ಲಿ ಕನ್ನಡದ ಚಿಂತಕರದೆಲ್ಲ ಅದು ಬೇಡ, ಇದು ಬೇಡ ಎನ್ನುವ ಭಾಷಣಗಳೆ. ಏನು ಸುಧಾರಣೆ ಮಾಡಬೇಕು, ಹೇಗೆ ಮಾಡಬೇಕು ಎನ್ನುವ ಸಲಹೆಗಳೇ ಇಲ್ಲ. ಸರ್ಕಾರಕ್ಕೆ ಪ್ರಗತಿಪರರು ಕೊಡಬಹುದಾದ ಮಾರ್ಗದರ್ಶನಗಳೆಲ್ಲ ಬಹುಶಃ ಲಂಕೇಶರ 1985 ರ ಸುಮಾರಿಗೇ ನಿಂತು ಹೋಯಿತು ಎನ್ನಿಸುತ್ತದೆ. ಜನ ನೆಲೆ ಕಳೆದುಕೊಳ್ಳುತ್ತಿರುವುದಾಗಲಿ, ಕೆಲಸ ಹುಡುಕುತ್ತ ಅಲೆಮಾರಿಗಳಾಗಿರುವುದಾಗಲಿ, ರೈತರ ಆತ್ಮಹತ್ಯೆಗಳಾಗಲಿ, ಕರ್ನಾಟಕದ ಇತರ ಜ್ವಲಂತ ಸಮಸ್ಯೆಗಳ ಬಗ್ಗೆಯಾಗಲಿ ಯಾವೊಬ್ಬ ಕನ್ನಡದ ಪತ್ರಕರ್ತರೂ ಪಿ. ಸಾಯಿನಾಥ್ ಬರೆದಂತಹ ಒಂದು ಪುಸ್ತಕ ಬರೆದದ್ದು ಕಾಣಿಸಲಿಲ್ಲ. ಚರ್ಚೆ ಮಾಡಿದ್ದು ಕಾಣಿಸಲಿಲ್ಲ. ಈಗೆಲ್ಲ ರೌಡಿಗಳ, ರಾಜಕಾರಣಿಗಳ, ವೇಶ್ಯೆಯರ, ಭ್ರಷ್ಟರ ಕಂತೆಪುರಾಣ ಬರೆಯುವವರು, ದುಡ್ಡು ಮಾಡುವುದು ಹೇಗೆ ಎಂದು ಹೇಳುವವರೆ ಧರೆಗೆ ದೊಡ್ಡವರು.

ಉತ್ತಮ ವ್ಯವಸ್ಥೆಯನ್ನು ಯಾರೂ ಬೆಳ್ಳಿ ತಟ್ಟೆಯಲ್ಲಿ ಕೊಡುವುದಿಲ್ಲ. ಅಧಿಕಾರಶಾಹಿಗೆ, ರಾಜಕಾರಣಿಗಳಿಗೆ ಸಮಾಜಚಿಂತಕರು ಮಾರ್ಗದರ್ಶನವಾಗಲಿ, ತಿಳುವಳಿಕೆಯಾಗಲಿ ಕೊಡದೆ ಇದ್ದರೆ ನಮ್ಮದೇ ಈ ವ್ಯವಸ್ಥೆ ಸುಧಾರಿಸೀತಾದರೂ ಹೇಗೆ? ಕ್ರಿಯಾಶೀಲತೆಯಿಲ್ಲದ ಪ್ರಾಮಾಣಿಕತೆ ಉಪಯೋಗಕ್ಕೆ ಬಾರದ್ದು. ನಮ್ಮಲ್ಲಿಯ ಈ ಚಿಂತಕರು ಈಗ ಕ್ರಿಯಾಶೀಲರಾಗಬೇಕಿದೆ; ಮಾರ್ಗದರ್ಶಕರಾಗಬೇಕಿದೆ. ಇಲ್ಲದಿದ್ದರೆ ಅವರ ಮಾತುಗಳು ಕೇವಲ ಬೌದ್ಧಿಕ ಕಸರತ್ತಿನ ಬೊಗಳೆಗಳಾಗಿಬಿಡುತ್ತವೆ.

ಈಗ ಆಗಿರುವಂತೆ...

(ವಿಕ್ರಾಂತ ಕರ್ನಾಟಕ - ಡಿಸೆಂಬರ್ 21, 2007 ರ ಸಂಚಿಕೆಯಲ್ಲಿನ ಬರಹ)

Rating
No votes yet