ಹೃದಯವಂತಿಕೆ

ಹೃದಯವಂತಿಕೆ

ಮುಂಬಯಿ ಲೋಕಲ್ ಟ್ರೈನ್ ಬಗ್ಗೆ ಇನ್ನೊಂದು ಪ್ರಸಂಗದ ವರದಿ. ಈ ಘಟನೆ ನಡೆದದ್ದು ಇಂದು ಸಂಜೆ.

ಚರ್ಚ್‍ಗೇಟ್ ಸ್ಟೇಷನ್ನಿನ ಮೂರನೇ ಮತ್ತು ನಾಲ್ಕನೇ ಪ್ಲಾಟ್‍ಫಾರಂಗಳಿಂದ ಫಾಸ್ಟ್ ಲೋಕಲ್‍ಗಳು ಹೊರಡುವುವು. ನಾಲ್ಕನೇ ಪ್ಲಾಟ್‍ಫಾರಂ‍ನಲ್ಲಿ ವಿರಾರ್ ಗೆ ಹೋಗುವ ಲೋಕಲ್ ಟ್ರೈನ್ ನಿಂತಿದ್ದಿತು. ಮೂರನೇ ಪ್ಲಾಟ್‍ಫಾರಂನಲ್ಲಿ ಬೊರಿವಿಲಿಗೆ ಹೊರಟಿದ್ದ ಲೋಕಲ್ ಇದ್ದಿತು. ನಾನು ಎಂದಿನಂತೆ ಬೊರಿವಿಲಿ ಲೋಕಲ್‍ನಲ್ಲಿ ಕಿಟಕಿಯ ಪಕ್ಕದಲ್ಲಿ ಕುಳಿತಿದ್ದೆ. ಈ ಸೀಟು ಸಿಗುವುದು ಬಲು ಕಷ್ಟ. ಅದಕ್ಕಾಗಿ ಟ್ರೈನ್ ಬರುವ ಮುಂಚೆ ಪ್ಲಾಟ್‍ಫಾರಂ‍ನಲ್ಲಿ ನಿಂತಿರಬೇಕು. ಗಾಡಿ ನಿಲ್ಲುವ ಮುಂಚೆಯೇ ಒಳಗೆ ಹಾರಿ ಸೀಟು ಹಿಡಿಯಬೇಕು. ಕೆಲವೊಮ್ಮೆ ಈ ಸೀಟಿಗಾಗಿ ಹೊಡೆದಾಟವೂ ಆಗುವುದು. ನಾನು ಅಷ್ಟೆಲ್ಲ ಮಿತಿ ಮೀರಿ ಹೋಗುವುದಿಲ್ಲ ಬಿಡಿ.

ಇಂದು ಎಂದಿನಂತೆ ಕಿಟಕಿಯ ಬಳಿಯ ಕುಳಿತಿದ್ದೆ. ಬೊರಿವಿಲಿ ಟ್ರೈನ್ ಹೊರ್‍ಅಡುವ ಸಮಯ ಸಂಜೆಯ ೬.೧೪ - ಇನ್ನು ಪಕ್ಕದ ನಾಲ್ಕನೆಯ ಪ್ಲಾಟ್‍ಫಾರಂನಿಂದ ವಿರಾರಿಗೆ ಹೊರ್‍ಅಡುವ ಟ್ರೈನಿನ ಸಮಯ ೬.೨೨. ಸಾಮಾನ್ಯವಾಗಿ ಜನರು ಒಂದು ಪ್ಲಾಟ್‍ಫಾರಂನಿಂದ ಇನ್ನೊಂದರೆಡೆಗೆ ಹೋಗಲು ಸಬ್‍ವೇ ಬಳಸುವ ಬದಲು ಒಂದು ಲೋಕಲ್ ಒಳಗಿನಿಂದ ಹಾಯ್ದು ಇನ್ನೊಂದರೆಡೆಗೆ ಹೋಗುವರು. ಆಗ ಸಾಮಾನ್ಯವಾಗಿ ಗಾಡಿ ಹೊರ್‍ಅಡುವ ಸಿಗ್ನಲ್ ಇದೆಯೇ ಎಂದು ಪರೀಕ್ಷಿಸಿ ದಾಟುವರು. ಕೆಲವೊಮ್ಮೆ ರೈಲ್ವೇ ಹಳಿಯನ್ನು ದಾಟಲು ಹೋಗಿ ಪೊಲೀಸರಿಗೆ ದಂಡ ತೆರುವ ಸಂದರ್ಭಗಳೂ ಇವೆ.

ಇನ್ನು ಇಂದು ನೋಡಿದ ಘಟನೆಯ ಬಗ್ಗೆ. ನಮ್ಮ ಗಾಡಿ ಇನ್ನೇನು ಹೊರಡಬೇಕಿರುವಾಗ ಒಬ್ಬಾತ ತನ್ನ ಹೆಂಡತಿ, ಮಗ ಮತ್ತು ಮಗಳೊಡನೆ ( ಇಬ್ಬರೂ ಚಿಕ್ಕ ಮಕ್ಕಳು ), ನಮ್ಮ ಟ್ರೈನ್ ಹತ್ತಲು ಬಂದ. ತಾನು ಮತ್ತು ಮಕ್ಕಳು ಹತ್ತುವ ಸಮಯಕ್ಕೆ ಸರಿಯಾಗಿ ಗಾಡಿ ಮುಂದೆ ಹೋರಟಿತು. ಆಕೆ ಗಾಡಿಯನ್ನು ಹತ್ತಲಾರದೇ ಕೆಳಗೆ ಪ್ಲಾಟ್‍ಫಾರಂ ಮೇಲೆಯೇ ಬಿದ್ದಳು. ಈತ ಅದನ್ನು ಕಂಡು ಮಕ್ಕಳೊಡನೆ ಇಳಿಯಲು ಪ್ರಯತ್ನಿಸಿದ. ಹೇಗೋ ಸಾವರಿಸಿಕೊಂಡು ತಾನಿಳಿದ, ಆದರೆ ಮಕ್ಕಳು ಇಳಿಯಲಾಗಲಿಲ್ಲ. ಮಕ್ಕಳು ಇಳಿಯಲು ಪ್ರಯತ್ನಿಸಿದಾಗ ಸುತ್ತಲಿದ್ದ ಜನರೆಲ್ಲಾ ಕೂಗಿ ಅವರನ್ನು ಇಳಿಯದಂತೆ ತಡೆದರು. ಅಷ್ಟು ಹೊತ್ತಿಗೆ ಟ್ರೈನ್ ರಭಸದಿಂದ ಚಲಿಸಹತ್ತಿತ್ತು. ಆ ಮಕ್ಕಳು ಅಳಲು ತೊಡಗಿದರು. ಆಗ ಅಕ್ಕ ಪಕ್ಕದವರು ಅವರಿಗೆ ಎಲ್ಲಿಗೆ ಹೋಗಬೇಕೆಂದು ಕೇಳಿದರು. ಆ ಮಕ್ಕಳಿಗೆ ಇವರ ಭಾಷೆ ತಿಳಿಯದು. ಅವರು ಈಗಿನ್ನೂ ಈ ಊರಿಗೆ ಬಂದಿರುವವರಂತೆ. ಅವರು ತಮಿಳರು. ಅಲ್ಲೊಬ್ಬ ತಮಿಳರವನೂ ಇದ್ದ. (ನಂತರ ತಿಳಿದುಬಂದದ್ದು ಆತ ಅಲ್ಲಿಯೇ ರೈಲ್ವೇ ಕಛೇರಿಯಲ್ಲಿ ಗುಮಾಸ್ತನಾಗಿ ಕೆಲಸ ಮಾಡುತ್ತಿದ್ದಾನೆ ಎಂದು ). ಆತ ಮಕ್ಕಳಿಗೆ ಸಾಂತ್ವನ ನೀಡಿ, ಮುಂದಿನ ಸ್ಟೇಷನ್‍ನಲ್ಲಿ ಇಳಿದು ಮರಳಿ ಚರ್ಚ್‍ಗೇಟ್‍ಗೆ ಕರೆದೊಯ್ಯುವೆನೆಂದ ಮೇಲೆ ಮಕ್ಕಳು ಸುಮ್ಮನಾದರು. ಅಷ್ಟು ಹೊತ್ತಿಗೆ ಅಲ್ಲೊಬ್ಬರು ಹಿಂದಿಯಲ್ಲಿ ಆತನನ್ನು ಕೇಳಿದರು. ಅಲ್ಲ, ನೀವು ಆ ಕಡೆಗೆ ಹೋದರೆ, ಈ ಮಕ್ಕಳ ತಂದೆ ತಾಯಿ ಈ ಸ್ಟೇಷನ್ನಿಗೆ ಬರಬಹುದು ಅಲ್ಲವೇ? ಅದಕ್ಕಾತ, ಅವರ ಹಿತವನ್ನು ಕಾಯುವೆನೆಂದೂ, ಅವರುಗಳನ್ನು ಮುಂದಿನ ಸ್ಟೇಷನ್ ಆದ ಮರೀನ್ ಲೈನ್ಸ್ ನಲ್ಲಿ ಇಳಿಸಿ, ಅಲ್ಲಿಯೇ ಸ್ಟೇಷನ್ ಮಾಸ್ತರರ ಕಛೇರಿಯಲ್ಲಿ ಕುಳ್ಳಿರಿಸಿ, ಅಲ್ಲಿಂದ ಚರ್ಚ್‍ಗೇಟ್ ಸ್ಟೇಷನ್‍ಗೆ ವಿಷಯ ತಿಳಿಸಿ ತಂದೆ ತಾಯಿಗಳು ಅಲ್ಲಿಯೇ ಇರುವಂತೆ ಅನೌಂನ್ಸ್‍ಮೆಂಟ್ ಮಾಡಿಸಿ, ತಾನು ಅಲ್ಲಿಗೆ ಹೋಗಿ ತಂದೆ ತಾಯಿಯರನ್ನು ಮರೀನ್ ಲೈನ್ಸ್‍ಗೆ ಕರೆತರುವೆನೆಂದನು.
ಹಾಗೆಯೇ ಮುಂದಿನ ಸ್ಟೇಷನ್ನಿನಲ್ಲಿ ಆತ ಮಕ್ಕಳೊಡನೆ ಇಳಿದನು. ಮುಂದೆ ನಾನೀಕಡೆಗೆ ಬಂದೆ. ಮುಂದೇನಾಯ್ತೋ ತಿಳಿಯದು. ಆದರೆ ಆ ಮಕ್ಕಳಲ್ಲಿ ಎಷ್ಟರ ಮಟ್ಟಿಗೆ ಭಯದ ವಾತಾವರಣ ನಿರ್ಮಿತವಾಗಿದ್ದಿತು. ಈ ತಮಿಳನನ್ನು ಕಂಡ ಮೇಲೆ ಅವರಿಗೆ ಎಷ್ಟರ ಮಟ್ಟಿಗೆ ಸಾಂತ್ವನ ದೊರಕಿತು. ಹಾಗೆಯೇ ಆ ತಂದೆ ತಾಯಿಯರಲ್ಲಿ ಎಷ್ಟರ ಮಟ್ಟಿಗೆ ಮನೋದ್ವೇಗ ಉಂಟಾಗಿರಬಹುದು ಎಂಬುದನ್ನು ಊಹಿಸುತ್ತಿದ್ದೆ. ಇವರುಗಳ ಮನದಲ್ಲಿ ಆಗಿರಬಹುದಾದ ಚಿಂತನೆ ಮತ್ತು ತಲ್ಲಣಗಳ ಬಗ್ಗೆ ಯಾರಾದರೂ ಊಹಿಸಿ ಬರೆಯುವಿರಾ? ನಾನು ಸದ್ಯದಲ್ಲೇ ಅದರ ಬಗ್ಗೆ ನನ್ನ ಚಿಂತನೆಯನ್ನು ಬರೆಯುವೆ.

ಎಲ್ಲಕ್ಕಿಂತ ಹೆಚ್ಚಾಗಿ ಆ ತಮಿಳರವನು ಬೆಳಗಿನಿಂದ ಸಂಜೆಯವರೆವಿಗೆ ಕೆಲಸ ಮಾಡಿ ಬಸವಳಿದು ಮನೆಗೆ ಹೊರಟವನು, ತನ್ನ ಪಾಡಿಗೆ ತಾನು ಮನೆಗೆ ಹೋಗದೇ ಚೆಲ್ಲಾಪಿಲ್ಲಿಯಾಗುತ್ತಿದ್ದ ಒಂದು ಕುಟುಂಬವನ್ನು ಒಗ್ಗೂಡಿಸಲು ಹೊರಟದ್ದು ನಿಜ್ಜಕ್ಕೂ ಮೆಚ್ಚುವಂತಹ ಕಾರ್ಯ. ಕೆಲವೊಮ್ಮೆ ಇಂತಹ ವ್ಯಕ್ತಿಗಳಲ್ಲಿ ಆ ಸಂದರ್ಭದಲ್ಲಿ ದೈವತ್ವ ಕಾಣಬಹುದಲ್ಲವೇ?

Rating
No votes yet