ಒಂದು ಸರಳ ಸುಖಕರ ಓದು-’ಗೋಡೆಯಲ್ಲಿ ಒಂದು ಕಿಟಕಿ ಇರುತ್ತಿತ್ತು ’
ಇದು ಒಂದು ಸಣ್ಣ ಕಾದಂಬರಿ . ಹಿಂದಿಯಿಂದ ಅನುವಾದವಾದದ್ದು . ಕಾದಂಬರಿ ತನ್ನ ಸರಳ ಕತೆ , ತಮಾಷೆಯ ವಾಕ್ಯಗಳು , ಕನಸಿನಂಥ ಒಂದು ಲೋಕದ ವರ್ಣನೆಯಿಂದ ನಮ್ಮ ನೆನಪಿನಲ್ಲುಳಿಯುತ್ತದೆ.
ಇಲ್ಲಿ ಕೆಳವರ್ಗದಿಂದ ಬಂದಿರುವ ಒಬ್ಬ ಕಾಲೇಜು ಲೆಕ್ಚರರ ಸಂಸಾರ ವಿಷಯ ಇದೆ. ಇಲ್ಲಿ ಯಾವದೇ ಖಳನಾಯಕನಿಲ್ಲ ; ಅಂಥ ಸಮಸ್ಯೆಯೂ ಇಲ್ಲ . ಈ ಲೆಕ್ಚರರು ಹೊಸದಾಗಿ ಮದುವೆ ಆಗಿ ಒಂದು ಸಣ್ಣ ಮನೆ ಮಾಡಿದ್ದಾನೆ. ಒಂದೇ ಕೋಣೆಯ ಮನೆಯ ಜತೆ ಉಪಯೋಗಕ್ಕೆ ಒಂದು ಸಂಡಾಸನ್ನೂ (ಕಕ್ಕಸು) ಬಾಡಿಗೆ ಹಿಡಿದಿದ್ದಾನೆ. ಆಗಾಗ ಊರಿನಿಂದ ತಂದೆ ತಾಯಿ ತಮ್ಮ ಬಂದು ಹೋಗುವರು. ಮನೆಯಲ್ಲಿ ಒಂದು ಸಣ್ಣ ಕಿಟಕಿ ಇದೆ. ಅಲ್ಲಿಂದ ಆಗಾಗ ಹೊರಜಿಗಿದು ಈ ಗಂಡಹೆಂಡತಿ ನದಿ,ಕೆರೆ,ಬಂಡೆ, ಕೋತಿಗಳು , ನವಿಲುಗಳು ,ಮರಗಳು , ಬೆಟ್ಟ , ಹೊಳೆ , ಕೆರೆ ಇರುವಂಥ ಒಂದು ಭಾವಗೀತಾತ್ಮಕ ಕನಸಿನಂತಹ ಲೋಕಕ್ಕೆ ಹೋಗುತ್ತಿರುತ್ತಾರೆ . ಅದರಲ್ಲಿ ಬಟ್ಟೆ ಒಗೆಯುವದು , ಸ್ನಾನ ಮಾಡುವದು , ಮಲಗುವದು ಅಷ್ಟೇ ಅಲ್ಲ ಪ್ರೇಮಿಸುವದೂ ಸಾಧ್ಯ ಆಗುತ್ತದೆ . ಅಲ್ಲಿ ಒಬ್ಬ ಚಹಾ ಕೊಡುವ ಮುದುಕಿಯೂ ಇದ್ದಾಳೆ , ಖಬರು(ಎಚ್ಚರ)ಗೆಟ್ಟು ಮಲಗಿದವರನ್ನು ಅವಳು ಎಬ್ಬಿಸುತ್ತಾಳೆ . ಹೊಸ ಮದುಮಗಳಿಗೆ ಕಿಮ್ಮತ್ತಿನ( ಬೆಲೆಬಾಳುವ) ಬಂಗಾರದ ಖಡೆ(ಬಳೆ)ಯನ್ನೂ ಕೊಡುತ್ತಾಳೆ. ಈ ಜಗತ್ತನ್ನು ಇತರರು ಪ್ರವೇಶಿಸಲು ಸಾಧ್ಯ ಇಲ್ಲ. ಮತ್ತೆ ಈ ಜಗತ್ತಿನ ಹೊರಗೆ , ದೈನಂದಿನ ಜೀವನದ ಸರಳ ಜಗತ್ತೂ ಇದೆ.
ಈ ಲೆಕ್ಚರನು ಸೈಕಲ್ಲು ಅಲ್ಲದೆ ಟೆಂಪೋ ಮೂಲಕ, ಅಷ್ಟೇ ಅಲ್ಲದೆ ಆಗಾಗ ಆನೆ ಮೇಲೆ ಕೂತು ಕಾಲೇಜಿಗೆ ಹೋಗುವನು !
ತಿಳಿ ಹಾಸ್ಯದ ಕಾವ್ಯಮಯ ಬರಹ ಇಲ್ಲಿದೆ . ಕನಸಿನ ಲೋಕ ಇಲ್ಲಿದೆ.
ಕೆಲವು ವಾಕ್ಯ ನೋಡಿ.
ಆನಿ ಮುಂದ ಹೋಗುತಿತ್ತು ಮತ್ತು ಹಿಂದ ಆನಿ ಜಾಗ ಇಲ್ಲವಾಗುತ್ತ ಹೋಗುತ್ತಿತ್ತು . ( ಇದು ಮೊದಲ ಸಾಲು)
ಕೋಣೆಯ ಒಳಗೆ ಹಣಿಕಿ ಹಾಕಿ ತಾನು ಕೋಣೆಯಲ್ಲಿ ಇಲ್ಲದಿರುವದನ್ನು ಖಾತರಿ ಮಾಡಿಕೊಂಡರು.
ನಾಯಿ ಬದಲು ಹುಲಿ ಸಾಕಬೇಕಂತ ವಿಚಾರ ಮಾಡೇನಿ . ಕಳ್ಳ ಬಂದಾಗ ಬೊಗಳುವ ಬದಲು ಅದು ಗರ್ಜಿಸುವದು.
ಆನಿ ಸಿಗಲಿಲ್ಲವಾ ? - ಹೆಂಡತಿ ಕೇಳಿದಳು , ರಿಕ್ಷಾ ಸಿಗಲಿಲ್ಲವಾ ಎಂದು ಕೇಳುವಂತೆ .
ಕಿಟಕಿಯಿಂದ ಆಕಾಶ ಕಾಣುತ್ತಿತ್ತು , ಹೀಗಾಗಿ ಕಿಟಕಿಯಿಂದ ಒಳಗೆ ಇಣುಕಿ ನೋಡುವ ಮಕ್ಕಳು ಆಕಾಶದಿಂದ ಇಣುಕುಹಾಕುವ ಚಿಕ್ಕಚಿಕ್ಕ ದೇವತೆಗಳಂತೆ ಕಾಣುತ್ತಿದ್ದರು.
ಮತ್ತೆ ಇಲ್ಲಿ ಕೆಲ ಪ್ರಸಂಗದಲ್ಲಿ ಮಾತಾಡುವವರು ವಾಚ್ಯವಾಗಿ ಆಡುವ ಮಾತೇ ಬೇರೆ , ಕೇಳುಗರು ಕೇಳಿಸಿಕೊಳ್ಳುವದೇ ಬೇರೆ .
ಇದನ್ನು ಬರೆದದ್ದು ವಿನೋದ್ ಕುಮಾರ್ ಶುಕ್ಲ ; ಒಳ್ಳೇ ಅನುವಾದ ತೇಜಸ್ವಿ ಕಟ್ಟಿಮನಿ ಅವರದು . ಇದು ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ಹಿಂದಿ ಕಾದಂಬರಿ. ಸಾಹಿತ್ಯ ಅಕಾಡೆಮಿ ಇದನ್ನು ಪ್ರಕಟಿಸಿದೆ.
Comments
ಉ: ಒಂದು ಸರಳ ಸುಖಕರ ಓದು-’ಗೋಡೆಯಲ್ಲಿ ಒಂದು ಕಿಟಕಿ ಇರುತ್ತಿತ್ತು ’