ಮೊನ್ನೆ ಏನಾಯ್ತೂ ಅಂತಂದ್ರೆ...
ನನಗೆ ಇಂಗ್ಲೀಷಿನಲ್ಲಿ ರೋಫ್ ಹಾಕಕ್ಕೇ ಬರಲ್ಲ ಗುರು. ಯಾವಾನಾದ್ರೂ ಸ್ವಲ್ಪ ಕಿರಿಕ್ ಮಾಡಿದ್ರೆ ಕನ್ನಡದಲ್ಲಾದ್ರೆ ಸಮಯ ಸಂದರ್ಭಕ್ಕೆ ತಕ್ಕ ಹಾಗೆ ಭಾಷೆಯ ಹರಿತವನ್ನು ಹೊಂದಿಸಿಕೊಂಡು ನನ್ನ ಮನಸ್ಸಿನಲ್ಲಿರುವುದನ್ನು ಇತರರಿಗೆ ಮನವರಿಕೆಯಾಗುವಂತೆ ಮಾತಾಡಬಲ್ಲೆ. ಆದರೆ ಇಂಗ್ಲೀಷಿನಲ್ಲಿ ಹಾಗಲ್ಲ.. ಒಂದೋ ಅಫೀಷಿಯಲ್ ಟೋನಿನಲ್ಲಿ ನಿಧಾನಕ್ಕೆ ಮಾತಾಡಬಲ್ಲೆ ಇಲ್ಲ ತಾರಾಮಾರ ಬೈಯ್ಯಬಲ್ಲೆ ಆಷ್ಟೇ ವಿನಹ ಮಧ್ಯದಲ್ಲಿ ಮಾತೇ ಬರುವುದಿಲ್ಲ.
ಮೊನ್ನೆ ಇದರಿಂದನೇ ಸಕತ್ ತೊಂದರೆಯಾಗಿ ಹೋಯ್ತು. ನಮ್ಮ ಬಾಸ್ ದೊಡ್ಡಮನಸ್ಸು ಮಾಡಿ ನನ್ನ ಸಂಬಳ ಜಾಸ್ತಿ ಮಾಡಿದ್ರು. ಆದರೆ ನಮ್ಮ ಡಿಪಾರ್ಟ್‍ಮೆಂಟಿನ ಅಕೌಂಟೆಂಟ್ ಸಂಬಳ ಜಾಸ್ತಿ ಮಾಡೋದರ ಬದಲು ಕೆಲಸದಿಂದ ತೆಗೆದೇ ಹಾಕೋದೆ ನನ್ನನ್ನು. ಅದೂ ನನಗೆ ಗೊತ್ತಾದದ್ದೇ ೨೦ ದಿನಗಳ ನಂತರ. ನಂಗಂತೂ ಉರಿದು ಹೋಯ್ತು. ಹೋಗಿ ಜಗಳ ಮಾಡೋ ಹಂಗಿಲ್ಲ.. ಜಗಳಗಂಟರು ಅಂತ ನಮ್ಮ ದೇಶದ ಮರ್ಯಾದೆನೇ ತೆಗೀತಾರೆ.
ಕರ್ನಾಟಕದಲ್ಲಿದ್ದಿದ್ದ್ರೆ, ನಿಧಾನಕ್ಕೆ 'ಏನ್ ಮೇಡಮ್, ಸಂಬಳ ಜಾಸ್ತಿ ಮಾಡಿ ಅಂತಂದ್ರೆ ಕೆಲಸದಿಂದನೇ ತೆಗೆದು ಹಾಕೋದ, ಇದರಿಂದ ಎಷ್ಟು ತೊಂದರೆ ಆಗಿದೆ ಗೊತ್ತಾ, ಮನೆ ಕಡೆ ದುಡ್ಡಿನ ಪ್ರಾಬ್ಲಮ್ ಆಗಿಬಿಟ್ಟಿದೆ. ಸ್ವಲ್ಪ ನೋಡಿಕೊಂಡು ಪೇಪರ್ ವರ್ಕ್ ಮಾಡೋದಲ್ವ, ನಿಮ್ಮ ಸಣ್ಣ ತಪ್ಪಿನಿಂದ ಎಂತಹ ಮುಲಾಜಿಗಿ ಸಿಕ್ಕಿಬಿಟ್ಟಿದೀನಿ.. ಏ, ಈಗ್‍ಲಾದ್ರೂ ಸ್ವಲ್ಪ ಕಾಳಜಿಯಿಂದ ನನ್ನ ತೊಂದರೆಯನ್ನ ನಿವಾರಿಸಿಕೊಡಿ' ಅಂತ ಅರ್ಧ ಬೈಗುಳ, ಅರ್ಧ ಸತ್ಯ ಹೇಳಿ ನನ್ನ ಮನಸ್ಸಿಗೂ ತೃಪ್ತಿಯಾಗುವಂತೆ, ಅವರಿಗೂ ಮುಟ್ಟುವಂತೆ ಹೇಳಬಹುದಾಗಿತ್ತು..ಅಥವ, ಭಾರತದ ಬೇರೆ ಯಾವ ಮೂಲೆಯಲ್ಲಿದ್ದಿದ್ದ್ರೂ ಹಿಂದಿಯಲ್ಲೋ ಅಥವ ದೇಸೀ ಇಂಗ್ಲೀಷಿನಲ್ಲೋ ಇದೇ ಅರ್ಥ ಬರುವಂತೆ ಹೇಳಬಹುದಾಗಿತ್ತು.
ಅಮೇರಿಕದಲ್ಲಿ ಇದೇ ತೊಂದರೆ ನೋಡಿ. ಅಲ್ಲಿಯವರಿಗೂ ಈ ತರಹ ಸಂಬಳ ಕಟ್ ಮಾಡಿಬಿಟ್ರೆ ನಮ್ಮಷ್ಟೇ ಸಿಟ್ಟು ಬರತ್ತೆ... ಆದರೆ ಅವರತರಹ ಸಂಭಾವಿತನಾಗಿ ಸ್ವಲ್ಪ ಕಠಿಣವಾಗಿ ತಕ್ಷಣಕ್ಕೆ ಬಯ್ಯಕ್ಕೆ ಬರಲೇ ಇಲ್ಲ. ಇನ್ನು ಮರ್ಯಾದೆ ಕಳಕೊಂಡು ಉಗಿದು ತೊಂದರೆಗೆ ಸಿಕ್ಕಿಹಾಕಿಕೊಳ್ಳುವುದಕ್ಕಿಂತ, ಹಾಗೆಯೇ ಫಾರ್ಮಲ್ ಆಗಿ ಮಾತಾಡಿ ನನ್ನ ತೊಂದರೆ ಹೇಳಿಕೊಂಡೆ. ಅಲ್ಲೇ ಪಕ್ಕದಲ್ಲಿದ್ದವರು, ಅಯ್ಯೋ ಪಾಪ, ಇಂತಹ ದೊಡ್ಡ ಮಿಸ್ಟೇಕ್ ಆಗಿದ್ರೂ ಪಾಪ, ಎಷ್ಟು ನಮ್ರನಾಗಿ ಮಾತಾಡ್ತಿದಾನೆ ಅಂತ ತಮಾಷೆ ಮಾಡಿದ್ರು. ಅದರಜ್ಜಿ, ನೀವು ನಮ್ಮ ದೇಶದಲ್ಲಿರಬೇಕಾಗಿತ್ತು,ಆಗ ತೋರಿಸ್ತಿದ್ದೆ ಅಂತ ಮನಸ್ಸಿನಲ್ಲೇ ಬೈಯ್ಕಂಡೆ. ನಾನು ಸೀರಿಯಸ್ಸಾಗಿಲ್ಲದಿರುವುದನ್ನು ನೋಡಿಕಂಡು ಆ ಯಮ್ಮ ನಾಳೆ ಬಾ ಅಂತಂದ್ಲು. ಆಗ ಮಾತ್ರ ತಡ್ಕಳಕ್ಕಾಗ್ಲಿಲ್ಲ. no no, you got to do it today, right now! ಅಂತ ದಬಾಯಿಸಿದೆ. ಆದ್ರೆ, ನಾನು ಹೇಳ್ಬೇಕು ಅನ್ಕಂಡಿದ್ದು.. "ಇದೇನ್ರಿ ಹಿಂಗೆ ಮಾತಾಡ್ತೀರ, ನೀವು ತಪ್ಪು ಮಾಡಿಕೊಂಡು ನನ್ನನ್ನ ಸತಾಯಿಸ್ತಾ ಇದೀರಲ್ಲ. ಮೊದ್ಲೆ ಸಕತ್ ತೊಂದರೆ ಇದೆ ನನಗೆ ಈ ಸೆಮಿಸ್ಟರ್ರು, ಇದೂ ಜೊತೆಗೆ ಸೇರಿಸಿದೀರಲ್ಲ. ಬೇಗ ಸರಿ ಮಾಡ್ರೀ" ಅಂತ.. ಬಾಯಿಂದ ಆಚೆ ಬಂದದ್ದು ಮೇಲಿನ ಇಂಗ್ಲೀಷ್ ವಾಕ್ಯವಷ್ಟೆ.
ಕೊನೆಗೆ ಎಲ್ಲಾ ಸರಿಹೋಯ್ತು. ಆದರೆ ನನಗೆ ಮಾತ್ರ ತೃಪ್ತಿಯಾಗಲಿಲ್ಲ. ಏನ್ ಕೇರ್‍ಲೆಸ್ ಆಗಿ ಕೆಲಸ ಮಾಡ್ತಾರೆ. ಅದನ್ನ ಅವರಿಗೆ ಹೇಗಾದ್ರೂ ಮಾಡಿ ಅಲ್ಲಿಯೇ ಮನದಟ್ಟಾಗುವಂತೆ ಹೇಳ್ಬೇಕಾಗಿತ್ತು. ಅದರಜ್ಜಿ ಇಂಗ್ಲೀಷಿನಲ್ಲಿ ನಾಲಗೆಯೇ ಹೊರಳಲಿಲ್ಲ.
ಒಟ್ಟಿನಲ್ಲಿ, ಮಾತಾಡಬೇಕಾದರೆ, ನನ್ನ ವ್ಯಕ್ತಿತ್ವವಂತೂ ಯಾವ ಭಾಷೆ ಮಾತಾಡ್ತಾ ಇದೀನಿ, ಅದರ ಮೇಲೆ ಹೋಗತ್ತೆ. ಮೈಸೂರಿನಲ್ಲಿದ್ರೆ, ವಸಿ ಆ ತರಹ, ಮಲೆನಾಡಿನಲ್ಲಿದ್ರೆ, ಆಚೆ ಕಡೆ ತರನೇ , ಇಲ್ಲಿ ಸಧ್ಯಕ್ಕೆ ಕ್ಯಾನ್ಸಾಸ್ ನಲ್ಲಿರೋ ತನಕ, a tinge of the midwest
Comments
ದಕ್ಷಿಣ ಕನ್ನಡದವರ ಕಷ್ಟ
In reply to ದಕ್ಷಿಣ ಕನ್ನಡದವರ ಕಷ್ಟ by Yamini
:)
In reply to :) by ಶ್ಯಾಮ ಕಶ್ಯಪ
ಇಂಗ್ಲೀಷಿನಲ್ಲಿ ಬೈಗುಳ
ಕನ್ನಡದಲ್ಲಿ ಬೈಯೋದು vs ಇಂಗ್ಲಿಷಿನಲ್ಲಿ ಬೈಯೋದು ;)
In reply to ಕನ್ನಡದಲ್ಲಿ ಬೈಯೋದು vs ಇಂಗ್ಲಿಷಿನಲ್ಲಿ ಬೈಯೋದು ;) by hpn
ಮಾತು
In reply to ಮಾತು by hpn
ಆಗ ಹೊಳೀಲಿಲ್ಲ್ವಲ್ಲ!
In reply to ಕನ್ನಡದಲ್ಲಿ ಬೈಯೋದು vs ಇಂಗ್ಲಿಷಿನಲ್ಲಿ ಬೈಯೋದು ;) by hpn
ಬೈಗುಳಗಳು ಬೇಕೆ?