ಡ್ರೆಸ್ ಕೋಡ್

ಡ್ರೆಸ್ ಕೋಡ್

ಕುರುಣೇಶನ ಡ್ರೆಸ್ ಕೋಡ್

ಕುರುಣೇಶಿ ನನ್ನ ಆಪ್ತಮಿತ್ರ. ಆದರೂ ಹಾಗೆಲ್ಲ ವಿಶೇಷ ಇಲ್ಲದೇ ನನ್ನಲ್ಲಿಗೆ ಬರುವವನಲ್ಲ. ಬರುವಾಗಮಾತ್ರ ಎರಡು ಕ್ವಾರ್ಟ್‌ರ್ ಬಾಟಲಿ ಹಾಗೂ ಆತನ ಹೆಂಡತಿ ನನಗಾಗಿ ಪ್ರೀತಿಯಿಂದ ಮಾಡಿಕೊಟ್ಟ ಕಡಲೇ ಹಿಟ್ಟಿನಲ್ಲಿ ಅದ್ದಿ ಕರಿದ ಸುಡು ಸುಡುವ ಶೇಗಾಬೀಜವನ್ನು ಜೊತೆಗೆ ತರುವುದು ವಾಡಿಕೆ. ಆತ ಕುಡುಕನಲ್ಲ. ಕುಡಿಯುವುದಕ್ಕಾಗಿ ನನ್ನಲ್ಲಿಗೆ ಬರುವುದಿಲ್ಲ. ಆದರೆ ತಲೆಗರಮ್ ಆದಾಗ ನನ್ನ ಮನೆಯ ಪ್ರಿಜ಼್‌ನಲ್ಲಿರುವ ತಣ್ಣನೆಯ ಆಯ್ಸ್‌ಕ್ಯೂಬ್ ಅವಶ್ಯಕ ಶಾಮಕ.
ಆತ ಬಂದ ತತ್‌ಕ್ಷಣ ಇಂದಿನ ಬರ್ನಿಂಗ ಪೊಂಯ್ಟ್ ಯಾವುದೆಂದು ನಾನು ಕೇಳುವುದಿಲ್ಲ. ಕ್ವಾರ್ಟ್‌ರ್ ಅರ್ಧವಾದಮೇಲೆ ಒಳಗಿನ ವಿಷಯ ತನ್ನಿಂದ ತಾನೇ ಮೇಲೇಳುತ್ತದೆ. ಅದುವರೆಗೂ ನಾನು ಶೇಗಾಬೀಜವನ್ನು ಒಂದೊಂದೇ ಆಗಿ ಆಗಿಯುತ್ತ ಕೂಡ್ರುತ್ತೇನೆ.
ಆದದ್ದಿಷ್ಟೆ, ಸೋಡಾ ಸೋಮಣ್ಣ ಶಾಲೆ ಬದಿಯಲ್ಲಿ ಆಯ್ಸ್‌ಕ್ರೀಮ್ ಮಾರುತ್ತಿದ್ದ. ಕುರುಣ್ಯನ್ನ ನೋಡಿ,ಮುದಿನ ತಿಂಗಳಿಂದ ಆಚೇ ಬದಿಯಲ್ಲಿ ನಿಂತು ನೀನೂ ಆಯ್ಸ್‌ಕ್ರೀಮ್ ಮಾರಬೇಕಾಗುತ್ತದೆ-ಎಂದ. ಡ್ರೆಸ್ ಕೋಡ್ ಬರುತ್ತಾ ಇದೆ ಎಂದ, ನೀ ಈಗ ಊರಿನ ಹೆಂಗಳೆಯರಿಗೆ ಹೊಲಿಯುತ್ತೀಯಲ್ಲಾ ‘ಒಳಗಿದ್ದುದೆಲ್ಲಾ ಎದ್ದು ಕಾಣುವಹಾಗೆ,’ ಇನ್ನು ಮುಂದೆ ಅದು ನಡೆಯುವದಿಲ್ಲ,ಯಾರೂ ಅಂತಹವನ್ನು ಹೊಲಿಸಿಕೊಳ್ಳಲು ನಿನ್ನಲ್ಲಿಗೆ ಬರುವುದಿಲ್ಲ, ನಿನಗಾಗಿ ಪಕ್ಕದ ಜಾಗ ಸ್ವಚ್ಚಮಾಡಿ ಇಡುತ್ತೇನೆ ಎಂದ.
ಸೋಡಾ ಸೋಮಣ್ಣ ಮೋದಲು ಉತ್ತಮ ಜೀವನ ನಡೆಸುತ್ತಿದ್ದ. ಒಂದು ಒಳ್ಳೆಯ ಸೋಡಾ ಅಂಗಡಿ ನಡೆಸುತ್ತಿದ್ದ. ಲಿಂಬೂ ಸೋಡಾ. ಜೀರಿಗೆ ಸೋಡಾಗಳನ್ನು ಜನ ಇಷ್ಟ ಪಟ್ಟು ಕುಡಿಯುತ್ತಿದ್ದರು. ಮಾರಾಮಾರಿ (ಕೊಕ್‌ಟೇಲ್) ಯಲ್ಲಿ ನೀವುಕೇಳಿದ ಕೊಂಬೆನೇಶನ್‌ನಲ್ಲಿ ನಿಮಗೆ ರುಚಿಯಾದ ಪಾನೀಯ ತಯಾರಿಸಿ ಕೊಡುತ್ತಿದ್ದ. ಆದರೆ ಪೆಪ್‌ಸಿ ಕೋಲಾಗಳ ಹಾವಳಿಯಿಂದಾಗಿ ಇವನ ಗಿರಾಕಿಗಳು ಕಡಿಮೆಯಾಗಿ, ಆದಾಯಕುಗ್ಗಿ, ಜೀವನ ನಿರ್ವಹಣೆಗಾಗಿ ಶಾಲೆಯ ಪಕ್ಕದಲ್ಲಿ ಎಂಟಾಣೆಗೆ ಒಂದರಂತೆ ಪೆಪ್ಸಿ ಎಂದು ಕರೆಯುವ ಆಯ್ಸ್‌ಕೆಂಡಿ ಮಾರುತ್ತಿದ್ದ.
ಕುರುಣೇಶ ಈ ಊರಿನ್ ಇಂಟರ್ನಾಶನಲ್ ಲೆವಲ್ಲಿನ ಲೇಡೀಸ್ ಟೇಲರ್. ಮಹಿಳಾ ಮಣಿಗಳಿಗೆ, ಅದರಲ್ಲೂ ಕಾಲೇಜ್ ತರುಣಿಯರಿಗೆ, ಅವರು ಹೇಳಿದ ಹೀರೋಯಿನ್ ತೊಟ್ಟ ಬಟ್ಟೆಗಿಂತ ಇನ್ನೂ ಸ್ವಲ್ಪ ಟೈಟ್ ಹೊಲಿದು ಅವರ ಪ್ರೀತಿಗೆ ಮೆಚ್ಚುಗೆಗೆ ಪಾತ್ರನಾಗಿದ್ದ. ಹೀಗಾಗಿ ಅಲ್ಪಸ್ವಲ್ಪ ಕಾಸುಮಾಡಿ ಒಂದು ಮನೆ ಅಂಬೊದನ್ನು ಕಟ್ಟಿಕೊಂಡ ಮೇಲೆ, ಊರವರ ಕಣ್ಣಿಗೂ ಮೆಚ್ಚುಗೆಯಾದವನಾದ.
ಕುರುಣೇಶ ಅಂದು ಗಡಬಡಿಯಲ್ಲಿದ್ದ. ಸೋಡಾ ಸುಬ್ಬಣ್ಣನ ಮಾತುಗಳು ಕಿವಿಯವರೆಗೂ ಹೋದರೂ ಅದು ಆತನ ಮಿದುಳನ್ನು ಮುಟ್ಟಿರಲಿಲ್ಲ. ಡ್ರೆಸ್ ಕೋಡ್ ಬರುತ್ತಾ ಇದೆ ಎಂಬುದು ಮಾತ್ರ ಅವನ ಮಿದುಳನ್ನು ಹೊಕ್ಕಿತ್ತು.
ಕುರುಣೇಶ ಬುದ್ದಿವಂತ. ಹೊಲಿಗೆ ವಿಷಯದಲ್ಲಿ ಯಾವ ಹೊಸ ನಮೂನೆ ಬೇಕಾದರೂ ತತ್‌ಕ್ಷಣಕ್ಕೆ ಅಳವಡಿಸಿಕೊಂಡು ಊರ ಸಿಂಪಿಗರಿಗಿಂತ ಮಂಚೂಣಿಯಲ್ಲಿ ಇರುವಾತ.
ಡ್ರೆಸ್‌ಕೋಡ್ ಆತನನ್ನು ಕೊರೆಯತೊಡಗಿತು. ಕೋಡುಗಳು ಯಾವರೀತಿಯಲ್ಲಿ ಇರುತ್ತದೆ ಎಂದು ಆಳವಾಗಿ ಅಭ್ಯ಼ಸಿಸ ತೋಡಗಿದ, ಎಲ್ ಕೆ ಜಿ ಮಕ್ಕಳ ಚಿತ್ರದ ಪುಸ್ಥಕವನ್ನು ಅಭ್ಯಸಿಸಿದ. ಹಲವಾರು ಪ್ರಾಣಿಗಳ ಕೋಡನ್ನು ನೋಡಿದರೂ ಚಿತ್ರದಲ್ಲಿ ಅವುಗಳ ಅಳತೆ ಎತ್ತರಗಳು ಸ್ಪಷ್ಟವಾಗಲಿಲ್ಲ. ಊರ ದನದ ಸಂತೆಗೂ ಹೋಗಿಬಂದ. ಕಟುಕರ ಕೇರಿಗೆ ಹೋಗಿ ಕೆಲವು ಕೋಡುಗಳನ್ನು ಕೇಳಿ ತೆಗೆದುಕೊಂಡೂ ಬಂದ.
ಮನೆಯಲ್ಲಾ ಕೆಟ್ಟ ವಾಸನೆ ಬೀರತೊಡಗಿತು. ಮನೆಯವರು ಸಿಟ್ಟಾದರು. ಅಪ್ಪನ ತೊಳಲಾಟ ಕಂಡು ಹಿಡಿದ ಇಂಗ್ಲೀಶ್ ಮೀಡಿಯಂನ ಮಗಳು ಅಪ್ಪನಿಗೆ ವಿವರಿಸಿದಳು. “ಡ್ರೆಸ್ ಕೋಡ್ ಅಂದರೆ ವಸ್ತೃ ಸಂಹಿತೆ”ಅಂದಳು. ಸಂಹಿತೆ ಎಲ್ಲಾ ಬ್ರಾಹ್ಮಣರ ಮನೆಯಲ್ಲಿ ಮಾತ.-ಇಡೀ ಊರನ್ನು ಬ್ರಾಹ್ಮಣರನ್ನಾಗಿ ಮಾಡತಾರಂತೇನು? ಕುರುಣ ಗುರುಗುಟ್ಟಿದ. ಮಡಿ ಮೈಲಿಗೆ ಮುಟ್ಟು ಚಟ್ಟು ಇತ್ಯಾದಿ ಕಂಡರೆ ಅವನಿಗೆ ಆಗುವುದಿಲ್ಲ.
ಮಗಳು ಅಪ್ಪನಿಗೆ ವಿವರಿಸಿದಳು. ‘ ಈಗನೋಡು ನಾನು ಶಾಲೆಗೆ ಹೋಗುವಾಗ ಏನನ್ನು ತೊಟ್ಟಿಕೊಂಡು ಹೋಗುತ್ತೆನೇ? ನಮ್ಮ ಶಾಲೆ ಯೂನಿಪಾರಂ. ಶನಿವಾರ ಡ್ರಿಲ್ ಕ್ಲಾಸ್ ಇರುತ್ತದೆ, ಅಂದು ಬಿಳೇ ಡ್ರೆಸ್. ಹಾಗೆ ಪ್ರತಿಯೊಂದು ಸಮಯಕ್ಕೂ, ಪ್ರತಿಯೊಂದು ಸಂಸ್ಥೆಯವರೂ ಇದು ಬೇಕು ಇದು ಬೇಡ ಎಂದು ಕಡ್ಡಾಯ ಮಾಡಿರುತ್ತಾರೆ. ಅದನ್ನು ಪಾಲಿಸದವರನ್ನು ಒಳಗೆ ಬಿಟ್ಟುಕೊಳ್ಳುವುದಿಲ್ಲ. ಇನ್ನು ಮುಂದೆ ಕೆಲವು ದೇವಸ್ಥಾನಗಳಲ್ಲಿ ಈ ಡ್ರೆಸ್ ಕೋಡ್ ತರುವವರಿದ್ದಾರೆ.
ಅಡಿಗೇ ಮನೆಯಿಂದ ವಗ್ಗರಣೆ ಸದ್ದಿನ ಜೊತೆಗೆ ಇನ್ನೊಂದು ಅಷರೀರ ವಾಣಿಯೂ ಕೇಳಿಬಂದಿತು.- ನೀವು ಕುಂಭಿನಿ ನಿತಂಬಿನಿ ಪಯೋಧರೆ ಮಂದೋದರಿ ಸಿಂಹಕಟಿ ಎಂದೆಲ್ಲಾ ಹೆಸರಿಸುತ್ತಿದ್ದರೆಲ್ಲಾ, ಇನ್ನುಮುಂದೆ ದೇವಸ್ಥಾನದಲ್ಲಿ ಆ ಭಾಗ್ಯ ನಿಮಗೆ ಇಲ್ಲಾ.ಗುಡ್ಡಿಗಳ ಮಿಡ್ಡಿ, ಚಡ್ಡಿ, ಟೋಪ್, ಬಾಟಮ್ ಅಳತೆ ಮಾಡುತ್ತ ಅವರ ಆಳ ಅಗಲಗಳನ್ನು ಅಳೆಯುವುದಿನ್ನು ಕೈದ್. ಏನಿದ್ದರೂ ನನ್ನ ಹಾಗೆ ಇನ್ನುಮುಂದೆ ಎಲ್ಲಾ ಹೆಂಗಸರೂ ಸೀರೆಯನ್ನು ಮಾತ್ರ ಸುತ್ತಿಕೊಳ್ಳಬೇಕು. ನಿಮ್ಮ ರಸಿಕತೆಗೆ ತಿಲಾಜಲಿ, ಎಂದು ಮೂದಲಿಸಿದಳು.
ಡಾಕಿನಿ ಷಾಕಿನಿಯರು ಜೀನ್ಸ್ ಹೊಲಿಸಿದರೆ ಮಾತ್ರ ನನಗೆ ಛಾನ್ಸ್. ಅದೇ ನನ್ನ ಆದಾಯದ ಮೂಲ. ಮಗಳನ್ನು ಡಾಕ್ಟರ್ ಓದಿಸಬೇಕೆಂದಿದ್ದೇನೆ. ಈಗ ನನ್ನ ಆದಾಯಕ್ಕೆ ಕಲ್ಲು ಬಿದ್ದರೆ ನಾನೆಲ್ಲಿಗೆ ಹೋಗಲಿ? ಅವಳಿಗೆ ಟಿಸಿಎಚ್ ಮಾಡಿಸುವುದೂ ಕಷ್ಟವಾಗುತ್ತದೆ-ಹಲುಬಿದ.
ಸಾಧಾರಣವಾಗಿ ಆತನ ಮಾತಿಗೆ ನಾನು ಪ್ರತಿಕ್ರಿಯಿಸುವುದಿಲ್ಲ. ಏನಿದ್ದರೂ ‘ಹೂಂ’ ಅನ್ನುವುದು ಮಾತ್ರ ನನ್ನ ಕಾಯಕ. (ಮೊದಲು ನಾನು ಯಾವುದಕ್ಕೂ ‘ಹೂಂ’ ಅನ್ನೋಮಗಾ ಆಗಿರಲಿಲ್ಲ. ಹೆಂಡತಿ ಬಂದಮೇಲೆ ಊಹೂಂ ಅನ್ನೋ ಪದವೇ ಮರೆತು ಹೋಗಿವೆ.)

“ಗುರುವಾಯೂರಿಗೆ ಹೋದಾಗ ಏನಾಯಿತು ನೆನೆಸಿಕೋ” ನಾನೆಂದೆ.
ಇಬ್ಬರೂ ಪ್ಲಾಷ್‌ಬ್ಯಾಕ್‌ಗೆ ಹೋದೆವು. - ನಮ್ಮ ದಕ್ಷಿಣಭಾರತ ಪ್ರವಾಸದಲ್ಲಿ ನಾವು ಗುರುವಾಯೂರಿಗೆ ತಲುಪಿದಾಗ ರಾತ್ರಿಯಾಗಿತ್ತು. ಅಂತೂ ಇಂತೂ ಒಂದು ಜಾಗಾ ಸಂಪಾದಿಸಿ ದಿಂಬಿಗೆ ತಲೆಕೊಟ್ಟೆದ್ದವಷ್ಟೇ, ಅಷ್ಠರಲ್ಲಿ ಯಾರೋ ಪುಣ್ಯಾತ್ಮ ಒಂದು ಮಾಹಿತಿ ಹಾರಿಬಿಟ್ಟ. ಶ್ರೀ ಕೄಷ್ಣನ ದರ್ಷನಕ್ಕೆ ದೇವಸ್ಥಾನದ ಒಳಗೆ ಹೋಗಲು ಅಂಗಿ ಬಿಚ್ಚಬೇಕಂತೆ. ಅದೇನು ನನಗೆ ವಿಷೇಷ ಎನ್ನಿಸಲಿಲ್ಲ. ಆದರೆ ಮಾಹಿತಿ ನಂ.-೨ ತಲೆ ಹಾಳು ಮಾಡಿತು. ಬಿಳೇ ಲುಂಗಿ ಉಟ್ಟವರಿಗೆ ಮಾತ್ರ ಒಳಗೆ ಪ್ರವೇಶ. ಅದಿಲ್ಲವಾದರೆ ಇಂದಿರಾ ಗಾಂಧಿ, ಸರ್ವಪಲ್ಲಿ ರಾಧಾಕೃಷ್ಣರಿಗಾದ ಗತಿಯೇ ನಮಗೂ ಬರುತ್ತದೆ. ಕನಕದಾಸರ ಹಾಗೆ ಬಾಗಿಲಿಗೇ ಕೈಮುಗಿಯಬೇಕು ಮತ್ತು ಹಾಗೆಯೇ ಹಿಂದಿರುಗಬೇಕು. ‘ಬೆಳಗಿನ ಜಾವ ೪ ಘಂಟೆಯ ಒಳಗೆ ಕ್ಯೂದಲ್ಲಿ ನಿಂತವರಿಗೆ ದರ್ಶನ, ತಡಮಾಡಿದರೆ ಇನ್ನೊಂದು ದಿನವೂ ಇಲ್ಲಿಯೇ ಇರಬೇಕಾದ ಪ್ರಮೇಯ ಬರುತ್ತದೆ’ ಎಂದು ನಮ್ಮ ಸಾರಥಿ ಹೆದರಿಸಿದ್ದ.
ನಮ್ಮ ಹತ್ತಿರ ಲುಂಗಿ ಇದ್ದಿತ್ತು. ಆದರೆ ಅದು ಬಣ್ಣದ್ದಾಗಿತ್ತು. ಈ ಸರಿರಾತ್ರಿ ಬಿಳಿ ಲುಂಗಿಯನ್ನು ಹೊಂದಿಸುವುದು ಹೇಗೆಂದು ಕಂಗಾಲಾದ ನನಗೆ ನಿದ್ರೆಯೇ ಹಾರಿ ಹೋಯಿತಿ.
ಆದರೆ ಶ್ರೀ ಕೃಷ್ಣ ಪರಮಾತ್ಮ ಪರಮದಯಾಳು. ಅಡಿಗಡಿಗೆ ಆಹಾರ ಇತ್ತು, ತಲ್ಲಣಿಸದಿರು ತಾಳು ಮನವೆ ಎಂದವ. ಮಾಮೇಕಂ ಶರಂಣ ವೃಜ ಎಂದವ. ಯೋಗಕ್ಷೇಮಂ ವಹಾಮ್ಯಹಂ ಎಂದು ಆಶ್ವಾಸನೆ ನೀಡಿದವ. ನಾವು ಎದ್ದು ಸ್ನಾನಮುಗಿಸಿ ದೇವಸ್ಥಾನಕ್ಕೆ ಕತ್ತಲಲ್ಲೇ ಹೋಗುವುದರ ಒಳಗೆ ದೇವಸ್ಥಾನದ ಸುತ್ತಲೂ ಕನಿಷ್ಟ ಐವತ್ತು ಜವಳಿ ಅಂಗಡಿಯನ್ನು ತೆರೆದಿಟ್ಟಿದ್ದ. ಎಲ್ಲಾ ಅಂಗಡಿಗಳಲ್ಲೂ ಬಿಳೇ ಲುಂಗಿಯುಂದ ತುಂಬಿದ್ದ.ಝಗ ಝಗಿಸುವದೀಪ ಜೊತೆಗೆ ಕೃಷ್ಣನ ದರ್ಶನ ಭಾಗ್ಯ ಪಡೆಯದ ಮಹಾಭಕ್ತ ಜೇಸೂದಾಸರ ಕೃಷ್ಣ ಭಕ್ತಿಯ ಹಾಡು ಪತಿಯೊಂದು ಅಂಗಡಿಯಲ್ಲೂ ನಮ್ಮನ್ನು ಕೂಗಿ ಕರೆಯುತ್ತಿತ್ತು. ಪ್ರತಿಯೊಬ್ಬರೂ ಒಂದೊಂದು ಬಿಳೇ ಲುಂಗಿ ಖರೀದಿಸಿ ಸರ್ವಪಲ್ಲಿರಾಧಾಕೃಷ್ಣರ ಲೀಸ್ಟಿನಿಂದ ಹೊರಗುಳಿದೆವು.
ಪ್ಲಾಷ್‌ಬ್ಯಾಕ್‌ನಿಂದ ಹೊರಬಂದ ಮೇಲೆ ಇನ್ನೊಂದು ಲೇಟೇಸ್ಟ್ ಸುದ್ದಿಯನ್ನೂ ಕುರುಣೇಶನಿಗೆ ನಾನು ಹೇಳಿದೆ;- ನಾವು ಹೋದಾಗ ಗಂಡಸರಿಗೆ ಮಾತ್ರ ಈ ಕೋಡು ಇದ್ದಿತ್ತು. ಈಗ ಹೆಂಗಸರಿಗೂ ಕೋಡು ಮೂಡಿಸಿದ್ದಾರೆ. ಚೂಡಿದಾರ ತೊಟ್ಟು ಬಂದ ಮಹಿಳೆಗೆ ದೇವರ ದರ್ಶನದ ಭ್ಯಾಗ್ಯವನ್ನೇನೋ ಕರುಣಾಭಾವದಿಂದ ನೀಡುತ್ತಾರೆ. ಆದರೆ ಅವರಿಗೆ ಆರತಿ ತೀರ್ಥವನ್ನು ನೀಡಬಾರದೆಂದು ನಿರ್ಧರಿಸಿದ್ದಾರೆ.
ನೀನು ನೋಡಿರಬೇಕಲ್ಲ ದೇವಸ್ಥಾನಕ್ಕೆ ಬಂದ ಮಲಯಾಳಿ ಹೆಂಗಸರು ಒಂದು ವಿಶಿಷ್ಠ ದಡಿಯ ಬಿಳೇ ಸೀರೆಗಳನ್ನು ಉಟ್ಟು ಕೊಳ್ಳುವುದನ್ನು. ಬಹುಷಃ ಈಗ ಅಂತಃ ಸೀರೆ ಅಂಗಡಿಗಳೂ ಹೊಸದಾಗಿ ಹುಟಿಕೊಂಡಿರಬೇಕು.
ಕುರುಣೇಶ ಇಷ್ಟು ಹೊತ್ತು ಶಸ್ತ್ರ ತ್ಯಜಿಸಿ ವಿಶಾದ ಯೋಗಕ್ಕೆ ಹೋದ ಅರ್ಜುನನಂತಿದ್ದ. ನನ್ನ ಮಾತು ಮುಗಿಯುತ್ತಿದ್ದಂತೇ ಎರಡನೆಯ ಬಾಟಲಿಯ ಕೊನೆಗುಟುಕನ್ನೂ ಬಾಯೊಳಗೆ ಸುರಿದುಕೊಂಡ. ಆತ ಕೃಷ್ಣನ ದಿವ್ಯದರ್ಶನದನಂತರದ ಅರ್ಜುನನಾದ. ಉದ್ದಂಡ ನಮಸ್ಕಾರ ಹಾಕಿ ರಕ್ಷಮಾಂ ಪಾಹಿಮಾಂ ಎಂದ. ಬಿಡೆನು ನಿಮ್ಮ ಪಾದ ಎಂದ.
‘ಗುರುವೇ ನಾಳೆನೇ ಒಂದು ಪ್ರೆಸ್ ಸ್ಟೇಟ್‌ಮೆಂಟ್ ಕೊಟ್ಟುಬಿಡಿ. ನಮ್ಮೂರ ದೇವಸ್ಥಾನದಲ್ಲೂ ಕಣ್ಣಿಗೆ ಕುಕ್ಕುವ ವಸ್ತ್ರಗಳನ್ನು ತೊಟ್ಟುಬರುವವರು ಹೆಚ್ಚಾಗುತ್ತಿದ್ದಾರೆ. ಇದು ವಿದೇಶಿಸಂಸ್ಕೃತಿ. ಗ್ಲೋಬಲೈಸೇಶನ್ ಜಾಗತೀಕರಣದ ದುಷ್ಪರಿಣಾಮ ಸಂಸ್ಕೃತಿಗೆ ಅಪಾಯ. ಕೂಡಲೇ ಡ್ರೆಸ್ ಕೋಡ ಜಾರಿಗೆಬರಬೇಕು.ಇಲ್ಲವಾದರೆ ಪರಿಣಾಮವನ್ನು ಎದುರಿಸಬೇಕು.’ ಜೊತೆಗೆ ಇನ್ನೂ ಕೆಲವು ಮಾತು ಸೇರಿಸಿದ- ‘ಹಾಗೆಯೆ ನನಗೆ ಒಂದಿಪ್ಪತ್ತು ಸಾವಿರಾ ಸಾಲಾಕೊಡಿ, ಊರ ದೇವಸ್ಥಾನದ ಬದಿಯಲ್ಲಿ ನಾನೂ ಒಂದು ಸೀರೆ ಅಂಗಡಿ ಇಡುತ್ತೇನೆ. ಅಲ್ಲಿ ಸೀರೆಗಳ ಮಾರಾಟವಿಲ್ಲ. ಸೀರೇ ಖರೀದಿ ಎಂದರೆ ಗಂಡಂದಿರು ದೇವಸ್ಥಾನಕ್ಕೆ ಹೆಂಡತಿಯನ್ನು ಕರೆದುಕೊಂಡು ಬರಲು ಹೆದರುತ್ತಾರೆ. ಸೀರೆಗಳನ್ನು ಬಾಡಿಗೆಗೆ ಮಾತ್ರ ಕೊಡುತ್ತೇನೆ. ಬಾಡಿಗೆ ತಾಸಿಗೆ ಕೇವಲ ಹತ್ತು ರೂಪಾಯಿ. ಸೀರೆ ಉಡಲು ಬರದಿದ್ದ ಪ್ರಮಿಳೆಯರಿಗೆ ನಮ್ಮ ಮುದುಕಿಯೇ ಸೀರೆ ಸುತ್ತಿಕೊಡುತ್ತಾಳೆ. ಅದಕ್ಕೆ ಕೇವಲ ಐದು ರೂಪಾಯಿ ಎಕ್ಸ್‌ಟ್ರಾ. ಮಗಳಿಗೆ ಮೆರಿಟ್ ಸೀಟ್ ಸಿಗದಿದ್ದರೆ ಪೇಮೆಂಟ್ ಸೀಟ್ ಕೊಡಿಸಲು ಅನುಕೂಲವಾಗುತ್ತದೆ.’ಗೋಗರೆದ.
ನಾನು ಒಂದು ತೊಟ್ಟೂ ಸೆರೆ ಕುಡಿಯುವವನಲ್ಲ. ಆದರೂ ಕುರುಣ್ಯ ನನ್ನ ನಿಷೆ ಏರಿಸಿದ. ಹೊಸ ಅಂಗಡಿ ಉದ್ಘಾಟನೆ ನನ್ನಿಂದಲೇ ಮಾಡಿಸುವೆ ಎಂದ. ಜೊತೆಗೆ ಟಿ. ವಿ. ಹಾಗೂ ಪತ್ರಿಕಾವರದಿಗಾರರನ್ನೂ ಕರೆಸುವುದಾಗಿ ಹೇಳಿದ ಮೇಲೆ ನನ್ನ ತಲೆ ಗಿರಿ ಗಿರಿ ಗಿರಿ ತಿರುಗ ತೊಡಗಿತು.----

Rating
No votes yet