ನೀವು ಓದಿದ ಪುಸ್ತಕವನ್ನು ಇತರರಿಂದ ಓದಿಸಿ!

ನೀವು ಓದಿದ ಪುಸ್ತಕವನ್ನು ಇತರರಿಂದ ಓದಿಸಿ!

ಬರಹ

(ಇ-ಲೋಕ-54)(25/12/2007) 

ಉದಯವಾಣಿ
 ನೀವು ಓದಿದ ಪುಸ್ತಕ ಮೆಚ್ಚಿಗೆಯಾಯಿತೇ?ಇತರರೂ ಅದನ್ನೋದಲಿ ಎಂದು ನಿಮಗನಿಸುತ್ತದೆಯೇ?ಆ ಪುಸ್ತಕವನ್ನು ಎಲ್ಲಾದರೂ ಬಚ್ಚಿಡಿ.ನಂತರ BookCrossing.com ಅಂತರ್ಜಾಲ ತಾಣದಲ್ಲಿ ಇದನ್ನು ಪ್ರಕಟಿಸಿ. ಈ ತಾಣದ ಸದಸ್ಯರು ನಿಮ್ಮ ಪುಸ್ತಕವನ್ನು ಹುಡುಕಿ ಓದಬಹುದು.ನಂತರ ಅವರೂ ಪುಸ್ತಕವನ್ನು ಮತ್ತೆಲ್ಲಾದರೂ ಬಚ್ಚಿಟ್ಟು,ಅದನ್ನು ಮತ್ತೆ ತಾಣದಲ್ಲಿ ಪ್ರಕಟಿಸಬಹುದು.ಇದು ಮುಂದುವರಿದು ಹೆಚ್ಚೆಚ್ಚು ಜನರು ನಿಮ್ಮ ಪುಸ್ತಕವನ್ನು ಓದುವಂತಾಗಬಹುದು.ಕೆಲವೊಮ್ಮೆ ತಿಂಗಳುಗಟ್ಟಲೆ ನಿಮ್ಮ ಪುಸ್ತಕವನ್ನು ಕೇಳುವವರೇ ಇಲ್ಲದೆ,ನೀವಿಟ್ಟಲ್ಲೇ ಕೊಳೆಯಲೂ ಬಹುದು.ನೀವೂ ಇತರರು ಬಿಟ್ಟ ಪುಸ್ತಕವನ್ನು ಹುಡುಕಿ ಓದಬಹುದು. ಈ ತೆರನ ಪುಕ್ಕಟೆ ಗ್ರಂಥಾಲಯ ವ್ಯವಸ್ಥೆಯನ್ನು ಸ್ಥಾಪಿಸುವುದು ಬುಕ್‍ಕ್ರಾಸಿಂಗ್ ತಾಣದ ಅಭಿಲಾಷೆ.ಬೆಂಗಳೂರಿನ ಇಪ್ಪತ್ತಕ್ಕೂ ಅಧಿಕ ಪುಸ್ತಕಗಳ ಬಗ್ಗೆ ತಾಣದಲ್ಲಿ ಸೂಚನೆಗಳಿವೆ.
 ನಮ್ಮ ಮೆಚ್ಚಿನ ಪುಸ್ತಕಗಳ ಬಗ್ಗೆ ನಮ್ಮ ಅನಿಸಿಕೆಗಳನ್ನು ಬರೆದು,ಇತರರ ಜತೆಗೆ ಹಂಚಿಕೊಳ್ಳಲು ಅನುವು ನೀಡುವ ಕೆಲವು ತಾಣಗಳೂ ಅಂತರ್ಜಾಲದಲ್ಲಿವೆ.http://www.shelfari.com ಅಂತಹ ಒಂದು ತಾಣ.http://hook2book.com ಕೂಡಾ ಇಂತಹದ್ದೇ ಅವಕಾಶ ಒದಗಿಸುತ್ತದೆ.ಪುಸ್ತಕಗಳ ವಿಮರ್ಶೆ,ಸಂವಾದಕ್ಕೆ ಅವಕಾಶ ಸಿಗುತ್ತದೆ.ಪುಸ್ತಕಪ್ರಿಯರಿಗೆ ಮೆಚ್ಚಿಗೆಯಾಗಬಲ್ಲ ತಾಣಗಳಿವು.
ಪ್ರಥಮ ಖಾಸಗಿ "ಹಸಿರು" ಕಾಲೇಜು
 ಯಾವುದೇ ಕಾಲೇಜು ತನ್ನ ಚಟುವಟಿಕೆಯಿಂದ ಹೊರಸೂಸುವ ಇಂಗಾಲದ ಅನಿಲಗಳ ಪ್ರಮಾಣಕ್ಕೆ ಸರಿಹೊಂದುವ ಪ್ರಮಾಣದ ಅನಿಲಗಳ ಬಿಡುಗಡೆಯಾಗುವುದನ್ನು ತಪ್ಪಿಸಿದರೆ ಅದು "ಇಂಗಾಲ ಜಡ" ಬಿರುದು ಗಳಿಸುತ್ತದೆ.ಅದರರ್ಥ ಕಾಲೇಜಿನ ಚಟುವಟಿಕೆಗಳಿಂದ ಜಾಗತಿಕ ತಾಪಮಾನ ಏರುವ ಭಯವಿಲ್ಲ ಎಂದಾಗಿದೆ. ಅಮೆರಿಕಾದ ಖಾಸಗಿ ಕಾಲೇಜುಗಳ ಪೈಕಿ ಅಟ್ಲಾಂಟಿಕ್ ಕಾಲೇಜು ಈ ಗೌರವ ಪಡೆದ ಮೊದಲ ಕಾಲೇಜು.
 ಮಣಿಪಾಲ ವಿಶ್ವವಿದ್ಯಾಲಯ ತನ್ನ ವಿದ್ಯಾರ್ಥಿಗಳು ಸೈಕಲ್ ಬಳಸುವಂತೆ ಪ್ರಚೋದಿಸಿ ದೇಶಕ್ಕೇ ಮಾದರಿಯಾಗಿರುವುದು ನೆನಪಿಗೆ ಬಂತೇ?
ಇಂತಹ ಮೂಢನಂಬಿಕೆಗಳು ನಿಮಗಿವೆಯೇ?
 ಕಡಿಮೆ ಬೆಳಕಿನಲ್ಲಿ ಓದುವುದು ಕಣ್ಣಿಗೆ ಹಾನಿಕರ ಎನ್ನುವುದು ಹೆಚ್ಚಿನವರ ನಂಬಿಕೆ. ಆದರೆ ಬ್ರಿಟಿಶ್ ಮೆಡಿಕಲ್ ಜರ್ನಲ್ ಪ್ರಕಾರ ಇದು ಸತ್ಯಕ್ಕೆ ದೂರವಾದ ಮಾತು.ಕಣ್ಣಿಗೆ ಹೆಚ್ಚು ಕೆಲಸವಾಗುತ್ತದಾದರೂ,ಕತ್ತಲಿನಲ್ಲಿ ಓದಲು ಪ್ರಯತ್ನಿಸುವುದು ಕಣ್ಣಿಗೆ ಶಾಶ್ವತ ಹಾನಿಯೇನೂ ಮಾಡದು ಎಂದು ತಜ್ಞರು ಭರವಸೆ ನೀಡುತ್ತಾರೆ.ಗಡ್ಡವನ್ನು ಬೋಳಿಸಿಕೊಂಡರೆ ಗಡ್ದ ಹುಲುಸಾಗಿ ಬೆಳೆಯುತ್ತದೆ ಎನ್ನುವುದೂ ಸುಳ್ಳಂತೆ.ಸತ್ತ ನಂತರ ಉಗುರು,ಕೂದಲೂ ಬೆಳೆಯಲಾರವು ಎನ್ನುತ್ತಾರೆ ತಜ್ಞರು.ಜನಸಾಮಾನ್ಯರ ನಂಬಿಕೆ ಹಾಗಿಲ್ಲವೆಂದು ಒಪ್ಪುತ್ತೀರಾ?ನಾವು ಮಿದುಳಿನ ಕೇವಲ ಶೇಕಡಾ ಹತ್ತು ಭಾಗವನ್ನು ಮಾತ್ರಾ ಬಳಸುತ್ತೇವೆ ಎಂಬ ಜನಪ್ರಿಯ ಹೇಳಿಕೆಗೂ ಪುರಾವೆಯಿಲ್ಲವಂತೆ.ಮಿದುಳಿನ ಎಲ್ಲಾ ಭಾಗಗಳೂ ಚಟುವಟಿಕೆಯಿಂದ ಕೂಡಿರುತ್ತವೆ.ಮೊಬೈಲ್ ಬಗ್ಗೆಯಂತೂ ಇಲ್ಲಸಲ್ಲದ ವದಂತಿಗಳಿವೆ.ಆಸ್ಪತ್ರೆಯ ಪರಿಸರದಲ್ಲಿ ಮೊಬೈಲ್ ಬಳಸಿದರೆ,ಅಲ್ಲಿನ ಪರಿಕರಗಳ ಕಾರ್ಯಕ್ಷಮತೆ ತಗ್ಗುತ್ತದೆ ಎನ್ನುದನ್ನು ತಳ್ಳಿ ಹಾಕಲಾಗಿದೆ.ಮೊಬೈಲ್ ಸಾಧನದ ಸಂಕೇತ ಬಹಳ ದುರ್ಬಲವಾಗಿದ್ದು,ಅದು ಆಸ್ಪತ್ರೆಗಳ ಪರಿಕರಗಳಿಗೆ ಹಾನಿ ತರಲಾರವಂತೆ.
 ಮೊಬೈಲ್ ಫೋನ್ ಚಾಲೂ ಇಟ್ಟು ಮೊಟ್ಟೆಯನ್ನು ಬೇಯಿಸಲು ಸಾಧ್ಯ.ಇದಕ್ಕೆ ಅರುವತ್ತೈದು ನಿಮಿಷ ಬೇಕಾಗುತ್ತದೆ ಎಂಬಂತಹ "ನಂಬುವಂತಹ" ವದಂತಿಗಳು ಅಂತರ್ಜಾಲದಲ್ಲಿ ಸುತ್ತಾಡುತ್ತಿರುತ್ತವೆ.ಇಂತಹ ವದಂತಿಗಳಲ್ಲಿ ಇರುವ (ಕು)ತರ್ಕಕ್ಕೆ ಬುದ್ಧಿವಂತರೂ ಬಲಿ ಬೀಳುವಂತಿರುತ್ತವೆ.ಇಂತಹ ಬರಹಗಳು ಸಾಚಾವೇ ಎನ್ನುವುದು http://www.hoax-slayer.com  ತಾಣದಲ್ಲಿ ಪರಿಶೀಲಿಸಿದರೆ ತಿಳಿಯುತ್ತವೆ.ಓದಿದ್ದನ್ನೆಲ್ಲಾ ಇತರರಿಗೆ ತಿಳಿಸಿ,ಅವರನ್ನೂ ಬೇಸ್ತು ಬೀಳಿಸಿ ಇತರರಿಂದ ಉಗಿಸಿಕೊಳ್ಳದಿರೋಣ.ಆಗದೇ?
ಪ್ರಾರ್ಥನೆಗೂ ಹೊರಗುತ್ತಿಗೇ!
 ಕಚೇರಿಗೆ ಹೋಗುವಾಗ,ದೇವಾಲಯದ ಗೋಪುರದ ಮುಂದೆ ಹಾದು ಹೋಗುವವರು,ದೇವಾಲಯಕ್ಕೆ ಹೋಗಲಾರದ ಪಾಪಪ್ರಜ್ಞೆಯಿಂದ ಹೊರಬರಲು,ಅಲ್ಲಿಂದಲೇ ದೇವರತ್ತ ನಮಸ್ಕಾರ ಎಸೆದು ಬಸ್ ಸ್ಟಾಪ್ ಕಡೆ ಹೆಜ್ಜೆಯಿಡುವ ದೃಶ್ಯ ನೋಡದವರಾರು?ವಿದೇಶಗಳಲ್ಲಿ ನೆಲಸಿರುವ ಎನ್ನಾರೈಗಳು ನೆನೆಸಿದಾಕ್ಷಣ ನಮ್ಮ ದೇಶದ ದೇವಾಲಯಗಳಿಗೆ ಬಂದು ಪೂಜೆ ಸಲ್ಲಿಸಲಾರರು ತಾನೇ?ಆದರೆ ಅವರು ಹಣ ತೆರಲು ತಯಾರಿದ್ದರೆ,ಅವರ ಪರವಾಗಿ ಪ್ರಾರ್ಥಿಸುವ ಕಂಪೆನಿಗಳು ಅಂತರ್ಜಾಲದಲ್ಲಿವೆ. ಈ ತಾಣಗಳಲ್ಲಿ ಸಂದರ್ಶಕರು ತಮಗೆ ಬೇಕಾದ ದೇವಾಲಯಗಳ ಬೇಕೆನಿಸಿದ ಪೂಜೆಯನ್ನು ಆಯ್ದು ಅದಕ್ಕೆ ನಿಗದಿತ ಶುಲ್ಕ ತೆತ್ತರೆ,ಅವರ ಪೂಜೆಯನ್ನು ಸಲ್ಲಿಸುವ ಜವಾಬ್ದಾರಿಯನ್ನು ತಾಣಗಳ ನಿರ್ವಾಹಕರು ಹೊರುತ್ತಾರೆ.ಪೂಜೆ ಸಲ್ಲಿಸಿದ ಬಗ್ಗೆ ದಾಖಲೆಯಾಗಿ ವಿಡಿಯೋ ಕ್ಲಿಪ್ಪಿಂಗ್ ಮತ್ತು ಪ್ರಸಾದ ಕೊರಿಯರ್ ಸೇವೆ ಮೂಲಕ ಕೋರಿಕೆ ಸಲ್ಲಿಸಿದವರಿಗೆ ತಲುಪುತ್ತದೆ.Astrojyoti.com,Hindupurohit.com,Pariharam.com ಎಲ್ಲವೂ ಈ ತೆರನ ಸೇವೆ ಒದಗಿಸುವ ತಾಣಗಳು.ಸರ್ವ ಶಕ್ತ,ಸರ್ವ ವ್ಯಾಪಿ ಭಗವಂತ ಅಂತರ್ಜಾಲದಲ್ಲೂ ಇರುವುದರಲ್ಲಿ ಆಶ್ಚರ್ಯವೇನು?ವರ್ಷಕ್ಕೆ ಒಂದು ದಶಲಕ್ಷ ವ್ಯಾಪಾರ ಮಾಡುವ ತಾಣಗಳೂ ಇವೆ.ನೂರಾರು ದೇವಾಲಯಗಳೊಂದಿಗೆ ಒಡಂಬಡಿಕೆ ಇರುವುದರಿಂದ,ಬೇಡಿಕೆ ಬಂದೊಡನೆ ಪೂಜೆ ಮಾಡಿ ಪ್ರಸಾದ ಕಳಿಸಲು ವ್ಯವಸ್ಥೆ ಮಾಡುವುದು ಕಷ್ಟವಾಗುವುದಿಲ್ಲ.ಅಂದ ಹಾಗೆ ತಾಣಗಳನ್ನು ನಡೆಸುವವರು ಧಾರ್ಮಿಕ ವ್ಯಕ್ತಿಗಳು ಎಂದು ತಿಳಿಯಬೇಡಿ.ಸೈಬರ್ ಪಟು ವ್ಯವಹಾರ ಪರಿಣಿತ ಜನರೇ ಇದರ ಹಿಂದಿರುತ್ತಾರೆ.
ಹದಿನೈದು ಕಿಲೋಮೀಟರ್ ದೂರದಿಂದ ವೀಕ್ಷಿಸಲೂ ಕ್ಯಮೆರಾ
 ನಗರಗಳ ಸುತ್ತ ನಡೆವ ಚಟುವಟಿಕೆಗಳ ಮೇಲೆ ಕಣ್ಣೀಡಲು ಸೂಕ್ತ ಕ್ಯಾಮರಾವನ್ನು ಸೋನಿ ಕಂಪೆನಿಯು ತಯಾರಿಸಿದೆ.ಈ ಕ್ಯಾಮರಾ ಆರು ಕಿಲೋಮೀಟರ್ ದೂರದಲ್ಲಿರುವ ವ್ಯಕ್ತಿಯ ಮುಖವನ್ನು ಸೆರೆಹಿಡಿಯಬಲ್ಲುದು.ವಾಹನದ ನಂಬರ್ ಪ್ಲೇಟಿನ ಮೇಲೆ ಇದು ದೃಷ್ಟಿ ಬೀರಬಲ್ಲುದು.ಹದಿನೈದು ಕಿಲೋಮೀಟರ್ ವ್ಯಾಪ್ತಿಯನ್ನು ಕ್ಯಾಮರಾ ಹೊಂದಿದೆ.ಆದರೆ ಇಷ್ಟು ದೂರದಲ್ಲಿರುವುದು ವ್ಯಕ್ತಿ ಅಥವಾ ವಾಹನವೇ ಎನ್ನುವಷ್ಟು ವಿವರಗಳು ಮಾತ್ರಾ ಲಭಿಸುತ್ತವೆ.ಇನ್ನೊಂದು ವಿಚಿತ್ರವೆಂದರೆ ಕತ್ತಲಿನಲ್ಲೂ ಇದು ಚಿತ್ರ ತೆಗೆಯುತ್ತದೆ.ಶಾಖ ಚಿತ್ರಹಿಡಿಯುವಿಕೆ ತಂತ್ರಜ್ಞಾನದ ಬಳಕೆಯಿಂದ ಇದು ಸಾಧ್ಯವಾಗುತ್ತದೆ.
*ಅಶೋಕ್‍ಕುಮಾರ್ ಎ