ಗಂಡ ಹೆಂಡಿರ ಜಗಳ

ಗಂಡ ಹೆಂಡಿರ ಜಗಳ

ಬರಹ

ಮದುವೆಗೆ ಮುಂಚೆ "ಗಂಡಹೆಂಡಿರ ಜಗಳ ಗಂಧ ತೀಡಿಧ್ಹಾಂಗ" ಎಂಬ ಯಾವುದೋ ಕವಿಯ ಉತ್ಸ್ಫೂರ್ತ ಕವಿವಾಣಿಯ ಮೋಡಿಗೆ ಮರುಳಾಗಿ ಫಣಿರಾಯನಂತೆ genuine appreciationನಿಂದ ತಲೆದೂಗಿದ್ದೆ. ಅದು ಅನುಭವದ ನುಡಿಯೆಂದೂ, ಆದ್ದರಿಂದಲೇ ಗಾದೆಗಳಂತೆ ವೇದಾತೀತ ಸತ್ಯವೆಂದೂ ಮುಗ್ಧವಾಗಿ ನಂಬಿದ್ದೆ. ಈ "ಗಂಧ"ದ ಎಲರು ನನ್ನ ಮೂಗಿಗೆ ತೀಡುವುದೋ ಇಲ್ಲವೋ ಎಂಬ ಸಂಶಯವೂ ಮದುವೆಗೆ ಮೊದಲು ನನಗಿತ್ತು. ಯಾಕೆಂತೀರೋ? ನಮ್ಮದು ಸತಿಧರ್ಮದ ಪರಂಪರೆ!! ನಮ್ಮಮ್ಮನಂತೂ ನಾನು ತನ್ನ ಹಿರಿಯ ಸುಪುತ್ರನೆಂಬ plus pointಗೂ ಕೇರ್ ಮಾಡದೆ ಉಪದೇಶಿಸಿದ್ದಳು. "ಮಗೂ, ನೀನು ಮದುವೆಯಾಗ್ತಿದೀ, ನೀನು ಓದಿದವ, ಜಾಣ, ನಿಂಗೇನು ಹೇಳಲಿ? ನಿನ್ನಪ್ಪನಂತೆ ಹೆಂಡತಿಯ ಮನಸ್ಸನ್ನರಿತು ಬಾಳು" ಎಂದು ಆಶೀರ್ವಧಿಸಿದ್ದಳು. ಇನ್ನು ಇದಕ್ಕಿಂತಲೂ ನಿಚ್ಚಳ ಮಾತು ಬೇಕೆ?
ಇನ್ನು ನನ್ನ ತೊಟ್ಟಿಲು ತೂಗಿದ ನಮ್ಮಜ್ಜಿ ರಾಮಕ್ಕ ನನಗೆ ಕಲಿಸಿದ nursery rhyme ಹೀಗಿದೆ
"ಹೇಣ್ತಿ ಹೇಳ್ಧಾಂಗ್ ಕೇಳ್ಕಂಡ್ ಬಿದ್ದಿರಬಾರದೆ ರಾಮರಾಮ
ಸುಡು ನಿನ್ನ ಬಾಳಿಗೆ ಬೆಂಕಿ ಹಚ್ಚ ರಾಮರಾಮ"

ಈ ರೈಮನ್ನು ನಾನು ನನ್ನ ತೊದಲ್ನುಡಿಗಳಲ್ಲಿ ಹಾಡುತ್ತಿದ್ದಂತೆ ನನ್ನಮ್ಮ ಅಜ್ಜಿಯರು ನನ್ನನ್ನು ವಠಾರದ ಎಲ್ಲರ ಮನೆಗೆಳಿಗೂ ಹೊತ್ತೊಯ್ದು ಕೇಳಿಸಿದ್ದೇ ಕೇಳಿಸಿದ್ದು!! ನನ್ನ ಶಿಶುಗೀತೆ ಆಲಿಸಿ ಅದೆಷ್ಟೋ ಬೊಚ್ಚುಬಾಯ ಅಜ್ಜಿಯರು " ಅಯ್ಯೋ ನನ್ನ ಕಟ್ಟಾಣಿ! ನಿನ್ನ ಹೇಣ್ತಿಯಾಗೋಳ್ನ ಹೆತ್ತವರ ಹೊಟ್ಟೆಗೆ ಹಾಲು ಹೊಯ್ದರು" ಅಂತ ಗಬಕ್ಕನೆ ಅಪ್ಪಿ ಲೊಟಕ್ಕನೆ ಮುತ್ತಿಕ್ಕಿದ್ದೇ ಮುತ್ತಿಕ್ಕಿದ್ದು!!

ಇಂಥ ಹಿನ್ನೆಲೆಯ ನಾನು "ಗಂಡ ಹೆಂಡಿರ ಜಗಳ"ದ ’ಗಂಧ’ವನ್ನು ನಿರೀಕ್ಷಿಸುವುದಾದರೂ ಹೇಗೆ? ಆದರೆ ವಿಧಿಲಿಖಿತ ಬೇರೆಯೇ ಇತ್ತೆನ್ನುವುದು ನನಗರ್ಥವಾಗಿದ್ದು ತಡವಾಗಿಯೇ! ನಮ್ಮ ಮನೆಯ ಕೊಟ್ಟಿಗೆಯ ಸಗಣಿಯ ನಾತಕ್ಕಿಂತಲೂ ಈ "ಗಂಧ"ವೇ ಹೆಚ್ಚಾಗಿ ನನ್ನ ಮೂಗಿಗೆ ಸಲ್ಲುವುದಿತ್ತೆಂದು ನಾನು ಮುಂಗಾಣುವ ಬಗೆಯಾದರೂ ಹೇಗೆ?

ಮದುವೆಯಾದ ಮರುತಿಂಗಳ ಒಂದು ಭಾನುವಾರವೆಂದು ನೆನೆಪು. ವಿವಾಹಪೂರ್ವ ನನ್ನ ನಲ್ಲೆಗೆ ಬರೆದ ಪ್ರೇಮಪತ್ರದಲ್ಲಿ ನನ್ನ ಜಿಹ್ವಾಭಿರುಚಿಯ ಲಿಸ್ಟ್ ಕಳಿಸಿದ್ದಕ್ಕಾಗಿ ಹಳಹಳಿಸುತ್ತ ಕೂತಿದ್ದೆ. ಹೆಂಡಿರು "ಸಂಡೇ ಸ್ಪೆಷಲ್" ತಯಾರಿಸುವ ಮೊದಲೇ ನನ್ನ ಆಪ್ತಮಿತ್ರ ಹೋಟೆಲು ಶ್ರೀಕಂಠನ ಮನೆಗೆ ಸದ್ದಿಲ್ಲದೆ ಜಾರಿಕೊಳ್ಳುವ ಹವಣಿಕೆ ಹಾಕ್ತಾ ಇದ್ದೆ. ಅಡಿಗೆಮನೆಯಿಂದ "ರೀ, ಬೆಳಗಾಗಿ ಬೀದಿ ಗೂಳಿಯ ಹಾಗೆ ತಿಂಡಿಗಾಗಿ (ಭಿಕ್ಷೆಗೆ ಅನ್ನುವ ನಿಕೃಷ್ಟಾರ್ಥದಲ್ಲಿ) ಯಾರು ಯಾರದೋ ಮನೆಗೋ ಹೊರಟ್ಬಿಡಬೇಡಿ. ಇವತ್ತು ನಿಮ್ಮಿಷ್ಟದ ತಿಂಡಿ ತೊಗರಿನುಚ್ಚಿನುಂಡೆ" ಎಂದು ನನ್ನವಳ ಶಿಖಿವಾಣಿ ನುಡಿಯಿತು. ಯಾರೋ ನನ್ನ ಕರುಳನ್ನು ಕಿತ್ತು ಐಸ್‌ಬಾಕ್ಸ್‌ನಲ್ಲಿಟ್ಟ ಅನುಭವವಾಯಿತು.
(ಮುಂದುವರೆಯುವುದು)