ಗಂಡ ಹೆಂಡಿರ ಜಗಳ - ಕೊನೆಯ ಕಂತು

ಗಂಡ ಹೆಂಡಿರ ಜಗಳ - ಕೊನೆಯ ಕಂತು

ಬರಹ

ಇದೀಗ ತೂಗುಕತ್ತಿ ನೆತ್ತಿಯಮೇಲಿದೆ. ನನ್ನ ಮಡದಿ ತೊಗರಿನುಚ್ಚಿನುಂಡೆ ತಟ್ಟೆಗೆ ಹಾಕಿ ಟೀಪಾಯ್ ಮೇಲಿಟ್ಟದ್ದನ್ನು ಕಾಣದವನಂತೆ ಈಸೀಚೇರಿನಲ್ಲಿ ಕೂತು ಅದಾಗಲೇ ಮೂರು ಬಾರಿ ತಿರುವಿಹಾಕಿದ ಪ್ರಜಾವಾಣಿ ಸಾಪ್ತಾಹಿಕ ಪುರವಣಿಯನ್ನು ತೀರ ಆಸಕ್ತಿಯಿಂದ ಓದುತ್ತಿರುವಂತೆ ನಟಿಸಿದೆ. ಅವಳೆದುರು ನಾನು ತಿಂಡಿಯ ತಟ್ಟೆಯನ್ನು ನೋಡಿದರೆ ನನ್ನ ಗುಟ್ಟು ನನ್ನ ಮೂಗಿನಿಂಡಲೇ ರಟ್ಟಾಗುವುದು ಸ್ವತ:ಸಿದ್ಧ!! ಅವಳು ರೇಗುತ್ತ "ಅದೇನು ಒಳ್ಳೆ ರಿಟೈರ್ ಆದ ಮುದುಕರ ಥರ ಅಷ್ಟುಸಾರಿ ಓದಿದ್ದನ್ನೇ ಓದ್ತೀರಿ? ಬೆಳಗಿನಿಂದ ನೋಡಿ ನೋಡಿ ನನಗೆ ರೋಸಿಹೋಗ್ತಿದೆ" ಎಂದು ಪುರವಣಿಯನ್ನು ಕಿತ್ತಿಟ್ಟು ರಂಗಕ್ಕೆ ನನ್ನನ್ನು ಆಹ್ವಾನಿಸಿದಳು. ವಿಧಿಯಿಲ್ಲದೆಯೇ ಓರೆಗಣ್ಣಿನಲ್ಲಿಯೇ ತಿಂಡಿತಟ್ಟೆಯನ್ನು ದಿಟ್ಟಿಸಿದೆ. ವೈದರ್ಭೀ ಶೈಲಿಯ ಉಪಮೆ ತಲೆಯಲ್ಲಿ ಸ್ಫುರಿಸಿತು!!! ಹಬೆಯಾಡುತ್ತಿದ್ದ ನುಚ್ಚಿನುಂಡೆಗಳು ಮಾಯವಾಗಿ (ಬಂಗಾಳದಲ್ಲಿ ಅಗ್ಗಿಷ್ಟಿಕೆ ಉರಿಸಲು ತಯಾರಿಸುವ) ಮರದ ಹೊಟ್ಟು, ಇದ್ದಿಲು, ಎಮ್ಮೆಸಗಣಿಗಳನ್ನು ಕಲಸಿ ತಯಾರಿಸಿದ ಉರುವಲುಂಡೆಗಳು ನನ್ನನ್ನು ಕೆಣಕಿದವು. ಇವಳು ಮರೆತಿದ್ದ ಕುಡಿಯುವ ನೀರಿನ ಲೋಟವನ್ನು ತರಲು ಒಳಹೋದಾಗ ನನ್ನ ನಿಯಂತ್ರಣ ಮೀರಿ ಯಾತನೆಯ ಮುಲುಕೊಂದು ಬಾಯಿಂದ ಹೊರಹೊಮ್ಮಿಯೇಬಿಟ್ಟಿತು. ಕ್ಷಣದಲ್ಲಿಯೇ ಹಿಂದಿರುಗಿದ ಇವಳು " ಅದೇನ್ರೀ, ತಿಂಡಿ ತಿನ್ನದೆ ಒಳ್ಳೆ ಗಬ್ಬದ ಹಂದಿಯ ಥರ ಮುಲುಕಾಡ್ತಿದೀರಲ್ಲ!!" ಅಂದುಬಿಡುವುದೇ? ವರ್ಷಗಟ್ಟಲೆ ಅದೆಲ್ಲಿ ಹೆಡೆಮುದುರಿ ಬೂದಿ ಒಲೆಯಲ್ಲಿ ಬಿದ್ದುಕೊಂಡಿತ್ತೋ ಸಿಟ್ಟಿನ ಸರ್ಪ ಬ್ರಹ್ಬರಂಧ್ರಕ್ಕೇರಿಯೇ ಬಿಟ್ಟಿತು. ಸಂಪನ್ನನಿಗೆ ಸಿಟ್ಟು ಬರಬಾರದು ಅಂತ ಗಾದೆಯೇ ಇಲ್ಲವೆ? ನಡುಗುವ ಧ್ವನಿಯಲ್ಲರಚಿದೆ.

"ಇದೀಗ ಪ್ರಬಂಧ ಸ್ವಲ್ಪ ರೋಚಕತೆ ಕಾಣ್ತು" ಅಂತ ಕುರ್ಚಿಯಲ್ಲಿ ಸರಿಯಾಗಿ ಸೆಟ್ಲ್ ಆದ್ರಿ ತಾನೆ? ನಿಮ್ಮ ಕಿವಿಯೂ ಸ್ವಲ್ಪ ನಿಮಿರಿರಬಹುದು. ಆಹಾ ವಾಚಕ ವಿದ್ವನ್ಮಣಿ, ಗಂಡ ಹೆಂಡಿರ ಜಗಳ ಆಲಿಸಿ ಮಜಾ ತೆಗೆದುಕೊಳ್ಳುವ ನಿಮ್ಮ ಅಭಿಜಾತ ಸಂಸ್ಕಾರಕ್ಕೆ ಶರಣು.ಮುಂದಿನ ನಮ್ಮ ಸಂಭಾಷಣೆಯನ್ನು ಸುಸಂಸ್ಕೃತರಿಗಾಗಿ ಕೆಳಕಂಡಂತೆ ಪರಿಷ್ಖರಿಸಿದ್ದೇನೆ.

ನಾನು:- ಈ ಹಣೆಬರಹಕ್ಕೆ ನಿನಗೆ ಹೋಂ ಸೈನ್ಸ್ ಡಿಗ್ರಿ ಬೇರೆ ಕೇಡು!

ಅವಳು:- ಓಹೋ! ನಿಮ್ಮ ತಿಥಿಮಂತ್ರ ಊದುವ ಸಂಸ್ಕೃತ ಡಿಗ್ರಿಗಿಂತ ಕೇಡಲ್ಲವಲ್ಲ?!!

ನಾನು:-ಆ ಡಿಗ್ರಿಯೇ ನಮ್ಮಿಬ್ಬರಿಗೂ ಅನ್ನ ಕೊಡ್ತಿದೆಯಲ್ಲ!

ಅವಳು:- ............... ಹಾಗೆ ಏನೇನೋ ಬೊಗಳ್ಬೇಡಿ.

ನಾನು:-ಹಂ!! ನೀನು ತಯಾರಿಸಿದ ತಿಂಡಿ ತಿನ್ನಲು ಅದೇ ಜನ್ಮ ಯೋಗ್ಯ!!

ಅವಳು:- ಮದುವೆಗೆ ಮುಂಚೆ ಅದಕ್ಕೇ ಬೇತುಕೊಂಡು ನಮ್ಮ ಮನೆಗೆ ಬರುತ್ತಿದ್ದಿರಲ್ಲ!!

ನಾನು:- ಹೌದಲ್ಲ!? ಹಾಗೆ ಬಂದಾಗಲೇ ನಿಮ್ಮ ಮನೆಯ ಮಜ್ಜಿಗೆ ಅನ್ನ ತಿಂದು ವಾಂತಿ ಮಾಡಿಕೊಂಡಿದ್ದೆ ನಾನು ಅಲ್ಲವೆ??

ಅವಳು:- ನೋಡಿ ನೋಡಿ, ಏನು ಬೇಕಾದ್ರೂ ಹೇಳಿ, ಆದ್ರೆ ನಮ್ಮ ಮನೆಯ ಮಜ್ಜಿಗೆ ವಿಷಯಕ್ಕೆ ಬಂದರೆ ನಾನು ಸುಮ್ಮನಿರೋಲ್ಲ!!

ಈಗ ಅವಳ ತವರುಮನೆಯ ಮಜ್ಜಿಗೆಯ ಪ್ರಸ್ತಾಪವಾಗುತ್ತಿದ್ದಂತೆ ನನ್ನವಳು ರಣಚಂಡಿಯಾದಳು. ನನ್ನ ಯಾವ ಓಲೈಕೆಯ ನುಡಿಗಳಿಗೂ ಜಗ್ಗದೆ ನೇರ ತವರಿಗೆ ಧಾವಿಸಿದಳು. ಒಂದು ವಾರ ಚಳಿಗಾಲದ ನರಕದಂತಹ ಯಾತನೆಯ ಏಕಾಂತದ ದಿನಗಳನ್ನು ಕಳೆದಮೇಲೆ "ತ್ರಾಹಿ ತ್ರಾಹಿ" ಎನ್ನುತ್ತ ನಾನೂ ಅವಳನ್ನು ಹಿಂಬಾಲಿಸಲೇಬೇಕಾಯ್ತು. ಸೋತ ಸಾಮಂತನಂತೆ ಅವಳ ಪಾದದ ಬಳಿ ಕತ್ತಿ ಇರಿಸಿ ಶಸ್ತ್ರತ್ಯಾಗ ಮಾಡಿದೆ. ಕಪ್ಪ , ಕಾಣಿಕೆ, ನಜರೊಪ್ಪಿಸುವುದು, ಮುಜುರೆ ಮಾಡುವುದು ಮೊದಲಾದ ಎಲ್ಲ ಅವಮಾನಗಳು ಯಥಾಕ್ರಮ ನಡೆದವು.

ಅಂದಿನಿಂದಲೇ ಅಮ್ಮ ಅಜ್ಜಿಯರ ಬೋಧನೆಯಂತೆ, ತಂದೆಯ ಅನುಭವದ ಮೇರೆಗೆ ಬದುಕುತ್ತ ಸ್ವಲ್ಪ ಸುಖ ಕಂಡಿದ್ದೇನೆ. ಕಾಂತೆಯ ಪ್ರಭುಸಮ್ಮಿತೆಗೆ ತಲೆಬಾಗಿ, ಮುಂದೆ ಅವಳು ಹುರುಪಿನಿಂದ ತಯಾರಿಸಿದ ತೆಂಗಿನ ಚಿಪ್ಪಿನ ಚಟ್ಣಿಪುಡಿ, ಹೊಂಗೆ ಚಿಗುರಿನ ಹೊಶಾಳೆ, ಬಿಲ್ವಪತ್ರೆಕಾಯಿಯ ಬಿಸಿಬೇಳೆಭಾತ್ ಇವು ಯಾವುದೂ ನಮ್ಮ ನಡುವೆ ಬಿರುಕು ಹುಟ್ಟಿಸಲು ಬಿಟ್ಟಿಲ್ಲ ನಾನು.

ಕೊನೆಗೆ ನಾನಂತೂ ಈ ತೀರ್ಮಾನಕ್ಕೆ ಬಂದು ಮುಟ್ಟಿದ್ದೇನೆ. "ಈ ಕವಿಗಳು ಅಂಬೋ ಐಲುಮಂದಿಯ ಅನುಭವ ಎಂದಿಗೂ ನಮ್ಮದಾಗಲಾರದು" ನೀವೇನಂತೀರಿ?