ನಮ್ಮೂರ ಅಸಾಮಾನ್ಯ ಸಾಮಾನ್ಯರು

ನಮ್ಮೂರ ಅಸಾಮಾನ್ಯ ಸಾಮಾನ್ಯರು

ಬರಹ

ನಮ್ಮೂರು ಅಂತ ಸುಮ್ಮನೆ ಹೆಸರು ಹೇಳದೆ ಬರೆದರೆ ನಿಮಗೆ ತಿಳಿಯದು. ನಮ್ಮೂರು ಪ್ರಕೃತಿಸೌಂದರ್ಯದ ತವರೂರು, ಮಲೆನಾಡಿನ ಹೃದಯ ಕವಿಪುಂಗವರು, ಕಲಾವಿದರು, ವಿಮರ್ಶಕರು ಹುಟ್ಟಿ ಪ್ರಸಿದ್ಧಗೊಳಿಸಿದ ತೀರ್ಥಹಳ್ಳಿ. ಇತ್ತ ಮಲೆನಾಡಿನ ಭೌಗೋಳಿಕತೆ, ಅತ್ತ ಹಳೆಮೈಸೂರು, ದಕ್ಷಿಣಕನ್ನಡಗಳ ಸಮ್ಮಿಶ್ರಣ ಭಾಷೆ, ಸಂಸ್ಕೃತಿ, ಊಟ ಉಡುಗೆ ಇರಸರಿಕೆ. ಮುಸಲ್ಮಾನರು, ಕ್ರೈಸ್ತರು, ಬಂಟರು, ಬ್ರಾಹ್ಮಣರು, ಸಾರಸ್ವತರು, ಒಕ್ಕಲಿಗರು, ಜೈನರು ಎಲ್ಲ ಸೇರಿ ನಿರ್ಮಿಸಿದ ಬಣ್ಣ ಬಣ್ಣದ ಊರು. ಮಳೆಗಾಲದಲ್ಲಿ ನೆನೆಯುತ್ತಾ, ಬೇಸಿಗೆಯಲ್ಲಿ ಒಣಗುತ್ತ ಅದು ಹೇಗೆ ಹತ್ತಿರ ಹತ್ತಿರ ಮೂವತ್ತು ವರ್ಷ ಕಳೆಯಿತು ಈ ಊರಲ್ಲಿ ಅಂತ ಬೆರಗಾಗುತ್ತದೆ ನಂಗೆ. ಸುತ್ತ ಇರುವ ಬೆಟ್ಟಗುಡ್ಡಗಳು ಹಾಸಿ ಹೊದ್ದ ಸೋಮಾರಿಗಳಂತಿವೆ. ಬೆಂಗಳೂರು ಮೈಸೂರಿನಿಂದ ಬರುವ ನಮ್ಮ ನೆಂಟರು, ಈ ಊರು ದಣಿದ ಮೈಮನಗಳಿಗೆ ವಿಶ್ರಾಂತಿ ಕೊಡೋಕ್ಕೆ ಬಹಳ ಚೆನ್ನಾಗಿದೆ ಅಂತಾರೆ. ಬಂದವರು ಕಾಫಿ ಕುಡಿದು ಹಾಸಿ ಮಲಗಿದರೆ ಮತ್ತೆ ಮೇಲೇಳುವುದು ಸೆಕೆಂಡ್ ಡೋಸ್ ಗೆ ಮಾತ್ರ. ಕಾಲ ನಿಂತ ಭಾಸ ನಿಮಗಾಗಬೇಕಾದರೆ ನಮ್ಮೂರಿಗೆ ಬನ್ನಿ.

ಹೊಸದಾಗಿ ಈ ಊರಿಗೆ ಹೊಟ್ಟೆ ಪಾಡಿಗೆ ಬಂದಾಗ ಇಲ್ಲಿ ಹೇಗಪ್ಪಾ ಅನ್ನಿಸಿದ್ದುಂಟು. ಅದರಲ್ಲೂ ಬೆಂಗಳೂರಿನ ಗೌಜಿಯಿಂದ ಇಲ್ಲಿಗೆ ಮೊದಲ ಬಾರಿ ಇರಲಿಕ್ಕೆ ಬಂದವರಿಗೆ ಮಳೆ, ಕೊಚ್ಚೆ ರೇಜಿಗೆ ಹಿಡಿಸಿದರೆ ಆಶ್ಚರ್ಯವಿಲ್ಲ. ಆದರೆ ಒಮ್ಮೆನೀವು ಇಲ್ಲಿಗೆ ಒಗ್ಗಿದಿರೋ, ಬಡಪೆಟ್ಟಿಗೆ ಇಲ್ಲಿಂದ ಹೊರಹೋಗಲು ಮನಸ್ಸಾಗದು. ಪತ್ರಿಕೆ, ರೇಡಿಯೋ, ದೂರದರ್ಶನ, ಕಂಪ್ಯೂಟರ್ ಮೊದಲಾದ ಮಾಧ್ಯಮಗಳ ಮೂಲಕ ಇಲ್ಲಿಯ ವಿದ್ಯಮಾನಗಳು ಕ್ಷಣಾರ್ಧದಲ್ಲಿ ದೇಶವಿದೇಶಗಳಿಗೆ ತಲಪುವುದರಿಂದ ಇಲ್ಲಿಯ ಸಾಹಿತ್ಯಕ ಪರಿಸರ, ರಾಜಕೀಯ ವಿದ್ಯಮಾನಗಳು, ಇಲ್ಲಿ ನಡೆದ ಪರಿಸರ ಚಳುವಳಿಗಳು ಮತ್ತು ಇಲ್ಲಿಯ ಎಳ್ಳಮಾವಾಸ್ಯೆ ಜಾತ್ರೆ ಮೊದಲಾದವು ಯಾರಿಗೂ ಹೊಸದಾಗಿ ಉಳಿದಿಲ್ಲ. ಯಾರನ್ನೇ ಕೇಳಿ, ಕುವೆಂಪು ಅವರ ಊರು ಅಲ್ವಾ? ಅನಂತಮೂರ್ತಿಯವರ ಸ್ಥಳ ಅಲ್ವಾ ಅಂತಾರೆ.

ಇಷ್ಟಕ್ಕೆ ನಮ್ಮೂರಿನ ವೈಶಿಷ್ಟ್ಯ ಮುಗೀತು ಅಂತಲ್ಲ. ಇಲ್ಲಿಯ ಸಂಸ್ಕೃತಿ, ಉಡುಗೆ ತೊಡುಗೆ, ಖಾದ್ಯಗಳಂತೆ ಈ ಊರಿಗೆ ವಿಶಿಷ್ಟತೆ ತಂದುಕೊಟ್ಟ ಜನಸಾಮಾನ್ಯರನ್ನು ಮರೆಯುವಂತೆಯೇ ಇಲ್ಲ. ಇಲ್ಲಿಯ ನೆಲದ ಸತ್ವವೇ ಅವರು ಅಂದರೂ ನಡೆಯುತ್ತದೆ
(ಮುಂದುವರೆಯುತ್ತದೆ)