ತೂತಿನ ತುತ್ತೂರಿ!

ತೂತಿನ ತುತ್ತೂರಿ!

ಬರಹ

  - ನವರತ್ನ ಸುಧೀರ್

 

ತೂತಿನ ಬಗ್ಗೆ ಒಂದು ಪ್ರಬಂಧ? ನಿಮ್ಮ ತಲೆಯಲ್ಲೇನಾದರೂ ತೂತಾಗಿದೆಯೇ ಅಂತ ಕೇಳಬೇಡಿ! ಸ್ವಲ್ಪ ನಿಧಾನಿಸಿ ಮುಂದೆ ಓದಿ.

 " ಹೊಸ ಪಂಚಾಂಗ ಕೊಂಡಾಗ ಅದರ ಮೂಲೆಯಲ್ಲಿ ಯಥಾಪ್ರಕಾರವಾಗಿ ಇದ್ದ ತೂತೇ ಇವತ್ತಿನ ಲೇಖನಕ್ಕೆ ಮತ್ತು ಶೀರ್ಷಿಕೆಗೆ ಪ್ರೇರಣೆ!"  ಹೀಗಂತ  ಬರೆದವರು ಅಮೇರಿಕದ ವಾಷಿಂಗ್‍ಟನ್ ನಿವಾಸಿ ಶ್ರೀವತ್ಸ ಜೋಶಿಯವರು ತಮ್ಮ ಇತ್ತೀಚೆಗೆ ಬರೆದ  ಲೇಖನ "ಗೋಡೆಗೆ ನೇತುಹಾಕಲು ಪಂಚಾಂಗಕ್ಕೆ ತೂತು!" ದಲ್ಲಿ. ( ೯ ನೇ ಡಿಸೆಂಬರ್ ೨೦೦೭ ರ "ವಿಜಯಕರ್ನಾಟಕ")

ಇದೇನು ವಿಚಿತ್ರ ಪ್ರೇರಣೆ ಅಂತ ನಮಗನಿಸಬಹುದು. ಆದರೆ ತಮ್ಮ ಪನ್‍ಚವಾರ್ಷಿಕ ಪರಿಶ್ರಮದಲ್ಲಿ ಇಂತಹುದೇ ವಿಚಿತ್ರ ಪ್ರೇರಣೆಗಳಿಂದ ರುಚಿ ರುಚಿಯಾಗಿ " ವಿಚಿತ್ರಾನ್ನ" ತಯಾರಿಸಿ ಬಡಿಸಿದ ನಳ ಚಕ್ರವರ್ತಿ ಅವರು. ಬಹಳ ಸ್ವಾರಸ್ಯಪೂರ್ಣ ಹಾಗೂ  ಮಾಹಿತಿಪೂರ್ಣವಾಗಿ ಬರೆದ  ಲೇಖನ! ಓದಲು ಮರೆಯಬೇಡಿ.

ಎಷ್ಟೇ ವಿಚಿತ್ರವಾದರೂ ಒಂದು ಯಃಕಶ್ಚಿತ್  ತೂತಿನಿಂದ ಅವರಿಗೆ ಪ್ರೇರಣೆ ಸಿಕ್ಕಿರಬಹುದಾದರೆ, ಈ ತೂತಿನಲ್ಲಿ ಏನೋ ಸತ್ವ ಇರಬೇಕು. ಇಲ್ಲದಿದ್ರೆ ಇಂತಹ ಸ್ಫೂರ್ತಿ ತರಿಸಲು ಸಾಧ್ಯವಿಲ್ಲ ಅಂದುಕೊಳ್ಳುತ್ತ ತೂತಿನ ಬಗ್ಗೆ  ಯೋಚಿಸಲು ಆರಂಭಿಸಿದೆ.

ತೂತು ಅಥವಾ ರಂಧ್ರ ಚಿಕ್ಕದಾಗಿ ಚೊಕ್ಕವಾಗಿರುತ್ತೆ. ತಳ ಇರುವ  ಹಾಗೂ ತಳ ಇಲ್ಲದ ತೂತುಗಳೂ ಇರುತ್ತೆ.

"ಜಿಂದಗಿ ಬಡೀ ಹೋನೀ ಚಾಹಿಯೆ ಲಂಬೀ ನಹೀ" (ಜೀವನ ದೊಡ್ಡದಾಗಿರಬೇಕು ಉದ್ದವಾಗಲ್ಲ) ಅಂತ "ಆನಂದ್" ಚಿತ್ರದ ನಾಯಕ ರಾಜೇಶ್ ಖನ್ನ ಹೇಳಿದ್ದು ತೂತಿಗೆ ಅನ್ವಯಿಸೋಲ್ಲ. ಹ್ಯಾಗೆ ಇಂಗ್ಲೀಷಿನ "ಹೋಲ್" ದೊಡ್ಡದಾದರೆ "ಬೋರ್" ಆಗುತ್ತೋ ಹಾಗೆಯೇ ತೂತು ಕೂಡಾ ತುಂಬಾ ದೊಡ್ಡದಾದರೆ ಕಿಂಡಿಯೋ, ಗುಳಿಯೋ, ಗುಂಡಿಯೋ, ಹೊಂಡವೋ ಅಂತೂ ಮತ್ತೇನೋ ಆಗಿಬಿಡುತ್ತೆ. ತೂತು ತುಂಬಾ ಸಣ್ಣದಾದರೆ  "ಪೋರ್' ಆಗಿಬಿಡುತ್ತೆ. ತೂತು ತುಂಬ ಉದ್ದವಾಗಿ ಯಾವುದಾದರೂ ತೆಳು ಪದರದ ಘನಪದಾರ್ಥದಿಂದ ಸುತ್ತುವರಿದರೆ ನಳಿಕೆಯೋ, ನಾಳವೋ ಆಗುತ್ತೆ. ( A pipe is a long hole surrounded by some thin layered solid substance!). ನಳಿಕೆಯ ತೂತು ತುಂಬಾ ಚಿಕ್ಕದಾದರೆ ಕ್ಯಾಪಿಲರಿ  ಅನ್ನಿಸಿಕೊಳ್ಳುತ್ತೆ.

ತೂತು ಎಲ್ಲಿಲ್ಲ? ಭಗವಂತನ ಹಾಗೆಯೇ ಸರ್ವ ಶಕ್ತ ಸರ್ವಾಂತರ್ಯಾಮಿ! ಮಾನವನ ಅಳಿವು ಉಳಿವುಗಳೆಲ್ಲವೂ ತೂತಿನ

ಕೃಪೆಯ ಮೇಲೆ ನಿರ್ಭರ.  ನಮ್ಮ ದೇಹದ ಮೇಲ್ಭಾಗದಲ್ಲಿರುವ ತೂತುಗಳಿಂದಲೇ ಅಲ್ಲವೇ ನಾವು ನೋಡಿ, ಕೇಳಿ, ಮೂಸಿ, ತಿಂದು ಮಾಡುವುದು. ಚರ್ಮದಲ್ಲಿರುವ ಸಣ್ಣ ತೂತುಗಳಿಂದಲೇ ನಾವು ಬೆವರು ಸುರಿಸಿ ದೇಹದ ತಾಪಮಾನ ಕಾಪಾಡಿಕೊಂಡು ಬರುವುದು. ಅದೇ ತೂತಿನಿಂದ ಬೆವರು ಸುರಿಸಿ ಹಣ ಸಂಪಾದಿಸಿದರೇ ತಾನೆ ಜನ ನಮಗೆ ಮಣೆ ಹಾಕಿ ಮನ್ನಣೆ ಕೊಡುವುದು! ಇನ್ನು ದೇಹದ ಕೆಳ ಭಾಗದ ತೂತುಗಳ ಮಹತ್ವ ವಿವರವಾಗಿ ಚರ್ಚಿಸುವುದು ಕೈಲಾಸಂ ಹೇಳಿದಂತೆ  "ಅನುಚಿತ! ಅಪಾಯ!" ಆದ್ರೂ self explanatory, ಸರ್ವವಿದಿತ!  ಸಂಕ್ಷಿಪ್ತವಾಗಿ  ಹೇಳೋದಾದರೆ  ತೂತುಗಳಿಲ್ಲದಿದ್ದರೆ ನೀವಿಲ್ಲ ಮತ್ತು ನಾವಿಲ್ಲ.

ಚರ್ಮದಲ್ಲಿ ಸಣ್ಣ ತೂತು ಮಾಡಿ ರಕ್ತನಾಳಗಳಿಗೆ ಔಷಧ ಸೇರಿಸಲಾಗುವಂತೆ ಮಾಡುವ  ಸಿರಿಂಜ್‍ ತುದಿಯಲ್ಲಿನ  ಸೂಜಿಯಲ್ಲಿ ಇನ್ನೂ ಸಣ್ಣದಾದ ತೂತಿರೋದ್ರಿಂದ ತಾನೆ ಸಾಧ್ಯ? ತೂತಿಲ್ಲದಿದ್ದರೆ ಉಂಗುರ, ಬೆಂಡೋಲೆ, ಮೂಗುತಿ, ಕೊರಳ ಸರ ಸಾಧ್ಯವೇ?  ಹೊಲಿಯುವ ಸೂಜಿ, ಗೋಡೆಗೆ ಮೊಳೆ ಯಾವುದೂ ತೂತಿಲ್ಲದೆ ಸಾಧ್ಯವೇ ಇಲ್ಲ. ತೂತಿಲ್ಲದೆ ತುತ್ತೂರಿ ಬಾರಿಸೋಕ್ಕೆ ಆಗುತ್ತೆಯೇ?  ಸ್ವಲ್ಪ ಯೋಚಿಸಿ ನೋಡಿ! ಶ್ರೀ ಕೃಷ್ಣ ತೂತಿಲ್ಲದ ಕೊರಳು ಬಾರಿಸೋಕೆ ಆಗುತ್ತಿತ್ತೇ? ತೂತಿಲ್ಲದೆ ಗುಂಡು ಹಾರಿಸೋಕ್ಕೆ ಸಾಧ್ಯವೇ? ಹಾಗೆಯೇ ಗುಂಡು ಹಾಕೋದಕ್ಕೂ ಗಂಟಲಿನ ತೂತಿದ್ದರೆ ತಾನೆ ಸಾಧ್ಯ!!

ತೂತನ್ನು ತೂತು ಅಂತ ಅಸಡ್ಡೆ ಮಾಡಬೇಡಿ. ಕಾವೇರಿ ನೀರು ನಿಮ್ಮ ಮನೆ ಸೇರಬೇಕಾದರೆ ತೂತಿರೋ ನಳಿಕೆಗಳೇ ಇರಬೇಕಲ್ಲ! ಅಕಸ್ಮಾತ್ತ್ ನಳಿಕೆಯಲ್ಲಿಯೇ ತೂತಾಗಿ ನೀರು ನೆಲ ಸೇರಿದರೆ ನಿಮಗೆ ದೇವರೆ ಗತಿ! ಹಾಲೆಂಡ್ ದೇಶದಲ್ಲಿ ಸಮುದ್ರದ ಅಡ್ದ ಗೋಡೆಯಲ್ಲಿದ್ದ ತೂತನ್ನು ತನ್ನ ಮೈನಿಂದಲೇ ಒತ್ತಿ ಮುಚ್ಚಿದ ವೀರ ಬಾಲಕನ ಕಥೆ ಎಲ್ರೂ ಕೇಳಿರಬಹುದು. ತೂತು ದೊಡ್ಡದಾಗದಿರಲಿ ಅಂತ ತನ್ನ ಜೀವ ತ್ಯಾಗ ಮಾಡಿದ ಹುಡುಗ ಅವನು.  ಸೈಕಲ್,ಮೋಟರ್‍‍ಸೈಕಲ್, ಕಾರುಗಳಲ್ಲಿ ಓಡಾಡುವರಿಗೆಲ್ಲ ಚಕ್ರದ ಟ್ಯೂಬಿನಲ್ಲ್ಲಿ ತೂತಾಗಿ ಪಂಕ್ಚರ್ ಆದರಂತೂ ಅನುಭವಿಸುವ ಕಷ್ಟ ಪಟ್ಟವರಿಗೇ ಗೊತ್ತು.

ತೂತು ತೂತಾಗಿದ್ರೇನೆ ಒಳ್ಳೆಯದು. ಅದನ್ನ ದೊಡ್ಡದಾಗೋಕೆ ಬಿಟ್ರೆ ಕಿಂಡಿಯಾಗಿ ಬಿಡುತ್ತೆ. ಅಪಾಯ ಒಳಗೆ ನುಗ್ಗುತ್ತೆ. ಎಲ್ಲರೂ ಓಬವ್ವ ಅಲ್ಲವಲ್ಲ!

ಆಟಪಾಟಗಳಲ್ಲೂ ತೂತಿನ ಮಹತ್ವ ಕಡಿಮೆಯೇನಿಲ್ಲ. ಹಲವಾರು ಎಕರೆ ವಿಸ್ತೀರ್ಣದ ಹಸಿರು ಹುಲ್ಲುಗಾವಲಿನಲ್ಲಿ ಎಲ್ಲಿಯೋ ಹುದುಗಿರುವ ಸಣ್ಣ ತೂತುಗಳಲ್ಲಿ ಒಂದು ಬಿಳೀ ಚೆಂಡನ್ನು ತೂರಿಸುವ ಒಂದು ಶ್ರೀಮಂತರ ಆಟ ಗಾಲ್ಫ್. ಈ ಆಟದಲ್ಲಿ ಪರಿಣತರಾದವರಿಗೆ ನೂರಾರು ದಶಲಕ್ಷ ಡಾಲರ್ ಬಹುಮಾನಗಳೂ ದೊರೆಯುತ್ತೆ. ಹಾಗೆಯೇ ಬಡವರಿಗೆ ಸುಲಭವಾಗಿ ಲಭ್ಯವಾಗುವ ಆಂಬೋಡೆ ಸೈಜಿನ ಮರದ ತುಂಡುಗಳನ್ನು ಒಂದು ಚೌಕವಾದ ಮಣೆಯ ಮೂಲೆಯಲ್ಲಿರುವ ತೂತುಗಳಿಗೆ ಸೇರಿಸೋ ಆಟ ಕೇರಂ.

ಎಲ್ಲರ ಮನೆಯ ದೋಸೆಯಲ್ಲೂ ತೂತೆ. ಶ್ರೀವತ್ಸ ಜೋಶಿಯವರು ಹಿಂದೊಮ್ಮೆ ಅವರ ವಿಚಿತ್ರಾನ್ನದಲ್ಲಿ ಹೇಗೆ ಉತ್ತಪ್ಪ  (ರಾಬಿನ್ ಅಲ್ಲ!)ಮಾಡಿ ತೂತುಗಳನ್ನೆಲ್ಲ "ಕೊತ್ತಂಬ್ರಿಸೊಪ್ಪು, ಟೊಮೆಟೊ, ಮತ್ತು ಹಸಿಮೆಣಸುಗಳಿಂದ ಮುಚ್ಚಿಬಿಡ್ತಾರೆ ಅಂತ ಪ್ರಸ್ತಾಪಿಸಿದ್ದು ನೆನಪಿಗೆ ಬರಬಹುದು. ಇನ್ನು ಹಲವರ ಮನೆಯ ಕಾವಲಿಯಲ್ಲೂ ತೂತಂತೆ! ಖಗೋಳ ವಿಜ್ನಾನಿಗಳ ಪ್ರಕಾರ ಬ್ರಹ್ಮಾಂಡದಲ್ಲಿ ಲಕ್ಷಾಂತರ ಅತಿ ಭಾರವಾದ, ಅತಿ ಹೆಚ್ಚಿನ ಗುರುತ್ವಾಕರ್ಷಣೆಯಿಂದ ಬೆಳಕನ್ನೂ ಹೊರಬಿಡಲಾರದ "ಕರಿ ತೂತು" (Black holes)ಗಳಿವೆಯಂತೆ. ನಮ್ಮ ಭೂಮಿಯ ವಾತಾವರಣದಲ್ಲಿ ಅತಿ ಎತ್ತರದಲ್ಲಿರುವ ಓಝೋನ್ ಮೇಲ್ಪದರದಲ್ಲಿ ಕೂಡ ತೂತಾಗಿದ್ದು ಭೂಮಿಗೆ ಅಪಾಯಕಾರಿಯಾಗಿದೆಯಂತೆ.

"ಸರ್ವಂ ತೂತುಮಯಂ ಬ್ರಹ್ಮಾಂಡಂ" ಅಂತ ಘಂಟಾಘೋಷವಾಗಿ ಹೇಳಬಹುದಲ್ಲವೇ? (ಸಂಸ್ಕೃತ ಪಂಡಿತರು ಕ್ಷಮಿಸಿಬಿಡಿ)

ದಿವಂಗತ ಜಿ. ಪಿ. ರಾಜರತ್ನಂ  ಅವರೇನಾದರೂ ಇಂದು ಜೀವಂತವಾಗಿದ್ದಿದ್ದರೆ

"ತೂತಿನ ಮಾತ್ವ ತಿಳ್ಕೊಳ್ದೇನೆ ಮುಚ್ಬಾರ್ದದ್ನ ಸುಮ್ಕೆ.  

ಯಾವ್ ತೂತ್ನಾಗ್ ಏನ್ ಹೊಕ್ಕೈತೋ ತೂರ್ಕೊಂಡ್ ನೋಡ್ಬೇಕ್ ಒಳ್ಗೆ"

ಅಂತ ತಮ್ಮ "ಕುಡುಕರ್ ಮಾತ್ವ" ಕವಿತೇನ ತಿರುಚಿ ಬರೀತಾಯಿದ್ರೋ ಏನೋ!  ಯಾರಿಗ್ಗೊತ್ತು?

ಅರುವತ್ತರ ದಶಕದಲ್ಲಿ ಹ್ಯಾರಿ ಬೆಲಾಫಾಂಟೆ ಮತ್ತು ಆಡೆಟ್ಟೆ ಅವರು ಹಾಡಿ ಜಗತ್ತಿನಲ್ಲೆಲ್ಲ ಪ್ರಸಿದ್ಧ ಪಡಿಸಿದ  " there is a hole in the  bucket"  ಹಾಡನ್ನು ಕೇಳಿ ಆನಂದ ಪಟ್ಟವರದೆಷ್ಟೋ ಮಂದಿ.

ಕರ್ನಾಟಕ ಪ್ರಹಸನ ಪ್ರಪಿತಾಮಹ ಕೈಲಾಸಂಗೂ ತೂತುಗಳ ಬಗ್ಗೆ ಬಹಳ ಕಳಕಳಿಯಿದ್ದಂತೆ ತೋರುತ್ತೆ.

ಅವರ "ಟೊಳ್ಳು ಗಟ್ಟಿ" ನಾಟಕದಲ್ಲಿ ನಾಟಕಕರ್ತ ಗುಂಡೂರಾಯ  ಮತ್ತು ಅವನ ಸಹಾಯಕ ಸುಬ್ಬುವಿನ ನಡುವಿನ  ಒಂದು ಸಂಭಾಷಣೆ ಜ್ನಾಪಕಕ್ಕೆ ಬಂತು. ಅದರ ಸ್ಯಾಂಪಲ್ ಹೀಗಿದೆ.

ಗುಂಡೂ: ಸುಬ್ಬೂ ... ಪ್ರಥಮ್ತಃ ಇದ್ನಾಟ್ಕವೇ ಅಲ್ಲ! ಇದು ಲೆಕ್ಚ್ರು! ನಿನಿಜ್ನಾಪ್ಕವಿದೆಯೇ ಸುಬ್ಬೂ! ಸ್ಕೂಲ್ಡೇಸ್‍ನಲ್ಲಿ.....

ನಮ್ಮೇಷ್ಟ್ರುಗ್ಳು  ಕೊಟ್ಟ ಲೆಕ್ಚ್ರುಗಳು.. ಕೇಳೋದು ಅಂದ್ರೆ ಎಷ್ಟೋ ಅನಿಷ್ಟ...ಜಲಹುತಭುಕನ್ಯಾಯ! ( ಹರಿದು    ಹೋಗಿರುವ ತನ್ನ ಕಿಸೆಯಲ್ಲಿ ಕೈಯನ್ನಿಟ್ಟು ಅದರ ತೂತಿನಲ್ಲಿ ತನ್ನ ಬೆರಳುಗಳನ್ನು ಇಳೀಬಿಟ್ಟು ಕೈಯಾಡಿಸುತ್ತಾ)... ಅದಕ್ಕೇ ಈ ಸ್ಥಿತೀಗೆ ಬಂದಿರೋದು.... ಅಂತಿಟ್ಕೋ.  ಏನ್ Holeso (ಹೋಲ್ಸೋ?) ಈ ಹೊಲಸು ಕೋಟು....ಹೊಲಿಸ್ಬೇಕು...ಸುಬ್ಬೂ! ನಿನ್ನ ಷರ್ಟ್ನಲ್ಲಿ ತೂತುಗ್ಳೇನಾದ್ರೂ ಇದೆಯೋ?

ಸುಬ್ಬೂ: ಇಲ್ವಲ್ಲಾ!

ಗುಂಡೂ: ನೆಗದುಬಿದ್ದೆ...ಹಾಗಾದ್ರೆ!  ನಿನ್ನ ಕೈಗಳು ತಲೆ , ಹ್ಯಾಗೆ ಇಳೀಬಿಟ್ಟೆ!....

ನಾವುಗಳು ಹಾಕ್ಕೊಳ್ಳೋ ಷರ್ಟ್‍ಗೆ ತೂತುಗಳದೆಷ್ಟು ಮುಖ್ಯ ಅಂತ ಅರಿವಾದದ್ದೆ ಈ ನಾಟಕ ಓದಿದಾಗ. ಇನ್ನೊಂದು ಕಡೆ ಷರ್ಟಿನ ಗುಂಡಿಗಳನ್ನು ಕೆಳಗಿನ ತೂತು(ಕಾಜಾ)ಗಳಿಗೆ ಹಾಕಿಕೊಂಡಿದ್ದವನನ್ನು "ಇದೇನು ಅಠಾರಾ ಕಚೇರಿ ಅರೇಂಜ್‍ಮೆಂಟು. ಕಾಜಾಗಳಿಗೆಲ್ಲ ಪ್ರಮೋಷನ್ನು, ಗುಂಡಿಗಳಿಗೆಲ್ಲ ಡಿಮೋಷನ್ನು" ಅಂತ ಲೇವಡಿ ಮಾಡಿದ್ದರು.

ಇನ್ನೊಮ್ಮೆ ಒಬ್ಬ ಹುಡುಗ ಕೈಲಾಸಂ ಅವರನ್ನು ಉದ್ದೇಶಿಸಿ " ಸಾರ್, ಈ ಸೊಳ್ಳೆ ಪರದೇನ ಹ್ಯಾಗೆ ಸಾರ್ ಮಾಡ್ತಾರೆ?" ಅಂತ  ಕೇಳಿದ್ನಂತೆ. ಅದಕ್ಕೆ ಅವರು " ಅದೇನ್ ಮಹಾ ಕಷ್ಟ ಮಗೂ! ಬಹಳ ಸಿಂಪಲ್ಲು! ಒಂದು ಡಬ್ಬಿ ತೊಗೊಳ್ಳೋದು. ಅದರ ತುಂಬಾ ತೂತುಗಳ್ನ ತುಂಬ್ಕೊಳ್ಳೋದು. ಆಮೇಲೆ ದಾರ ತೊಗೊಂಡು ಒಂದು ತೂತ್ಗು ಮತ್ತೊಂದ್ ತೂತ್ಗೂ ಗಂಟ್ ಹಾಕ್ತಾ ಹೋಗೋದು. ಸೊಳ್ಳೇ ಪರದೆ ತಯಾರ್‍!"

ಹೀಗೆ ತೂತಿನ ಬಗ್ಗೆ ಬರೀತಾ ಹೋಗ್ಬೋದು. ಯಾಕೇಂದ್ರೆ ಕೆಲವು ತೂತುಗಳು ತಳವಿಲ್ಲದ ತೂತುಗಳು (bottomless holes) ಅಂತ ಮೊದಲೇ ಹೇಳಿದ್ನಲ್ಲ! ಹೀಗೆ ಹೆಣೆದ ತೂತಿನ ಪರದೇಲಿ ಓದುಗರು ಮಾತ್ರ ತೂತುಗಳ್ನ ಪಂಚ್ ಮಾಡೋ ಪ್ರಯತ್ನ ಮಾಡದಿರಲಿ ಅಂತ ಬಿನ್ನಹ ಮಾಡುತ್ತ ಈ ತೂತಿನ ಲೇಖನ ಮುಚ್ಚುತ್ತೇನೆ.

ಪ್ರೇರೇಪಿಸಿದ್ದಕ್ಕೆ ಜೋಶಿಯವರಿಗೆ  ಧನ್ಯವಾದ ಅರ್ಪಿಸಿ. ಇಷ್ಟವಾಗಿಲ್ಲದಿದ್ದರೆ ಮನಸ್ಸಿನ ಯಾವುದಾದರೂ ಮೂಲೆಯಲ್ಲಿನ  ತೂತಿನಲ್ಲಿ ತುರುಕಿ ಮರೆತುಬಿಡಿ!

**************************************************************

( ಮೇಲಿನ ಲೇಖನ thatskannada.com -http://thatskannada.oneindia.in/column/humor/2007/3112-whole-story-about-hole.html ನಲ್ಲಿ ೩೧-೧೨-೨೦೦೭ ರಂದು ಪ್ರಕಟಿಸಲಾಯಿತು)