ಹೊಸ ವರ್ಷಕ್ಕೆ ನನ್ನ ರಿಸಲ್ಯೂಷನ್

ಹೊಸ ವರ್ಷಕ್ಕೆ ನನ್ನ ರಿಸಲ್ಯೂಷನ್

ಹೊಸ ವರ್ಷಕ್ಕೆ ನಾನೂ ಒಂದು ರಿಸಲ್ಯೂಷನ್ ಮಾಡಿದೆ. ‘ಸಮಾಜ ಸೇವೆಗೆ ನನ್ನ ಜೀವನವನ್ನು
ಮುಡಿಪಾಗಿಡುವುದು’. ಹೇಗೆ ಯಾವ ರೀತಿ ಸುರುಮಾಡುವುದು ಗೊತ್ತಿರಲಿಲ್ಲ. ಯಾವಾಗ ದಕ್ಷ
ಪೋಲೀಸ್ ಅಧಿಕಾರಿಯೊಬ್ಬರು ರೌಡಿಗಳನ್ನು ನಿಗ್ರಹಿಸಿ,ಸಮಾಜದಲ್ಲಿ ಶಾಂತಿ ಕಾಪಾಡುವ ವೃತ್ತಿ ಬಿಟ್ಟು ರಾಜಕೀಯಕ್ಕೆ ಸೇರಲು ನಿರ್ಧರಿಸಿದರೋ, ನಾನೂ ನನ್ನ ಕೆಲಸ ಬಿಡಲು ತೀರ್ಮಾನಿಸಿದೆ.
‘ಅವರಿಗಾದರೆ ಹೆಸರಿದೆ.ಯಾವುದೇ ಪಕ್ಷದವರು ಸೇರಿಸಿಕೊಂಡಾರು. ನಿನಗೇನಿದೆಯಯ್ಯಾ?’ ಎಂದಿರಾ? ನನಗಾಗಿ ಒಂದು ಪಕ್ಷ ಕಾದಿದೆ. ಆ ಪಕ್ಷದಿಂದ ಇಲಕ್ಷನ್‌ಗೆ ನಿಲ್ಲಲು ಅಭ್ಯರ್ಥಿಗಳೇ ಇಲ್ಲ ಎಂಬ ಸುದ್ದಿ ನನಗೆ ಸಿಕ್ಕಿದೆ. ನನ್ನ ಯೋಗ್ಯತೆಗಳ ಪಟ್ಟಿ (ಬಯೋಡೇಟಾ) ನೋಡಿ-ಸ್ಯಾಂಪ್‌ಲ್‌ಗೆ ಒಂದೆರಡು ನಿಮಗೆ ಹೇಳುವೆ-ಎದುರಿಗೆ ನಿಂತು ಹೋರಾಡುವಷ್ಟು ಬಲಶಾಲಿ ನಾನಲ್ಲವಾದುದರಿಂದ ‘ಬೆನ್ನಿಗೆ ಚೂರಿ’ ಹಾಕುವ ವಿದ್ಯೆ ನನಗೆ ಕರಗತವಾಗಿದೆ. ನಾನಿರುವ ಕಂಪನಿಯ ಮೊದಲ ಬಾಸ್‌ನ್ನು ೧೯ ತಿಂಗಳಿಗೆ, ಈಗಿನ ಬಾಸ್ ಒಂದು ವಾರಕ್ಕೆ ಕೆಲಸ ಬಿಟ್ಟು ಹೋಗುವಂತೆ ಮಾಡುವಲ್ಲಿ ನನ್ನ ಕೈವಾಡವಿದೆ ಎಂದು ಎಲ್ಲರೂ ಹೇಳುವರು.
ಈಗಲೂ ನಿಮಗೆ ನಾನು ಗೆಲ್ಲುವ ಬಗ್ಗೆ ಸಂಶಯವಿದೆ. ಹೌದಾ? ಹಾಗಿದ್ದರೆ ನನಗೆ ಪಾರ್ಟಿ ಟಿಕೆಟ್ ಸಿಗುವ ಬಗ್ಗೆ ನಿಮಗೆ ಸಂಶಯವಿಲ್ಲ ಅಲ್ವಾ? ಸಂತೋಷ. ನೋಡಿ, ಗೆಲುವು ಸಹ ನನಗೆ ಕಟ್ಟಿಟ್ಟ ಬುತ್ತಿ. ಅದು ಹೇಗೆ ಎಂದು ಹೇಳುತ್ತೇನೆ ಕೇಳಿ. ಹೇಗೂ ನೀವು ನನ್ನ (ಸಂಪದ) ಬಳಗದವರು.ನಿಮ್ಮ ಹತ್ತಿರ ಏನು ಮುಚ್ಚುಮರೆ. ಉಳಿದ ಪಾರ್ಟಿಗಳಲ್ಲಿ ದಿನವೂ ನಡೆಯುವ ಕಚ್ಚಾಟ,ಹೊಡೆದಾಟ ಟಿ.ವಿ.ಯಲ್ಲಿ ನೋಡುತ್ತಿದ್ದೀರಿ. ಒಮ್ಮೆ ಇಲಕ್ಷನ್ ಅನೌನ್ಸ್ ಆದ ಕೂಡಲೇ ಅದು ಇನ್ನೂ ಹೆಚ್ಚಾಗುವುದು. ಜನಕ್ಕೆ ಈ ಪಾರ್ಟಿಗಳ ಬಗ್ಗೆ ಬೇಸರವಾಗುವುದು. ನಮ್ಮ ಪಾರ್ಟಿಯಲ್ಲಿ ಹೊಡೆದಾಡಲು ಜನವೇ ಇಲ್ಲ! ಪಾರ್ಟಿ ಯಜಮಾನರು ಒಂದೆರಡು ಹನಿ ಕಣ್ಣೀರು ಸುರಿಸಿದರೆ ಸಾಕು, ಜನರ ಸಹಾನುಭೂತಿಯೂ ನಮ್ಮ ಕಡೆಗೆ.
‘ಸಮಾಜಸೇವೆ ಸರಿ, ಗೆದ್ದ ಮೇಲೆ ಕನ್ನಡಕ್ಕಾಗಿ ಏನು ಮಾಡುತ್ತೀ?’ ಎಂದಿರಾ? ಅಂದರೆ ನನ್ನ ಗೆಲುವಿನ ಬಗ್ಗೆ ನಿಮಗೆ ಸಂಶಯವಿಲ್ಲ.ಅಲ್ವಾ? ಕನ್ನಡ ಭಾಷೆಗಾಗಿ... .. ಸ್ವಲ್ಪ ತಡೆಯಿರಿ.ಎಲ್ಲಾ ನಾನು ಈಗಲೇ ಹೇಳಬೇಕಾ? ಇಲಕ್ಷನ್ ಅನೌನ್ಸ್ ಆಗಲಿ..

Rating
No votes yet

Comments