ನಮ್ಮೂರಿನ ಸಾಮಾನ್ಯ ಅಸಾಮಾನ್ಯರು - ಮುಂದುವರೆದುದು

ನಮ್ಮೂರಿನ ಸಾಮಾನ್ಯ ಅಸಾಮಾನ್ಯರು - ಮುಂದುವರೆದುದು

ಬರಹ

ಸಾಧನೆಯ ಮಾನದಂಡ ಏನೆಂದು ಎಷ್ಟೋ ಬಾರಿ ಯೋಚಿಸಿದ್ದೇನೆ. ಆದರೆ ಬೇರೆಯವರಿಗಿರಲಿ ಸ್ವತ: ನನಗೇ ಎಲ್ಲ ದೃಷ್ಟಿಯಿಂದ ಸಮಂಜಸವೆನ್ನಿಸಿದ ಉತ್ತರ ಇನ್ನೂ ಹೊಳೆದಿಲ್ಲ. ಶ್ರೀಮಂತನೋ, ಅಧ್ಯಾಪಕನೋ, ರಾಜಕಾರಣಿಯೋ, ಸಂಗೀತಗಾರನೋ ಅಥವಾ ವಾಣಿಜ್ಯೋದ್ಯಮಿಯೋ ಆದರೆ ಮಾತ್ರ ಅದು ಸಾಧನೆಯ ಶಿಖರವೆ? ಯಾರ ಹಂಗಿಲ್ಲದೆ, ಯಾರಿಗೂ ತೊಂದರೆ ಕೊಡದೆ ಎಲೆಮರೆಯ ಹೂವಿನಂತೆ ಬದುಕುವುದು ಸಾಧನೆಯಲ್ಲವೆ? ಎಲ್ಲ ಸ್ತರದಲ್ಲೂ ಸರಳ ಆದರೆ ಉತ್ತಮ ಬದುಕಿದೆ ಎನ್ನುವುದು ಹೊಳೆದರೂ ನಮಗೇಕೆ ಅದನ್ನು ಕಾರ್ಯರೂಪಕ್ಕೆ ತರುವುದಾಗುವುದಿಲ್ಲ? ಹೆಚ್ಚಿನವರಂತೆ ನಾನೂ ಹಣದ ಅವಲಂಬನೆಯೇ ಬದುಕಿನ ದೃಢ ಆಧಾರವೆಂದು ನಂಬಿದ್ದೇನೆಯೇ? ಈ ಕಾರಣಕ್ಕಾಗಿಯೇ ನನಗೆ ಇವರು ಮಾಡಿದ ಸಾಧನೆಯ ಬಗ್ಗೆ ಗುಪ್ತ ಈರ್ಷ್ಯಾಯುಕ್ತ ಮೆಚ್ಚುಗೆಯೇ? ಇರಬಹುದು. ಇದರಲ್ಲಿ ತಪ್ಪೇನೂ ಇಲ್ಲವೆಂದೇ ತೋರುತ್ತದೆ ನನಗೆ. ಇದು ನಮ್ಮೂರಿನ ಕೆಲ ಶ್ರೀಸಾಮಾನ್ಯರ ವಿಶಿಷ್ಟ ಪರಿಚಯವಾದರೂ ಈ ಬರಹದ ಮೂಲಕ ಅವರನ್ನು ಗುರುತಿಸಿ ಯಾರೂ ಅವರಿಗೆ ಮುಜುಗರ ಉಂಟುಮಾಡಬಾರದೆಂಬ ಕೇವಲ ಉದ್ದೇಶಕ್ಕೆ ನಾನು ಅವರ ಹೆಸರನ್ನು ಮರೆಮಾಚುತ್ತಿದ್ದೇನೆ. ಇಷ್ಟಕ್ಕೂ ಹೆಸರಿನಲ್ಲೇನಿದೆ ಅಲ್ಲವೆ?

ಹೂಹುಡುಗಿ

ಇವರು ಹುಡುಗಿಯಲ್ಲ, ಮಧ್ಯವಯಸ್ಕ ಹೆಂಗಸು. ಹೂಮಾರಾಟ ಈಕೆಯ ವೃತ್ತಿಯೂ ಅಲ್ಲ. ಈಕೆ ಹೂ ಮುಡಿದದ್ದನ್ನೂ ಯಾರೂ ನೋಡಿಲ್ಲ. ಆದರೂ ನಾನೇಕೆ ಈಕೆಯನ್ನು ಹೂಹುಡುಗಿಯೆಂದು ಕರೆಯಬೇಕು? ಇವರನ್ನು ನೋಡಿದರೆ ನನಗೆ ಸಂಸ್ಕೃತದ "ವಜ್ರಾದಪಿ ಕಠೋರಾಣಿ, ಮೃದೂನಿ ಕುಸುಮಾದಪಿ" ಎಂಬ ಉಕ್ತಿ ನೆನಪಿಗೆ ಬರುತ್ತದೆ. ಜೊತೆಗೆ ಇವರ ನಿಜವಾದ ಹೆಸರು ಕುಸುಮವಾಚಕ ಪದವಾಗಿದೆ. ನೋಡಲು ತೀರ ಭಿಕ್ಷುಕಿಯಂತೆ ಕಂಡರೂ ಈಕೆ ಭಿಕ್ಷುಕಿಯಲ್ಲ. ಬದಲಾಗಿ ಮಹಾಸ್ವಾಭಿಮಾನಿ. ನಾಯಿಹೊಡೆಯುವ ಕೋಲಿನಂತೆ ತೆಳುದೇಹ, ಸ್ನಾನಕ್ಕೆ ನಿತ್ಯ ಸಾಬೂನು ಕಾಣದ ದೇಹ, ಯಾರೋ ಉಟ್ಟು ಬಿಸಾಡಿದ ಸೀರೆ ರವಿಕೆ ಇವರ ಬಟ್ಟೆ. ಕೆಲವು ಸಾರಿ ಅಪರೂಪಕ್ಕೆ ಅವರಿವರು ಉಟ್ಟು ಬಿಟ್ಟ ದೊಗಲೆ ಶರ್ಟ್ ಕೂಡ ತೊಟ್ಟಿದ್ದನ್ನು ಕಾಣಬಹುದು. ಎಣ್ಣೆ ಕಾಣದ ಹಂಜಿಬುಟ್ಟಿಯಂತಹ ತಲೆ, ಹಳದಿ ಹಲ್ಲುಗಳು, ಮೆಳ್ಳಗಣ್ಣು, ನಕ್ಕರೂ ಅತ್ತಂಧ ಭಾವವೇ ಮುಖದಲ್ಲಿ. ಆದರೆ ಮಾತಿನಲ್ಲಿ ದೈನ್ಯದ ಲವವೂ ಇಲ್ಲ.

(ಮುಂದುವರೆಯುವುದು)