ಬಾಣಾವತಿಯ ಮಡಿಲ ಜಾರುಬಂಡಿ
ಘಟ್ಟದ ರಸ್ತೆಯಲ್ಲಿ ಬೈಕ್ ಓಡಿಸೋದು ಅಂದ್ರೆ ನನಗೆ ಯಾವತ್ತೂ ಖುಶಿನೇ. ನಾನು ಪದೆಪದೆ ಹೋಗೋದಕ್ಕೆ ಇಷ್ಟ ಪಡೋದು ಮಲೆಮನೆ ಘಟ್ಟದ ರಸ್ತೆಯಲ್ಲಿ. ಜೋಗದಿಂದ ಹೊನ್ನಾವರದವರೆಗಿನ ೬೨ ಕಿಮೀ ಪ್ರಯಾಣ ಅಂದ್ರೆ ಅದು ಶರಾವತಿಯ ಮಡಿಲ ಜಾರುಬಂಡಿ.
ಬ್ರಿಟಿಶ್ ಬಂಗಲೆಯಂಗಳದಿಂದ ಜೋಗಕ್ಕೊಮ್ಮೆ ಕಣ್ಣು ಹೊಡೆದು ಬೈಕ್ ಹತ್ತಿದರೆ ಮುಂದಿನ ದಾರಿ ನೀಡುವ ಅನುಭವ ಅಪೂರ್ವ. ಮಾವಿನಗುಂಡಿಯಲ್ಲಿ ಒಂದು ರಿಫ್ರೆಶಿಂಗ್ ಚಾ ಕುಡಿಯೋದು ಕಡ್ಡಾಯ. ಎಡ ಭಾಗದಲ್ಲಿ ಬಳುಕುತ್ತ ಹರಿಯುವ ಶರಾವತಿ ಮತ್ತು ಬಲಭಾಗದ ರಾಕ್ಷಸ ಗಾತ್ರದ ಗುಡ್ಡಗಳಿಂದ ಧುಮುಕುವ ಮಲೆಮನೆ ಜಲಪಾತ ಹಸಿರು ತಿರುವುಗಳನ್ನು ಕ್ರಮಿಸುವಾಗಲೆಲ್ಲ ಯಾವ ಕಡೆ ನೋಡಬೇಕೆಂಬ ಗೊಂದಲ ಹುಟ್ಟಿಸುತ್ತವೆ.
ಮಳೆಗಾಲದಲ್ಲಿನ ಮಂಜು, ಕೊರೆವ ಛಳಿಯಲ್ಲಿ ಅಲ್ಲಲ್ಲಿ ಮೈ ಬೆಚ್ಚಗಾಗಿಸಲೆಂದೆ ಇದೆಯೇನೋ ಎನ್ನಿಸುವ ಬಿಸಿಲಿನ ಜಾಗಗಳು, ಸುಡುವ ಬೇಸಿಗೆಯಲ್ಲೂ ಘಟ್ಟದುದ್ದಕ್ಕೂ ತಣ್ಣಗಿನ ಗಾಳಿ. ಇಳಿಸಂಜೆಯಲ್ಲಿ ಹೊರಟರೆ ಸೂರ್ಯ ಹೊನ್ನಾವರದ ಕಡಲಲ್ಲಿ ತಲೆ ಮರೆಸಿಕೊಳ್ಳುವವರೆಗೂ ಹಿಂಬಾಲಿಸುವ ವೇಗ ಅದು ಹೇಗೆ ನಮಗೆ ಬಂತು ಅನ್ನೊದೇ ಆಶ್ಚರ್ಯಕರ.
ಘಟ್ಟ ಇಳಿದ ಮೇಲೂ ರಸ್ತೆಯನ್ನಷ್ಟೇ ನೋಡೋದು ಕಷ್ಟ. ಹೊಳೆಸಾಲಿನ ಹಸಿರು ತೋಟ, ಕರಿಕಲ್ಲಿನ ಗುಡ್ಡ, ದೂರದಲ್ಲಿ ಮಿಂಚುವ ಸಮುದ್ರದ ನೀರು ಎಲ್ಲವೂ ಆ ರಸ್ತೆಗೆ ಮತ್ತೆ ಮತ್ತೆ ಆಹ್ವಾನಿಸುವ ಸಿಹಿ ಆಮಿಷಗಳು.