ಮುಂಬೈನ ಲೋಕಲ್ ಟ್ರೈನ್

ಮುಂಬೈನ ಲೋಕಲ್ ಟ್ರೈನ್

ಮುಂಬಯಿನ ಲೋಕಲ್ ಟ್ರೈನ್ ಗಳಲ್ಲಿ ಪ್ರಯಾಣ ಮಾಡಿ ಪಡೆಯುವ ಅನುಭವ ಎಲ್ಲರೂ ಕಲಿಯಲೇಬೇಕಾದಂತಹ ಇನ್ನೊಂದು ಪಾಠವನ್ನು ಕಲಿಸುವಂತದ್ದು. ಇದರ ಅನುಭವ ಕವನ ರೂಪದಲ್ಲಿ ನನ್ನಿಂದ ನಿರೂಪಿಸಲ್ಪಟ್ಟಿತ್ತು. ಅದನ್ನು ಈ ಕೆಳಗೆ ಇರಿಸಿರುವೆ. ಇನ್ನೂ ಹೆಚ್ಚಿನ ಸ್ವಾರಸ್ಯಕರ ಮಾಹಿತಿಯನ್ನು ಕೆಳಗೆ ತಿಳಿಸಲು ಪ್ರಯತ್ನಿಸಿದ್ದೇನೆ. ಕವನವನ್ನೂ ಕೆಳಗೆ ಸೇರಿಸಿರುವೆ, ಓದಿ. ಈ ಹಿಂದೆಯೇ ಹೇಳಿರುವಂತೆ ಮುಂಬಯಿ ಒಂದು ದ್ವೀಪ. ಎಲ್ಲ ಕಡೆಯೂ ನೀರು ಸುತ್ತುವರಿದು ಭೂಮಿಯ ಭಾಗ ಬಹಳ ಕಡಿಮೆ. ಹಾಗಾಗಿ ವಸತಿಗಾಗಿ ಸಿಗುವ ಜಾಗ ಬಹಳ ಕಡಿಮೆ. ಅಲ್ಲದೇ ಇದು ದೇಶದ ವಾಣಿಜ್ಯ ರಾಜಧಾನಿಯಾಗಿ ಇಲ್ಲಿ ವ್ಯಾಪಾರ ಮತ್ತು ವ್ಯವಹಾರಕ್ಕಾಗಿ ಬರುವ ಜನರು ಬಹಳ. ದಿನಂಪ್ರತಿ ಒಂದು ಕೋಟಿಗೂ ಮಿಕ್ಕ ಜನರ ಸಂದಣಿ ಇದ್ದೇ ಇರುತ್ತದೆ. ಒಂದೆಡೆಯಿಂದ ಇನ್ನೊಂದೆಡೆಗೆ ಹೋಗಿಬರಲು ಲೋಕಲ್ ಟ್ರೈನ್ ಗಳನ್ನೇ ನಂಬುವುದು ಬಹಳವಾಗಿ ಇದು ಬಹಳ ಅತ್ಯವಶ್ಯಕವಾದ ಸಾರಿಗೆಯಾಗಿದೆ. ಒಂದು ಸಾವಿರ ಜನರನ್ನು ಹೊತ್ತೊಯ್ಯಲು ಅವಕಾಶವಿರುವ ಒಂದು ಗಾಡಿಗೆ ೫೦೦೦ ದಿಂದ ೬೦೦೦ ಜನರವರೆಗೂ ಹೊತ್ತೊಯ್ಯಬೇಕಾಗುತ್ತದೆ. ಅದರಲ್ಲಿ ಅಷ್ಟು ಸಾಮರ್ಥ್ಯವಂತೂ ಇದ್ದಂತಿದೆ. ಅದೂ ಕೂಡ, ಬೆಳಗ್ಗೆ ೩.೪೫ ಕ್ಕೆ ಪ್ರಾರಂಭವಾಗುವ ಸೇವೆ, ರಾತ್ರಿ ೨ ಘಂಟೆಗಳವರೆಗೂ ನಿರಂತರ ಸಾಗುತ್ತಲೇ ಇರುವಂತದ್ದುು. ಜನದಟ್ಟಣೆಯ ಸಮಯವಾದ ಬೆಳಗ್ಗೆ ೬ರಿಂದ ರಾತ್ರಿ ೧೧ ರವರೆಗೆ ಮೂರು ನಿಮಿಷಗಳ ಅಂತರದಲ್ಲಿ ಒಂದೊಂದು ಗಾಡಿಗಳು ಒಂದರ ಹಿಂದೊಂದರಂತೆ ಬಿಡುವಿಲ್ಲದೇ ಅಡ್ಡಾಡುತ್ತಲೇ ಇರುತ್ತವೆ. ಲೋಕಲ್ ಟ್ರೈನ್ ಗಳು ಪಶ್ಚಿಮ ರೈಲ್ವೆಯ ಚರ್ಚ್ ಗೇಟ್ ನಿಂದ ೬೦ ಕಿಲೋಮೀಟರ್ ದೂರದ ವಿರಾರಿನವರೆಗೆ ಮತ್ತು ಕೇಂದ್ರ ರೈಲ್ವೆಯ ಛತ್ರಪತಿ ಶಿವಾಜಿ ಟರ್ಮಿನಸ್ ನಿಂದ ೧೦೦ ಕಿಲೋಮೀಟರ್ ದೂರದ ಕರ್ಜತ್ ಗೆ ಒಂದು ಕಡೆ ಮತ್ತು ೧೨೦ ಕಿಲೋಮೀಟರ್ ದೂರದ ಕಸಾರಗೆ ಇನ್ನೊಂದು ಕಡೆ ಹಬ್ಬಿದೆ. ಈ ಮಧ್ಯೆ ಹಾರ್ಬರ್ ಲೈನ್ ಎಂದು ಛತ್ರಪತಿ ಶಿವಾಜಿ ಟರ್ಮಿನಸ್ ನಿಂದ ೪೦ ಕಿಲೋಮೀಟರ್ ದೂರದ ಖಾರ್ ಗರ್ ವರೆಗೂ ಇದೆ. ಇದು ಕೊಂಕಣ ರೈಲ್ವೇಯ ಹಾದಿಯಲ್ಲಿದೆ. ಚರ್ಚ್ ಗೇಟ್ ನಿಂದ ಬೊರಿವಿಲಿ ಮತ್ತು ಛತ್ರಪತಿ ಶಿವಾಜಿ ಟರ್ಮಿನಸ್ ನಿಂದ ಕಲ್ಯಾಣದವರೆವಿಗೆ ನಾಲ್ಕು ಹಳಿಗಳಿವೆ. ಎರಡೆರಡು ಫಾಸ್ಟ್ ಮತ್ತು ಸ್ಲೋ ಗಾಡಿಗಳಿವೆ. ಅವುಗಳಲ್ಲಿ ಒಂದು ಹೋಗಲು ಮತ್ತೊಂದು ಬರಲು. ಹಾಗಾಗಿ ಗಾಡಿಗಳು ಒಂದಕ್ಕೊಂದು ಅಡ್ಡ ಬಂದು ಇನ್ನೊಂದಕ್ಕೆ ಜಾಗ ಮಾಡಿಕೊಡಬೇಕಾದ ಸಾಧ್ಯತೆ ಕಡಿಮೆ. ಫಾಸ್ಟ್ ನಿಂದ ಸ್ಲೋ ಟ್ರ್ಯಾಕ್ ಗೆ ಬದಲಿಸುವಾಗ ಮಾತ್ರ ಹಾಗೆ ಅಡ್ಡ ಬರುವ ಸಾಧ್ಯತೆಗಳು ಇರುತ್ತದೆ. ಮತ್ತೆ ಇಲ್ಲಿಯ ಸಿಗ್ನಲ್ ಪದ್ಧತಿಯಲ್ಲಿ ಹೆಚ್ಚಿನದಾಗಿ ಮಾನವ ಮಧ್ಯಸ್ಥಿಕೆ ಕಡಿಮೆ. ಎಲ್ಲವೂ ಆಟೊಮ್ಯಾಟಿಕ್. ಹೆಚ್ಚಿನ ಲೋಕಲ್ ಟ್ರೈನ್ ಗಳಲ್ಲಿ ೯ ಕೋಚ್ ಗಳಿವೆ. ಇಲ್ಲಿಯ ಜನಸಂದಣಿ ಪ್ರತಿ ದಿನವೂ ಹೆಚ್ಚುತ್ತಿದ್ದು ಈ ಗಾಡಿಗಳು ಜನರನ್ನು ಹೊತ್ತೊಯ್ಯಲು ಬಹಳ ಕಡಿಮೆ ಎನಿಸಿವೆ. ಹಾಗಾಗಿ ಕೆಲವು ಗಾಡಿಗಳಿಗೆ ೯ ರಿಂದ ೧೨ ಕೋಚ್ ಗಳನ್ನು ಸೇರಿಸಿದ್ದಾರೆ. ಈ ಗಾಡಿಗಳನ್ನು ಮೂರು ಮೂರು ಕೋಚ್ ಗಳ ಯೂನಿಟ್ ಗಳಾಗಿಿ ವಿಂಗಡಿಸಿದ್ದಾರೆ. ಎ, ಬಿ, ಸಿ ಎಂದು. ಎ ನಲ್ಲಿ ಅರ್ಧ ಭಾಗ ಮೊದಲ ದರ್ಜೆ ಮತ್ತರ್ಧ ಎರಡನೇ ದರ್ಜೆ. ಬಿ ಕೋಚ್ ನ ಮೇಲ್ಭಾಗದಲ್ಲಿ ಪೆಂಟೋಗ್ರಾಫ್. ಚಿ ನಲ್ಲಿ ಮೋಟಾರ್. ಹೀಗೆ ೯ ಕೋಚ್ ಗಾಡಿಗಳಲ್ಲಿ ಮೂರು ಮೋಟಾರ್ ಮತ್ತು ೧೨ ಕೋಚ್ಗಳಲ್ಲಿ ೪ ಮೋಟಾರ್ ಗಳು. ಪೆಂಟೋಗ್ರಾಫ್ ಅಂದ್ರೆ ಆರು ಮೂಲೆಯ ಕಬ್ಬಿಣದ ಕಡ್ಡಿ ಮೇಲ್ಗಡೆ ಹಾಯುವ ವಿದ್ಯುತ್ ತಂತಿಗೆ ತಗುಲಿಕೊಂಡಿರುತ್ತದೆ. ಇಲ್ಲಿ ಇದಕ್ಕಾಗಿಯೇ ವಿಶೇಷವಾಗಿ ವಿದ್ಯುತ್ ಸರಬರಾಜಿನ ವ್ಯವಸ್ಥೆ ಮಾಡಿದ್ದಾರೆ. ವಿದ್ಯುತ್ ಕಡಿತ ಆಗುವ ಸಾಧ್ಯತೆಗಳು ಬಹಳ ಕಡಿಮೆ. ಇತ್ತೀಚೆಗೆ ಜನದಟ್ಟಣೆ ಜಾಸ್ತಿಯಾಗಿ ರೈಲ್ವೇ ಸಾರಿಗೆಯಲ್ಲಿ ಸುಧಾರಣೆ ತರಲು ಜಪಾನಿನ ತಂತ್ರಜ್ಞರನ್ನು ಕರೆಸಿದ್ದರು. ಇಲ್ಲಿಯ ಸಿಗ್ನಲಿಂಗ್ ವ್ಯವಸ್ಥೆಯನ್ನು ಪರೀಕ್ಷಿಸಿದ ಆ ತಂತ್ರಜ್ಞರು - ನಮಗೆ ಹೆಚ್ಚಿಗೇನೂ ಹೊಳೆಯುತ್ತಿಲ್ಲ, ಇದಕ್ಕಿಂತ ಇನ್ನೇನೂ ಹೆಚ್ಚು ಸುಧಾರಣೆ ಮಾಡಲಾಗುವುದಿಲ್ಲ, ಇನ್ನೂ ನಾವೇ ಇದರಿಂದ ಕಲಿಯಬೇಕಿದೆ ಎಂದರಂತೆ. ಈ ಸಿಗ್ನಲಿಂಗ್ ವ್ಯವಸ್ಥೆಯನ್ನು ತಂದವರು ಬ್ರಿಟಿಷರು. ನೋಡಿ ಇಷ್ಟು ವರ್ಷಗಳಾದರೂ ಎಂದೂ ಕೆಡದೇ ನಿರಂತರವಾಗಿ ಕೆಲಸ ಮಾಡುತ್ತಿದೆ. ಇನ್ನು ಲೋಕಲ್ ಸ್ಟೇಷನ್ ಗಳ ಅಂತರ ೧ ಕಿಲೋಮೀಟರ್ ನಿಂದ ಹಿಡಿದು ೪-೫ ಕಿಲೋಮೀಟರ್ ಗಳವರೆಗಿವೆ. ಪ್ರತಿ ಸ್ಟೇಷನ್ ಗಳಲ್ಲೂ ಗಾಡಿ ೧೫ ರಿಂದ ೨೦ ಸೆಕೆಂಡ್ ಗಳಷ್ಟು ಕಾಲ ನಿಲ್ಲುವುದು. ಅಷ್ಟರೊಳಗೆ ಇಳಿಯುವವರು ಇಳಿದು ಹತ್ತುವವರು ಹತ್ತಬೇಕು. ಹತ್ತುವವರು ಬಾಗಿಲಿನ ಕೊನೆಗಳಲ್ಲೂ ಇಳಿಯುವವರು ಮಧ್ಯ ಭಾಗದಲ್ಲೂ ಇಳಿಯುವರು. ಮದುಕರು, ಮಕ್ಕಳು, ಹುಡುಗರು, ಇತ್ಯಾದಿಗಳೆಲ್ಲರೂ ಈ ವ್ಯವಸ್ಥೆಗೆ ಹೊಂದಿಕೊಂಡಿದ್ದಾರೆ. ಇಂತಹ ಸ್ಥಿತಿಯನ್ನು ನಮ್ಮೂರುಗಳಲ್ಲಿ ಕಾಣಬಹುದೇ? ನಿಲ್ದಾಣ ಬಂದ ಮೇಲೆ ಜಾಗ ಬಿಟ್ಟು ಮೇಲೇಳುವವರು ಇಷ್ಟು ಅಲ್ಪಾವಧಿಯಲ್ಲಿ ಇಳಿಯುವರೇ? ಈ ಹಳಿಗಳ ಮೂಲಕ ಮುಂಬಯಿಯನ್ನು ಸೇರಿಸಿರುವುದು ನೋಡಿದರೆ ಮಾನವನ ದೇಹದಲ್ಲಿರುವ ನರ ನಾಡಿಗಳ ನೆನಪಾಗುವುದು. ಹಾಗೆಯೇ ರೈಲ್ವೇ ಸೇವೆ ನಿಂತು ಹೋದರೆ, ಇಡಿಯ ನಗರದ ಜನಜೀವನವು ನಿಂತು ಹೋಗುವುದು. ಹಾಗಾಗಿ ಇದನ್ನು ನಗರದ ಜೀವನಾಡಿ ಎಂದು ಕರೆಯುವರು. ಇನ್ನು ಈ ಲೋಕಲ್ ಟ್ರೈನ್ ಜನಗಳಿಗೆ ಜೀವನಾಧಾರ ಎಂಬುದೂ ಸತ್ಯದ ಮಾತು. ಒಬ್ಬ ಭಿಕ್ಷುಕ ಒಂದು ಮೂಲೆಯಿಂದ ಇನ್ನೊಂದು ಮೂಲೆಗೆ ಹೋಗುವುದರೊಳಗೆ, ರೂ. ೩೦೦ ಸಂಪಾದಿಸಿರುತ್ತಾನೆ. ಮುಂಬಯಿ ಯಾರಿಗೇ ಆಗಲಿ ಜೀವನಕ್ಕೆ ಮಾತ್ರ ಮೋಸ ಮಾಡುವುದಿಲ್ಲ. ಅದಕ್ಕಾಗಿಯೇ ಇತರ ಸ್ಥಳಗಳಿಂದ ಇಲ್ಲಿಗೆ ಬರುವವರ ಸಂಖ್ಯೆ ಹೆಚ್ಚುತ್ತಲೇ ಇದೆ. ಈ ಸಮಯದಲ್ಲಿ ಸ್ಥಳೀಯ ಪತ್ರಿಕೆಯೊಂದರಲ್ಲಿ ಪ್ರಕಟವಾದ ಒಂದು ಸ್ವಾರಸ್ಯವಾದ ವರದಿಯನ್ನು ಪ್ರಸ್ತುತಪಡಿಸಲಿಚ್ಛಿಸುವೆ. ಖಾರ್ ಬಡಾವಣೆಯ ಒಂದು ಮುಖ್ಯ ರಸ್ತೆಯ ಟ್ರಾಫಿಕ್ ಸಿಗ್ನಲ್ ನಲ್ಲಿ ಒಬ್ಬ ಭಿಕ್ಷುಕ ಪ್ರತಿ ನಿತ್ಯ ಕಾಣಬರುವ. ಅಲ್ಲಿಯೇ ರಸ್ತೆಯ ಬದಿಯಲ್ಲಿ ಒಂದು ಗುಡಿಸಲು ಮಾಡಿಕೊಂಡು ವಾಸಮಾಡುತ್ತಿರುವ. ಅವನಿಗಿಬ್ಬರು ಮಕ್ಕಳು. ಅವರನ್ನೂ ಮತ್ತು ಅವನ ಹೆಂಡತಿಯನ್ನೂ ಈ ವೃತ್ತಿಗೆ ತೊಡಗಿಸಿದ್ದಾನೆ. ಈ ಪತ್ರಿಕೆಯವರು ಲೋಕಾರೂಢಿಯಾಗಿ ಅವನ ಸಂದರ್ಶನ ತೆಗೆದುಕೊಂಡಾಗ ತಿಳಿದುಬಂದ ವಿಷಯ - ಅವನಿಗೆ ದೂರದ ವಿರಾರ್ ನಲ್ಲಿ ಎರಡು ಫ್ಲಾಟ್ ಗಳು ಇದ್ದು ಅವುಗಳನ್ನು ಬಾಡಿಗೆಗೆ ಕೊಟ್ಟಿದ್ದಾನೆ. ತಿಂಗಳಿಗೆ ೨೦೦೦ ರೂಪಾಯಿ ಬಾಡಿಗೆ ಬರುತ್ತದೆ. ಸೊಲ್ಲಾಪುರದಲ್ಲಿ ಒಂದು ಸೈಟ್ ಖರೀದಿ ಮಾಡಿದ್ದಾನೆ. ಇಲ್ಲಿ ಭಿಕ್ಷೆಯಿಂದ ಅವನ ಸಂಸಾರದ ತಿಂಗಳ ವರಮಾನ ರೂ. ೬೦೦೦/- ದಿಂದ ೮೦೦೦/-. ಹೀಗಾಗಿ ಮಕ್ಕಳಿಗೆ ಶಾಲೆಗೇ ಕಳುಹಿಸಲಿಲ್ಲ, ಇದೇ ವೃತ್ತಿಗೆ ತೊಡಗಿಸಿದ್ದಾನೆ. ಅವನು ಹೇಳಿದ ಪ್ರಕಾರ ಇಂತಹ ಉಚ್ಚ ದರ್ಜೆಯ ಭಿಕ್ಷುಕರು ಮುಂಬಯಿಯಲ್ಲಿ ಇನ್ನೂ ಇದ್ದಾರೆ. ನೋಡಿ ಎಷ್ಟು ಸುಲಭದಲ್ಲಿ ಜೀವನದ ಹಾದಿ ರೂಪಿಸಿಕೊಂಡಿದ್ದಾರೆ. ಲೋಕಲ್ ಟ್ರೈನ್ ನಲ್ಲಿದ್ದವನು ಇಳಿದು ಎಲ್ಲಿಗೋ ಹೋಗಿಬಿಟ್ಟೆ. ತಿರುಗಿ ಆ ವಿಷಯಕ್ಕೇ ಬರೋಣ. ಈ ಟ್ರೈನ್ ಗಳಲ್ಲಿ ಮೊದಲ ದರ್ಜೆ ಮತ್ತು ಎರಡನೆ ದರ್ಜೆ ಎಂದು ಎರಡು ವಿಧವಿದೆ. ಅದಲ್ಲದೇ ಒಂದು ಬೋಗಿಯ ಸ್ವಲ್ಪ ಭಾಗವನ್ನು ಅಂಗವಿಕಲರಿಗಾಗಿ ಪ್ರತ್ಯೇಕವಾಗಿಟ್ಟಿದ್ದಾರೆ. ಮೊದಲ ದರ್ಜೆಯಲ್ಲಿ ಸೋಫಾದಂತಿರುವ ಸೀಟು. ಅದರಲ್ಲಿ ಮೂರು ಜನ ಕುಳಿತುಕೊಳ್ಳುವರು. ಎರಡನೆ ದರ್ಜೆಯಲ್ಲಿ ಮೂರು ಜನಗಳಿಗೆಂದು ಇರುವ ಮರದ ಸೀಟಿನಲ್ಲಿ ನಾಲ್ಕು ಜನಗಳು ಕಡ್ಡಾಯವಾಗಿ ಕುಳಿತುಕೊಳ್ಳುವರು. ಇನ್ನು ಅವರುಗಳದ್ದೇ ಗುಂಪಿದ್ದರೆ ಒಬ್ಬರ ತೊಡೆಯ ಮೇಲೆ ಇನ್ನೊಬ್ಬರು ಕುಳಿತುಕೊಳ್ಳುವರು. ಇನ್ನು ಗಾಡಿ ಬರುತ್ತಿದ್ದಂತೆಯೇ ಸೀಟು ಹಿಡಿಯಲಿಕ್ಕಾಗಿ ಹಾರುವುದನ್ನು ನೋಡಲು ಬಲು ಮಜ. ಅದರಲ್ಲೂ ಮುದುಕರು ಹುಡುಗರಲ್ಲೂ ಸ್ಪರ್ಧೆ. ಇದರ ಮಧ್ಯೆ ಜಗಳಗಳು ಸರ್ವೇ ಸಾಮಾನ್ಯ. ಬೆಳಗಿನ ಮತ್ತು ಸಂಜೆಯ ಸಮಯದಲ್ಲಿ ಸೀಟು ಹಿಡಿಯಲಿಕ್ಕಾಗಿ ಒಂದೆರಡು ಸ್ಟೇಷನ್ ಹಿಂದಕ್ಕೆ ಹೋಗಿ ಬರುವರು. ಇನ್ನು ಸೀಟು ಸಿಕ್ಕ ತಕ್ಷಣ ಮಾಡುವ ಮೊದಲ ಕೆಲಸವೆಂದರೆ ಕಣ್ಣು ಮುಚ್ಚಿಕೊಳ್ಳುವುದು. ನಿದ್ದೆಯೇನೂ ಮಾಡುವುದಿಲ್ಲ ಆದರೆ ನಿದ್ದೆಯ ನಾಟಕ ಮಾಡುವರು. ಇಂತಹವರಲ್ಲಿ ಮಧ್ಯ ವಯಸ್ಕರೇ ಹೆಚ್ಚು. ಕೆಲವು ವರ್ಷಗಳ ಹಿಂದೆ ಫೆವಿಕಾಲ್ ಗೋಂದಿನ ಮತ್ತು ಪೈಲ್ಸ್ ಕ್ಲಿನಿಕ್ ಗಳ ಅಡ್ವರ್ಟೈಸ್ ಮೆಂಟ್ ಗಳನ್ನು ತೋರಿಸಿ ಪುಂಡ ಹುಡುಗರುಗಳು ಅವರನ್ನು ಆಡಿಕೊಳ್ಳುವುದೂ ವಾಡಿಕೆಯಾಗಿತ್ತು. ಇಷ್ಟಾದರೂ ಅವರೇನು ಕಣ್ಣು ತೆರೆಯುತ್ತಿರಲಿಲ್ಲ. ಕಣ್ಣು ತೆರೆದರೆ ತಾನೇ ನಿಂತಿರುವ ಮುದುಕರು, ಮಕ್ಕಳು, ಗರ್ಭಿಣಿ ಹೆಂಗಸರು ಮುಂತಾದವರನ್ನು ನೋಡಬೇಕಾದೀತು, ಎದ್ದು ಸೀಟು ಕೊಡಬೇಕಾದೀತು. ಇನ್ನು ಕೆಲವರು ಪತ್ರಿಕೆಗಳನ್ನು ಓದುವರು, ಪದಬಂಧ ಬಿಡಿಸುವರು - ಪದಬಂಧಕ್ಕಾಗಿಯೇ ಕೆಲವು ಪತ್ರಿಕೆಗಳು ಇವೆ. ಕೆಲವರು ಗುಂಪು ಗುಂಪಾಗಿದ್ದರೆ ಇಸ್ಪೀಟು, ಭಜನೆ, ಸಿನೆಮಾ ಹಾಡುಗಳು ಇದರಲ್ಲಿ ಮಗ್ನರಾಗುವರು. ಕೆಲವು ಸಮಯದಲ್ಲಂತೂ ಪೂಜೆ, ಮಂಗಳಾರತಿ ಮಾಡಿ ಪ್ರಸಾದವನ್ನೂ ವಿತರಿಸುತ್ತಿದ್ದರು. ಈಗೀಗ ಭಜನೆ, ಇಸ್ಪೀಟುಗಳನ್ನು ನಿರ್ಬಂಧಿಸಿದ್ದಾರೆ. ಮಹಿಳೆಯರ ಕಂಪಾರ್ಟ್ ಮೆಂಟ್ ಗಳಲ್ಲಂತು ಕೈ ಹೊಲಿಗೆ, ಕಸೂತಿ, ಹೂ ಕಟ್ಟುವುದು, ಮನೆಗೆ ಹೋಗಿ ಅಡುಗೆ ಮಾಡಲು ಅನುಕೂಲವಾಗಲೆಂದು ತರಕಾರಿ ಕತ್ತರಿಸಿ ಇಟ್ಟುಕೊಳ್ಳುವುದನ್ನೂ ಕಾಣಬಹುದು. ಹೆಚ್ಚಿನ ಜನ ಸಮಯವನ್ನು ವ್ಯರ್ಥಮಾಡುವುದಿಲ್ಲ. ಸಂಜೆಯ ವೇಳೆ ಮನೆಗೆ ಮರಳುವಾಗ ಸುಸ್ತಾದ ಜನಗ ನಿಂತೇ ನಿದ್ದೆ ಮಾಡುವುದನ್ನೂ ಅಭ್ಯಾಸ ಮಾಡಿಕೊಂಡಿದ್ದಾರೆ. ನಾನಂತೂ ಇಂತಹ ದೃಶ್ಯವನ್ನು ಬೇರೆ ಯಾವುದೇ ಊರಿನಲ್ಲೂ ನೋಡಿರಲಿಲ್ಲ. ಈ ಸೀಟುಗಳು ಎದುರು ಬದುರಾಗಿದ್ದು, ಮಧ್ಯೆ ಭಾಗದಲ್ಲಿ ಮೂರು ಜನರು ನಿಂತುಕೊಳ್ಳುವರು. ಜನಸಂದಣಿ ಜಾಸ್ತಿಯಾಗಿದ್ದರೆ ನಾಲ್ಕು ಜನರು ಕುಳಿತುಕೊಳ್ಳುವರು. ಇದಷ್ಟಲ್ಲದೇ ಸಿನೆಮಾಗಳಲ್ಲಿ ತೋರಿಸುವಂತೆ ಛಾವಣಿಯ ಮೇಲ್ಭಾಗದಲ್ಲೂ ಕುಳಿತುಕೊಳ್ಳುವರು. ಅವರ ಮೇಲೆ ವಿದ್ಯುತ್ ತಂತಿ ಹಾಯುತ್ತಿರುವುದು. ಅದೂ ಹೈ ವೋಲ್ಟೇಜ್ ವಿದ್ಯುತ್ - ಸ್ವಲ್ಪ ಆಯ ತಪ್ಪಿ ತಗುಲಿದರೂ ವ್ಯಕ್ತಿ ಅಲ್ಲಿಯೇ ಸಾಯುವನು. ಇಂತಹ ಸಾವುಗಳು ಸರ್ವೇ ಸಾಮಾನ್ಯ. ಆದರೂ ಜನರು ಈ ಚಟವನ್ನು ಬಿಡುವುದೇ ಇಲ್ಲ. ಇನ್ನು ಟಿಕೆಟ್ ಅಥವಾ ಪಾಸ್ ಹೊಂದಿರುವ ಪ್ರಯಾಣಿಕರು ಎಷ್ಟು ಇರುವರೋ ಅಷ್ಟೇ ರಹಿತ ಪ್ರಯಾಣಿಕರು ಇರುತ್ತಾರೆ. ಒಂದು ಸುದ್ದಿ ಎಂದರೆ = ಇವರುಗಳದ್ದೇ ಒಂದು ಅಸೋಸಿಯೇಷನ್ ಇದೆಯಂತೆ. ಇವರು ಒಮ್ಮೆ ಸಿಕ್ಕಿಹಾಕಿಕೊಂಡು ದಂಡ ತೆತ್ತರೆ ಅದನ್ನು ಅಸೋಸಿಯೇಷನ್ ಮರುಪಾವತಿಸುವುದು. ಆದರೆ ಆ ವ್ಯಕ್ತಿ ತಿಂಗಳಿಗೆ ಎರಡು ಬಾರಿಗಿಂತ ಜಾಸ್ತಿ ಸಿಕ್ಕಿಹಾಕಿಕೊಳ್ಳಬಾರದು. ಅದಷ್ಟೇ ಅಲ್ಲ ಪ್ರತಿ ತಿಂಗಳೂ ಆ ಅಸೋಸಿಯೇಷನ್ ಗೆ ಚಂದಾ ಕಟ್ಟುತ್ತಿರಬೇಕು. ನೋಡಿದಿರಾ ಹೇಗಿದೆ 'ಪ್ಯಾರೆಲಲ್ ಎಕಾನಮಿ'?. ಟ್ರೈನಿನಲ್ಲಿ ಭಿಕ್ಷೆ ಬೇಡಲೆಂದೇ ಚಿಕ್ಕ ಚಿಕ್ಕ ಮಕ್ಕಳನ್ನು ಬಿಟ್ಟು ದೂರದಲ್ಲಿ ನಿಂತು ಅವರುಗಳ ಚಲನವಲನ ಗಮನಿಸುತ್ತಿರುವ ಗೂಂಡಾಗಳು ಇರುವರು. ಇದರಲ್ಲಿ ಹೆಚ್ಚಿನ ಮಕ್ಕಳನ್ನು ಕದ್ದು ತಂದಿರುವರು. ಕೆಲವು ಸಮಯ ಅವರುಗಳಿಗೆ ಅಂಗವಿಕಲತೆ ಉಂಟುಮಾಡಿರುವ ಕ್ರೂರ ಸನ್ನಿವೇಶಗಳೂ ಇವೆ. ಹಾಗೇ ಹಾಡುಗಳು ಮತ್ತು ಭಜನೆ ಮಾಡಿ ಭಿಕ್ಷೆ ಎತ್ತುವ ಅಂಗವಿಕಲರೂ ಇರುವರು. ಕೆಲವರಂತೂ ಬಹಳ ಸುಶ್ರಾವ್ಯವಾಗಿ ಹಾಡುವರು. ಇದರ ಮಧ್ಯೆ ಹೆಚ್ಚಿನ ಜನಸಂದಣಿಯಿರುವಾಗ ಜೇಬು ಕತ್ತರಿಸುವುದು ಸರ್ವೇ ಸಾಮಾನ್ಯ. ಅವರದ್ದೇ ದೊಡ್ಡ ಗುಂಪಿದ್ದು, ಅಕ್ಕ ಪಕ್ಕದವರಿಗೆ ಚಾಕು ತೋರಿಸಿ ದೋಚುವ ಸನ್ನಿವೇಶಗಳಿಗೇನೂ ಕೊರತೆಯಿಲ್ಲ. ಜನಸಂದಣಿಯ ಸಮಯದಲ್ಲಿ ತಮ್ಮ ಬೆವರನ್ನು ಇನ್ನೊಬ್ಬರ ಬಟ್ಟೆಗಳಿಗೆ ಒರೆಸುವುದೂ, ಜಗಳಗಳೂ ಇತರರಿಗೆ ಮೋಜಿನ ಸನ್ನಿವೇಶ. ಕೆಲವೊಂದು ಬಾರಿ ಪರಕಾಯ ಪ್ರವೇಶದ ಅನುಭವವೂ ಆದವರಿದ್ದಾರೆ. ಇನ್ನು, ನಾನು ಇದರ ಬಗ್ಗೆ ಬರೆದ ಒಂದು ಕವನ ಹೀಗಿದೆ, ಓದಿ: (ಇದು ನಾನು ದಿನವೂ ಬೆಳಗ್ಗೆ ಹಿಡಿಯುವ ೭.೨೨ರ ಚರ್ಚ್ಗೇಟ್ ಗೆ ಹೋಗುವ ಲೋಕ್ಲ್ ಟ್ರೈನ್ - ನನ್ನ ಅನುಭವ) ನೋಡಿರಣ್ಣ ಇದು ನನ್ನ ಲೋಕಲ್ ನ ಪ್ರಯಾಣ ಮುಗಿದ ಕೂಡಲೇ ಎಲ್ಲರೂ ನಿಟ್ಟುಸಿರು ಬಿಡೋಣ ಒಂದು ಸಾವಿರ ಮಂದಿಯ ಹೊತ್ತೊಯ್ಯುವ ಗಾಡಿ ಮೂವತ್ತು ಸಾವಿರ ಮಂದೆಗಳ ತುಂಬಿರುವ ಗಾಡಿ ಒಂದಿಂಚೂ ಜಾಗವಿಲ್ಲದ ತುಂಬಿದ ಗಾಡಿ ಅದರ ಅನುಭವ ನಿಮಗೇನು ಗೊತ್ತು ಬಿಡಿ ಕಾಲು ನವೆಯಾದಾಗ ಕೆರೆಯುವವರು ಇನ್ಯಾರದೋ ಕಾಲು 'ಆದ್ರೂ ಹೇಳುವರು ಯಾಕೋ ನವೆ ಹೋಗ್ತಾನೇ ಇಲ್ಲ' ಮುಂಜಾವಿನ ಆ ಸಮಯದಲ್ಲೂ ಹರಿವುದು ಬೆವರು ಧಾರಾಕಾರ ಇನ್ನೊಬ್ಬನ ವಸ್ತ್ರ ಅದನ ಒರೆಸಿದಾಗ ಹಾಹಾಕಾರ ಅದೋ ಬಂತು ನೋಡು ನನ್ನ ಗಾಡಿ ನವ ಮಾಸ ತುಂಬಿದ ಗರ್ಭಿಣಿಯಂತೆ ಒಳಗೆ ಹೋಗಲು ಆಗದೆ ಅಲ್ಲೇ ನಿಂತೆ ಬರಸಿಡಿದ ಮರಿಗಿಣಿಯಂತೆ ಅದೇ ಹುಡುಗ ಹುಡುಗಿಯರು ಚೆಲ್ಲು ಚೆಲ್ಲಾಗಿ ನಗುತ ಬರಲು ಮುಂದೆ ಅವರ್ನು ನೋಡಲೆಂದೇ ಇಹರು ನನ್ನಂಥ ಮುದಿಯರ ಹಿಂಡೇ ನಿಯತಕಾಲದಂತೆ ಡ್ಯೂಟಿಗೆ ಬರುವನು ಆ ಭಿಕ್ಷುಕ ಅವನ ಹಿಂದೆಯೇ ಆ ಜಂಗುಳಿಯಲ್ಲೂ ಬೀದಿ ಮಾರಾಟಗಾರ (ಹಾಕರ್) ಹೊಸಬರಿಗೆ ಇಲ್ಲಿಯಾಗುವುದು ಪರದಾಟ ನಮಗೆಲ್ಲಾ ಇದು ದಿನನಿತ್ಯದ ವಿಹಾರದೂಟ
Rating
Average: 5 (1 vote)