ಬಾಲ್ಯದ ನೆನಪು
ಬರಹ
ಬೆಟ್ಟ ಗುಡ್ಡಗಳಲ್ಲಿ
ದಟ್ಟ ಕಾಡುಗಳಲ್ಲಿ
ಕಳೆದು ಹೋಗುವ
ಆಸೆ ನನಗಿಂದು
ಕೊಬ್ಬಿದ ಎಮ್ಮೆಯನತ್ತಿ
ಊರ ಕೇರಿಯ ಸುತ್ತಿ
ಪಕ್ಕದ ಕೆರೆಯಲ್ಲಿ ಜಗ್ಗಿ
ಮಿಂದು ಬರುವಾಸೆ
ಚಡ್ಡಿ ಸ್ನೇಹಿತರೊಡನೆ
ರೆಂಬೆ ಕೊಂಬೆಯ ಹತ್ತಿ
ಅಂಗಿ ಚಡ್ಡಿಯ ಅರಿದು
ಕೈಯಿ ಕಾಲನು ಪರಚುವಾಸೆ
ಗೋಲಿ ಆಟವ ಆಡಿ
ಈಜು ಕೊಳದಲಿ ಧುಮುಕಿ
ಮರಳು ದಂಡೆಗಳಲ್ಲಿ
ಬಿಸಿಲು ಕಾಯುವ ಆಸೆ
ಜಾತಿ ಕೋಳಿಯ ಕದ್ದು
ಊರ ಹೊಲದ ನಡುವೆ
ಉಪ್ಪು ಕಾರವ ಅರಿದು
ಸುಟ್ಟು ತಿನ್ನುವ ಆಸೆ
ಊರ ಹೈದರ ಜೊತೆಗೆ
ಒತಿಕ್ಯಾತವನಟ್ಟಿ
ಕಲ್ಲು ಮುಳ್ಳನು ತುಳಿದು
ಕಲ್ಲು ಬೀಸುವ ಆಸೆ
ಗೆಳೆಯಾರಿಬ್ಬರು ಕೂಡಿ
ಬೀಡಿ ಕಟ್ಟನು ಹಿಡಿದು
ಗುಡಿಯ ಕದವ ಜಡಿದು
ಒಮ್ಮೆ ಸೇದಿ ಬಿಡುವಾಸೆ
ಆಡುವ ಆಟಗಳಲ್ಲಿ
ಎಷ್ಟೇ ಜಗಳಗಳಿರಲಿ
ಸಂಜೆ ಹೊತ್ತಿಗೆ ಮರೆತು
ಸಿನಿಮಾ ನೋಡುವ ಆಸೆ
ನೆನಪು ಬಂದಾಗೆಲ್ಲ
ತುಂಟ ಹುಡುಗರನೊಮ್ಮೆ
ನನ್ನ ಊರಿಗೆ ಹೋಗಿ
ನೋಡಿ ಬರುವಾಸೆ