ಕ್ರಿಕೆಟ್ ಹುಚ್ಚಿಗೆ ಮಂತ್ರ ಶಿಕ್ಷೆ

ಕ್ರಿಕೆಟ್ ಹುಚ್ಚಿಗೆ ಮಂತ್ರ ಶಿಕ್ಷೆ

ನಾನು ಬಾಲ್ಯದಲ್ಲಿ ಇದ್ದ ಊರಲ್ಲಿ ನಮ್ಮ ಮನೆಯ ಸಮೀಪವೇ ೩ಅಟದ ಮೈದಾನಗಳಿದ್ದವು. ಆಸುಪಾಸಿನ ೨೦-೨೫ ಹುಡುಗರು ಸೇರಿ (೨ಟೀಮ್+ಬಾಲ್‌ಬಾಯ್ಸ್)ಮ್ಯಾಚ್ ಆಡುತ್ತಿದ್ದೆವು. ಸಂಜೆ ೫ರಿಂದ ಆರೂವರೆ ಒಳಗೆ ಆಟ ಮುಗಿಯಬೇಕಾದುದರಿಂದ ೨೦-೨೦, ೧೦-೧೦ ಓವರ್‌ಗಳ ಮ್ಯಾಚ್. ರಜಾದಿನಗಳಲ್ಲಿ ಪೂರ್ತಿ ದಿನದಾಟ.
ಎಲ್ಲರೊಂದಿಗೂ ಹೊಂದಿಕೊಂಡು ಹೋಗುವುದು,ಯಾರೊಂದಿಗೂ ಜಗಳ ಆಡದಿರುವುದು,ಎಲ್ಲರಿಗೂ ಆಡಲು ಅವಕಾಶ ಕೊಡುತ್ತಿದ್ದುದರಿಂದ,ನಾನೇ ಆಯ್ಕೆಗಾರನೂ(ದಿನವೂ ಹೊಸದಾಗಿ ೨ ಟೀಮ್ ಮಾಡಬೇಕು)ಒಂದು ಟೀಮಿನ ನಾಯಕನೂ ಆಗಿರುತ್ತಿದ್ದೆ. ಪಾಠದ ಸಮಯದಲ್ಲೂ ಕ್ರಿಕೆಟ್ ಗುಂಗಿನಲ್ಲಿಯೇ ಇರುತ್ತಿದ್ದೆ.
“ಯಾಕೋ ನಿಮ್ಮ ಹುಡುಗ ಮೊದಲಿನಷ್ಟು ಚುರುಕಿಲ್ಲ, ಮಂಕಾಗಿರುತ್ತಾನೆ.” ಎಂಬ ವರದಿ ಗುರುಗಳಿಂದ ನನ್ನ ತಂದೆಗೆ ತಲುಪಿತು. ‘ಮಂಕು’ ಶಬ್ದ ಕೇಳಿದರೆ ಜ್ಯೋತಿಷಿ ಬಳಿ ಓಡುವುದು,ಎಲ್ಲಾ ಊರಿನಂತೆ ನಮ್ಮ ಊರಿನಲ್ಲಿಯೂ ಇತ್ತು. ನನ್ನ ಜಾತಕ ನೋಡಿದ ಜ್ಯೋತಿಷಿಗಳು “ಈಗಿವನಿಗೆ ದಶಾಸಂಧಿ ಕಾಲ” ಎಂದು ಹೇಳಿ ಕೆಲವೊಂದು ಪೂಜೆ, ಕ್ರಮಗಳನ್ನು ಹೇಳಿದರು.ನನಗೊಂದು ಸಣ್ಣ ಪುಸ್ತಕ ಕೊಟ್ಟು ಅದರಲ್ಲಿರುವ ಶಾಂತಿಮಂತ್ರಗಳನ್ನು ಸಂಧಿಕಾಲ ಮುಗಿಯುವವರೆಗೆ ಪಠಿಸಲು ಆಜ್ಞಾಪಿಸಿದರು.
ಸಂಜೆ ಆಡಿ ಬಂದ ಕೂಡಲೇ ಸ್ನಾನ ಮಾಡಿ ದೇವರ ಕೋಣೆಗೆ ಹೋಗಲು ಅಮ್ಮ ಹೇಳಿದರು.ಈಗಿನಂತೆ ಟಿ.ವಿ. ಇಲ್ಲವಲ್ಲ,ಎಲ್ಲಾ ದೇವರ ಕೋಣೆಯಲ್ಲಿ ರೆಡಿ.ಪುಸ್ತಕ ತೆಗೆದು ನೋಡುತ್ತೇನೆ-ಪೂರ್ತಿ ಎರಡೂವರೆ ಪುಟಗಳಷ್ಟು ಉದ್ದಕ್ಕೆ ಪಾಠದಂತೆ ಮಂತ್ರಗಳಿದ್ದವು.ನಾನೋ ಕನ್ನಡ ಮೀಡಿಯಂ ಹುಡುಗ. ಈ ಪುಸ್ತಕದ ಒಂದು ಲೈನ್ ಓದುವುದೇ ಕಷ್ಟವಾಯಿತು.ಅಪ್ಪನ ಸಹಾಯದಿಂದ ಓದಿ ಮುಗಿಸುವಾಗ ಕಣ್ಣೀರು ಸಹ ಅರ್ಧಲೀಟರ್ ಖಾಲಿಯಾಯಿತು.ಸಾಮಾನ್ಯವಾಗಿ ಸ್ವಲ್ಪ ಕಣ್ಣೀರು ಬಂದ ಕೂಡಲೇ ಸಹಾಯಕ್ಕೆ ಬರುವ ಅಜ್ಜಿ ಸಹ ಈ ವಿಷಯದಲ್ಲಿ ಅಡ್ಡಬರಲಿಲ್ಲ.ಅದೂ ಇನ್ನೈದಾರು ತಿಂಗಳು ಹೇಳಬೇಕು.(ಈ ಗ್ರಹಗಳಿಗೆ ಠಿಕಾಣಿ ಹೂಡಲು ನನ್ನ ಜಾತಕವೇ ಸಿಗಬೇಕಾ?)
ತಿಂಗಳಾಗುವ ಮೊದಲೇ ಪುಸ್ತಕ ಮಡಚಿಟ್ಟು,ಕ್ರಿಕೆಟ್ ಬಗ್ಗೆ ಯೋಚಿಸುತ್ತಿದ್ದರೂ,ಬಾಯಲ್ಲಿ ಗಟ್ಟಿಯಾಗಿ,ಸ್ಪಷ್ಠವಾಗಿ ಮಂತ್ರ ಹೇಳುತ್ತಿದ್ದೆ. ಇದನ್ನೇ ಹಿಂದಿನ ಕಾಲದಲ್ಲಿ/ಈಗಲೂ ಸಂಸ್ಕೃತ ಪಾಠಶಾಲೆಗಳಲ್ಲಿ ಮಾಡುವುದು.ಸಣ್ಣ ಮಕ್ಕಳನ್ನು/ವಟುಗಳನ್ನು ಸೇರಿಸಿಕೊಳ್ಳುವುದು.ಎಲ್ಲಾ ವಿಷಯಗಳನ್ನು ಬಾಯಿಪಾಠ ಮಾಡಿಸುವುದು. ಕೆಲವರ್ಷಗಳಲ್ಲಿ ಅವರ ಬಾಯಿಂದ ಪಟಪಟನೆ ಉದುರುವ ಸಂಸ್ಕೃತ ಕೇಳಿ, ಉಳಿದವರಿಗೆ ಅವರು ದೇವತಾ ಸ್ವರೂಪಿಯಂತೆ ಕಾಣುವರು.ಸ್ನಾನ ಮಾಡಿ ಮಂತ್ರ ಹೇಳುತ್ತಾ ಬರುವ ಅವರನ್ನು ಮುಟ್ಟಲೂ ಬಾರದು.
ಎಲ್ಲಾ ಭಾಷೆಯಂತೆ ಸಂಸ್ಕೃತವೂ ಒಂದು ಭಾಷೆ.ಎಲ್ಲಾ ಭಾಷೆಗಳಲ್ಲಿರುವಂತೆ ಸಂಸ್ಕೃತದಲ್ಲೂ ತಿಳಕೊಳ್ಳುವಂತಹ ವಿಷಯಗಳು ಬಹಳಷ್ಟಿದೆ.ಗುಲಾಬಿ ಇಷ್ಟವೆಂದು ಗುಲಾಬಿಗಿಡವನ್ನೇ ಅಪ್ಪುವುದಲ್ಲ. ಗುಲಾಬಿ ಮಾತ್ರ ತೆಗೆದುಕೊಂಡರಾಯಿತು.
ಹಳೇಮನೆ ಸಂಸ್ಕೃತಮ್ಮನಿಂದ, ಕನ್ನಡಮ್ಮ, ಕೆಲ ಶಬ್ದ ತೆಗೆದುಕೊಂಡಿದ್ದಾರೆ. ಅಷ್ಟಕ್ಕೇ ಕನ್ನಡಮ್ಮ ಬಡವಳು,ಸಂಸ್ಕೃತಮ್ಮ ಶ್ರೀಮಂತಳು ಅನ್ನುವುದು ಸರಿಯಲ್ಲ.
ನಮ್ಮಲ್ಲೊಂದು ಅಭ್ಯಾಸ-ಹಳೆಯಗ್ರಂಥಗಳು ಶ್ರೇಷ್ಠ. ಮಠಾಧೀಶರು ಎರಡು ಶ್ಲೋಕದಿಂದ ಆರಂಭಿಸಿ,ಎರಡು ಶ್ಲೋಕ ನಡುವೆ ಹೇಳಿದರೆ ಅವರು ದೇವರು. ಋಗ್ವೇದದಲ್ಲಿ( ಇಂಗ್ಲೀಷ್ ತರ್ಜುಮೆ ಓದಿದ್ದೆ) ಪೂಜೆ,ಅಗ್ನಿ,ವಾಯು..ಬಿಟ್ಟರೆ ಸಾಮಾನ್ಯರಿಗೆ ಉಪಯೋಗವಾಗುವುದು ಏನೂ ಕಾಣಲಿಲ್ಲ.ಕೆಲ ಮಠಾಧೀಶರು/ಸ್ವಾಮಿಗಳು ದೇವರ ವಿಷಯದಲ್ಲಿ (ಕಚ್ಚಾಟದಲ್ಲಿ)ಮಗ್ನ.ದೇವರ ಪೂಜೆ,ಮಂತ್ರದಿಂದ ಎಲ್ಲಾ ಸರಿಯಾಗಿ ಶಾಂತಿ ಸಿಗುವುದಾದರೆ,ಬಾಲ್ಯದಿಂದ ಈಗಿನ ವಾರ್ಧಕ್ಯದವರೆಗೆ ದೇವರ ಪೂಜೆಯಲ್ಲೇ ಮಗ್ನರಾದವರಿಂದ ಸಮುದ್ರಯಾನದ ಬಯಲಾಟ ಮುಗೀತಾನೆ ಇಲ್ಲ ಯಾಕೆ?

Rating
No votes yet

Comments