ಏನೇ ಆಗಲಿ, ಒಳ್ಳೆಯದನ್ನೆ ಮಾಡಿ; ಮಾಡುತ್ತಲೆ ಇರಿ - ಒಂದು ಕೇಳು-ಪುಸ್ತಕ
ಸ್ನೇಹಿತರೆ,
ಇಂಗ್ಲಿಷಿನಲ್ಲಿ ವ್ಯಾಪಕವಾಗಿ ಬಳಕೆಯಲ್ಲಿರುವ ಆಡಿಯೊ ಪುಸ್ತಕ ಸಂಸ್ಕೃತಿ ಕನ್ನಡದ ಮಟ್ಟಿಗೆ ಹೇಳುವುದಾದರೆ ಇಲ್ಲವೆ ಇಲ್ಲ. ನಮ್ಮಲ್ಲಿ ಆಗಾಗ ಇನ್ಸ್‌ಪಿರೇಷನಲ್ ಆಡಿಯೊ ಕ್ಯಾಸೆಟ್‍ಗಳು ಬಿಡುಗಡೆಯಾಗುತ್ತವೆ ಎನ್ನುವುದನ್ನು ಬಿಟ್ಟರೆ ಇಡೀ ಗದ್ಯ ಪುಸ್ತಕವೆ ಆಡಿಯೊ ಆಗಿದ್ದು ಇಲ್ಲ. ಇತ್ತೀಚೆಗೆ ತಾನೆ ಕವಿ-ಪತ್ರಕರ್ತ ಜಿ.ಎನ್. ಮೋಹನ್‌ರವರು ತಮ್ಮ "ಪ್ರಶ್ನೆಗಳಿರುವುದು ಷೇಕ್ಸ್‌ಪಿಯರನಿಗೆ" ಕವನಸಂಕಲನದ ಕವನಗಳನ್ನು ಹಲವಾರು ಕನ್ನಡ ಸಾಹಿತಿಗಳಿಂದ ವಾಚಿಸಿ, ಅದನ್ನೆ ಸಿ.ಡಿ. ಮಾಡಿದ್ದಾರೆ. ಆ ನಿಟ್ಟಿನಲ್ಲಿ ಇದೇ ಮೊದಲ ಪ್ರಯತ್ನವೇನೊ.
ಕೆಂಟ್ ಕೀತ್‌ರವರು ಇಂಗ್ಲಿಷಿನಲ್ಲಿ ಬರೆದಿರುವ "Anyway – The Paradoxical Commandments" ಎಂಬ ಪುಸ್ತಕವಿದೆ. ಆ ಕಟ್ಟಳೆಗಳು ಹೀಗಿವೆ:
- ಜನರು ತರ್ಕಹೀನರು, ಯುಕ್ತಾಯುಕ್ತ ಪರಿಜ್ಞಾನ ಇಲ್ಲದವರು, ಹಾಗೂ ಸ್ವಕೇಂದ್ರಿತ ಸ್ವಾರ್ಥಿಗಳು - ಏನೇ ಇರ್ಲಿ, ಅವರನ್ನು ಪ್ರೀತಿಸಿ.
- ನೀವು ಒಳ್ಳೆಯದನ್ನು ಮಾಡಿದ್ದರೆ ಜನ ನೀವು ಸ್ವಾರ್ಥದ ದುರುದ್ದೇಶಗಳನ್ನಿಟ್ಟುಕೊಂಡು ಮಾಡುತ್ತಿದ್ದೀರಿ ಎಂದು ನಿಂದಿಸುತ್ತಾರೆ - ಯಾರು ಏನೇ ಹೇಳ್ಲಿ, ಒಳ್ಳೆಯದನ್ನು ಮಾಡಿ.
- ನೀವು ಜೀವನದಲ್ಲಿ ಯಶಸ್ವಿಯಾದರೆ ನಿಮಗೆ ಖೋಟಾ ಸ್ನೇಹಿತರು, ನಿಜವಾದ ಶತ್ರುಗಳು ಸಿಗುತ್ತಾರೆ - ಆದ್ರೂ ಯಶಸ್ವಿಯಾಗಿ.
- ನೀವು ಇಂದು ಮಾಡುವ ಒಳ್ಳೆಯ ಕೆಲಸವನ್ನು ಜನ ನಾಳೆ ಮರೆತುಬಿಡುತ್ತಾರೆ - ಆದ್ರೂ ಒಳ್ಳೆಯದನ್ನು ಮಾಡಿ.
- ಪ್ರಾಮಾಣಿಕತೆ ಮತ್ತು ಮುಕ್ತ ಮನಸ್ಸು ನಿಮ್ಮನ್ನು ದುರ್ಬಲರನ್ನಾಗಿ ಮಾಡುತ್ತದೆ - ಏನೇ ಆಗ್ಲಿ, ಪ್ರಾಮಾಣಿಕರಾಗಿ, ಮುಕ್ತಮನಸ್ಸಿನಿಂದ ಇರಿ.
- ಉನ್ನತವಾದ ದೊಡ್ಡದೊಡ್ಡ ಆಲೋಚನೆಗಳ ಉನ್ನತ ಮನುಷ್ಯರನ್ನು ಕೀಳೂ ಆಲೋಚನೆಗಳ ಸಣ್ಣ ಜನರು ಹೊಡೆದುರುಳಿಸಬಹುದು - ಆದ್ರೂ ದೊಡ್ಡದಾಗಿಯೇ ಆಲೋಚಿಸಿ.
- ಜನ ದುರ್ಬಲರ, ದಲಿತರ ಬಗ್ಗೆ ವಿಶ್ವಾಸ ತೋರುತ್ತಾರೆ, ಆದರೆ ಸಬಲರನ್ನೆ ಹಿಂಬಾಲಿಸುತ್ತಾರೆ - ಹಾಗಿದ್ರೂ ಕೆಲವಾದರೂ ದಲಿತ-ದುರ್ಬಲರ ಪರ ಹೋರಾಡಿ.
- ನೀವು ವರ್ಷಗಳ ಕಾಲ ಕಟ್ಟಿದ್ದು ರಾತ್ರೋರಾತ್ರಿ ಹಾಳುಗೆಡವಲ್ಪಡಬಹುದು - ಏನೇ ಆಗ್ಲಿ, ಕಟ್ಟಿಯೇ ಕಟ್ಟಿ.
- ಜನರಿಗೆ ನಿಜವಾಗಲೂ ಸಹಾಯ ಬೇಕು, ಆದರೆ ನೀವು ಅವರಿಗೆ ಸಹಾಯ ಮಾಡಿದರೆ ಅವರು ನಿಮ್ಮ ಮೇಲೆಯೇ ಆಕ್ರಮಣ ಮಾಡಬಹುದು - ಆದ್ರೂ, ಸಹಾಯ ಮಾಡಿ.
- ನಿಮ್ಮ ಕೈಲಾದುದನ್ನು, ನಿಮ್ಮೆಲ್ಲ ಒಳ್ಳೆಯದನ್ನು ಜಗತ್ತಿಗೆ ನೀಡಿ; ಆಗಲು ಜನ ನಿಮ್ಮ ಹಲ್ಲುದುರಿಸಬಹುದು - ಆದ್ರೂ ನಿಮ್ಮೆಲ್ಲ ಒಳ್ಳೆಯದನ್ನು ಜಗತ್ತಿಗೆ ನೀಡಿ.
ಈ ಪುಸ್ತಕವನ್ನು ನಾನು "ಏನೇ ಆಗಲಿ, ಒಳ್ಳೆಯದನ್ನೆ ಮಾಡಿ; ಮಾಡುತ್ತಲೆ ಇರಿ." ಎಂಬ ಹೆಸರಿನಲ್ಲಿ
ಕನ್ನಡಕ್ಕೆ ಅನುವಾದಿಸಿದ್ದೇನೆ. ಇದು ಸುಮಾರು 14 ವಾರಗಳ ಕಾಲ "ವಿಕ್ರಾಂತ ಕರ್ನಾಟಕ" ವಾರಪತ್ರಿಕೆಯಲ್ಲಿ ಧಾರಾವಾಹಿಯಾಗಿ ಪ್ರಕಟವಾಯಿತು. ಈಗ ಅದನ್ನೆ ನಾನು ಆಡಿಯೊ ಪುಸ್ತಕವಾಗಿ ಪರಿವರ್ತಿಸಿದ್ದೇನೆ.
"ಏನೇ ಆಗಲಿ, ಒಳ್ಳೆಯದನ್ನೆ ಮಾಡಿ; ಮಾಡುತ್ತಲೆ ಇರಿ." ಕೇಳು-ಪುಸ್ತಕ mp3 ಫಾರ್ಮ್ಯಾಟ್‌ನಲ್ಲಿದೆ. ಒಂದೇ ಸಿಟ್ಟಿಂಗ್‌ನಲ್ಲಿ ಕಂಪ್ಯೂಟರ್‍ನಲ್ಲಿ ರೆಕಾರ್ಡ್ ಮಾಡಿ, ಅದನ್ನೆ Audacity ಸಾಫ್ಟ್‌ವೇರ್ ಬಳಸಿ ಸ್ವಲ್ಪ ಎಡಿಟ್ ಮಾಡಿದ್ದೇನೆ. ಹಿನ್ನೆಲೆ ಸಂಗೀತ, ವಿಶೇಷ ಎಫ್ಫೆಕ್ಟ್ಸ್ ಅಂತಹವೇನೂ ಸದ್ಯಕ್ಕೆ ಸಂಯೋಜಿಸಿಲ್ಲ. ಅವೆಲ್ಲ ಮಾಡಬೇಕು ಅಂತಿದ್ದರೂ, ಸಮಯಾಭಾವದಿಂದ ಮತ್ತು ಇದ್ದಕ್ಕಿದ್ದಂತೆ ಬದಲಾಗುವ ಆಸಕ್ತಿಯ ಕಾರಣವಾಗಿ ಅದೆಲ್ಲ ಮಾಡಲಾಗಿಲ್ಲ. ಯಾರಾದರೂ ಹವ್ಯಾಸಿ ಕನ್ನಡ ಸ್ನೇಹಿತರು, ಇದನ್ನು ಡೌನ್‌ಲೋಡ್ ಮಾಡಿಕೊಂಡು, ಅದಕ್ಕೆ ಪ್ರೊಫೆಷನಲ್ ಟಚ್ ಕೊಟ್ಟು, ಸುಧಾರಿಸಿದರೆ, ನಿಮ್ಮಷ್ಟೆ ಸಂತೋಷ ನನ್ನದು, ಅಥವ ನನ್ನಷ್ಟೆ ಸಂತೋಷ ನಿಮ್ಮದು.
ಕೇಳುಗರ ಬ್ಯಾಂಡ್‌ವಿಡ್ತ್‌ಗೆ ಅನುಕೂಲವಾಗುವಂತೆ ಮೂರು ವಿಧವಾಗಿ ಇವನ್ನು ವಿಭಾಗಿಸಿದ್ದೇನೆ. ನಿಮಗೆ ಅನುಕೂಲವಾದ ರೀತಿಯಲ್ಲಿ ಡೌನ್‌ಲೋಡ್ ಮಾಡಿಕೊಂಡು, ಅನುಕೂಲವಾದ ರೀತಿಯಲ್ಲಿ (ಕಂಪ್ಯೂಟರ್, mp3 ಪ್ಲೇಯರ್, ಬೂಮ್‌ಬಾಕ್ಸ್, ಇತ್ಯಾದಿ), ಸಾವಕಾಶವಾಗಿ ಕೇಳಬಹುದು. ಒಟ್ಟಾರೆಯಾಗಿ 2 ಗಂಟೆ 13 ನಿಮಿಷಗಳ ಕೇಳು-ಪುಸ್ತಕ ಇದು.
(ಈ .mp3 ಫೈಲುಗಳನ್ನು ನಿಮ್ಮ ಕಂಪ್ಯೂಟರ್‌ಗೆ ಡೌನ್‌ಲೋಡ್ ಮಾಡಿಕೊಳ್ಳುವ ಬಗೆ: ಕೆಳಗಿನ ಹೈಪರ್‍ಲಿಂಕ್‍ಗಳ ಮೇಲೆ ಬಲಮೌಸ್ ಒತ್ತನ್ನು ಒತ್ತಿ, ಆಗ ಇಳಿಬರುವ ಮೆನುವಿನಲ್ಲಿ "save target as..." ನಂತಹುದನ್ನು ಆಯ್ಕೆ ಮಾಡಿಕೊಂಡು ಬೇಕಾದ ಫೋಲ್ಡರ್‌ನಲ್ಲಿ ಶೇಖರಿಸಿಕೊಳ್ಳಿ.)
- ಸಂಪೂರ್ಣ ಪುಸ್ತಕ - (128 Kbps - 124 MB)
- ಸಂಪೂರ್ಣ ಪುಸ್ತಕ - (32 Kbps - 31 MB)
- ಬಿಡಿಬಿಡಿಯಾಗಿ
ನಿಮಗೆ ಇದನ್ನು ಇತರರ ಜೊತೆ ಹಂಚಿಕೊಳ್ಳಬೇಕೆನಿಸಿದರೆ, ಈ ಕೊಂಡಿಯನ್ನು ಫಾರ್ವರ್ಡ್ ಮಾಡಬಹುದು.
http://vicharamantapa.net/Anyway/
ನಿಮ್ಮ ಸಲಹೆ, ಸೂಚನೆ, ವಿಮರ್ಶೆ, ಇಷ್ಟೇನಾ, ಏನ್ ಮಹಾ, ಹ್ಞೂ,..... ಗಳನ್ನೆಲ್ಲ ಇಲ್ಲಿಗೆ ಕಳುಹಿಸಬಹುದು. ravikreddy@yahoo.com
ಪ್ರೀತಿಯಿಂದ,
ರವಿ...