ಸಂಗೀತ ರಾಜ್ಯಕ್ಕೆ ಹೀಗೊಬ್ಬ ರಾಜ
ಇಂದು ಜನವರಿ ಆರು. ಸರಿಯಾಗಿ ನೂರರವತ್ತೊಂದು ವರ್ಷದ ಹಿಂದೆ, ನಾವು ಒಬ್ಬ ರಾಜನನ್ನು ಕಳೆದುಕೊಂಡೆವು. ಅಥವಾ ನಿಜ ಹೇಳಬೇಕೆಂದರೆ, ಅವತ್ತಿನಿಂದ ಆತ ಚಿರಂಜೀವಿಯಾಗಿಹೋದರು. ಈ ರಾಜ ಯಾವ ಯುದ್ಧವನ್ನೂ ಮಾಡಿ ಜಯಿಸಿಲಿಲ್ಲ. ಯಾವ ರಾಜ್ಯಕ್ಕೂ ರಾಜನಾಗಲಿಲ್ಲ. ಎಲ್ಲವನ್ನೂ ’ತ್ಯಾಗ’ ಮಾಡಿದರೂ, ಸಂಗೀತ ಪ್ರಪಂಚಕ್ಕೇ ರಾಜರಾಗಿ ಮೆರೆದರು.
ಹೌದು. ತ್ಯಾಗರಾಜರ ದೇಹಾಂತ್ಯ ಆದದ್ದು ೧೮೪೭ರ ಜನವರಿ ಆರರಂದು. ಆ ದಿನ ಪುಷ್ಯ ಬಹುಳ ಪಂಚಮಿ. ಪುರಂದರ ದಾಸರನ್ನು ಮನಸಲ್ಲೇ ಗುರುವಾಗಿ ನಿಲಿಸಿಕೊಂಡ ತ್ಯಾಗರಾಜರು ದಾಸರ ಆರಾಧನೆಯ ತಿಂಗಳಾದ ಪುಷ್ಯ ಮಾಸದಲ್ಲೇ ದೇಹತ್ಯಾಗ ಮಾಡಿದ್ದು ಕಾಕತಾಳೀಯವಿರಬಹುದು. ಆದರೆ, ಪುರಂದರ ದಾಸರ ರಚನೆಗಳಿಗೂ, ತ್ಯಾಗರಾಜರ ರಚನೆಗಳಲ್ಲೂ ಇರುವ ಹೋಲಿಕೆ ಕಾಕತಾಳೀಯವೇ? ಅಥವಾ, ದಾಸರ ಸಾಹಿತ್ಯ ತ್ಯಾಗರಾಜರ ಮೇಲೆ ಮಾಡಿದ ಪ್ರಭಾವದ ಪರಿಣಾಮವೇ? ಅಥವಾ ಮಹಾತ್ಮರ ಮನಗಳು ಒಂದೇ ತೆರದಲ್ಲಿ ಯೋಚಿಸುವುವೇ?
(ಚಿತ್ರ: http://www.karnatik.com/ ಕೃಪೆ)
ಈ ಪ್ರಶ್ನೆಗೆ ನನ್ನಲ್ಲಿ ಖಚಿತ ಉತ್ತರವಿಲ್ಲ. ಆದರೆ, ಪ್ರಹ್ಲಾದ ಭಕ್ತಿ ವಿಜಯದ ಮಂಗಳಶ್ಲೋಕದಲ್ಲಿ ತ್ಯಾಗರಾಜರು ಪುರಂದರ ದಾಸರನ್ನು ನೆನೆದಿರುವುದೂ, ಮತ್ತು ಹಲವಾರು ತ್ಯಾಗರಾಜರ ರಚನೆಗಳು ಪುರಂದರ ದಾಸರ ರಚನೆಗಳನ್ನು ಹೋಲುವುದೂ ನಿಜವಾದ ಸಂಗತಿ.
ಉದಾಹರಣೆಗೆ ಹೇಳುವುದಾದರೆ, ಪುರಂದರದಾಸರು "ಸಕಲಗ್ರಹಬಲನೀನೆ ಸರಸಿಜಾಕ್ಷ” ಎಂದರೆ, ತ್ಯಾಗರಾಜರು "ಗ್ರಹಬಲಮೇಮಿ? ರಾಮಾನುಗ್ರಹಮೇ ಬಲಮು" (ಗ್ರಹಬಲವೇನದು? ರಾಮನ ಅನುಗ್ರಹವೇ ಬಲ) ಅನ್ನುತ್ತಾರೆ. ಪುರಂದರ ದಾಸರು "ಕೇಳನೋ ಹರಿ ತಾಳನೋ, ತಾಳಮೇಳಗಳಿದ್ದು ಪ್ರೇಮವಿಲ್ಲದ ಗಾನ" ಎಂದು ಹಾಡಿದರೆ, ತ್ಯಾಗರಾಜರು "ಸಂಗೀತ ಜ್ಞಾನಮು ಭಕ್ತಿವಿನಾ ಸನ್ಮಾರ್ಗಮು ಗಲದೇ!" ಅನ್ನುತ್ತಾರೆ.
ನನಗೆ ಹಿಡಿಸಿರುವ ಪುರಂದರ ದಾಸರ ಒಂದು ಉಗಾಭೋಗ ಹೀಗಿದೆ:
ನಿನ್ನಂಥ ಸ್ವಾಮಿ ನನಗುಂಟು ನಿನಗಿಲ್ಲ
ನಿನ್ನಂಥ ದೊರೆಯು ಎನಗುಂಟು ನಿನಗಿಲ್ಲ
ನಿನ್ನಂಥ ತಂದೆ ಎನಗುಂಟು ನಿನಗಿಲ್ಲ
ನಾನೇ ಸ್ವದೇಶಿ ನೀನೇ ಪರದೇಶಿ
ನಿನ್ನರಸಿ ಲಕುಮಿ ಎನ್ನ ತಾಯಿ
ನಿನ್ನ ತಾಯ ತೋರೋ ಪುರಂದರ ವಿಠಲ!
ತ್ಯಾಗರಾಜರು ತಮ್ಮ ಜಿಂಗಲ ರಾಜದ ಕೃತಿಯೊಂದರಲ್ಲಿ ಹೀಗೆ ಹಾಡುತ್ತಾರೆ.
ಪಲ್ಲವಿ:
ಅನಾಥುಡನು ಗಾನು ರಾಮ ನೇ ||ನನಾಥುಡನುಗಾನು ||
ಅನುಪಲ್ಲವಿ:
ಅನಾಥುಡವು ನೀವನೆ ನಿಗಮಜ್ಞುಲ ಸನಾತನುಲ ಮಾಟವಿನ್ನಾವು ನೇ ||ನನಾಥುಡನುಗಾನು||
ಚರಣ:
ನಿರಾದರವು ಜೂಚಿ ಈ ಕಲಿ ನರಾಧಮುಲನೆದರು
ಪುರಾಣಪುರುಷ ಪುರರಿಪುನುತ ನಾಗರಾಜ ಶಯನ ತ್ಯಾಗರಾಜನುತ ನೇ|| ನನಾಥುಡನು ಗಾನು ||
ಇದನ್ನೇ ಕನ್ನಡದಲ್ಲಿ ಓದುವ ಹಂಬಲ ನನಗೆ - ಅದಕ್ಕೆಂದು ಇದನ್ನು ಹೀಗೆ ಕನ್ನಡಿಸಿದ್ದೇನೆ.
ಪಲ್ಲವಿ:
ಅನಾಥನಾಗಿಲ್ಲ! ರಾಮ ನಾ ||ನನಾಥನಾಗಿಲ್ಲ ||
ಅನುಪಲ್ಲವಿ:
ಅನಾಥ ನೀನೆಂದು ನಿಗಮಗಳನರಿತ
ಸನಾತನರು ಪೇಳ್ವುದ ಕೇಳಿಹೆ! ನಾ ||ನನಾಥನಾಗಿಲ್ಲ||
ಚರಣ:
ಆದರಿಪರು ಎನಗಿರದೆ ಮನುಜರು ಕಲಿಕಾ-
ಲದಿ ಅನಾಥ ನೀಯೆಂಬರು! ಅ-
ನಾದಿಪುರುಷ ತ್ರಿಪುರಾರಿನುತನ
ಸದಾ ಈ ತ್ಯಾಗರಾಜ ಮಣಿದಿರೆ, ನಾ ||ನನಾಥನಾಗಿಲ್ಲ||
ಇಲ್ಲಿ ಪುರಂದರರು, ಮತ್ತು ತ್ಯಾಗರಾಜರ ಭಾವನೆಗಳ ಹೋಲಿಕೆಗಳು ಎಷ್ಟು ಚೆನ್ನಾಗೆ ಎದ್ದು ತೋರುತ್ತಿವೆ. ಅಲ್ಲವೇ? ಇನ್ನೂ ತ್ಯಾಗರಾಜರ ಬಗ್ಗೆ ಮಂಥನ ಮಾಡುವಂತಹದ್ದು ಬೇಕಾದಷ್ಟಿದೆ. ಸ್ವಲ್ಪವನ್ನಾದರೂ ಪುಷ್ಯ ಬಹುಳ ಪಂಚಮಿಯ ತ್ಯಾಗರಾಜ ಆರಾಧನೆಯ ದಿವಸಕ್ಕೆ ಬಾಕಿ ಇರಿಸಿಕೊಳ್ಳುತ್ತೇನೆ :) ಅಷ್ಟು ದಿನ ಕಾಯಲು ಇಷ್ಟವಿಲಲ್ವೆ? ಇಂಗ್ಲಿಷ್ ನಲ್ಲಿರುವ ಈ ಬರಹವನ್ನು ಓದುತ್ತಿರಿ! ನಿಮಗೆ ಹಿಡಿಸಲೂಬಹುದು!
ಸದ್ಯಕ್ಕೆ ತ್ಯಾಗರಾಜರ ನುಡಿಮುತ್ತಿನೊಂದಿಗೆ ಈ ಬರಹಕ್ಕೆ ಮಂಗಳ ಹಾಡುವೆ - "ಎಂದರೋ ಮಹಾನುಭಾವುಲು ಅಂದರಿಕಿ ವಂದನಮುಲು".
-ಹಂಸಾನಂದಿ
Comments
ಉ: ಸಂಗೀತ ರಾಜ್ಯಕ್ಕೆ ಹೀಗೊಬ್ಬ ರಾಜ
ಉ: ಸಂಗೀತ ರಾಜ್ಯಕ್ಕೆ ಹೀಗೊಬ್ಬ ರಾಜ
In reply to ಉ: ಸಂಗೀತ ರಾಜ್ಯಕ್ಕೆ ಹೀಗೊಬ್ಬ ರಾಜ by aniljoshi
ಉ: ಸಂಗೀತ ರಾಜ್ಯಕ್ಕೆ ಹೀಗೊಬ್ಬ ರಾಜ
ಉ: ಸಂಗೀತ ರಾಜ್ಯಕ್ಕೆ ಹೀಗೊಬ್ಬ ರಾಜ
ಉ: ಸಂಗೀತ ರಾಜ್ಯಕ್ಕೆ ಹೀಗೊಬ್ಬ ರಾಜ