ನನ್ನ ಭಾರತಾನುಭವ -ರೂಥ್ ಪ್ರವೇರ್ ಝಾಬ್‍ವಾಲಾರ An Experience of India ನೀಳ್ಗತೆಯ ಕನ್ನಡಾನುವಾದ-ಐದನೆಯ ಕಂತು

ನನ್ನ ಭಾರತಾನುಭವ -ರೂಥ್ ಪ್ರವೇರ್ ಝಾಬ್‍ವಾಲಾರ An Experience of India ನೀಳ್ಗತೆಯ ಕನ್ನಡಾನುವಾದ-ಐದನೆಯ ಕಂತು

ಬರಹ

ಅಹ್ಮದ್ನೊಂದಿಗೆ ಗೆಲುವಾಗಿದ್ದಷ್ಟು ನಾನು ನನ್ನ ಬದುಕಿನಲ್ಲೇ ಯಾರ ಜೊತೆಗೂ ಗೆಲುವಾಗಿರಲಿಲ್ಲ. ಅಂದರೆ ಮನೆಯಲ್ಲಿ ನನಗೆ ಸುಖದ ಗಳಿಗೆಗಳೇ ಇರಲಿಲ್ಲವೆಂದಲ್ಲ. ಇದ್ದವು. ಹೆನ್ರಿಯನ್ನು ಮದುವೆಯಾಗುವ ಮೊದಲು ನನಗೆ ತುಂಬಾ ಸ್ನೇಹಿತರಿದ್ದರು. ಪಾರ್ಟಿಗಳು, ನರ್ತನ, ಕುಡಿತ ಅಂತ ತುಂಬಾ ಸುಖಪಟ್ಟಿದ್ದೆ. ಆದರೆ ಅವೆಲ್ಲ ಅಹ್ಮ್ದದ್ನೊಂದಿಗಿನ ಸುಖದ ಕ್ಷಣಗಳಿಗೆ ಸಾಟಿಯಲ್ಲ. ಅವನಷ್ಟು ಹಗುರವಾಗಿ, ಸುಲಲಿತವಾಗಿ, ನಿರ್ಭಿಡೆಯಿಂದ, ನಿರುಮ್ಮಳವಾಗಿ ಯಾರೂ ಇರಲಿಲ್ಲ. ಅವನು ರಮಿಸುತ್ತ ಬದುಕಲು ತಯಾರಿದ್ದ. ಮನೆಯಲ್ಲಿ ನಮಗೆ ನಮ್ಮದೇ ಆದ ವ್ಯಕ್ತಿಗತ ಸಮಸ್ಯೆಗಳಿದ್ದವು. ಅವಲ್ಲದೆ ಸಾಮಾಜಿಕ, ಆರ್ಥಿಕ, ನೈತಿಕ ಹೀಗೆ ಸಾರ್ವತ್ರಿಕ ಸಮಸ್ಯೆಗಳೂ ಇದ್ದವು. ನಮ್ಮ ಮನಸ್ಸಿನಲ್ಲಿ ನಾವು ನಮ್ಮಸುತ್ತಮುತ್ತಲ ಪ್ರಪಂಚದಲ್ಲಿ ಏನಾಗುತ್ತಿದೆ ಎಂಬುದನ್ನು ಮಾತ್ರ ಗಮನಿಸುತ್ತಿದ್ದೆವು. ಇಲ್ಲಿನ ಈ ಕ್ಷಣದ ಬದುಕಿಗೆ ನಾವು ಜವಾಬ್ದಾರರೆಂಬ ಭಾವ ನಮ್ಮ ಮನಸ್ಸಿನಲ್ಲಿ ತೂಗುತ್ತಿತ್ತು. ಈ ಕ್ಷಣವನ್ನು ಅತ್ಯುತ್ತಮಗೊಳಿಸಲು ಸರ್ವ ಪ್ರಯತ್ನ ಮಾಡಬೇಕೆನಿಸುತ್ತಿತ್ತು. ಅಹ್ಮದ್ನಿಗೆ ಅಂಥ ಯೋಚನೆಯೇ ಇರಲಿಲ್ಲ. ಅವನ ಮೇಲೆ ಯಾವ ನೆರಳೂ ಇರಲಿಲ್ಲ. ಆಗಾಗ್ಗೆ ವ್ಯಕ್ತಿಗತ ಸಮಸ್ಯೆಗಳು ಎದುರಾಗುತ್ತಿದ್ದವು. ಹಾಗಾದಾಗ ಅವನು ತೀರ ಖಿನ್ನನಾಗುತ್ತಿದ್ದ. ಅತ್ತೂ ಬಿಡುತ್ತಿದ್ದ. ಆದರೆ ಅವನ ಸಮಸ್ಯೆಗಳು ಅಂಥ ಗಂಭೀರ ಸಮಸ್ಯೆಗಳಲ್ಲ. ಮಾಮೂಲಿನಂತೆ ಮನೆಜಗಳವೋ, ಅಪ್ಪನ ಕೋಪವೋ ಆ ಬಗೆಯವು- ಕೊಳದ ಮೇಲೆ ಬೀಸಿಬರುವ ಮೆಲುಗಾಳಿಯಂತೆ ಬಂದು ಹೋಗಿ ಅವನನ್ನು ಗೆಲುವಾಗಿಸಿಬಿಡುತ್ತಿದ್ದವು. ಅವನು ಎಷ್ಟು ತೀವ್ರವಾಗಿ ಎಲ್ಲವನ್ನೂ ಸುಖಿಸುತ್ತಿದ್ದ!! ನಮ್ಮ ಕೋಣ್, ಹಾಸಿಗೆ, ಡ್ರೆಸಿಂಗ್ಟೇಬಲ್, ಮತ್ತು ರತಿ ಇವಷ್ಟೇ ಅಲ್ಲದೆ ಕೋಕಾ ಕೋಲಾ ಕುಡುಯುವುದು, ನನ್ನ ಮೈಗೆ ಸೆಂಟ್ ಸ್ಪ್ರೇ ಮಾಡುವುದು, ನನ್ನ ತಲೆ ಬಾಚುವುದು, ನನ್ನಿಂದ ತಲೆ ಬಾಚಿಸಿಕೊಳ್ಳುವುದು ಇತ್ಯಾದಿ. ನಮಗೆ ಆಡಲು ಹೊಸ ಆಟಗಳನ್ನು ಕಂಡುಹಿಡಿದ. ಚಪ್ಪಲಿಯೇ ಬ್ಯಾಟ್ ಆದರೆ ಮುದುಡಿ ಉಂಡೆಕಟ್ಟಿದ ಹೆನ್ರಿಯ ಪತ್ರವೊಂದು ಚೆಂಡಾಯಿತು. ನನಗೆ ಅವನ ಕಾಲ್ಬೆರಳಿನ ನೆಟಿಕೆ ತೆಗೆಯುವುದನ್ನು ಕಲಿಸಿದ. ಅದೆಂಥ ಭಾರತೀಯ ಕೋಮಲತೆ!! ನಾನು ಅವನ ಕಾಲ್ಬೆರಳ ನೆಟಿಕೆ ತೆಗೆದಾಗ ಅವನು ಖುಷಿಯಿಂದ ಅರಚಿದ. ಅದನ್ನೇ ಅವನು ನನಗೆ ಮಾಡಿದಾಗ ನಾನು ನೋವಿಂದ ಕೂಗಿದೆ. ಅವನು ಕೂಡಲೆ ಅದನ್ನು ನಿಲ್ಲಿಸಿ ಪೆಚ್ಚಾದ. ಅವನು ಯಾವಾಗಲೂ ಸೂಕ್ಶ್ಮಜ್ಞನೂ ಸುಕುಮಾರನೂ ಆಗಿದ್ದ. ನನ್ನ ಭಾವನೆಗಳ ಬಗ್ಗೆ ಅವನಿಗಿದ್ದ ಸೂಕ್ಷ್ಮತೆ ಬೇರೆ ಯಾರಿಗಾದರೂ ಇದೆಯೋ ಇಲ್ಲವೋ ನನಗೆ ಗೊತ್ತಿಲ್ಲ. ಅವನಿಗೆ ಅದು ಒಂದು ಥರ ಹುಟ್ಟುಗುಣದಂತಿತ್ತು. ನೇರ ನನ್ನ ಹೃದಯದಾಳಕ್ಕಿಳಿದು ಅದರಲ್ಲಿ ಏನು ನಡೆಯುತ್ತಿದೆ ಅನ್ನುವುದನ್ನು ಅರಿತಂತಿತ್ತು. ಏನನ್ನೂ ಕೇಳದೆ, ಯಾವ ವಿವರಣೆಯನ್ನೂ ಬಯಸದೆ ನನ್ನ ಭಾವಲಹರಿಯಲ್ಲಿ ಉಂಟಾದ ಬದಲಾವಣೆಯನ್ನು ತಿಳಿದು ಅದಕ್ಕೆ ಹೊಂದಿಕೊಳ್ಳಬಲ್ಲವನೂ ಸ್ಪಂದಿಸಬಲ್ಲವನೂ ಆಗಿದ್ದ. ಹೆನ್ರಿಯಾದರೆ ನನ್ನನ್ನು "ಏನಾಯ್ತು, ನಿನಗೇನಾಗಿದೆ?" ಎಂದು ಯಾವಾಗಲೂ ಕೇಳಬೇಕಾಗುತ್ತಿತ್ತು. ನಮ್ಮ ಸಂಬಂಧ ಎಲ್ಲ ರೀತಿಯಿಂದಲೂ ಸರಿಯಾಗಿದ್ದಾಗಲೇ ಹೆನ್ರಿ ನನ್ನನ್ನು ಅರ್ಥಮಾಡಿಕೊಳ್ಳಲು ಪ್ರಾಮಾಣಿಕವಾಗಿ ಹೆಣಗಬೇಕಾಗಿತ್ತು. ಆದರೆ ಅಹ್ಮದ್ ಈ ನಿಟ್ಟಿನಲ್ಲಿ ಹೆಣಗಬೇಕಾಗಿಯೇ ಇರಲಿಲ್ಲ. ಅವನು ಹಾಗೆ ಮಾಡಬೇಕಾಗಿಬಂದಿದ್ದರೂ ಯಶಸ್ವಿಯಾಗುತ್ತಿರಲಿಲ್ಲ. ಕಾರಣ ಅವನು ಯಾವಾಗಲೂ ಏನನ್ನ್ನಾದರೂ ಅರ್ಥ ಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದುದು ಮನಸ್ಸಿನಿಂದಲ್ಲ, ಭಾವನೆಗಳಿಂದ- ಬಹುಶ: ಅವನು ಸಂಗೀತಗಾರನಾದ್ದರಿಂದ ಇರಬೇಕು. ಎಷ್ಟಾದರೂ ಸಂಗೀತ ಮಾತು ಹಾಗೂ ವಿವರಣೆಯನ್ನು ಮೀರಿದ್ದು ತಾನೆ! ಅವನು ಭಾರತೀಯ ಸಂಗೀತದ ಬಗ್ಗೆ ನನಗೆ ಹೇಳಿದಂತೆ ಅದು ಬಹಳ ಸೂಕ್ಷ್ಮವಾದುದು. ಇದನ್ನು ನಾನೂ ಅರಿತಿದ್ದೆ. ಸಂಗೀತದಲ್ಲಿ ಸುಲಭದಲ್ಲಿ ಗ್ರಹಿಸಲೇ ಆಗದಂಥ ಸೂಕ್ಷ್ಮಪರಿಣಾಮಗಳಿರುತ್ತವೆ- ಎಷ್ಟು ಸೂಕ್ಷ್ಮವೆಂದರೆ ಅದನ್ನು ತಿಳಿಯಬೇಕೆಂದರೆ ನೀವು ನಿಮ್ಮ ಸಂವೇದನಶೀಲತೆಯನ್ನು ಯಾವಾಗಲೂ ಅತ್ಯಂಟ ಗರಿಷ್ಠ ಮಟ್ಟಕ್ಕೆ ಹುರಿಗೊಳಿಸಬೇಕಾಗುತ್ತದೆ. ಅಹ್ಮದ್‌ನ ಸಮಗ್ರ ಸಂವೇದನೆಗಳೂ ಸದಾ ಆ ಮಟ್ಟದಲ್ಲೇ ಇರುತ್ತಿದ್ದುದರಿಂದ ಅವನು ನನ್ನನ್ನು ತನ್ನ ಸರೋದ್‌ನಂತೆ ನುಡಿಸಬಲ್ಲವನಾಗಿದ್ದ, ಕೇಳಬಲ್ಲವನಾಗಿದ್ದ.
(ಮುಂದುವರೆಯುವುದು)