ನನ್ನ ಭಾರತಾನುಭವ -ರೂಥ್ ಪ್ರವೇರ್ ಝಾಬ್‍ವಾಲಾರ An Experience of India ನೀಳ್ಗತೆಯ ಕನ್ನಡಾನುವಾದ-ಆರನೆಯ ಕಂತು

ನನ್ನ ಭಾರತಾನುಭವ -ರೂಥ್ ಪ್ರವೇರ್ ಝಾಬ್‍ವಾಲಾರ An Experience of India ನೀಳ್ಗತೆಯ ಕನ್ನಡಾನುವಾದ-ಆರನೆಯ ಕಂತು

ಬರಹ

ಸ್ವಲ್ಪ ದಿನಗಳ ನಂತರ ನಮ್ಮ ಹಣ ಮುಗಿದುಹೋಯಿತು. ಹೆನ್ರಿ ಇನ್ನೂ ಹೆಚ್ಚಿನ ಹಣ ಕಳಿಸಲೊಲ್ಲ. ಹಾಗಾಗಿ ಮುಂದೇನು ಎಂದು ನಾವು ಯೋಚಿಸಬೇಕಾಯಿತು. ಅಹ್ಮದ್‌ನಿಂದ ಅಗಲುವುದನ್ನು ಸಹಿಸಲೇ ಆಗುತ್ತಿರಲಿಲ್ಲ ನನಗೆ. ಕೊನೆಗೆ ನಾನು ಅಹ್ಮದ್ ನನ್ನೊಂದಿಗೆ ದೆಹಲಿಗೆ ಬರುವುದು ಒಳ್ಳೆಯದೆಂದೂ, ಇಬ್ಬರೂ ಸೇರಿ ಹೆನ್ರಿಯೊಂದಿಗೆ ಬಗೆಹರಿಸಿಕೊಳ್ಳುವುದೆಂದೂ ಸಲಹೆ ಕೊಟ್ಟೆ. ಈ ವಿಚಾರದಿಂದ ಅಹ್ಮದ್ ತೀರ ಉತ್ತೇಜಿತನಾದ. ಅವನೆಂದೂ ದೆಹಲಿಗೆ ಹೋಗಿರಲಿಲ್ಲ. ಆದ್ದರಿಂದ ಅಲ್ಲಿಗೆ ಹೋಗಲು ಬಹಳ ಆತುರಗೊಂಡಿದ್ದ. ಅದಕ್ಕಾಗಿ ಅವನು ಮನೆಬಿಟ್ಟು ಬರಬೇಕಿತ್ತು. ಅವನ ಮನೆಯವರು ಎಂದೂ ಅವನನ್ನು ಮನೆಬಿಟ್ಟು ಹೋಗಗೊಡಿಸುತ್ತಿರಲಿಲ್ಲ. ಅದಕ್ಕೆ ಅವನು ಒಂದು ರಾತ್ರಿ ತನ್ನ ಸರೋದ್ ಮತ್ತು ಬಟ್ಟೆಯ ಗಂಟಿನೊಂದಿಗೆ ಮನೆಯಿಂದ ಕದ್ದು ಬಂದು ರೈಲ್ವೇ ಸ್ಟೇಷನ್ನಿನಲ್ಲಿ ನನ್ನನ್ನು ಸೇರಿಕೊಂಡ. ಮರುದಿನ ರಾತ್ರಿ ನಾವು ದೆಹಲಿ ತಲಪಿದೆವು. ನಾವು ಮನೆ ತಲಪಿದಾಗ ಹೆನ್ರಿ ಒಂದು ಸಂತೋಷಕೂಟ ಕೊಡುತ್ತಿದ್ದ. ಅಂಥ ದೊಡ್ದ ಪಾರ್ಟಿಯೇನಲ್ಲ. ಕೆಲವೇ ಜನರು ಕುಳಿತು ಹರಟುತ್ತಿದ್ದ ಸಣ್ಣ ಪಾರ್ಟಿ. ನಾನು ಮತ್ತು ಅಹ್ಮದ್ ನಮ್ಮ ಸಾಮಾನು, ಹಾಸಿಗೆಗಳೊಂದಿಗೆ ಹೊಯ್ದಾಡುತ್ತ ಒಳಬಂದಾಗ ಎಲ್ಲರ ಮುಖದಲ್ಲಿ ಮೂಡಿದ ಭಾವನೆಯನ್ನು ನಾನು ಮರೆಯುವಂತೆಯೇ ಇಲ್ಲ. ರೈಲಿನಲ್ಲಿ ನನ್ನ ರವಿಕೆ ಮೇಲಿನಿಂದ ಕೆಳಗಿನವರೆಗೂ ಹರಿದುಹೋಗಿತ್ತು. ನನ್ನ ಹತ್ತಿರ ಸೇಫ್ಟಿ ಪಿನ್ ಇಲ್ಲದ್ದರಿಂದ ಅದು ಹಾಗೇ ನೇತಾಡುತ್ತಿತ್ತು. ದುರದೃಷ್ಟವಶಾತ್ ನಾನು ಒಳಗೆ ಏನೂ ತೊಟ್ಟಿರಲಿಲ್ಲ. ಹೆನ್ರಿಯ ಅತಿಥಿಗಳೆಲ್ಲರೂ ಶಿಸ್ತಾಗಿ ಕಾಣುತ್ತಿದ್ದ್ದರು. ಗಂಡಸರು ಬುಷ್ ಶರ್ಟ್ ತೊಟ್ಟಿದ್ದರು. ಅವರ ಹೆಂಡತಿಯರು ಗಿಡ್ಡಾದ, ರೇಷ್ಮೆಯ ಕಾಕ್‌ಟೇಲ್ ದಿರಿಸು ಧರಿಸಿದ್ದರು. ಮೊದಲ ಆಘಾತದ ನಂತರ ಎಲ್ಲರೂ ಶಿಸ್ತಾಗಿ ವರ್ತಿಸಿ ವಿಶೇಷ ಘಟನೆ ಏನೂ ನಡೆಯದಂತೆ ನೋಡಿಕೊಂಡರು. ಆದರೂ ಅದು ಸಂಬಂಧಪಟ್ಟವರೆಲ್ಲರಿಗೂ ಮುಜುಗರದ ಸನ್ನಿವೇಶವಾಗಿತ್ತು.

ಅಹ್ಮದ್ ಇದರಿಂದ ಎಂದೂ ಚೇತರಿಸಿಕೊಳ್ಳಲಿಲ್ಲ. ಅಪರಿಚಿತ ಬಿಳಿಯ ಜನರಿರುವ ಕೋಣೆಗೆ ಬಂದು ಅವರೆಲ್ಲರೂ ನಮ್ಮನ್ನು ದುರುಗುಟ್ಟಿ ನೋಡಿದಂಥ ಸನ್ನಿವೇಶ ಅವನಿಗೆ ಅದೆಂಥ ಆಘಾತಕಾರಿಯಾಗಿರಬೇಕು!! ಆ ಕೋಣೆಯೇ ಅವನಿಗೆ ಸಾಕಷ್ಟು ಆಘಾತ ಕೊಟ್ಟಿರಬೇಕು. ಅವನು ಅಂಥದ್ದನ್ನು ನೋಡಿರುವ ಸಾಧ್ಯತೆಯೇ ಇಲ್ಲ. ಅವನಿಗಿರಲಿ, ನನಗೇ ಆಘಾತ ನೀಡಿತ್ತದು. ಹೆನ್ರಿ ಮತ್ತು ನಾನು ಜೀವಿಸಿದ ರೀತಿಯೇ ಹಾಗಿತ್ತು ಎಂಬುದನ್ನು ನಾನು ಮರೆತೇಬಿಟ್ಟಿದ್ದೆ. ನಾನು ಭಾರತಕ್ಕೆ ಬಂದ ಹೊಸದರಲ್ಲಿ ಪೀಠೋಪಕರಣ, ವರ್ಣಚಿತ್ರಗಳು, ಅದು ಇದು ಎಂದು ಕೊಂಡುಕೊಳ್ಳುತ್ತ ನಮ್ಮ ಅಪಾರ್ಟ್‌ಮೆಂಟನ್ನು ಅಲಂಕರಿಸಲು ಬಹಳ ಹೆಣಗಾಡಿದ್ದೆವು. ಕೆಲವು ವಿಷಯಗಳಲ್ಲಿ ನಿಜವಾದ ಭಾರತೀಯತೆಯ ಸ್ಪರ್ಶ ಇತೆನ್ನುವುದನ್ನು ಬಿಟ್ಟರೆ ಬಾಕಿಯಂತೆ ನಮ್ಮ ದೇಶದಲ್ಲಿನ ನಮ್ಮ ಮನೆಯಂತೆಯೇ ಕಾಣುವಂತೆ ಮಾಡುವುದರಲ್ಲಿ ಯಶಸ್ವಿಯಾಗಿದ್ದೆವು. ಅಹ್ಮದ್‌ನಿಗೆ ಇದೆಲ್ಲ ತೀರ ಅಪರಿಚಿತವಾಗಿತ್ತು. ಅವನು ನಮ್ಮ ಜೊತೆ ಸ್ವಲ್ಪ ಹೊತ್ತು ಅಲ್ಲಿದ್ದ. ಆದರೆ ಅದಕ್ಕೆ ಒಗ್ಗಿಕೊಳ್ಳಲಾಗಲಿಲ್ಲ. ಅವನಿಗೆ ರತ್ನಗಂಬಳಿಗಳು, ದೀಪಗಳು, ಕಲಾಕೃತಿಗಳು ಹೀಗೆ ತನ್ನ ಸುತ್ತಲೂ ಅಷ್ಟೊಂದು ವಸ್ತುಗಳಿರುವುದು ಚಿಂತೆಗೀಡುಮಾಡಿರಬೇಕು. ಅವೆಲ್ಲ ಅಲ್ಲಿ ಯಾಕಿರಬೇಕು ಎನ್ನುವುದು ಅವನಿಗೆ ಅರ್ಥವಾಗಿರಲಿಲ್ಲ. ನನ್ನ ಈಗಿನ ಇರಸರಿಕೆಯಲ್ಲಿ ಅವೆಲ್ಲ ಅಲ್ಲಿ ಯಾಕಿರಬೇಕೆಂದು ನನಗೂ ತಿಳಿಯಲಿಲ್ಲ. ವಾಸ್ತವವಾಗಿ ಈ ಎಲ್ಲ ಗೃಹಾಲಂಕಾರಗಳು ಅಡಚಣೆಯಂತೆಯೂ, ಅವು ಈ ಕೋಣೆ ಮಾತ್ರವಲ್ಲದೆ ಮನಸ್ಸು ಮತ್ತು ಆತ್ಮಗಳನ್ನು ಮುತ್ತಿಕೊಂಡು ಅವಗಳ ಮೇಲೆ ಹೊರೆಯಾಗಿ ತೂಗುತ್ತಿರುವಂತೆಯೂ ನನಗನ್ನಿಸಿತು.

ಆ ದಿನಗಳಲ್ಲಿ ನಮ್ಮ ಅಪಾರ್ಟ್‌ಮೆಂಟಿನಲ್ಲಿ ಸಾಕಷ್ಟು ಹೆಚ್ಚು ಕೆಟ್ಟ ಘಟನೆಗಳು ನಡೆದವು. ನನಗೆ ಅಹ್ಮದ್‌ನಲ್ಲಿ ಪ್ರೀತಿ ಮೂಡಿದೆಯೆಂದು ಹೆನ್ರಿಗೆ ಹೇಳಿದೆ. ಅದು ಅವನ ಸಮಾಧಾನಗೆಡಿಸಿತ್ತು. ಆದರೆ ಅವನನ್ನು ಅತಿಯಾಗಿ ಕಂಗೆಡಿಸಿದ್ದು ನಾನು ಮತ್ತು ಅಹ್ಮದ್ ಇಬ್ಬರನ್ನೂ ತನ್ನ ಅಪಾರ್ಟ್‌ಮೆಂಟಿನಲ್ಲಿ ಇಟ್ಟುಕೊಳ್ಳಬೇಕಾದ ಪ್ರಸಂಗ. ಇದೊಂದು ಬೇಡದ ಪ್ರಮೇಯವೆಂದು ನನಗೂ ಅನ್ನಿಸಿತು. ಆದರೆ ನನಗೂ ಬೇರೆ ದಾರಿ ತೋರಲಿಲ್ಲ. ನಾನಾಗಲಿ ಅಹ್ಮದ್ ಆಗಲಿ ಎಲ್ಲಿಗೆ ಹೋಗಬಹುದಿತ್ತು? ನಮ್ಮ ಬಳಿ ಯಾವ ಹಣವೂ ಇರಲಿಲ್ಲ. ಹೆನ್ರಿಯ ಬಳಿಯಲ್ಲಿತ್ತು. ಹಾಗಾಗಿ ನಾವೂ ಅವನ ಜೊತೆಯೇ ಇರಬೇಕಿತ್ತು. ನಮ್ಮಿಬ್ಬರನ್ನೂ ಬೀದಿಗೆ ತಳ್ಳುವುದಾಗಿ ಹೆನ್ರಿ ಹೇಳುತ್ತಿದ್ದ. ಆದರೆ ಅವನು ಹಾಗೆ ಮಾಡುವುದಿಲ್ಲವೆಂದು ನನಗೆ ಗೊತ್ತಿತ್ತು. ಅಂಥ ಉಗ್ರ ಕೆಲಸ ಮಾಡುವ ಪೈಕಿ ಅಲ್ಲ ಅವನು. ಅದಲ್ಲದೆ ಅವನಿಗೆ ಬೀದಿಯ ಭಯ ಎಷ್ಟಿತ್ತೆಂದರೆ ತನ್ನವರು ಯಾರಾದರೂ ಬೀದಿಗೆ ಬಿದ್ದಿದ್ದಾರೆನ್ನುವ ಅವನಿಗೆ ಮೃತ್ಯುಪ್ರಾಯವಾಗಿತ್ತು.. ಅವನು ನಮ್ಮನ್ನ್ನು ಬೀದಿಗಟ್ಟಿದ್ದರೂ ನಾನು ಅಷ್ಟೇನೂ ಯೋಚಿಸುತ್ತಿರಲಿಲ್ಲ. ಸೆಕೆ ಇದ್ದಿದ್ದರಿಂದ ಹೊರಗೆ ಮಲಗಬಹುದಿತ್ತು. ತಿನ್ನಲೂ ಏನೂ ಇಲ್ಲದಿದ್ದರೆ ಯಾರಾದರೂ ಏನಾದರೂ ಕೊಟ್ಟೇ ಕೊಡುತ್ತಿದ್ದರು. ಹೆನ್ರಿಯ ಜೊತೆಗಿನ ಬದುಕ ಎಷ್ಟು ಅಹಿತವಾಗಿತ್ತೆಂದರೆ ನಾನು ಬೀದಿಯ ಬದುಕನ್ನೇ ಆಯ್ಕೆಮಾಡಿಕೊಳ್ಲಬಹುದಿತ್ತು. ಆದರೆ ಅಹ್ಮದ್‌ಗೆ ಮಾತ್ರ ಅದನ್ನು ಸಹಿಸಲು ಅಸಾಧ್ಯವೆಂದು ನನಗೆ ಗೊತ್ತಿತ್ತು.

(ಮುಂದುವರೆಯುವುದು)