3D ಪೋಸ್ಟರ್ ಬಳಸಿ ದೃಶ್ಯಗಳನ್ನೇ ಪ್ರದರ್ಶಿಸಿ!
(ಇ-ಲೋಕ-56)(8/1/2008)
ಬಾಲ್ಯದಲ್ಲಿ ದೊರಗು ಮೇಲ್ಮೈ ಹೊಂದಿದ ಸ್ಕೇಲುಗಳು ಬೇರೆ ಬೇರೆ ಕೋನಗಳಲ್ಲಿ ಬೇರೆ ಬೇರೆ ದೃಶ್ಯಗಳನ್ನು ತೋರಿಸುತ್ತಿದ್ದುದು ನೆನಪಿದೆಯೇ.ವಿದೇಶಗಳಿಂದ ಬಂದವರು ಇಂತಹ ಸ್ಕೇಲುಗಳನ್ನು ತಂದು ಕೊಟ್ಟು ನಮಗೆ ನೀಡುತ್ತಿದ್ದ ಖುಷಿ ನೆನಪಿಸಿಕೊಳ್ಳಿ.ಈಗ ದೃಶ್ಯಗಳನ್ನು ಪ್ರದರ್ಶಿಸುವ ಪೋಸ್ಟರುಗಳೂ ಬಂದಿವೆ.ಇವುಗಳಲ್ಲಿ ಮೂರು ಆಯಾಮದ ನೈಜ ದೃಶ್ಯಗಳೇ ಮೂಡುತ್ತವೆ ಆದರೆ ಈ ಅನುಭವ ಪಡೆಯಲು ಪೋಸ್ಟರಿನ ಎದುರು ನಡೆದು ನೋಡಬೇಕು.ನಮ್ಮ ಸ್ಥಾನ ಬದಲಾಗದೆ ಒಂದೆಡೆ ನಿಂತಿದ್ದರೆ, ಸಾಮಾನ್ಯ ಚಿತ್ರವಿದೆಂದು ಅನಿಸಬಹುದು.ಹೊಲೊಗ್ರಫಿ ತಂತ್ರಜ್ಞಾನವನ್ನು ಇದರಲ್ಲಿ ಬಳಸಲಾಗಿದೆ.ಹೊಲೋಗ್ರಫಿ ತಂತ್ರಜ್ಞಾನವನ್ನು ಉತ್ಪನ್ನಗಳ ಸಾಚಾತನವನ್ನು ನಿರೂಪಿಸಲು ಬಳಸುವುದನ್ನು ನಾವು ನೋಡಿದ್ದೇವೆ.ಆದರೆ ಈ ಹೊಲೊಗ್ರಾಮ್‍ಗಳು ಸೀಮಿತ ಬಣ್ಣ,ಸ್ಪಷ್ಟತೆ ಮತ್ತು ಗಾತ್ರ ಹೊಂದಿವೆ.ದೃಶ್ಯದ ಸರಣಿಚಿತ್ರಗಳನ್ನು ಹೊಲೊಗ್ರಫಿ ವಿಧಾನದಲ್ಲಿ ಮುದ್ರಿಸಲು,ಕಂಪ್ಯೂಟರಿನ ತಂತ್ರಾಂಶವೊಂದನ್ನು ಬಳಸಿದ್ದಾರೆ."ಹೌ ಶಿ ಮೂವ್" ಚಿತ್ರದ ಪೋಸ್ಟರ್‌ಗಳು ಈ ವಿಧಾನದಲ್ಲಿ ಪ್ರದರ್ಶಿತವಾಗಿವೆ.
ಗಗನಚುಂಬಿಗಳಿಗೆ ಲಿಫ್ಟ್:ಪ್ರಯೋಗಕ್ಕೆ ಗೋಪುರ
ಎಲ್ಲ ನಗರಗಳಲ್ಲಿ ಒಂದರ ಗಗನಚುಂಬಿ ಕಟ್ಟಡಗಳು ಕಾಣಿಸಿಕೊಳ್ಳುತ್ತಿವೆ.ಈ ಕಟ್ಟಡಗಳನ್ನು ಏರಲು ಲಿಫ್ಟ್ ಸಹಾಯ ಮಾಡುತ್ತವೆ.ಎತ್ತರದ ಕಟ್ಟಡಗಳಲ್ಲಿ ವೇಗದಲ್ಲಿ ಸಾಗುವ ಲಿಫ್ಟ್‍ಗಳನ್ನು ಒದಗಿಸಿದರೆ ಮಾತ್ರಾ ಅದಕ್ಕಾಗಿ ಕಾಯುವವರ ಜನಸಂದಣಿ ಏರ್ಪಡುವುದನ್ನು ತಡೆಯಬಹುದು.ವೇಗದಲ್ಲಿ ಸಾಗುವ ಲಿಫ್ಟ್‍ಗಳಲ್ಲಿ ಗಾಳಿಯ ಒತ್ತಡ ಏರಿಳಿಯುವುದರಿಂದ,ಲಿಫ್ಟ್ ಬಳಸುವವರಿಗೆ ಕಿವಿ ನೋವು ಬರುವುದಿದೆ.ಹಾಗೆಯೇ ಲಿಫ್ಟ್‍ಗಳು ಸಾಗುವಾಗ ಉಂಟಾಗುವ ಶಿಳ್ಳಿನಂತಹ ಧ್ವನಿಯನ್ನು ಅಡಗಿಸುವುದೂ ಲಿಫ್ಟ್ ತಯಾರಕರ ಮುಂದಿರುವ ಸವಾಲುಗಳು.ಲಿಫ್ಟ್ ಸಾಗುವ ವೇಗ ಹೆಚ್ಚಿದಂತೆ,ಅದರ ವಿನ್ಯಾಸವನ್ನು ಉತ್ತಮ ಪಡಿಸಲು ಪ್ರಯೋಗಗಳನ್ನು ನಡೆಸುವುದು ಅನಿವಾರ್ಯ.ಜಪಾನಿನ ಮಿತ್ಸುಬಿಷಿ ಇಲೆಕ್ಟ್ರಿಕ್ ಕಂಪೆನಿಯು ಎತ್ತರದ ಗೋಪುರವೊಂದನ್ನು ಕಟ್ಟಿದೆ.ನೂರ ಎಪ್ಪತ್ತಮೂರು ಮೀಟರ್ ಎತ್ತರದ ಗೋಪುರವು ಇನಾಜಾವಾ ನಗರದಲ್ಲಿದೆ.ಐದಕೆ ತಗಲಿದ ಖರ್ಚು ಬಿಲಿಯನ್ ಯೆನ್‍ಗಳು.ಲಿಫ್ಟಿನಲ್ಲಿ ಬಳಸುವ ಮೋಟಾರುಗಳು,ಕೇಬಲ್‍ಗಳು ಮತ್ತು ಗೇರ್‍ಗಳನ್ನು ಪರೀಕ್ಷೆಗೊಳ ಪಡಿಸಲು ಈ ಗೋಪುರವನ್ನು ಉಪಯೋಗಿಸುವುದು ಕಂಪೆನಿಯ ಆಲೋಚನೆಯಂತೆ.ಪೋಸ್ಟರನ್ನು ತಯಾರಿಸಿದ್ದು ಕೆನೆಡಾದ ಕ್ವೆಬೆಕಾಯಿಸ್ ಕಂಪೆನಿ.
ಝಗಮಗಿಸುವ ಬೆಳಕಿಗೆ ಎಲ್ ಇ ಡಿ
ಉತ್ಸವಗಳು,ಹಬ್ಬಗಳು ಬಂದಾಗ ನಗರಗಳು ಝಗಮಗಿಸುವ ಬೆಳಕಿನಿಂದ ಕಣ್ಣುಕೋರೈಸುವ ಹಾಗಾಗುತ್ತವೆ.ಇದಕ್ಕೆ ಬರುವ ವಿದ್ಯುತ್ ಖರ್ಚು ವಿಪರೀತ.ವಿದ್ಯುತ್ ಬರವಿರುವ ಈ ದಿನಗಳಲ್ಲಿ ಹೀಗೆ ವಿದ್ಯುತ್ ಪೋಲು ಮಾಡುವುದು ನ್ಯಾಯವೇ?ಈ ಸಲದ ಕ್ರಿಸ್‍ಮಸ್ ಮತ್ತು ಹೊಸವರ್ಷದ ಸಮಯದಲ್ಲಿ ಹಲವು ಪಾಶ್ಚಾತ್ಯ ರಾಷ್ಟ್ರಗಳಲ್ಲಿ ಎಲ್ ಇ ಡಿ ಎನ್ನುವ ಬೆಳಕಿನ ಮೂಲಗಳನ್ನು ಬಳಸಲಾಯಿತು. ಎಲ್ ಇ ಡಿಗಳು ಬೆಳಕು ಬೀರುವ ಡಯೋಡುಗಳೆಂಬ ವಿದ್ಯುತ್ ಅರೆವಾಹಕ ವಸ್ತುಗಳಿಂದ ತಯಾರಿಸಿದ ಸಾಧನ.ಕ್ಯಾಂಪಾಕ್ಟ್ ಫ್ಲೊರೆಸೆಂಟ್ ಲ್ಯಾಂಪ್(ಸಿ ಎಫ್ ಎಲ್)ಗಳಿಗಿಂತ ಇವು ಹೆಚ್ಚು ದಕ್ಷ ಬೆಳಕಿನ ಮೂಲಗಳು.ಇತ್ತೀಚಿನವರೆಗೂ ಬಿಳಿಯ ಬಣ್ಣ ಬೀರುವ ಎಲ್ ಇ ಡಿಗಳಿರಲಿಲ್ಲ. ಈಗ ಅಂತಹ ಎಲ್ ಇ ಡಿಗಳೂ ಲಭ್ಯ.ಕೆಂಪು,ನೀಲಿ ಮತ್ತಿತರ ಬೆಳಕು ಬೀರುವ ಎಲ್ ಇ ಡಿಗಳು ಹೇಗೂ ಲಭ್ಯವಿವೆ.ಹಾಗಾಗಿ ಅಲಂಕರಣಕ್ಕೆ ಬಳಸುವ ವಿದ್ಯುದೀಪಗಳಲ್ಲಿ ಇವನ್ನು ಬಳಸುವುದಕ್ಕೆ ಅಡ್ಡಿ ಇಲ್ಲ.ಹಾಗೆಯೇ ಸೂಪರ್ ಮಾರ್ಕೆಟ್‍ಗಳಲ್ಲಿನ ಫ್ರೀಜರುಗಳಲ್ಲಿ ಬೆಳಕಿನ ಮೂಲವಾಗಿ ಎಲ್ ಇ ಡಿಗಳು ಈಗಾಗಲೇ ಬಳಕೆಯಲ್ಲಿವೆ. ಬೋಯಿಂಗ್ ವಿಮಾನಗಳಲ್ಲಿ ಎಲ್ ಇ ಡಿಗಳನ್ನು ಬಳಸಿದ್ದಾರೆ.ಆದರೆ ಮನೆ ಮತ್ತು ಕಚೇರಿಗಳಲ್ಲಿ ಇಂತಹ ದೀಪಗಳನ್ನು ಕಾಣಲು ಒಂದೆರಡು ವರ್ಷಗಳು ಬೇಕಾದೀತು.ವಾಹನಗಳ ಬ್ರೇಕ್ ಲೈಟುಗಳಲ್ಲಿ,ಕಂಪ್ಯೂಟರುಗಳಲ್ಲಿ ವಿದ್ಯುತ್ ಚಾಲೂ ಆಗಿರುವುದನ್ನು ಸೂಚಿಸಲು ಬಳಸುತ್ತಿದ್ದ ದೀಪದಲ್ಲಿ ಎಲ್ ಇ ಡಿ ಬಳಕೆಯಾಗುತ್ತಿದ್ದಲ್ಲಿಂದ ಎಲ್ ಇ ಡಿ ಬಳಕೆಯ ಹೊಸ ಅಧ್ಯಾಯ ತೆರೆದದ್ದು ಶೂಜಿ ನಕುಮಾರಾ ಎನ್ನುವ ಪ್ರೊಫೆಸರ್. ಈತ ನೀಲಿ ಬೆಳಕು ಬೀರುವ ಎಲ್ ಇ ಡಿ ತಯಾರಿಸದಾತ.ನಂತರದ ದಿನಗಳಲ್ಲಿ ಹಸಿರು,ಬಿಳಿ ಎಲ್ ಇ ಡಿಗಳೂ ಬಂದುವು.ಈ ಬಣ್ಣಗಳಿಗೆ ರಂಜಕದ ಅಂಶ ಕಾರಣ.
ಬಂದಿವೆ ಮಣ್ಣಾಗುವ ಶವಪೆಟ್ಟಿಗೆ
ಹೆಣವು ಪರಿಸರಕ್ಕೆ ಹಾನಿ ಮಾಡದೆ ಮಣ್ಣಾಗಿಸುವ ಸುಲಭ ವಿಧಾನ ಯಾವುದು?ಶವವನ್ನು ದಹಿಸುವುದು ಅತ್ಯಂತ ಪರಿಸರಪ್ರಿಯ ವಿಧಾನವೇ?ಶವಪೆಟ್ಟಿಗೆಯೂ ಸುಲಭವಾಗಿ ಮಣ್ಣಾದರೆ,ಆ ವಿಧಾನವನ್ನೂ ಪರಿಸರಪ್ರಿಯವಾಗಿಸಬಹುದಲ್ಲವೇ?ಹೀಗೆ ಆಲೋಚಿಸಿದ ಸಿಂಥಿಯಾ ಎನ್ನುವ ಮಹಿಳೆ ತನ್ನದೇ ಕಂಪೆನಿ ನ್ಯಾಚುರಲ್ ಬರಿಯಲ್ ಕಂಪೆನಿಯನ್ನು ಸ್ಥಾಪಿಸಿದ್ದಾರೆ.ಬಿದಿರು,ಹತ್ತಿ ಇಂತಹ ವಸ್ತುಗಳನ್ನಿದರಲ್ಲಿ ಬಳಸಿರುವುದರಿಂದ ಇದು ಸುಲಭವಾಗಿ ಮಣ್ಣಾಗುತ್ತದೆ.ಶವಪೆಟ್ಟಿಗೆಯಲ್ಲಿ ಬಳಸುವ ರಾಸಾಯಿನಿಕಗಳು,ದೇಹಕ್ಕೆ ಪೂಸುವ ಫಾರ್ಮಾಲ್ಡಿಹೈಡ್ ಮುಂತಾದದಕ್ಕೆ ಆಕೆಯ ವಿಧಾನದಲ್ಲಿ ವಿದಾಯ ಹೇಳಲಾಗಿದೆ.
ನ್ಯಾಯಬೆಲೆ ಲ್ಯಾಪ್‍ಟಾಪ್:ಯೋಜನೆಯಿಂದ ಇಂಟೆಲ್ ಹೊರಕ್ಕೆ
ನೆಗ್ರೋಪೊಂಟೆ ಎನ್ನುವಾತ ಖ್ಯಾತ ಮಸಾಚ್ಯುಸೆಟ್ಸ್ ತಾಂತ್ರಿಕ ವಿದ್ಯಾಸಂಸ್ಥೆಯ ಮಾಜಿ ನಿರ್ದೇಶಕ. ಜಗತ್ತಿನ ಬಡ ದೇಶಗಳ ಬಡ ಮಕ್ಕಳೆಲ್ಲರಿಗೂ ಲ್ಯಾಪ್‍ಟಾಪ್ ಒದಗಿಸಿ ಅವರಿಗೆ ಮಾಹಿತಿಯ ಹಕ್ಕು ನೀಡುವುದಾತನ ಕನಸು. ಅಗ್ಗದ ದರದಲ್ಲಿ ಒದಗಿಸಲಾಗುವ ಲ್ಯಾಪ್‍ಟಾಪನ್ನು ವಿನ್ಯಾಸ ಮಾಡಲಾತ ಮುತುವರ್ಜಿ ವಹಿಸಿದರು.ಬೆಲೆಯನ್ನು ನೂರು ಡಾಲರಿಗೆ ಮಿತಿಗೊಳಿಸುವ ಉದ್ದೇಶವಿದ್ದರೂ,ಈಗ ಅದರ ಬೆಲೆ ನೂರ ಎಂಭತ್ತು ಡಾಲರ್ ಆಗಬಹುದಂತೆ. ಈ ಲ್ಯಾಪ್‍ಟಾಪಿನಲ್ಲಿ ಬಳಸಲಾಗುವ ಸಂಸ್ಕಾರಕ ಏಎಂಡಿ ಕಂಪೆನಿಯದ್ದು. ಆದರೂ ಇಂಟೆಲ್ ಕಂಪೆನಿಯು ಯೋಜನೆಯಲ್ಲಿ ಭಾಗವಹಿಸಲು ಒಪ್ಪಿತ್ತು.ಇಂಟೆಲ್ ಮತ್ತು ಏಎಂಡಿ ಕಂಫೆನಿಗಳು ಪ್ರತಿಸ್ಪರ್ಧಿಗಳು.ಇಂಟೆಲ್ ತನ್ನದೇ ಆದ ನ್ಯಾಯಬೆಲೆಯ ಕ್ಲಾಸ್‍ಮೇಟ್ ಲ್ಯಾಪ್‍ಟಾಪ್ ವಿತರಿಸುವ ಉದ್ದೇಶ ಹೊಂದಿತ್ತು.ಇದಕ್ಕೆ ವಿರೋಧ ಬಂದದ್ದೇ ಯೋಜನೆಯಿಂದ ಇಂಟೆಲ್ ದೂರಸರಿಯುವ ನಿರ್ಧಾರಕ್ಕೆ ಕಾರಣವಂತೆ.
*ಅಶೋಕ್‍ಕುಮಾರ್ ಎ