ನನ್ನ ಭಾರತಾನುಭವ -ರೂಥ್ ಪ್ರವೇರ್ ಝಾಬ್‍ವಾಲಾರ An Experience of India ನೀಳ್ಗತೆಯ ಕನ್ನಡಾನುವಾದ-ಎಂಟನೆಯ ಕಂತು

ನನ್ನ ಭಾರತಾನುಭವ -ರೂಥ್ ಪ್ರವೇರ್ ಝಾಬ್‍ವಾಲಾರ An Experience of India ನೀಳ್ಗತೆಯ ಕನ್ನಡಾನುವಾದ-ಎಂಟನೆಯ ಕಂತು

ಬರಹ

ಆಗಾಗ್ಗೆ ತತ್ತ್ವಾನ್ವೇಷಣೆಗಾಗಿ ಭಾರತಕ್ಕೆ ಹೋಗಿಬಂದ ಜನಗಳ ಭೇಟಿಯಾಗಿತ್ತು. ಆದರೆ ನಾನು ನನಗಾಗಿ ಬೇಡಿದ್ದು ಅದನ್ನಲ್ಲ. ನನಗೆ ಬೇಕಾದ ಏನನ್ನ್ನಾದರೂ ನಾನೇ ಸುತ್ತಾಟ ಮಾಡಿ ಪಡೆಯಬಹುದೆಂದು ಭಾವಿಸಿದ್ದೆ. ಈಗ ಅದರಲ್ಲಿ ಸೋತಿದ್ದರಿಂದ ಇನ್ನೊಂದರಲ್ಲಿ ನನಗೆ ಆಸಕ್ತಿ ಮೂಡಿತು. ಕೆಲವು ಪ್ರಾರ್ಥನಾ ಸಭೆಗಳಿಗೆ ಹೋಗತೊಡಗಿದೆ. ಅಲ್ಲಿಯ ಪರಿಸರ ನನಗೆ ತುಂಬಾ ಹಿಡಿಸಿತು. ಸಾಮಾನ್ಯವಾಗಿ ಪ್ರಾರ್ಥನಾಸಭೆಯನ್ನು ಸನ್ಯಾಸ ಪಡೆದು ಕಾವಿ ಧ್ದರಿಸುತ್ತಿದ್ದ ಒಬ್ಬ ಸ್ವಾಮಿ ನಡೆಸಿಕೊಡುತ್ತಿದ್ದ. ಅವನು ’ದೇವರು ಮತ್ತು ಪ್ರೀತಿ’ ಎಂಬ ವಿಷಯದಲ್ಲಿ ಉಪನ್ಯಾಸ ಮಾಡಿದ. ಎಲ್ಲರೂ ’ಪ್ರೀತಿ ಹಾಗೂ ಪರಮಾತ್ಮ’ ಎಂಬ ವಿಷಯವಾಗಿ ಭಜನೆ ಮಾಡಿದರು. ಈ ಪ್ರಾರ್ಥನಾ ಸಭೆಗೆ ಬರುತ್ತಿದ್ದವರು ಮಧ್ಯವಯಸ್ಕರೂ ಮತ್ತು ಸಾಕಷ್ಟು ಬಡವರೂ ಆಗಿದ್ದರು. ನಾನು ನನ್ನ ಪ್ರವಾಸದಲ್ಲಿ ಇಂಥ ಅನೇಕ ಜನಗಳನ್ನು ಭೇಟಿಯಾಗಿದ್ದೆ. ಏಕೆಂದರೆ ಸ್ಟೇಷನ್ನಿನ್ನ ಪ್ಲಾಟ್‌ಫಾರಂನಲ್ಲಿ, ಬಸ್ ಡಿಪೋಗಳಲ್ಲಿ ಸಹನೆಯಿಂದ ಕಾಯುತ್ತ ಕಂಡಕ್ಟರನೋ, ಬೇರೆ ಅಧಿಕಾರಿಯೋ ತಳ್ಳಿದರೂ ದೂರು ಹೇಳದ ಜನರೆಂದರೆ ಇವರೇ! ಇಕ್ಕಟ್ಟಿನ, ಅನಾರೋಗ್ಯಕರ ಜಾಗಗಳಲ್ಲಿ ವಾಸಮಾಡುತ್ತ, ನಲ್ಲಿಯ ನೀರು, ಒಳಚರಂಡಿ ವ್ಯವಸ್ಥೆ ಯಾವುದೂ ಇಲ್ಲದ ಕಾರಣ ಸ್ವಭಾವತ: ತುಂಬಾ ಶುಭ್ರರಾದರೂ ಸ್ವಚ್ಛವಾಗಿರಲು ಹೆಣಗುತ್ತಿದ್ದರೂ ಒಂದು ವಿಧವಾದ ಹಗುರವಾದ ಮೈವಾಸನೆ ಬೀರುವ ಸಾಧುಸ್ವಭಾವದ ಜನ. ಅವರು ದೇವರ ನಾಮ ಹಾಡುವಾಗ ಅವರ ಮುಖಗಳಲ್ಲಿ ವ್ಯಕ್ತವಾಗುವ ಭಾವ ನನಗೆ ಸೇರುತ್ತಿತ್ತು. ನಾನೂ ಅವರಂತಾಗಬೇಕಿತ್ತು. ಅದಕ್ಕೇ ನಾನು ಬಿಳಿಯ ಸಾದಾ ಸೀರೆಗಳನ್ನೇ ಉಡತೊಡಗಿದೆ. ನನ್ನ ಕೂದಲನ್ನು ಸರಳವಾಗಿ ಗಂಟುಹಾಕಿಕೊಳ್ಳತೊಡಗಿದೆ. ನಾನು ಧರಿಸಿದ ಒಂದೇ ಆಭರಣವೆಂದರೆ ಅದೊಂದು ಮಣಿಯ ಹಾರ. ಅದೂ ಅಲಂಕಾರವಲ್ಲ. ದೇವರ ಜಪ ಮಾಡುವಾಗ ಸಲುವಾಗಿ. ಸಸ್ಯಾಹಾರಿಯಾಗಿದ್ದುಕೊಂಡು ಅನಪೇಕ್ಷಣೀಯವಾದ ಸಹಜ ಮಾನವೀಯ ವಿಕಾರಗಳಾದ ಕಾಮ, ಕ್ರೋಧಗಳನ್ನು ತೊಡೆದುಹಾಕಲು ಸಾಧ್ಯವಾದಷ್ಟೂ ಪ್ರಯತ್ನ ಪಟ್ಟೆ. ಹೆನ್ರಿ ಒಂದು ಥರ ಕಿರಿಕಿರಿ ಮಾಡುವ ಜಗಳಗಂಟ ಮನ:ಸ್ಥಿತಿಯಲ್ಲಿದ್ದ. ನಾನೂ ಅವನಿಗೆ ಎದುರಾಡದೆ ಅವನೊಡನೆ ತುಂಬಾ ಕರುಣೆ ಹಾಗೂ ಸಹನೆಯಿಂದ ಇದ್ದೆ. ಆದರೆ ಅದು ಅವನ ಮೇಲೆ ಒಳ್ಳೆಯ ಪರಿಣಾಮ ಬೀರುವುದಿರಲಿ, ಅವನ ಸ್ವಭಾವ ಹದಗೆಟ್ಟಿತು. ಒಟ್ಟು ನಾನು ರೂಡಿಸಿಕೊಳ್ಳಲು ಪ್ರಯತ್ನಿಸುತ್ತಿದ್ದ ವ್ಯಕ್ತಿತ್ವ ಅವನಿಗೆ ಇಷ್ಟ ಆಗದೆ ನನ್ನ ಉಡುಪಿನ ವೈಖರಿಯನ್ನೂ, ಸರಳ ನೋಟವನ್ನೂ, ಸಾದಾ ಆಹಾರವನ್ನೂ ಹೀಯಾಳಿಸತೊಡಗಿದ. ನಿಜ ಹೇಳಬೇಕೆಂದರೆ, ಅವನು ನನ್ನೆದುರಿಗೆ ಕೂತು ಕಟ್ಲೆಟ್‌ಗಳನ್ನೂ, ಚಾಪ್ಸ್‌ಗಳನ್ನೂ ತಿನ್ನುತ್ತಿದ್ದಾಗ ನಾನು ಬರೀ ಬೇಯಿಸಿದ ಅನ್ನ ಮತ್ತು ಕಾಳಿನ ಊಟ ಮಾಡುವುದು ನನಗೇನಂಥ ಪ್ರಿಯವಾಗಿರದೆ ಶಿಕ್ಷೆಯೇ ಆಗಿರುತ್ತಿತ್ತು.