ನನ್ನ ಭಾರತಾನುಭವ -ರೂಥ್ ಪ್ರವೇರ್ ಝಾಬ್‍ವಾಲಾರ An Experience of India ನೀಳ್ಗತೆಯ ಕನ್ನಡಾನುವಾದ-ಹತ್ತನೆಯ ಕಂತು

ನನ್ನ ಭಾರತಾನುಭವ -ರೂಥ್ ಪ್ರವೇರ್ ಝಾಬ್‍ವಾಲಾರ An Experience of India ನೀಳ್ಗತೆಯ ಕನ್ನಡಾನುವಾದ-ಹತ್ತನೆಯ ಕಂತು

ಬರಹ

ನನ್ನ ಕಣ್ಣಿಗೆ ಅವನು ಆಧ್ಯಾತ್ಮಿಕ ವ್ಯಕ್ತಿಯ ಹಾಗೆ ಕಾಣಲಿಲ್ಲ. ಅವನೊಬ್ಬ ಅಗಲ ಭುಜದ , ದೊಡ್ಡತಲೆಯ ಧಡೂತಿ ವ್ಯಕ್ತಿ. ಉದ್ದಕ್ಕೆ ಕೂದಲು ಬಿಟ್ಟಿದ್ದ. ಆದರೆ ಅವನ ದವಡೆ ನುಣುಪಾಗಿದ್ದು ದೊಡ್ಡದಾಗಿ ಪ್ರಮುಖವಾಗಿ ಮುಂಚಾಚಿಕೊಂಡಿತ್ತು. ಇದರಿಂದಾಗಿ ಅವನಿಗೆ ಗೂಳಿಯಂಥ ಶಕ್ತಿಶಾಲಿ ಕಳೆ ಬಂದಿತ್ತು. ಅವನುಟ್ಟಿದ್ದು ಬರೀ ಒಂದು ಕಾವಿ ಬಟ್ಟೆ. ಮೈಯ ಹೆಚ್ಚಿನ ಭಾಗ ತೆರೆದಿದ್ದು ಅವನ ಭುಜ ಹಾಗೂ ಕಾಲುಗಳು ಎಷ್ಟು ಶಕ್ತವಾಗಿದ್ದವೆಂಬುದನ್ನು ಧುತ್ತನೆ ಮನಗಾಣಿಸುವಂತಿತ್ತು. ಅವನಿಗೆ ದೊಡ್ಡ ಕಣ್ಣುಗಳಿದ್ದವು. ಅದನ್ನು ಅವನು ಯಾವಾಗಲೂ ತೀವ್ರ ಪ್ರಭಾವ ಬೀರಲು ಬಳಸುತ್ತಾನೆನ್ನುವುದು ಸ್ಪಷ್ಟವಾಗಿತ್ತು. ಅದರಿಂದ ಅವನು ಜನಗಳನ್ನು ಸ್ತಬ್ಧಗೊಳಿಸಿ ಒಂದೇ ಸಮನಾದ ನೋಟದಿಂದ ತೂರಿ ನೋಡುತ್ತಿದ್ದ; ಹೆನ್ರಿಯನ್ನು ಕರೆಸಬೇಕಾದಾಗ ನನ್ನ ಮೇಲೆ ಅಂಥದೇ ದೃಷ್ಟಿಯನ್ನು ಬಳಸಿದ. ಆದರೆ ನನ್ನ ಮೇಲೆ ಅದರ ಪರಿಣಾಮವೇನೂ ಆಗಲಿಲ್ಲ. ಆದರೆ ಬೇರೆ ಶಿಷ್ಯರು ಇದರಿಂದ ತೀವ್ರ ಪ್ರಭಾವಕ್ಕೊಳಗಾಗುತ್ತಿದ್ದರು. ಅವನ ಶಿಷ್ಯವೃಂದದಲ್ಲಿ ಜೇನ್ ಎನ್ನುವ ಹುಡುಗಿಯೊಬ್ಬಳಿದ್ದಳು. ಅವಳ ಅಭಿಪ್ರಾಯದಲ್ಲಿ ಅವನ ಕಣ್ಣುಗಳು ಸೂರ್ಯನಂತಿದ್ದು ಅವಳೇನಾದರೂ ಅವುಗಳನ್ನು ನಿಟ್ಟಿಸಿ ನೋಡಿದ್ದರೆ ಅವಳ ಕಣ್ಣು ಕುರುಡಾಗುವ ಅಥವಾ ಸೀದುಹೋಗುವಂಥ ಭಯಂಕರವಾದದ್ದೇನೋ ಸಂಭವಿಸುತ್ತಿತ್ತು.

ಭಾರತೀಯ ಗುರುವೊಬ್ಬನು ಬಯಸುವಂತೆ ಜೇನ್ ಎಲ್ಲ ರೀತಿಯಲ್ಲೂ ತನ್ನನ್ನು ತಿದ್ದಿಕೊಂಡಿದ್ದಳು. ಸಂಪೂರ್ಣ ವಿನೀತಳೂ ಸಮರ್ಪಿತಳೂ ಆಗಿದ್ದಳು. ಗುರುವಿನೆದುರು ಬಂದಾಗ, ಅವನಿಂದ ದೂರ ಹೋಗುವಾಗ ಅವನ ಚರಣಸ್ಪರ್ಶ ಮಾಡುತ್ತಿದ್ದಳು. ಯಾವುದೇ ಕೆಲಸಕ್ಕೆ ಕಳಿಸಿದರೂ ಕಾತರದಿಂದ ಧಾವಿಸುತ್ತಿದ್ದಳು. ತಾನು ಕೇವಲ ಶೂನ್ಯಳಾಗಿ, ಕೇವಲ ಅವನ ಸಂಕಲ್ಪಕ್ಕೆ ಅನುಗುಣವಾಗಿ ಬದುಕುವುದರಲ್ಲೇ ತನ್ನ ವೈಭವ ಅನ್ನುತ್ತಿದ್ದಳು. ಅವಳಿದ್ದದ್ದೂ ಹಾಗೆಯೇ- ಏನೂ ಅಲ್ಲದವಳಾಗಿ. ಮೊದಲು ಅವಳಲ್ಲಿದ್ದ ತನ್ನತನ ಪೂರ್ತಿ ಸೋರಿಹೋದ ಹಾಗೆ. ಅವಳು ತನ್ನ ದೇಶದಲ್ಲಿದ್ದಾಗ ಅವಳ ಕೆನ್ನೆಗಳು ನಸುಗೆಂಪಿದ್ದಿರಬಹುದು. ಈಗ ಅವು ತೀರಾ ಬಿಳಿಚಿಕೊಂಡು ಮೇಣದಂತಾಗಿದ್ದವು. ಅವಳ ಕೂದಲೂ ಸಹ ಮಾಸಿ ಬಣ್ಣಗೆಟ್ಟಿದ್ದವು. ಯಾವಾಗಲೂ ಬಿಳಿಯ ಸಾದಾ ನೂಲಿನ ಸೀರೆಯುಟ್ಟು ಎಂದಿಗಿಂತ ತೆಳ್ಳಗೂ ಬೆಳ್ಳಗೂ ಕಾಣುತ್ತಿದ್ದಳು. ಅವಳುಟ್ಟ ಸೀರೆ ಅವಳಿಗೆ ನಿತಂಬವೇ ಇಲ್ಲದುದನ್ನೂ, ಅವಳು ತೀರಾ ಚಪ್ಪಟೆ ಸ್ತನದವಳೆಂಬುದನ್ನೂ ಸ್ಪಷ್ಟಪಡಿಸುತ್ತಿತ್ತು. ಆದರೆ ಅವಳು ಸಂತೋಷವಾಗಿದ್ದಳು. ಕನಿಷ್ಠಪಕ್ಷ ಹಾಗೆ ಹೇಳುತ್ತಿದ್ದಳು. ಅಂಥ ಆನಂದ ತನಗೆ ತಿಳಿದೇ ಇರಲಿಲ್ಲವೆಂದೂ, ಮನುಷ್ಯರು ಅಂಥ ಭಾವ ಅನುಭವಿಸಲು ಸಾಧ್ಯವೆಂದು ತನಗೆ ಗೊತ್ತೇ ಇರಲಿಲ್ಲವೆಂದೂ ಹೇಳಿದಳು.ಹಾಗೆ ಹೇಳುವಾಗ ಅವಳ ಮಾಸಲು ಕಣ್ಣುಗಳಲ್ಲಿ ಏನೋ ಒಂದು ಬಗೆಯ ಹೊಳಪಿತ್ತು. ಅಂಥ ಕ್ಷಣಗಳಲ್ಲಿ ನನಗೆ ಈರ್ಷ್ಯೆ ಮೂಡುತ್ತಿತ್ತು. ಕಾರಣ ನಾನು ಹುಡುಕುತ್ತಿದ್ದುದನ್ನು ಅವಳು ಕಂಡುಕೊಂಡಂತಿತ್ತು. ಅದೇ ಕಾಲಕ್ಕೆ ಅವಳು ನಿಜಕ್ಕೂ ತಾನಂದುಕೊಂಡದ್ದನ್ನು ಪಡೆದಿದ್ದಾಳೋ ಅಥವಾ ಬೇರೇನನ್ನೋ? ಅವಳು ತನಗೆ ತಾನೇ ಮೋಸಮಾಡಿಕೊಳ್ಳೂತ್ತಿದ್ದು ಅದು ಒಂದು ದಿವಸ ಇವಳಿಗೆ ಮನವರಿಕೆಯಾಗಿ ಗಾಬರಿಯಾಗುವುದಿಲ್ಲ ತಾನೆ! ಎಂದೂ ಅನ್ನಿಸುತ್ತಿತ್ತು.

ಗುರುವಿನ ವಿಷಯದಲ್ಲಿ ನನ್ನ ಧೋರಣೆ ಕಂಡು ಜೇನ್‌ಗೆ ಆಘಾತವಾಗಿರಬೇಕು. ಗುರುವಿನ ಚರಣಸ್ಪರ್ಶ ಮಾಡದ, ಅವನು ಸಾಮಾನ್ಯ ಮನುಷ್ಯನೋ ಎಂಬಂತೆ ಎದುರುತ್ತರ ಕೊಡುವ ನನ್ನ ಧೋರಣೆಯಿಂದ ಜೇನ್‌ಗೆ ಆಘಾತವಾಗಿರಬೇಕು. ಉಳಿದೆಲ್ಲ ಶಿಷ್ಯರೂ, ಅವನನ್ನು ಕಾಣಲು ಬಂದ ಹೊರಗಿನ ಜನಗಳೂ ಹೀಗೆ ಎಲ್ಲರೂ ಅವನನ್ನು ಮಹಾಭಕ್ತಿಯಿಂದ ಕಾಣುತ್ತಿದ್ದರು. ಅವನ ಎದುರಿನಲ್ಲಿ ಅವರು ಮುಖಗಳು ಅವನಲ್ಲಿ ಏನೋ ವಿಶೇಷವಿದೆ ಎಂಬಂತೆ ಬೆಳಗುತ್ತಿದ್ದವು. ಹಾಗಾಗಿ ಕೆಲವೊಮ್ಮೆ ನನ್ನಲ್ಲೇ ಏನಾದರೂ ತೊಂದರೆ ಇದೆಯೇ ಎಂದೂ ಅನ್ನಿಸುತ್ತಿತ್ತು. ಉಳಿದವರಿಗೆ ಕಂಡ ವಿಶೇಷ ನನಗೆ ಮಾತ್ರ ಕಾಣುತ್ತಿರಲಿಲ್ಲ. ಏನೇ ಆದರೂ ನಾನಲ್ಲಿ ಸಾಕಷ್ಟು ಖುಷಿಯಾಗಿದ್ದೆ. ಅವನಿಂದಾಗಿ ಅಲ್ಲ- ಅಲ್ಲಿಯ ಪರಿಸರ ಮತ್ತು ಅವರೆಲ್ಲರೂ ಬದುಕಿದ್ದ ರೀತಿಯಿಂದಾಗಿ. ಯಾವುದೋ ಉನ್ನತ ಹಾಗೂ ಸುಂದರವಾದದ್ದಕ್ಕಾಗಿ ತಾವೆಲ್ಲರೂ ಬದುಕಿರುವರೋ ಎನ್ನುವಂತೆ ಪ್ರತಿಯೊಬ್ಬರೂ ಅತ್ಯಂತ ತೃಪ್ತರಾಗಿದ್ದರು. ನಾನು ಸಹನೆಯಿಂದ ಕಾದರೆ ನನಗೂ ಹಾಗೇ ಆಗಬಹುದು ಎಂದುಕೊಂಡೆ. ಅವರೆಲ್ಲರ ಹಾಗೆ ನಾನೂ ಒಂದೆಡೆಯಲ್ಲಿ ಚಕ್ಕಳಬಕ್ಕಳ ಹಾಕಿ ಕೂತು ನನಗೆ ಕೊಟ್ಟ ಧ್ಯಾನಮಂತ್ರದ ಮೇಲೆ ಮನಸ್ಸು ಏಕಾಗ್ರಗೊಳಿಸಲು ಪ್ರಾರಂಭಿಸಿದೆ. ಅದರಲ್ಲಿ ಯಶಸ್ವಿಯಾಗದೆ ಬೇರೆ ಏನನ್ನೋ ಯೋಚಿಸುತ್ತಿದ್ದೆ. ನಾನು ಕೆಲವು ಬಾರಿ ತಾರಸಿಯ ಮೇಲೆ ಕೂತು ಹೊರಗಿನ ನದಿಯ ಪ್ರಶಾಂತತೆ, ಆಚೆಯ ದಡದವರೆಗೆ ಚಾಚಿಕೊಂಡ ಅದರ ಹರಹು, ಅದರಲ್ಲಿ ಅತ್ತಿಂದಿತ್ತ ಓಡಾಡುವ ದೋಣಿಗಳು, ಬದಲಾಗುವ ಬೆಳಕಿನ ವರ್ಣಛಾಯೆ, ಅದು ನೀರಿನಲ್ಲಿ ಪ್ರತಿಫಲನವಾಗುವ ಬಗೆ ಎಲ್ಲವನ್ನೂ ಕಾಣಲು ಹೋಗುವುದಿತ್ತು. ಆದರೆ ನಾನು ದ್ಯಾನ ಮಾಡಲಾಗಲೀ ಉನ್ನತ ಚಿಂತನೆಗಳಲ್ಲಿ ತೊಡಗಲಾಗಲೀ ಪ್ರಯತ್ನಿಸಲಿಲ್ಲ. ಆದರೆ ನಾನು ಪ್ರಶಾಂತತೆಯನ್ನ್ನು ಅನುಭವಿಸುತ್ತಿದ್ದೆ. ಅಲ್ಲಿರುವುದು ನನಗೆ ಖುಷಿಯಾಗಿತ್ತು.