ಚಾರಿತ್ರಿಕ ನಾಟಕಗಳ ಪುನರ್ಜನ್ಮದಾತ - ಆಂಜನೇಯ

ಚಾರಿತ್ರಿಕ ನಾಟಕಗಳ ಪುನರ್ಜನ್ಮದಾತ - ಆಂಜನೇಯ

ಬರಹ

ಚಾರಿತ್ರಿಕ ನಾಟಕಗಳೆಂದರೆ ಅದೇನೋ ನಮ್ಮ ಜನರಿಗೆ ಒಂದು ರೀತಿಯ ಅಲರ್ಜಿ. ಯಾರದೋ ಕಥೆ, ಎಂದೋ ಆಗಿಹೋದ ಘಟನೆ, ಯಾರಿಗೆ ಬೇಕು ಎಂದು ಮೂಗು ಮುರಿಯುವವರೇ ಇಂದು ಹೆಚ್ಚಾಗಿ ಕಾಣುವ ಜನ. ನಾಟಕವೆಂದರೆ ಅವರ ಮನಸ್ಸಿನಲ್ಲಿ ಮೂಡುವುದು ಅದೊಂದು ಕೇವಲ ಮನರಂಜನೆಯ (ಕೆಲವುಸಾರಿ ಕೀಳು ಮಟ್ಟದ) ತಾಣ ಎಂಬ ಚಿತ್ರಣವೇ. ಇನ್ನು ಅವರ ಮಕ್ಕಳಿಗೆ ಪೂರ್ವಜರ ವಿಷಯ ತಿಳಿಸಿಕೊಡುವುದಂತೂ ಕನಸಿನ ಮಾತೇ ಸರಿ. ಹಿಂದಾನೊಂದು ಕಾಲದಲ್ಲಿ ಚಾರಿತ್ರಿಕ ನಾಟಕಗಳಾದ ಮೈಸೂರು ಹುಲಿ, ದುರ್ಗದ ಸಿಂಹ, ಕಿತ್ತೂರು ರಾಣಿ ಚೆನ್ನಮ್ಮ, ರಣಧೀರ ಕಂಠೀರವ, ಯಚ್ಚಮನಾಯಕ, ಚಿಕ್ಕದೇವರಾಯ, ಮೇವಾಡದ ರಾಣಿ ಸಂಯುಕ್ತಾ ಇತ್ಯಾದಿ ನಾಟಕಗಳು ಪ್ರದರ್ಶನ ಹಾಗು ಗಲ್ಲಾ ಪೆಟ್ಟಿಗೆಯಲ್ಲಿ ಜಯಭೇರಿ ಹೊಡೆದು ಜನಮನದಲ್ಲಿ ಹಾಸುಹೊಕ್ಕಾಗಿ ಉಳಿದುಕೊಂಡಿದ್ದವು. ಈಗಿನ ಜನಾಗಂಗದವರು ಅವರೆಲ್ಲಾ ಯಾರು, ಅವರಿಂದ ನಮಗೇನು ಪ್ರಯೋಜನವಾಗಿದೆ, ಎಂದು ಕೇಳುವ ವಿಷಾದಕರ ಬೆಳವಣಿಗೆ ನಮ್ಮ ಕಣ್ಣ ಮುಂದಿದೆ. ಚಲನ ಚಿತ್ರಗಳು, ಟಿವಿ ಸರಣಿಗಳೂ ಚಾರಿತ್ರಿಕ ಕಥಾ ವಸ್ತುವನ್ನು ಕಡೆಗಣ್ಣಿನಿಂದ ನೋಡುತ್ತಿರುವುದು, ಕೇವಲ ಬಣ್ಣದ ಬೆಡಗಿಗೆ ಒತ್ತುಕೊಟ್ಟು ನಮ್ಮ ಯುವ ಜನತೆಯನ್ನು ದಿಕ್ಕುಗೆಡಿಸುತ್ತಿರುವುದು ಬಹಳ ಖೇದಕರ ವಿಷಯವೇ.

ಇಂತಹ ಪ್ರತಿಕೂಲ ಸಂದರ್ಭದಲ್ಲಿಯೂ ಸಹ ತಮ್ಮ ಕಾರ್ಯದಲ್ಲಿ ಅತ್ಯಂತ ನಿಷ್ಠೆ, ಶ್ರದ್ಧೆ, ಭಕ್ತಿ, ದೃಢ ನಿಶ್ಚಯಗಳಿಂದ ಕನ್ನಡ ನಾಡಿನ ಜನತೆಗೆ, ಅದರಲ್ಲಿಯೂ ಯುವ ಪೀಳಿಗೆಯನ್ನು ಗಮನದಲ್ಲಿಟ್ಟುಕೊಂಡು ಚರಿತ್ರೆಯೆಂಬ ಸಮುದ್ರದ ಆಳಕ್ಕೆ ಇಳಿದು, ಜಾಲಾಡಿ, ಉತ್ತಮೋತ್ತಮ ರತ್ನಗಳನ್ನು ಹೆಕ್ಕಿ, ಸಂಸ್ಕರಿಸಿ, ಗತಿಸಿದ ಘಟನೆಗಳಿಗೆ ಜೀವಕೊಟ್ಟು ರಂಗದ ಮೇಲೆ ಗತಕಾಲದ ಸಂದರ್ಭವನ್ನು ನಿರ್ಮಿಸಿ, ಆಡಿ, ನೋಡಿ, ನಲಿದು, ಪ್ರೇಕ್ಷಕ ಪ್ರಭುಗಳ ಮನ ಸೂರೆಗೊಳ್ಳುತ್ತಿರುವ ವ್ಯಕ್ತಿ ಶ್ರೇ ವೆಂಕಟಪ್ಪ ಮತ್ತು ಶ್ರೀಮತಿ ತಿಮ್ಮಕ್ಕ ದಂಪತಿಗಳ ಪುತ್ರ ಆಂಜನೇಯ (೪೮).

ಕಲಾಪದವಿ (ಬಿಎ) ಹಾಗು ನಾಟಕದಲ್ಲಿ ಡಿಪ್ಲೊಮಾ ಪಡೆದಿರುವ ಆಂಜನೇಯ ಯಾವ ತಜ್ಞ ನಾಟಕಕಾರನಿಗೂ ಸರಿಸಾಟಿಯಾಗಬಲ್ಲರು. ಅವರು ಬೆಂಗಳೂರು ನಿರ್ಮಾಪಕ ಕೆಂಪೇಗೌಡರ ಮನೆ, ಮನೆತನ, ಮಹಾನ್ ತನ, ಹಿಂದಿನ ಮತ್ತು ಮುಂದಿನ ತಲೆಮಾರುಗಳ ಬಗ್ಗೆ ಆಳವಾದ ಅಧ್ಯಯನ ನಡೆಸಿ, ಹಲವಾರು ನಾಟಕಗಳನ್ನು ಬರೆದು, ಸಂಭಾಷಣೆ ತಯಾರಿಸಿ, ಹಾಡುಗಳನ್ನು ಕಟ್ತಿ, ವೇಶಭೂಷಣಗಳನ್ನು ಹೊಂದಿಸಿ, ಪರಿಕರಗಳನ್ನು ಜೊತೆ ಮಾದಿ, ಬೆಳಕು-ಧ್ವನಿ ಸಂಯೋಜಿಸಿ, ಪ್ರಸಾದನವನ್ನು ಪ್ರಾರೂಪಿಸಿ ಯಶಸ್ವಿಯಾಗಿದ್ದಾರೆ.

ಬೆಂಗಾಳೂರು ನಿರ್ಮಾಪಕ ಕೆಂಪೇಗೌಡರ ಸೊಸೆ ಮಹಾತ್ಯಾಗಿ ಲಕ್ಷ್ಮೀದೇವಿ ೧೫೩೭ರಲ್ಲಿ ಬೆಂಗಳೂರು ಕೋಟೆ ಹೆಬ್ಬಾಗಿಲಿಗೆ ತನ್ನ ಜೀವನವನ್ನೇ ಅರ್ಪಿಸಿಕೊಂಡದ್ದು ಐತಿಹಾಸಿಕ ಘಟನೆ. ಆಕೆಯ ಸಮಾಧಿ ಮತ್ತು ದೇವಾಲಯಗಳನ್ನು ಆಕೆಯ ತವರಾದ ಕೋರಮಂಗಲದಲ್ಲಿ ಕಟ್ಟಿಸಿದ ಕೆಂಪೇಗೌಡರು ಆಕೆಯ ಜೀವ ತ್ಯಾಗದ ವಿಷಯವಾಗಿ ಬಹಳ ನೊಂದು ವೈರಾಗ್ಯ ತಾಳಿ, ರಾಜ್ಯಾಡಳಿತವನ್ನು ತ್ಯಜಿಸಿ, ತಮ್ಮ ಕೊನೆಗಾಲವನ್ನು ಶಿವಗಂಗೆಯಲ್ಲಿ ಕಳೆದರು. ಲಕ್ಷ್ಮೀದೇವಿಯ ಸಮಾಧಿ ಮತ್ತು ದೇವಾಲಯಗಳ ರಕ್ಷಣೆಗಾಗಿ ಕೆಂಪೇಗೌಡರು ದತ್ತಿಯಾಗಿ ನೀಡಿದ್ದ ೧೩ ಎಕರೆ ಜಮೀನು ನೆಲಗಳ್ಳರ ಕೈವಶವಾಗಿ, ಸಮಾಧಿಯು ಹೇಸಿಗೆ ಮಾಡುವವರ ತಾಣವಾಗಿ ವಿನಾಶದ ಅಂಚಿನಲ್ಲಿತ್ತು. ಸತತವಾಗಿ ೪ ವರ್ಷಗಳ ಕಾಲ ಕೆಂಪೇಗೌಡರ ಮತ್ತು ಅವರ ವಂಶಸ್ಥರ ಬಗ್ಗೆ ಸಂಪೂರ್ಣ ಆಧಾರಗಳನ್ನು ಸಂಗ್ರಹಿಸಿ, ಬೆಂಗಾಳೂರ ಭಾಗ್ಯಲಕ್ಷ್ಮಿ ನಾಟಕವನ್ನು ಬರೆದು ಜನಮನವನ್ನು ಈ ಕಡೆ ಸೆಳೆಯಲು ಕರ್ನಾಟಕದಾದ್ಯಂತ ೨೪ ಪ್ರದರ್ಶನಗಳನ್ನು ನೀದಿ, ಹೋರಾಟವನ್ನು ನಡೆಸಿದರ ಫಲವಾಗಿ ೨೦೦೦ನೇ ಇಸವಿಯಲ್ಲಿ ಈ ಸಮಾಧಿ ಸರಕಾರದ ಸಂರಕ್ಷಣೆಗೆ ಒಳಪಟ್ಟಿತು. ಇದೀಗ ೪೨ ಪ್ರದರ್ಶನಗಳನ್ನು ಈ ನಾಟಕ ಕಂಡಿದ್ದು, ಸಧ್ಯದಲ್ಲಿಯೇ ೫೦ನೆ ಪ್ರದರ್ಶನವನ್ನು ನಡೆಸಿ ನಾಟಕದ ಸುವರ್ಣ ಮಹೋತ್ಸವವನ್ನು ಆಚರಿಸುವ ಗುರಿಯನ್ನು ಇಟ್ತುಕೊಂಡಿದ್ದಾರೆ.

ಮುಂದುವರೆಯುವುದು
ಎ.ವಿ. ನಾಗರಾಜು, ೯೮೪೫೪೯೬೪೫೯