ನನ್ನ ಭಾರತಾನುಭವ -ರೂಥ್ ಪ್ರವೇರ್ ಝಾಬ್‍ವಾಲಾರ An Experience of India ನೀಳ್ಗತೆಯ ಕನ್ನಡಾನುವಾದ-ಹನ್ನೊಂದನೆಯ ಕಂತು
ಎಷ್ಟೋ ದಿನಗಳವರೆಗೆ ಗುರು, ತನ್ನ ಧ್ಯೇಯದ ಪ್ರಾಮುಖ್ಯ, ಹೆನ್ರಿ ಅಲ್ಲಿಗೆ ಬಂದು ತನ್ನ ವೃತ್ತಪತ್ರಿಕೆಯಲ್ಲಿ ಆಶ್ರಮದ ಬಗ್ಗೆ ವರದಿ ಮಾಡಲೇಬೇಕಾದ ತುರ್ತು ಎಲ್ಲವನ್ನೂ ವಿವರಿಸುತ್ತ ನನ್ನಲ್ಲಿ ಸಹನೆಯಿಂದಿದ್ದ. ಕ್ರಮೇಣ ದಿನ ಕಳೆಯುತ್ತಿದ್ದಂತೆ ಹೆನ್ರಿಯು ಬರದಿದ್ದಾಗ ಅವನ ಧೋರಣೆ ಬದಲಾಯಿತು. "ಹೆನ್ರಿ ಏಕೆ ಬರಲಿಲ್ಲ? ನೀನು ಅವನಿಗೆ ಶಿಫಾರಸು ಮಾಡಿ ಬರೆಯಲಿಲ್ಲವೇ? ಆಶ್ರಮದಲ್ಲಿ ನಡೆಯುತ್ತಿರುವುದೆಲ್ಲ ಅವನಲ್ಲಿ ಆಸಕ್ತಿ ಮೂಡಿಸಬಹುದೆಂದು ನಿನಗೆ ಅನ್ನಿಸಲಿಲ್ಲವೇ? ಇದನ್ನೆಲ್ಲ ಪ್ರಪಂಚದ ಗಮನಕ್ಕೆ ತರಬೇಕೆಂದೂ ಈ ನಿಟ್ಟಿನಲ್ಲಿ ಸರ್ವಪ್ರಯತ್ನ ಮಾಡಬೇಕೆಂದೂ ನಿನಗೆ ಅನ್ನಿಸುವುದಿಲ್ಲವೇ?" ಎಂದೂ ಕೇಳಲಾರಂಭಿಸಿದ. ಇದನ್ನೆಲ್ಲ ಕೇಳುವಾಗ ಅವನು ತನ್ನ ದೊಡ್ಡ ಕಣ್ಣುಗಳ ದೃಷ್ಟಿಯಿಂದ ಕೀಲಿಸಿದ. ನಾನು ಚಡಪಡಿಸತೊಡಗಿದೆ- ಅದು ಅವನು ನನ್ನನ್ನು ದೃಷ್ಟಿಸುತ್ತಿದ್ದ ರೀತಿಗಲ್ಲ. ಆದರೆ ನನಗೆ ಮುಜುಗರವಾಗಿ ಏನು ಹೇಳಬೇಕೆಂದು ತಿಳಿಯದ್ದಕ್ಕಾಗಿ. ಆಮೇಲೆ ಅವನು ತೀರ ಮೆತ್ತಗಾಗಿ, " ಹೋಗಲಿ, ಬಿಡು, ನನಗೆ ನಿನ್ನನ್ನು ಬಲವಂತ ಮಾಡುವ ಇರಾದೆ ಇಲ್ಲ." ಎಂದ. ಬಲವಂತ ಮಾಡುವುದು ತನ್ನ ರೀತಿಯಲ್ಲವೆಂದೂ, ಜನ ತಮ್ಮಿಂದ ತಾವೇ- ಹೂವು ತಾನಾಗಿ ಸ್ವಾಭಾವಿಕವಾಗಿ ಪಕಳೆಬಿಚ್ಚಿ ಸೂರ್ಯನಿಗೆ ತೆರೆದುಕೊಂಡಹಾಗೆ- ತಮ್ಮಿಚ್ಛೆಯಿಂದ ನಿಧಾನವಾಗಿ ತನಗೊಲಿಯಬೇಕೆಂದು ಹೇಳಿದ. ಆದರೆ ಅವನು ಮಾರನೆಯದಿನವೇ ಮತ್ತೆ ಮತ್ತೆ ಅದೇ ಪ್ರಶ್ನೆಗಳನ್ನು ಕೇಳಲೂ, ಪ್ರೇರೇಪಿಸಲೂ, ಬಲವಂತಮಾಡಲೂ ತೊಡಗಿದ. ಹೀಗೆ ಸ್ವಲ್ಪ ದಿನ ನಡೆದು ಯಾವ ಉಪಯೋಗವೂ ಆಗದಿದ್ದಾಗ ಅವನು ಸಿಟ್ಟಾಗಿ ಒಂದೋ ಎರಡೋ ಬಾರಿ ನಾನು ಮಹಾಮೊಂಡಿಯೆಂದೂ, ತೆರೆದ ಮನದವಳಲ್ಲವೆಂದೂ, ಹೃದಯಕ್ಕೆ ಏಳುಸುತ್ತಿನ ಕಬ್ಬಿಣದ ಪಟ್ಟಿಯ ಬೇಲಿ ಜಡಿದವಳೆಂದೂ ಕೂಗಾಡಿದ. ಅವನು ಕೂಗಾಡಿದಾಗ ಆಶ್ರಮದವರೆಲ್ಲರೂ ಹೆದರಿ ನಡುಗುತ್ತ ನನ್ನ ಕಡೆಗೆ ವಿಚಿತ್ರವಾಗಿ ನೋಡಿದರು. ಆದರೆ ಒಂದು ಗಂಟೆ ಕಳೆಯಿತೆಂದರೆ ಗುರು ಯಾವಾಗಲೂ ನನ್ನನ್ನು ತನ್ನ ಕೋಣೆಗೆ ಕರೆದೊಯ್ಯುತ್ತಿದ್ದ. ಮತ್ತೆ ನನ್ನ ಬಗ್ಗೆ ತೀರಾ ನಯವಾಗುತ್ತಿದ್ದ. ತನ್ನ ಬಳಿ ಕೂರಿಸಿಕೊಂಡು- ನನಗಿಂತ ತಾವೇ ಈ ಗೌರವಕ್ಕೆ ಪಾತ್ರರಾಗಬೇಕೆಂದು ಹಂಬಲಿಸುತ್ತಿದ್ದ ಉಳಿದೆಲ್ಲರ ಎದುರಿನಲ್ಲೇ ತನಗೆ ನಾನೇ ಹಾಲಿನ ಲೋಟ ಕೊಡಬೇಕೆಂದು ಪಟ್ಟುಹಿಡಿಯುತ್ತಿದ್ದ.
ಜೇನ್ ಆಗಾಗ್ಗೆ ನನ್ನೊಂದಿಗೆ ಮಾತಿಗೆ ಬರುತ್ತಿದ್ದಳು. ರಾತ್ರಿ ನಾನು ಉಪಯೋಗಿಸದೆ ಬಿಟ್ಟಿದ್ದ ಸಣ್ಣ ಉಗ್ರಾಣದಲ್ಲಿ ಹಾಸಿಕೊಳ್ಳುತ್ತಿದ್ದೆ. ಇನ್ನೇನು ನನಗೆ ನಿದ್ದೆ ಬಂತು ಎನ್ನುವಾಗ ಜೇನ್ ಬಂದು ನನ್ನ ಪಕ್ಕ ಮಲಗಿ ತನ್ನ ಮೆತ್ತನ್ನ ದನಿಯಲ್ಲಿ ಆತ್ಮೀಯವಾಗಿ ಮಾತಾಡುತ್ತಿದ್ದಳು. ಅಷ್ಟು ಹತ್ತಿರ ಬಂದು ನನ್ನ ಕುತ್ತಿಗೆಯ ಬಳಿ ಬೆಚ್ಚಗೆನಿಸುವ ತನ್ನ ಕೇವಲ ಉಸಿರಿನಂತಿದ್ದ ದನಿಯಲ್ಲಿ ಅವಳು ಪಿಸುಗುಡುವುದು ನನಗೆ ಸೇರುತ್ತಿರಲಿಲ್ಲ. ಮುಟ್ಟಿಯೂ ಮುಟ್ಟದಂತೆ ನನ್ನ ಕೈಮೇಲೆ ತನ್ನ ಕೈಯಿಡುತ್ತಿದ್ದಳು. ಅವಳ ಕೈ ಸ್ವಲ್ಪ ಒದ್ದೆಯಾಗಿದ್ದು ನನ್ನ ಬೆನ್ನಹುರಿಯಲ್ಲಿ ಕೆಟ್ಟ ಅನುಭವ ಉಂಟುಮಾಡುತ್ತಿತ್ತು. ಆಗ ಅವಳು ಆತ್ಮಸಮರ್ಪಣೆಯ ಸೌಂದರ್ಯದ ಬಗ್ಗೆ ಮಾತಾಡುತ್ತಿದ್ದಳು- ನಮ್ಮ್ಮದೇ ಸ್ವಂತ ಆಲೋಚನೆಗಳಿಲ್ಲದ ಆತ್ಮಸಮರ್ಪಣೆ. ಒಂದಾನೊಂದು ಕಾಲದಲ್ಲಿ ತಾನೂ ನನ್ನಂತೆ ಹಠಮಾರಿಯೂ ಆತ್ಮಕೇಂದ್ರಿತಳೂ ಆಗಿದ್ದಳಂತೆ. ಈಗ ಅವಳು ಸಂತೋಷವಾಗಿ ತನ್ನನ್ನು ತಾನು ಒಪ್ಪಿಸಿಕೊಳ್ಳುವುದನ್ನು ಕಲಿತಿದ್ದಾಳಂತೆ. "ಈ ಪ್ರಕ್ರಿಯೆಯಲ್ಲಿ ಉಂಟಾಗುವ ಅಸೀಮ ಆನಂದದ ಸ್ವಲ್ಪ ಸುಳಿಯನ್ನಾದರೂ ಕೊಡಬಲ್ಲೆನಾದರೆ..................." ಎನ್ನುವ ಹಂತದಲ್ಲಿ ಅವಳ ಉಸಿರು ನಿಂತು ಆನಂದದ ತುತ್ತತುದಿಯಲ್ಲಿ ಮಾತು ಮೂಕವಾಗುತ್ತಿತ್ತು. ನನಗೆ ಸಿಕ್ಕ ಈ ಸಣ್ಣ ಅವಕಾಶವನ್ನು , ನಾನು ನಿದ್ದೆಹೋದಂತೆ ನಟಿಸಲು ಬಳಸಿಕೊಳ್ಳುತ್ತಿದ್ದೆ. ನಂಬಿಸಲು ಅಲ್ಪಸ್ವಲ್ಪ ಗೊರಕೆಯನ್ನೂ ಹೊಡೆಯುತ್ತಿದ್ದೆ. ನನ್ನನ್ನು ಮತ್ತೆ ಎಬ್ಬಿಸಲು ಅವಳು ನನ್ನ ಹೆಸರನ್ನು ಒಂದೆರಡು ಸಾರಿ ಕರೆದು ನಿರಾಶಳಾಗಿ ಹೊರಟುಹೋಗುತ್ತಿದ್ದಳು. ಆದರೆ ಮಧ್ಯರಾತ್ರಿ ಮತ್ತೆ ಹಾಜರಾಗುತ್ತಿದ್ದಳು. ಹಗಲು ಸಹ ಸಾಧ್ಯವಾದಷ್ಟು ನನಗೆ ಅಮರಿಕೊಂಡು ಅದೇ ಧಾಟಿಯಲ್ಲಿ ಮಾತನಾಡುವಳು. ಕಡೆಗೆ ಇದು ಹೇಗಾಯಿತೆಂದರೆ ಅವಳಿಲ್ಲದಿದ್ದಾಗಲೂಅವಳ ಪಿಸುಮಾತು ನನ್ನ ಕಿವಿಯಲ್ಲೂ ಮತ್ತು ಅವಳ ಉಸಿರು ನನ್ನ ಕುತ್ತಿಗೆಯ ಮೇಲೂ ಅನುಭವವಾಗತೊಡಗಿತು. ನನಗೆ ಏನೂ ಸೇರದಾಯಿತು. ಕಡೆಗೆ ನದಿಯಲ್ಲಿ ಹೋಗುವುದಾಗಲೀ ಮನೆಯ ಮೇಲೇರಿ ನದಿಯ ಮೇಲಿಂದ ನೋಡುವುದಾಗಲೀ ಕೂಡ. ಹಿಂದೆಂದೂ ನನ್ನನ್ನು ಕಾಡದಿದ್ದ ನದಿಯ ದಂಡೆಯಲ್ಲಿ ಉರಿಯುತ್ತಿದ್ದ ಚಿತೆಗಳು ನನ್ನ ಯೋಚನೆಯನ್ನು ಆವರಿಸಿದವು. ಆ ಚಿತೆಗೆಳಿಂದ ಹೊಮ್ಮುತ್ತಿದ್ದ ಹೊಗೆ, ಆಕಾಶ, ನದಿಗಳನ್ನೆಲ್ಲ ಕವಿದು ಅವುಗಳಿಗೆ ಒಂದು ಮಾಸಲು ಹಳದಿ ಬಣ್ಣ್ದ ಪರಿವೇಶ ಕೊಟ್ಟಂತೆ ಅನ್ನಿಸತೊಡಗಿತು. ಇನ್ನು ನನಗೆ ಈ ಸ್ಥಳದಿಂದ ಯಾವ ಒಳಿತೂ ಆಗಲಾರದೆಂಬ ಅರಿವಾಯಿತು! ನಾನು ಆಶ್ರಮ ಬಿಡುತ್ತೇನೆಂದು ಹೇಳಿದಾಗ ಗುರುವಿಗೆ ಮಹಾಕೋಪ ಬಂದಿತು. ಅವನ ತಲೆ ಕುತ್ತಿಗೆಗೆಳು ಉಬ್ಬಿದವು. ಅವನೆರಡು ಕಣ್ಣುಗಳು ಸಿಟ್ಟಿನಿಂದ ಉರಿದು ಹೊರಳಾಡುವ ಕಪು ರಾಕ್ಷಸರಂತಾದವು. ಡೋಲು ಹಾಗೂ ಝಲ್ಲರಿಗಳ ನಾದದಂತೆ ತೀಕ್ಷ್ಣವಾದ ದನಿಯಲ್ಲಿ ಅವನು ನನ್ನನ್ನು ನಿಷೇಧಿಸಿದ. ನಾನೇನೂ ಹೇಳಲಿಲ್ಲ. ಆದರೆ ಮರುದಿನ ಹೊರಡುವುದೆಂದು ನಿರ್ಧರಿಸಿದೆ. ನನ್ನ ಸಾಮಾನುಗಳನ್ನೆಲ್ಲ ಜೋಡಿಸಿ ಪ್ರಯಾಣಕ್ಕೆ ಸಿದ್ಧಪಡಿಸಲು ತೆರಳಿದೆ. ಇಡಿಯ ಆಶ್ರಮವೇ ಮೌನವಾಗಿ ಸಂಕಟಹಿಡಿದಂತಿತ್ತು. ಯಾರಿಗೂ ಮಾತನಾಡುವ ಧೈರ್ಯವಾಗಲಿಲ್ಲ. ಮಾಮೂಲಿನಂತೆ ರಾತ್ರಿ ಸರಿಹೊತ್ತು ಮಲಗಲು ಬರುವ ಜೇನ್‌ಗೆ ಸಹ. ಕಡೆಗೆ ಬಂದ ಅವಳು ಅಲುಗಾಡದೆ ಮಲಗಿ ತನ್ನಷ್ಟಕ್ಕೆ ಅಳುತ್ತಿದ್ದಳು. ಅವಳು ಸದ್ದು ಮಾಡದಿದ್ದುದರಿಂದ ನನಗೆ ಅವಳು ಅಳುತ್ತಿರುವಳೆಂದೂ ತಿಳಿಯಲಿಲ್ಲ. ನಿಧಾನವಾಗಿ ಅವಳ ಕಣ್ಣೀರು ದಿಂಬಿನ ಅವಳ ಭಾಗಕ್ಕೆ ಹರಿದು ಒಂದು ಥರದ ಆರ್ದ್ರತೆ ನನ್ನ ಬದಿಗೂ ಹರಿದು ಬಂದಿತು. ನಾನು ಏನನ್ನೂ ಗಮನಿಸದವಳಂತೆ ನಟಿಸಿದೆ.
ಇದ್ದಕ್ಕಿದ್ದಂತೆ ಗುರು ನನ್ನ ಬಾಗಿಲ ಹಾದಿಗೆ ಬಂದು ನಿಂತ. ಕೋಣೆಯ ಎದುರು ತೆರೆದ ಅಂಗಳ. ಅದರ ತುಂಬಾ ಬೆಳದಿಂಗಳು. ಅದರಿಂದಾಗಿ ಬೆಳಗುವ ಅವನ ಮೈ ಬೃಹದಾಕಾರವಾಗಿ ವಿಚಿತ್ರವಾಗಿ ಭಯ ಹುಟ್ಟಿಸುವಂತೆ ಇತ್ತು. ಜೇನ್ ಮತ್ತು ನಾನು ಇಬ್ಬರೂ ಎದ್ದು ಕೂತೆವು. ನನಗೆ ಹೆದರಿಕೆಯಾಯಿತು. ನನ್ನೆದೆ ವೇಗವಾಗಿ ಬಡಿಯುತ್ತಿತ್ತು. ಸ್ವಲ್ಪ ಹೊತ್ತು ನಮ್ಮಿಬ್ಬರನ್ನೂ ಮೌನವಾಗಿ ದಿಟ್ಟಿಸಿ ಅವನು ಜೇನ್‌ಳನ್ನು ಹೊರಹೋಗುವಂತೆ ಹೇಳಿದ. ಅವಳು ಕೂಡಲೇ ಹೊರಹೋಗಲು ಮೇಲೆದ್ದಳು.
ನಾನು "ಬೇಡ ಹೋಗಬೇಡ "ಎಂದು ಹೇಳಿ ಅವಳ ಕೈಯನ್ನು ಬಿಗಿಯಾಗಿ ಹಿಡಿದೆ. ಅವಳು ನನ್ನಿಂದ ಬಿಡಿಸಿಕೊಂಡು ಭಕ್ತಿಯಿಂದ ಗುರುವಿನ ಪಾದ ಮುಟ್ಟಿ ಹೋದಳು. ಹೊರಗಿನ ಬೆಳದಿಂಗಳಿನಲ್ಲಿ ಅವಳು ಸುಳಿವುಕೊಡದಂತೆ ಕರಗಿಹೋದಹಾಗಿತ್ತು. ನೆಲದ ಮೇಲೆ ಹಾಸಿದ ನನ್ನ ಹಾಸಿಗೆಯಲ್ಲಿ ಗುರು ನನ್ನ ಪಕ್ಕ ಕುಳಿತ. ನನಗೆ ಒಂದು ಬಗೆಯ ಭ್ರಮೆ ಹಿಡಿದಿದೆಯೆಂದೂ ನನಗೆ ನಿಜಕ್ಕೂ ಹೋಗುವ ಬಯಕೆ ಇಲ್ಲವೆಂದೂ ನುಡಿದ.ನನ್ನ ನೈಜ ಆಂತರ್ಯ ಅವನ ಬಳಿಯೇ ಇರಲು ಕಾತರಗೊಂಡಿದೆಯೆಂದೂ, ಅದು ತನ್ನನ್ನು ಕರೆಯುತ್ತಿರುವುದು ತನಗೆ ಗೊತ್ತೆಂದೂ ಹೇಳಿದ. ಆದರೆ ನಾನು ಹೆದರಿದ್ದೆನಾದ್ದರಿಂದ ನಾನು ಅವನ ವಿಷಯವಾದ ಹಂಬಲವನ್ನು ಮುಚ್ಚಿಟ್ಟು ಓಡಿಹೋಗುತ್ತಿರುವೆನೆಂದೂ ತಿಳಿಸಿದ."ನೋಡು, ಹೇಗೆ ನಡುಗುತ್ತಿದ್ದೀ!!ಹೇಗೆ ಹೆದರಿದ್ದೀ!! ಎಂದ. ನಿಜವೇ! ನಾನು ನಡುಗುತ್ತಿದ್ದೆ. ಗೋಡೆಗೆ ನನ್ನ ಮೈಯಂಟಿಸಿ ಮುದುರಿಕೊಂಡು ಅವನಿಂದ ಸಾಧ್ಯವಾದಷ್ಟೂ ದೂರ ಹೋಗುತ್ತಿದ್ದೆ. ಆದರೆ ಅವನಿಂದ ತೀರ ದೂರ ಹೋಗುವುದು ಅಶಕ್ಯವಾಗಿತ್ತು. ಕಾರಣ ಅವನು ಅಷ್ಟು ಲಟ್ಠನಾಗಿ ಆ ಗೂಡನ್ನು ವ್ಯಾಪಿಸಿ ತುಂಬುವಂತಿದ್ದ. ಅವನು ನನಗೆ ತೀರ ಹತ್ತಿರವಾಗಿ ಎದುರು ಬಂದ ಅರಿವಾಯಿತು. ಬೆಳ್ಳುಳ್ಳಿಯ ವಾಸನೆ ಬೆರೆತ ಅವನ ಘಾಟು, ಗಂಡು ಸಿನುಗು, ನನ್ನ ಶಕ್ತಿಗುಂದಿಸಿತು. "ನೀನು ಬೆದರಿರುವುದು ಸಹಜ" ಎಂದನಾತ. ನಿನ್ನ ಅಹಂಕಾರ ಛಿದ್ರವಾಗಿ ಸಾವಿರ ತುಂಡಾಗಿ ಧೂಳಿನೊಂದಿಗೆ ಬೆರೆಯುವವರೆಗೆ ನಿನ್ನನ್ನು ಬಡಿದು ಚಚ್ಚುವುದೇ ನನ್ನ ಉದ್ದೇಶ. ಇದು ನೋವಿನ ಕೆಲಸ ನಿಜ. ನೀನು ಆಗಾಗ್ಗೆ ಅತ್ತು ಕರೆದು ಕರುಣೆ ತೋರಿಸಲು ಮೊರೆಯಿಡುವೆ. ಆದರೆ ಕಡೆಗೆ, ಆಹಾ!! ನಿನ್ನದೇ ಅಹಂಕಾರದ ಸೆರೆಯಿಂದ ಪುನಾರೂಪ ಪಡೆದು ಪುನರ್ಜನ್ಮವೆತ್ತಿ ಬಂದಾಗ ಎಂಥ ಆನಂದ!! ಆಮೇಲೆ ನೀನು ಸಾಷ್ಟಾಂಗ ಬಿದ್ದು ಕೃತಜ್ಞತೆಯ ಕಣ್ಣೀರಿನಿಂದ ನನ್ನ ಪಾದ ತೊಳೆಯುವೆ. ನಂತರ ನೀನು ನಿಜಕ್ಕೂ ನನ್ನವಳಾಗುವೆ. ಅವನು ಹಾಗೆಲ್ಲ ಹೇಳುತ್ತ ಹೋದಂತೆ ನನಗೆ ಹೆಚ್ಚುಚ್ಚು ಹೆದರಿಕೆಯಾಗತೊಡಗಿತು. ಕಾರಣ ಅವನು ನನಗಷ್ಟು ಹತ್ತಿರವಾಗಿ , ಧಡೂತಿಯಾಗಿಯೂ ಬಲಶಾಲಿಯಾಗಿಯೂ ಆಗಿರುವನೆಂಬ ಅರಿವಾಯಿತು. ಬಹುಶ: ಅವನು ತಾನು ಹೇಳಿದ್ದನ್ನೆಲ್ಲ ಮಾಡಲು ಶಕ್ತನಿರಬಹುದು. ಕಡೆಗವನು ನನ್ನನ್ನು ಜೇನ್‌ಳಂತೆ ಮಾಡಿಬಿಡಲೂಬಹುದು.