ಜಾಗತೀಕರಣವೆಂಬ ಪೌರುಷ ರಾಜಕಾರಣ

ಜಾಗತೀಕರಣವೆಂಬ ಪೌರುಷ ರಾಜಕಾರಣ

ಜಾಗತೀಕರಣವೆಂಬ ಪೌರುಷ ರಾಜಕಾರಣ

ಕಳೆದ ಹತ್ತು ತಿಂಗಳಿಂದ ಸತತವಾಗಿ ಬರೆಯುತ್ತಿದ್ದ 'ವಾರದ ಒಳನೋಟ' ಅಂಕಣಕ್ಕೆ ಹಲವು ರೀತಿಯ ಒತ್ತಡಗಳು ಹಾಗೂ ಮಾನಸಿಕ ಆಯಾಸದ ಕಾರಣಗಳಿಂದಾಗಿ ಅಂತ್ಯ ಹಾಡುವ ಆಲೋಚನೆಯಲ್ಲಿದ್ದಾಗ, ಪತ್ರಿಕೆಯ ಗೌರವ ಸಂಪಾದಕರಾದ ರವೀಂದ್ರ ರೇಷ್ಮೆಯವರು ಕಳೆದ ಸಂಚಿಕೆಯಲ್ಲಿ ಕುಪ್ಪಳ್ಳಿಯಲ್ಲಿ ನಡೆದ ಸಮಾಜವಾದಿ ಅಧ್ಯಯನ ಶಿಬಿರದ ಬಗ್ಗೆ ಬರೆದು ನನ್ನನ್ನು ಈ ವಾರದ ಮಟ್ಟಿಗಾದರೂ ಬರೆಯಲು ಪ್ರಚೋದಿಸಿದ್ದಾರೆ.

ಮೊದಲಿಗೆ ರೇಷ್ಮೆಯವರ ಬರಹಕ್ಕೆ ಒಂದು ತಿದ್ದುಪಡಿ: ಕುಪ್ಪಳ್ಳಿಯ ಕುವೆಂಪು ಶತಮಾನೋತ್ಸವ ಸ್ಮಾರಕ ಭವನದ ಉಸ್ತುವಾರಿಯಲ್ಲಿದ್ದು, ಅಂದು ಶಿಬಿರದ ಸಮಾರೋಪದಲ್ಲಿ ಭಾಗವಹಿಸಿದ್ದವರು, ಕಡಿದಾಳು ಪ್ರಕಾಶ್; ಕಿಮ್ಮನೆ ರತ್ನಾಕರ್ ಅಲ್ಲ. ಹೆಚ್ಚಾಗಿ ಸಕ್ರಿಯ ರಾಜಕಾರಣಿಗಳ ಸಹವಾಸದಲ್ಲೇ ಇರುವಂತೆ ತೋರುವ ರೇಷ್ಮೆಯವರಿಗೆ ಸಹಜವಾಗಿಯೇ ತೀರ್ಥಹಳ್ಳಿಯ ಸಕ್ರಿಯ ರಾಜಕಾರಣಿ ಕಿಮ್ಮನೆ ರತ್ನಾಕರರ ಹೆಸರೇ ಮನಸ್ಸಿನಲ್ಲಿ ದಾಖಲಾಗಿದೆ! ಅದಕ್ಕೆ ತಕ್ಕಂತೆಯೇ, ಮೂರು ದಿನಗಳ ಕಾಲ ಯಾವ ಸಮಕಾಲೀನ ಸಕ್ರಿಯ ರಾಜಕಾರಣಿಯ ಭಾಗವಹಿಸುವಿಕೆ ಇರಲಿ, ಪ್ರಸ್ತಾಪವೂ ಇಲ್ಲದೆ ಒಂದು ಅಧ್ಯಯನಶೀಲ ವಾತಾವರಣದಲ್ಲಿ ಸಮಾಜವಾದಿ ತತ್ವಗಳನ್ನು ವಿವಿಧ ನೆಲೆಗಳಿಂದ ವಿಶ್ಲೇಷಿಸುತ್ತಿದ್ದ ಆ ಶಿಬಿರಕ್ಕೆ ರೇಷ್ಮೆಯವರು ಸಕ್ರಿಯ ರಾಜಕಾರಣಿಗಳ ಒಂದು ಸಣ್ಣ ತಂಡವನ್ನೇ ಕರೆ ತಂದು, ಚರ್ಚೆಗೆ ಒಂದು ತಾಕ್ಷಣಿಕ ಪ್ರಸ್ತುತೆಯನ್ನು ಒದಗಿಸಿದರು! ಕರ್ನಾಟಕದ ರಾಜಕಾರಣದ ಎಲ್ಲ ಮಾಹಿತಿ ಹಾಗೂ ಅಂಕಿ ಅಂಶಗಳನ್ನು ಕರತಲಾಮಲಕ ಮಾಡಿಕೊಂಡಿರುವ ರೇಷ್ಮೆ, 'ಕರ್ನಾಟಕ ರಾಜಕಾರಣದ ಸಮಕಾಲೀನ ಸವಾಲುಗಳು' ಬಗ್ಗೆ ಮಾಡಿದ ಭಾಷಣ ತನ್ನ ಸಮಗ್ರತೆ ಹಾಗೂ ಸಮತೋಲನಗಳಿಂದ ಎಲ್ಲರನ್ನೂ ದಂಗು ಬಡಿಸಿತು. ನನ್ನ ಮಟ್ಟಿಗೆ, ಎರಡು ಅಂಶಗಳ ಹೊರತಾಗಿ.

ಒಂದು: ಅವರು ಎಂ.ಪಿ.ಪ್ರಕಾಶರನ್ನು 'ಸಭ್ಯ ರಾಜಕಾರಣಿ' ಎಂದು ಕರೆದದ್ದು. ಕಳೆದ ಇಪ್ಪತ್ತೆರಡು ತಿಂಗಳಲ್ಲಿನ; ವಿಶೇಷವಾಗಿ ಕಳೆದೆರಡು, ನಿರ್ದಿಷ್ಟವಾಗಿ ಕಳೆದೊಂದು ತಿಂಗಳಿನ ಪ್ರಕಾಶರ ಅಗ್ಗದ ರಾಜಕೀಯ ವರ್ತನೆಯನ್ನು ನೋಡಿಯೂ, ಅವರನ್ನು ಸಭ್ಯ ರಾಜಕಾರಣಿಯೆಂದು ಕರೆಯಬಹುದೇ? (ಈ ಮಧ್ಯೆ ರೇಷ್ಮೆಯವರು ಕಳೆದ ಸಂಚಿಕೆಯಲ್ಲಿ ತಮ್ಮ ಬರವಣಿಗೆಯ ಜಾಣತನವನ್ನೆಲ್ಲ ಪ್ರದರ್ಶಿಸಿ, ಪ್ರಕಾಶರ ವರ್ತನೆಯನ್ನು 'ಪತನ ಅಲ್ಲ, ಪಲಾಯನ'ವೆಂದು ಸಮರ್ಥಿಸಿದ್ದನ್ನು ಓದಿ ಗಾಬರಿಯೂ ಆಗಿದ್ದೇನೆನ್ನಿ!) ಎರಡು: ರೇಷ್ಮೆಯವರು ರಾಜ್ಯದ ಸಮಕಾಲೀನ ರಾಜಕಾರಣದ ಅತಿ ದೊಡ್ಡ ಸವಾಲುಗಳಲ್ಲೊಂದು ಎಂದು ದೇವೇಗೌಡರ ಕುಟುಂಬ ರಾಜಕಾರಣವನ್ನು ಗುರುತಿಸುತ್ತಾರೆ. ಆದರೆ ಅದರ ಅತ್ಯಂತ ಜಿಗುಪ್ಸೆಕರ ಆವೃತ್ತಿಗೆ ಕಾರಣವಾದ ಜೆಡಿಎಸ್ - ಬಿಜೆಪಿ ಮೈತ್ರಿ ಸರ್ಕಾರದ ರಚನೆಯ ಹಿಂದೆ ಕೆಲಸ ಮಾಡಿದ ಹಲವು ಕೈಗಳಲ್ಲಿ ತಮ್ಮವೂ ಸೇರಿದ್ದವು (ಸ್ವತಃ ಅವರೇ ಹಿಂದೊಮ್ಮೆ ಹೆಮ್ಮೆಯಿಂದ ಈ ಬಗ್ಗೆ ಬರೆದುಕೊಂಡಿದ್ದೂ ಉಂಟು.) ಎಂಬುದನ್ನೇಕೆ ಮರೆತು ಅವರು ಮಾತನಾಡುತ್ತಾರೆ?

ರೇಷ್ಮೆಯವರು ಅಂದು ತಮ್ಮ ಭಾಷಣದಲ್ಲಿ ಎಲ್ಲವನ್ನೂ ಎಷ್ಟು ಸ್ಪಷ್ಟ ಹಾಗೂ ಅಸಂದಿಗ್ಧವಾಗಿ ಹೇಳಿದರೆಂದರೆ, ಅವರ ಭಾಷಣದ ಬಗ್ಗೆ ಚರ್ಚೆ ನಡೆಸಲು ಪ್ರಶ್ನೆಗಳೇ ಇರಲಿಲ್ಲ. ವಿಪರ್ಯಾಸವೆಂದರೆ, ಇದ್ದ ಒಂದೇ ಪ್ರಶ್ನೆಯೆಂದರೆ ಜನಪರ ಹಾಗೂ ಪ್ರಜಾಸತ್ತಾತ್ಮಕ ಆಂದೋಲನಗಳ ವಕ್ತಾರರೆನಿಸಿರುವ ಪಟ್ಟಾಭಿರಾಮ ಸೋಮಯಾಜಿಯವರದ್ದು: ಜನಪ್ರತಿನಿಧಿಗಳ ಸರ್ಕಾರದ ರಚನೆಯನ್ನು ಒಂದಷ್ಟು ಕಾಲ ಮುಂದೂಡುವ ಯಾವ ಅವಕಾಶವೂ ಇಲ್ಲವೇ? ಅದೇನೇ ಇರಲಿ, ರೇಷ್ಮೆಯವರು ತಮ್ಮ ಭಾಷಣದ ಈ ಯಶಸ್ಸಿನ ಸಂಭ್ರಮದಲ್ಲೆಂಬಂತೆ, ತಮ್ಮ ಭಾಷಣಕ್ಕೆ ಮುನ್ನ ಮುಕ್ತಾಯಗೊಂಡಿದ್ದ ಪಟ್ಟಾಭಿಯವರ ಭಾಷಣದ ಮೇಲಿನ ಚರ್ಚೆಗೆ ಪ್ರತಿಕ್ರಿಯಿಸಿ ಮಾತನಾಡಲು ಹೊರಟಾಗ, ಪರಿಸ್ಥಿತಿಯೇ ಬದಲಾಯಿತು. ಅವರೇನು ಮಾತನಾಡಿದರೆಂಬುದು ಹೋದ ವಾರದ ಅವರ ವರದಿಯಲ್ಲೇ ಉಲ್ಲೇಖವಾಗಿದೆ. ಆದರೆ ನಾನು ಅವರ ಈ ಪ್ರತಿಕ್ರಿಯೆಯ ಮೇಲಿನ ಚರ್ಚೆಯನ್ನು ಮುಕ್ತಾಯಗೊಳಿಸಲು ನೀಡಿದ ರೂಲಿಂಗ್ ಎಂದು ಅವರು ಉಲ್ಲೇಖಿಸಿರುವ ಮಾತುಗಳು, ವಾಸ್ತವವಾಗಿ ನಾನು ಅವರ ಪ್ರತಿಕ್ರಿಯೆಯ ಮೇಲೆ ಚರ್ಚೆ ಆರಂಭಿಸಲು ಆಡಿದ ಮಾತುಗಳು ಆಗಿದ್ದವು! ನಾನು ಹೇಳಿದ್ದು ಇದು: 'ರೇಷ್ಮೆಯವರು ಈ ಮೂರು ದಿನಗಳ ಕಾಲ ನಡೆದ ಚರ್ಚೆಯೇ ನಿಷ್ಪ್ರಯೋಜಕ ಎನ್ನುವ ಧಾಟಿಯಲ್ಲಿ ಮಾತಾಡಿದ್ದಾರೆ. ಬಹುಶಃ ಅವರು ಮೂರು ದಿನಗಳ ಕಾಲ ನಮ್ಮ ಚರ್ಚೆಯಲ್ಲಿ ಭಾಗವಹಿಸಿದ್ದರೆ, ಈ ಮಾತುಗಳನ್ನಾಡುವ ಧೈರ್ಯ ಮಾಡುತ್ತಿರಲಿಲ್ಲ!'

ನಂತರ ಏನಾಯಿತೆಂದು ರೇಷ್ಮೆಯವರೇ ಸೂಕ್ಷ್ಮವಾಗಿ ವಿವರಿಸಿದ್ದಾರೆ. ಆದರೆ ಅವರು ಹೇಳದೇ ಇರುವ ಒಂದು ಮಾತೆಂದರೆ, ಅಲ್ಲಿ ಸೇರಿದ್ದ - ಇಪ್ಪತ್ತೈದು ಮಂದಿ ಹೊಸ ಹುಡುಗ, ಹುಡುಗಿಯರೂ ಸೇರಿದಂತೆ - ಸುಮಾರು ನಲವತ್ತು ಜನ ಶಿಬಿರಾರ್ಥಿಗಳಲ್ಲಿ ಒಬ್ಬರೂ ರೇಷ್ಮೆಯವರ ವಾದವನ್ನು ಒಪ್ಪಲು ತಯಾರಿರಲಿಲ್ಲ. ಕರ್ನಾಟಕದ ಸಮಕಾಲೀನ ರಾಜಕಾರಣವನ್ನು ಕುರಿತ ರೇಷ್ಮೆಯವರ ವಿಶ್ಲೇಷಣೆಯನ್ನು ಕಿವಿಗೊಟ್ಟು ಕೇಳಿ ಮೆಚ್ಚಿ ತಲೆದೂಗಿದ್ದ ಶಿಬಿರಾರ್ಥಿಗಳು, ಅವರ ಜಾಗತೀಕರಣ ಪರವಾದ ವಾದವನ್ನು ವಿಧ ವಿಧವಾದ ರೀತಿಯ ಪ್ರಶ್ನೆಗಳು ಹಾಗೂ ಅಸಮಧಾನಗಳ ಮೂಲಕ ವಿರೋಧಿಸತೊಡಗಿದಾಗ ದೊಡ್ಡ ಕೋಲಾಹಲವೇ ಉಂಟಾಯಿತು. ಈ ಕೋಲಾಹಲದ ನಡುವೆಯೂ, ಹಳೇ ಹುಲಿ ರೇಷ್ಮೆ ಅವರನ್ನು ಆ ಯುವ ಶಿಬಿರಾರ್ಥಿಗಳು (ಅವರಲ್ಲಿ ಹಲವರು ವಿದ್ಯಾರ್ಥಿಗಳು, ಉಪಾಧ್ಯಾಯರು, ಸರ್ಕಾರಿ ನೌಕರರು, ರೈತರೂ ಸೇರಿದ್ದರು) ಸಿಂಹದ ಮರಿಗಳಂತೆ ಅಟಕಾಯಿಸಿದ ಪರಿ, ಶಿಬಿರದ ನಿರ್ದೇಶಕನಾಗಿದ್ದ ನನಗೆ ನಿಜವಾದ ಖುಷಿ ಕೊಟ್ಟಿತು. ಎಲ್ಲ ಸಮಾಜವಾದಿ ಶಿಬಿರಗಳಂತೆ, ಹಲವು ಅನಿಶ್ಚಿತತೆಗಳ ನಡುವೆ ಆರಂಭವಾಗಿದ್ದ ಶಿಬಿರ ಹೀಗೆ 'ಪರಿಣಾಮಕಾರಿ'ಯಾಗಿ ಮುಕ್ತಾಯಗೊಳ್ಳುತ್ತಿದ್ದುದು ನನಗೆ ತುಂಬ ಸಮಾಧಾನ ತಂದಿತ್ತು. ಅಂದು ನನಗೆ ಇದಕ್ಕಿಂತ ಹೆಚ್ಚಿನ ಸಂತೋಷದ ಸಂಗತಿಯಾಗಿ ಕಂಡದ್ದೆಂದರೆ, ಈ 'ದಾಳಿ'ಯ ನಡುವೆಯೂ ರೇಷ್ಮೆ ಹಾಗೂ ಅವರ ಬೆಂಬಲಕ್ಕೆ ನಿಂತಿದ್ದ ಶ್ರೀಮತಿ ಪ್ರಫುಲ್ಲ ಮಧುಕರ್ ಅವರು ತಮ್ಮ ಚಿತ್ತ ಸ್ಥಿಮಿತ ಕಳೆದುಕೊಳ್ಳದೆ ಅದನ್ನು ಖುಷಿಯಿಂದಲೇ ಎದುರಿಸಿದ್ದು.

ಜಾಗತೀಕರಣ ಕುರಿತ ನನ್ನ ಹಾಗೂ ರೇಷ್ಮೆಯವರ ಜಗಳ ಈ ಅಂಕಣದಷ್ಟೇ ಹಳೆಯದು. ಅವರು ಹಿಂದೊಮ್ಮೆ ಇನ್ಫೋಸಿಸ್‌ನ ನಾರಾಯಣ ಮೂರ್ತಿಯವರ ಸಾಧನೆಯನ್ನು ಮುಕ್ತವಾಗಿ ಹೊಗಳಿ ಬರೆದಾಗಲೇ, ವಾಸ್ತವವಾಗಿ ನಾನು - ಅದಕ್ಕೆ ಪ್ರತಿಕ್ರಿಯೆಯಾಗಿ, 'ನಾರಾಯಣ ಮೂರ್ತಿ ಮಾದರಿ: ಬಾಣಲೆಯಿಂದ ಬೆಂಕಿಗೆ' ಎಂಬ ಶೀರ್ಷಿಕೆಯಡಿ ನನ್ನ ಎರಡನೆಯದೋ, ಮೂರನೆಯದೋ ಅಂಕಣ ಬರೆದಾಗ - ಈ ಅಂಕಣವನ್ನು ನಿಯಮಿತವಾಗಿ ಬರೆಯಲು ಅಂತಿಮವಾಗಿ ನಿರ್ಧರಿಸಿದ್ದು! ಅಂದಿನಿಂದ ಇಂದಿನವರೆಗೆ ಜಾಗತೀಕರಣ ಹಾಗೂ ಅಮೆರಿಕಾ ಕುರಿತಂತೆ ನಮ್ಮಿಬ್ಬರ ನಡುವೆ ಅಭಿಪ್ರಾಯ ಭೇದಗಳು ಅನೇಕ ಬಾರಿ 'ವಿಕ್ರಾಂತ'ದಲ್ಲಿ ದಾಖಲಾಗಿವೆ. ಅಷ್ಟರ ಮಟ್ಟಿಗೆ ಈ ಪತ್ರಿಕೆ ಅಭಿಪ್ರಾಯ ಭೇದಗಳಿಗೆ ಅವಕಾಶ ಮಾಡಿಕೊಟ್ಟಿದೆ.

ಹಾಗೆ ನೋಡಿದರೆ, ರೇಷ್ಮೆಯವರ ವಾದದಲ್ಲೇ ಹಲವು ತೊಡಕುಗಳಿವೆ. ಅವರು ಅಂದು ಅಲ್ಲಿ ಹೇಳಿದಂತೆ, ಅಮೆರಿಕಾ open door democracyಯ ಪ್ರತೀಕ. ಹಾಗಾಗಿ, ನೀವು ಅಮೆರಿಕೀಕರಣವನ್ನೊಪ್ಪದಿದ್ದರೆ ಇರಾಕೀಕರಣವನ್ನೋ, ಚೀನೀಕರಣವನ್ನೋ ಒಪ್ಪಬೇಕಾಗುತ್ತದೆಂದು ಅವರು ವಾದಿಸುತ್ತಾರೆ. ಭಾರತಕ್ಕೆ ತನ್ನದೇ ಆದ ಅಸ್ಮಿತೆಯೊಂಬುದೊಂದಿದೆ; ಅದಕ್ಕೆ ದೇಶೀಯವಾದ ಒಂದು ಆಯ್ಕೆಯೂ ಇದೆ ಎಂಬುದನ್ನು ಮರೆತು ಎಷ್ಟು ಉದ್ವಿಗ್ನರಾಗುತ್ತಾರೆಂದರೆ, ಲೈಸೆನ್ಸ್ - ಪರ್ಮಿಟ್ ರಾಜ್ಯವೆಂದು ಅವರು ಈಗ ಹೀಯಾಳಿಸುವ ವ್ಯವಸ್ಥೆಯಿಂದಾಗಿಯೇ ಕನಿಷ್ಟ ಎರಡು ತಲೆಮಾರುಗಳ ಸುಪ್ತ ಪ್ರತಿಭೆಯ ಅಸಂಖ್ಯಾತ ಜನ, ಸಮಾನ ಅವಕಾಶಗಳ ಪ್ರಯೋಜನ ಪಡೆದು ಸಮಾಜದಲ್ಲಿ ಘನತೆ ಗೌರವಗಳಿಂದ ಬಾಳಲು ಸಾಧ್ಯವಾದದ್ದು ಎಂಬುದರ ಪರಿವೆಯೇ ಅವರಿಗೆ ಇಲ್ಲದೇ ಹೋಗುತ್ತದೆ. ಲೈಸೆನ್ಸ್ - ಪರ್ಮಿಟ್ ರಾಜ್ಯದ ದೋಷಗಳಿಗೆ ಅಮೆರಿಕೀಕರಣವೇ ಮದ್ದು ಎಂಬಂತೆ ಅವರು ಅದರ ಲಾಭಗಳ ಪಟ್ಟಿ ಮಾಡುತ್ತಾರೆ.

ಅಮೆರಿಕೀಕರಣವೆಂಬ ಜಾಗತೀಕರಣ ಆರಂಭವಾದ ಹದಿನೈದು ವರ್ಷಗಳಲ್ಲಿ ನಮ್ಮ ನಿರುದ್ಯೋಗ ದರ ಎಷ್ಟು ಕಡಿಮೆಯಾಗಿದೆ ಎಂದು ರೇಷ್ಮೆಯವರು ಹೇಳಬೇಕು. ಕಳೆದ ಹದಿನೈದು ವರ್ಷಗಳೀಂದೀಚೆಗಷ್ಟೇ ರೈತರ ಆತ್ಮಹತ್ಯೆ ಏಕೆ ಆರಂಭವಾಯಿತೆಂದು ಅವರು ವಿವರಿಸಬೇಕು. ಕಳೆದು ಹದಿನೈದು ವರ್ಷಗಳಲ್ಲಿ ನಮ್ಮ ಸಮಾಜದಲ್ಲಿ ಹಿಂಸಾಚಾರದ ಪ್ರಮಾಣ ಹಾಗೂ ವೈವಿಧ್ಯ ಹೆಚ್ಚಾಗಿದೆಯೋ, ಕಡಿಮೆಯಾಗಿದೆಯೋ ಅವರೇ ತಿಳಿಸಬೇಕು. ಮುಕ್ತತೆ ಹಾಗೂ ಸ್ಪರ್ಧಾತ್ಮಕತೆಗಳ ಹೆಸರಿನಲ್ಲಿ ತಿಂಗಳಿಗೆ ಹತ್ತು ಲಕ್ಷ ರೂಪಾಯಿಗಳ ಸಂಬಳ ಕೊಡಲು ಅವಕಾಶ ಮಾಡಿಕೊಟ್ಟಿರುವ (ದುರಂತವೆಂದರೆ, ರೇಷ್ಮೆಯವರು ಇದನ್ನೊಂದು ಸಾಧನೆಯೆಂದು ಬಗೆಯುತ್ತಾರೆ!) ಈ ಆರ್ಥಿಕತೆಯ ವಕ್ತಾರರು, ಬಡತನ ರೇಖೆ ನಿರ್ಧರಿಸಲು ಇನ್ನೂ ನಲವತ್ತು ರೂಪಾಯಿಗಳ ದಿನವಹಿ ಆದಾಯವನ್ನೇ ಆಧಾರ ಮಾಡಿಕೊಂಡು ಬಡತನವನ್ನು ಸಾಕಷ್ಟು ಕಡಿಮೆ ಮಾಡಿದ್ದೇವೆ ಎಂದು ಹೇಳಿಕೊಳ್ಳುವುದು ಅಶ್ಲೀಲ ಎನಿಸುವುದಿಲ್ಲವೇ? ರೇಷ್ಮೆ ಹೇಳಬೇಕು. ಇಂತಹ ಅಭಿವೃದ್ಧಿಯ ಅವಧಿಯಲ್ಲಿಯೇ ಮಾನವ ಬದುಕಿನ ಘನತೆ - ಮರ್ಯಾದೆಗಳ ಸೂಚ್ಯಂಕದಂತಿರುವ ವಿಶ್ವ ಅಭಿವೃದ್ಧಿ ಸೂಚ್ಯಂಕ ಪಟ್ಟಿಯಲ್ಲಿ ಭಾರತದ ಸ್ಥಾನಮಾನವೇಕೆ ಪ್ರತಿ ವರ್ಷ ಕೆಳಕ್ಕೇ ಹೋಗುತ್ತಿದೆ ಎಂಬುದನ್ನೂ ಅವರು ವಿವರಿಸಬೇಕು. ರೇಷ್ಮೆಯವರಿಗೆ ಬೆಂಗಳೂರೇ (ಒಂದು ರೂಪಕವಾಗಿ) ಪ್ರಪಂಚವಾದಂತಿದೆ; ಅಲ್ಲಿನ ಜಾಣರ ಯಶಸ್ಸೇ ಜಾಗತೀಕರಣದ ಯಶಸ್ಸಿನಂತೆ ಕಾಣುತ್ತಿದೆ.

ಇದಕ್ಕೆ ಕಾರಣ, ರೇಷ್ಮೆಯಂತಹವರು ಜಾಗತೀಕರಣವನ್ನು ಮಾಹಿತಿ ತಂತ್ರಜ್ಞಾನದ ಪರಿಣಾಮವಷ್ಟೆ ಎಂದು ಭಾವಿಸಿ ಅದರ ಹಿಂದಿನ ರಾಜಕಾರಣದ ಬಗೆಗೆ ಯೋಚಿಸಲೇ ಹೋಗದಿರುವುದು. ಮಾಹಿತಿ ತಂತ್ರಜ್ಞಾನ ರೂಪಿಸಿದ ಅಂತರ್ಜಾಲದ ಮೂಲಕ ಜಗತ್ತು ಒಂದಾಗಿದೆ ಎನ್ನುವ ರೇಷ್ಮೆಯವರಿಗೆ, ಜಗತ್ತಿನ ಇಂತಹ ಅನಾತ್ಮಿಕ - ಜಡ - ಐಕ್ಯತೆಯ ಹುಸಿ ಭಾವನೆಯೇ ಮನುಷ್ಯನನ್ನು ಅನಾತ್ಮಿಕಗೊಳಿಸುತ್ತಾ ಅವನ ಎಲ್ಲ ಔಚಿತ್ಯ ಪ್ರಜ್ಞೆಯನ್ನೂ ನಾಶಗೈದು, ಅವನನ್ನು ರಾಕ್ಷಸ ಸುಖಿಯನ್ನಾಗಿ ಮಾಡುತ್ತಿರುವುದು ಎಂಬುದು ಅರಿವಿಗೆ ಬಾರದ್ದು ಸಹಜವೇ ಆಗಿದೆ. ಸದಾ ಬೆಂಗಳೂರು ರಾಜಕಾರಣದಲ್ಲೇ ಮುಳುಗಿ ತೇಲುವ ರೇಷ್ಮೆಯವರಿಗೆ ಜಾಗತಿಕ ರಾಜಕಾರಣವನ್ನು ಸೂಕ್ಷ್ಮವಾಗಿ ಗಮನಿಸುವಷ್ಟು ವ್ಯವಧಾನವಿಲ್ಲದಂತೆ ತೋರುತ್ತದೆ. 2000ರ ಅಮೆರಿಕಾ ಅಧ್ಯಕ್ಷ ಚುನಾವಣಾ ಮತ ಎಣಿಕೆಯಲ್ಲಿ ನಡೆದ ದೊಡ್ಡ ಮೋಸ ಯಾವ ಉದ್ದೇಶದ್ದು ಹಾಗೂ ಅದರಲ್ಲಿ ಆ ದೇಶದ ಧರ್ಮಾಧಿಕಾರ, ನ್ಯಾಯಾಂಗ ಹಾಗೂ ಕಾರ್ಯಾಂಗ ಈ ಎಲ್ಲವೂ ಹೇಗೆ ಸಮನ್ವಯದಿಂದ ಕೆಲಸ ಮಾಡಿದವು ಎಂಬುದು ಗೊತ್ತಿದ್ದರೆ (ಇದನ್ನು ಅಮೆರಿಕಾದ ನಾಗರಿಕ ಸಮಾಜ ಚಳುವಳಿಕಾರರೇ ತಮ್ಮ ಅಸಹಾಯಕತೆಯಲ್ಲಿ ಬರವಣಿಗೆ ಹಾಗೂ ಸಾಕ್ಷ್ಯ ಚಿತ್ರಗಳ ಮೂಲಕ ಜಗತ್ತಿಗೆ ತಿಳಿಸಿದ್ದಾರೆ), ಅಮೆರಿಕಾದ democracyಯ ಯಾವ doorಗಳು ಯಾರಿಗೆ ಎಷ್ಟು open ಆಗಿವೆ ಎಂಬುದು ರೇಷ್ಮೆಯವರಿಗೆ ತಿಳಿದಿರುತ್ತಿತ್ತು. ಅಮೆರಿಕಾ ಇರಾಕ್ ಮೇಲೆ ನಡೆಸಿರುವ ಯುದ್ಧ ಯಾವ ಪ್ರಜಾಸತ್ತಾತ್ಮಕತೆಯನ್ನು ಎತ್ತಿ ಹಿಡಿಯಲು ಎಂಬುದನ್ನು ರೇಷ್ಮೆಯವರೇ ಹೇಳಬೇಕು. ಜಾಗತಿಕ ಭಯೋತ್ಪಾದನೆಯ ಮೂಲ ಹಾಗೂ ಅಂತಿಮ ಗುರಿ ಅಮೆರಿಕಾವೇ ಏಕೆ ಆಗಿದೆಯೆಂದೂ ಅವರು ಯೋಚಿಸಬೇಕು.

ಸಂಸ್ಕೃತಿಯ ಸಂಸ್ಪರ್ಶವಿಲ್ಲದ ಪೌರುಷ ರಾಜಕಾರಣವೇ ಇದೆಲ್ಲದರ - ಅಮೆರಿಕಾ, ಜಾಗತೀಕರಣ - ಹಿಂದಿರುವ ಚೈತನ್ಯಶಕ್ತಿ. ಭಾರತವೂ ಮುಂದಿನ ಹತ್ತೋ ಹದಿನೈದೋ ವರ್ಷಗಳಲ್ಲಿ ಜಗತ್ತಿನ ಅತಿ ದೊಡ್ಡ ಮೂರನೇ ಮಹಾ ಶಕ್ತಿಯಾಗಿ ಹೊರಹೊಮ್ಮುವುದೆಂಬ ಕನಸನ್ನು ಬಿತ್ತಿಯೇ, ಜಾಗತಿಕ ಪೌರುಷ ರಾಜಕಾರಣವು ಜಾಗತಿಕ ಆರ್ಥಿಕ ಸಂಸ್ಥೆಗಳ ಮಾಜಿ ಉದ್ಯೋಗಿ ಮನಮೋಹನ ಸಿಂಗ್ ಹಾಗೂ ಅವರ ಗೆಳೆಯರ (ತಮ್ಮ ಹಳೆಯ ಪೌರುಷ ರಾಜಕಾರಣದ ವರೆಸೆಗಳು ನೆನಪಾದಂತೆ, ಇತ್ತೀಚೆಗೆ ಬಂಗಾಳದ ಮಾರ್ಕಿಸ್ಟರೂ ಇವರ ಜೊತೆ ಸೇರಲಾರಂಭಿಸಿದ್ದಾರೆ!) ಸುಪರ್ದಿಯಲ್ಲಿ ಇಲ್ಲಿ ಹೊಸ ಆರ್ಥಿಕತೆಯ ಬೆಳೆ ತೆಗೆಯಲಾರಂಭಿಸಿರುವುದು. ಈ ಆರ್ಥಿಕತೆಯ ಭಾರತ ತನ್ನ ಹೊರಗೆ ಅಥವಾ ಒಳಗೆ ನವ - ವಸಾಹತುಶಾಹಿ ವ್ಯವಸ್ಥೆಯೊಂದನ್ನು ಸೃಷ್ಟಿಸಿಕೊಳ್ಳದ ಹೊರತು, ಜಾಗತೀಕರಣವೆಂಬ ಜಾಗತಿಕ ಪೌರುಷ ರಾಜಕಾರಣ ಇಲ್ಲಿ ಬಹಳ ಕಾಲ ನಡೆಯೆದು. ದೇಶಾದ್ಯಂತ ಈಗ ಜಾರಿಗೆ ಬರಹೊರಟಿರುವ ವಿಶೇಷ ಆರ್ಥಿಕ ವಲಯಗಳ ಪರಿಕಲ್ಪನೆಯೇ ಈ ನವ - ವಸಾಹತುಶಾಹಿ ವ್ಯವಸ್ಥೆಯನ್ನು ನೆಲೆಗೊಳಿಸುವ ಪ್ರಯತ್ನವಾಗಿದ್ದರೆ ಆಶ್ಚರ್ಯವಿಲ್ಲ. ಇಂದು ಭಾರತದಲ್ಲಿ ಆಗುತ್ತಿರುವ ಬದಲಾವಣೆಗಳನ್ನು ನಮ್ಮ ಕಣ್ಣಿನ ಮಿತಿಯಲ್ಲಷ್ಟೇ ಹಾಗೂ ಇಂದಿನ ಮಟ್ಟಿಗಷ್ಟೇ ನೋಡಿ ಅರ್ಥ ಮಾಡಿಕೊಂಡರೆ ಸಾಲದು. ಏಕೆಂದರೆ ಈಗಾಗುತ್ತಿರುವುದು ಯುಗಪಲ್ಲಟ. ಅದರ ದೂರಗಾಮಿ ಪರಿಣಾಮಗಳನ್ನು - ಶಾಂತಿ, ಸಮಾನತೆ, ಸಂಸ್ಕೃತಿ, ಪರಿಸರ ಇತ್ಯಾದಿ ನೆಲೆಗಳಲ್ಲಿ - ಯೋಚಿಸಿಯೇ ಅಂತಿಮ ತೀರ್ಮಾನಗಳಿಗೆ ಬರಬೇಕಾಗುತ್ತದೆ. ಮನಮೋಹನ ಸಿಂಗರ ವೈಯುಕ್ತಿಕ ಪರಿಶುದ್ಧತೆಯಾಗಲೀ, ಅಬ್ದುಲ್ ಕಲಾಂರ ಹೊಸ ಅಭಿವೃದ್ಧಿ ಪಥದ ಸಾಧುತ್ವವಾಗಲೀ ಮುಖ್ಯವೆನಿಸುವುದು ಇಂತಹ ಅಂತಿಮ ತೀರ್ಮಾನಗಳ ನೆಲೆಯಲ್ಲಿಯೇ ಹೊರತು, ಸ್ವತಂತ್ರವಾಗಿ ಅವು ಲೆಕ್ಕಿಕಿಲ್ಲದೇ ಹೋಗುವಂತಹವು.

ಹಾಗೆ ನೋಡಿದರೆ, ಕಲಾಂರ ಅಭಿವೃದ್ಧಿ ಪಥಕ್ಕೂ ಜಾಗತೀಕರಣಕ್ಕೂ ತಳುಕು ಹಾಕುವುದು ಸರಿ ಎನಿಸದು. ಏಕೆಂದರೆ ಇದು, ಜಾಗತೀಕರಣದಿಂದಲೇ ತಂತ್ರಜ್ಞಾನದ ಸೃಜನಶೀಲ ಅನ್ವಯ ಆರಂಭವಾಯಿತೆಂಬ ಹಾಗೂ ಜಾಗತೀಕರಣ ವಿರೋಧಿಗಳೆಲ್ಲರೂ ವಿಜ್ಞಾನ - ತಂತ್ರಜ್ಞಾನ ಮತ್ತು ಪ್ರಗತಿಯ ವಿರೋಧಿಗಳು ಎಂಬ ತಪ್ಪು ಅಭಿಪ್ರಾಯಕ್ಕೆ ದಾರಿ ಮಾಡಿಕೊಟ್ಟೀತು. ಇಲ್ಲಿ ಮುಖ್ಯ ಪ್ರಶ್ನೆ: ಎಂತಹ, ಎಷ್ಟು ವಿಜ್ಞಾನ - ತಂತ್ರಜ್ಞಾನ, ಯಾರ ಪ್ರಗತಿ ಮತ್ತು ಯಾವ ವೆಚ್ಚದಲ್ಲಿ - ಏನೆಲ್ಲ ಕಳೆದುಕೊಂಡು ಎಂಬುದು. ಅಲ್ಲದೆ, ಯಾರನ್ನು ಕೇಳಿ ಹಾಗೂ ಯಾವ ಸಂವಿಧಾನಿಕ ನಿರ್ದೇಶನದ ಮೇರೆಗೆ ಈ ಯುಗಪಲ್ಲಟದ ಜಾಗತಿಕ ಒಪ್ಪಂದಗಳನ್ನು ಮಾಡಿಕೊಳ್ಳಲಾಗಿದೆ ಎಂಬ ಪ್ರಶ್ನೆಯನ್ನೂ ಪ್ರಜಾಪ್ರಭುತ್ವದ ವಕ್ತಾರರು ಇಲ್ಲಿ ಕೇಳಿಕೊಳ್ಳಬೇಕಾಗುತ್ತದೆ. ಜಾಗತೀಕರಣ, ಕಲಾಂರ ಅಭಿವೃದ್ಧಿ ಪಥದಂತಹ ಬೃಹತ್ ಯೋಜನೆಯನ್ನು ಅಪಾರ ದುಡ್ಡು ಮಾಡಿಕೊಳ್ಳುವ ಗುತ್ತಿಗೆ ಕೆಲಸಗಳ ದೊಡ್ಡ ಸರಮಾಲೆಯಾಗಿ ನೋಡುವುದೇ ಹೊರತು, ಅದನ್ನು ಜನಪರ ಶ್ರದ್ಧೆ ಹಾಗೂ ಬದ್ಧತೆಯಿಂದ ಅರ್ಥೈಸಿಕೊಂಡು ಪ್ರಾಮಾಣಿಕವಾಗಿ ಜಾರಿಗೆ ತರಬಲ್ಲ ಪ್ರಬುದ್ಧ ಪ್ರಜಾಸತ್ತಾತ್ಮಕ ರಾಜಕಾರಣವನ್ನು ಪ್ರೋತ್ಸಾಹಿಸಲಾರದು. ಕಳೆದ ಹದಿನೈದು ವರ್ಷಗಳ ರಾಜಕಾರಣದ ನಿರಂತರ ಹಾಗೂ ಹಲವು ನೆಲೆಗಳಲ್ಲಿನ ಅವನತಿಯೇ ಇದಕ್ಕೆ ಸಾಕ್ಷಿ.

ಎಲ್ಲ ಚರ್ಚೆಯ ಕೊನೆಯಲ್ಲಿ ಅಥವಾ ಕೊನೆಯೇ ಇಲ್ಲದಂತೆ ಕಾಣುತ್ತಿದ್ದ ಆ ಚರ್ಚೆಯನ್ನು ಕೊನೆಗಾಣಿಸಲು ರೇಷ್ಮೆಯವರಿಗೆ ನಾನು ಒಂದು ಮಾತು ಹೇಳಿದೆ: ಜಾಗತೀಕರಣದ ಪ್ರತೀಕದಂತಿರುವ ಇಂದಿನ ಬೆಂಗಳೂರನ್ನು ನೀವು ಒಪ್ಪುವಿರಾದರೆ, ಜಾಗತೀಕರಣವನ್ನೂ ಒಪ್ಪಿಕೊಳ್ಳಿ.

ಇಂತಹ ಬೆಂಗಳೂರಿನಿಂದ ಮೊನ್ನೆ ನಾನು ಮತ್ತು ನನ್ನ ಪತ್ನಿ ಬಸ್‌ನಲ್ಲಿ ಶಿವಮೊಗ್ಗಕ್ಕೆ ಬಂದು ಇಳಿದಾಗ ನನ್ನ ಪತ್ನಿ ನಿಟ್ಟುಸಿರು ಬಿಡುತ್ತಾ ಕೇಳಿದ ಪ್ರಶ್ನೆ: ಅಭಿವೃದ್ಧಿ ಎಂದರೆ, ಹತ್ತು ವರ್ಷಗಳ ಹಿಂದೆ ಆರು ತಾಸುಗಳಲ್ಲಿ ಮುಗಿಯುತ್ತಿದ್ದ ಈ ಪ್ರಯಾಣ ಎಂಟು ತಾಸಿಗೆ ಏರಿರುವುದೇ? ಈ ಪ್ರಶ್ನೆ ಕೇಳಿ ಬಸ್ ಕಂಡಕ್ಟರ್ ಕೂಡಾ ಮಂಕಾದ... ಆದರೆ ಅಲ್ಲಿ ರೇಷ್ಮೆಯವರಿದ್ದರೆ, ಬಹುಶಃ ಹೀಗೆ ಉತ್ತರಿಸುತ್ತಿದ್ದರೇನೋ: 'ಒಂದೆರಡು ವರ್ಷ ತಾಳಿ, ವಿಮಾನ ನಿಲ್ದಾಣ ಸಿದ್ಧವಾಗಲಿದೆ!'

ಅಂದಹಾಗೆ: 2007ರ ವರ್ಷದ ವ್ಯಕ್ತಿಯಾಗಿ ಯು.ಆರ್.ಅನಂತಮೂರ್ತಿಯವರನ್ನು 'ವಿಕ್ರಾಂತ ಕರ್ನಾಟಕ' ಬಳಗ ಆಯ್ಕೆ ಮಾಡಿದೆ ಎಂದು ರವೀಂದ್ರ ರೇಷ್ಮೆಯವರು ತಮ್ಮ ಸಂಪಾದಕೀಯದಲ್ಲಿ ಬರೆದಿದ್ದಾರೆ. ಪತ್ರಿಕೆ, ಆರೇಳು ತಿಂಗಳುಗಳ ಹಿಂದೆ ಭೈರಪ್ಪನವರ 'ಆವರಣ' ಕುರಿತ ತಮ್ಮ ಅಭಿಪ್ರಾಯಕ್ಕಾಗಿ ಕೆಲವು ಮಾಧ್ಯಮಗಳಲ್ಲಿ ಅನಗತ್ಯ ಅಪಪ್ರಚಾರಕ್ಕೆ ಈಡಾಗಿದ್ದ ಅನಂತಮೂರ್ತಿಯವರ ಪರವಾಗಿ ನಾನು ಬರೆದಿದ್ದ ಲೇಖನವೊಂದರ ಜೊತೆಗೆ - ಪತ್ರಿಕೋದ್ಯಮದ ನಿಷ್ಪಕ್ಷಪಾತ ನೀತಿಯನ್ನು ಎತ್ತಿ ಹಿಡಿಯಲೋ ಎಂಬಂತೆ - ಅವರನ್ನೂ, ಅವರ ಸಾಹಿತ್ಯವನ್ನೂ ವಿಮರ್ಶೆಯ ಹೆಸರಲ್ಲಿ ಅಗ್ಗದ ಭಾಷೆಯಲ್ಲಿ ಹೀಯಾಳಿಸಿ ಬರೆದಿದ್ದ ಲೇಖನವೊಂದನ್ನು ಆಯ್ದು ಪ್ರಕಟಿಸಿತ್ತು. ಈಗ ಈ ಆಯ್ಕೆಯ ಮೂಲಕ ಪತ್ರಿಕೆ ಆ ಪಾಪಕ್ಕೆ ಪ್ರಾಯಶ್ಚಿತ್ತ ಮಾಡಿಕೊಂಡಿದೆ ಎಂದರೆ, ರೇಷ್ಮೆಯವರು ಬೇಸರ ಮಾಡಿಕೊಳ್ಳುವುದಿಲ್ಲ ಎಂದು ಭಾವಿಸಿದ್ದೇನೆ.

ರೇಷ್ಮೆಯವರ ಆಯ್ಕೆಯನ್ನು ಗೌರವಿಸುತ್ತಲೇ, ನನ್ನ ವರ್ಷದ ವ್ಯಕ್ತಿಯ ಆಯ್ಕೆಯನ್ನೂ ಈ ಅಂಕಣದ ಮೂಲಕ ತಿಳಿಸಿ ಬಿಡುವುದು ಒಳ್ಳೆಯದು. ನನ್ನ ಆಯ್ಕೆ, ಇಂದಿನ ಎಲ್ಲ ಸ್ಪರ್ಧೆ, ಆಧುನೀಕರಣ ಹಾಗೂ ಹಣದ ಹಪಾಹಪಿಯ ನಡುವೆಯೂ ವೈದ್ಯಕೀಯ ಕ್ಷೇತ್ರದಲ್ಲಿ ಇನ್ನೂ ಸಹೃದಯತೆ ಎಂಬುದು ಉಳಿದಿದೆ ಎಂದು ತೋರಿಸಿರುವ 'ಸ್ಪರ್ಶ' ಆಸ್ಪತ್ರೆಯ ನಗುಮೊಗದ ಡಾಕ್ಟರ್, ಶರಣ್ ಪಾಟೀಲ್ ಅವರು.

Rating
No votes yet

Comments