ಐನೂರು ಮರಗಳಿಗೆ ಕೊಡಲಿ ತಪ್ಪಿಸಲು ಇ-ಬಜೆಟ್

ಐನೂರು ಮರಗಳಿಗೆ ಕೊಡಲಿ ತಪ್ಪಿಸಲು ಇ-ಬಜೆಟ್

ಬರಹ

UDAYAVANI 

(ಇ-ಲೋಕ-57)(15/1/2008)  

ಅಮೆರಿಕಾದ ಆಯವ್ಯಯ ಪಟ್ಟಿಯನ್ನು ಈ ಸಲ ವಿದ್ಯುನ್ಮಾನ ರೂಪದಲ್ಲಿ ಒದಗಿಸಲು ನಿರ್ಧರಿಸಲಾಗಿದೆ.ಮುದ್ರಿತ ಪ್ರತಿಯನ್ನು ಅಪೇಕ್ಷಿಸಿದವರಿಗಷ್ಟೇ ಒದಗಿಸಲಾಗುತ್ತದೆ.ಪತ್ರಕರ್ತರು ಮತ್ತು ಸಂಸದರು ಇ-ಬಜೆಟನ್ನು ಅಂತರ್ಜಾಲದ ಮೂಲಕ ಪಡೆಯಲಿದ್ದಾರೆ.ಇದರಿಂದಾಗುವ ಲಾಭವೆಂದರೆ ಎರಡು ಸಾವಿರಕ್ಕೂ ಹೆಚ್ಚು ಪುಟಗಳ ಬಜೆಟ್‍ನ ಮೂರು ಸಾವಿರ ಪ್ರತಿಗಳನ್ನು ಮುದ್ರಿಸಲು ಬಳಕೆಯಾಗುವ ಕಾಗದದ ಉಳಿತಾಯ.ಇಷ್ಟು ಕಾಗದ ತಯಾರಿಸಲು ಐನೂರರಷ್ಟು ಮರಗಳನ್ನು ಕಡಿದುರುಳಿಸಬೇಕಿತ್ತು!ಕಂಪ್ಯೂಟರ್ ಮೂಲಕ ಬಜೆಟ್ ಪ್ರಸ್ತಾವ ಪರಿಶೀಲಿಸುವಾಗ ಆಗುವ ಮುಖ್ಯ ಲಾಭವೆಂದರೆ,ನಮಗೆ ಬೇಕಾದ ಮಾಹಿತಿಯನ್ನು ಹುಡುಕುವುದು ಸುಲಭವಾಗುತ್ತದೆ.ಈ ಹೆಜ್ಜೆಯಿಂದ ಹಣದ ಉಳಿತಾಯವೂ ಆಗಲಿದೆ.ಮುಂದಿನ ಐದು ವರ್ಷ ಇದೇ ರೀತಿ ಮಾಡಿದರೆ,ಆಗುವ ಉಳಿತಾಯ ಒಂದು ಮಿಲಿಯನ್ ಡಾಲರುಗಳು.
ಮೊಬೈಲ್ ಕರೆ ತಪ್ಪುವುದಕ್ಕಿನ್ನೊಂದು ಕಾರಣ
 ಉಡುಪಿ ಸಾಹಿತ್ಯ ಸಮ್ಮೇಳನದ ಸ್ಥಳದಲ್ಲಿ ಜನಸಂದಣಿ ಕಿಕ್ಕಿರಿದು ನೆರೆದಾಗ,ಅಷ್ಟು ಜನರ ಬಳಿಯಲ್ಲಿರುವ ಸೆಲ್ ಫೋನ್‍ಗಳ ಸಂಖ್ಯೆ ಆ ಸ್ಥಳಕ್ಕೆ ಸಂಕೇತ ನೀಡುತ್ತಿದ್ದ ಗೋಪುರದ ಸಾಮರ್ಥ್ಯವನ್ನು ಮೀರಿದ ಕಾರಣ,ಕರೆಗಳು ವಿಫಲವಾಗುತ್ತಿದ್ದುದು ನೆನಪಿದೆಯೇ?ಜನಸಂದಣಿಯಿದ್ದೆಡೆ ಹೀಗಾಗುವುದು ಸಾಮಾನ್ಯ.ಮೊಬೈಲ್ ಕರೆಗಳು ವಿಫಲವಾಗುವುದಕ್ಕೆ ಸೂರ್ಯನ ಮೇಲ್ಮೈಯಲ್ಲಿನ ಚಟುವಟಿಕೆಗಳೂ ಕಾರಣವಾಗಬಹುದಂತೆ.ಈ ಚಟುವಟಿಕೆಗಳು ಕಾಲದಿಂದ ಕಾಲಕ್ಕೆ ನಡೆಯುತ್ತಿರುತ್ತವೆ.ಇದರಿಂದ ಸೂರ್ಯನ ಮೇಲ್ಮೈಯಲ್ಲಿ ಬಿರುಗಾಳಿ ಏರ್ಪಡುತ್ತವೆ.ಹೀಗಾದಾಗ ಭೂಮಿಯ ಕೆಲವೆಡೆ ಪ್ರಬಲ ಸೂರ್ಯನ ಕಿರಣಗಳು ತಲುಪುತ್ತವೆ.ಈ ವಿದ್ಯುದಯಸ್ಕಾಂತೀಯ ಕಿರಣಗಳು ಮೊಬೈಲ್ ಸಂಕೇತಗಳನ್ನು,ಜಿ ಪಿ ಎಸ್ ಸಾಧನಗಳ ಸಂಕೇತಗಳನ್ನು ಬಾಧಿಸುವುದಿದೆ.ಇದರಿಂದ ಮೊಬೈಲ್ ಕರೆಗಳು ವಿಫಲವಾಗಬಹುದು.ಜಿ ಪ್ ಎಸ್ ಸಾಧನ ಕೃತಕ ಉಪಗ್ರಹದೊಂದಿಗೆ ಸಂವಹನ ಸಾಧ್ಯವಾಗದೆ,ವಿಫಲವಾಗಬಹುದು.ಸೂರ್ಯನ ಚಟುವಟಿಕೆ ಕಡಿಮೆಯಾಗುವವರೆಗೆ ಕಾಯುವುದಲ್ಲದೆ ಇದಕ್ಕೆ ಬೇರೆ ಪರಿಹಾರವಿಲ್ಲವಂತೆ.ಕೆಲವೊಮ್ಮೆ ವಿದ್ಯುತ್ ಲೈನುಗಳನ್ನೂ ಇದು ಬಾಧಿಸುತ್ತದೆ.1989ರಲ್ಲಿ ಕೆನಡಾದ ಕ್ಯುಬೆಕ್‍ನಲ್ಲಿ ವಿದ್ಯುತ್ ಕೈಕೊಟ್ಟಿತು.ಐದು ವರ್ಷದ ಹಿಂದೆ ಸ್ವೀಡನ್‍ನ ಉಪಗ್ರಹ ನಿಯಂತ್ರಣ ಕೇಂದ್ರದೊಂದಿಗೆ ಸಂಪರ್ಕ ಕಳೆದುಕೊಂಡು ನಿರುಪಯೋಗಿಯಾಗಲೂ ಇದುವೇ ಕಾರಣವಂತೆ.ಸದ್ಯ ಸೂರ್‍ಯನ ಮೇಲ್ಮೈಯಲ್ಲಿ ಚಟುವಟಿಕೆ ಹೆಚ್ಚಿದ್ದು ಮುಂದಿನ ಎರಡು ವರ್ಷಗಳ ಕಾಲ ಇದು ಮುಂದುವರಿಯ ಬಹುದು ಎಂದು ತಜ್ಞರ ಅಂದಾಜು.
ಲಕ್ಷ ರೂಪಾಯಿ ಕಾರು ಕನಸು ನನಸಾದರೆ,ಮೂರು ಸಾವಿರಕ್ಕೆ ಲ್ಯಾಪ್‍ಟಾಪ್ ಕನಸು ನನಸಾಗದೇ? 

ಪ್ರತಿ ಮಗುವಿಗೆ ನೂರು ಡಾಲರಿನಷ್ಟು ಅಗ್ಗದ ದರದಲ್ಲಿ ಲ್ಯಾಪ್‍ಟಾಪ್ ಒದಗಿಸುವುದು ನೆಗ್ರೋಪಾಂಟಿನ ಕನಸಾಗಿತ್ತು.ಈ ಯೋಜನೆಯಿಂದ XO ಎನ್ನುವ ಲ್ಯಾಪ್‍ಟಾಪ್ ಕಂಪ್ಯೂಟರ್ ಹೊರಹೊಮ್ಮಿತಾದರೂ,ಅದರ ಬೆಲೆ ಹೆಚ್ಚು ಕಡಿಮೆ ದ್ವಿಗುಣವಾಯಿತು.ಈ ಯೋಜನೆಯಲ್ಲಿ ಭಾಗವಹಿಸಿದ ಮೇರಿ ಜೆಪ್ಸೆನ್ ಎನ್ನುವ ಮಹಿಳೆ ಈಗ ಅದರಿಂದ ಹೊರಬಂದು ಪ್ರತ್ಯೇಕ ಕಂಪೆನಿ ಸ್ಥಾಪಿಸಿದ್ದಾರೆ.ಪಿಕ್ಸೆಲ್ ಕಿ ಎನ್ನುವುದೀ ಕಂಪೆನಿಯ ಹೆಸರು. ಆಕೆ ಇದೀಗಲೇ ಸೂರ್ಯನ ಬೆಳಕಿನಲ್ಲೂ ಓದಲಾಗುವ,ಅತಿ ಕಡಿಮೆ ವಿದ್ಯುಚ್ಛಕ್ತಿ ಬಯಸುವ ಲ್ಯಾಪ್‍ಟಾಪ್ ತೆರೆಯನ್ನು ಸಂಶೋಧಿಸಿದ್ದಾರೆ.ಅಂತರ್ಜಾಲದ ಮೂಲಕವೇ ತಂತ್ರಾಂಶಗಳನ್ನು ಪಡೆದು,ಸಂಸ್ಕರಣಾ ಸಾಮರ್ಥ್ಯವನ್ನೂ ಅಂತರ್ಜಾಲದ ಸಂಸ್ಕಾರಕಗಳಿಂದಲೇ ಪಡೆಯುವ,ಸ್ಮರಣಕೋಶವನ್ನೂ ಕಂಪ್ಯೂಟರ್ ಜಾಲದಿಂದಲೇ ಪಡೆದು,ಅಂತರ್ಜಾಲಕ್ಕೆ ಸಂಪರ್ಕ ಬೆಳೆಸುವ ಮಾಧ್ಯಮವಾಗಿ ಲ್ಯಾಪ್‍ಟಾಪ್ ಬಳಸುವ ಯೋಚನೆಯಿಂದ ಮುಂದುವರಿದರೆ ಎಪ್ಪತ್ತೈದು ಡಾಲರುಗಳಿಗೆ ಲ್ಯಾಪ್‍ಟಾಪ್ ತಯಾರಿಸಲು ಅಸಾಧ್ಯವೇನಲ್ಲ.
 ರತನ್ ಟಾಟಾರ ಒಂದು ಲಕ್ಷ ರೂಪಾಯಿಯ ಕಾರು ಯೋಜನೆ ಪ್ರಕಟವಾದಾಗ,ಅದರ ಬಗ್ಗೆ ಮೂಗು ಮುರಿಯದವರಾರು?ಆದರೆ ಐನೂರು ಜನ ತಂತ್ರಜ್ಞರು ನಾಲ್ಕು ವರ್ಷ ಪರಿಶ್ರಮ ಪಟ್ಟು ಆ ಕನಸನ್ನು ನನಸಾಗಿಸಲಿಲ್ಲವೇ?ತಂತ್ರಜ್ಞರ ತಂಡದ ನಾಯಕ ಗಿರೀಶ್ ವಾಘ್. ಈತ ಮಹಾರಾಷ್ಟ್ರ ತಾಂತ್ರಿಕ ಮಹಾವಿದ್ಯಾಲಯದ ಮೆಕಾನಿಕಲ್ ಇಂಜಿನಿಯರ್.ಎಂಬಿಎ ಸ್ನಾತಕೋತ್ತರ ಪದವಿಯೂ ಇದೆ.ನ್ಯಾನೋದ ಮುನ್ನ ಏಸ್ ಕಾರಿನ ವಿನ್ಯಾಸ ಮಾಡಿದ ಅನುಭವವಿತ್ತಾದರೂ,ನ್ಯಾನೋ ವಿನ್ಯಾಸಕ್ಕೆ ತೊಡಗುವಾಗ ಯೋಜನೆಯು ಸ್ಪಷ್ಟ ರೂಪವನ್ನೇ ಪಡೆದಿರಲಿಲ್ಲ.ಖರ್ಚು ಒಂದು ಲಕ್ಷ ಮೀರಬಾರದು ಮತ್ತು ನಾಲ್ಕು ಚಕ್ರದ ಬೈಕು ಎನಿಸಲ್ಪಡಬಾರದು ಎನ್ನುವ ಮುನ್ನೆಚರಿಕೆ ಮಾತ್ರಾ ಅವರಿಗೆ ಕೊಡಲಾಗಿತ್ತು.ಕಡಿಮೆ ಖರ್ಚಿನಲ್ಲಿ ವಾಹನ ತಯಾರಿಸಲು ಅಚ್ಚಿನಲ್ಲಿ ತಯಾರಿಸಿದ ಪ್ಲಾಸ್ಟಿಕ್ ಹೊರಮೈಯನ್ನು ಬಳಸುವುದು ಸುಲಭದ ಮಾರ್ಗವಾಗಿತ್ತು.ಹಾಗೆ ಮಾಡಿದರೆ ಪೈಂಟ್ ಖರ್ಚೂ ಇರದು! ಆದರೆ ಜನರು ಅಂತಹದನ್ನು ಇಷ್ಟಪಡಲಾರರು ಎಂದು ಲೋಹದ ಬಾಡಿ ಬಳಸಲಾಯಿತಂತೆ.ವಿಶಿಷ್ಟ ಉಬ್ಬಿದ ವಿನ್ಯಾಸ ಬಳಸಿ,ಹೊರಗಿನ ಗಾತ್ರ ಕುಗ್ಗಿಸಿಯೂ,ಒಳಗೆ ಸಾಕಷ್ಟು ಸ್ಥಳಾವಕಾಶ ಸೃಷ್ಟಿಸಲಾಯಿತು.ಒಂದೇ ವೈಪರ್,ಒಂದೇ ಇಂಡಿಕೇಟರ್ ಬಳಸಿ ಮಿತವ್ಯಯ ಸಾಧಿಸಲಾಯಿತು.ಇಂಜಿನ್‍ನ್ನು ಹಿಂಭಾಗದಲ್ಲಿ ಕೂರಿಸಿದ ಕಾರಣ ಬ್ಯಾಟರಿಯನ್ನು ಬ್ಯಾನೆಟ್‍ಟಿನ ಒಳಗಿರಿಸಿ,ತೂಕದ ಸಮತೋಲನ ಸಾಧಿಸಲಾಯಿತು.ಐದು ಜನರನ್ನು ಹೊತ್ತೊಯ್ದರೂ ಪ್ರತಿ ಲೀಟರ್ ಪೆಟ್ರೋಲಿಗೆ ಇಪ್ಪತ್ತು ಕಿಲೋಮೋಟರ್ ಮೈಲೇಜ್ ಸಾಧಿಸುವ ಏರೋಡೈನಾಮಿಕ್ ಹೊರಮೈ ವಿನ್ಯಾಸ ಸಾಧಿಸಲಾಯಿತು.ವಿನ್ಯಾಸವನ್ನು ಹತ್ತಾರು ಬಾರಿ ಬದಲಾಯಿಸಿ,ಪ್ರಯೋಗ ಮಾಡಿ ವಿನ್ಯಾಸವನ್ನು ಅಂತಿಮಗೊಳಿಸಲಾಯಿತು.ಬೈಕಿಗಿಂತ ಹೆಚ್ಚು ವಾಯು ಮಾಲಿನ್ಯ ಮಾಡದ ನ್ಯಾನೋ,ಅಪಘಾತವಾದಾಗ ಒಳಗಿನವರ ಸುರಕ್ಷತೆ ಕಾಪಾಡುವಷ್ಟು ಸುದೃಢವಾಗಿದೆ.
ಅಂತರ್ಜಾಲ ಪುಟದ ಹೆಸರು:ವಿವಾದ
 ಅಂತರ್ಜಾಲದ ಪುಟಗಳ ಹೆಸರುಗಳನ್ನು ನೋಂದಾಯಿಸುವ ಸಂಸ್ಥೆಗಳಿವೆ.ನೆಟ್‍ವರ್ಕ್ ಸೊಲ್ಯುಶನ್ಸ್ ಇವುಗಳಲ್ಲಿ ಒಂದು. ಈ ಕಂಪೆನಿಯ ಕ್ರಮವೊಂದೀಗ ವಿವಾದಕ್ಕೀಡಾಗಿದೆ.ಯಾವೊದೋ ಪುಟ ಇದೆಯೇ ಎಂದು ಹುಡುಕಾಡಿದೊಡನೆ,ಆ ಹೆಸರಿನ ಪುಟ ಇಲ್ಲವಾದರೆ,ನೆಟ್‍ವರ್ಕ್ ಸೊಲ್ಯುಶನ್ಸ್ ಕಂಪೆನಿ,ಆ ಹೆಸರನ್ನು ತನ್ನಲ್ಲಿರಿಸಿಕೊಳ್ಳುತ್ತದೆ.ಒಂದು ವೇಳೆ ಆ ಹೆಸರಿನಲ್ಲಿ ಪುಟದ ಹೆಸರನ್ನು ನೋಂದಾಯಿಸಲು ಬಯಸಿದರೆ,ಅವರು ಕಂಪೆನಿಗೆ ಮೂವತ್ತೈದು ಡಾಲರು ಹಣ ತೆರಬೇಕು.ಇದು ಅಕ್ರಮ ಎಂದು ಕೆಲವರ ವಾದ.ಹಾಗೇನಿಲ್ಲ,ಹೆಸರನ್ನು ತಾನಿರಿಸಿಕೊಳ್ಳುವುದು ನಾಲ್ಕು ದಿನಗಳ ಕಾಲ ಮಾತ್ರಾ. ನಂತರ ಅದನ್ನು ಮತ್ತೆ ಮುಕ್ತವಾಗಿಸಲಾಗುವುದು ಎನ್ನುವುದು ಕಂಪೆನಿಯ ವಿವರಣೆ.
ಅಶೋಕ್‍ಕುಮಾರ್ ಎ