ದೂರ ಕಾಲ

ದೂರ ಕಾಲ

ಕೆಲಸದಲ್ಲಿ ಮೊನ್ನೆ ಹೊಸ ಸಾಫ್ಟ್‌ವೇರ್‍ ಬಗ್ಗೆ ಒಂದಿಬ್ಬರು ಗೊಣಗಿಕೊಳ್ಳುತ್ತಿದ್ದರು. ನಾನು ತಲೆ ತಗ್ಗಿಸಿ ನನ್ನ ಪಾಡಿಗೆ ಕಾಫಿ ಮಾಡಿಕೊಳ್ತಾ ಇದ್ದೆ. ಗೊಣಗಾಟದ ನಡುವಲ್ಲಿ ಒಬ್ಬಳು ಹೇಳಿದ್ದು "ಸ್ಕ್ರೀನಿನ ಒಂದು ಮೂಲೆಯಲ್ಲಿರುವ ಲಿಸ್ಟ್‌ನಿಂದ ಆಯ್ದು ಕೊಳ್ಳಬೇಕು. ಸ್ಕ್ರೀನಿನ ಇನ್ನೊಂದು ಮೂಲೆಯಲ್ಲಿರುವ ಬಾಕ್ಸಿಗೆ ಅದನ್ನು ಎಳೆದು ತಂದು ಹಚ್ಚಿಕೊಳ್ಳಬೇಕು. ನಾನು ಕೆಲಸ ಮಾಡುವ ಪ್ರತಿಯೊಂದು ಅಕೌಂಟಿಗೂ ಹೀಗೆ ಮಾಡುತ್ತಾ ಕೂತರೆ ಕೆಲಸ ಸಾಗುವುದಿಲ್ಲ".

ಅವಳ ಮಾತಿನ ಹಿಂದಿನ ಕಳವಳ ಗೊತ್ತಾಯಿತು. ಬೇಗ ಬೇಗ ಕೆಲಸ ಮಾಡಬೇಕು. ಎಷ್ಟು ಕೆಲಸ ಮಾಡಿದೆ ಎಂದು ದಿನದಿನಕ್ಕೂ ಲೆಕ್ಕ ಕೊಡಬೇಕು. ಹೊಸ ಸಾಫ್ಟ್‌ವೇರಿನಿಂದ ಕೆಲಸ ಬೇಗ ಆಗುವ ಬದಲು ತಡವಾಗುತ್ತಿದೆ ಎಂಬ ಆತಂಕ. ಇವೆಲ್ಲಾ ಆ ಮಾತುಗಳ ಹಿಂದೆ ಇತ್ತು.

ಈ ಕಂಪ್ಯೂಟರ್‍ ಯುಗದಲ್ಲಿ ಕೆಲಸದ ದಕ್ಷತೆ ಬಗ್ಗೆ ಕ್ರೂರವಾದ ಹೊಸ ಮಾಪನಗಳಿವೆ. ಕಾಲಕ್ಕೆ ಬೇರೆಲ್ಲಕ್ಕಿಂತ ಹೆಚ್ಚಿನ ಮಹತ್ವ ಕೊಟ್ಟು ಅದನ್ನು ದಕ್ಷವಾಗಿ ಬಳಸುವುದಕ್ಕೂ ಕ್ರೂರವಾದ ಮಾಪನಗಳಿವೆ. ಇವುಗಳ ಹೆದರಿಕೆಯೂ ಆ ಮಾತಿನ ಹಿಂದೆ ಕೆಲಸ ಮಾಡುತ್ತಿತ್ತು.

ಅದೆಲ್ಲಾ ಒಂದು ಕಡೆಯಾದರೆ-
ಸುಮಾರು ಒಂದು ಅಡಿ ಉದ್ದ ಒಂದು ಅಡಿ ಅಗಲವಿರುವ ಆಕೆಯ ಸ್ಕ್ರೀನಿನ ಒಂದು ಮೂಲೆಯಿಂದ ಇನ್ನೊಂದು ಮೂಲೆ ಅಷ್ಟು ದೂರ ಅಂತ ಅನಿಸುವುದು ಏಕೆ? ಮಾಡುವ ಕೆಲಸದ ನಾಜೂಕಿನಿಂದಲೇ? ಪಕ್ಕಪಕ್ಕದಲ್ಲೆ ಇರಬಹುದು, ಇದ್ದರೆ ಸುಲಭ ಅಂತಲೆ? ಜಗತ್ತಿನ ಮೂಲೆ ಮೂಲೆಗಳು ಹತ್ತಿರ ಎನಿಸುವ ಈ ಯುಗದಲ್ಲಿ, ಸ್ಕ್ರೀನಿನ ಮೂಲೆಗಳು ದೂರ ದೂರ ಅನಿಸುವುದು ಸೋಜಿಗವಲ್ಲವೆ?

ನಮ್ಮ ಮನಸ್ಸು ತನಗೆ ಕೊಟ್ಟ ಚೌಕಟ್ಟಿನಲ್ಲೇ ಕೆಲಸ ಮಾಡುತ್ತಾ ಅದನ್ನೇ ವಿಶ್ವ ಮಾಡಿಕೊಳ್ಳುವ ಒಂದು ಅಚ್ಚರಿ. ಲೋಕದ ಮೂಲೆ ಮೂಲೆಯೂ ಅಣುವಿನ ಪಕ್ಕ ಪಕ್ಕದಲ್ಲಿರುವಂತಾಗಿರುವ ಕಾಲದಲ್ಲಿದ್ದೇವೆ. ದೂರಗಳನ್ನು ಮತ್ತೆ ಅಳೆದುಕೊಳ್ಳುವ ಕೆಲಸವಾಗಬೇಕೇನೋ ಎಂದು ಮನಸ್ಸು ಏತ್ತಲೋ ಕಳೆದಿತ್ತು.

ನನಗೇ ಅರಿವಿಲ್ಲದಂತೆ - ಐದಿಂಚು ಉದ್ದದ ಚಮಚವನ್ನು ಮೂರಿಂಚು ಅಗಲದ ಲೋಟದಲ್ಲಿಂದ ಎತ್ತಿ ಆರಿಂಚು ದೂರವಿರುವ ಸಿಂಕಿನ ಪಕ್ಕ ಇಟ್ಟೆ. ಲೋಟವನ್ನು ಟೇಬಲ್ ಮೇಲಿಂದ ಎರಡಡಿ ದೂರವಿರುವ ಬಾಯಿಗಿಟ್ಟು ಕಾಫಿ ಹೀರಿದೆ. ಕಣ್ಣುಮುಚ್ಚಿ ಅದರ ರುಚಿಯನ್ನು ಸವಿದುಕೊಂಡೆ.

Rating
No votes yet

Comments