ಪ್ರೀತಿಯ ರಹಮತ್ ತರೀಕೆರೆಯವರಿಗೆ...
ಇಲ್ಲಿ
ಯಾರೂ ಮುಖ್ಯರಲ್ಲ;
ಯಾರೂ ಅಮುಖ್ಯರಲ್ಲ;
ಯಾವುದೂ ಯಕಶ್ಚಿತವಲ್ಲ!
ಈ ಸಾಲುಗಳನ್ನು ಓದಿದಾಕ್ಷಣ ಕನ್ನಡ ಸಾಹಿತ್ಯ ಪ್ರೇಮಿಗಳ ಮನದ ಮುಂದೆ ಬಂದು ನಿಲ್ಲುವುದು "ಇಪ್ಪತ್ತನೇ ಶತಮಾತನದ ಕನ್ನಡ ಸಾಹಿತ್ಯದ ಶಿಖರ ಸಾಧನೆ" ಕುವೆಂಪುರವರ "ಮಲೆಗಳಲ್ಲಿ ಮದುಮಗಳು".
ಮಲೆಗಳಲ್ಲಿ ಮದುಮಗಳು ಓದುವಾಗಲೇ ಆ ಕೃತಿಯ ಮೊದಲನೇ ಪುಟದಲ್ಲಿ 'ಓದುಗರಿಗೆ' ಕುವೆಂಪುರವರು ಬರೆದಿರುವ ಈ ಸಾಲುಗಳು ನನ್ನನ್ನು ಆಕರ್ಷಿಸಿದ್ದವು. ಅದಕ್ಕೆ ಕಾರಣ, ಈ ಸಾಲುಗಳು ಕೇವಲ ಈ ಕೃತಿಗೆ ಹಾಗೂ ಕೃತಿಕಾರರ ಮನೋಧರ್ಮವನ್ನು ಪ್ರಕಟಿಸುವುದಕ್ಕೆ ಮಾತ್ರ ಸೀಮಿತವಾಗದೆ ಇಡೀ ಮಾನವ ಬದುಕಿನ ಸತ್ಯವನ್ನು ಪ್ರತಿಬಿಂಬಿಸುತ್ತವೆ ಹಾಗೂ ದಾರ್ಶನಿಕ ಕುವೆಂಪುರವರ ದರ್ಶನವನ್ನು ವ್ಯಕ್ತಗೊಳಿಸುತ್ತದೆ ಎನ್ನುವುದು.
ಈ ಸಾಲುಗಳು ಈಗ ಮತ್ತೆ ನೆನಪಾದುದು ಏಕೆಂದರೆ, ಕನ್ನಡದ ಇಂದಿನ ಪ್ರಮುಖ ಸಾಹಿತ್ಯ-ಸಂಸ್ಕೃತಿ ವಿಮರ್ಶಕರಲ್ಲೊಬ್ಬರಾದ ಡಾ.ರಹಮತ್ ತರೀಕೆರೆಯವರ ಕೃತಿ "ಇಲ್ಲಿ ಯಾರೂ ಮುಖ್ಯರಲ್ಲ". ಮೊನ್ನೆ ನಮ್ಮ ಮನೆಯಲ್ಲಿರುವ ಪುಸ್ತಕ ಭಂಡಾರವನ್ನು ಒಪ್ಪವಾಗಿ ಜೋಡಿಸುತ್ತಿದ್ದಾಗ ಕನ್ನಡ ಅಧ್ಯಾಪಕರಾಗಿದ್ದ ನಮ್ಮ ಭಾವನವರು ಕೊಂಡುಕೊಂಡಿದ್ದ ಈ ಕೃತಿಯೆಡೆಗೆ ನನ್ನ ನೋಟ ಹೊರಳಿತು. ಹಂಪಿ ವಿಶ್ವವಿದ್ಯಾಲಯದವರು ಪ್ರಕಟಿಸಿರುವ ಈ ಕೃತಿಯು ಕನ್ನಡ ಸಾಹಿತ್ಯ ಮೀಮಾಂಸೆ ಶ್ರೇಣಿಯಲ್ಲಿ ಎರಡನೆಯದು. ಮೊದಲನೆಯ ಸಂಪುಟ 'ಮಾತು ತಲೆಯೆತ್ತುವ ಬಗೆ'. 2000ನೆಯ ಇಸವಿಯಲ್ಲಿ ಪ್ರಕಟವಾದ ಕನ್ನಡ ಸಾಹಿತ್ಯ ಮೀಮಾಂಸೆಯ ಪರಿಷ್ಕೃತ ಆವೃತ್ತಿ. ಆಧುನಿಕ ಕನ್ನಡ ಸಾಹಿತ್ಯದ ಪೂರ್ವಸೂರಿಗಳಿಂದ ಹಿಡಿದು ನವೋದಯ, ನವ್ಯ, ಬಂಡಾಯ, ದಲಿತ ಹೀಗೆ ಎಲ್ಲ ಕಾಲದ ಪ್ರಮುಖ ಸಾಹಿತಿಗಳ ಭಾಷಣಗಳು ಹಾಗೂ ಲೇಖನಗಳನ್ನು ಒಳಗೊಂಡಿದ್ದ ಕನ್ನಡ ಸಾಹಿತ್ಯ ಮೀಮಾಂಸೆಯನ್ನು ಓದಿದ್ದ ನಾನು, ಪ್ರತಿ ಲೇಖನದ ಕಡೆಯಲ್ಲಿ ಆ ಕೃತಿಯ ಸಂಪಾದಕರಾದ ರಹಮತ್ ತರೀಕೆರೆಯವರು ಮಾಡಿದ್ದ ವಸ್ತುನಿಷ್ಟ ಟಿಪ್ಪಣಿ ನಿಜಕ್ಕೂ ಅವರ ಬಗ್ಗೆ ಮೊದಲ ಅಭಿಮಾನವನ್ನು ಮೂಡಿಸಿತ್ತು.
ಇದಾದ ನಂತರ, ಮೈಸೂರಿನಲ್ಲಿ ನಾನು ಕೆಲಸ ಮಾಡುತ್ತಿದ್ದ ಭಾರತೀಯ ಭಾಷೆಗಳ ಕೇಂದ್ರೀಯ ಸಂಸ್ಥೆಯ ಸಹಯೋಗದೊಂದಿಗೆ ಹಂಪಿ ವಿಶ್ವವಿದ್ಯಾಲಯದವರು ಆಯೋಜಿಸಿದ್ದ ಮಲೆ ಮಾದೇಶ್ವರರ ಕುರಿತ ಸಾಂಸ್ಕೃತಿಕ ಮುಖಾಮುಖಿಯಲ್ಲಿ ಸಕ್ರಿಯ ಕೇಳುಗನಾಗಿ ಪಾಲ್ಗೊಂಡಿದ್ದಾಗ ರಹಮತ್ ತರೀಕೆರೆಯವರು ಕೂಡ ಪಾಲ್ಗೊಂಡಿದ್ದು ನನ್ನ ಉತ್ಸಾಹವನ್ನು ಇಮ್ಮಡಿಗೊಳಿಸಿತ್ತು. ಆ ಸಮಯದಲ್ಲಿ ಅಸ್ವಸ್ಥರಾಗಿದ್ದ ಅವರು ಆ ವಿಚಾರ ಸಂಕಿರಣದಲ್ಲಿ ತಮ್ಮ ವಿಚಾರಧಾರೆಯನ್ನು ಪರಿಣಾಮಕಾರಿಯಾಗಿ ಮಂಡಿಸಲು ಸಾಧ್ಯವಾಗಿರಲಿಲ್ಲ.
ಸಂಕಿರಣದ ಸಮಾರೋಪದ ದಿನ ಸಂಜೆ ಅವರನ್ನು ಭೇಟಿಯಾದ ನಾನು, ನನ್ನ ಕೆಲವು ಸ್ನೇಹಿತರೊಂದಿಗೆ ಅವರನ್ನು ಮಾತನಾಡಿಸುತ್ತ ನಮ್ಮ ಸಂಸ್ಥೆಯ ಹತ್ತಿರದಲ್ಲಿ ಇದ್ದ ಬೇಕರಿಯೊಂದರ ಬಳಿ ಚಹಾ ಕುಡಿಯುವುದಕ್ಕೆ ಕರೆದುಕೊಂಡು ಹೋಗಿ ಅವರನ್ನು ಹರಟೆಗೆಳೆದೆವು. ಕುವೆಂಪುರವರಿಂದ ಹಿಡಿದು ಅನಂತಮೂರ್ತಿಯವರವರೆಗೂ ನಮ್ಮ ಮಾತಿನ ಓಘ ಹರಿದಿತ್ತು. ತಾನೊಬ್ಬ ದೊಡ್ಡ ವಿಮರ್ಶಕ, ಕನ್ನಡ ಸಾಹಿತ್ಯ, ಸಂಸ್ಕೃತಿಯನ್ನು ನೆಂಬ ಯಾವುದೇ ಗರ್ವವಿಲ್ಲದೆ, ಅದೇ ಮೊದಲ ಬಾರಿಗೆ ಪರಿಚಯವಾಗಿದ್ದ ನಮ್ಮೊಡನೆ ಮುಕ್ತಮನಸ್ಸಿನಿಂದ ಗೆಳೆಯರೊಡನೆ ಹರಟುವಂತೆ ಹರಟಿದರು ಅವರು. ಕಡೆಗೆ, ಅವರು ಕೈಗೊಂಡಿರುವ ಸಾಹಿತ್ಯ ಕೃಷಿಯ ಕುರಿತು ನಾನು ಪ್ರಶ್ನಿಸಿದ್ದಕ್ಕೆ ಕಾಪಾಲಿಕರ ಕುರಿತು ತಾನು ಅಧ್ಯಯನ ನಡೆಸುತ್ತಿರುವುದಾಗಿ ಅವರು ಹೇಳಿದರು. 'ಕಾಪಾಲಿಕರು' ಎಂದರೆ ನರಮಾಂಸ ಭಕ್ಷಕ ಶೈವರಲ್ಲವೇ ಸಾರ್? ಎಂದು ನಾನು ಪ್ರಶ್ನಿಸಿದಾಗ, ಹೌದು ಎಂದು ಆ ಕುರಿತು ಆಶ್ಚರ್ಯಚಕಿತರಾಗಿ ಕೇಳಿದರು.
ನನಗೆ ಕಾಪಾಲಿಕರ ಕುರಿತು ತಿಳಿದಿದ್ದು ಹೇಗೆಂದರೆ, ಕನ್ನಡದ ಪ್ರಮುಖ ಕಲಾವಿದರಾಗಿದ್ದ ಲೋಕೇಶ್ ಭಕ್ತ ಸಿರಿಯಾಳನಾಗಿ ಅಭಿನಯಿಸಿದ್ದ ಚಿತ್ರದಲ್ಲಿ ಮತ್ತೊಬ್ಬ ಶ್ರೇಷ್ಟ ನಟ ಸುಂದರ ಕೃಷ್ಣ ಅರಸ್ ಕಾಪಾಲಿಕನಾಗಿ ಕಾಣಿಸಿಕೊಂಡಿದ್ದು. ಆ ಚಿತ್ರದಲ್ಲಿ ಶಿವಭಕ್ತರಾದ ಸಿರಿಯಾಳ ದಂಪತಿಗಳು ಪ್ರತಿನಿತ್ಯ ಶಿವಶರಣರಿಗೆ ಉಣಬಡಿಸಿದ ನಂತರವಷ್ಟೆ ತಾವು ಆಹಾರ ಸೇವಿಸುವ ನೇಮವನ್ನಿಟ್ಟುಕೊಂಡಿರುವವರಾಗಿರುತ್ತಾರೆ. ಅದೊಂದು ದಿನ, ಶಿವ ತನ್ನ ಭಕ್ತರನ್ನು ಪರೀಕ್ಷಿಸುವ ಸಲುವಾಗಿ ಕಾಪಾಲಿಕನಾಗಿ ಬಂದು, ತನ್ನನ್ನು ಊಟಕ್ಕೆ ಆಹ್ವಾನಿಸಿದ ಸಿರಿಯಾಳ ದಂಪತಿಗಳಿಗೆ ತಮ್ಮ ಏಕಮಾತ್ರ ಪುತ್ರನನ್ನು ಆಹಾರವಾಗಿ ಬಡಿಸಲು ಕೇಳಿದಾಗ, ಶೋಕಚಿತ್ತರಾದರೂ, ತಮ್ಮ ನೇಮವನ್ನು ಮೀರದೆ, ಕಾಪಾಲಿಕನಿಗೆ ತಮ್ಮ ಪುತ್ರನ ಮಾಂಸವನ್ನು ಬೇಯಿಸಿ ಬಡಿಸುವ ಆ ದೃಶ್ಯ ಇಂದಿಗೂ ನನ್ನ ಸ್ಮೃತಿಯಿಂದ ಅಳಿಸಿ ಹೋಗಿಲ್ಲ.
ರಹಮತ್ ತರೀಕೆರೆಯವರೊಂದಿಗೆ ನಾನು ಕಳೆದ ಆ ಸಂಜೆ ನನ್ನ ಪಾಲಿಗೆ ಅವಿಸ್ಮರಣೀಯವಾದ ಸಂಗತಿಯಾಗಿತ್ತು. ಮಾರನೆಯ ದಿನ ನಮ್ಮ ಸಂಸ್ಥೆಯಲ್ಲಿ ನನಗೆ ಎದುರಾದ ಅವರು, ತಮ್ಮ ಸಹೋದ್ಯೋಗಿ ಪ್ರತಿಭಾವಂತ ಕತೆಗಾರ ಅಮರೇಶ ನುಗುಡೋಣಿಯವರಿಗೆ ನನ್ನನ್ನು ಪರಿಚಯಿಸಿದರು. ಅವರು ಹಂಪಿಗೆ ಹಿಂದಿರುಗಿದ ನಂತರ, ಅವರೊಂದಿಗೆ ಕಳೆದ ಅವಿಸ್ಮರಣೀಯ ಆತ್ಮೀಯ ಕ್ಷಣ ಹಾಗೂ ಅವರು ಭಾಗವಹಿಸಿದ್ದ ವಿಚಾರ ಸಂಕಿರಣದಲ್ಲಿ ಬಹುಚರ್ಚಿತವಾದ ವಿಚಾರಗಳು ಹಾಗೂ ಮಲೆಗಳಲ್ಲಿ ಮದುಮಗಳು ಕುರಿತಂತೆ ಕನ್ನಡದ ಅಂದಿನ ಪ್ರಮುಖ ವಿಮರ್ಶಕ ಎ.ಜಿ.ಕೃಷ್ಣಮೂರ್ತಿಯವರು ಹಾಗೂ ಅನಂತಮೂರ್ತಿಯವರು ಎತ್ತಿದ್ದ ತಾತ್ವಿಕ ಪ್ರಶ್ನೆಗಳನ್ನು ಉದ್ಧರಿಸಿ ನನ್ನ ಕೆಲವು ಸಂದೇಹಗಳನ್ನು ಪತ್ರದ ಮೂಲಕ ವ್ಯಕ್ತಪಡಿಸುವ ಸಲುವಾಗಿ ಸುಧೀರ್ಘ ಪತ್ರ ಬರೆದಿದ್ದೆ. ಆದರೆ, ಅದನ್ನು ಯಾಕೋ ಏನೋ ಅಂಚೆ ಡಬ್ಬಿಗೆ ಹಾಕಲು ಮನಸ್ಸೇ ಮಾಡಲಿಲ್ಲ, ಕಾರಣ, ಇನ್ನೂ ತಿಳಿದಿಲ್ಲ. ಈಗಲೂ ಆ ಪತ್ರ ನನ್ನಲ್ಲಿಯೇ ಭದ್ರವಾಗಿದೆ.
'ಕನ್ನಡಕ್ಕೆ ಬೇಕು ಕನ್ನಡದ್ದೇ ಆದ ವ್ಯಾಕರಣ' ರಚಿಸಿರುವ ಭಾಷಾತಜ್ಞ ಶಂಕರಭಟ್ಟರಂತೆ ಅಭಿಮಾನಪೂರ್ವಕವಾಗಿ, ವಸ್ತುನಿಷ್ಟವಾಗಿ ಹಾಗೂ ಅಧಿಕಾರಯುತವಾಗಿ ರಚಿಸಿರುವ ಅವರ 'ಇಲ್ಲಿ ಯಾರೂ ಮುಖ್ಯರಲ್ಲ' ಕೃತಿಯನ್ನು ಓದಲು ಕುಳಿತಾಗ ಯಾಕೋ ಇವೆಲ್ಲವೂ ನೆನಪಾದವು.
'ಇಲ್ಲಿ ಯಾರೂ ಮುಖ್ಯರಲ್ಲ' ಕೃತಿಯ ಅರಿಕೆಯಲ್ಲಿ ಅವರು ಬರೆಯುತ್ತ, "ಕುವೆಂಪು ತಮ್ಮ ದಾರ್ಶನಿಕ ಹಾಗೂ ಕಲಾತ್ಮಕತೆಯ ಎತ್ತರದಲ್ಲಿ ಹುಟ್ಟಿಸಿರುವ ಈ ಹೇಳಿಕೆಗಳು ಕನ್ನಡ ಸಾಹಿತ್ಯ ಹುಟ್ಟಿಸಿದ ಸಮಾಜವಾದಿ ಕಾರ್ಣಿಕಗಳಾಗಿವೆ. ಇವು ಸಾಹಿತ್ಯ ಮೀಮಾಂಸೆಯನ್ನು ಲೋಕದೃಷ್ಟಿಯನ್ನೂ ಅನನ್ಯವಾಗಿ ಏಕೀಭವಿಸುತ್ತವೆ. 'ಯಾರೂ ಮುಖ್ಯರಲ್ಲ' ಎಂಬುದು ಮೇಲುನೋಟಕ್ಕೆ ನಕಾರಾತ್ಮಕವಾದ ಹೇಳಿಕೆಯಾಗಿ ತೋರುತ್ತದೆ. ಆದರೆ ಪರೋಕ್ಷವಾಗಿ ಇದು ಎಲ್ಲ ಮಾನವರಲ್ಲಿ, ಮಾತ್ರವಲ್ಲ ಎಲ್ಲ ವಸ್ತುಗಳಲ್ಲಿ ಚೈತನ್ಯವು ಅಡಗಿದೆ ಎಂಬ ಸಕಾರಾತ್ಮಕ ಆಶಯವನ್ನೆ ಗರ್ಭೀಕರಿಸಿಕೊಂಡಿದೆ. ಇದು ಸಾಮಾನ್ಯ ಜನರ ಕಥನವಾಗಬಯಸಿದ ಆಧುನಿಕ ಸಾಹಿತ್ಯದ ಸಾಂಕೇತಿಕ ನಿರ್ವಚನ; ಪ್ರಜಾಪ್ರಭುತ್ವದ ಮೂಲಭೂತ ತತ್ವವನ್ನು ಸಾಹಿತ್ಯವು ಪಡಿನುಡಿಯುತ್ತಿರುವ ವಿಧಾನ ಕೂಡ. ಇಂತಹ ಹೇಳಿಕೆಗಳಿಂದ ಈ ಕೃತಿಗೆ ಹೆಸರು ಬಂದಿರುವುದು ಉಚಿತವೆಂದು ಭಾವಿಸಿದ್ದೇನೆ. ಈ ಮೂಲಕ ಶತಮಾನ ತುಂಬಿಸಿರುವ ಕುವೆಂಪು ಸ್ಮೃತಿಗೆ ಈ ಕೃತಿಯನ್ನು ಸಲ್ಲಿಸುತ್ತೇನೆ" ಎಂದು ಅಭಿಮಾನಪೂರ್ವಕವಾಗಿ ಹೇಳುತ್ತಾರೆ.
ಹಾಗೆಯೇ, ಅವರೊಂದಿಗೆ ನಾನು ಕಳೆದ ಆ ಮಧುರ ಕ್ಷಣಗಳನ್ನು ನೆನೆಸಿಕೊಳ್ಳುವಂತೆ ಮಾಡಿದ ಈ ಕೃತಿಗೆ, ಕೃತಿಕಾರ ರಹಮತ್ ತರೀಕೆರೆಯವರಿಗೆ ನನ್ನ ಈ ನೆನಪುಗಳನ್ನು, ಅನುಭವಗಳನ್ನು ಅರ್ಪಿಸುತ್ತೇನೆ. ಈ ಕೃತಿಯನ್ನು ಸಂಪೂರ್ಣವಾಗಿ ಓದಿ ಮುಗಿಸಿದ ನಂತರ ಕೃತಿಯ ಕುರಿತು ನನ್ನ ಗ್ರಹಿಕೆಯನ್ನು ಪತ್ರದ ಮೂಲಕ ಹಂಚಿಕೊಳ್ಳುವ ಪ್ರಯತ್ನ ಮಾಡುತ್ತೇನೆ. ಈ ಸಲ ಖಂಡಿತವಾಗಿಯೂ ಪತ್ರವನ್ನು ಅವರಿಗೆ ಕಳುಹಿಸಿಯೇ ತೀರುತ್ತೇನೆ. ಅವರು ಇದಕ್ಕೆ ಖಂಡಿತವಾಗಿಯೂ ಪ್ರತಿಕ್ರಿಯಿಸುತ್ತಾರೆ ಎನ್ನುವ ವಿಶ್ವಾಸ ನನ್ನದು. ಆಗ ಈ ನನ್ನ ಬ್ಲಾಗ್‌ನಲ್ಲಿ ಆ ಅನುಭವಗಳನ್ನು ಹಂಚಿಕೊಳ್ಳುತ್ತೇನೆ.
Comments
ಉ: ಪ್ರೀತಿಯ ರಹಮತ್ ತರೀಕೆರೆಯವರಿಗೆ...