ನೀ ನನ್ನವನಲ್ಲ
ನಿನ್ನ ಬಿಂಬ ನನ್ನ ಕಣ್ಣಲ್ಲಿ ಎಲ್ಲರೂ ಕಂಡಿರಬಹುದು
ನಿನ್ನ ಹೆಸರು ಸದಾ ನನ್ನ ತುಟಿಯಮೇಲೆ ನಲಿಯುತಿರಬಹುದು
ನೀನು ನನ್ನನ್ನು ನಾನು ನಿನ್ನನ್ನು ಮರೆಯದಿರಬಹುದು
ಆದರೆ, ಎಂದಿಗೂ ನೀನು ನನ್ನವನಲ್ಲ
ನಿನ್ನಜೊತೆ ದಿಗಂತದ ಸುಖ 'ನಾ' ಕಂಡಿರಬಹುದು
ನಿನ್ನೊಡನೆ ಅದೆಷ್ಟೋ ಬೆಟ್ಟ-ಕಣಿವೆ ಹತ್ತಿ-ಇಳಿದಿರಬಹುದು
ನಿನ್ನ ಕೈ ಹಿಡಿದೇ ಹೊಳೆ ಹಳ್ಳ ದಾಟಿರದಹುದು
ಆದರೆ, ಎಂದಿಗೂ ನೀನು ನನ್ನವನಲ್ಲ
'ನೀ ನನಗಾಗಿ' - 'ನಾ-ನಿನಗಾಗಿ' ನೋಡಲು ಹಾತೊರೆದಿರಬಹುದು
ಜೊತೆಯಾಗಿ ಹಾಡಿ ಆಡಿ ಉಂಡಿರಬಹುದು
ಒಬ್ಬೊಬ್ಬರನ್ನು ಅಪ್ಪಿ ನೂರೆಂಟು ನೋವ ಮರೆತಿರಬಹುದು
ಆದರೆ, ಎಂದಿಗೂ ನೀನು ನನ್ನವನಲ್ಲ
ನನ್ನ ಪ್ರಾಣ ನಿನ್ನಲ್ಲೂ ನಿನ್ನ ಪ್ರಾಣ ನನ್ನಲ್ಲಡಗಿರಬಹುದು
ನೀ-ನನ್ನ ಉಸಿರು ನಾ-ನಿನ್ನ ಎದೆಬಡಿತವೂ ಆಗಿರಬಹುದು
ಇಬ್ಬರೂ ಒಬ್ಬರನ್ನೊಬ್ಬರು ಕ್ಷಣ ಕೂಡ ಬಿತ್ತಿರಲಾರೆವು ಅನಿಸಿರಬಹುದು
ಆದರೆ, ಎಂದಿಗೂ ನೀನು ನನ್ನವನಲ್ಲ
ಇಬ್ಬರೂ ಒತ್ತಿ ಸೇರಿ ಅನೇಕ ಬಾರಿ ಪಯಣಿಸಿರಬಹುದು
ಓಡಿ-ಓಡಿ ದಣಿವಾದಾಗ ಒಬ್ಬರನ್ನೊಬ್ಬರ ಎದೆಬಡಿತವಾಲಿಸಿ ಅದೇಕೋ ನಕ್ಕಿರಬಹುದು
ನಂತರ ಕ್ಷಣಾರ್ಧದಲ್ಲಿ ಇಬ್ಬರ ಕಣ್ಣೂ ಒದ್ದೆಯಾಗಿರಲೂಬಹುದು
ಆಗ ಇಬ್ಬರೂ ಜೊತೆಯಲ್ಲಿ ಅತ್ತಿರಲೂಬಹುದು
ತಿಳಿದು ಸತ್ಯವನು ನಾ-ನೀ ಎಂದೆಂದಿಗೂ ಬೇರೆಯೆಂದು.
- ಮಮತ