ವಿವೇಕರ ಕಥಾಲೋಕ

ವಿವೇಕರ ಕಥಾಲೋಕ

ಬರಹ

ವಿವೇಕರ ಸಂದರ್ಶನದ ಜೊತೆ ಜೊತೆಗೆ ಅವರ ಕಥಾಸಂಕಲನಗಳ ಎಲ್ಲ ಕಥೆಗಳ ಬಗ್ಗೆ ಮತ್ತು ಅವರ ಕಾದಂಬರಿಗಳ ಬಗ್ಗೆ ಒಂದು ಟಿಪ್ಪಣಿ ಲಭ್ಯವಿದ್ದರೆ ಒಳ್ಳೆಯದು ಅನಿಸುತ್ತದೆ. ಹೊಸಬರಿಗೆ ಇದು ವಿವೇಕರ ಕಥಾಜಗತ್ತಿನ ಬಗ್ಗೆ ಆಸಕ್ತಿ ಮೂಡಿಸಿದರೆ ಈಗಾಗಲೇ ವಿವೇಕರನ್ನು ಓದಿಕೊಂಡಿರುವವರಿಗೆ ಒಮ್ಮೆ ತಮ್ಮ ಓದನ್ನು ಮೆಲುಕು ಹಾಕಲು ಸಾಧ್ಯವಾದೀತು ಎನ್ನುವುದು ನನ್ನ ಆಶಯ.

ವಿವೇಕ್ ಸದಾ ಪ್ರಯೋಗಶೀಲ ಬರಹಗಾರ. ಹೇಳುವುದನ್ನು ಹೇಗೆ ಹೇಳಬೇಕು ಮತ್ತು ಹೇಳಬೇಕಿರುವುದನ್ನು ಹೇಗೆ ಹೇಳಿದರೆ ಅದು ಓದುಗನ ಮೇಲೆ ಮಾಡಬೇಕಿರುವ ಪರಿಣಾಮವನ್ನು ಮಾಡೀತು, ಅವನಲ್ಲಿ ಓದಿನ ಕಾಲಕ್ಕೆ ಅದು ಹುಟ್ಟಿಸಬೇಕಾದ ಮನೋಸ್ಪಂದನ ಯಾವ ಬಗೆಯದು ಎಂಬ ಬಗ್ಗೆ ಸಾಕಷ್ಟು ಯೋಚಿಸಿಯೇ ಬರೆದಿದ್ದನ್ನು ಪ್ರಕಟನೆಗೆ ತಯಾರಾಗಿಸುವ ವಿವೇಕ್ ಬರೆದಿರುವುದು ಕಡಿಮೆಯೇ. ಆದರೆ ಬರೆದಿದ್ದೆಲ್ಲ ಅಪ್ಪಟವಾದದ್ದು.

ಮೊದಲ ಕಥಾ ಸಂಕಲನ : ಅಂಕುರ (1985)

ಸುಮಾರಾಗಿ ಅಂಕುರ ಸಂಕಲನದ ಎಲ್ಲಾ ಕಥೆಗಳೂ ದಾಂಪತ್ಯದ ನಡುವೆ ನುಸುಳುವ ಮೂರನೇ ವ್ಯಕ್ತಿ ಆ ದಾಂಪತ್ಯದಲ್ಲಿ ಎಬ್ಬಿಸುವ ಬಿರುಗಾಳಿ ಅಥವಾ ಲೈಂಗಿಕ ಬದುಕಿನ ಹೊಸ ಅರಿವುಗಳಿಗೆ ತೆರೆದುಕೊಳ್ಳುತ್ತಿರುವ ತಾರುಣ್ಯದ ತಲ್ಲಣಗಳ ಕುರಿತಾಗಿಯೇ ಇದೆ. ಸ್ವಲ್ಪ ಮಟ್ಟಿಗೆ ಲಂಕೇಶ, ಅನಂತಮೂತರ್ಿಯವರಂಥ ನವ್ಯರ ಛಾಯೆ ಈ ಕಥೆಗಳ ಆತ್ಮದಲ್ಲಿ ( ಮುಖ್ಯವಾಗಿ ಕಾಮ ಪ್ರಧಾನ ವಸ್ತುವಿನ ಕಾರಣಗಳಿಗಾಗಿ, ಇಲ್ಲಿನ ನಾಯಕ/ನಿರೂಪಕರಲ್ಲಿರುವ ಆದರ್ಶದ ಹುಂಬ ಕಲ್ಪನೆಗಳಿಗಾಗಿ ಮತ್ತು ಆ ಪಾತ್ರಗಳ ಆತ್ಮನಿಂದಕ ಸ್ವಭಾವಕ್ಕಾಗಿ) ಕಂಡರೂ ಅಂಕುರದಂಥ ಕಥೆಗಳಲ್ಲಿ (ತಂತ್ರದ ದೃಷ್ಟಿಯಿಂದ) ಚಿತ್ತಾಲರ ಪ್ರಭಾವ ಸ್ಪಷ್ಟವಾಗಿದೆ.

ಭಾಷೆಯನ್ನು ಬಳಸುವ ರೀತಿಯೇ ವಾಸ್ತವವನ್ನು ಗ್ರಹಿಸುವ ರೀತಿಯೂ ಆಗಿ ವಿವೇಕರಲ್ಲಿ ವಿವರಗಳು ಮೂಡುವುದನ್ನು ಚಿತ್ತಾಲರು ಅಂಕುರ ಸಂಕಲನದ ಮುನ್ನುಡಿಯಲ್ಲಿ ಉಲ್ಲೇಖಿಸುತ್ತಾರೆ. ಇದು ವಿವೇಕರು ತೀರ ಎಳವೆಯಲ್ಲೇ ಸಾಧಿಸಿದ್ದನ್ನು ಗಮನಿಸಬೇಕು. ಇಲ್ಲಿನ ಕಥೆಗಳನ್ನು ಬರೆಯುವಾಗ ವಿವೇಕರ ವಯಸ್ಸು ಹದಿನೇಳು ಹದಿನೆಂಟರ ಆಸುಪಾಸಿನದು ಎನ್ನುವ ಸಂಗತಿ ವಿಸ್ಮಯ ಹುಟ್ಟಿಸುತ್ತದೆ. ಇವತ್ತಿಗೂ ವಿವೇಕರ ಕಥೆಗಳ ಕಥಾನಕದ ಜೀವಸೆಲೆ ಇರುವುದು ಇಲ್ಲೇ ಎಂದು ಅನಿಸುತ್ತದೆ.

ವಿವೇಕರು ಸೃಷ್ಟಿಸಿರುವ ಸ್ತ್ರೀ ಪಾತ್ರಗಳು ವಿಶಿಷ್ಟವಾದವು. ಅದು ಪ್ರೇಮಕ್ಕ(ಪರಸ್ಪರ, ನಿಲುಕು) ಇರಲಿ, ಸರೋಜಿನಿ (ಸುಧೀರನ ತಾಯಿ)ಯಿರಲಿ, ಮುಕ್ತಾ(ಕಾರಣ) ಅಥವಾ ಗೋದಾವರಿ(ಒಂದು ಬದಿ ಕಡಲು) ಯಾರೇ ಇರಲಿ, ಅವರಲ್ಲಿ ವಿಶಿಷ್ಟವಾದ ಒಂದು ತೇಜಸ್ಸಿದೆ. ಒಂದು ಕೆಚ್ಚು, ಏಕಾಂಗಿಯಾಗಿಯೂ ಬದುಕನ್ನು ಎದುರಿಸಬಲ್ಲ ಮನಸ್ಥಿತಿ ಅವರ ವ್ಯಕ್ತಿತ್ವದಲ್ಲಿ ಸಹಜವಾಗಿಯೇ ಎಂಬಂತೆ ಇದೆ. ವೈವಾಹಿಕ ಬದುಕಿನ ವೈಫಲ್ಯವೋ, ಮದುವೆಯೇ ಇಲ್ಲದೆ ಕಳೆಯಬೇಕಾಗಿ ಬಂದುದೋ, ಎಲ್ಲೋ ಹೇಗೋ ವಂಚಿತೆಯಾದ ನೋವೋ ಇವರ ಬದುಕನ್ನು ಆವರಿಸಿದಾಗ್ಯೂ ಇವರು ಅಂಥ ಬದುಕನ್ನು ಜೀವನ್ಮುಖಿಯಾಗಿ, ವಿಶಿಷ್ಟ ಚೈತನ್ಯದಿಂದ ಎದುರಾಗುವ ಬಗೆ ಗಮನಾರ್ಹ.

ಪ್ರೇಮಕ್ಕ ಒಂದು ಅರ್ಥದಲ್ಲಿ ವೈವಾಹಿಕ ಬದುಕಿನಿಂದ ವಂಚಿತೆ. ನಾಯಕನ ಅಥವಾ ನಿರೂಪಕನ ಬಾಲ್ಯದೊಂದಿಗೆ ಆಪ್ತ ಸಂಬಂಧ ಹೊಂದಿದಾಕೆ. ಈ ನಿರೂಪಕನಿಗೆ ಅವಳ ಸಂಪರ್ಕದಲ್ಲೇ ಮೊದಲ ಲೈಂಗಿಕ ಪ್ರಜ್ಞೆ ಜಾಗೃತವಾಗುವುದೂ. ಅದು ಕದ್ದು ಕೊಡುವ ಒಂದು ಮುತ್ತೇ ಆಗಿದ್ದರೂ, ಅದಕ್ಕಾಗಿ ಪ್ರೇಮಕ್ಕನಿಂದಲೇ ಬೈಸಿಕೊಂಡರೂ, ಆ ನೆನಪು ಮುಂದೆ ಹಲವು ಪಾತಳಿಗಳಲ್ಲಿ ಅವನನ್ನು ಕಾಡುತ್ತ ಉಳಿಯುವುದು ಮನಶ್ಶಾಸ್ತ್ರದ ನಿಟ್ಟಿನಿಂದಲೂ ಕುತೂಹಲಕರ. ಒಂದು ಬಗೆಯ ಪಾಪಪ್ರಜ್ಙೆಯನ್ನೂ ಇದು ಅವನಲ್ಲಿ ಅವನ ಸುಖ ದಾಂಪತ್ಯದ ನೆರಳಲ್ಲಿ ಪ್ರೇಮಕ್ಕ ಕಾಣಿಸಿಕೊಂಡಾಗಲೆಲ್ಲ ಹುಟ್ಟಿಸುತ್ತದೆ. ಆದರೆ ಪ್ರೇಮಕ್ಕ ಹೆಚ್ಚು ಸ್ಪಷ್ಟವಿರುವಂತೆ ಕಾಣಿಸುತ್ತದೆ. ಹಾಗಾಗಿ ನಾಯಕ ಅಥವಾ ನಿರೂಪಕ ಅವಳೆದುರು ಹೆಚ್ಚು ಹೆಚ್ಚು ಬೋದಾಳನಂತೆ ಕಾಣಿಸುತ್ತಾನೆ. ವಿವೇಕರ ಉದ್ದೇಶ ಕೂಡ ಅದೇ ಇರುವಂತಿದೆ. ಇಂಥ ಕ್ಷುಲ್ಲಕ ಪಾತ್ರಗಳ ನಿರ್ಮಿತಿ ನವ್ಯ ಕಾಲಘಟ್ಟದಲ್ಲಿ ಸಾಮಾನ್ಯವಾಗಿತ್ತೆಂಬುದೂ ಗಮನಾರ್ಹ. ಆದರೆ ಅಲ್ಲಿ ಕೇವಲ ವ್ಯಂಗ್ಯ ಅಥವಾ ಆತ್ಮಶೋಧನೆಯ ಉದ್ದೇಶ ಇರುತ್ತಿತ್ತು ಅದಕ್ಕೆ. ಆದರೆ ವಿವೇಕ್ ಇಂಥ ಪಾತ್ರಗಳನ್ನು ಹೊಸ ಮಜಲಿಗೆ ಕೊಂಡೊಯ್ದರು ಮಾತ್ರವಲ್ಲ ಅವರ ಕಥೆಯಿಂದ ಕಥೆಗೆ ಈ ಪಬ್ಬ(ಲಂಗರು), ಜನ್ನ(ಸರಹದ್ದು), ಉಪ್ಪ(ಸುಧೀರನ ತಾಯಿ), ಬುಗುರಿ(ಕಂತು)ಯಾಗಿ, ಶರವಣ(ಶರವಣ ಸರ್ವಿಸಸ್)ನಾಗಿ ವಿಕಾಸಹೊಂದಿರುವುದು ಕೂಡ ಕಾಣುತ್ತದೆ. ಇತ್ತೀಚಿನ ಸುಧೀರನ ತಾಯಿಯಂಥ ಕತೆಯ ಉಪ್ಪನಂಥ ಪಾತ್ರಗಳನ್ನು ನೋಡುವಾಗ ಒಂದೇ ಪಾತ್ರವನ್ನು ವಿವೇಕ್ ವಿಭಿನ್ನ ಪಾತಳಿಗಳಲ್ಲಿ ದುಡಿಸಿಕೊಂಡಿರುವುದು ಕೂಡ ಗಮನಕ್ಕೆ ಬರುತ್ತದೆ. ಲಂಗರು ಕಥೆಯ ಪಬ್ಬನನ್ನೂ ಈ ಉಪ್ಪನನ್ನೂ ಹೋಲಿಸಿ ನೋಡಬೇಕು. ಒಂದೇ ಪಾತ್ರ, ಅದೇ ವ್ಯಕ್ತಿತ್ವ ಚಿತ್ರಣವನ್ನು ವಿವೇಕ್ ಹೇಗೆ ತಮ್ಮ ವಿಭಿನ್ನ ಉದ್ದೇಶಗಳಿಗೆ ಸಮರ್ಥವಾಗಿ ಬಳಸಿಕೊಳ್ಳುತ್ತಾರೆ ಮಾತ್ರವಲ್ಲ ಹೇಗೆ ಕಥೆ ಹೇಳುವ ಅವರ ತಂತ್ರಗಾರಿಕೆ ಒಂದು ಹೊಸ ಮಜಲನ್ನು ಪಡೆದುಕೊಳ್ಳುತ್ತ ಸಾಗಿದೆ ಈ ನಡುವಿನ ಘಟ್ಟದಲ್ಲಿ ಎನ್ನುವುದನ್ನು ಅರಿಯಲೂ ಇದು ಸಹಾಯಕ.