ವಿವೇಕರ ಕಥಾಲೋಕ-2

ವಿವೇಕರ ಕಥಾಲೋಕ-2

ಬರಹ

ಎರಡನೆಯ ಕಥಾ ಸಂಕಲನ : ಲಂಗರು (1992) ಲಂಗರು ಸಂಕಲನದ ಕಥೆಗಳನ್ನು ಬರೆಯುವ ಕಾಲಕ್ಕೆ ವಿವೇಕ್ ತಮ್ಮ ಮೊದಲ ಸಂಕಲನದ ಕಥೆಗಳ ಛಾಪಿನಿಂದ ಸಂಪೂರ್ಣ ಬಿಡುಗಡೆಯಾಗಿದ್ದರು ಎನಿಸುತ್ತದೆ. ಇಲ್ಲಿನ ಕಥೆಗಳ ಜಗತ್ತು ಕೂಡ ತುಂಬ ವಿಸ್ತೃತವಾಗಿರುವುದನ್ನು ಕಾಣಬಹುದಾಗಿದೆ. ಅಲ್ಲಿ ಪ್ರಧಾನ ಧಾರೆಯಾಗಿದ್ದ ಕಾಮ ಹಿಂದಕ್ಕೆ ಸರಿದು ಸಹಜವಾಗಿಯಷ್ಟೇ ತನ್ನ ಅಸ್ತಿತ್ವ ತೋರುವ ಮಟ್ಟಿಗೆ ಉಳಿದಿದೆ. ಮನುಷ್ಯ ಸಂಬಂಧಗಳು, ಅವುಗಳನ್ನು ನಿಯಂತ್ರಿಸುವ ಶಕ್ತಿಗಳು, ಮನಸ್ಸಿನ ವಿಚಿತ್ರ ವ್ಯಾಪಾರಗಳು,ಇವೆಲ್ಲ ಸೇರಿ ನಿರ್ಮಿಸುವ ಒಟ್ಟಾರೆ ಬದುಕಿನ ವೈಚಿತ್ರ್ಯಗಳು ವಿವೇಕರನ್ನು ಇಲ್ಲಿ ಸೆಳೆದಿವೆ, ಕಥೆಗಳಾಗಿ ಮೂಡಿವೆ.

ಸಂಪರ್ಕ ಕತೆಯಲ್ಲಿ ಹತ್ತು ವರ್ಷಗಳ ನಂತರ ಸಿಗುವ ರಾಧಿಕಾ ಅನಂತ ಸಾಧ್ಯತೆಗಳಾಗಿ ನಿರೂಪಕನ ಬಾಳಿನಲ್ಲಿ ಬರುತ್ತಾಳೆ. ಆದರೆ ನಿರೂಪಕ ನಮಗೆ ತನ್ನ ಬಾಲ್ಯದ ಸ್ಮೃತಿಗಳಿಂದ ತನ್ನ - ಅವಳ ಗೆಳೆತನವನ್ನು ವಿವರಿಸುತ್ತ ರಾಧಿಕಾಳ ಹಿನ್ನೆಲೆಯನ್ನು ತಿಳಿಸುತ್ತ ಅವಳ ಚಿತ್ರವನ್ನು ಓದುಗನ ಮನಸ್ಸಿನಲ್ಲಿ ಮೂಡಿಸುತ್ತಾನೆ. ರಾಧಿಕಾ ತಾಯಿ ನಿರೂಪಕನ ತಂದೆಯನ್ನು ಬಳಸಿಕೊಂಡಂತೆ ಈಗ ರಾಧಿಕಾ ಈತನನ್ನು ಬಳಸಿಕೊಳ್ಳುತ್ತಿದ್ದಾಳೆಯೇ, ಅಥವಾ ರಾಧಿಕಾಳನ್ನೇ ನಿಜಕ್ಕೂ ನಾಗರಾಜನೆಂಬ ಇನ್ನೊಬ್ಬ ಬಳಸಿಕೊಂಡು ಅವಳೇ ಸ್ವತಃ ತನ್ನ ಬದುಕು ಕೆಡಿಸಿಕೊಳ್ಳುವ ಇಕ್ಕಟ್ಟಿಗೆ ಬಿದ್ದಿದ್ದಾಳೆಯೆ ಎನ್ನುವುದು ಇಲ್ಲಿನ ದ್ವಂದ್ವ, ಗೊಂದಲ. ಆದರೆ ನಿರೂಪಕ ಅಶೋಕ ಇದನ್ನು ಹೇಗೆ ಎದುರಿಸಬೇಕು ಎನ್ನುವುದನ್ನು ಕತೆ ಓದುಗನಿಗೇ ಬಿಟ್ಟು ಬಿಡುವುದು ಕತೆಯ ಓದಿನ 'after effects' ದೃಷ್ಟಿಯಿಂದ ಗಮನಾರ್ಹವಾದ ತಂತ್ರ. ಇಲ್ಲಿ ವಿವೇಕ್ ಸರಳ ಪರಿಹಾರಗಳ ಮೋಹಕ್ಕೆ ಬೀಳುವುದಿಲ್ಲ ಮಾತ್ರವಲ್ಲ ಕಥೆಯ ಯಶಸ್ಸಿನ ಬಗ್ಗೆ ಅವರಿಗಿರುವ ಅವರದೇ ನಿರೀಕ್ಷೆಗಳ ಕುರಿತೂ ಇದು ಬೆಟ್ಟುಮಾಡುತ್ತದೆ.

ಲಗ್ಗೆ ಕತೆಯನ್ನು ಅಂಕುರ ಸಂಕಲನದ ಮಗು ಕಥೆಯೊಂದಿಗೆ ಹೋಲಿಸಲು ಸಾಧ್ಯವಿದೆ. ಆದರೆ ಇಲ್ಲಿ ದಾಂಪತ್ಯದ ನಡುವೆ ಪ್ರವೇಶಿಸುವ ವ್ಯಕ್ತಿ ಅಥವಾ ವ್ಯಕ್ತಿಗಳ ನೆಲೆ ಕ್ಷಣಕ್ಷಣಕ್ಕೂ ಬದಲಾಗುತ್ತ ಒಂದು ಹಂತದಲ್ಲಿ ಅದು ದಂಪತಿಗಳಲ್ಲೇ ಒಬ್ಬರಾಗಿರುವ ಮಟ್ಟಕ್ಕೆ ಮುಟ್ಟುವುದು ಓದುಗನಿಗೆ ನೀಡುವ ಆಘಾತ ಸಣ್ಣದಲ್ಲ. ಎಷ್ಟೇ ಚೆನ್ನಾಗಿದ್ದರೂ ಇದು bad faith ಕಥೆಯಾಗಿಯೇ ಉಳಿಯುತ್ತದೆ. ವಿವೇಕ್ ಇಂಥ ಬೇರೆ ಕಥೆಗಳನ್ನು ಬರೆದಿಲ್ಲ.

ಒಕ್ಕಣಿಕೆ ಕಥೆ ವಿವರಗಳನ್ನು, ಅದರ ಚಿತ್ರಕ ಶಕ್ತಿಯನ್ನು ನೆಚ್ಚಿದ್ದರೂ ಯಶಸ್ವಿ ಕತೆಗಳ ಸಾಲಿಗೆ ಸೇರುವುದಿಲ್ಲ. ಅಜ್ಜಿ, ಅಜ್ಜ, ಅವರು ಕೊನೆತನಕ ಕಾಯುತ್ತಿದ್ದ ಅವರ ಮಗ, ಅವರ ದೈನಂದಿನದ ಕಷ್ಟಗಳು ಎಲ್ಲದರ ನಿರೂಪಣೆ ಮತ್ತು ಅದು ಒಂದು ನೆನಪಿನ ಸರಣಿಯಾಗಿ ತೊಡಗುವ ಸಂದರ್ಭದ ಚಿತ್ರಕ ವಿವರಗಳು ಮತ್ತು ಕೊನೆಗೂ ಇದೆಲ್ಲ ವೀಣಾ ಮತ್ತು ನಿರೂಪಕನ ನಡುವಿನ ಸಂಬಂಧ ಪ್ರಜ್ಞೆಯ ಪಾತಳಿಯಲ್ಲಿ ನೆಲೆಗೊಳ್ಳಬೇಕೆಂಬ ಕಾರಣಕ್ಕೇ ಜೋಡಿಸಿದ್ದು ಎಂದಾದರೆ, ಅಂಥ ವಿಲಕ್ಷಣ ಭೇಟಿಯಾಗಲೀ, ಇಂಥ ತಂತ್ರವಾಗಲೀ ಓದುಗನಿಗೆ ಹೊಸದೇನನ್ನೂ ಕೊಡುವುದಿಲ್ಲ ಮತ್ತು ಹಾಗಾಗಿ ಅವನಿಗೆ ಈ ಕಥೆ ಹೆಚ್ಚು ಮಹತ್ವದ್ದಾಗುವುದಿಲ್ಲ.

ನಮ್ಮ ಪಾಡಿಗೆ ನಾವು ಒಂದು ನವಿರಾದ ನಿರೂಪಣೆಯ ಮನುಷ್ಯ ಸಂಬಂಧಗಳನ್ನು ಹೆಚ್ಚು ಸಹಜವಾಗಿ, ಕಣ್ಣಿಗೆ ಒಡೆದು ಕಾಣಿಸುವ ಯಾವುದೇ ತಂತ್ರಗಾರಿಕೆಯಿಲ್ಲದೆ ಸಾಧಿಸಿದ ಕಥೆ. ಇಲ್ಲಿ ಬರುವ ವಿವರಗಳು ತಾವೇ ಕಥಾನಕವನ್ನು ಹಿಡಿತಕ್ಕೆ ತೆಗೆದುಕೊಳ್ಳುವುದು ವಿವೇಕರ ಎಂದಿನ ಶೈಲಿಗೆ ಉತ್ತಮ ಉದಾಹರಣೆಯಂತಿದೆ. ತಂತ್ರದ ಕುರಿತು ವಿವೇಕ್ ತುಂಬ ಸ್ಪಷ್ಟ. ಅದು ಒಂದು ಕುರ್ಚಿಗೆ ಕೀಲುಗಳು, ಮೊಳೆಗಳು ಇರುವ ಹಾಗೆ, ಕುಳಿತುಕೊಳ್ಳಲು ತೊಡಕಾಗದ ಹಾಗೆ, ಅನುಕೂಲಕ್ಕೆ ಧಕ್ಕೆಯಾಗದ ಹಾಗೆ ಇರಬೇಕಾದದ್ದು ಎನ್ನುತ್ತಾರೆ ವಿವೇಕ್. ನಮ್ಮ ಪಾಡಿಗೆ ನಾವು ಕಥೆ ಈ ನಿಲುವಿಗೆ ಉತ್ತಮವಾದ ಉದಾಹರಣೆಯಂತಿದೆ.

ಲಂಗರು ಕಥೆ ವಿವೇಕರ ಅತ್ಯುತ್ತಮ ಕಥೆಗಳಲ್ಲಿ ಒಂದು. ಈ ಕಥೆಯಲ್ಲಿ ರಘುವೀರನ ಪಾತ್ರಕ್ಕೆ ಸಂವಾದಿಯಾಗಿ ಪಬ್ಬ ಎಂಬ ಒಂದು ಪಾತ್ರದ ಚಿತ್ರವೂ ಇದೆ. ಒಂದು ಭೌತಿಕ ಜಗತ್ತಿನ ಸಾಧನೆಯಲ್ಲಿ ಯಶಸ್ವಿಯಾಗುವ ವರ್ಗ. ಇನ್ನೊಂದು ಹಣ, ಒಡವೆ,ಆಸ್ತಿ, ಅಂತಸ್ತುಗಳ ವ್ಯಾಮೋಹವಿಲ್ಲದ, ಭೋಳೆ ಎಂದು ಸರಳವಾಗಿ ವ್ಯಾಖ್ಯಾನಿಸಬಹುದಾದ ವರ್ಗ. ಇವರ ಒಳ್ಳೆಯ ಗುಣಗಳು, ಜೀವನ ಪ್ರೀತಿ ಎಲ್ಲವೂ ಈ ಭೋಳೇ ಬ್ಯಾನರಿನಡಿ ನಗಣ್ಯವಾಗಿ ಬಿಡುವುದು ಲೋಕನೀತಿಯೇ ಆಗಿದೆ. ವಿವೇಕ್, ಮನುಷ್ಯ ತನ್ನ ಮಹತ್ವಾಕಾಂಕ್ಷೆಯಿಂದಲೇ ಇತರರ ದೃಷ್ಟಿಯಲ್ಲಿ ಸಣ್ಣವನೂ ದೊಡ್ಡವನೂ ಆಗಿ ಬಿಡುವುದನ್ನು ಎಷ್ಟು ಚೆನ್ನಾಗಿ ಚಿತ್ರಿಸುತ್ತಾರೆಂದರೆ ಒಟ್ಟಾರೆ ಬದುಕಿನ ಆದ್ಯತೆಗಳನ್ನೇ ಇವರು ಪ್ರಶ್ನಿಸಿದಾಗಲೂ ಅದು ತೀಮರ್ಾನಗಳ ಧಾಟಿಪಡೆಯದೆ, ಬದುಕಿನ ಸತ್ಯಗಳನ್ನು ಅರಿಯ ಹೊರಟವನ ಶೋಧದ ಶೋಭೆ ಪಡೆಯುತ್ತದೆ.

ಅಂತಃಪಟ ಕಥೆ ಕೂಡ ಮೇಲ್ನೋಟಕ್ಕೆ ಕಾಮದ ಪ್ರಶ್ನೆಯನ್ನೇ ಕುರಿತಾಗಿದೆ ಅನಿಸಿದರೂ ಇಲ್ಲಿ ಇರುವುದು ಮನುಷ್ಯನ ಕ್ಷುಲ್ಲಕ ದೈನಂದಿನಗಳಲ್ಲೇ ಅವನ ಒಟ್ಟಾರೆ ಜೀವನ ಪ್ರೀತಿಯ, ಜೀವನ ದೃಷ್ಟಿಯ ಅಭಿವ್ಯಕ್ತಿ ಇರುತ್ತದೆ ಎನ್ನುವುದನ್ನು ಕಾಣಿಸುವ ಪ್ರಯತ್ನ. ರಾಗಿಣಿಯ ಯೌವನ, ಹುಚ್ಚು ರಭಸ ಒಡ್ಡುವ ಸವಾಲುಗಳನ್ನು ಆಳದಲ್ಲಿ ಇಷ್ಟಪಡುತ್ತ, ಅದಕ್ಕೆ ಮತ್ತೆ ಭೋಳೆಯಾಗಿಯೇ ಸ್ಪಂದಿಸುತ್ತ, ಸಾಹಸದ ಧೈರ್ಯವಿಲ್ಲದೆ, ಇಲ್ಲದಿರುವುದೇ ಅವನ ಸಾಮಾನ್ಯ ಜೀವನಕ್ಕೆ, ದಾಂಪತ್ಯಕ್ಕೆ ವರವಾಗಿರುವುದನ್ನೂ ಇಲ್ಲಿ ಗಮನಿಸಬಹುದು. ಗಂಡು ಹೆಣ್ಣು ಸಂಬಂಧದ ಅತ್ಯುನ್ನತ ಶಿಖರವಾದ ರತಿಯ ವಿವರಗಳನ್ನು ಕೊಡುವಾಗಲೂ ಇಲ್ಲಿ ವಿವೇಕ್ ಆ ಉನ್ಮಾದದ ಕ್ಷಣಗಳು ಕಳೆದಿದ್ದೇ ಕಣ್ಣಿಗೆ ಬೀಳುವ ಬೆವರು, ಬಾಯಿ ವಾಸನೆ, ಲಠ್ಠವೋ ಬಿಳುಚಿದ್ದೋ ಪೀಚೋ ಆಗಿರುವ ದೇಹ, ಮುರಿದ ಹಲ್ಲು, ಹಲ್ಲುಗಳ ನಡುವಿನ ಸಂದಿ ಎಲ್ಲದರ ವಿವರಗಳನ್ನೂ ಇಡುತ್ತಾರೆ. ಬದುಕಿನ ಸಹಜ ಕ್ರಿಯೆಯಾದ ಲೈಂಗಿಕತೆ ತನ್ನ ಉನ್ಮತ್ತ ಆರಂಭದೊಂದಿಗೇ ಅಸಹ್ಯವೆನಿಸಬಲ್ಲ ಒಂದು ಸಾಧ್ಯತೆಯನ್ನೂ ತನ್ನ ಒಡಲೊಳಗೆ ಇರಿಸಿಕೊಂಡಿರುವ, ಯಾಂತ್ರಿಕ ಬದುಕು ಸುಖದ ಅಂಶಗಳಿಗಿಂತ ಅಸ್ವಸ್ಥದ ಕ್ಷಣಗಳನ್ನೇ ಹೆಚ್ಚು ತೀವೃಗೊಳಿಸುವ, ಆದರೂ ಅದನ್ನು ಸ್ವೀಕರಿಸುತ್ತ ಬದುಕಿಗೆ ಒಡ್ಡಿಕೊಳ್ಳುವ ಅನಿವಾರ್ಯವನ್ನು ವಿವೇಕ ಹೇಳಲು ಬಳಸಿಕೊಳ್ಳುವ ಈ ವಿಧಾನಗಳು ಗಮನಾರ್ಹವಾಗಿವೆ.

ಗುರುತು ಕಥೆಯನ್ನು ಮತ್ತೆ ಲಂಗರು ಕಥೆಯೊಂದಿಗೆ ಇಟ್ಟು ನೋಡುವುದು ಕುತೂಹಲಕರ ಅಂಶಗಳನ್ನು ನಮಗೆ ಕಾಣಿಸುತ್ತದೆ. ಇಲ್ಲಿಯ ಆನಂದ ಲಂಗರು ಕಥೆಯ, ತನಗೇನೂ ಬೇಡ ಎಂದ ಪಬ್ಬನಂತಲ್ಲ. ಅಥವಾ ಪಬ್ಬನ ಇನ್ನೊಂದೇ ಆವೃತ್ತಿಯಾದ ರಘುವೀರನಂತೆ ಅಣ್ಣನ ಜೊತೆ ಯುದ್ಧವನ್ನು ಕೈ ಬಿಟ್ಟುಕೂತವನೂ ಅಲ್ಲ. ಅಲ್ಲದೆ ಮಾಸ್ತರರ ಆಸ್ತಿಯ ನಿಜ ವಾರಸುದಾರ ಮಂಜುನಾಥನ ಜೊತೆ ಮಾತನಾಡಿ ಬಂದ ಬಳಿಕ ಆಸ್ತಿಯಿಂದ ದೂರವಿರುವ ನಿರ್ಧಾರಕ್ಕೆ ಬರುವ ಆನಂದನಿಗೂ ಬದುಕಿನಲ್ಲಿ ಸುಖಾಸುಮ್ಮನೇ ಸಿಗುವ ಏನನ್ನಾದರೂ ಬೇಡ ಎಂದು ಒಗೆದು ಬಿಡುವಷ್ಟು ಅನುಕೂಲಗಳಿಲ್ಲ. ಅವನೂ ಹೆಂಡತಿಗೆ ಈ ನಿರಾಕರಣದ ಬಗ್ಗೆ ವಿವರಿಸುವ, ವಿವರಿಸಿ ಅವಳನ್ನು ಒಪ್ಪಿಸುವ ಬಗೆ ಹೇಗೆ ಎಂದು ಚಿಂತಿಸುತ್ತಾನೆ, ತರ್ಕಿಸುತ್ತಾನೆ. ಆದಾಗ್ಯೂ ಆನಂದ ಮಾಸ್ತರರ ಆಸ್ತಿಯನ್ನು ತಿರಸ್ಕರಿಸುತ್ತಾನೆ. ಈ ನೆಲೆ ಹೊಸದು. ಅದಕ್ಕಿಂತ ಮುಖ್ಯವಾದ ಒಂದು ಅಂಶವೂ ಈ ಕತೆಯಲ್ಲಿದೆ. ಅದು ಇಲ್ಲಿ ವಾರಸುದಾರಿಕೆಯ ಸಂಬಂಧಗಳು ಬರೇ ನಮಗೆ ತಿಳಿದ ಅರ್ಥಗಳಲ್ಲೇ ಹುಟ್ಟುತ್ತವೆ, ಹುಟ್ಟಿಕೊಳ್ಳಬೇಕು ಎನ್ನುವ ರೂಢಿಯನ್ನೇ ಕಥೆ ಪ್ರಶ್ನಿಸುವುದು, ಅಂಥ ಪ್ರಶ್ನೆಯ ಎದುರೂ ಆನಂದ ಆಸ್ತಿಯನ್ನು ತಿರಸ್ಕರಿಸುವುದು ಕಥೆಗೆ ಒಂದು ತೇಜಸ್ಸನ್ನೂ, ಅನುರಣನ ಶಕ್ತಿಯನ್ನೂ ಕೊಟ್ಟಿದೆ.

ಪುನರುತ್ಥಾನ ಕಥೆ ಕೂಡ ಆಸ್ತಿ ಕುರಿತ ಮಕ್ಕಳ ವ್ಯಾಮೋಹ ಹೆತ್ತು ಹೊತ್ತವರ ಸಾವಿನಲ್ಲೇ ಇಣುಕುವುದನ್ನು, ಅವರ ಸಾವು ಇವರ ಬದುಕನ್ನು ತನ್ನದೇ ಧಾಟಿಯಲ್ಲಿ ವಿಡಂಬಿಸುವುದನ್ನು ಹೇಳುವ ಕಥೆ. ಇದರಂತೆಯೇ ಮೋಹನ ಮುರಲಿ ಕೂಡ ವಿಶೇಷವಾದ ಒಳನೋಟಗಳನ್ನು ತನ್ನ ಒಡಲಿನಲ್ಲಿ ಇರಿಸಿಕೊಂಡಿಲ್ಲವಾದರೂ ವಿವೇಕರ ಚಿತ್ರಕ ಶಕ್ತಿಯ ಭಾಷೆ ಮತ್ತು ಅದನ್ನವರು ಕಥಾನಕದ ಪ್ರಸೆಂಟೇಶನ್‌ಗೆ ಬಳಸಿಕೊಳ್ಳುವ ವಿಧಾನವನ್ನು ಅರಿಯಲು ಹಾಗೂ ಪಾತ್ರದ ರೂಪುರೇಷೆ ನಿರ್ಮಿತಿಯ ಕೌಶಲವನ್ನು ತಿಳಿಯಲು ಗಮನಿಸಬಹುದಾಗಿದೆ.

ನಿಲುಕು ಕಥೆ ಬಹುಷಃ ವಿವೇಕರನ್ನು ತೀರ ಈಚಿನ ಮತ್ತೊಬ್ಬನ ಸಂಸಾರ ಕಥೆಯ ವರೆಗೆ ಕಾಡಿದ, 'ಇನ್ನೂ ಒಂದು' ಕಾದಂಬರಿಯಲ್ಲೂ ಕಾಣಿಸಿಕೊಳ್ಳುವ ಕುತೂಹಲಕರ ವಿದ್ಯಮಾನವೊಂದನ್ನು ವಸ್ತುವಾಗುಳ್ಳದ್ದು. ಇಲ್ಲಿ ಇಬ್ಬರು ಶ್ರೀರಾಮರು ಇದ್ದಾರೆ ಮಾತ್ರವಲ್ಲ, ಅರ್ಜುನನ ಬದುಕಿನ ಹೇಳದೇ ಉಳಿದ ಒಂದು ವಿಚಿತ್ರ ವಿದ್ಯಮಾನ ಕೂಡ ಈ ಶ್ರೀರಾಮನ ಬದುಕಿನಲ್ಲೇ ಮುಂದೆ ನಡೆಯುವ ಸರಸ್ವತಿ ಪ್ರಕರಣವೇ (ಅಂಥದೇ) ಇರಬಹುದೆಂಬ ಹೊಳಹು ಕೂಡ ಸಿಗುತ್ತದೆ. ದೇಹಗಳು ಬೇರೆ ಬೇರೆ, ಮನಸ್ಸುಗಳು ಓವರ್ಲ್ಯಾಪಿಂಗ್ ಮತ್ತು ಆತ್ಮ ಮಾತ್ರ ಒಂದೇ ಇರುತ್ತದೆ ಎನ್ನುವ ಕೊಂಚ ಆಧ್ಯಾತ್ಮಿಕವೆನ್ನಬಹುದಾದ ತಾತ್ವಿಕತೆಯನ್ನು ಬಳಸಿಕೊಳ್ಳುವ ಈ ಕಥೆ ಸುಪುಷ್ಟವಾಗಿ ಮೂಡಿಬಂದಿದ್ದು ಮತ್ತೊಬ್ಬನ ಸಂಸಾರ ಕಥೆಯಲ್ಲೇ ಅನಿಸುತ್ತದೆ.